Thursday, 21st November 2024

ಜಸ್ವಂತ್ ಸಿಂಗ್ ಎಂಬ ವಿಚಿತ್ರ ಖಯಾಲಿಯ ರಾಜಕಾರಣಿ !

ಇದೇ ಅಂತರಂಗ ಸುದ್ದಿ

vbhat@me.com

೨೦೨೦ರ ಸೆಪ್ಟೆಂಬರ್‌ನಲ್ಲಿ ನಮ್ಮನ್ನು ಅಗಲಿದ ಹಿರಿಯ ರಾಜಕಾರಣಿ ಜಸ್ವಂತ್ ಸಿಂಗ್ ರನ್ನು ನೀವು ಮರೆತಿರಲಿಕ್ಕಿಲ್ಲ. ಅವರಿಗೆ ಒಂದು ವಿಚಿತ್ರ ಖಯಾಲಿ ಯಿತ್ತು. ಸಂಸತ್ ಸದಸ್ಯರನ್ನು ಕಂಡಾಗ ಅವರ ಹೆಸರಿನ ಬದಲು, ಅವರ ಲೋಕಸಭಾ ಕ್ಷೇತ್ರದ ಹೆಸರಿನಿಂದ ಮಾತಾಡಿಸುತ್ತಿದ್ದರು! ಸೋಮನಾಥ ಚಟರ್ಜಿ ಅವರಿಗಂತೂ ‘ಬೋಲ್ಪುರ್‌ನ ಮಾನ್ಯ ಸದಸ್ಯರೇ’ ಎಂದೇ ಕರೆಯುತ್ತಿದ್ದರು.

ಮುಂಬೈನ ಉದ್ಯಮಿಗಳ ಜತೆ ಸಖ್ಯ ಹೊಂದಿದ್ದ ದಕ್ಷಿಣ ಮುಂಬೈ ಲೋಕಸಭಾ ಕ್ಷೇತ್ರದ ಸದಸ್ಯ ಮುರಳಿ ದೇವೋರಾ ಲೋಕಸಭೆಯಲ್ಲಿ ಪದೇ ಪದೆ ಅವರ ಮಾತಿಗೆ ಅಡ್ಡಿಪಡಿಸಿದಾಗ, “The honourable member from Nariman Point’ ಎಂದು ಹೇಳಿ ಸುಮ್ಮನೆ ಕುಳ್ಳಿರಿಸಿದ್ದರು. ಜಸ್ವಂತ್ ಸಿಂಗ್‌ಗೆ ತಮ್ಮ ಸಂಪರ್ಕಕ್ಕೆ ಬಂದ ಲೋಕಸಭಾ ಸದಸ್ಯರ ಹೆಸರಿನ ಜತೆಗೆ ಅವರ ಕ್ಷೇತ್ರಗಳ ಹೆಸರು ಗೊತ್ತಿತ್ತು. ಕೆಲವೊಮ್ಮೆ ಅವರು ಲೋಕಸಭಾ ಸದಸ್ಯನ ಹೆಸರನ್ನು ಮರೆತಿದ್ದಿದೆ, ಆದರೆ ಕ್ಷೇತ್ರದ ಹೆಸರನ್ನಂತೂ ಮರೆಯುತ್ತಿರಲಿಲ್ಲ.

ಕೇಂದ್ರ ಸಂಪುಟದಲ್ಲಿ ಜಸ್ವಂತ್ ಅವರ ಸಹೋದ್ಯೋಗಿಯಾದ ಅನಂತ್‌ಕುಮಾರ್ ಅವರು ಒಮ್ಮೆ, ಕರ್ನಾಟಕದ ಲೋಕಸಭಾ ಸದಸ್ಯರಾದ ರಾಮಚಂದ್ರ ವೀರಪ್ಪ ಅವರನ್ನು ಪರಿಚಯಿಸಿದರು. ಆಗ ಜಸ್ವಂತ್, ‘”Yes, I know, he is the honourable member from Bidar ಎಂದು ಹೇಳಿ ಆಶ್ಚರ್ಯವನ್ನುಂಟು ಮಾಡಿದ್ದರು. ಒಮ್ಮೆ ಜಸ್ವಂತ್ ಸಿಂಗ್ ಅವರನ್ನು ಪತ್ರಕರ್ತರೊಬ್ಬರು, ‘ನೀವೇಕೆ ಸಂಸದರನ್ನು ಅವರ ಕ್ಷೇತ್ರಗಳಿಂದ ಗುರುತಿಸು ತ್ತೀರಿ?’ ಎಂದು ಕೇಳಿದಾಗ, ‘ಸಂಸದರ ಹೆಸರು ಗೊತ್ತಿದ್ದರೆ, ಅವರ ಕ್ಷೇತ್ರ ಗೊತ್ತಿರಲೇಬೇಕಲ್ಲ? ಅವರು ಯಾವ ಕ್ಷೇತ್ರದ ಸದಸ್ಯರು ಎಂಬುದನ್ನು ತಿಳಿದುಕೊಳ್ಳದೇ, ಅವರನ್ನು ತಿಳಿದುಕೊಳ್ಳುವುದು ಸಾಧ್ಯವೇ?’ ಎಂದು ಹೇಳಿದ್ದರು.

ಜಸ್ವಂತ್ ಸಿಂಗ್ ಅವರು ಒಂದು ಕಾಲಕ್ಕೆ ವಾಜಪೇಯಿ ಸರಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆ ಮತ್ತು ರಕ್ಷಣಾ ಖಾತೆ ಸಚಿವರಾಗಿದ್ದರು. ಕೆಲವು ಕಾಲ ಅವರು ಹಣಕಾಸು ಸಚಿವರೂ ಆಗಿದ್ದರು. ವಾಜಪೇಯಿ ಅವರ ಅತ್ಯಂತ ನಂಬುಗಸ್ಥರಾಗಿದ್ದರು. ಒಂದು ಸಂದರ್ಭದಲ್ಲಿ ಅವರು ಅತ್ಯಂತ ಮಹತ್ವದ ವಿಷಯಗಳನ್ನು ಮೊದಲು ಚರ್ಚಿಸುತ್ತಿದ್ದುದೇ ಜಸ್ವಂತ್ ಬಳಿ. ಒಮ್ಮೆ ಜಸ್ವಂತ್ ಸಿಂಗ್ ಅವರು ವಿದೇಶದಲ್ಲಿರುವ ಒಬ್ಬ ಅಧಿಕಾರಿಯ ಸೇವಾ ಅವಧಿ ವಿಸ್ತರಿಸಿದ್ದನ್ನು ರದ್ದುಗೊಳಿಸಿದರು.

ಮರುದಿನವೇ ತಮ್ಮ ಹಿಂದಿನ ಆದೇಶವನ್ನು ಹಿಂದಕ್ಕೆ ಪಡೆದಿದ್ದರು. ಇದು ಸಣ್ಣ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ‘ನಿಮಗೆ ನಾನು ಎರಡು ಖಾತೆಗಳ ಮಂತ್ರಿ ಎಂಬುದು ಗೊತ್ತಿದ್ದೂ ಈ ಪ್ರಶ್ನೆ ಕೇಳಿದ್ದೀರಿ. ವಿದೇಶಾಂಗ ಸಚಿವನಾಗಿ ಅಧಿಕಾರಿಯ ಸೇವಾ ಅವಧಿಯನ್ನು ರದ್ದುಗೊಳಿಸಿದ್ದೇನೆ ಮತ್ತು ರಕ್ಷಣಾ ಸಚಿವನಾಗಿ, ಸೇವಾ ಅವಽ ವಿಸ್ತರಣೆಗೆ ಅನುಮತಿ ನೀಡಿದ್ದೇನೆ’ ಎಂದು ಚಟಾಕಿ ಹಾರಿಸಿ, ತಮ್ಮ ಕ್ರಮವನ್ನು
ಸಮರ್ಥಿಸಿಕೊಂಡಿದ್ದರು.

ಕ್ವೆಚಿಂಗ್ ಅಂದ್ರೇನು ಗೊತ್ತಾ?!
ಕೆಲವು ವರ್ಷಗಳ ಹಿಂದೆ, ಲಂಡನ್ನಿನ ಮಹಾನಗರಪಾಲಿಕೆಯಲ್ಲಿ ಒಬ್ಬ ಸದಸ್ಯನಿದ್ದ. ಆತನ ಹೆಸರು ಡೇವಿಡ್ ಕ್ವೆಚ್. ಆತ ಮಾತಾಡಲು ಎದ್ದು ನಿಂತರೆ ಒಂದೇ ಸಮನೆ ಕೀರಲು ದನಿಯಲ್ಲಿ ಕಿರುಚುತ್ತಿದ್ದ. ಅವನ ಮಾತುಗಳನ್ನು ಸಹಿಸಿಕೊಳ್ಳುವುದು ಅವನ ಪಕ್ಷದವರಿಗೇ ಅಸಹನೀಯವಾಗುತ್ತಿತ್ತು. ಕ್ವೆಚ್ ಮಾತಿಗೆ ನಿಂತರೆ ಎಲ್ಲರೂ ಹಣೆಹಣೆ ಚಚ್ಚಿಕೊಳ್ಳುತ್ತಿದ್ದರು. ಹಾಗಂತ ಕ್ವೆಚ್ ಮಾತುಗಳಲ್ಲಿ ವಿಷಯ ಇರುತ್ತಿದ್ದವು. ಆದರೆ ತನ್ನ ದನಿಯ ಏರಿಳಿತ, ದೀರ್ಘ
ಭಾಷಣಗಳಿಂದ ಆತ ಬೋರು ಹೊಡೆಸುತ್ತಿದ್ದ. ಸ್ವಲ್ಪ ಹೊತ್ತಿನ ನಂತರ ಅವನ ಕೀರಲು ಮಾತನ್ನು ಕೇಳುವುದು ಸಾಧ್ಯವೇ ಇರಲಿಲ್ಲ. ಆದರೆ ಆತನಿಗೆ ಮಾತಾಡುವ ಚಟ (ನಮ್ಮ ಕೆಲವು ರಾಜಕಾರಣಿಗಳಂತೆ!).

ಅಷ್ಟೇ ಅಲ್ಲ, ಎಲ್ಲಾ ವಿಷಯಗಳ ಚರ್ಚೆಯಲ್ಲೂ ಭಾಗವಹಿಸುತ್ತಿದ್ದ. ಕ್ವೆಚ್ ಮಾತಾಡಲು ಎದ್ದು ನಿಲ್ಲುತ್ತಿದ್ದಂತೆ, ಪ್ರತಿಪಕ್ಷಗಳ ಸದಸ್ಯರು ಅವನಿಗೆ ಮುಜುಗರವುಂಟು ಮಾಡಲು ಮುಂದಿನ ಮೇಜಿನ ಮೇಲೆ ತಲೆಯಿಟ್ಟು ಮಲಗಿದಂತೆ ನಟಿಸುತ್ತಿದ್ದರು. ಆದರೆ ಕ್ವೆಚ್ ಅದಕ್ಕೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ತಾನು ಹೇಳಬೇಕಾದುದನ್ನು ಹೇಳಿಯೇ ಕುಳಿತುಕೊಳ್ಳುತ್ತಿದ್ದ. ಒಮ್ಮೆ ಸದಸ್ಯರಿಗೆ, ಈ ದಿನ ಮಾತಾಡಲು ಕ್ವೆಚ್ ಸಮಯ ಕೇಳಿದ್ದಾನೆಂದು ಗೊತ್ತಾಯಿತು. ಯಾರೂ ಸದನಕ್ಕೆ ಬರದೇ ಹೊರಗಡೆಯೇ ಉಳಿಯಲು ನಿರ್ಧರಿಸಿದ್ದರು.

ಇದು ಕ್ವೆಚ್‌ಗೆ ಗೊತ್ತಾಯಿತು. ‘ನಾನೇನು ಮಾಡಲಿ? ನನ್ನ ದನಿಯಿರುವುದೇ ಹೀಗೆ. ನನಗೂ ಗೊತ್ತಾಗುತ್ತದೆ, ನನ್ನ ದನಿ ನಿಮಗೆ ಕಿರಿಕಿರಿಯುಂಟು ಮಾಡುತ್ತದೆಂದು. ಹಾಗೆಂದು ನನಗೆ ದನಿ ಬದಲಿಸಿ ಮಿಮಿಕ್ರಿ ಮಾಡಲು ಬರುವುದಿಲ್ಲ. ಹೀಗಾಗಿ ನೀವು ನನ್ನನ್ನು ಸಹಿಸಿಕೊಳ್ಳಲೇಬೇಕು. ನಿಮ್ಮ ಪುಣ್ಯ, ನಾನು ಸದನದಲ್ಲಿ ಮಾತಾಡುತ್ತೇನೆ, ಹಾಡುವುದಿಲ್ಲವಲ್ಲ. ಒಮ್ಮೆ ಹಾಡಿದ್ದರೆ, ನಿಮ್ಮ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ತುಸು ಯೋಚಿಸಿ’ ಎಂದು ಕಿಚಾಯಿಸಿದ್ದ.

‘ಕ್ವೆಚ್ ಮಾತುಗಳನ್ನು ಕೇಳಿ ಯಾರೂ ವೋಟು ಹಾಕುವುದಿಲ್ಲ. ಆತನ ಕೆಲಸ ಮತ್ತು ಬದ್ಧತೆ ನೋಡಿ ಮತ ಹಾಕುತ್ತಾರೆ. ಈ ಕಾರಣದಿಂದ ಆತ ಸತತ ಆರಿಸಿ ಬರುತ್ತಾನೆ’ ಎಂದು ಆತನ ಮತಕ್ಷೇತ್ರದ ಜನ ಮಾತಾಡಿಕೊಳ್ಳುತ್ತಿದ್ದರು. ಒಮ್ಮೆ ಆತ ಮಾತಾಡಲು ಎದ್ದು ನಿಲ್ಲುತ್ತಿದಂತೆ, ‘ಕ್ವೆಚ್ ಮಾತಾಡಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅವರು ಏನು ಹೇಳಲು ಬಯಸಿzರೋ ಅದನ್ನು ಅವರು ಲಿಖಿತ ರೂಪದಲ್ಲಿ ಬರೆದುಕೊಂಡು ಬರಲಿ. ಅದನ್ನು ಅವರ ಪರವಾಗಿ ಬೇರೆಯವರು ಓದಲಿ. ಅವರ ಕರ್ಕಶ ದನಿ ಯನ್ನು ಕೇಳಲು ಸಾಧ್ಯವೇ ಇಲ್ಲ. ಅವರ ಮಾತು ಭಯಾನಕ ಶಬ್ದ ಮಾಲಿನ್ಯ ವನ್ನುಂಟುಮಾಡುತ್ತದೆ.

ಇದು ಸದನದ ಗಾಂಭೀರ್ಯಕ್ಕೆ ಧಕ್ಕೆಯುಂಟುಮಾಡುತ್ತದೆ’ ಎಂದು ಸದಸ್ಯರು ಕೂಗಾಡಿದರು. ಕ್ವೆಚ್‌ಗೆ ಬೇರೆಯವರನ್ನು ದೂರದೇ ಮಾತಾಡಲು ಬರುತ್ತಿರಲಿಲ್ಲ (ವೈಎನ್ಕೆ ಅವರು ಅವನನ್ನು ನೋಡಿದ್ದಿದ್ದರೆ ‘ವಾಚಕರವಾಣಿ’ ಎಂದು ಹೆಸರಿಡುತ್ತಿದ್ದರೇನೋ?!). ಒಮ್ಮೆ ಕ್ವೆಚ್ ಎರಡೂವರೆ ಗಂಟೆ ಮಾತಾಡಿದಾಗ, ಸದನದಲ್ಲಿದ್ದ ಬಹುತೇಕ ಸದಸ್ಯರು ನಿದ್ದೆ ಹೋಗಿದ್ದರು. ಇನ್ನು ಕೆಲವರು ಸದನದಿಂದ ಹೊರಗೆ ಹೋಗಿದ್ದರು. ಈ ಪ್ರಸಂಗಕ್ಕೆ ಲಂಡನ್ನಿನ ಹೆಸರಾಂತ ಟ್ಯಾಬ್ಲಾಯ್ಡ ಪತ್ರಿಕೆ ‘ದಿ ಸನ್’ ಒಂದೇ ಪದದ ಶೀರ್ಷಿಕೆ ನೀಡಿತ್ತು- Kvetching!

ಇದಕ್ಕಿಂತ ಪರಿಣಾಮಕಾರಿಯಾದ ಶೀರ್ಷಿಕೆ ಕೊಡಲು ಸಾಧ್ಯವೇ ಇಲ್ಲ ಬಿಡಿ. ಆಕ್ಸ್ ಫರ್ಡ್ ಪದಕೋಶದಲ್ಲಿ Kvetch (ಕ್ವೆಚ್) ಅಂದರೆ ಸದಾ ದೂರು ವವನು, ಬೇರೆಯವರ ಬಗ್ಗೆ ದೋಷಾರೋಪ ಮಾಡುವವನು, ಮಾತಿನಿಂದ ಕಿರುಕುಳ ಕೊಡುವವನು, ಕೀರಲು ಸ್ವರದಲ್ಲಿ ಮಾತಾಡುವವನು..
ಎಂಬೆ ಅರ್ಥಗಳಿವೆ. (ಉದಾ: He was kvetching about the petrol price hike). ಕ್ವೆಚ್ ಹುಟ್ಟಿದಾಗ, ಅವನ ದನಿಯನ್ನು ಕೇಳಿಯೇ ತಂದೆ-ತಾಯಿ ಆ ಹೆಸರನ್ನು ಇಟ್ಟರಾ?!

ಬುಸಿಂಗೇನ್ ಆಮ್ ಹೊಚರೇನ್
ನಾನು ಕೆಲವು ವರ್ಷಗಳ ಹಿಂದೆ, ಸ್ವಿಜರ್‌ಲ್ಯಾಂಡ್ ಮತ್ತು ಜರ್ಮನಿ ನಡುವೆ ಇರುವ ಪುಟ್ಟ ಊರಾದ ಬುಸಿಂಗೇನ್ ಆಮ್ ಹೊಚರೇನ್‌ಗೆ ಹೋಗಿದ್ದೆ. ಇದು ನಮ್ಮ ಕರ್ನಾಟಕ-ಕೇರಳ ಗಡಿಯಲ್ಲಿರುವ ಹಲವು ಊರುಗಳಂತೆ. ಮನೆಯ ಅಂಗಳ ಅಥವಾ ಜಗುಲಿ ಕರ್ನಾಟಕದಲ್ಲಿದ್ದರೆ, ಹಿತ್ತಲು ಅಥವಾ ಬಚ್ಚಲಮನೆ ಕೇರಳದಲ್ಲಿ. ಈ ಊರನ್ನು ಸ್ವಿಜರ್‌ಲ್ಯಾಂಡ್‌ನಲ್ಲಿರುವ ಜರ್ಮನ್ ಊರು ಎಂದು ಕರೆಯುತ್ತಾರೆ. ಭೌಗೋಳಿಕವಾಗಿ ಬುಸಿಂಗೇನ್ ಆಮ್ ಹೊಚರೇನ್ ಜರ್ಮನಿಯಲ್ಲಿದೆ. ಆದರೆ ಸ್ವಿಜರ್‌ಲ್ಯಾಂಡ್ ಆಡಳಿತಕ್ಕೆ ಒಳಪಟ್ಟಿದೆ. ಸ್ವಿಸ್ ಫ್ರಾಂಕ್ ಕರೆನ್ಸಿ ಚಲಾವಣೆಯಲ್ಲಿರುವ ಏಕೈಕ ಜರ್ಮನ್ ಊರೆಂದರೆ ಇದೊಂದೇ.

ತಮಾಷೆಯೆಂದರೆ, ಬುಸಿಂಗೇನ್ ಆಮ್ ಹೊಚರೇನ್‌ಗೆ ಸ್ವಿಜರ್ ಲ್ಯಾಂಡ್ ಮತ್ತು ಜರ್ಮನಿಯ ಎರಡೆರಡು ಪೋಸ್ಟಲ್ ಕೋಡ್ ಗಳಿವೆ. ಆ ಊರಿನಲ್ಲಿ ವಾಸಿಸುವ ಜನ ಆ ಎರಡೂ ದೇಶಗಳ ಫೋನ್ ನಂಬರ್ ಬಳಸುತ್ತಾರೆ. ವಿಚಿತ್ರ ಅಂದ್ರೆ, ಎಫ್ಸಿ ಬುಸಿಂಗೇನ್ ಎಂಬ ಜರ್ಮನ್ ಫುಟ್ಬಾಲ್ ತಂಡ ಸ್ವಿಜರ್‌ಲ್ಯಾಂಡ್ ಪರವಾಗಿ ಆಡುತ್ತದೆ. ಒಂದೂವರೆ ಸಾವಿರ ಜನಸಂಖ್ಯೆ ಇರುವ ಬುಸಿಂಗೇನ್ ಮೂಲತಃ ಪ್ರವಾಸಿ ತಾಣ. ಇಲ್ಲಿನ ಜನಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಕೆಲವು ವರ್ಷಗಳ ಕಾಲ ಸ್ವಿಸ್ ಮತ್ತು ಜರ್ಮನ್ ಸರಕಾರಗಳು ಈ ಒಂದು ಪುಟ್ಟ ಊರಿನ ಮೇಲೆ ನಿಯಂತ್ರಣ ಸಾಧಿಸಲು ಹಲವು ಸಲ ಕಿತ್ತಾಡಿಕೊಂಡಿದ್ದವು.

ಈಗ ಈ ಎರಡೂ ದೇಶಗಳು ಪರಸ್ಪರ ಒಡಂಬಡಿಕೆ ಮಾಡಿಕೊಂಡಿದ್ದು, ಇದು ಉಭಯ ದೇಶಗಳಿಗೆ ಸೇರಿದ ವಿಶೇಷ ಊರು ಎಂದು ಪರಿಗಣಿಸಿ, ಸಮಾಧಾನಪಟ್ಟುಕೊಂಡಿವೆ.

ಬದಲಾಗುವ ಭಾಷೆ
ಕಳೆದ ೨೫ ವರ್ಷಗಳಲ್ಲಿ ಇಂಗ್ಲಿಷ್ ಸೇರಿದಂತೆ, ಭಾರತದ ಎಲ್ಲಾ ಭಾಷೆಗಳೂ ಬದಲಾಗಿವೆ. ಹೊಸ ಹೊಸ ಪದಗಳು ಬಂದಿವೆ. ಇದಕ್ಕೆ ಪ್ರಮುಖ ಕಾರಣ ತಂತ್ರಜ್ಞಾನ ಮತ್ತು ನವಸಾಕ್ಷರರು. ಹೊಸ ಹೊಸ ಕ್ಷೇತ್ರಗಳಲ್ಲಿರುವವರು ಬರೆಯಲು ಆರಂಭಿಸಿದ್ದರಿಂದ, ಸಹಜವಾಗಿ ಭಾಷೆಗೆ ಹೊಸನೀರು ಬಂದು ಸೇರಿಕೊಳುತ್ತಿದೆ. ಕಳೆದ ೨೫ ವರ್ಷಗಳಲ್ಲಿ ಕನ್ನಡವೂ ಸಾಕಷ್ಟು ಬದಲಾಗಿದೆ. ಕಾಲಕ್ಕೆ ತಕ್ಕಂತೆ ಭಾಷೆಯೂ ಬದಲಾಗಿದೆ. ಪ್ರತಿದಿನ ಹೊಸ ಹೊಸ ಪದಗಳು ಚಾಲನೆಗೆ ಬರುತ್ತಿವೆ. ಭಾಷಾ ರಚನೆಯೂ ಹೊಸ ದಿಕ್ಕಿಗೆ ಮುಖ ಮಾಡಿದೆ. ಇದಕ್ಕೆ ನಮ್ಮ ಟೆಕ್ಕಿಗಳ ಕೊಡುಗೆಯೂ ಅಪಾರ. ಹೊಸ ಹೊಸ ಲೇಖಕರು ದೊಡ್ಡ ಸಂಖ್ಯೆಯಲ್ಲಿ ಬರೆಯುತ್ತಿದ್ದಾರೆ. ಅದರಲ್ಲೂ ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ, ಬರಹಗಾರರು ಹೆಚ್ಚು ಕ್ರಿಯಾಶೀಲರಾಗಿದ್ದಾರೆ.

ಕೆಲವರಂತೂ ಭಾಷೆಯನ್ನು ಚೆಂದವಾಗಿ ಬಳಸುತ್ತಿದ್ದಾರೆ. ಆದರೆ ಕೆಲ ವರ್ಷಗಳ ಹಿಂದೆ ಓದುಗರೊಬ್ಬರು ಹೇಳಿದ ಮಾತು ನಾನು ತುಸು ಯೋಚಿಸು ವಂತೆ ಮಾಡಿತು. ಕಳೆದ ಏಳೂವರೆ ದಶಕಗಳಿಂದ ಪತ್ರಿಕೆಗಳನ್ನು ಓದುತ್ತಿರುವ ಅವರು ಹೇಳಿದರು- ‘ಈಗಿನ ಪತ್ರಿಕೆಗಳಿಗೂ, ಐವತ್ತು-ಅರವತ್ತು ವರ್ಷಗಳ ಹಿಂದಿನ ಪತ್ರಿಕಾ ಭಾಷೆಗೂ ಬಹಳ ವ್ಯತ್ಯಾಸ. ನಾನು ಇತ್ತಿತ್ತಲಾಗಿ ಹೊಸ ಭಾಷೆಗೆ ಒಗ್ಗಿಕೊಂಡಿದ್ದೇನೆ. ಇತ್ತೀಚಿನ ಎ ಕನ್ನಡ ಪತ್ರಿಕೆಗಳು ‘ಉದ್ದೇಶ’ ಎಂದು ಬರೆಯುತ್ತವೆ. ಸಾಹಿತಿಗಳು ಸಹ ಹಾಗೇ ಬರೆಯುತ್ತಾರೆ.

ಆದರೆ ಅದು ‘ಉದ್ದಿಶ್ಯ’ ಎಂದಾಗಬೇಕು. ಎಂಬತ್ತರ ದಶಕದವರೆಗೂ ಪತ್ರಕರ್ತರೆಲ್ಲ ‘ಉದ್ದಿಶ್ಯ’ ಎಂದೇ ಬರೆಯುತ್ತಿದ್ದರು. ಈಗ ಅದು ಉದ್ದೇಶವಾಗಿದೆ. ಈಗ ನೀವು ಉದ್ದಿಶ್ಯ ಎಂದು ಬರೆದರೆ, ಅದು ತಪ್ಪು ಎಂದು ಓದುಗರು ಭಾವಿಸಬಹುದು. ಈ ರೀತಿ, ನಾನು ನೂರಾರು ಪದಗಳನ್ನು ಉದಾಹರಿಸಬಹುದು. ಹೀಗಾಗಿ ನನಗೆ ಪತ್ರಿಕೆ ಓದುವಾಗ ಬಹಳ ಕಿರಿಕಿರಿಯಾಗುತ್ತದೆ. ಆದರೆ ಈಗ ನಿಧಾನವಾಗಿ ಒಗ್ಗಿಕೊಂಡಿದ್ದೇನೆ. ಕಾಲಚಕ್ರ ತಿರುಗಿದಂತೆ, ನಾವೂ
ಬದಲಾಗಲೇಬೇಕಲ್ಲ’.

ಇಂಗ್ಲಿಷ್ ಮತ್ತು ಲಾಜಿಕ್!
ಪ್ರತಿ ನಿಯಮ (Rule)ಕ್ಕೂ ಅಪವಾದ (exception) ಇರುವುದು ಸಹಜ. ಆದರೆ ಇಂಗ್ಲಿಷ್ ಎಂಥ ಲಾಜಿಕ್ ಇಲ್ಲದ ಭಾಷೆ ಅಂದರೆ, ಅಲ್ಲಿ ನಿಯಮ ಗಳಿಗಿಂತ ಹೆಚ್ಚು ಅಪವಾದಗಳಿವೆ. ಆದರೂ ಇದನ್ನು ಜಗತ್ತಿನಾದ್ಯಂತ ಜನ ಒಪ್ಪಿಕೊಂಡಿದ್ದಾರೆ ಮತ್ತು ಕೆಲವೇ ಕೆಲವು ಜನ ಸಮರ್ಪಕವಾಗಿ  ತಾಡುತ್ತಾರೆ. ಇಂಗ್ಲಿಷ್ ಅಂದರೆ ಕೆಲವರಿಗೆ ಕಬ್ಬಿಣದ ಕಡಲೆ ಆಗಿರುವುದು ಸಹ ಅದಕ್ಕೇ. ಕೆಲ ವರ್ಷಗಳ ಹಿಂದೆ, ಉದ್ಯಮಿ ಕಿರಣ್ ಮಜುಂದಾರ್ ಷಾ
ಒಂದು ಟ್ವೀಟ್ ಮಾಡಿದ್ದರು- Jail ಮತ್ತು Prison ಎಂಬವು ಸಮಾನಾರ್ಥಕ (synonym) ಪದಗಳು. ವಿಚಿತ್ರ ಅಂದರೆ, Jailer ಮತ್ತು Prisoner ವಿರುದ್ಧಾರ್ಥಕ (antonyms) ಪದಗಳು. ಇಂಗ್ಲಿಷಿನಲ್ಲಿ ಒಂದು ಮಾತಿದೆ- A love that defies all logic is sometimes the most logical thing in the world.. ಈ ಮಾತನ್ನು ಇಂಗ್ಲಿಷ್‌ಗೂ ಅನ್ವಯಿಸಬಹುದು.

ಕಪಿಲ್ ಪ್ರತಿಕ್ರಿಯೆ ಏನು?
ಇದು ಎಷ್ಟು ನಿಜವೋ ಗೊತ್ತಿಲ್ಲ. ಆದರೆ ಇಂಥದ್ದೊಂದು ಪ್ರಸಂಗವನ್ನು ನಾನು ಅಲ್ಲಲ್ಲಿ ಕೇಳಿದ್ದೇನೆ. ೧೯೮೩ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ ಕಪಿಲ್ ದೇವ್ ೧೭೫ ರನ್ ಹೊಡೆದು ಭಾರತಕ್ಕೆ ಅಚ್ಚರಿಯ ವಿಜಯ ತಂದುಕೊಟ್ಟಿದ್ದು ನೆನಪಿರಬಹುದು. ಭಾರತ ಒಂದು ಹಂತದಲ್ಲಿ ೭೮ ರನ್ನಿಗೆ ೭ ವಿಕೆಟ್ ಕಳೆದುಕೊಂಡು ಅತ್ಯಂತ ಶೋಚನೀಯ ಸ್ಥಿತಿಯಲ್ಲಿತ್ತು. ಆಗ ಕಪಿಲ್ ಆಡಲು ಬಂದರು. ೧೩೮ ಬಾಲುಗಳಲ್ಲಿ, ೧೬ ಬೌಂಡರಿ, ೬ ಸಿಕ್ಸರ್
ನೆರವಿನಿಂದ, ೧೭೫ ರನ್ ಹೊಡೆದು ಭಾರತಕ್ಕೆ ವೀರೋಚಿತ ವಿಜಯ ತಂದುಕೊಟ್ಟರು.

ಅಂಥ ಅದ್ಭುತ ಆಟವಾಡಿದ ಕಪಿಲ್ ದೇವ್‌ಗೆ ಪತ್ರಕರ್ತರು ಕೇಳಿದರು- ‘ಭಾರತ ಎಂದಾದರೂ ನಿಮ್ಮಂಥ ಮತ್ತೊಬ್ಬ ಆಟಗಾರನನ್ನು ಹುಟ್ಟಿಸಬಹುದಾ, ರೂಪಿಸಬಹುದಾ?’. ಅದಕ್ಕೆ ಕಪಿಲ್ ತಕ್ಷಣ ಹೇಳಿದರು- ‘ಅದು ಸಾಧ್ಯವಿಲ್ಲ, ಯಾಕೆಂದರೆ ನನ್ನ ತಂದೆ ತೀರಿಕೊಂಡಿzರೆ ಮತ್ತು ತಾಯಿಗೆ ವಯಸ್ಸಾಯಿತು’.
ಒಪ್ಪತಕ್ಕ ಮಾತು!

ಅಮೆರಿಕದ ಫುಟ್ಬಾಲ್ ಆಟಗಾರ ಟ್ರೆಂಟ್ ಶಲ್ಟನ್ ಜೀವನಗಾಥೆಯನ್ನು ಓದುತ್ತಿದ್ದೆ. ಆತ ಒಂದೆಡೆ ಬರೆದಿದ್ದ- ‘ನನ್ನ ಎಲ್ಲಾ ಅಭಿಪ್ರಾಯಗಳನ್ನು ನೀವು ಒಪ್ಪಲಿಕ್ಕಿಲ್ಲ. ಆದರೆ ನನ್ನ ಒಂದು ಮಾತನ್ನು ಒಪ್ಪಿಯೇ ಒಪ್ಪುತ್ತೀರಿ’. ಹಾಗಾದರೆ ಅದ್ಯಾವ ಅಭಿಪ್ರಾಯ? ‘ನೀವು ಕೆಲವರಿಗೆ ಎಷ್ಟೇ ಒಳ್ಳೆಯವರಾಗಿರಿ,
ಉಪಕಾರ ಮಾಡಿ, ಅವರು ಮಾತ್ರ ತಮ್ಮ ಹಲ್ಕಾ ಬುದ್ಧಿಯನ್ನು ತೋರಿಸದೇ ಹೋಗುವುದಿಲ್ಲ. ನೀವು ಅವರನ್ನು ತಲೆಯ ಮೇಲೆ ಕುಳ್ಳಿರಿಸಿಕೊಂಡಿದ್ದು ಅವರಿಗೆ ಗೊತ್ತಿರುತ್ತದೆ, ಅದು ಗೊತ್ತಿದ್ದೂ ಅವರು ತಲೆ ಮೇಲೆಯೇ ಹೊಲಸು ಮಾಡಿ ಹೋಗುತ್ತಾರೆ. ನೀವು ಜೀವನದಲ್ಲಿ ಯಾರನ್ನು ಅತಿಯಾಗಿ ನಂಬು ತ್ತೀರೋ, ಅವರು ತಾವು ನಂಬಿಕೆಗೆ ಅರ್ಹರಲ್ಲ ಎಂಬುದನ್ನು ನಿಮಗೆ ಮನವರಿಕೆ ಮಾಡಿ ನಿರ್ಗಮಿಸುತ್ತಾರೆ’. ಇದನ್ನು ಯಾರೂ ಅಲ್ಲಗಳೆಯ ಲಾರರು. ಪ್ರತಿಯೊಬ್ಬರಿಗೂ ಇದು ಒಂದಿಂದು ಸಂದರ್ಭದಲ್ಲಿ ಅನುಭವಕ್ಕೆ ಬಂದಿರುತ್ತದೆ.

ಹೀಗೊಂದು ವಿದಾಯಪತ್ರ!
ಟೆಕ್ಕಿಯೊಬ್ಬ ಬರೆದ ವಿದಾಯ ಪತ್ರವಿದು. ಇದರಲ್ಲಿ ತಮಾಷೆ, ವಿಡಂಬನೆ, ವ್ಯಂಗ್ಯ, ಕ್ರೌರ್ಯ ಎಲ್ಲವೂ ಮಿಳಿತವಾಗಿದೆ- ‘ನಾನು ತೀರಿಕೊಂಡಾಗ ದಯವಿಟ್ಟು ನನ್ನ ಜತೆ ಪ್ರಾಜೆಕ್ಟ್ ವರ್ಕ್ ಮಾಡಿದ ಸ್ನೇಹಿತರನ್ನೆಲ್ಲ ಕರೆಯಿರಿ. ಹೊಂಡ ತೋಡಿ ನನ್ನ ದೇಹವನ್ನು ಕೆಳಗಿಡುವಾಗ ಅವರೆಲ್ಲರೂ ಇರಲಿ. ಕಾರಣ ನನ್ನನ್ನು ಕೆಳಗಿಸುವ ಕಡೆಯ ಅವಕಾಶ ಅವರಿಗೆ ಸಿಗಲಿ. ಅಲ್ಲದೇ ಅವರಿಗೆ ನನ್ನನ್ನು ಅದಕ್ಕಿಂತ ಕೆಳಕ್ಕಿಳಿಸುವ ಸಂದರ್ಭ ಮತ್ತೆ ಸಿಗಲಿಕ್ಕಿಲ್ಲ’.

ಶುದ್ಧ ನಿರುಪಯುಕ್ತ ಮಾಹಿತಿ! 

ಕೆಲವು ವಿಷಯಗಳನ್ನು ತಿಳಿದುಕೊಂಡು ನಿಮಗೆ ಆಗುವುದೇನೂ ಇರುವುದಿಲ್ಲ. ಒಂದು ರೀತಿಯಲ್ಲಿ ಅವು ನಿಷ್ಪ್ರಯೋಜಕ ಮಾಹಿತಿ ಗಳು ಅಥವಾ ಜಂಕ್ ಇನರ್ಮೇಷನ್. ಅವುಗಳನ್ನು ತಿಳಿದು ಕೊಳ್ಳುವುದರಿಂದ ಲಾಭವೂ ಇಲ್ಲ, ತಿಳಿದುಕೊಳ್ಳದೇ ಇರುವುದ ರಿಂದ ನಷ್ಟವೂ ಇಲ್ಲ. ಉದಾಹರಣೆಗೆ,
ಅಮೆರಿಕದ ಖ್ಯಾತ ಗಾಯಕ ಫ್ರಾಂಕ್ ಸಿನಟ್ರ ತಾಯಿ ಇಟಲಿಯ ಲುಮ್ಯಾರ್ಝೋ ಎಂಬ ಊರಿನವಳು ಮತ್ತು ಅವಳಿಗೆ ೨ ತಿಂಗಳಾದಾಗ ಅಮೆರಿಕಕ್ಕೆ ಬಂದಳು. ಹಾಗೆ ಮತ್ತೊಂದು ಮಾಹಿತಿ.

ಬಗ್ಸ್ ಬನ್ನಿ ಎಂಬ ಕಾರ್ಟೂನ್ ಕ್ಯಾರೆಕ್ಟರ್ ಇದೆಯಲ್ಲ, ಅದನ್ನು ೧೯೩೦ರಲ್ಲಿ ಲಿಯಾನ್ ಶ್ಲೋಸೆಂಗರ್ ಎಂಬಾತ ನಿರ್ಮಿಸಿದ. ಎರಿಕ್ ಅಕ್ಕೇರ್ಸ್ಡಿಜೆಕ್ ಎಂಬಾತ ೭.೮ ಸೆಕೆಂಡುಗಳಲ್ಲಿ ರೂಬಿಕ್ ಕ್ಯೂಬ್‌ನ್ನು ಸರಿಯಾಗಿ ಜೋಡಿಸಿದ ಮತ್ತು ಈತ ನೆದರ್ಲಾಂಡ್ ದೇಶದವನು. ಈ ಮಾಹಿತಿ ತಗೊಂಡು ನಮಗೇನಾಗಬೇಕಾಗಿದೆ? ಇದನ್ನು ತಿಳಿದುಕೊಳ್ಳುವುದರಿಂದ ಏನಾದರೂ ಪ್ರಯೋಜನವಿದೆಯಾ? ತಿಳಿದುಕೊಳ್ಳದಿರುವುದರಿಂದ ಹಾನಿ ಇದೆಯಾ? ಯಾರಿಗೆ ಬೇಕಾಗಿವೆ ಈ ಮಾಹಿತಿ? ಡಾನ್ ವೂರಹೀಸ್ ಎಂಬ ಲೇಖಕನಿದ್ದಾನೆ.

ಈತ ಮಾಹಿತಿ ಮೇನಿಯಾಕ್ (ಹುಚ್ಚ). ಸಿಕ್ಕ ಸಿಕ್ಕ ಮಾಹಿತಿಯನ್ನೆ ಸಂಗ್ರಹಿಸುವುದು ಅವನ ಪರಮ ಹವ್ಯಾಸ. ಆ ಮಾಹಿತಿ ಯಿಂದ ಯಾರಿಗೂ ಪ್ರಯೋ ಜನ ಇಲ್ಲವೆನ್ನುವುದು ಗೊತ್ತು. ಆದರೂ ಅವನ್ನೆ ಸೇರಿಸಿ, ೧೩ ಪುಸ್ತಕಗಳನ್ನು ಮಾಡಿದ್ದಾನೆ. ಆಕರ್ಷಕ ಶೀರ್ಷಿಕೆಗಳನ್ನು ಇಡದಿದ್ದರೆ ಅವುಗಳನ್ನು ಯಾರೂ ಖರೀದಿಸುತ್ತಿರಲಿಲ್ಲ. The Perfectly Useless Book Of Useless Information ಎಂದು ಹೆಸರಿಟ್ಟಿದ್ದಾನೆ. ಇದೇ ಸರಣಿಯಲ್ಲಿ, The Extraordinary Book Of Useless Information, The Incredible Book Of Useless Information, The Super Book Of Useless Information… ಹೀಗೆ ಹಲವು ಪುಸ್ತಕಗಳನ್ನು ಬರೆದಿದ್ದಾನೆ.

ಕೊನೆಗೆ ಈ ಸರಣಿಯ ಶೀರ್ಷಿಕೆಗಳೆ ನೀರಸ ವೆಂದು ಆತನಿಗೆ ಅನಿಸಿರಬೇಕು, ಕೊನೆಯಲ್ಲಿ Disgusting Things; A Miscellany ಎಂಬ ಪುಸ್ತಕ ಬರೆದ. ಈ ಪುಸ್ತಕಗಳ ಮೇಲೆ ಆತ ನೀಡಿದ ಉಪಶೀರ್ಷಿಕೆಯೇನೆಂದರೆ, ಈ ಪುಸ್ತಕದಲ್ಲಿ ನಿಮಗೆ ಎಂದೂ ಉಪಯೋಗಕ್ಕೆ ಬಾರದ ಮಾಹಿತಿಯಿದೆ. ಆದರೂ ಯಾವುದಕ್ಕೂ ನಿಮಗೆ ಗೊತ್ತಿರಲಿ.