Monday, 16th September 2024

2-3 ಕುಟುಂಬ- ಜಾಯಿಂಟ್ ಫ್ಯಾಮಿಲಿ ಅದಕ್ಕೂ ಜಾಸ್ತಿ ಇದ್ರೆ – ಜಯಿಂಟ್ ಫ್ಯಾಮಿಲಿ

ತುಂಟರಗಾಳಿ

ಸಿನಿಗನ್ನಡ

ಸದ್ಯಕ್ಕೆ ನಮ್ಮ ರಾಜ್ಯದ ಅತಿ ದೊಡ್ಡ ಸಮಸ್ಯೆ ಯಾವುದು ಗೊತ್ತಾ? ಅದು ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಅವರ ನಡುವೆ ಇರೋ ಅಪವಿತ್ರ ಮೈತ್ರಿ. ಮೊನ್ನೆ ಮೊನ್ನೆ ಚಂದ್ರಶೇಖರ್ ಗುರೂಜಿ ಅವರ ಕೊಲೆ ಆಗುವವರೆಗೂ ಪವಿತ್ರಾ ಮತ್ತು ನರೇಶ್
ಅವರ ಸುದ್ದಿಯೇ ಕೆಲವು ಮಾಧ್ಯಮಗಳಿಗೆ ರೋಟಿ ಕಪಡಾ ಔರ್ ಮಕಾನ್ ಆಗಿತ್ತು.

ತೀರಾ, ನರೇಶ್ ಮತ್ತು ಪವಿತ್ರಾ ಉಳಿದುಕೊಂಡಿದ್ದ ಹೊಟೇಲ್ ರೂಮಿನ ಹೊರಗೆ ಹೋಗಿ ಕ್ಯಾಮೆರಾ ಇಡುವಷ್ಟರ ಮಟ್ಟಿಗೆ ನಮ್ಮ ಮಾಧ್ಯಮಗಳು ಅವರ ಹಿಂದೆ ಬಿದ್ದಿದ್ದವು. ಮೊದಲನೆಯದಾಗಿ, ಯಾರು ಯಾರ ಜತೆ ಸಂಬಂಧ ಇಟ್ಕೊಂಡಿದ್ರೂ ಅದು ಅಪರಾಧ ಅಲ್ಲ ಅಂತ ಕಾನೂನೇ ಇದೆ. ಆದರೆ ಹೇಳಿ ಕೇಳಿ ಇದು ಸೆಲೆಬ್ರಿಟಿಗಳ ವಿಷಯ. ಅದರಲ್ಲೂ ಹೆಣ್ಣುಮಗಳ ವಿಷಯ. ಆದ್ರೆ, ತೀರಾ ಅವರ ಬೆಡ್ರೂಮ್ ಒಳಗೆ ಕ್ಯಾಮೆರಾ ಇಡೋ ದೊಂದು ಬಾಕಿ ಎನ್ನುವ ಮಟ್ಟಕ್ಕೆ ಇವರಿಗೆ ಸ್ವಾತಂತ್ರ್ಯ ಕೊಟ್ಟಿದ್ದು ಯಾರು ಅನ್ನೋ ಮಾತಿಗಂತೂ ಉತ್ತರ ಇಲ್ಲ.

ಅಲ್ಲದೆ ಪವಿತ್ರಾ ಲೋಕೇಶ್, ನಾನು ಸುಚೇಂದ್ರ ಪ್ರಸಾದ್ ಅವರ ಜತೆ ಲಿವ್ ಇನ್ ರಿಲೇಶನ್‌ನಲ್ಲಿ ಇದ್ದಿದ್ದು, ನನಗೂ ಅವರಿಗೂ ಮದುವೆ ಆಗಿಲ್ಲ ಎಂದು ಹೇಳಿದ್ದಾರೆ. ಇನ್ನು ಪವಿತ್ರಾ, ನರೇಶ್ ಅವರನ್ನು ಇನ್ನೂ ಮದುವೆ ಆಗಿಲ್ಲ ಕೂಡ. ಅತ್ತ, ನರೇಶ್ ಎಂಬ ದುಡ್ಡಿನ ಗಣಿ, ತಾನು ರಾಖಿ ಕಟ್ಟಿ ಆದ್ರೂ ಪವಿತ್ರ ಅವರನ್ನು ತನ್ನ ಮನೆಯ ಉಳಿಸಿಕೊಳ್ತೀನಿ ಅಂತಾರೆ. ಇತ್ತ ಪವಿತ್ರಾ ಲೋಕೇಶ್ ಕೂಡಾ ಅವರ ಹಿಂದೆ ಬಿದ್ದಿರೋದು ಆತನ ಬಳಿ ಇರೋ ಹಣ ನೋಡಿ ಅಂತ ಎಲ್ಲರಿಗೂ ಗೊತ್ತು. ಜತೆಗೆ ನರೇಶ್ ಹೆಂಡತಿ ಇಷ್ಟು ದಿನ ಅವರಿಂದ ದೂರ ಇದ್ದು ಈಗ ಗಂಡನ ಮೇಲೆ ಪ್ರೀತಿ ಇದೆ ಅನ್ನೋ ಥರ ಆಡ್ತಿರೋದೂ ಕೂಡ ದುಡ್ಡಿಗಾಗಿ ಅನ್ನೋದೂ ಸತ್ಯ.

ಇಲ್ಲಿ ಎಲ್ಲರೂ ಕಳ್ಳರೇ. ಆದರೆ, ಅದು ಅವರವರ ವೈಯಕ್ತಿಕ ವಿಷಯ. ಇಲ್ಲಿ ಯಾರೂ ಕಾನೂನು ಪ್ರಕಾರ ಇನ್ನೂ ತಪ್ಪು ಮಾಡಿಲ್ಲ. ಆದರೂ, ಜೀವನದಲ್ಲಿ ತಪ್ಪು ಹೆಜ್ಜೆ ಇಟ್ಟಿದ್ದಾರೆ ಅನ್ನೋ ಕಾರಣಕ್ಕೆ, ಪವಿತ್ರಾ ಅವರ ಮೇಲೆ ಗೂಬೆ ಕೂರಿಸಲು ಬಹಳಷ್ಟು ಜನ ತುದಿಗಾಲಲ್ಲಿ ನಿಂತಿ ರೋದಂತೂ ಸತ್ಯ. ಆದ್ರೆ, ಸುದ್ದಿ ವಿಷಯಕ್ಕೆ ಬಂದ್ರೆ, ಒಟ್ನಲ್ಲಿ ಚಂದ್ರಶೇಖರ್ ಸ್ವಾಮಿ ತಾವು ಪ್ರಾಣ ಬಿಟ್ಟು, ಪವಿತ್ರಾ ಲೋಕೇಶ್ ಪ್ರಾಣ ತಿಂತಾ ಇದ್ದ ಕೆಲವರಿಂದ ಅವರನ್ನು ಉಳಿಸಿದ್ದಾರೆ ಅನ್ನೋ ಮಾತಂತೂ ಅಲ್ಮೋ ಸತ್ಯ.

ಲೂಸ್ ಟಾಕ್
ರೌಡಿ ರಂಗಣ್ಣ (ಕಾಲ್ಪನಿಕ ಸಂದರ್ಶನ)
? ಏನು ರೌಡಿ ರಂಗಣ್ಣೋರೆ, ಬರ್ಟ್ ಡೇ ಭಾರೀ ಜೋರಾಗಿ ಸೆಲೆಬ್ರೇಟ್ ಮಾಡ್ಕೊತಾ ಇದ್ದೀರಾ?
-ಹೌದೌದು, ಅದರ ಜತೆಗೆ, ಇನ್ಮೇಲೆ ನನ್ನ ಹುಟ್ಟುಹಬ್ಬನ ‘ವೈಲೆಂಟೈ ಡೇ’ ಅಂತ ಸೆಲೆಬ್ರೇಟ್ ಮಾಡ್ಬೇಕು ಅಂತ ಮುಖ್ಯಮಂತ್ರಿಗಳಿಗೆ ಮನವಿ ಕೊಟ್ಟವ್ರೆ ನಮ್ಮುಡುಗ್ರು.

? ರೀ, ಈ ರೌಡಿಸಂನ ನೀವೇನ್ ಸರಕಾರಿ ನೌಕರಿ ಅಂದ್ಕೊಂಡಿದ್ದೀರಾ. ಇಷ್ಟೊಂದ್ ವೈಲೆಂಟ್ ಆಗಿದ್ರೆ, ಯಾವಾಗ ಪೊಲೀಸ್ನೋರು ನಿಮಗೆ ಲೈಫಿಂದಲೇ ವಾಲೆಂಟರಿ ರಿಟೈರ್ಮೆಂಟ್ ಕೊಡ್ತಾರೋ ಗೊತ್ತಾಗಲ್ಲ.
-ಅಯ್ಯೋ, ಅವರಿಗೆ ವಾರೆಂಟ್ ಇಲ್ದೆ ನಮ್ಮನ್ನ ಅರೆ ಮಾಡೋಕೇ ಆಗಲ್ಲ, ನೀವ್ ಹೇಳ್ದಂಗೆ ನಮ್ಗೆ ಅಷ್ಟು ಸುಲಭವಾಗಿ ರೆ ಇನ್ ಪೀಸ್ ಎಲ್ಲ ಹೇಳೋಕಾಗಲ್ಲ, ಅರೆ ಮಾಡಿ ಜೈಲಿಗ್ ಹಾಕಿದ್ರೂ, ಒಳಗೂ ಆರಾಮಾಗಿ ರೆ ತಗೋತೀವಿ.

? ಅದಿರ್ಲಿ, ನಿಯತ್ತಾಗಿ ಬದುಕೋಕೆ ಏನ್ ಕಷ್ಟ ನಿಮಗೆ?
-ಹಲೋ, ಯಾಕ್ರೀ, ನಿಯತ್ತಾಗಿ ಬದುಕೋಕೆ, ನಾವೇನ್ ನಿಮ್ ಕಣ್ಣಿಗೆ ನಾಯಿಗಳ ಥರ ಕಾಣ್ತೀದೀವಾ?

? ಥೋ, ಹಂಗಲ್ಲ, ಈ ರೌಡಿಸಂ ಮಾಡೋದೇನ್ ದೊಡ್ಡ ಕೆಲಸ ಅಂದ್ಕೊಂಡಿದ್ದೀರಾ ಅಂತ ಕೇಳಿದ್ದು?
-ಮತ್ತೆ, ಇನ್ನೇನು, ಈ ಕೆಲ್ಸ ಮಾಡೋಕೂ ಚಾಕು’ ಚಕ್ಯತೆ ಇರಬೇಕು ಗೊತ್ತಾ.

?ಅಲ್ಲ ಕಣಪ್ಪಾ, ಎಲ್ಲರ ಹತ್ರ ಉಗಿಸ್ಕೊಂಡು ಬಾಳೋ ಈ ಥರ ಬಾಳು ಬೇಕಾ ನಿಮಗೆ?
-ಹಲೋ, ಯಾಕ್ರೀ, ನಾವೂ ಈ ಸಮಾಜದಲ್ಲಿ ‘ತಲೆ ಎತ್ಕೊಂಡೇ ಬದುಕ್ತಾ ಇರೋದು’ ಗೊತ್ತಾ ?

ನೆಟ್ ಪಿಕ್ಸ್
ಖೇಮು ಕಾಲೇಜಲ್ಲಿ ಓದುವಾಗ ಒಂದು ದಿನ ಲೈಬ್ರೆರಿಗೆ ಅಂತ ಹೋದ. ಅಲ್ಲಿ ತುಂಬಾ ಜನ ಇದ್ರು. ಎಲ್ಲರೂ ಕಾಮ್ ಆಗಿ ಕೂತು ಓದ್ತಾ ಇದ್ರು. ಖೇಮು ಕೂತ್ಕೊಳ್ಳೋಕೆ ಜಾಗ ಹುಡುಕ್ತಾ ಇದ್ದ. ಆದ್ರೆ ಎಲ್ಲೂ ಜಾಗ ಇರಲಿಲ್ಲ. ತುಂಬಾ ಹುಡುಕಿದ ಮೇಲೆ ಅಲ್ಲಿ ಒಂದು ಕಡೆ ಒಂದು ಸುಂದರವಾದ ಹುಡುಗಿ ಕೂತಿದ್ದು ಕಾಣಿಸಿತು. ಅವಳ ಪಕ್ಕದಲ್ಲಿ ಒಂದು ಜಾಗ ಖಾಲಿ ಇತ್ತು. ಆದರೆ ಖೇಮು ಸ್ವಲ್ಪ ನಾಚಿಕೆ ಸ್ವಭಾವದ ಹುಡುಗ. ಅವನಿಗೆ ಹುಡುಗಿಯ ಪಕ್ಕದಲ್ಲಿ ಹೋಗಿ ಕೂರೋದು ಮುಜುಗರ ಅನ್ನಿಸಿತು.

ಆದರೆ ಬೇರೆ ದಾರಿ ಇರಲಿಲ್ಲ. ಸ್ವಲ್ಪ ಹೊತ್ತು ಯೋಚನೆ ಮಾಡಿ ನಂತರ ಧೈರ್ಯ ಮಾಡಿ ಆಕೆಯ ಬಳಿ ಹೋದ. ಎಕ್ಸ್ ಕ್ಯೂಸ್ ಮೀ ಅಂತ ಆಕೆಯನ್ನು ಮಾತನಾಡಿಸಿ, ಮೆಲುದನಿಯಲ್ಲಿ, ಲೈಬ್ರೆರಿಯಲ್ಲಿ ಬೇರೆ ಎಲ್ಲೂ ಜಾಗ ಇಲ್ಲ. ಇಫ್ ಯೂ ಡೋಂಟ್ ಮೈಂಡ್, ನಾನು ನಿಮ್ಮ
ಪಕ್ಕದಲ್ಲಿ ಕೂತ್ಕೋಬಹುದಾ? ಅಂತ ಕೇಳಿದ. ಅವಳು ಒಂದು ಕ್ಷಣ ಇವನ ಮುಖ ನೋಡಿ, ನಂತರ ಲೈಬ್ರೆರಿಯಲ್ಲಿರುವ ಎಲ್ಲರನ್ನೂ ಒಮ್ಮೆ ನೋಡಿ ಎದ್ದು ನಿಂತು ಎಲ್ಲರಿಗೂ ಕೇಳಿಸುವಂತೆ ಹೇಳಿದಳು ಎಷ್ಟು ಧೈರ್ಯನಿಂಗೆ, ಎಲ್ಲರ ಮುಂದೆ, ನಿನ್ ನತೆ ಒಂದ್ ನೈಟ್ ಮಲಗ ಬೇಕು ಅಂತ ಕೇಳ್ತೀಯಾ?. ಖೇಮುಗೆ ಶಾಕ್ ಆಯ್ತು. ಗಾಬರಿಯಾದ.

ಲೈಬ್ರೆರಿಯಲ್ಲಿದ್ದ ಎಲ್ಲರೂ ಇವನನ್ನೇ ಅಸಹ್ಯವಾಗಿ ನೋಡೋಕೆ ಶುರು ಮಾಡಿದ್ರು. ಖೇಮುಗೆ ನಾಚಿಕೆ ಆಗಿ, ಒಂದು ಬುಕ್‌ಸ್ಟ್ಯಾಂಡ್ ಬಳಿ ಹೋಗಿ ಒಂದು ಪುಸ್ತಕ ತೆಗೆದು ಮುಖ ಮುಚ್ಚಿಕೊಂಡ. ಸ್ವಲ್ಪ ಹೊತ್ತಾದ ಮೇಲೆ ಆ ಹುಡುಗಿ ಖೇಮು ಹತ್ರ ಬಂದು, ಸಾರಿ, ನಾನೊಬ್ಬ ಸೈಕಾಲಜಿ ಸ್ಟೂಡೆಂಟ್. ಈ ಥರ ಸಂದರ್ಭದಲ್ಲಿ ಗಂಡಸರು ಹೇಗೆ ವರ್ತಿಸ್ತಾರೆ ಅಂತ ನೋಡಬೇಕಿತ್ತು. ಅದಕ್ಕೆ ಹಾಗೆ ಮಾಡಿದೆ ಅಂದಳು. ಅದಕ್ಕೆ ಖೇಮು ಅಲ್ಲಿದ್ದ ಎಲ್ಲರಿಗೂ ಕೇಳುವಂತೆ ಜೋರಾಗಿ ಹೇಳಿದ ಏನು? ಒಂದ್ ನೈಟಿಗೆ 10000 ರುಪಾಯಿನಾ, ನೀನೇನು ತ್ರಿಪುರ ಸುಂದರಿ ಅಂತ ತಿಳ್ಕೊಂಡಿದ್ದೀಯಾ?. ಮತ್ತೆ ಅಲ್ಲಿದ್ದ ಎಲ್ಲರೂ ಇನ್ನಷ್ಟು ಆಶ್ಚರ್ಯದಿಂದ ಆ ಹುಡುಗಿಯನ್ನು ನೋಡಿದರು. ಹುಡುಗಿ ಗಾಬರಿಯಾಗಿ ನಿಂತಿದ್ದು ನೋಡಿ ಖೇಮು ಹೇಳಿದ, ನಾನು ಲಾ ಸ್ಟೂಡೆಂಟ್, ಒಬ್ಬರು ಹಾಕಿದ ಕೇಸನ್ನ ಅವರಿಗೆ ಉಲ್ಟಾ ತಿರುಗಿಸೋದು ಹೆಂಗೆ ಅಂತ ನನಗೆ ಗೊತ್ತು.

ಲೈನ್ ಮ್ಯಾನ್

? ಕಾಡುಪಾಪಗಳ ಫೋಟೋ ತೆಗೆಯೋನು, ವೈಲ್ಡ್ ಲೈಫ್ ಫೋಟೋಗ್ರಾಫರ್
-ಮನೆಯಲ್ಲಿ ಪಾಪುಗಳ ಫೋಟೋ ತೆಗೆಯೋನು, ಚೈಲ್ಡ ಲೈಫ್ ಫೋಟೋಗ್ರಾಫರ್
? ಫೋಟೋಗ್ರಾಫರ್ ಒಬ್ಬ ಸತ್ತರೆ, ನ್ಯೂಸ್ ಹೆಡ್ ಲೈನ್

ಫೋಟೋಗ್ರಾಫರ್ ಫಿನಿಷ್

? ತಡವಾದ ಜ್ಞಾನೋದಯ
-ಅಯ್ಯೋ, ನಿನ್ನೆ ವರ್ಲ್ಡ್ ಫೋಟೋಗ್ರಾಫ್ ಡೇ ಇತ್ತಂತೆ, ನಂಗೆ ಪುಷ್ ಆಗ್ಲಿಲ್ಲ.
? ಸಂಸಾರಗಳ ಗುಟ್ಟು
-ಒಂದ್ ಸಂಸಾರ ಇದ್ರೆ – family.
-೨-೩ ಸಂಸಾರ ಇದ್ರೆ – joint family.
-ಅದಕ್ಕೂ ಜಾಸ್ತಿ ಇದ್ರೆ?- Giant family
? ತುಂಬಾ ಸ್ವಚ್ಛವಾಗಿರೋ ಖಾಸಗಿ ಆಸ್ಪತ್ರೆ
-Celan- ik
? ಗೊಂಬೆ ಆಡ್ಸೋಕೆ ಇರಬೇಕಾದ ಪ್ರಮುಖ ಅಂಶ
-‘ಕೀ’ ಫ್ಯಾಕ್ಟರ್
? ಜಗತ್ತಿನ ಅತಿ ಕಷ್ಟದ ಕೆಲಸ
-ಚೀನಾದಲ್ಲಿ ಫೇಸ್ ರೀಡಿಂಗ್ ಕೆಲಸ ಮಾಡೋದು
? ಇನ್ನೊಬ್ಬರನ್ನ ತುಳಿದು ಚೆನ್ನಾಗಿ ಬದುಕ್ತಾ ಇರೋರನ್ನ ನೋಡಿ ಹುಟ್ಟಿದ ಗಾದೆ
-ತುಳಿದವನು ಬಾಳಿಯಾನು
? ಮದುವೆ ಆದ್ಮೇಲೆ ಲೈಫ್ ತುಂಬಾ ಚೆನ್ನಾಗಿರುತ್ತೆ ಅನ್ನೋ ಬ್ಯಾಚುಲರ್ ನಂಬಿಕೆ
-ತಾಳಿ ಕಟ್ಟಿದವನು ಬಾಳಿಯಾನು
? ಬೈಜೂಸ್ ನಂತಹ ಎಜ್ಯುಕೇಶನ್ ಆಪ್ ಗಳ ಕಾಲ
-‘ಕಲಿ’ಯುಗ