Thursday, 12th December 2024

ಹಿಮದ ಮೇಲೆ ಜಾರುಮೆಟ್ಟುಗಳ ಜೋಕಾಲಿ…

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

mehandale100@gmail.com

ಅಲ್ಲಿ ನಮ್ಮ ದೇಹ ಬಿದ್ದು ಹೋಗದಂತೆ ಬ್ಯಾಲ ಮಾಡುವ ಒಂದು ಸಣ್ಣ ಟ್ರಿಕ್ಕು ನಮ್ಮನ್ನು ಅರವತ್ತು ಕಿ.ಮೀ.ಗೂ ಹೆಚ್ಚು ವೇಗದಿಂದ ಚಲಿಸಲು
ಸಹಾಯ ಮಾಡುತ್ತದೆ.

ಅಗಾಧ ಎತ್ತರದ ಪರ್ವತ ಪ್ರದೇಶಗಳನ್ನು ಸರಿಯಾಗಿ ಗಮನಿಸಿಕೊಂಡು ಇಳಿದರೆ ನಿಮಿಷಾರ್ಧದೊಳಗೆ ಅನಾ ಮತ್ತು ಇನ್ನೂರು ಅಡಿಗೂ ಕೆಳಗೆ ಜಾರಿಸುತ್ತದೆ. ಅಚಾನಕ್ ಆಗಿ ತೆಗೆದುಕೊಳ್ಳುವ ತಿರುವು ರೊಂಯ್ಯನೆ ಸುರುಳಿ ಸುತ್ತಿಸಿದರೆ ಅದರ ಎದುರಿಗೆ ಸಣ್ಣ ಏರಿನ ಪಾತಳಿಯೇನಾದರೂ ಇದಿರಾದರೆ ನಮ್ಮನ್ನು ಎತ್ತಿ ಬಿಸಾಡುತ್ತದೆ ಹತ್ತಾರು ಅಡಿ ದೂರ. ಹಾಗೆ ಗಾಳಿಯಗರಿ ಬೀಳುವಾಗ ಅರೆ ಸೆಕೆಂಡಿನಲ್ಲಿ ಹೃದಯ ಬಾಯಿಗೆ ಬಂದಿರುತ್ತದೆ.

ಮತ್ತೆ ಎದ್ದು ನಿಲ್ಲುವ ಛಾತಿ ಇದ್ದಲ್ಲಿ ಮತ್ತೊಮ್ಮೆ ಮೋಜು ಇಲ್ಲವಾದಲ್ಲಿ ಹಿಂದಿನವರೆಲ್ಲ ಬರುವವರೆಗೆ ಇಷ್ಟಿಷ್ಟೆ ಹಿಮದಲ್ಲಿ ಹುಗಿಯುತ್ತಾ, ಆಗೀಗ ಜಾರುತ್ತಾ ಕೊಸರಾಡುತ್ತಿರಬೇಕು. ಮುಂದಿನ ಹಂತದ ಸಮತಟ್ಟಾದ ಪ್ರದೇಶದತ್ತ ನಿಧಾನಕ್ಕೆ ಕಾಲಿಕ್ಕಬೇಕು. ಕಾರಣ ಹಾಗೆ ಜಾರಿದಾಗ ಮತ್ತು ರಭಸದಿಂದ ಕೆಳಕ್ಕೆ ಜಾರುವ ಭರದಲ್ಲಿ ನೂರಾರು ಅಡಿ ಆಚೀಚೆ ಆಗಿ ಹೋಗಿರುತ್ತೇವೆ ನಿಗದಿತ ದಿಕ್ಕಿನ ಹೊರತಾಗಿ.

ಎದ್ದ ಮೇಲೆ ಮತ್ತದೆ ರೊಂಯ್ಯನೆ ಜಾರುವ ಉಮೇದಿ. ಅಷ್ಟು ದೂರದಲ್ಲಿ ಇದ್ದಕ್ಕಿದ್ದಂತೆ ಪರ್ವತದ ಮುಖದಿಂದ ಉರುಳುವ ಸುರುಳಿ ಹಿಮದ ಹುಡಿಗಳ ಮಂಜಿನ ಲೋಕ. ಅಷ್ಟೇ ವೇಗದಿಂದ ಸರಿದು ಸುರಕ್ಷಿತ ಪ್ರದೇಶ ತಲುಪಿ ಅದರ ರುದ್ರ ರಮಣಿಯತೆಯನ್ನು ಕಣ್ತುಂಬಿಕೊಳ್ಳುತ್ತಾ ವೇಗ ಕಡಿಮೆಯಾಗು ವವರೆಗೆ ಕಾಯ್ದು ನಾವು ಸುರಕ್ಷಿತ ಎನ್ನಿಸುತ್ತಿದ್ದಂತೆ ಮತ್ತೆ ಕಾಲುಗಳಿಗೆ ಗಾಳಿಯ ವೇಗ. ಅದು ಜಾರು ಮೆಟ್ಟುಗಳ ಲೋಕ. ವಿದೇಶದಲ್ಲಿ ಅದನ್ನು ಕಲಿಸಲೇ ಎರಡ್ಮೂರು ವಾರದ ಕ್ಲಾಸು, ಎರಡು ತಾಸಿಗೆ ಹತ್ತಾರು ಸಾವಿರ ರುಪಾಯಿ ಮತ್ತು ವಾರಕ್ಕೆರಡು ಬಾರಿ ಎರಡು ತಾಸು ಮಾತ್ರ ಅವಕಾಶ.

ನಮ್ಮಲ್ಲಿ ಅಗಾಧ ಕಣಿವೆಯ ನೂರಾರು ಕಿ.ಮೀ. ವಿಸ್ತಾರ ಕೇಳುವವರೇ ಇಲ್ಲ. ಪೂರ್ತಿ ದಿನಕ್ಕೆ ಐನೂರು ಖರ್ಚು ಮಾಡಿದರೂ ಸಾಕು. ಅದುವೇ ಸ್ಕಿಯಿಂಗ್.
ಹಿಮಲೋಕದ ಅಪಾಯಕಾರಿ ಆದರೆ ರೋಮಾಂಚಕಾರಿ ಆಟ. ಒಮ್ಮೆ ಕಾಲಿಗೂ ದೇಹಕ್ಕೂ ಸಮತೋಲನ ಅಭ್ಯಾಸವಾದಲ್ಲಿ ಅದರ ಮಜ ಮತ್ತು ಮುದ ಎರಡೂ ಬೇರೆ. ಆಮೇಲೆ ನೀವುಂಟು ನಿಮ್ಮ ಜಾರು ಮೆಟ್ಟುಗಳುಂಟು. ಅನಿರೀಕ್ಷಿತವಾಗಿ ಇದ್ದಕಿದ್ದಂತೆ ಈ ಬಾರಿ ಕಾಶ್ಮೀರ ಕಣಿವೆಯ ಖಿಲೋಂಗ್ನಲ್ಲಿ
ಸ್ಕಿಯಿಂಗ್ ಮಾಡುವ ಉಮೇದಿಗೆ ಮಿತ್ರವೃಂದ ಕೂಡಾ ಇಂಬು ನೀಡುತ್ತಿದ್ದಂತೆ ತೀರ ಇಪ್ಪತ್ನಾಲ್ಕು ಗಂಟೆಯೊಳಗೆ ಕಾಶ್ಮೀರ ಕಣಿವೆಯ ಶ್ರೀನಗರ ಅಲ್ಲಿಂದ ಗುಲ್‌ಮಾರ್ಗ ಅಲ್ಲಿಂದ ಮತ್ತೂ ಮುಂದಕ್ಕೆ ಗೊಂಡೊಲಾ ಮೂಲಕ ಏರಿಳಿದು ಅರ್ಧದಿನದ ಚಾರಣ ಮಾಡಿ 14000 ಅಡಿ ಎತ್ತರಕ್ಕೆ ಏರುವ ಯೋಜನೆ ರೂಪಿಸುವಾಗ ಒಂದೇ ದಿನದಲ್ಲಿ ಇದೆಲ್ಲ ಸಾಧ್ಯವಾ ಎನ್ನಿಸಿದ್ದು ಇತ್ತು.

ಅದರಲ್ಲೂ ಮೂರು ಮೂರು ವಿಮಾನ ಸಮಯಕ್ಕೆ ಸರಿಯಾಗಿ ಸಿಕ್ಕು ದಾರಿ ಕ್ರಮಿಸಬೇಕಿತ್ತು. ಅದಕ್ಕಾಗಿ ಅಖಂಡ ಮೂರು ಸಾವಿರ ಕಿ.ಮೀ ದೂರ
ಪ್ರಯಾಣ ನಂತರ ಎರಡ್ಮೂರು ತಾಸು ಚಾರಣ, ಅದರಲ್ಲೂ ಗಂಟೆಗೆ ಇಪ್ಪತ್ತೇ ಕಿ.ಮೀ. ಕ್ರಮಿಸುವ ದಾರಿಯಲ್ಲಿ ಏರುವ ವಾಹನ ಹಿಂದಕ್ಕೆ ಚಲಿಸದಂತೆ ಗಾಲಿಗಳಿಗೆ ಎರಡಿಂಚಿನ ಚೈನ್ ಬಿಗಿದು ನಿಧಾನಕ್ಕೆ ಮೇಲೆರುವ ವಾಹನದಲ್ಲಿ ಕ್ರಮಿಸಬೇಕಾದ ಗತಿಗೆ ಇದು ಸಾಧ್ಯವೇ ಅನ್ನಿಸಿದ್ದು ಸುಳ್ಳಲ್ಲ. ನಮ್ಮ ಸಮಯವೆ ಇದರ ಮುಗಿದು ಹೋಗುತ್ತದಾ ಎನ್ನಿಸಿದ್ದು ಇತ್ತು.

ಆದರೆ ಆ ಕ್ಷಣಕ್ಕೆ ಲಭ್ಯವಾದ ವಾಯುಯಾನ ಸೌಲಭ್ಯ ನಮ್ಮ ಮರುದಿನದ ಮಧ್ಯಾಹ್ನ ಎರಡು ಗಂಟೆಗೂ ಮೊದಲೇ ಶ್ರೀನಗರ ನಿಲ್ದಾಣ ತಲುಪಿಸಿತ್ತು. ಕೆಳಗಿಳಿಯುತ್ತಿದ್ದಂತೆ ಅಡರಿದ ಭಯಂಕರ ಚಳಿಯ ಗಾಳಿ ಎರಡೂ ನಿಮಿಷ ಕೂಡಾ ನಿಲ್ಲದಂತೆ ಮಾಡಿತ್ತು. ಉಷ್ಣಾಂಶ ಎರಡು ಮೂರ ಆಸುಪಾಸು. ಅಲ್ಲಿಂದ ಗುಲ್‌ಮಾರ್ಗ ತಲುಪುವ ವೇಳೆಗೆ ಕೈ ಕಾಲುಗಳ ಬೆರಳು ಕಳಚಿ ಬೀಳುವಂತೆ ಚಳಿಗೆ ಸೆಟೆದುಕೊಂಡಿದ್ದವು. ಇದನ್ನು ಊಹಿಸಿದ್ದಂತೆ ಸ್ಥಳೀಯ ಗೈಡ್ ಕಮ್ ಆಪರೇಟರ್ ನಮಗಾಗಿ ಕಂಗಡಿ (ಆವಿತಿಟ್ಟುಕೊಳ್ಳುವ ಕೆಂಡದ ಬುಟ್ಟಿಗಳು) ತಂದಿರಿಸಿದ್ದ. ಅದರಿಂದಾಗಿ ಕೊಂಚ ಸುಧಾರಿಸಿಕೊಂಡು ರಾತ್ರಿಯ ಎಂಟಾಗುವ ಮೊದಲೇ ಉಷ್ಣಾಂಶ ಮೈನಸ್‌ಗಿಳಿಯುತ್ತಿದ್ದಂತೆ ಮರುದಿನದ ತಯಾರಿ, ಅದಕ್ಕಾಗಿ ಗೈಡನ್ನು ಮಾತಾಡಿಸಿ, ಸರಂಜಾಮು
ಸಿದ್ಧಪಡಿಸಿಕೊಂಡು ಕೂರಲ್ಲಿ ನಿಂತಲ್ಲಿ ಗ್ಯಾಸ್ ಹೀಟರ್‌ಗಳು ಮಾತ್ರವಲ್ಲ ಮಲಗುವಾಗಲೂ ವಿದ್ಯುತ್ ಹಾಸಿಗೆಯ ಮೊರೆ ಹೋಗಬೇಕಾಯಿತು.

ಬೆಳಿಗ್ಗೆ ನಾಲ್ಕೂವರೆಗೆ ಬೆಳ್ಳಗೆ ಹರಡಿಕೊಂಡ ಬೆಳಕಿಗಿಂತಲೂ ರಾತ್ರಿ ಸುರಿದಿದ್ದ ಅರಳೆಗಿಂತಲೂ ಮಿಗಿಲಾದ ಹಿಮದ ಪದರದಲ್ಲಿ ಕಾಲಿಟ್ಟರೆ ಅನಾಮತ್ತು ನಾಲ್ಕಡಿಯ ಕೆಳಗೆ ಹುಗಿದು ಹೋಗುವ ಅದ್ಭುತ ಮಧ್ಯೆ ಚಾರಣಕ್ಕೆಳಸಿ ಖಿಲೋಂಗ್ಪಾಸ್ ತಲುಪಿದಾಗ ಉಸಿರು ಮೇಲಕ್ಕೇರುತ್ತಿತ್ತು. ತಲಾ ಐದೂವರೆ ಕೆ.ಜಿ ಬೂಟುಗಳು, ಅದಕ್ಕೂ ಭಾರದ ಜಾರುಮೆಟ್ಟುಗಳನ್ನು (ಸ್ಕೀಯಿಂಗ್ ಪ್ಯಾಡ್) ಬಿಗಿದುಕೊಂಡು, ಹಿಮದ ಹುಡಿ ಕಣ್ಣಿಗೆ ಎಗರುವ ಮತ್ತು ಅತಿ ಬಿಳುಪಿನ ಬಿಸಿಲಿನ ಪ್ರತಿಫಲನಕ್ಕೆ ಕಣ್ಣಿಗಾಗುವ ಅಪಾಯವನ್ನು ತಪ್ಪಿಸಲು ಕಪ್ಪುಕನ್ನಡಗಳೊಂದಿಗೆ ಚಂದ್ರಯಾನದವರಂತೆ ಕೈಗವಸು, ಪೂರ್ತಿ ಮೈಗೆ ಎಲ್ಲಿ ಬಿದ್ದರೂ ಒದ್ದೆಯಾಗದಂತಹ ಶೀತ ನಿರೋಧಕ ಉಡುಪು ಧರಿಸಿ ರಂಗಕ್ಕಿಳಿಯುವ ಹೊತ್ತಿಗೆ ಎಬ್ಬಿಸಿ ನಿಲ್ಲಸಲೇ ಇಬ್ಬರು ಬೇಕು ಎನ್ನಿಸುವಷ್ಟು ಭಾರ ಭಾರ.

ಅದು ನಿಜ ಕೂಡಾ. ತಪ್ಪಿ ಬಿದ್ದರೆ ಎದ್ದೇಳಲು ಸೂಕ್ತ ಟೆಕ್ನಿಕ್‌ನಿಂದ ಮಾತ್ರ ಸಾಧ್ಯ ಇಲ್ಲವಾದರೆ ಯಮಭಾರದ ಬೂಟು ಮತ್ತು ಸ್ಕೀಯಿಂಗ್ ಪ್ಯಾಡುಗಳು
ನಿಲ್ಲಲೇ ಕೊಡುವುದಿಲ್ಲ. ಕಾರಣ ಈ ಡ್ರೆಸ್ಸಿನ ಒಳಗೆ ನಮ್ಮ ಸಹಜ ಉಡುಪು, ಅದಕ್ಕೂ ಒಳಗೆ ಶೀತ ನಿರೋಧಕ ಸೇರಿ ಇಷ್ಟಿಷ್ಟು ಊದಿಕೊಂಡಿದ್ದವು. ಆದರೂ ಹಿಮದ ಮೇಲೆ ಜಾರುವ ಉಮೇದಿ ನಮ್ಮನ್ನು ಎದ್ದು ನಿಲ್ಲಿಸಿತ್ತು. ನಂತರ ಶುರುವಾದದ್ದೇ ಅಸಲಿ ಆಟ. ಮೊದಮೊದಲಿಗೆ ನೇರ ಜಾರುವಿಕೆಯ, ಕೋಲು ಹೂಡಿ ದೇಹ ಬಾಗಿಸಿ ಮುಂದಕ್ಕೆ ಚಲಿಸುವ, ಆಗೆಲ್ಲ ಹಿಂದಕ್ಕೆ ದಬ್ಬಿದಂತಾದರೂ ಬಿದ್ದು ಹೋಗದ ಆಟ ಆರಂಭಿಸಿ ಕೊಂಚ ದೇಹಕ್ಕೆ
ಸಮತೋಲನ ಲಭ್ಯವಾಗುತ್ತಿದ್ದಂತೆ ಜಾರುವಿಕೆಯ ವೇಗಕ್ಕೆ ಕೈಯಲ್ಲಿನ ಕೋಲುಗಳ ಸಹಾಯದಿಂದ ದಿಕ್ಕುಗಳನ್ನು ನಿರ್ಧರಿಸುತ್ತಾ ಎತ್ತರದಿಂದ ಜಾರತೊಡಗಿದ್ದೆವು.

ಎರಡ್ಮೂರು ಕಿ.ಮೀ. ಅಂತರವನ್ನು ಕೆಲವೇ ನಿಮಿಷದಲ್ಲಿ ಕ್ರಮಿಸಿ ಹಿಂದಕ್ಕೆ ಹತ್ತಿ ಹೋಗಲು ಅದಕ್ಕಾಗೇ ನಿರ್ಮಿಸಿದ್ದ ರೋಪ್‌ಗಳಿಂದ ಮೇಲಕ್ಕೇರಿ, ದಿನ್ನೆಯ ತುದಿಯಿಂದ ಸ್ಕಿಯಿಂಗ್ ಆರಂಭಿಸಿದರೆ ಆಹಾ.. ಸ್ವರ್ಗ ಮೂರು ಗೇಣಲ್ಲ, ಅದನ್ನು ಬಿಟ್ಟು ನಾವು ಮುಂದಕ್ಕೆ ಹೊರಟಂತಿತ್ತು. ಕಲಿಕೆ ನಮ್ಮ ಕೈಗೆ ದಕ್ಕಿದರೆ ಅದರ ಹುಮ್ಮಸ್ಸೇ ಬೇರೆ ಬಿಡಿ. ಹಾಗಿತ್ತು ಅನುಭವ.. ಎಂದರಲ್ಲಿ ರಪರಪನೇ ರಾಚುವ ಕುಳಿರ್‌ಗಾಳಿಯ ಮಧ್ಯೆ, ಹಿತವಾಗಿ ಹಾರುತ್ತಲೇ ಇರುವ ಹಿಮದ ಹುಡಿಯ ಮಂಜಿನ ಸಿಂಚನದಲ್ಲಿ ಮುಚ್ಚಿ ಹೋಗುವ ಕಪ್ಪು ಕನ್ನಡಕವನ್ನು ಒರೆಸಿಕೊಳ್ಳುತ್ತಾ ಜಾರು ಮೆಟ್ಟುಗಳ ಮೇಲಿನಿಂದ ಜಾರುತ್ತಾ ಗಾಳಿಗೆ ಸ್ಪರ್ಧೆ ಒಡ್ಡುತ್ತಿದ್ದರೆ, ಬದುಕು ಹಾರು ಬಂಡೆ. ವರ್ಷದ ಹನ್ನೆರಡೂ ತಿಂಗಳೂ ಕನಿಷ್ಟ ಉಷ್ಣಾಂಶದ ಇರುವ ಖಿಲೋಂಗ್ಪಾಸ್ ಅಗಾಧ ಇಳಿಜಾರಿನ ಸ್ಕಿಯಿಂಗ್ ಪ್ರಿಯರ ತಾಣ, ಅದನ್ನು ಏರಿ ನಿಂತರೆ ತೀರ ಪಕ್ಕದಲ್ಲಿ ಪಾಕಿಸ್ತಾನದ ಸರಹದ್ದು ಎಂದು ಕಾಣಿಸುವ ಪರ್ವತ ತುದಿಗಳ ಎತ್ತರದಲ್ಲಿ ಯಾವಾಗ ಬೇಕಾದರೂ ಪ್ರಕೃತಿ ಮಗ್ಗುಲು ಬದಲಿಸಿ ಹಿಮ ಸುರಿಸಿ, ಮಳೆ ಸುರಿಸಿ ನಮ್ಮನ್ನು ಹಣಿದು ಬಿಡಬಲ್ಲದು.

ಯಾವ ಹೊತ್ತಿಗೂ ಹಿಮ ಸುರಿಯುವ, ಅ ಧಡಾರನೆ ಸಣ್ಣಸಣ್ಣ ಹಿಮಕುಸಿತ ಉಂಟಾಗುವ, ಎಷ್ಟು ಹೊತ್ತಿನವರೆಗೆ ಯಾವ್ಯಾವುದೋ ದಿಕ್ಕಿನಲ್ಲಿ ಸುರಿಯುವ ಹಿಮ ರಾಶಿಯ ಅಪಾಯಕಾರಿ ಸಮಯ ಕೂಡಾ ಬೆನ್ನಿಗಂಟಿಕೊಂಡೆ ಇರುತ್ತದೆ. ಇದೆಲ್ಲ ಸ್ಥಳೀಯ ವ್ಯವಸ್ಥೆಗೆ ಚೆನ್ನಾಗೇ ಗೊತ್ತಿರುತ್ತದೆ.
ಆದರೆ ಸಾಹಸದ ಉಮೇದಿ ಮತ್ತು ಒಮ್ಮೆ ಮಾತ್ರ ಅನುಭವಿಸಿ ಆನಂದಿಸಬೇಕಾದ ಅವಕಾಶ ಸಿಕ್ಕಲ್ಲಿ ಖಿಲೋಂಗ್ಪಾಸ್ ನೆತ್ತಿ ಏರಿ ನಿಂತ ದಿನ ನಮ್ಮ ಜೀವನದಲ್ಲೂ ಅತಿ ಎತ್ತರದ ದಿನ ಎನ್ನುವ ಭರವಸೆ ಮೂಡಿಸುವುದಂತೂ ಹೌದು.

ಅಂದ ಹಾಗೆ ಇಲ್ಲಿ ತೀರ ಡಿಸೆಂಬರ್ ಮತ್ತು ಜನೆವರಿಯ ಮೊದಲ ಭಾಗದಲ್ಲಿ ತಲುಪುಲು ಸಾಧ್ಯವೇ ಇಲ್ಲದಷ್ಟು ಪ್ರಕೃತಿ ಮುನಿದಿರುತ್ತದೆ. ವಿಪರೀತ ಹಿಮದ ಮತ್ತು ಕನಿಷ್ಠ ಹತ್ತನ್ನೆರಡಕ್ಕೂ ಜಾರುವ ಹಿಮ ಉಷ್ಣಾಂಶ ಬದುಕನ್ನೆ ಛಿದ್ರಗೊಳಿಸುವುದೂ ಇದೆ. ಆದರೆ ಅದನ್ನೂ ಆದಾಯ ಮೂಲವಾ ಗಿಸಿಕೊಳ್ಳುವ ಶ್ರೀನಗರ ನಿವಾಸಿಗಳು, ವಿಪರೀತ ಹಿಮ ನೋಡಲು ಬರುವವರಿಗಾಗೇ ವ್ಯವಸ್ಥೆ ಮಾಡಿಕೊಂಡು ಕಾಯುತ್ತಾರೆ. ಹತ್ತಡಿ ಆಚೀಗಿನದೇನನ್ನೂ
ಕಾಣಲು ಸಾಧ್ಯವಾಗದ ಅಂಥಾ ಪರಿಸರದಲ್ಲಿ ಆಗೆಲ್ಲ ಏನು ನೋಡಲು ದಕ್ಕುತ್ತೆ ನನಗಂತೂ ಅರ್ಥವಾಗಲಿಲ್ಲ. ಕಾರಣ ಈ ಸ್ಕಿಯಿಂಗು ಇತ್ಯಾದಿ ಎಲ್ಲ ಆರಂಭವಾಗುವುದೇ ಮಾರ್ಚ್ ನಂತರದಲ್ಲಿ ಬಿಸಿಲು ಕೊಂಚ ಕೊಂಚ ನೆಲಕ್ಕೆ ತಲುಪತೊಡಗಿ ಹಿಮದ ಮೇಲ್ಮೈ ಕರುಗಿಸಿ ಜನರಂತೆ ಪ್ರಕೃತಿ ಕೂಡಾ ಕೊಂಚ ಕಣ್ಬಿಡುವಂತೆ ಆದಾಗ ಮಾತ್ರ.

ಆದರೆ ಉಳಿದಂತೆ ಯಾವಾಗಲೂ ಅದ್ಭುತ ಸೃಷ್ಟಿ ಸೌಂದರ್ಯ ಜಗತ್ತಿನ ಯಾವ ಭಾಗದಲ್ಲೂ ನೀಡದ ಶ್ವೇತ ದೃಶ್ಯಗಳನ್ನು ಸಂಯೋಜಿಸಿ ನಮ್ಮೆದು ರಿಗಿಡುವುದು ಸುಳ್ಳಲ್ಲ. ತೀರ ಸಾಹಸಿಗಳಲ್ಲದಿದ್ದರೆ ಕೆಳಗಿನ ಹಂತದ ಸ್ಕಿಯಿಂಗ್ ಉಮೇದಿ ತೀರಿಸಿಕೊಳ್ಳುವ ಅವಕಾಶವೂ ಇಲ್ಲಿದೆ.