Sunday, 15th December 2024

ಜೋಡೋ ರೀಚು, ಬಿಜೆಪಿಗೆ ಪೇಚು !

ಅಶ್ವತ್ಥಕಟ್ಟೆ

ranjith.hoskere@gmail.com

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಯಡಿಯೂರಪ್ಪ ನೇತೃತ್ವದಲ್ಲಿ ಸರಕಾರ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಈಗಾಗಲೇ ಸ್ಪಷ್ಟವಾಗಿರುವುದರಿಂದ, ಯಡಿಯೂರಪ್ಪ ಅವರ ಹೆಸರಲ್ಲಿ ಚುನಾವಣೆ ನಡೆಸಿದರೆ, ನಿರೀಕ್ಷಿತ ಪ್ರಮಾಣದ ಯಶಸ್ಸು ಸಿಗುತ್ತದೆ ಎನ್ನುವ ಬಗ್ಗೆ ಸ್ಪಷ್ಟತೆ ನಾಯಕರಿಗಿಲ್ಲ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ‘ಭಾರತ್ ಜೋಡೋ’ ಯಾತ್ರೆಯನ್ನು ರಾಹುಲ್ ಗಾಂಧಿ ಆರಂಭಿಸಿದರೂ, ಆ ಯಾತ್ರೆಗೊಂದು ಮೆರುಗು, ಗಾಂಭೀರ್ಯ ಬಂದಿದ್ದು ಕರ್ನಾಟಕದ ಗಡಿ ಪ್ರವೇಶಿಸಿದ ಬಳಿಕವೇ. ರಾಜ್ಯ ಪ್ರವೇಶಿಸುತ್ತಿದ್ದಂತೆ, ಸ್ಪಂದನೆ ಸಿಗುವ ಜತೆಜತೆಗೆ ಕಾಂಗ್ರೆಸ್ ಅಂದುಕೊಂಡಿದ್ದ ಕಾರ್ಯವೂ ಹಂತ-ಹಂತವಾಗಿ ಆಗುತ್ತಿರು ವುದು ಕಾಂಗ್ರೆಸ್ ನಾಯಕರಿಗೆ ನೆಮ್ಮದಿಯ ಸಂಗತಿ.

ಹೌದು, ಭಾರತ್ ಜೋಡೋ ಯಾತ್ರೆ ತಮಿಳುನಾಡಿನಲ್ಲಿ ಆರಂಭವಾಗಿ ಕೇರಳ ಪ್ರವೇಶಿಸಿದ ಬಳಿಕವೂ ಮಾಧ್ಯಮಗಳಲ್ಲಿ ಯಾಗಲಿ, ಸಾರ್ವಜನಿಕ ವಾಗಲಿ ಹೇಳಿಕೊಳ್ಳುವ ಮೈಲೇಜ್ ಸಿಕ್ಕಿರಲಿಲ್ಲ. ಆದರೆ, ಚಾಮರಾಜನಗರ ಪ್ರವೇಶಿಸುತ್ತಿದ್ದಂತೆ, ಸ್ಪಂದನೆ ಸಿಗಲು ಆರಂಭವಾಗಿದ್ದು ದಿನದಿಂದ ದಿನಕ್ಕೆ ಈ ಜನ ಸ್ಪಂದನೆ ಹೆಚ್ಚುತ್ತಲೇ ಇದೆ. ಇಡೀ ಯಾತ್ರೆಯ ಉದ್ದೇಶವೂ ಇದೇ ಆಗಿತ್ತು. ಜನರನ್ನು ಪಕ್ಷದತ್ತ ಸೆಳೆಯುವುದರೊಂದಿಗೆ ಬಿಜೆಪಿಯನ್ನು ಯಾತ್ರೆಯ ಮೂಲಕ ‘ಗೊಂದಲ’ಕ್ಕೆ ಸಿಲುಕಿಸುವ ಪ್ರಯತ್ನ ಮಾಡ ಕಾಗಿತ್ತು. ತಮಿಳುನಾಡು ಹಾಗೂ ಕೇರಳದಲ್ಲಿ ಈ ಯೋಜನೆ ಫಲಿಸಲಿಲ್ಲ. ಆದರೆ ಕರ್ನಾಟಕದಲ್ಲಿ, ಬಿಜೆಪಿ ನಾಯಕರನ್ನು ‘ಇಕ್ಕಟ್ಟಿಗೆ’ ಸಿಲುಕಿಸುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾಗುತ್ತಿದ್ದಾರೆ.

ದೇಶದಲ್ಲಿ ದಿನದಿಂದ ದಿನಕ್ಕೆ ಕಾಂಗ್ರೆಸ್‌ನ ಅಸ್ತಿತ್ವ ಇಳಿಮುಖವಾಗುತ್ತಿದ್ದರೂ, ಕರ್ನಾಟಕದಲ್ಲಿರುವ ರಾಜ್ಯ ನಾಯಕತ್ವದಿಂದ ಈಗಲೂ ಕಾಂಗ್ರೆಸ್ ಬಲಿಷ್ಠವಾಗಿದೆ. ಅದೇ ಕಾರಣಕ್ಕೆ, ಕಾಂಗ್ರೆಸ್ ಹೈಕಮಾಂಡ್‌ಗೆ ಸಹ ಕರ್ನಾಟಕವೇ ಭಾರತ್ ಜೋಡೋ ಯಾತ್ರೆಯ ಪ್ರಮುಖ ರಾಜ್ಯವಾಗಿತ್ತು. ಮುಂದಿನ ಆರೇಳು ತಿಂಗಳಲ್ಲಿ ಬರಲಿರುವ ವಿಧಾನಸಭಾ ಚುನಾವಣೆ ಮತ್ತು ನಂತರ ಎದುರಾಗಲಿರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಕರ್ನಾಟಕದಲ್ಲಿ ಪಕ್ಷ ಸಂಘಟಿಸುವ ಲೆಕ್ಕಾಚಾರ ದೊಂದಿಗೆ ಯಾತ್ರೆಯನ್ನು ಹಮ್ಮಿಕೊಂಡಿತ್ತು.

ಹಾಗೇ ನೋಡಿದರೆ, ಕರ್ನಾಟಕದಲ್ಲಿ ರೂಟ್ ಮ್ಯಾಪ್ ಅನ್ನು ಸಿದ್ಧಪಡಿಸುವ ವೇಳೆಯೂ ಕಾಂಗ್ರೆಸ್ ನಾಯಕರು ಜಾಣ ನಡೆ ಅನುಸರಿಸಿದ್ದಾರೆ. ಪ್ರಮುಖವಾಗಿ ಈ ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಹಳೇಮೈಸೂರು ಭಾಗದಲ್ಲಿ ಉಂಟಾಗಿರುವ ಸಂಘಟನೆಯ ಸಡಿಲಿಕೆಯನ್ನು ಸರಿ ಪಡಿಸುವುದು, ಮಧ್ಯ ಕರ್ನಾಟಕದಲ್ಲಿ ಮತ್ತೆ ಪಕ್ಷವನ್ನು ಸಂಘಟಿಸುವುದು, ಹೈದರಾಬಾದ್ ಕರ್ನಾಟಕದಲ್ಲಿ ಇನ್ನಷ್ಟು ಬಲಪಡಿಸುವುದು ಕಾಂಗ್ರೆಸ್ ಮುಖ್ಯ ಅಜೆಂಡವಾಗಿತ್ತು.

ಒಂದು ವೇಳೆ ಈ ಅಜೆಂಡದಲ್ಲಿ ಕಾಂಗ್ರೆಸ್ ಪಕ್ಷ ಯಶಸ್ವಿಯಾದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸುಲಭವಾಗಿ ಅಧಿಕಾರದತ್ತ ಬರಬಹುದು ಎನ್ನುವ ಲೆಕ್ಕಾಚಾರ ಕಾಂಗ್ರೆಸ್‌ನದ್ದಾಗಿದೆ. ಏಕೆಂದರೆ ಹಳೇ ಮೈಸೂರು, ಮಧ್ಯ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ 80ಕ್ಕೂ ಹೆಚ್ಚು ಕ್ಷೇತ್ರಗಳು ಬರುತ್ತವೆ. ಇನ್ನು ಬೆಂಗಳೂರಿನಲ್ಲಿರುವ 28, ಬೆಳಗಾವಿ ಜಿಲ್ಲೆಯಲ್ಲಿರುವ 18 ವಿಧಾನಸಭಾ ಕ್ಷೇತ್ರಗಳು ಈಗಾಗಲೇ ಬಹುತೇಕ ನಿಶ್ಚಿತ ಪಕ್ಷಕ್ಕೆ ಸೀಮಿತವಾಗಿರುವುದರಿಂದ ಅಲ್ಲಿ ಹೆಚ್ಚು ಬದಲಾವಣೆಗೆ ಅವಕಾಶವಿಲ್ಲ.

ಆದರೆ ಆಚೀಚೆ ಹೊಯ್ದಾಡುವ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರಗಳನ್ನು ಗಮನದಲ್ಲಿರಿಸಿಕೊಂಡೇ ಈ ಯಾತ್ರೆಯನ್ನು ಆರಂಭಿಸಿದ್ದು, ಮೊದಲ 10 ದಿನದಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯೂ ಆಗಿದ್ದಾರೆ. ಕಾಂಗ್ರೆಸ್ ನಾಯಕರ ಈ ಯಶಸ್ಸೇ ಬಿಜೆಪಿಗೆ ಸಮಸ್ಯೆಯಾಗಿದೆ. ಯಾತ್ರೆಯುದ್ದಕ್ಕೂ, ಕಾಂಗ್ರೆಸ್ ನಾಯಕರು ಕೇವಲ ಬಿಜೆಪಿಯವರನ್ನು ಟೀಕಿಸುತ್ತಲೇ ಸಾಗದೇ,
ಜನರನ್ನು ‘ರೀಚ್’ ಆಗುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಅದರಲ್ಲಿಯೂ ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ ಬಳಿಕ, ಪ್ರತಿಕ್ರಿಯೆ ಇನ್ನಷ್ಟು ಉತ್ತಮವಾಗುತ್ತಿದೆ. ಆದರೆ ಕಾಂಗ್ರೆಸ್ ವಿರುದ್ಧ ಮಾತನಾಡಲು ಬಿಜೆಪಿ ಪರದಾಡುವ ಸ್ಥಿತಿ ಬಂದಿದೆ. ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ದಿನಕ್ಕೊಂದು ಆರೋಪವನ್ನು ಮಾಡುತ್ತಿದ್ದರೂ, ಅದು ನಿರೀಕ್ಷಿತ ಮಟ್ಟಿಗೆ ಯಶಸ್ವಿಯಾಗಿಲ್ಲ ಎನ್ನುವುದು ಸ್ವತಃ ಬಿಜೆಪಿ ನಾಯಕರಿಗೆ ತಿಳಿಯುತ್ತಿದೆ. ವಿಧಾನಸಭಾ ಚುನಾವಣಾ ಕಾವು ಏರುತ್ತಿರುವ ಸಮಯದಲ್ಲಿ, ಈ ರೀತಿಯ ಹೊಡೆತ ಬಿಜೆಪಿ ಚುನಾವಣೆಯಲ್ಲಿ ಭಾರಿ ಸಮಸ್ಯೆ ಉಂಟು ಮಾಡುವ ಆತಂಕವನ್ನು ನಾಯಕರು ಹೊರಹಾಕುತ್ತಿದ್ದಾರೆ.

ಇದಕ್ಕೆ ತದ್ವಿರುದ್ಧ ಎನ್ನುವಂತೆ ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಪ್ರಮುಖವಾಗಿ ಭ್ರಷ್ಟ ಸರಕಾರ, ೪೦ ಪರ್ಸೆಂಟ್ ಆರೋಪ ಹಾಗೂ ಪೇಸಿಎಂ ಅಭಿಯಾನ ಬಿಜೆಪಿ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಆರೋಪದ ವಿಷಯದಲ್ಲಿ ಕಾಂಗ್ರೆಸ್ ಹೆಚ್ಚುವರಿ ಲಾಭವೆಂದರೆ, ಕಾಂಗ್ರೆಸ್ ನಾಯಕರ ಆರೋಪಕ್ಕೆ ಪೂರಕ ಎನ್ನುವಂತೆ ಕರ್ನಾಟಕದಲ್ಲಿ ವ್ಯವಸ್ಥೆ ನಡೆಯುತ್ತಿದೆ.

ಗುತ್ತಿಗೆದಾರರ ಸಂಘದವರ ಆರೋಪ, ಸ್ವತಃ ಪಕ್ಷದ ಕಾರ್ಯಕರ್ತರೇ ಬಿಜೆಪಿ ಸರಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿರುವುದು ಕಾಂಗ್ರೆಸ್‌ಗೆ ಇನ್ನಷ್ಟು ಮೈಲೇಜ್ ಸಿಗುವಂತೆ ಮಾಡಿದೆ. ಆದರೆ ಬಿಜೆಪಿಗೆ ಆಗುತ್ತಿರುವ ಈ ಡ್ಯಾಮೇಜ್
ಕಂಟ್ರೋಲ್ ಮಾಡುವುದಕ್ಕೆ ಯಾವೊಬ್ಬ ನಾಯಕನೂ ಬಹುದೊಡ್ಡ ಮಟ್ಟದಲ್ಲಿ ಧ್ವನಿ ಎತ್ತುತ್ತಿಲ್ಲ.

‘ಮಾಸ್ ನಾಯಕತ್ವ’ ಹೊಂದಿರುವ ಯಡಿಯೂರಪ್ಪ ಅವರನ್ನು ಹೊರತುಪಡಿಸಿದರೆ, ಇನ್ನುಳಿದ ನಾಯಕರ ಮಾತು ಜನಸಾಮಾನ್ಯರಿಗೆ ತಲುಪುತ್ತಿಲ್ಲ. ಇದರೊಂದಿಗೆ ಕಾಂಗ್ರೆಸ್ ಬೊಟ್ಟು ಮಾಡಿ ತೋರಿಸಲು ಇರುವ ಎಲ್ಲ ಅಂಶಗಳನ್ನು
ಈಗಾಗಲೇ ಬಿಜೆಪಿ ನಾಯಕರು ಹೇಳಿಕೊಂಡಿ ಬಂದಿರುವುದರೊಂದಿಗೆ ಇದೀಗ ಹೊಸ ವಿಷಯಗಳ ಕೊರತೆಯಾಗುತ್ತಿದೆ ಎನ್ನುವುದು ಇತ್ತೀಚಿನ ದಿನದಲ್ಲಿ ಬಿಜೆಪಿ ನಾಯಕರ ನಡವಳಿಕೆಯಲ್ಲಿ ಸ್ಪಷ್ಟವಾಗಿ ಗೋಚಸಿರುತ್ತಿದೆ.

ಇದೀಗ ಭಾರತ್ ಜೋಡೋ ಯಾತ್ರೆಗೆ ಪ್ರತಿಯಾಗಿ ‘ಜನಸ್ಪಂದನಾ’ ಯಾತ್ರೆಯನ್ನು ಆರಂಭಿಸಲು ಬಿಜೆಪಿ ಸಜ್ಜಾಗಿದೆ. ಆದರೆ ನಾಯಕತ್ವದ ವಿಷಯದಲ್ಲಿ ಪುನಃ ಯಡಿಯೂರಪ್ಪ ಅವರನ್ನೇ ಮುನ್ನೆಲೆಗೆ ಬಿಡಬೇಕಾಗಿದೆ. ಆದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಯಡಿಯೂರಪ್ಪ ನೇತೃತ್ವದಲ್ಲಿ ಸರಕಾರ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಈಗಾಗಲೇ ಸ್ಪಷ್ಟವಾಗಿರುವು
ದರಿಂದ, ಯಡಿಯೂರಪ್ಪ ಅವರ ಹೆಸರಲ್ಲಿ ಚುನಾವಣೆ ನಡೆಸಿದರೆ, ನಿರೀಕ್ಷಿತ ಪ್ರಮಾಣದ ಯಶಸ್ಸು ಸಿಗುತ್ತದೆ ಎನ್ನುವ ಬಗ್ಗೆ ಸ್ಪಷ್ಟತೆ ನಾಯಕರಿಗಿಲ್ಲ.

ಇನ್ನು ಬಸವರಾಜ ಬೊಮ್ಮಾಯಿ, ನಳಿನ್‌ಕುಮಾರ್ ಕಟೀಲ್ ಅವರು ಎಲ್ಲ ಸಮುದಾಯದ, ಎಲ್ಲ ಸ್ತರದ ಜನರನ್ನು ಮುಟ್ಟುವ ಸಾಧ್ಯತೆ ತೀರಾ ಕಡಿಮೆಯಿದೆ. ಆದ್ದರಿಂದ ಬಿಜೆಪಿಗಿರುವ ಕೊನೆಯ ಅಸವೆಂದರೆ, ‘ಪ್ರಧಾನಿ ನರೇಂದ್ರ ಮೋದಿ ಅವರ ವೇವ್’.
ಆದರೆ ವಿಧಾನಸಭಾ ಚುನಾವಣೆಗೆ ಈ ವೇವ್ ಎಷ್ಟರ ಮಟ್ಟಿಗೆ ಸಹಾಯವಾಗುತ್ತದೆ ಎನ್ನುವ ಸ್ಪಷ್ಟ ಕಲ್ಪನೆ ಬಹುತೇಕರಿಗೆ ಸಿಗುತ್ತಿಲ್ಲ.

ಈ ಎಲ್ಲ ಸಮಸ್ಯೆಗಳ ನಡುವೆ ಬಿಜೆಪಿ ತಲೆನೋವಿಗೆ ಮತ್ತೊಂದು ಪ್ರಮುಖ ಕಾರಣವೆಂದರೆ, ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೇಮಿಸಲು ಕಾಂಗ್ರೆಸ್ ಮುಂದಾಗಿರುವುದು. ಕಾಂಗ್ರೆಸ್‌ನ ಈ ನಡೆ ರಾಷ್ಟ್ರ ಮಟ್ಟದಲ್ಲಿ ಯಾವ ರೀತಿಯಲ್ಲಿ ಲಾಭವಾಗುತ್ತದೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯುತ್ತದೆ. ಆದರೆ ಕರ್ನಾಟಕದ ಮಟ್ಟಿಗಂತೂ, ಕಾಂಗ್ರೆಸ್‌ಗೆ ಭಾರಿ ಲಾಭವಾಗಲಿದೆ ಎನ್ನುವುದು ಸ್ಪಷ್ಟ. ಅದರಲ್ಲಿಯೂ ಕಲ್ಯಾಣ ಕರ್ನಾಟಕ ಭಾಗದ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಪ್ಲಸ್ ಆಗುತ್ತದೆ. ದಿನದಿಂದ ದಿನಕ್ಕೆ ಕಾಂಗ್ರೆಸ್‌ನಿಂದ ದಲಿತ ಮತಗಳು ದೂರಾಗುತ್ತಿದೆ ಎನ್ನುವ ಮಾತುಗಳು ಕೇಳಿಬಂದ
ಕ್ಷಣದಲ್ಲಿ, ಕಾಂಗ್ರೆಸ್‌ನ ಈ ನಡೆಯಿಂದ ಪಕ್ಷಕ್ಕೆ ಲಾಭವಾಗಿದೆ. ಇದನ್ನು ಸೈಡ್‌ಲೈನ್ ಮಾಡಲು ಬಿಜೆಪಿ ನಾಯಕರು ಪರಿಶಿಷ್ಟ ಜಾತಿ, ಪಂಗಡದವರ ಮೀಸಲನ್ನು ಹೆಚ್ಚಳ ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.

ಆದರೆ ಬಿಜೆಪಿ ಈ ಮೈಲೇಜ್ ಪಡೆಯಬಾರದು ಎನ್ನುವ ಕಾರಣಕ್ಕಾಗಿಯೇ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ‘ನಮ್ಮ ಸರಕಾರದ ಅವಽಯಲ್ಲಿಯೇ ನಾಗಮೋಹನ್ ದಾಸ್ ಸಮಿತಿಯನ್ನು ರಚಿಸಿದ್ದೇವು’ ಎನ್ನುವ ಮೂಲಕ ಈ ಪ್ರಕ್ರಿಯೆಗೆ ಕಾಂಗ್ರೆಸ್ ಚಾಲನೆ ನೀಡಿತ್ತು ಎನ್ನುವ ಸಂದೇಶವನ್ನು ರವಾನಿಸುತ್ತಿದ್ದಾರೆ. ಆದರೆ ಈ ಎಲ್ಲಕ್ಕಿಂತ ಮುಖ್ಯವಾಗಿ ಮೀಸಲು ಹೆಚ್ಚಳದ ಸರಕಾರದ ತೀರ್ಮಾನ ಸುಪ್ರೀಂ ಕೋರ್ಟ್‌ನಲ್ಲಿ ನಿಲ್ಲುವುದೇ ಎನ್ನುವುದೇ ಕಾದು ನೋಡಬೇಕಿದೆ.

ಈ ಎಲ್ಲ ಕಾರಣಗಳಿಂದ ಇಡೀ ದೇಶದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗುತ್ತಿದ್ದರೂ, ಕರ್ನಾಟಕದ ಮಟ್ಟಿಗೆ ಬಿಜೆಪಿಯೊಂದಿಗೆ ಸಮಬಲ ಸಾಽಸುವಷ್ಟು ‘ಶಕ್ತಿ’ಯನ್ನು ಕಾಂಗ್ರೆಸ್ ದಿನದಿಂದ ದಿನಕ್ಕೆ ಪಡೆದುಕೊಳ್ಳುತ್ತಿದೆ. ಆದ್ದರಿಂದಲೇ ಭಾರತ್ ಜೋಡೋ ಯಾತ್ರೆಯ ಆರಂಭ ದಿಂದಲೂ ಬಿಜೆಪಿಗೆ ಹಿನ್ನಡೆಯ ಅನುಭವವಾಗುತ್ತಿದೆ. ಈಗ ಭಾರತ್ ಜೋಡೋಗೆ ಪ್ರತಿಯಾಗಿ ಬಿಜೆಪಿ ರಾಜ್ಯದ ೨೨೪ ಕ್ಷೇತ್ರದಲ್ಲಿಯೂ ಸಂಚರಿಸುವ ‘ಸಂಕಲ್ಪ ಯಾತ್ರೆ’ಗೆ ಸಜ್ಜಾಗಿದೆ. ಸಂಕಲ್ಪ ಯಾತ್ರೆ ಯಾವ ರೀತಿ ಸಾಗಲಿದೆ
ಎನ್ನುವುದನ್ನು ಕಾದುನೋಡಬೇಕಿದೆ.