ಮೂರ್ತಿ ಪೂಜೆ
ಆರ್.ಟಿ.ವಿಠ್ಠಲಮೂರ್ತಿ
ಯಡಿಯೂರಪ್ಪ ಅವರೇನಾದರೂ ಸಿಎಂ ಹುದ್ದೆಯಿಂದ ಕೆಳಗಿಳಿಯದೆ ಹೋಗಿದ್ದರೆ ಜೆಡಿಎಸ್ ಪರಿಸ್ಥಿತಿ ಮತ್ತಷ್ಟು ಕಷ್ಟಕರವಾಗುತ್ತಿತ್ತು. ಸಿದ್ದು ಮತ್ತು ಬಿಎಸ್ವೈ ಬಹುದೂರ ಕ್ರಮಿಸಿದ್ದರು. ಈ ಇಬ್ಬರು ನಾಯಕರು ತಮ್ಮ ನೆಲೆಯಲ್ಲಿ 20 ಶಾಸಕರು ಜೆಡಿಎಸ್ ತೊರೆಯುತ್ತಿದ್ದರು.
ಮಾಜಿ ಪ್ರಧಾನಿ ದೇವೇಗೌಡ ಕಳೆದ ವಾರ ಪ್ರಧಾನಿ ನರೇಂದ್ರಮೋದಿ ಅವರನ್ನು ಭೇಟಿ ಮಾಡಿದ ಸನ್ನಿವೇಶವನ್ನು ಗಮನಿಸಿದವರಿಗೆ ಕರ್ನಾಟಕ ದ್ವಿಕೋನ ಸ್ಪರ್ಧೆಗೆ ಅಣಿಯಾಗುತ್ತಿದೆ ಎಂಬ ಭಾವನೆ ಮೂಡಿಸಿರುವುದು ಸುಳ್ಳಲ್ಲ. ಅಂದ ಹಾಗೆ ನರೇಂದ್ರಮೋದಿ ಹಾಗೂ ದೇವೇಗೌಡರ ಭೇಟಿಯ ಸಂದರ್ಭದಲ್ಲಿ ಚುನಾವಣಾ ಹೊಂದಾಣಿಕೆಯ ಬಗ್ಗೆಯೇ ಚರ್ಚೆ ನಡೆಯಿತು ಎಂದು ಹೇಳಲಾಗದು.
ಆದರೆ ಈ ನಾಯಕರ ಭೇಟಿ ಸಂದರ್ಭದ ಆಂಗಿಕ ಭಾಷೆ ಇದೆಯಲ್ಲ? ಅದು ಬಹಳಷ್ಟನ್ನು ಹೇಳುತ್ತದೆ ಎಂಬುದು ನಿಜ. ಅಂದ ಹಾಗೆ ಕರ್ನಾಟಕದ ನೆಲೆಯಲ್ಲಿ ಮೂರನೇ ಶಕ್ತಿಯಾಗಿ ತಳವೂರಲು ಜೆಡಿಎಸ್ ಬಹಳಷ್ಟು ಶ್ರಮಿಸಿದೆ. ಜನತಾಪರಿವಾರ 1999 ರಲ್ಲಿ ವಿಭಜನೆಯಾದ ನಂತರದ ದಿನಗಳಲ್ಲಿ ತನ್ನ ಅಸ್ತಿತ್ವ ಉಳಿಸಿ ಕೊಳ್ಳಲು ಅದು ನಿರಂತರವಾಗಿ ಹೋರಾಡುತ್ತಾ ಬಂದಿದೆ. ಇಂತಹ ಹೋರಾಟದ ಫಲವಾಗಿ ಅದು 2004ರಲ್ಲಿ ಕರ್ನಾಟಕದ ಅಧಿಕಾರದಲ್ಲಿ ಪಾಲು ಪಡೆಯಿತು. ಎರಡು ವರ್ಷಗಳ ನಂತರ ಬಿಜೆಪಿ ಜತೆ ಕೈಗೂಡಿಸಿದ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯೇ ಆದರು.
2008ರ ವಿಧಾನಸಭಾ ಚುನಾವಣೆಯ ಫಲಿತಾಂಶ ಯಾವ ಪಕ್ಷಕ್ಕೂ ಬಹುಮತ ನೀಡದೇ ಇದ್ದಾಗ ಮಾಜಿ ಪ್ರಧಾನಿ ದೇವೇಗೌಡರು, 6 ಪಕ್ಷೇತರರ ಬೆಂಬಲ ಪಡೆದು ಸರಕಾರ ರಚಿಸುವುದು ಕಷ್ಟವಲ್ಲ, ಹೀಗಾಗಿ ಮೈತ್ರಿ ಮಾಡಿಕೊಂಡು ಸರಕಾರ ರಚಿಸೋಣ ಎಂದು ಕಾಂಗ್ರೆಸ್ ನಾಯಕರಿಗೆ ಸಂದೇಶ ನೀಡಿದರು. ಆದರೆ ಅಷ್ಟೊತ್ತಿ ಗಾಗಲೇ ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರಕಾರ ಪತನಗೊಂಡಿದ್ದ ರೀತಿಯಿಂದ ಮೇಡಂ ಸೋನಿಯಾ ಗಾಂಧಿ ಅವರು ಜೆಡಿಎಸ್ ವಿರುದ್ಧದ ಮನಃಸ್ಥಿತಿಗೆ ಬಂದಿದ್ದರು.
ಹೀಗಾಗಿ 2008ರ ಅತಂತ್ರ ಫಲಿತಾಂಶವನ್ನು ಬಳಸಿಕೊಂಡು ಜೆಡಿಎಸ್ ಜತೆ ಕೈಗೂಡಿಸುವ, ಸರಕಾರ ಮಾಡುವ ಆಸಕ್ತಿ ಅವರಲ್ಲಿರಲಿಲ್ಲ. ಮುಂದೆ 2018ರ ವಿಧಾನಸಭಾ ಚುನಾವಣೆಯಲ್ಲಿ ಯಥಾ ಪ್ರಕಾರ ಯಾವ ಪಕ್ಷಕ್ಕೂ ಬಹುಮತ ಬರಲಿಲ್ಲ. ಆದರೆ ಈ ಸಂದರ್ಭವನ್ನು ಬಳಸಿಕೊಂಡ ಕಾಂಗ್ರೆಸ್ ನಾಯಕರು ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಹೋಗಿ ಮೈತ್ರಿ ಸರಕಾರದ ರಚನೆಯನ್ನು ಪಕ್ಕಾ ಮಾಡಿಕೊಂಡು ಬಂದರು.
ಮುಂದೆ ಈ ಸರಕಾರವೂ ಬಹುಕಾಲ ಬಾಳಲಿಲ್ಲ. ಜೆಡಿಎಸ್ ಜತೆ ಸೇರಿ ಸ್ವಪಕ್ಷದ ನಾಯಕರು ತಮ್ಮನ್ನು ಮುಗಿಸಲು ಬಯಸಿದ್ದಾರೆ ಎಂಬ ಕಾರಣಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಸಿಟ್ಟಿಗೆದ್ದರು. ಮುಂದೆ ಅವರ ಹಲವು ಬೆಂಬಲಿಗರು ಕೈ ಪಾಳೆಯ ತೊರೆದು ಬಿಜೆಪಿ ಸೇರಿಕೊಂಡರು. ಪರಿಣಾಮ ಸರಕಾರ ಬಿತ್ತು. ಕುಮಾರ ಸ್ವಾಮಿ ಅಧಿಕಾರದಿಂದ ಕೆಳಗಿಳಿದರು. ಜಾತ್ಯತೀತ ಜನತಾದಳ ದೊಡ್ಡ ಮಟ್ಟದಲ್ಲಿ ಅಸ್ತಿತ್ವದ ಪ್ರಶ್ನೆ ಎದುರಿಸತೊಡಗಿದ್ದು ಇಲ್ಲಿಂದ. ಒಂದು ವೇಳೆ ಯಡಿಯೂರಪ್ಪ ಅವರೇನಾದರೂ ಸಿಎಂ ಹುದ್ದೆಯಿಂದ ಕೆಳಗಿಳಿಯದಿದ್ದರೆ, ಈ ವೇಳೆಗೆ ಜೆಡಿಎಸ್ ಪರಿಸ್ಥಿತಿ ಮತ್ತಷ್ಟು ಕಷ್ಟಕರವಾಗುತ್ತಿತ್ತು. ಏಕೆಂದರೆ ಜೆಡಿಎಸ್ ಮುಗಿಸುವ ದಿಸೆಯಲ್ಲಿ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಬಹುದೂರ ಕ್ರಮಿಸಿದ್ದರು. ಜೆಡಿಎಸ್ ಮೂಲಗಳ ಪ್ರಕಾರ ಈ ಇಬ್ಬರು ನಾಯಕರು ತಮ್ಮ ತಮ್ಮ ನೆಲೆಯಲ್ಲಿ ನಡೆಸಿದ ಪ್ರಯತ್ನದ ಫಲವಾಗಿ ೨೦ರಷ್ಟು ಶಾಸಕರು ಜೆಡಿಎಸ್ ತೊರೆಯಲು ಸಜ್ಜಾಗಿದ್ದರು.
ವಿಧಾನಸಭಾ ಚುನಾವಣೆ ಹತ್ತಿರ ಬರಲಿ ಎಂಬುದನ್ನು ಬಿಟ್ಟರೆ ಜೆಡಿಎಸ್ ಪಕ್ಷವನ್ನು ತೊರೆಯಲು ಈ ಶಾಸಕರಿಗೆ ಯಾವ ಹಿಂಜರಿಕೆಯೂ ಇರಲಿಲ್ಲ. ಆದರೆ ಯಾವಾಗ ಈ ವಿಷಯ ದೊಡ್ಡದಾಗುತ್ತಾ ಹೋಯಿತೋ? ಆಗ ಕುಮಾರಸ್ವಾಮಿ ಅವರು ಒಂದು ತಂತ್ರ ಹೂಡಿದರು. ಅದೆಂದರೆ ಬಿಜೆಪಿಯ ಜತೆ ಮೈತ್ರಿ ಯುಗ ಪ್ರಾರಂಭಿಸುವುದು. ಇದೇ ಕಾರಣಕ್ಕಾಗಿ ಅವರು ಇದ್ದಕಿದ್ದಂತೆ, ಮೈತ್ರಿಯ ವಿಷಯದಲ್ಲಿ ನಮಗೆ ಬಿಜೆಪಿಯಿಂದ ಯಾವತ್ತೂ ಹಿಂಸೆ ಆಗಿರಲಿಲ್ಲ. ಆದರೆ ಕಾಂಗ್ರೆಸ್ ಪಕ್ಷದಿಂದ ಹಿಂಸೆ ಆಯಿತು ಎನ್ನತೊಡಗಿದರು.
ಅಷ್ಟೇ ಅಲ್ಲ, ಕರ್ನಾಟಕದ ನೆಲೆಯಲ್ಲಿ ಕಾಂಗ್ರೆಸ್ ಎದುರಿಸಲು ಬಿಜೆಪಿ ಮತ್ತು ಜೆಡಿಎಸ್ ಒಂದಾಗಬೇಕು ಎಂಬ ಸಂದೇಶವನ್ನು ಕಮಲ ಪಾಳೆಯದ ವರಿಷ್ಠರಿಗೆ ರವಾನಿಸತೊಡಗಿದರು. ಯಾವಾಗ ಕುಮಾರಸ್ವಾಮಿ ಅವರ ಆಸಕ್ತಿಯನ್ನು ಗಮನಿಸಿದರೋ? ಆಗ ಬಿಜೆಪಿಯ ವರಿಷ್ಠರೂ ಒಂದು ಸೂತ್ರವನ್ನು ಮುಂದಿಟ್ಟು ಕುಮಾರಸ್ವಾಮಿ ಅವರಿಗೆ ಆಫರ್ ಕೊಟ್ಟರು. ಕರ್ನಾಟಕದ ನೆಲೆಯಲ್ಲಿ ಜೆಡಿಎಸ್ಅನ್ನು ಬಿಜೆಪಿಯಲ್ಲಿ ವಿಲೀನ ಮಾಡಿ, ಇದಕ್ಕೆ ಪ್ರತಿಫಲವಾಗಿ ಮುಂದಿನ ದಿನ ಗಳಲ್ಲಿ ನಿಮ್ಮನ್ನು ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿಯನ್ನಾಗಿ ಪರಿಗಣಿಸುತ್ತೇವೆ ಎಂಬುದು ಈ ಆಫರ್. ಅಂದರೆ ಅಷ್ಟೊತ್ತಿಗಾಗಲೇ ಕರ್ನಾಟಕದ ನೆಲೆಯಲ್ಲಿ ನಾಯಕತ್ವ ಬದಲಾವಣೆ ಮಾಡಬೇಕು ಎಂಬ ನಿರ್ಧಾರಕ್ಕೆ ಬಿಜೆಪಿ ವರಿಷ್ಠರು ಬಂದಾಗಿತ್ತು. ಆದರೆ ಯಡಿಯೂರಪ್ಪ ಅವರನ್ನು ಬದಲಿಸಿದರೆ ಪ್ರಬಲ ಲಿಂಗಾಯತ ಸಮುದಾಯ ತಿರುಗಿ ಬೀಳಬಹುದು ಎಂಬ ಮುನ್ನೆಚ್ಚರಿಕೆಯೂ ಅವರಿಗಿತ್ತು.
ಇಂತಹ ಮುನ್ನೆಚ್ಚರಿಕೆ ಇದ್ದುದರಿಂದಲೇ ಲಿಂಗಾಯತ ಸಮುದಾಯ ಒಂದು ಮಟ್ಟದಲ್ಲಿ ಬಿಜೆಪಿಗೆ ವಿರುದ್ಧವಾಗಿ ನಿಂತರೂ, ಮತ್ತೊಂದು ಪ್ರಬಲ ಸಮುದಾಯವಾದ ಒಕ್ಕಲಿಗರ ಬೆಂಬಲ ಸಿಗುವಂತಾದರೆ ಒಳ್ಳೆಯದು ಎಂದವರು ಯೋಚಿಸತೊಡಗಿದ್ದರು. ಇದೇ ಕಾರಣಕ್ಕಾಗಿ ಅವರು ಕುಮಾರಸ್ವಾಮಿ ಅವರಿಗೆ ಬಂಪರ್ ಆಫರ್ ನೀಡಿದ್ದು. ವಸ್ತುಸ್ಥಿತಿ ಎಂದರೆ ಬಿಜೆಪಿ ವರಿಷ್ಠರ ಈ ಪ್ರಸ್ತಾಪ ಕುಮಾರಸ್ವಾಮಿ ಅವರಿಗೆ ಹಿಡಿಸಿತ್ತು. ಇದಕ್ಕೆ ಮತ್ತೊಂದು ಮುಖವೂ ಇತ್ತು. ಅದೆಂದರೆ, ಯಡಿಯೂ ರಪ್ಪ ಅವರು ತಮ್ಮ ಪಕ್ಷದ ಹಲವು ಶಾಸಕರಿಗೆ ಬಲೆ ಬೀಸಿದ್ದೇನೋ ಸರಿ. ಆದರೆ ತಾವೇ ಮುಂದಾಗಿ ಬಿಜೆಪಿ ಜತೆ ವಿಲೀವಾದರೆ ಇಂತಹ ತಂತ್ರ ಗಳಿಗೆ ಅಡ್ಡೇಟು ಬಿದ್ದಂತಾಗುತ್ತದೆ, ಬಿಜೆಪಿ ಸೇರಲು ಹವಣಿಸುತ್ತಿರುವ ಪಕ್ಷದ ಶಾಸಕರಿಗೆ ಎಚ್ಚರಿಕೆ ನೀಡಿದಂತಾಗುತ್ತದೆ ಎಂಬುದು ಕುಮಾರಸ್ವಾಮಿ ಅವರ ಲೆಕ್ಕಾಚಾರವಾಗಿತ್ತು.
ಯಾವಾಗ ಕುಮಾರಸ್ವಾಮಿ ಅವರ ಈ ಲೆಕ್ಕಾಚಾರದ ವಾಸನೆ ಸಿಕ್ಕಿತೋ? ಆಗ ಮುಖ್ಯಮಂತ್ರಿ ಯಡಿಯೂರಪ್ಪ ಕೂಡಾ ತಿರುಗೇಟು ನೀಡಲು ಆರಂಭಿಸಿದರು.
ಇದೇ ಕಾರಣಕ್ಕಾಗಿ ರಾಜ್ಯದಲ್ಲಿ ಪಕ್ಷದ ಉಸ್ತುವಾಗಿ ವಹಿಸಿಕೊಂಡಿದ್ದ ಅರುಣ್ ಸಿಂಗ್ ಅವರ ಮೂಲಕ ಜೆಡಿಎಸ್ ಪಕ್ಷಕ್ಕೆ ವ್ಯತಿರಿಕ್ತ ಸಂದೇಶ ರವಾನಿಸ ತೊಡಗಿ ದರು. ಈ ಬೆಳವಣಿಗೆಯಿಂದ ಕುಮಾರಸ್ವಾಮಿ ಬೇಸತ್ತರು. ಮುಂದೆ ಬಿಜೆಪಿಯ ಜತೆ ವಿಲೀನವಿಲ್ಲ, ಬೇಕಿದ್ದರೆ ಮೈತ್ರಿ ಮಾತ್ರ ಎಂಬ ಸಂದೇಶ ರವಾನಿಸ ತೊಡಗಿದರು. ಆದರೆ ಇವತ್ತು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ.
ಅವತ್ತು ಜೆಡಿಎಸ್ ಪಕ್ಷವನ್ನು ಮುಗಿಸಲು ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಇಬ್ಬರೂ ಪ್ರಯತ್ನಿಸುತ್ತಿದ್ದರು. ಅದರೆ ಯಡಿಯೂರಪ್ಪ ನಿರ್ಗಮನದ ನಂತರ ಪರಿಸ್ಥಿತಿ ಬದಲಾಗಿ ಆಪರೇಷನ್ ಜೆಡಿಎಸ್ ಕಾರ್ಯವನ್ನು ಸಿದ್ದರಾಮಯ್ಯ ಮಾತ್ರ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಜತೆ ಕೈಜೋಡಿಸಿ ಕಾಂಗ್ರೆಸ್ ಪಕ್ಷವನ್ನು ಎದುರಿಸಬೇಕು ಎಂಬುದು ಕುಮಾರಸ್ವಾಮಿ ಅವರ ನಿಲುವು. ಅಂದ ಹಾಗೆ ಬಿಜೆಪಿಯ ಜತೆ ಕೈಜೋಡಿಸಲು ಅವರಿಗೀಗ
ಯಾವ ತಲೆನೋವೂ ಇಲ್ಲ. ಏಕೆಂದರೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಯಡಿಯೂರಪ್ಪ ಈಗ ರಾಜ್ಯ ಬಿಜೆಪಿಯ ಮಾರ್ಗದರ್ಶಕ್ ಗೆಟಪ್ಪಿನಲ್ಲಿದ್ದಾರೆ.
ಬಿಜೆಪಿಯಿಂದ ಹೊರ ಹೋಗಿ ಹೊಸ ಪಕ್ಷ ಕಟ್ಟಬೇಕು, ಕಾಂಗ್ರೆಸ್ ಜತೆ ಕೈಗೂಡಿಸಬೇಕು ಎಂಬ ಅವರ ಲೆಕ್ಕಾಚಾರ ಏನಿತ್ತು? ಆ ಲೆಕ್ಕಾಚಾರಕ್ಕೆ ಬಿಜೆಪಿ ಹೈಕಮಾಂಡ್ ಉಲ್ಟಾ ಹೊಡೆದಾಗಿದೆ. ಒಂದು ವೇಳೆ ನೀವೇನಾದರೂ ಹೊರಗೆ ಹೋಗಲು ಬಯಸಿದರೆ ಕಠಿಣ ಬೆಲೆ ತೆರಬೇಕಾಗುತ್ತದೆ ಎಂದು ಪಕ್ಷದ ಹೈಕಮಾಂಡ್ ಅವರಿಗೆ ಸಂದೇಶವನ್ನೂ ರವಾನಿಸಿದೆ. ಹೀಗಾಗಿ ಯಡಿಯೂರಪ್ಪ ಅವರು ಸದ್ಯಕ್ಕೆ ಪಕ್ಷ ತೊರೆಯಲು ಬಯಸುತ್ತಿಲ್ಲ. ಅಂದರೆ ಅವರನ್ನು ಪಕ್ಷದ
ಉಳಿಸಿಕೊಂಡು ಜೆಡಿಎಸ್ ಜತೆ ಕೈಗೂಡಿಸಿ ಮುಂದುವರೆಯಲು ಬಿಜೆಪಿ ವರಿಷ್ಠರು ಬಯಸಿzರೆ. ಅಂದ ಹಾಗೆ ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ಉಳಿದರು ಎಂಬ ಕಾರಣಕ್ಕಾಗಿ ಲಿಂಗಾಯತ ಸಮುದಾಯ ಅವರ ಜತೆ ನಿಂತುಬಿಡುತ್ತದೆ ಎಂದಲ್ಲ, ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಬಿಜೆಪಿಯ ನೆಲೆಯ ಇದ್ದರೆ ಒಂದಷ್ಟು ಪ್ರಮಾಣದ ಮತಗಳು ಬಿಜೆಪಿಗೆ ಬರುತ್ತದೆ.ಆದರೆ ಅದು ಸಾಲದು ಎಂಬುದು ಕಮಲ ಪಾಳೆಯದ ಲೆಕ್ಕಾಚಾರ.
ಹೀಗಾಗಿ ಒಂದು ಪ್ರಮಾಣದಲ್ಲಿ ಒಕ್ಕಲಿಗ, ಲಿಂಗಾಯತ ಮತ್ತಿತರ ಸಮುದಾಯಗಳ ಮತಗಳನ್ನು ಕ್ರೋಢೀಕರಿಸಿಕೊಂಡರೆ ಪುನಃ ಗೆದ್ದು ಅಧಿಕಾರ ಹಿಡಿಯ ಬಹುದು ಎಂದದು ಲೆಕ್ಕ ಹಾಕಿದೆ. ಸೆಕ್ಯೂಲರಿಸಂ ಬಗ್ಗೆ ಅದೆಷ್ಟೇ ಮಾತನಾಡಿದರೂ ಜೆಡಿಎಸ್ ಜತೆ ನಿಲ್ಲುವುದಿಲ್ಲ ಎಂದು ಉಪಚುನಾವಣೆಯ ಸಂದರ್ಭ
ದ ಮುಸ್ಲಿಮರು ಸಂದೇಶ ನೀಡಿದ್ದಾರೆ. ಹೀಗಿರುವಾಗ ನಾವು ಮುಸ್ಲಿಮರ ಮತಗಳನ್ನು ನೆಚ್ಚಿಕೊಳ್ಳುವುದು ಬೇಡ, ಬಿಜೆಪಿಯವರು ಲಿಂಗಾಯತರ ಸಾಲಿಡ್ ಬೆಂಬಲ ನಿರೀಕ್ಷಿಸುವುದು ಬೇಡ ಎಂಬುದು ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರು ಸೇರಿ ಕೈಗೊಂಡ ಒಟ್ಟಾರೆ ತೀರ್ಮಾನ. ಅವರ ಈ ತೀರ್ಮಾನವನ್ನೀಗ ಮಾಜಿ ಪ್ರಧಾನಿ ದೇವೇಗೌಡರೂ ಒಪ್ಪಿಕೊಂಡಿದ್ದಾರೆ.
ಒಂದು ಕಾಲದಲ್ಲಿ ಕಾಂಗ್ರೆಸ್ ನಮ್ಮನ್ನು ನಿರ್ನಾಮ ಮಾಡಲು ಹವಣಿಸುತ್ತಿದೆ ಎಂದು ದೂರಿ ಕುಮಾರಸ್ವಾಮಿ ಅವರು ಬಿಜೆಪಿ ಜತೆ ಕೈಗೂಡಿಸಿ ಸರಕಾರ
ರಚಿಸಿದಾಗ ದೇವೇಗೌಡರು ಅದನ್ನು ವಿರೋಧಿಸಿದ್ದರು. ಹೀಗೆ ಅದನ್ನು ವಿರೋಧಿಸುವ ಅನಿವಾರ್ಯತೆ ಅವರಿಗಿತ್ತು. ಯಾಕೆಂದರೆ 1996 ರಲ್ಲಿ ತಾವು ಪ್ರಧಾನಿ ಯಾಗಲು ಸಹಕರಿಸಿದ ಕಮ್ಯೂನಿಸ್ಟರ ಮುಂದೆ ಕೋಮುವಾದಿಗಳಿಗೆ ಬೆಂಬಲ ನೀಡುವವರು ಎಂದು ಪ್ರತಿಬಿಂಬಿತರಾಗುವುದು ದೇವೇಗೌಡರಿಗೆ ಇಷ್ಟವಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಕಮ್ಯೂನಿಸ್ಟರು ರಾಷ್ಟ್ರ ರಾಜಕಾರಣದಲ್ಲಿ ಶಕ್ತಿ ಕಳೆದುಕೊಂಡಿದ್ದಾರೆ. ಮತ್ತು ಅವರನ್ನು ನೆಚ್ಚಿಕೊಂಡು ರಾಜಕಾರಣ ಮಾಡಲು ಸಾಧ್ಯವೂ ಇಲ್ಲ ಎಂಬುದು ಅವರಿಗೆ ಮನದಟ್ಟಾಗಿದೆ.
ಹೀಗಾಗಿ ಅವರಿಗೀಗ ಜೆಡಿಎಸ್ ಉಳಿವು ಮುಖ್ಯ. ಕಾಂಗ್ರೆಸ್ ಮತ್ತು ಬಿಜೆಪಿಗಳಿಂದ ಸಮಾನ ಅಂತರ ಕಾಯ್ದುಕೊಂಡು ಪಕ್ಷವನ್ನು ಉಳಿಸುವ ವಿಶ್ವಾಸ ಈಗ
ಅವರಲ್ಲೂ ಕಡಿಮೆಯಾಗಿದೆ. ಅದರಲ್ಲೂ ಜೆಡಿಎಸ್ ಅನ್ನು ಅಳಿಸಲು ಕಾಂಗ್ರೆಸ್ ಬಯಸುತ್ತಿರುವ ರೀತಿಯನ್ನು ಕಂಡು ಸಿಟ್ಟಿಗೆದ್ದಿರುವ ದೇವೇಗೌಡರಿಗೂ ಈಗ ಪರ್ಯಾಯ ಶಕ್ತಿಯ ಆಸರೆ ಬೇಕು ಅನ್ನಿಸತೊಡಗಿದೆ. ಇದೇ ಕಾರಣಕ್ಕಾಗಿ ಪ್ರಧಾನಿ ನರೇಂದ್ರಮೋದಿ ಅವರನ್ನು ಭೇಟಿ ಮಾಡಿದ ನಂತರ ಅವರು, ‘ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ -ಬಿಜೆಪಿ ನಡುವಣ ಹೊಂದಾಣಿಕೆಯ ವಿಷಯವನ್ನು ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಇತ್ಯರ್ಥ ಮಾಡುತ್ತಾರೆ’ ಎಂದು ಹೇಳಿದ್ದು. ಅರ್ಥಾತ್,ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗೆ ಕರ್ನಾಟಕದ ರಾಜಕಾರಣ ಬಿಜೆಪಿ ಮೈತ್ರಿಕೂಟ ವರ್ಸಸ್ ಬಿಜೆಪಿ ವಿರೋಧಿ ಮೈತ್ರಿಕೂಟದ ನೆಲೆಯ ಮೇಲೆ ನಿಲ್ಲುವುದು ಬಹುತೇಕ ಖಚಿತ.