Sunday, 15th December 2024

ಹೆಗಡೆ ಕೇಳಿದ ಸದಾಕಾಲ ರಾಜಕಾರಣಿಗಳಿವರು

ವರ್ತಮಾನ

maapala@gmail.com

ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲರ ಕುರಿತಾಗಿ ಹೊರತಂದಿದ್ದ ‘ವಿಚಾರಶೀಲ ರಸಿಕ ರಾಜಕಾರಣಿ’ ಎಂಬ ಕೃತಿಯಲ್ಲಿ ಮಾಜಿ ಮುಖ್ಯಮಂತ್ರಿ
ರಾಮಕೃಷ್ಣ ಹೆಗಡೆ ಅವರು ಪ್ರಸ್ತುತ ರಾಜಕಾರಣದ ಬಗ್ಗೆ ಕೆಲವು ಮಾತುಗಳನ್ನು ಹೇಳಿದ್ದರು. ಇಂದಿನ ರಾಜಕಾರಣಿಗಳನ್ನು ಮೂರು ವಿಧಗಳಲ್ಲಿ
ವರ್ಗೀಕರಿಸಬಹುದು.

ಮೊದಲನೆಯದು, ಸದಾಕಾಲ ರಾಜಕಾರಣಿ- ಇವರಿಗೆ ಚಿಂತೆ ಹೆಚ್ಚು ಚಿಂತನೆ ಕಡಿಮೆ. ಅಧಿಕಾರವೇ ಅವರ ಏಕಮಾತ್ರ ಗುರಿ. ಅಧಿಕಾರವನ್ನು ಹೇಗೆ ಗಳಿಸಬೇಕು, ಹೇಗೆ ಉಳಿಸಬೇಕು ಮತ್ತು ಸ್ವಾರ್ಥಕ್ಕಾಗಿ ಹೇಗೆ ಬಳಸಬೇಕು ಎನ್ನುವುದನ್ನೇ ಸದಾ ಕಾಲ ಚಿಂತೆ ಮಾಡುವವರು. ಅಧಿಕಾರವೇ ಅವರಿಗೆ ಸರ್ವಸ್ವ, ಅದು ಕೈತಪ್ಪಿ ಹೋದಾಗ ಮತಿಭ್ರಮಣೆಗೆ ಒಳಗಾಗುವರು. ಎರಡನೆಯದು, ಧ್ಯೇಯವಾದಿ ರಾಜಕಾರಣಿ- ತಮ್ಮ ಧ್ಯೇಯವನ್ನು ಸಾಧಿಸಲು ರಾಜಕಾರಣವು ಒಂದು ಸಾಧನ ಎಂದು ನಂಬಿದವರು. ಅಧಿಕಾರವೇ ಇವರ ಧ್ಯೇಯವಲ್ಲ.

ದೇಶದಲ್ಲಿ ಬದಲಾವಣೆಯನ್ನು ತರಲು ಅದು ಒಂದು ಅಮಾತ್ರ ಎಂದು ತಿಳಿದ ಇವರು ಚಿಂತನಾ ಶೀಲರು. ಸಿದ್ಧಾಂತ ಹಾಗೂ ಮೌಲ್ಯಗಳ ಪಾಲನೆಗಾಗಿ ಯಾವ ತ್ಯಾಗವನ್ನೂ ಮಾಡುವವರು. ಮೂರನೆಯದು, ಸುಸಂಸ್ಕೃತ ರಾಜಕಾರಣಿ- ಜೀವನದಲ್ಲಿ ರಾಜಕೀಯ ಮುಖ್ಯ. ಆದರೆ ಅಷ್ಟೇ ಮುಖ್ಯ ಇತರ ವಿಷಯಗಳು ಕೂಡ ಎಂದು ತಿಳಿದವರು. ಅಧಿಕಾರ ಬೇಕು, ಆದರೆ ಅದೇ ಸರ್ವಸ್ವವಲ್ಲ ಎನ್ನುವವರು. ನಂಬಿದ ಆದರ್ಶಗಳಿಗೆ ಬದ್ಧತೆಯಿದ್ದವರು, ಶುಷ್ಕ ರಾಜಕಾರಣವನ್ನು ರಸಭರಿತ, ವರ್ಣರಂಜಿತವನ್ನಾಗಿ ಮಾಡುವವರು. ಜೆ.ಎಚ್ .ಪಟೇಲರು ಈ ಮೂರನೇ ವರ್ಗಕ್ಕೆ ಸೇರಿದ ರಾಜಕಾರಣಿ ಎಂದಿದ್ದರು.

ಇತ್ತೀಚಿನ ದಿನಗಳಲ್ಲಿ, ಅದರಲ್ಲೂ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿದ ಮೇಲೆ ರಾಮಕೃಷ್ಣ ಹೆಗಡೆ ಅವರು ವರ್ಗೀಕರಿಸಿದ ಮೂರು ವಿಧಗಳಲ್ಲಿ ಬಹುಪಾಲು ರಾಜಕಾರಣಿಗಳು ಮೊದಲನೆಯ ಸಾಲಿಗೆ ಸೇರುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ. ಅಧಿಕಾರವನ್ನೇ ಗುರಿಯಾಗಿಸಿಕೊಂಡು ಅದನ್ನು ಉಳಿಸಿಕೊಳ್ಳಲು, ಗಳಿಸಿಕೊಳ್ಳಲು ಮಾಡುತ್ತಿರುವ ‘ಶತ ಪ್ರಯತ್ನ’ಗಳು, ಅದಕ್ಕಾಗಿ ಅವರಾಡುವ ಮಾತುಗಳನ್ನು
ಕೇಳಿದಾಗ ಅಽಕಾರವೇ ಏಕಮಾತ್ರ ಗುರಿ ಎಂಬಂತೆ ಕಾಣಿಸುತ್ತಿದೆ. ಏಕೆಂದರೆ, ರಾಮಕೃಷ್ಣ ಹೆಗಡೆ ಹೇಳಿದಂತೆ ತಮ್ಮ ಧ್ಯೇಯ ಸಾಧಿಸಲು ರಾಜಕಾರಣ ಒಂದು ಸಾಧನ ಎಂದೋ ಅಥವಾ ಜೀವನದಲ್ಲಿ ರಾಜಕೀಯವೇ ಮುಖ್ಯವಲ್ಲ, ಇತರೆ ವಿಷಯಗಳೂ ಅಷ್ಟೇ ಮುಖ್ಯ ಎಂದು ತಿಳಿದವರು ಸಿಗುವುದೇ ಅಪರೂಪ ಎನ್ನುವಂತಾಗಿದೆ.

ಅಧಿಕಾರದಲ್ಲಿದ್ದಾಗ ಅದನ್ನು ಸ್ವಾತರ್ಥಕ್ಕಾಗಿ ಬಳಸಿಕೊಳ್ಳುವವರು, ಇಲ್ಲದೇ ಇದ್ದಾಗ ಸ್ವಾರ್ಥಕ್ಕಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲವಲ್ಲಾ ಎಂದು ಒಳಗೊಳಗೇ ಹಲುಬುವವರೇ ಹೆಚ್ಚು ಎಂಬಂತೆ ರಾಜಕಾರಣದಲ್ಲಿರುವವರ ಇತ್ತೀಚಿನ ಮಾತುಗಳನ್ನು ಕೇಳಿದಾಗ ಗೊತ್ತಾಗುತ್ತದೆ. ಪ್ರತಿಪಕ್ಷದವರು ಆಡಳಿತ ಪಕ್ಷದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರೆ, ಅವರೇನೂ ಸಾಚಾಗಳೇ? ಅದರಿಂದಾಗಿಯೇ ಅಧಿಕಾರ ಕಳೆದುಕೊಂಡು ಕುಳಿತು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷಗಳ ವಿರುದ್ಧ ಆಡಳಿತ ಪಕ್ಷದವರು ಮುಗಿಬೀಳುತ್ತಾರೆ.

ಎರಡೂ ಕಡೆಯವರ ಮಾತಿನಲ್ಲಿ ನಾವು ಭ್ರಷ್ಟಾಚಾರ ಎಸಗಿಲ್ಲ ಎಂಬುದಕ್ಕಿಂತ ಅವರಷ್ಟು ನಾವು ಭ್ರಷ್ಟರಲ್ಲ ಎಂಬ ಒಳಾರ್ಥವಿರುತ್ತದೆ. ಅದಕ್ಕಿಂತ ಮುಖ್ಯವಾಗಿ ಪರಸ್ಪರ ಭ್ರಷ್ಟಾಚಾರದ ಆರೋಪಗಳನ್ನು ಮಾಡಿಕೊಳ್ಳುತ್ತಿರುವುದರ ಹಿಂದೆ ಮುಂದೆ ನಾವೇ ಅಧಿಕಾರಕ್ಕೆ ಬರಬೇಕು ಎಂಬ
ಹಪಹಪಿ ಇರುತ್ತದೆ. ಏಕೆಂದರೆ, ನಾವು ಅಧಿಕಾರಕ್ಕೆ ಬಂದರೆ ಅವರ ಭ್ರಷ್ಟಾಚಾರ ಬಯಲಿಗೆಳೆದು ತಪ್ಪಿತಸ್ಥರಿಗೆ ಶಿಕ್ಷೆ ಕೊಡಲು ತನಿಖೆ ಮಾಡಿಸು ತ್ತೇವೆ ಎಂದು ಹೇಳುತ್ತಾರೆಯೇ ಹೊರತು ಅಧಿಕಾರಕ್ಕೆ ಬಂದ ಮೇಲೆ ಆ ಕುರಿತ ತನಿಖೆಗೆ ಮನಸ್ಸು ಮಾಡುವುದಿಲ್ಲ. ಇದು ಈಗಾಗಲೇ ಸಾಬೀತಾಗಿದೆ.

ಅದೇ ರೀತಿ ಅಧಿಕಾರ ಹಿಡಿಯಲು ರಾಜಕೀಯ ಪಕ್ಷಗಳು ಪರಸ್ಪರ ಆರೋಪಿಸಲು ಬಳಸುತ್ತಿರುವ ಭಾಷೆ, ಎಬ್ಬಿಸುತ್ತಿರುವ ಭಾವನಾತ್ಮಕ ವಿಚಾರ ಗಳು, ಜಾತಿ ಹೆಸರಿನಲ್ಲಿ ನಡೆಯುವ ರಾಜಕಾರಣ, ತಮ್ಮ ಜಾತಿಗೆ ಇಂತಿಷ್ಟು ಅವಕಾಶ ನೀಡಬೇಕು ಎಂದು ಆಯಾ ಸಮುದಾಯದ
ರಾಜಕಾರಣಿ ಗಳು ಹೇಳುವುದು ಸಾಮಾನ್ಯ ಎನ್ನುವಂತಾಗಿದೆ. ಇನ್ನೊಬ್ಬರನ್ನು ಕಡಿಮೆ ಎಂದು ತೋರಿಸಲು ಬಳಸುವ ಪದಗಳು ಸಮುದಾಯಗಳಿಗೆ ನೋವು ತರುವಂತಿರುತ್ತದೆ.

ಇದಕ್ಕೆ ಹಿಂದುತ್ವವು ಕೊಲೆ, ಹಿಂಸೆ, ತಾರತಮ್ಯವನ್ನು ಬೆಂಬಲಿಸುತ್ತದೆ ಎಂಬ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ, ಶೃಂಗೇರಿ ಪೀಠವನ್ನು ಒಡೆದವರು, ಗಾಂಧಿಯನ್ನು ಕೊಂದವರು ಪೇಶ್ವೆ ಬ್ರಾಹ್ಮಣರು ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಾತುಗಳು ಸಾಕ್ಷಿ. ಒಂದು ಸಮುದಾಯದ ಕೆಲವೇ ಮಂದಿ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನೇ ಗುರಿಯಾಗಿಸುವುದರ ಹಿಂದಿನ ಇವರ ಉದ್ದೇಶ ಅಧಿಕಾರ ರಾಜಕಾರಣವೇ ಹೊರತು ಬೇರೇನೂ ಅಲ್ಲ.

ಇದೀಗ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು ಸಿದ್ದರಾಮಯ್ಯ ಅವರ ಕುರಿತಾಗಿ ನೀಡಿರುವ ಹೇಳಿಕೆಯನ್ನೇ ಪರಿಗಣಿಸುವುದಾದರೆ, ಎಲ್ಲಿಯ ಸಿದ್ದರಾಮಯ್ಯ, ಎಲ್ಲಿಯ ಟಿಪ್ಪುಸುಲ್ತಾನ್ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಟಿಪ್ಪು ಸುಲ್ತಾನ್ ಮತ್ತು ಸಿದ್ದರಾಮಯ್ಯ ಅವರನ್ನು ನಿಂದಿಸುವ ಬರದಲ್ಲಿ, ನಿಮಗೆ ಟಿಪ್ಪು ಬೇಕಾ..? ಸಾವರ್ಕರ್ ಬೇಕಾ..? ಟಿಪ್ಪು ಬೇಡಾ ಅಂದ್ರೆ ಸಿದ್ದರಾಮಯ್ಯ ಅವರನ್ನು ಟಿಪ್ಪು ಕಳುಹಿಸಿದ ಹಾಗೆ ಕಳುಹಿಸಬೇಕು.
ಉರಿಗೌಡ ಮತ್ತು ನಂಜೇಗೌಡ ಏನ್ ಮಾಡಿದ್ದರು. ಹಾಗೇಯೇ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಹೇಳಿದ್ದಾರೆ.

ಅಶ್ವತ್ಥನಾರಾಯಣ ಅವರ ಮಾತಿನಲ್ಲಿ ಸಿದ್ದರಾಮಯ್ಯ ಅವರನ್ನು ಕೊಲ್ಲುವ ಉದ್ದೇಶ ಇರದೇ ಇರಬಹುದು. ಉದ್ರೇಕದಿಂದ ಮಾತು ಆಡಿರಬಹುದು. ಆದರೆ, ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲವರ್ದನೆ ನಿರೀಕ್ಷೆಯಂತೆ ಸಾಧ್ಯವಾಗದಿದ್ದರೆ ಮತ್ತೆ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂಬ ಆತಂಕ ಅವರಲ್ಲಿದ್ದುದು ಸ್ಪಷ್ಟ. ಈ ರೀತಿಯ ಮಾತುಗಳನ್ನು ಆಡುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಈ ಬಾರಿಯ ವಿಧಾನಸಭೆ ಚುನಾವಣೆಯನ್ನು ಟಿಪ್ಪು ವರ್ಸಸ್ ಸಾವರ್ಕರ್, ಟಿಪ್ಪು ವರ್ಸಸ್ ರಾಣಿ ಅಬ್ಬಕ್ಕ ಎಂಬಂತಹ ಬಿಜೆಪಿಯ ಘೋಷಣೆಗಳು, ಅದಕ್ಕೆ ಪ್ರತಿಯಾಗಿ
ಟಿಪ್ಪುವನ್ನು ವೈಭವೀಕರಿಸುವ ಕಾಂಗ್ರೆಸ್ ನಾಯಕರ ಹೇಳಿಕೆಗಳು, ಪೇಶ್ವೆ ಸಮುದಾಯವನ್ನು ಟೀಕಿಸುವ ಭರದಲ್ಲಿ ಟಿಪ್ಪುವನ್ನು ಸಮರ್ಥಿಸಿಕೊಳ್ಳುವ ಜೆಡಿಎಸ್… ಹೀಗೆ ಎಲ್ಲರೂ ಭಾವನಾತ್ಮಕ ವಿಚಾರಗಳ ಮೇಲೆ ಚುನಾವಣೆಗೆ ಸಜ್ಜಾಗುತ್ತಿದ್ದಾರೆ.

ಟಿಪ್ಪು ಮತ್ತು ಸಾವರ್ಕರ್ ಕುರಿತಾದ ವಿವಾದಗಳು ಏನೇ ಇರಲಿ, ಇಬ್ಬರೂ ಬ್ರಿಟೀಷರ ವಿರುದ್ಧ ಹೋರಾಡಿದವರು. ಅವರಿಬ್ಬರೂ ಇಹಲೋಕ ತ್ಯಜಿಸಿ
ಅದೆಷ್ಟೋ ವರ್ಷವಾಗಿದೆ. ಆದರೆ, ರಾಜಕಾರಣಿಗಳು ಮಾತ್ರ ಅಧಿಕಾರ ಹಿಡಿಯಲು ಅವರ ಹೆಸರಿನಲ್ಲಿ ವಿವಾದಗಳನ್ನು ಎಬ್ಬಿಸುತ್ತಲೇ ಇದ್ದಾರೆ. ಇದನ್ನೇ ರಾಮಕೃಷ್ಣ ಹೆಗಡೆಯವರು ತಮ್ಮ ಮೊದಲನೇ ವರ್ಗೀಕರಣದ ರಾಜಕಾರಣಿಗಳ ಬಗ್ಗೆ ಅಧಿಕಾರವೇ ಅವರಿಗೆ ಸರ್ವಸ್ವ, ಅದು ಕೈತಪ್ಪಿ ಹೋದಾಗ ಮತಿಭ್ರಮಣೆಗೆ ಒಳಗಾಗುವರು ಎಂದು ಹೇಳಿದ್ದಾರೆ.

ಏಕೆಂದರೆ ಈ ವರ್ಗದ ರಾಜಕಾರಣಿಗಳಿಗೆ ಚಿಂತನೆಗಿಂತ ಅಧಿಕಾರದ ಚಿಂತೆಯೇ ಹೆಚ್ಚಾಗಿದೆ. ಮುಂದಿನ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ
ಬರುವುದು ಎಂದು ಕಳೆದ ಕೆಲ ತಿಂಗಳುಗಳಿಂದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಹೇಳಿಕೊಂಡೇ ಬಂದಿದ್ದಾರೆ. ಆದರೆ, ಅವರಲ್ಲಿ ಅಧಿಕಾರದ ಹೊರತಾದ ಯಾವುದೇ ಧ್ಯೇಯಗಳು ಕಾಣಿಸುತ್ತಿಲ್ಲ. ನಾವು ಅಽಕಾರದಲ್ಲಿದ್ದರೆ ಮಾತ್ರ ರಾಜ್ಯ ಮತ್ತು ದೇಶ ಸುಭಿಕ್ಷವಾಗುತ್ತದೆ ಎಂದು ಹೇಳುವ ಈ ಪಕ್ಷಗಳು, ಅಧಿಕಾರದಲ್ಲಿದ್ದಾಗ ಏಕೆ ದೇಶ, ರಾಜ್ಯ ಸುಭಿಕ್ಷವಾಗಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಹೇಳುವ ಸ್ಥಿತಿಯಲ್ಲಿ ಇಲ್ಲ.

ಏಕೆಂದರೆ, ದೇಶ ಸುಭಿಕ್ಷವಾದರೆ ವೋಟ್‌ಬ್ಯಾಂಕ್, ತುಷ್ಠೀಕರಣ ರಾಜಕಾರಣ ನಡೆಯುವುದಿಲ್ಲ ಎಂಬುದು ಅವರಿಗೂ ಗೊತ್ತು. ಹೀಗಾಗಿ ಅಧಿಕಾರದಲ್ಲಿದ್ದಾಗ ಮಾಡದ ಕೆಲಸವನ್ನು ಮತ್ತೆ ಅಧಿಕಾರ ಸಿಕ್ಕಿದರೆ ಮಾಡುತ್ತೇವೆ ಎಂದು ಹೇಳುತ್ತಾರೆ. ಇವರಿಗೆ ಸಿದ್ಧಾಂತ, ಧ್ಯೇಯಕ್ಕಿಂತ ಅಧಿಕಾರವೇ ಮುಖ್ಯ ಎಂಬುದಕ್ಕೆ ಮತ್ತೊಂದು ಉದಾಹರಣೆ ಪಕ್ಷಾಂತರ. ಪ್ರಸ್ತುತ ರಾಜ್ಯದಲ್ಲಿ ಮೂರು ಪ್ರಮುಖ ರಾಜಕೀಯ ಪಕ್ಷಗಳಾದ
ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ನ ಸಿದ್ಧಾಂತಗಳು ಬೇರೆ ಬೇರೆ. ಅವರ ಧ್ಯೇಯಗಳೂ ಪ್ರತ್ಯೇಕ. ಆದರೆ, ಅಧಿಕಾರ ಸಿಗುತ್ತದೆ ಎಂದಾದರೆ ಎಲ್ಲವನ್ನೂ ಬಿಟ್ಟು ಇನ್ನೊಂದು ಪಕ್ಷಕ್ಕೆ ಹೋಗಲು ಅನೇಕರು ಸಿದ್ಧವಾಗಿದ್ದಾರೆ. ಆ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಸಿಗಲಿಲ್ಲ ಎಂದಾದರೆ ಇನ್ನೊಂದು ಪಕ್ಷಕ್ಕೆ ಸೇರಿ ಅಲ್ಲಿ ಟಿಕೆಟ್ ಪಡೆಯಲು ಹಪಹಪಿಸುತ್ತಿದ್ದಾರೆ. ಅದಕ್ಕಾಗಿಯೇ ಅವರು ಸದಾಕಾಲ ರಾಜಕಾರಣಿಗಳು.

ಲಾಸ್ಟ್ ಪಂಚ್: ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಪ್ರಜಾಪ್ರಭುತ್ವದಲ್ಲಿ ಅಧಿಕಾರದಿಂದ, ಅಧಿಕಾರಕ್ಕಾಗಿ, ಅಧಿಕಾರಕ್ಕೋಸ್ಕರ ಇರುವುದೇ ರಾಜಕಾರಣ.