Thursday, 12th December 2024

ಕೆಲಸ ಕೊಡುವವರೊಂದೇ ಅಲ್ಲ, ಕೊಡದವರೂ ಪ್ರಾತಃಸ್ಮರಣೀಯರೇ !

ನೂರೆಂಟು ವಿಶ್ವ

vbhat@me.com

ನಮ್ಮಿಬ್ಬರಿಗೂ ಆ ದಿನಗಳಲ್ಲಿ ಕನಿಷ್ಠ ಐದು ಸಾವಿರ ರುಪಾಯಿ ಗೀಟುವ ನೌಕರಿಯಾದರೂ ಬೇಕಿತ್ತು. ಆದರೆ ‘ಪ್ರಜಾವಾಣಿ’ ನಮ್ಮಿಬ್ಬರನ್ನೂ ಯಾಕೋ ಸೇರಿಸಿಕೊಳ್ಳಲಿಲ್ಲ. ಮೂರನೇ ಸಲವೂ ‘ಬೇಕಾಗಿದ್ದಾರೆ’ ಎಂಬ ಜಾಹೀರಾತು ಆ ಪತ್ರಿಕೆಯಲ್ಲಿ ಪ್ರಕಟವಾಯಿತು. ಆದರೆ ನಾನು ಯಾಕೋ ಅರ್ಜಿ ಹಾಕಲಿಲ್ಲ. ರವಿ ಅರ್ಜಿ ಹಾಕಿದ, ಆದರೆ ಅವನಿಗೆ ಲಿಖಿತ ಪರೀಕ್ಷೆಗೇ ಆಹ್ವಾನ ಬರಲಿಲ್ಲ. ಆ ದಿನ ರವಿ ಜೋರಾಗಿ ಅತ್ತುಬಿಟ್ಟಿದ್ದ.

ಕಳೆದ ವಾರ ಅವರು ನನ್ನ ಭೇಟಿಗಾಗಿ ದುಬೈಯಿಂದ ಬಂದಿದ್ದರು. ‘ವಿಶ್ವವಾಣಿ’ ಕಚೇರಿಯಲ್ಲಿ ನಾವಿಬ್ಬರೂ ಬೆಳಗ್ಗೆ ಹನ್ನೊಂದು ಗಂಟೆಗೆ ಭೇಟಿಯಾಗುವುದೆಂದು ಮೆಸೇಜ್ ಮಾಡಿಕೊಂಡಿದ್ದೆವು. ನನಗೆ ಅದೇ ದಿನ ಕಾಂಗ್ರೆಸ್ ನಾಯಕ ರೊಬ್ಬರು ಆಕಸ್ಮಿಕ ವಾಗಿ ಸಿಕ್ಕರು. ಇಬ್ಬರೂ ‘ಜನಾರ್ದನ ಹೋಟೆಲ್’ ನಲ್ಲಿ ಮಸಾಲೆ ದೋಸೆ ಸೇವಿಸುತ್ತಾ, ಸ್ವಾರಸ್ಯಕರ ರಾಜಕೀಯ ಹರಟೆಯಲ್ಲಿ ಕುಳಿತುಕೊಂಡಿದ್ದರಿಂದ ದುಬೈ ಸ್ನೇಹಿತರನ್ನು ಭೇಟಿ ಮಾಡಲು ಸ್ವಲ್ಪ ವಿಳಂಬ ವಾಯಿತು. ನಾನು ಮಧ್ಯಾಹ್ನ ಒಂದು ಗಂಟೆಗೆ ಆಫೀಸಿಗೆ ಬಂದೆ. ಅವರು ನನಗಾಗಿ ಕಾಯುತ್ತಲೇ ಇದ್ದರು.

‘ವಿಳಂಬವಾಯ್ತು. ಕ್ಷಮಿಸಿ. ರಾಜಕಾರಣಿಯೊಬ್ಬರು ಸಿಕ್ಕರು. ಅದೂ-ಇದೂ ಮಾತಾಡುತ್ತಾ ತಡವಾಯಿತು’ ಅಂದೆ. ಅದಕ್ಕೆ ಅವರು, ‘ಪರವಾಗಿಲ್ಲ, ನೀವು ಇನ್ನೂ ಎರಡು ಗಂಟೆ ತಡವಾಗಿ ಬಂದಿದ್ದರೂ, ಸ್ವಲ್ಪವೂ ಬೇಸರಿಸಿಕೊಳ್ಳದೇ ಕಾಯುತ್ತಿದ್ದೆ’ ಎಂದರು. ‘ಇಲ್ಲ, ನಾನು ಯಾರನ್ನೂ ಕಾಯಿಸುವುದಿಲ್ಲ. ಯಾರಾನ್ನಾದರೂ ಹತ್ತು ನಿಮಿಷ ಕಾಯಿಸಿದರೆ, ತಲೆ ಮೇಲೆ ಡಾಂಬರು ಸುರಿದಂತಾಗುತ್ತದೆ’ ಎಂದೆ. ‘ನಮ್ಮ ವೃತ್ತಿಯೇ ಹಾಗೆ. ಯಾರೋ ಸಿಗುತ್ತಾರೆ.

ತಕ್ಷಣ ತಪ್ಪಿಸಿಕೊಂಡು ಬರಲು ಆಗುವುದಿಲ್ಲ. ಮಾತಿಗೆ ಕುಳಿತರೆ, ಅದು ಎಲ್ಲಾ ಕರೆದುಕೊಂಡು ಹೋಗಿಬಿಡುತ್ತದೆ. ಆಗ ತಪ್ಪಿಸಿ ಕೊಂಡು ಬರಲು ಆಗುವುದಿಲ್ಲ’ ಎಂದೆ. ನನಗೆ ಎಷ್ಟೋ ಸಲ ಅನಿಸಿದೆ, ಇಂಥ ವಿಷಯಗಳಲ್ಲಿ ವಿಜಯ ಸಂಕೇಶ್ವರ ಥರ
ಆಗಬೇಕು ಎಂದುಕೊಳ್ಳುತೇನೆ. ಅವರು ಯಾರನ್ನೋ ಭೇಟಿಯಾಗಲು ಸಮಯ ಕೊಟ್ಟಿರುತ್ತಾರೆ. ಈ ಮಧ್ಯೆ ಪ್ರಮುಖ ವ್ಯಕ್ತಿ ಯೊಬ್ಬರು ಅಚಾನಕ್ ಭೇಟಿಯಾದರೆ, ಅವರನ್ನು ತಪ್ಪಿಸಿಕೊಂಡು ಮುಂದಿನ ಮೀಟಿಂಗ್‌ಗಾಗಿ ಸಮಯಪಾಲನೆಗೆ ಅಲ್ಲಿಂದ ಹೊರಟಿರುತ್ತಾರೆ. ಒಮ್ಮೆ ನಾವು ಇಬ್ಬರು ಪ್ರಮುಖ ವ್ಯಕ್ತಿಗಳನ್ನು ಭೇಟಿ ಯಾಗಬೇಕಿತ್ತು. ಒಬ್ಬರು ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಮತ್ತು ಅನಂತಕುಮಾರ್.

ಅವರಿಬ್ಬರ ಭೇಟಿಗೆ ನಿಗದಿಯಾದ ಸಮಯಕ್ಕೆ ಅರ್ಧ ಗಂಟೆ ಅಂತರವಿತ್ತು. ಎಸ್ಸೆಂ ಕೃಷ್ಣ ಅವರನ್ನು ಭೇಟಿಯಾದಾಗ ಅವರು ಮಾತಾಡುವ ಮೂಡಿನಲ್ಲಿದ್ದರು. ಆದರೆ ಸಂಕೇಶ್ವರರಿಗೆ ಇಲ್ಲಿ ಮಾತಾಡುತ್ತಾ ಕುಳಿತರೆ ಮುಂದಿನ ಭೇಟಿ ಸಮಯ ವ್ಯತ್ಯಾಸ ವಾಗುವುದೆಂದು, ಬಂದ ಕೆಲಸವನ್ನು ಮುಗಿಸಿ, ಹರಟೆಗೆ ನಿಲ್ಲದೇ ಅಲ್ಲಿಂದ ಹೊರಟೇ ಬಿಟ್ಟರು. ಸಮಯದ ಬಗ್ಗೆ ಯಮನಷ್ಟೇ ಖಂಡಿತವಾದಿಯಾಗುವ ಸಂಕೇಶ್ವರರ ಈ ಗುಣವನ್ನು ಅಳವಡಿಸಿಕೊಳ್ಳಬೇಕು ಎಂದು ಎಷ್ಟೇ ಪ್ರಯತ್ನ ಪಟ್ಟರೂ ಅದ್ಯಾಕೋ ಸಾಧ್ಯವಾಗಿಲ್ಲ.

ದುಬೈಯಿಂದ ಬಂದವರ ಜತೆ ಉಭಯಕುಶಲೋಪರಿ ಸಾಂಪ್ರತವೆಲ್ಲ ಮುಗಿಯಿತು. ‘ಸರಿ, ಬಂದ ವಿಷಯವೇನು?’ ಎಂದು ಕೇಳಿದೆ. ಅಂದ ಹಾಗೆ ಆ ವ್ಯಕ್ತಿಯನ್ನು ನಾನು ಭೇಟಿಯಾಗುತ್ತಿದ್ದುದು ಅದು ಎರಡನೇ ಸಲ. ಮೊದಲ ಸಲ ಭೇಟಿಯಾಗಿದ್ದು ಕೋವಿಡ್‌ಗಿಂತ ಮುಂಚೆ. ಆಗ ನಮ್ಮಿಬ್ಬರ ಭೇಟಿ ಅರ್ಧ ಗಂಟೆಯಲ್ಲಿ ಮುಗಿದು ಹೋಗಿತ್ತು. ಅದಾದ ಬಳಿಕ ಅವರ ಸಂಪರ್ಕ-ಮಾತುಕತೆ ಇರಲಿಲ್ಲ. ಮೊದಲ ಸಲ ಅವರು ‘ವಿಶ್ವವಾಣಿ’ಯಲ್ಲಿ ಕೆಲಸ ಕೇಳಿಕೊಂಡು ಬಂದಿದ್ದರು. ಆದರೆ ನಾನು ಕೆಲಸ ಕೊಟ್ಟಿರಲಿಲ್ಲ. ಅದಕ್ಕೆ ಕಾರಣವೂ ಇತ್ತು.

ಅದೇನು ಎಂಬುದನ್ನು ನಂತರ ಹೇಳುತ್ತೇನೆ. ‘ಸರಿ, ಬಂದ ವಿಷಯವೇನು?’ ಎಂದು ಕೇಳಿದ್ದಕ್ಕೆ ಅವರು, ‘ನಾನು ನಿಮ್ಮನ್ನು ಈ ಮೊದಲು ಭೇಟಿ ಮಾಡಿದ್ದೆ. ನೀವು ಗುರುತು ಹಿಡಿದಿದ್ದಕ್ಕೆ ಥ್ಯಾಂಕ್ಸ್’ ಎಂದರು. ‘ನಿಮ್ಮನ್ನು ಮೊದಲ ಸಲ ಭೇಟಿ ಮಾಡಿದ್ದು ಚೆನ್ನಾಗಿ ನೆನಪಿದೆ. ನಿಮಗೆ ನಾನು ಕೆಲಸ ಕೊಡಲಿಲ್ಲವಲ್ಲ’ ಎಂದೆ. ಅದಕ್ಕೆ ಅವರು, ‘ಸಾರ್, ನೀವು ನನಗೆ ಕೆಲಸ ಕೊಡದೇ ಬಹಳ ದೊಡ್ಡ ಉಪಕಾರ ಮಾಡಿದಿರಿ. ನಿಮ್ಮನ್ನು ನಾನು ನನ್ನ ಜನ್ಮದ ಮರೆಯುವುದಿಲ್ಲ.

ನನ್ನ ಕೋಣೆಯಲ್ಲಿ ನಿಮ್ಮ ಫೋಟೋ ಇಟ್ಟುಕೊಂಡಿದ್ದೇನೆ’ ಎಂದರು. ಆ ಕ್ಷಣ ನನಗೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯಲಿಲ್ಲ. ನಾನು ಅವರ ಮುಖವನ್ನೇ ಪೆಚ್ಚಾಗಿ ನೋಡುತ್ತಾ ಕುಳಿತಿದ್ದೆ. ‘ಯಸ್ ಸರ್, ನೀವು ನನಗೆ ಕೆಲಸ ಕೊಡದೇ ಮಹದುಪಕಾರ ಮಾಡಿದಿರಿ. ಅಂದು ನೀವು ಹೇಳಿದ ಕೆಲವು ಮಾತುಗಳು ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಬಿಟ್ಟಿವೆ. ಆ ಮಾತುಗಳೇ ನನ್ನನ್ನು ದುಬೈಗೆ ಹೋಗುವಂತೆ ಪ್ರೇರೇಪಿಸಿದವು. ಇಂದು ನಾನು ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ಯ
ಪ್ರತಿಷ್ಠಿತ ‘ಗಲ್ಫ್ ನ್ಯೂಸ್’ ಪತ್ರಿಕೆಯಲ್ಲಿ ಚೀಫ್ ಸಬ್  ಎಡಿಟರ್ ಆಗಿದ್ದೇನೆ’ ಎಂದರು.

ನಾನು ಅವರನ್ನು ತದೇಕಚಿತ್ತದಿಂದ ನೋಡುತ್ತಿದ್ದೆ. ಯಾವ ರೀತಿ ಪ್ರತಿಕ್ರಿಯಿಸಬೇಕೋ ಗೊತ್ತಾಗಲಿಲ್ಲ. ಆ ಕ್ಷಣ ನನ್ನ ಮುಂದೆ ಹಾದು ಹೋಗಿದ್ದು ಮೂವತ್ತೊಂದು ವರ್ಷಗಳ ಹಿಂದೆ ಎಂ.ಜಿ.ರಸ್ತೆಯಲ್ಲಿರುವ ‘ಪ್ರಜಾವಾಣಿ’ ಆಫೀಸಿನ ಮುಂದೆ ನಿಂತ ದೃಶ್ಯ. ನಾನು ಬೆಂಗಳೂರಿನ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯಲ್ಲಿ ಟ್ರೇನಿ ಉಪ ಸಂಪಾದಕನಾಗಿ ಕೆಲಸ ಮಾಡುತ್ತಿದ್ದೆ. ತಿಂಗಳಿಗೆ ೮೩೦ ರುಪಾಯಿ ಸಂಬಳ. ಪಿಎಫ್, ಸುಡುಗಾಡು, ಶುಂಠಿ ಕಟ್ ಆಗಿ ಕೈಗೆ ಸಿಗುತ್ತಿದ್ದುದು 694 ರುಪಾಯಿ. ಎರಡು ವರ್ಷ
ಇಷ್ಟೇ ಸಂಬಳದಲ್ಲಿ ಜೀವನ ಸಾಗಿಸಿದ್ದಾಯಿತು.

ಆ ದಿನಗಳಲ್ಲಿ ‘ಪ್ರಜಾವಾಣಿ’ಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಪ್ರತಿಷ್ಠೆಯ ವಿಷಯವಾಗಿತ್ತು. ಒಮ್ಮೆ ‘ಪ್ರಜಾವಾಣಿ’ ಸೇರಿದರೆ, ಬದುಕು settle ಆದ ಹಾಗೆ ಎಂಬ ಭಾವನೆಯಿತ್ತು. ಆ ದಿನಗಳಲ್ಲಿ ‘ಪ್ರಜಾವಾಣಿ’ ಸೇರುವವರಿಗೆ ಆ ಪತ್ರಿಕೆಗಿಂತ ಅಲ್ಲಿನ ಕ್ಯಾಂಟೀನ್ ಹೆಚ್ಚು ಆಕರ್ಷಕವಾಗಿತ್ತು. ಒಂದು ರುಪಾಯಿಗೆ ದೋಸೆ, ಎರಡು ರುಪಾಯಿಗೆ ಊಟ ಕೊಡುತ್ತಿದ್ದರು. ಆ ದಿನಗಳಲ್ಲಿ ಸಂಬಳ, ಸಂಭಾವನೆ, ಬೋನಸನ್ನು ಕರಾರುವಾಕ್ಕಾಗಿ ಕೊಡುತ್ತಿದ್ದ ಏಕಮಾತ್ರ ಕನ್ನಡ ಪತ್ರಿಕೆ ಅದಾಗಿತ್ತು. ಹೀಗಾಗಿ ‘ಪ್ರಜಾ ವಾಣಿ’ ಸೇರಲು ಎಲ್ಲರೂ ಪ್ರಯತ್ನಿಸುತ್ತಿದ್ದರು.

‘ಸಂಯುಕ್ತ ಕರ್ನಾಟಕ’ ದಲ್ಲಿ ಎರಡು-ಮೂರು ವರ್ಷ ಕೆಲಸ ಮಾಡಿದವರು ‘ಪ್ರಜಾವಾಣಿ’ ಸೇರಲು ಆಟೋಮ್ಯಾಟಿಕ್ ಅರ್ಹತೆ
ಪಡೆಯುತ್ತಾರೆ ಎಂಬ ಮಾತು ಸಹ ಪ್ರಚಲಿತದಲ್ಲಿತ್ತು. ನನ್ನ ಜತೆ ‘ಸಂಯುಕ್ತ ಕರ್ನಾಟಕ’ದಲ್ಲಿ ಕೆಲಸ ಮಾಡುತ್ತಿದ್ದವರೆಲ್ಲ ಒಬ್ಬೊಬ್ಬರಾಗಿ ‘ಪ್ರಜಾವಾಣಿ’ ಸೇರಿದ್ದರು. ನಾನೂ ಒಂದು ಸಲ ‘ಪ್ರಜಾವಾಣಿ’ ಲಿಖಿತ ಪರೀಕ್ಷೆಯನ್ನು ಬರೆದು ಬಂದೆ. ಸಂದರ್ಶನಕ್ಕೆ ಆಹ್ವಾನ ಬಂದಿತು. ಎರಡರಲ್ಲೂ ನನ್ನ performance ಬಹಳ ಚೆನ್ನಾಗಿತ್ತು.

ಕೆಲಸ ಸಿಗುವುದರಲ್ಲಿ ನನಗೆ ಅನುಮಾನಗಳಿರಲಿಲ್ಲ. ಆದರೆ ನನಗೊಂದು ಆಘಾತ ಕಾದಿತ್ತು. ಜೀವನದಲ್ಲಿ ಒಂದೇ ಒಂದು ಲೇಖನ ಬರೆಯದವರು, ಎಂ.ಎ. ಪತ್ರಿಕೋದ್ಯಮದಲ್ಲಿ ಫೇಲಾದವರೆಲ್ಲ ಆಯ್ಕೆಯಾಗಿದ್ದರು. ನನ್ನ ಜತೆ ರವಿ ಬೆಳಗೆರೆ ಸಹ ಪರೀಕ್ಷೆ ಬರೆದಿದ್ದರು ಮತ್ತು ಸಂದರ್ಶನಕ್ಕೆ ಹಾಜರಾಗಿದ್ದರು. ನಮ್ಮಿಬ್ಬರಿಗೆ ಕೆಲಸ ಸಿಗಲಿಲ್ಲ. ಬಹಳ ತಲೆ ಕೆಡಿಸಿಕೊಳ್ಳ ಲಿಲ್ಲ.

ಇಬ್ಬರೂ ಸಂಯುಕ್ತ ಕರ್ನಾಟಕ ನೊಗಕ್ಕೆ ಕತ್ತು ಕೊಟ್ಟೆವು. ಅದಾಗಿ ಎಂಟು ತಿಂಗಳ ಬಳಿಕ ‘ಪ್ರಜಾವಾಣಿ’ ಪತ್ರಿಕೆಯಲ್ಲಿ
‘ವರದಿಗಾರರು/ಉಪಸಂಪಾದಕರು ಬೇಕಾಗಿದ್ದಾರೆ’ ಎಂಬ ಜಾಹೀರಾತು ಪ್ರಕಟವಾಯಿತು. ನಾನು ಮತ್ತು ರವಿ ಇಬ್ಬರೂ ಅರ್ಜಿ ಹಾಕಿದೆವು. ಮತ್ತೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ. ಈ ಸಲ, ಮೊದಲಿಗಿಂತ ಚೆನ್ನಾಗಿ ಸಾಧನೆ ಮಾಡಿದ್ದೇನೆ ಎಂಬ
ಆತ್ಮವಿಶ್ವಾಸ ನನ್ನಲ್ಲಿ ಮನೆ ಮಾಡಿತ್ತು. ‘ನಿನಗೆ ಸಂಸಾರ ಇಲ್ಲ. ಆದರೆ ನನಗೆ ಪ್ರಜಾವಾಣಿಯಲ್ಲಿ ಕೆಲಸ ಸಿಕ್ಕರೆ ನನ್ನ ಫ್ಯಾಮಿಲಿಯನ್ನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಶಿಫ್ಟ್ ಮಾಡಲು ಅನುಕೂಲವಾಗುತ್ತೆ.

ಸಂಯುಕ್ತ ಕರ್ನಾಟಕ ದವರು ಕೊಡುವ ಈ ಸಂಬಳದಲ್ಲಿ ಬೆಂಗಳೂರಿನಲ್ಲಿ ಫ್ಯಾಮಿಲಿ ಮೆಂಟೈನ್ ಮಾಡುವುದು ಕಷ್ಟ’ ಎಂದು ರವಿ ಹೇಳಿದ. ಫಲಿತಾಂಶ ಬಂತು. ನಮ್ಮ ಜತೆಯಲ್ಲಿದ್ದವರೆಲ್ಲರಿಗೂ ಕೆಲಸ ಸಿಕ್ಕಿತ್ತು. ನಮ್ಮಿಬ್ಬರಿಗೆ ಸಿಕ್ಕಿರಲಿಲ್ಲ. ನಮ್ಮಿಬ್ಬರಿಗೂ ಅತೀವ ಬೇಸರವಾಗಿತ್ತು. ಆ ದಿನಗಳಲ್ಲಿ ರವಿ, ‘ಕಸ್ತೂರಿ’, ಮತ್ತು ‘ಕರ್ಮವೀರ’ ಪತ್ರಿಕೆಗಳನ್ನು ನೋಡಿಕೊಳ್ಳುತ್ತಿದ್ದ. ‘ಸಂಯುಕ್ತ ಕರ್ನಾಟಕ’ದ ಸಾಪ್ತಾಹಿಕ ಪುರವಣಿಯ ಜವಾಬ್ದಾರಿಯೂ ಅವನದಾಗಿತ್ತು. ನಾನು ಆ ದಿನಗಳಲ್ಲಿ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಸಂಪಾದಕೀಯ ಪುಟವನ್ನು ನೋಡಿಕೊಳ್ಳುತ್ತಿದ್ದೆ.

ಅಂತೂ ನಾವಿಬ್ಬರೂ ಆಯ್ಕೆಯಾಗಲಿಲ್ಲ. ಅಷ್ಟೊತ್ತಿಗೆ ಶಾಮರಾಯರು ನನಗೆ ಸಂಬಳವನ್ನು 1800 ಕ್ಕೆ ಹೆಚ್ಚಿಸಿದ್ದರು. ನಮ್ಮಿಬ್ಬರಿಗೂ ಆ ದಿನಗಳಲ್ಲಿ ಕನಿಷ್ಠ ಐದು ಸಾವಿರ ರುಪಾಯಿ ಗೀಟುವ ನೌಕರಿಯಾದರೂ ಬೇಕಿತ್ತು. ಆದರೆ ‘ಪ್ರಜಾವಾಣಿ’
ನಮ್ಮಿಬ್ಬರನ್ನೂ ಯಾಕೋ ಸೇರಿಸಿಕೊಳ್ಳಲಿಲ್ಲ. ಮೂರನೇ ಸಲವೂ ‘ಬೇಕಾಗಿದ್ದಾರೆ’ ಎಂಬ ಜಾಹೀರಾತು ಆ ಪತ್ರಿಕೆಯಲ್ಲಿ ಪ್ರಕಟವಾಯಿತು. ಆದರೆ ನಾನು ಯಾಕೋ ಅರ್ಜಿ ಹಾಕಲಿಲ್ಲ.

ರವಿ ಅರ್ಜಿ ಹಾಕಿದ, ಆದರೆ ಅವನಿಗೆ ಲಿಖಿತ ಪರೀಕ್ಷೆಗೇ ಆಹ್ವಾನ ಬರಲಿಲ್ಲ. ಆ ದಿನ ರವಿ ಜೋರಾಗಿ ಅತ್ತುಬಿಟ್ಟಿದ್ದ. ನನ್ನ ಕಣ್ಣಿಂದಲೂ ಜಾರಿದ್ದವು. ಈ ಎಲ್ಲ ನೆನಪುಗಳನ್ನು ಕೊಡವಿಕೊಂಡು, ಒಂದು ಕ್ಷಣ ಸಾವರಿಸಿಕೊಂಡು, ದುಬೈಯಿಂದ ಬಂದ ಸ್ನೇಹಿತರಿಗೆ, ನಾನು ಬರೆದ ಪುಸ್ತಕವೊಂದರ ಅರ್ಪಣೆಯನ್ನು ತೋರಿಸಿದೆ. ಅದರಲ್ಲಿ ಹೀಗೆ ಬರೆದಿತ್ತು – ‘ಕೆಲಸ ಕೊಟ್ಟು
ಪತ್ರಿಕೋದ್ಯಮದ ಪಾಠ ಹೇಳಿ ಕೊಟ್ಟ ‘ಸಂಯುಕ್ತ ಕರ್ನಾಟಕ’ ಪತ್ರಿಕೆಗೆ ಮತ್ತು ಕೆಲಸ ಕೊಡದೇ ಬದುಕಿನ ಪಾಠ ಕಲಿಸಿದ ‘ಪ್ರಜಾವಾಣಿ’ ಪತ್ರಿಕೆಗೆ ಈ ಕೃತಿಯನ್ನು ಅರ್ಪಿಸುತ್ತಿದ್ದೇನೆ. ನನ್ನನ್ನು ನೋಡಿ ಏನೂ ಮಾತಾಡದ ಸರದಿ ದುಬೈ ಸ್ನೇಹಿತರದಾಗಿತ್ತು.

‘ನೋಡಿ, ಕೆಲಸ ಕೊಟ್ಟವರು ಮಾತ್ರ ಪ್ರಾತಃ ಸ್ಮರಣೀಯರು ಎಂದು ಭಾವಿಸಬೇಡಿ. ಕೆಲಸ ಕೊಡದೇ ಬದುಕಿನ ಪಾಠ ಕಲಿಸಿ ದವರೂ ಪ್ರಾತಃಸ್ಮರಣೀಯರೇ. ಒಂದು ವೇಳೆ ನನಗೆ ಪ್ರಜಾವಾಣಿಯಲ್ಲಿ ಕೆಲಸ ಕೊಟ್ಟಿದ್ದರೆ ನಾನು ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ ಸೇರುತ್ತಿರಲ್ಲ. ಫೆಲೋಶಿಪ್ ಪಡೆದು ಬ್ರಿಟನ್‌ಗೆ ಹೋಗುತ್ತಿರಲಿಲ್ಲ. ವಿಜಯ ಕರ್ನಾಟಕ ಪತ್ರಿಕೆ ಸಂಪಾದಕ ನಾಗುತ್ತಿರಲಿಲ್ಲ.

ಸುವರ್ಣ ನ್ಯೂಸ್ – ಕನ್ನಡಪ್ರಭ ಸಂಪಾದಕನಾಗುವ ಅವಕಾಶ ಸಿಗುತ್ತಿರಲಿಲ್ಲ. ಹೆಚ್ಚೆಂದರೆ ಪ್ರಜಾವಾಣಿಯಲ್ಲಿ ಸುದ್ದಿ
ಸಂಪಾದಕನೋ, (ಅ)ಸಹಾಯಕ ಸಂಪಾದಕನೋ, ಸಹ ಸಂಪಾದಕನೋ ಆಗಿರುತ್ತಿದ್ದೆ. ರವಿ ಕೂಡ ‘ಹಾಯ್’ ಆರಂಭಿಸು ತ್ತಿರಲಿಲ್ಲವೇನೋ. ಆ ಕ್ಷಣದಲ್ಲಿ ನನಗೆ ಅತೀವ ಬೇಸರವಾಗಿದ್ದು ನಿಜ. ಆದರೆ ಅಲ್ಲಿ ಕೆಲಸ ಸಿಗದಿರುವುದೇ ನಮ್ಮ ಬದುಕಿನ ಗತಿಯನ್ನೇ ಬದಲಿಸಿಬಿಟ್ಟವು. ಆ ಪತ್ರಿಕೆ ಸೇರಿದಿದ್ದರೆ, ನಾನು ಇಂದು ನೂರಾರು ಪತ್ರಕರ್ತರನ್ನು ಕಟ್ಟಿಕೊಂಡು ರಾಜ್ಯಮಟ್ಟದ ಪತ್ರಿಕೆಯನ್ನೂ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರಲಿಲ್ಲವೇನೋ.’

ಹೀಗಂತ ದುಬೈ ಸ್ನೇಹಿತರಿಗೆ ಹೇಳಿದೆ. ‘ಸರ್, ನೀವು ನನಗೆ ಕೆಲಸ ಕೊಟ್ಟಿದ್ದರೆ ನಾನು ಪ್ರಾಯಶಃ ನಿಮ್ಮ ಪತ್ರಿಕೆಯಲ್ಲಿ ಇರುತ್ತಿದ್ದೆ ಅಥವಾ ಇನ್ಯಾವುದೋ ಕನ್ನಡ ಪತ್ರಿಕೆ ಅಥವಾ ಕನ್ನಡ ಟಿವಿ ಚಾನೆಲ್ ಸೇರಿರುತ್ತಿದ್ದೆ. ಕೋವಿಡ್ ಸಂದರ್ಭದಲ್ಲಿ ಎರಡು ವರ್ಷ ಸತತ ಇಂಗ್ಲಿಷ್ ಕಲಿತು, ದುಬೈಗೆ ಹೋಗಿ ಅಲ್ಲಿನ ಪತ್ರಿಕೆಯನ್ನು ಸೇರಿಕೊಳ್ಳುತ್ತಿರಲಿಲ್ಲ. ಅಂದು ನೀವು ಹೇಳಿದಿರಿ, ಆಕಾಶದಲ್ಲಿ ಹಾರಬೇಕು ಅಂತ ಕನಸಿದ್ದರೆ ಮೀನಿನಂತೆ ಈಜಬಾರದು. ಇಂಗ್ಲಿಷ್ ಪತ್ರಿಕೆಯಲ್ಲಿ ಕೆಲಸ ಮಾಡಬೇಕು ಅಂತ ನಿರ್ಧರಿಸಿದ್ದರೆ (ಹೊಟ್ಟೆ ಪಾಡಿಗೆ) ಕನ್ನಡ ಪತ್ರಿಕೆಯಲ್ಲಿ ಕೆಲಸ ಮಾಡಬಾರದು.

ಹೀಗಾಗಿ ನಿಮಗೆ ಕೆಲಸ ಕೊಡುವುದಿಲ್ಲ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದಿರಿ. ನಿಮ್ಮ ಮಾತಿನಲ್ಲಿ ಸ್ವಲ್ಪ ಒರಟುತನವೂ
ಇತ್ತು. ಅಂದೇ ನಾನು ನನ್ನ ಕನಸನ್ನು ನನಸು ಮಾಡುವತ್ತ ಗಂಭೀರವಾಗಿ ಯೋಚಿಸಲಾರಂಭಿಸಿದ್ದು’ ಎಂದರು. ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರ್ ಕೂಡ ಆಗಾಗ ನನಗೆ ‘ಸಾರ್, ನೀವು ವಿಜಯ ಕರ್ನಾಟಕದಲ್ಲಿದ್ದಾಗ ಕೆಲಸ ಕೇಳಿಕೊಂಡು ಬಂದಿದ್ದೆ. ಆದರೆ ನೀವು ಕೆಲಸ ಕೊಡದೇ ಬಹಳ ನಿರಾಸೆ ಮಾಡಿದಿರಿ’ ಎಂದು ಹೇಳುವುದುಂಟು.

‘ನಿಮಗೆ ಪತ್ರಿಕೆಯಲ್ಲಿ ಕೆಲಸ ಕೊಟ್ಟಿದ್ದಿದ್ದರೆ, ನೀವು ಟಿವಿ ಪತ್ರಕರ್ತೆ ಆಗುತ್ತಿರಲಿಲ್ಲ. ಕೆಲಸ ಕೊಡದೇ ನಿಮಗೆ ಉಪಕಾರ ಮಾಡಿದ್ದೇನೆ ಎಂಬುದನ್ನು ಮರೆಯಬೇಡಿ’ ಎಂದು ನಾನು ಹೇಳಿದ್ದಿದೆ. ಅದು ನಿಜ ಕೂಡ. ಕೆಲಸ ಕೊಟ್ಟವರು ಮಾತ್ರ ನಮ್ಮವರು, ಕೊಡದವರು ನಮ್ಮವರಲ್ಲ ಎಂದು ಎಂದೂ ಭಾವಿಸಬಾರದು. ನಾನು ಹೆಚ್ಚಿನವರಿಗೆ ಕೆಲಸ ಕೊಟ್ಟು, ತೀರಾ ಕಮ್ಮಿ ಮಂದಿಗೆ ಕೊಡದೇ ಉಪಕಾರ ಮಾಡಿದ್ದೇನೆ!