Sunday, 1st December 2024

ಜಿಯೋನಾ : ಕೂಡು ಕುಟುಂಬದ ಜೀವನ

ನಾಡಿಮಿಡಿತ

ವಸಂತ ನಾಡಿಗೇರ

ನಾವಿಬ್ಬರು, ನಮಗಿಬ್ಬರು; ನಾವಿಬ್ಬರು ನಮಗೊಬ್ಬರು – ಈ ರೀತಿಯ ಘೋಷಣೆಗಳನ್ನು ಕೇಳಿದೊಡನೆ ಇದಾವುದೋ ಕುಟುಂಬ ಯೊಜನೆಯ ಘೋಷವಾಕ್ಯ ಎಂಬುದು ಗೊತ್ತಾಗುತ್ತದೆ. ಜನಸಂಖ್ಯಾ ಸ್ಫೋಟ ನಿಯಂತ್ರಣಕ್ಕಾಗಿ ನಮ್ಮ ಸರಕಾರವೇ ಜಾರಿಗೆ ತಂದಿ ರುವ ಯೊಜನೆಗಳಿವು. ಇದರ ಪರಿಣಾಮವಾಗಿ ಇಂದು ನಮ್ಮಲ್ಲಿ ಚಿಕ್ಕ ಕುಟುಂಬಗಳೇ ಹೆಚ್ಚು.

ಕೂಡು ಕುಟುಂಬಗಳು ಅಥವಾ ಅವಿಭಕ್ತ ಕುಟುಂಬಗಳನ್ನು ಬಹುಶಃ ದುರ್ಬೀನು ಹಾಕಿ ಹುಡುಕಬೇಕೇನೊ. ಏಕೆಂದರೆ ಇಂದಿನ ದಿನಮಾನಗಳಲ್ಲಿ ನಾವೆಲ್ಲ, ‘ನಾವಿಬ್ಬರು, ನಮಗಿಬ್ಬರು ಅಥವಾ ನಮಗೊಬ್ಬರು’ ಸೂತ್ರಕ್ಕೆ ಒಗ್ಗಿಹೋಗಿದ್ದೇವೆ. ನಾಲ್ಕು ಜನರು ಬಿಟ್ಟು ಐದನೆಯವರು ಬಂದರೆ ನಮ್ಮ ಸಂಸಾರ ಕಂಗೆಟ್ಟು ಹೋಗುವಂಥ ಪರಿಸ್ಥಿತಿ. ಇದೆಲ್ಲ ಈ ಕಾಲದ ಮಹಿಮೆ.

ಈ ಮಾತನ್ನು ಈಗ ಹೇಳುವುದಕ್ಕೂ ಒಂದು ಕಾರಣವಿದೆ. ಈ ಕರೋನಾ ಕಾಲದಲ್ಲಿ ಎಲ್ಲೆಲ್ಲೂ ಬರಿ ಸೋಂಕಿನ ಸುದ್ದಿಯೇ. ಇದರ ಮಧ್ಯೆ, ಮೊನ್ನೆ ಮೊನ್ನೆ ಒಂದು ಸಣ್ಣ ನಿಧನವಾರ್ತೆ ಸುಳಿದು ಹೋಯಿತು. ನಿಧನರಾದವರ ಹೆಸರು ಜಿಯೋನಾ ಎಂದು.
ನಾಗಾಲ್ಯಾಂಡಿನವರು. ಇದನ್ನು ಎಷ್ಟು ಜನರು ಗಮನಿಸಿದರೋ ಇಲ್ಲವೊ ಗೊತ್ತಿಲ್ಲ. ಆದರೆ, ಆ ಸುದ್ದಿಯಲ್ಲಿನ ವಿಶೇಷವನ್ನು ಅನೇಕರು ಗಮನಿಸಿರಲಿಕ್ಕಿಲ್ಲ ಅಥವಾ ಒಂದಷ್ಟು ಜನರ ಗಮನಕ್ಕೆ ಬಂದಿರಬಹುದಷ್ಟೇ.

ಏಕೆಂದರೆ ಆತ ಸಾಮಾನ್ಯ, ಸಾಧಾರಣ ಮನುಷ್ಯನಲ್ಲ. ವಿಶ್ವದ ಅತಿದೊಡ್ಡ ಕುಟುಂಬದ ಯಜಮಾನನಾಗಿದ್ದವ. ಹೀಗಾಗಿ ನನಗೆ ಕುತೂಹಲ ತಡೆಯಲಾಗದೆ ವಿವರ ಕಲೆ ಹಾಕಿ ಇಲ್ಲಿ ಇಡಬೇಕು ಎನಿಸಿತು. ಏಕೆಂದರೆ ಆ ವ್ಯಕ್ತಿ, ಈಗಿನ ಕಾಲದಲ್ಲಿ ಕಂಡು ಕೇಳರಿಯದಂಥ ಬದುಕು ಸಾಗಿಸಿದವನು. ಅದಕ್ಕಾಗಿಯೇ ವಿಶೇಷ. ಈಶಾನ್ಯ ಭಾರತದ ಒಂದು ಪುಟ್ಟ ರಾಜ್ಯ ನಾಗಾಲ್ಯಾಂಡ್.

ರಾಜಧಾನಿ ಐಜೋಲ್‌ನಿಂದ ದಕ್ಷಿಣಕ್ಕೆ ಸುಮಾರು 100 ಕಿಮೀ. ದೂರದಲ್ಲಿ ಸೇರ್‌ಛಿಪ್ ಎಂಬ ಜಿಲ್ಲೆಯಲ್ಲಿ ಬಕ್ತಾಂವ್ಗ್ ಎಂಬುದೊಂದು ಹಳ್ಳಿ. ಅಲ್ಲಿ ನಮ್ಮ ಈ ಯಜಮಾನ ಹುಟ್ಟಿದ್ದು ಜಿಯೋಂಗ್‌ಖಾ ಎಂಬ ಜನ್ಮನಾಮ. ಜಿಯೋನಾ ಎಂದು ಕರೆಯುತ್ತಿದ್ದರು. ಪುಜಿಯೋನಾ ಎಂದೇ ಸಮುದಾಯದಲ್ಲಿ ಪರಿಚಿತ. ಆದರೆ ನಾಗಾಲ್ಯಾಂಡ್‌ನಿಂದ ಹೊರಗೆ ಈ ಹೆಸರು ಅಪಭ್ರಂಶವಾಗಿ ಜಿಯೋನಾ ಚಾನಾ ಎಂದೇ ಕರೆಯುತ್ತಿದ್ದರು.

ಈಚೆಗೆ 76ನೇ ವಯಸ್ಸಿನಲ್ಲಿ ನಿಧನರಾದಾಗ ವಿಶ್ವದ ಅತಿದೊಡ್ಡ ಕುಟುಂಬದ ಯಜಮಾನ ಎಂಬ ಬಿರುದಿನೊಂದಿಗೆ ಇಹಲೋಕ ಯಾತ್ರೆ ಮುಗಿಸಿದಾತ. ಜಿಯೋನಾ 39 ಪತ್ನಿಯರು, 94 ಮಕ್ಕಳು, 14 ಸೊಸೆಯರು, 33 ಮೊಮ್ಮಕ್ಕಳು ಹಾಗೂ ಒಂದು ಮರಿ ಮೊಮ್ಮಗುವನ್ನು ಅಗಲಿದ್ದಾರೆ. ಅಂದರೆ ಒಟ್ಟು 181 ಮಂದಿ. ಹೆಣ್ಣುಮಕ್ಕಳು ಮದುವೆಯಾಗಿ ಗಂಡಂದಿರ ಮನೆಗೆ ಹೋಗಿದ್ದು, ಒಂದು ಅಂದಾಜಿನಲ್ಲಿ 168 ಜನರು ಸದ್ಯ ಆ ಕುಟುಂಬದಲ್ಲಿದ್ದಾರಂತೆ.

ಹೀಗಾಗಿ ಜಿಯೋನಾ ಅವರದೇ ವಿಶ್ವದ ಅತಿ ದೊಡ್ಡ ಕುಟುಂಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗೆಂದು ಇದು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲೇನೂ ದಾಖಲಾಗಿಲ್ಲ. ಏಕೆಂದರೆ 2011ರಲ್ಲಿ ಆ ಸಂಸ್ಥೆಯ ಅಧಿಕಾರಿಗಳು ಪರಿಶೀಲನೆಗೆ ಬಂದಾಗ ತನಗೆ ಪ್ರಚಾರ ಬೇಡ ಎಂಬ ಕಾರಣ ನೀಡಿ ಈತ ವಿವರಗಳನ್ನು ನೀಡಲಿಲ್ಲವಂತೆ. ಆದರೆ ‘ವರ್ಲ್ಡ್ ರೆಕಾರ್ಡ್ ಅಕಾಡೆಮಿ’ ಈ ಬಿರುದನ್ನು ನೀಡಿದೆ. 2019ರಲ್ಲಿ ‘ಲಂಡನ್ ವರ್ಲ್ಡ್ ರೆಕಾರ್ಡ್ಸ್’ ನವರೂ ಈ ಪ್ರಮಾಣ ಪತ್ರ ನೀಡಿದ್ದಾರಂತೆ.

‘ರೀಪ್ಲೇ ಬಿಲೀವ್ ಇಟ್ ಆರ್ ನಾಟ್ ಬುಕ್’ ನಲ್ಲೂ ಇವರ ಹೆಸರು ಸೇರ್ಪಡೆಯಾಗಿದೆ. ಕೆನಡಾದಲ್ಲಿ ಈ ರೀತಿಯ ಒಂದು ಸಮುದಾಯದಲ್ಲೂ ಇಂಥ ಕೂಡು ಕುಟುಂಬ ಪದ್ಧತಿ ಇದೆ ಎಂದು ಹೇಳಲಾಗಿಯಾದರೂ ಅದರ ವಿವರಗಳು ದಾಖಲಾಗಿಲ್ಲ. ಅದನ್ನು ಬಿಟ್ಟರೆ, ಹೆಚ್ಚು ಪ್ರಚಾರದಲ್ಲಿರುವುದು ಜಿಯಾಂಗ್ ಅವರದೇ. ಈ ದೊಡ್ಡ ಕೂಡು ಕುಟುಂಬಕ್ಕೂ ಒಂದು ಇತಿಹಾಸ,
ಹಿನ್ನೆಲೆ ಇದೆ. ಇವರದು ಒಂದು ಸಣ್ಣ ಕ್ರಿಶ್ಚಿಯನ್ ಸಮುದಾಯ. ಇವರ ಹಿರಿಯರು ಪಾಲ್ ಎಂಬ ಸಣ್ಣ ಸಮುದಾಯವನ್ನು ರಚಿಸಿಕೊಂಡರು. ಆಗ ಕ್ರಿಶ್ಚಿಯನ್ ಸಮುದಾಯದಲ್ಲಿದ್ದ ಕೆಲವು ಕಟ್ಟಳೆಗಳಿಗೆ ವಿಭಿನ್ನವಾಗಿ ಒಂದಷ್ಟು ಹೊಸ ಸಂಪ್ರದಾಯ ಗಳನ್ನು ಅಳವಡಿಸಿಕೊಂಡಿದ್ದಕ್ಕಾಗಿ ಅವರನ್ನು ಹೊರಹಾಕಲಾಯಿತು.

ಅವರೆಲ್ಲ ಬಕ್ತಾಂವ್ಗ್‌ಗೆ ಬಂದು ನೆಲೆಸಿದರು. 1962ರಲ್ಲಿ ಚನಾ ಪಾಲ್ ಎಂಬುವವರು ಇದರ ನಾಯಕತ್ವ ವಹಿಸಿದರು. ಈ ಸಮುದಾಯದಲ್ಲಿ 433 ಕುಟುಂಬಗಳಿದ್ದು 2000 ಜನರಿದ್ದಾರಂತೆ. ಇಲ್ಲಿ ಬಹುಪತ್ನಿತ್ವ ಒಪ್ಪಿತ ಸಂಪ್ರದಾಯ. ಈ ಸಂಪ್ರದಾಯವನ್ನು ತಂದೆಗಿಂತ ಹೆಚ್ಚು ಶ್ರದ್ಧೆಯಿಂದ ಅಥವಾ ಹೆಚ್ಚು ಉತ್ಸಾಹದಿಂದ ಪಾಲಿಸಿದವರು ಜಿಯೋನಾ. 17ನೇ
ವಯಸ್ಸಿಗೇ ಅವರ ಮೊದಲ ಮದುವೆ. ಪತ್ನಿ ಇವರಿಗಿಂತ ಮೂರು ವರ್ಷ ದೊಡ್ಡವಳಾಗಿದ್ದಳಂತೆ. ಹಾಗೆಯೇ ಒಬ್ಬರಾದ ಮೇಲೊಬ್ಬರಂತೆ ಮದುವೆಯಾಗತೊಡಗಿದರು.

ಒಂದು ವರ್ಷದಲ್ಲೇ 10 ಮಹಿಳೆಯರನ್ನು ಮದುವೆಯಾಗಿದ್ದೂ ಇದೆ. ಆತನ ಇರಾದೆ ಇದ್ದಿದ್ದು ಅದೇ. ‘ನಮ್ಮ ಕುಟುಂಬ, ಸಮುದಾಯ ಬೆಳೆಯಬೇಕು. ಅದಕ್ಕಾಗಿ ಎಷ್ಟು ಮದುವೆ ಆಗಲೂ ಸಿದ್ಧ’ ಎಂಬುದು ಜಿಯಾಂಗ್‌ನ ಸಿದ್ಧ ಸಿದ್ಧಾಂತ, ಸರಳ ಸೂತ್ರ.
ಅದರಲ್ಲಿರಲಿಲ್ಲ ಯಾವುದೇ ಗೊಂದಲ. ಹೀಗೆ ಹೆಂಡತಿಯರು, ಮಕ್ಕಳಿರಲವ್ವ ಮನೆತುಂಬ ಎಂಬ ಪಾಲಿಸಿಯನ್ನು ಅಳವಡಿಸಿ ಕೊಂಡಿದ್ದೇನೊ ಆಯಿತು. ಆದರೆ ಅವರನ್ನು ಸಾಕಬೇಕಲ್ಲ.

ಮೊದಲೇ ಹೇಳಿದಂತೆ ಮನೆಗೆ ಯಾರಾದರೂ ಒಬ್ಬರು ಹೆಚ್ಚಿಗೆ ಬಂದರೆ ಕಣ್ಣು ಬಾಯಿ ಬಿಡುವ ಕಾಲವಿದು. ಅಂಥದ್ದರಲ್ಲಿ
ಇಷ್ಟು ಸಂಖ್ಯೆಯ ಪತ್ನಿಯರು, ಮಕ್ಕಳನ್ನು ಸಲಹುವುದು ಹುಡುಗಾಟವೇ? ಆದರೆ ಜಿಯಾಂಗ್ ಎದೆಗುಂದಲಿಲ್ಲ. ದೊಡ್ಡ ಸಂಸಾರವನ್ನು ಸಾಕಲು ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಿಕೊಂಡರು. ತಂದೆಯ ಬಳಿಕ ಜಿಯೋನಾ ಕುಟುಂಬದ ಹೊಣೆಗಾರಿಕೆ ಹೊತ್ತುಕೊಂಡ ಮೇಲೆ ಕುಟುಂಬದ ಚಿತ್ರಣವೇ ಸಂಪೂರ್ಣ ಬದಲಾಗಿ ಹೋಯಿತು.

ಈ ಕೂಡು ಕುಟುಂಬದ ನಿರ್ವಹಣೆಗೆ ಜಿಯಾಂಗ್ ಮಾಡಿದ್ದೇನು ಎಂಬುದು ಬಹಳ ಕುತೂಹಲಕಾರಿ ಕಥೆ. ಆತ ಮಾಡಿದ ಮೊತ್ತ ಮೊದಲ ಕೆಲಸಗಳಲ್ಲಿ ಒಂದೆಂದರೆ ಅರಮನೆಯಂಥ ಒಂದು ದೊಡ್ಡ ಬಂಗಲೆ ಕಟ್ಟಿದ್ದು. ಅದು ನಾಲ್ಕಂತಸ್ತಿನ ಮನೆ. ಬೋರ್ಡಿಂಗ್ ಹೌಸ್ ಥರ ಅನ್ನಬಹುದು. ಛುವನ್ ಥಾರ್ ರನ್, ಅಂದರೆ ಹೊಸ ಪೀಳಿಗೆಯ ನಿವಾಸ ಎಂದು ಅದನ್ನು ಕರೆಯ ಲಾಗುತ್ತದೆ. ಬಂಗಲೆಯಲ್ಲಿ 100 ಬೆಡ್ ರೂಮುಗಳಿವೆಯಂತೆ. ಅಲ್ಲದೆ ಒಂದು ಗೆಸ್ಟ್ ಹೌಸ್ ಇದೆ. ಯಾರಾದರೂ ಹೊರಗಿನವರು ಬಂದರೆ ಅವರು ಅಲ್ಲಿ ಉಳಿದುಕೊಳ್ಳಬಹುದು. ಇವರ ಬಗ್ಗೆ ಪ್ರಚಾರವಾದಂತೆಲ್ಲ ಅಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಯಿತು. ಕ್ರಮೇಣ ಅದೊಂದು ಪ್ರವಾಸಿ ತಾಣವಾಗಿಯೂ ರೂಪುಗೊಂಡಿತು.

ಆ ಮನೆಯ ರೀತಿ ರಿವಾಜು, ಶಿಸ್ತುಗಳೂ ವಿಶೇಷವಾಗಿವೆ, ವಿಚಿತ್ರವಾಗಿವೆ. ಇರಲೇಬೇಕು ಬಿಡಿ. ಏಕೆಂದರೆ ಇಷ್ಟು ಹೆಂಡಿರನ್ನು, ಮಕ್ಕಳನ್ನು ಸಾಕಬೇಕೆಂದರೆ ಅದಕ್ಕೆ ಬೇರೆಯದೇ ಆದ ಸಂಸಾರ ಸೂತ್ರ ಬೇಕಾಗುತ್ತದೆ. ಅದನ್ನು ಕೇಳಿದರೆ ನಗು ಬರಬಹುದು. ಹೌದಾ ! ಎಂದು ಹುಬ್ಬೇರಿಸಲೂಬಹುದು. ನೆಲಮಹಡಿಯಲ್ಲಿ ಒಂದು ಡಬಲ್ ಬೆಡ್ ರೂಮಲ್ಲಿ ಜಿಯಾಂಗ್ ವಾಸ. ಚಿಕ್ಕ
ವಯಸ್ಸಿನ ಹೆಂಡತಿಯರು ಅದೇ ಮಹಡಿಯಲ್ಲಿ ಇರುವುದು. ಉಳಿದವರು ಮೇಲಿನ ಮಹಡಿಯಲ್ಲಿ ಹಜಾರಾದಂಥ ಸ್ಥಳದಲ್ಲಿ ಇರುತ್ತಾರೆ. ಜಿಯಾಂಗ್‌ನ ಆಸುಪಾಸಿನಲ್ಲಿ ಏಳೆಂಟು ಹೆಂಡತಿಯರು ಸದಾ ಇದ್ದು ಆತನ ದೇಖರೇಖಿಯನ್ನು ನೋಡಿಕೊಳ್ಳಬೇಕು.
ಹಾಗೆಯೇ ಜಿಯಾಂಗ್‌ನೊಟ್ಟಿಗೆ ಒಂದೇ ಕೋಣೆಯಲ್ಲಿ ಇರಲು ಕೂಡ ಒಂದು ಸರದಿ ವ್ಯವಸ್ಥೆ ಇತ್ತು.

ಪ್ರತಿಯೊಬ್ಬರಿಗೂ ಒಂದು ವಾರದ ಅವಕಾಶವಂತೆ. ಆದರೆ ಒಬ್ಬೊಬ್ಬರ ನಡುವೆ ಯಾವತ್ತೂ ದ್ವೇಷಾಸೂಯೆ ಇರಲಿಲ್ಲವಂತೆ. ಜಗಳ ಕದನವೂ ಇಲ್ಲ. ತನಗೆ ಪ್ರತಿ ಹೆಂಡತಿ, ಮಗುವಿನ ಹೆಸರೂ ಗೊತ್ತು ಎಂದು ಜಿಯಾನ್ ಹೇಳುತ್ತಿದ್ದರಂತೆ. ಅವರಿಗೆ ಕೊನೆಯ ಮದುವೆಯಾಗಿದ್ದು 2004ರಲ್ಲಿ, ಅಂದರೆ 50 ವರ್ಷ ವಯಸ್ಸಾದ ಮೇಲೆ. ಆದರೆ ಇದಕ್ಕೆ ಆತ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಹೆಚ್ಚು ಪತ್ನಿಯರನ್ನು, ಮಕ್ಕಳನ್ನು ಹೊಂದುವುದು, ತನ್ಮೂಲಕ ವಂಶವನ್ನು ಬೆಳೆಸುವುದು ತನ್ನ ಏಕೈಕ ಗುರಿ ಎಂಬುದು ಜಿಯಾಂಗ್ ಪ್ರತಿಪಾದನೆ.

ಈಗ 39 ಹೆಂಡತಿಯರು ಎಂದೆಲ್ಲ ಲೆಕ್ಕ ಇಡಲಾಗುತ್ತಿದ್ದರೂ ವಾಸ್ತವವಾಗಿ ಜಿಯಾನ್‌ಗೆ ಎಷ್ಟು ಹೆಂಡಂದಿರು ಎಂಬುದು ಯಾರಿಗೂ ಸರಿಯಾಗಿ ಗೊತ್ತಿಲ್ಲ. ಕೆಲವರು ನಿಧನರಾಗಿರಬಹುದು. ಮತ್ತೆ ಕೆಲವರು ಬಿಟ್ಟು ಹೋಗಿರಬಹುದಾದ ಸಾಧ್ಯತೆ
ಇದೆಯಂತೆ. ಜಿಯೋನಾನ ಮೊದಲ ಹೆಂಡತಿಯೇ ಮುಖ್ಯಪತ್ನಿ. ಪಟ್ಟದರಸಿ ಇದ್ದಹಾಗೆ. ಆಕೆಯೇ ಯಜಮಾನತಿ. ಎಲ್ಲ ಹೆಂಡಂದಿರು ಅಡುಗೆ ಮಾಡುತ್ತಾರೆ. ಪ್ರತಿದಿನ ಇಷ್ಟು ಜನರಿಗೆ ಊಟ ಸಿದ್ಧಪಡಿಸುವುದು ಸುಲಭದ ಮಾತೇ? ಹೆಣ್ಣುಮಕ್ಕಳು ಸ್ವಚ್ಛತಾ ಕಾರ್ಯಗಳನ್ನು ನೋಡಿಕೊಳ್ಳುತ್ತಾರಂತೆ.

ಕುಟುಂಬದ ಗಂಡಸರು ಕೃಷಿ ಕಾರ್ಯಗಳನ್ನು ನೋಡಿಕೊಳ್ಳುವುದು, ಜಾನುವಾರುಗಳ ನಿರ್ವಹಣೆ ಮೊದಲಾದ ಕೆಲಸಗಳನ್ನು
ಮಾಡುತ್ತಾರೆ. ಫರ್ನಿಚರ್, ಪಾತ್ರೆ ತಯಾರಿಕೆ ಮೊದಲಾದ ಸಣ್ಣ ಕೈಗಾರಿಕೆಗಳನ್ನೂ ಅವರು ನಿರ್ವಹಿಸುತ್ತಾರೆ. ಜಿಯೋನಾ ಕುಟುಂಬದ್ದು ಸ್ವಾವಲಂಬಿ ಬದುಕು. ತಮ್ಮ ಪರಿವಾರಕ್ಕೆ ಬೇಕಾದ ಆಹಾರ ಧಾನ್ಯ, ತರಕಾರಿ, ಹಣ್ಣುಹಂಪಲು ಮೊದಲಾದವು ಗಳನ್ನು ಅವರೇ ಬೆಳೆದುಕೊಳ್ಳುತ್ತಾರೆ. ಮಕ್ಕಳಿಗಾಗಿ ತಮ್ಮದೇ ಸ್ವಂತವಾದ ಶಾಲೆಯನ್ನು ಆರಂಭಿಸಿದ್ದಾರೆ. ಅವರ ಕಿರಿಯ
ಸೋದರನದು ಈ ಶಾಲೆಯ ಉಸ್ತುವಾರಿ. ಸರಕಾರ ನಿಗದಿಪಡಿಸಿದ ಪಠ್ಯಕ್ರಮವನ್ನೇ ಅಳವಡಿಸಿಕೊಳ್ಳಲಾಗಿದೆ.

ಇದರ ಜತೆಗೆ ಚಾನಾ ಸಮುದಾಯಕ್ಕೆ ಸಂಬಂಧಪಟ್ಟ ಸಂಪ್ರದಾಯ, ರೀತಿ ರಿವಾಜುಗಳನ್ನು ತಿಳಿಸಲು ಕೆಲವು ಹೆಚ್ಚುವರಿ ವಿಷಯಗಳನ್ನು ಸೇರಿಸಲಾಗಿದೆ. ಆದರೆ ಸರಕಾರದಿಂದ ಯಾವುದೇ ಅನುದಾನ ಅಥವಾ ನೆರವನ್ನು ಕೇಳುತ್ತಿಲ್ಲ. ಜಿಯಾಂಗ್ ಕುಟುಂಬದ ವಿವರಗಳನ್ನು ಕಲೆಹಾಕುತ್ತಿದ್ದಾಗಲೇ ನಮ್ಮ ಕರ್ನಾಟಕದಲ್ಲೇ ಒಂದು ದೊಡ್ಡ ಕೂಡು ಕುಟುಂಬ ಇರುವ ವಿಷಯವೂ ಬೆಳಕಿಗೆ ಬಂತು. ಹೌದು. ಇದು ನಮ್ಮ ದೇಶದ ಬಹುಶಃ ಅತಿ ದೊಡ್ಡ ಕೂಡು ಕುಟುಂಬ ಎನ್ನಲಾಗಿದೆ.

ಜಿಯಾಂಗ್ ಅವರದ್ದು ಸಂಪೂರ್ಣವಾಗಿ ಹೆಂಡತಿ, ಮಕ್ಕಳು, ಮೊಮ್ಮಕ್ಕಳ ಪರಿವಾರ. ಆದರೆ ಈ ಕುಟುಂಬದಲ್ಲಿ ಅಣ್ಣ
ತಮ್ಮಂದಿರು, ಅಕ್ಕ ತಂಗಿಯರು, ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಸೇರಿದ್ದಾರೆ. ಅಂದರೆ ಅವಿಭಕ್ತ ಕುಟುಂಬ ಎನ್ನಬಹುದು.
ಈ ಕುಟುಂಬ ನೆಲೆಸಿರುವುದು ಧಾರವಾಡ ಬಳಿಯ ಲೋಕೂರು ಗ್ರಾಮದಲ್ಲಿ. ಇವರ ಪೂರ್ವಿಕರು ಮಹಾರಾಷ್ಟ್ರದ ಮೀರಜ್ ಬಳಿಯ ಗ್ರಾಮದವರು.

ನರಸಿಂಗನವರ್ ಎಂಬ ವ್ಯಕ್ತಿ 16ನೇ ಶತಮಾನದಲ್ಲಿ ಲೋಕೂರು ಗ್ರಾಮದ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿಕೊಡುತ್ತಾರೆ. ಆಗ, ‘ನೀನು ಇಲ್ಲೇ ನೆಲೆಸು’ ಎಂದು ದೇವಿ ಕನಸಿನಲ್ಲಿ ಹೇಳಿದಂತಾಗಿ ಅವರು ಅಲ್ಲಿಯೇ ವಾಸಿಸಲು ನಿರ್ಧರಿಸುತ್ತಾರೆ ಎಂಬುದು ಇವರ ಕಥೆ. ಅವರು ಅಲ್ಲಿ ಜಮೀನು ಖರೀದಿಸಿ, ಸ್ಥಳೀಯ ಮಹಿಳೆಯನ್ನು ಮದುವೆಯಾಗಿ ಆರಂಭಿಸಿದ ಚಿಕ್ಕ ಸಂಸಾರ ಇಂದು ಸಾಗರದಂತೆ ವಿಶಾಲವಾಗಿದೆ.

ಅದೊಂದು ಜೈನ ಕುಟುಂಬ. ತಮ್ಮಣ್ಣ ಜಿನಪ್ಪ ಎಂಬುವರು ಅತ್ಯಂತ ಹಿರಿಯರು. ಆದರೆ ಭೀಮಣ್ಣ ಎಂಬುವವರು ಮನೆಯ ಯಜಮಾನರಂತೆ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ. 22 ರೂಮುಗಳಿರುವ ದೊಡ್ಡ ಮನೆಯ ಈ ಒಟ್ಟು ಕುಟುಂಬ ದಲ್ಲಿ 110 ಜನರಿದ್ದಾರೆ. ಹಾಗೆಯೇ ಇನ್ನೂ ಸುಮಾರು 60 ಮಂದಿ ಕೆಲಸದ ನಿಮಿತ್ತ ಬೇರೆ ಬೇರೆ ಕಡೆ ಹೋಗಿದ್ದಾರೆ. ಆದರೆ ಲೋಕೂರಿನಲ್ಲಿ ಇರುವವರು ಮಾತ್ರ ಒಂದೇ ಸೂರಿನಡಿ ವಾಸಿಸುತ್ತಿದ್ದಾರೆ.

ಈಗೀಗ ಕೆಲವರು ಮದುವೆಯಾಗಿ ಅಕ್ಕಪಕ್ಕದಲ್ಲೇ ವಾಸಿಸುತ್ತಿದ್ದಾರಾದರೂ ಒಂದು ಇಡೀ ಕುಟುಂಬವಾಗಿ ನೂರಕ್ಕೂ ಹೆಚ್ಚು ಮಂದಿ ಇನ್ನೂ ಒಂದೇ ಕಡೆ ವಾಸಿಸುತ್ತಾರೆ. ಸರಸಮ್ಮ ಎಂಬುವವರು, ಪರಿವಾರದ 70 ಮಹಿಳೆಯರ ಪೈಕಿ ಅತಿ ಹಿರಿಯರು. ಕಣ್ಣು ಮಂಜಾಗಿದೆ. ವಯಸ್ಸು ನಿಖರವಾಗಿ ಗೊತ್ತಿಲ್ಲ. ಇಡೀ ಕುಟುಂಬಕ್ಕೆ ರೊಟ್ಟಿ ಮಾಡಲು ದಿನಕ್ಕೆ ಒಂದು ಚೀಲ ಭರ್ತಿ ಜೋಳ ಬೇಕಂತೆ. ಮನೆಯ ಹೆಣ್ಣುಮಕ್ಕಳಿಗೆ ಅಡುಗೆ ಮಾಡುವುದೇ ಕೆಲಸ.

ದಿನಕ್ಕೆ 800-1000 ರೊಟ್ಟಿ ಬಡಿಯಬೇಕು. ಬೆಳಗ್ಗೆ 5 ಗಂಟೆಯಿಂದಲೇ 30 ಮಂದಿ ಈ ಕಾಯಕದಲ್ಲಿ ತೊಡಗುತ್ತಾರೆ. ಐದು ಒಲೆಗಳು ಸತತವಾಗಿ ಉರಿಯುತ್ತವೆ. ಈ ಕುಟುಂಬ 250ಕ್ಕೂ ಹೆಚ್ಚು ಎಕರೆ ಜಮೀನು ಹೊಂದಿದೆ. ವಾರ್ಷಿಕ ಆದಾಯ 15 ಲಕ್ಷ ಎಂದು ಹೇಳುತ್ತಾರೆ. ಆದರೆ ನಿಖರ ಮಾಹಿತಿ ಇಲ್ಲ. ಆ ಪೈಕಿ ಸುಮಾರು 1.5 ಲಕ್ಷದಷ್ಟನ್ನು ಭೂಮಿ ಖರೀದಿಗೆ, ಮದುವೆ
ಮೊದಲಾದ ಕಾರ್ಯಕ್ರಮಗಳಿಗೆ ಮೀಸಲಿಡುವುದು ಕಡ್ಡಾಯವಂತೆ. ದಸರಾ ಹಾಗೂ ಮಹಾವೀರ ಜಯಂತಿಗೆ ಮಾತ್ರ ಹೊಸಬಟ್ಟೆ ಖರೀದಿ. ಇದರ ಬಜೆಟ್ 1 ಲಕ್ಷ ರು. ಅಂತೆ. ಹಬ್ಬ ಹರಿದಿನಗಳಲ್ಲಿ ಮಾತ್ರ ಒಟ್ಟಿಗೆ ಊಟ. ಉಳಿದ ದಿನಗಳಲ್ಲಿ ಪಾಳಿಯ ಮೇಲೆ ಊಟೋಪಚಾರ ಸಾಗುತ್ತದೆ.

ಈಗ ಕುಟುಂಬ ಸದಸ್ಯರು ಟಿವಿ ನೋಡಬಹುದು; ರೇಡಿಯೊ ಕೇಳಬಹುದು. ಸಿನಿಮಾಗೆ ಹೋಗಬಹುದು. ಆ ರೀತಿಯ ಯಾವುದೇ ನಿರ್ಬಂಧಗಳಿಲ್ಲ. ಆದರೆ ಮೊದಮೊದಲು ಟಿವಿ ಇಲ್ಲಿ ವರ್ಜ್ಯವಾಗಿತ್ತು. ಆದರೆ 1991ರಲ್ಲಿ ಖ್ಯಾತ ಹಿಂದಿ ಚಿತ್ರ ನಿರ್ದೇಶಕ ಕೇತನ್ ಮೆಹತಾ ಅವರು ಈ ಕುಟುಂಬದ ಬಗ್ಗೆ ಸಾಕ್ಷ್ಯಚಿತ್ರ ಮಾಡಿದ್ದಾರೆ. ಆಗ ಅವರು ಟಿವಿ ಮಾಧ್ಯಮದ ಮಹತ್ವ,  ಉಪಯೋಗದ ಬಗ್ಗೆ ಹಿರಿಯರಿಗೆ ಮನವರಿಕೆ ಮಾಡಿಕೊಟ್ಟು ಕುಟುಂಬಕ್ಕೊಂದು ಟೆಲಿವಿಷನ್ ಸೆಟ್ ಉಡುಗೊರೆಯಾಗಿ ನೀಡಿದ್ದರಂತೆ.

ಹಾಗಾದರೆ ಇವರದು ‘ನಮ್ಮ ಸಂಸಾರ ಆನಂದ ಸಾಗರ’.. ಎನ್ನುವಂಥ ಕುಟುಂಬವೇ ಎಂದು ಕೇಳಿದರೆ ಇಲ್ಲ ಎಂದು ಕುಟುಂಬದ ಹಿರಿಯರೇ ಹೇಳುತ್ತಾರೆ. ಸಂಸಾರ ಎಂದ ಮೇಲೆ ವೈಮನಸ್ಯ, ಭಿನ್ನಾಭಿಪ್ರಾಯ, ಮನಸ್ತಾಪ, ಸಣ್ಣಪುಟ್ಟ ಜಗಳ, ತಂಟೆ ತಕರಾರು ಗಳು ಇದ್ದೇ ಇರುತ್ತವೆ. ಆದರೆ ಆಗೆಲ್ಲ ಒಟ್ಟಿಗೆ ಕೂತು ಕೌನ್ಸೆಲಿಂಗ್, ಮನವೊಲಿಕೆ ಮೂಲಕ ಸಮಸ್ಯೆ ಬಗೆಹರಿಸಲಾಗಿತ್ತದೆ.
ಇವಿಷ್ಟು ಈ ಕುಟುಂಬದ ಬಗ್ಗೆ ಗೊತ್ತಾಗಿರುವ ಮಾಹಿತಿ. ಆದರೆ ಈಚಿನ ದಿನಗಳಲ್ಲಿ ಸಾಕಷ್ಟು ಸ್ಥಿತ್ಯಂತರಗಳೂ ಆಗಿರಬಹುದು. ಬದಲಾವಣೆಯ ಗಾಳಿ ಬೀಸಿರಬಹದು. ಮೇಲೆ ತಿಳಿಸಿದ ಮಾಹಿತಿಗಳಲ್ಲಿ ವ್ಯತ್ಯಾಸಗಳು ಇರಲೂಬಹುದು. ಆದರೆ ಇದೆಲ್ಲದರ
ಹೊರತಾಗಿಯೂ ಇಂಥದೊಂದು ಕುಟುಂಬ ಇಂದಿಗೂ ನಮ್ಮ ಕರ್ನಾಟಕದಲ್ಲೇ ಇದೆ ಎಂಬುದೇ ಹೆಮ್ಮೆ, ಅಭಿಮಾನದ ಸಂಗತಿ.

ಮೂರು ಜನರಿರುವ ಕುಟುಂಬವೇ ಮೂರಾಬಟ್ಟೆ ಆಗುವ ಈ ಕಾಲಘಟ್ಟದಲ್ಲಿ ನೂರು ಜನರರಿರುವ ಕೂಡು ಕುಟುಂಬ ಇರುವುದೇ ದೊಡ್ಡ ಮಾತು ಅಲ್ಲವೆ ?

ನಾಡಿಶಾಸ್ತ್ರ
ಮೂರಕ್ಕೇ ಮೂಗು ಮುರಿಯುತ್ತಾನೆ ಮನುಜ
ನೂರಾದೊಡೆ ನೂರೆಂಟು ವಿಘ್ನಗಳು ಸಹಜ
ಆದರೂ ಅಲ್ಲಲ್ಲಿ ಇರುವ ಕೂಡು ಕುಟುಂ
ನಮ್ಮ ಕುಟುಂಬ ಸಂಸ್ಕೃತಿಯ ಆಧಾರಸ್ತಂಭ