Saturday, 14th December 2024

ಜನರಿಲ್ಲದ ಜಾಗದಲ್ಲಿ ಜಾಲಿ ಜಾಲಿ ಮಜೂಲಿ…

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

ಸರ್.. ನೆಲ ಅಲ್ಲದ, ಬರೀ ಐಲ್ಯಾಂಡಿಗೆ ಒಂದು ಜಿಲ್ಲೆ ಇದೆ ಹೋಗೋಣ್ವಾ.. ಎನ್ನುತ್ತಿದ್ದರೆ, ಟ್ಯಾಕ್ಸಿ ಡ್ರೈವರ್ ಕಮ್ ಗೈಡ್ ಕಮ್ ದುಭಾಶಿಗೆ ರೈಟ್..ರೈಟ್ ಎಂದಿದ್ದೆ. ಸುತ್ತ ನೀರೆಂದರೆ ನೀರು. ಎಲ್ಲಿಗೆ ಹೋಗಬೇಕಾದರೂ ದೋಣಿ.

ಅಷ್ಟೇಕೆ ಕೆಲವೊಮ್ಮೆ ಪಕ್ಕದ ಮನೆಯವನೂ ದೋಣಿಯಲ್ಲೇ ಬರಬೇಕು ಹೋಗಬೇಕು. ಒಟ್ಟೂ ನೆಲಕ್ಕಿಂತ ಸುತ್ತುವರಿದ ನೀರು ಜಾಸ್ತಿ ಹಾಗಂತ ಇದ್ದ ನೆಲ ಬಿಡಲಾದೀತೆ..? ಅದರಲ್ಲೂ ದೇಶದಲ್ಲೇ ಕಂಡರಿಯದ ಮಾದರಿಯ ಅನ್ನದ ಅಕ್ಕಿ ತಳಿಗಳ ವಿಶೇಷ ಭಂಡಾರವೇ ಇಲ್ಲಿದೆಯಲ್ಲ. ಮನೆ ಕಚೇರಿ, ಅಟದ ಮೈದಾನ, ಆಸ್ಪತ್ರೆ, ಅಂಗಡಿ ಮುಂಗಟ್ಟು, ಮೀನುಗಾರಿಕೆ, ಕರಕುಶಲ ಕೈಗಾರಿಕೆ ಮತ್ತು ಸಂಪ್ರದಾಯ ಬದ್ಧ ಸಾಂಸ್ಕ ತಿಕ ಕಾರ್ಯಕ್ರಮಗಳು, ಟೂರಿಸ್ಟ್‌ಗಳು ಬರುವುದು, ಸುತ್ತ ಎದ್ದು ಬಿದ್ದರೆ ನೀರೇ ನೀರು. ಬದುಕು, ವ್ಯವಹಾರ, ನಿರಂತರ ಏರಿಳಿತಗಳ ಅಬ್ಬರದ ಮಧ್ಯೆ ಮದುವೆ, ಮುಂಜಿ, ಪ್ರಸ್ಥ, ಉತ್ಸಾಹ, ಹಬ್ಬ ಕೊನೆಗೆ ಕೂಸು ಹುಟ್ಟುವದರಿಂದ, ಸಾವಿನ ಮೆರವವಣಿಗೆ ಸಹಿತ ಇಲ್ಲಿ ಎಲ್ಲಾ ದೋಣಿಯ ಮೂಲಕವೇ ಸಾಗುತ್ತದೆ.

ಇತ್ತ ಕಾಲಿಟ್ಟರೆ ಆ ದಂಡೆ, ಅತ್ತ ಕಾಲಿಟ್ಟರೆ ಇನ್ನೊಂದು ನಡುಗಡ್ಡೆ. ಹೀಗೆ ನೀರ ಬಿಟ್ಟು ನೆಲದ ಮೇಲೆ ಬದುಕು ಸಾಗದು ಎನ್ನುತ್ತಾ ನೀರ ಮಧ್ಯದಲ್ಲೇ ಅನುಚಾನ ವಾಗಿ ಬದುಕು ಸವೆಸುತ್ತಿರುವ ಮಜೂಲಿಗಳು ಈಗ ಜಗತ್ತಿನ ಆಕರ್ಷಣೆಯ ಕೇಂದ್ರ ಬಿಂದು. ಕಾರಣ ದೇಶದಲ್ಲಷ್ಟೆ ಅಲ್ಲ, ಜಗತ್ತಿನಲ್ಲೇ ಮೊದಲ ಬಾರಿಗೆ ದ್ವೀಪ ಸಮೂಹವೇ ಒಂದು ಪ್ರತ್ಯೇಕ ಜಿಲ್ಲೆಯಾಗಿ ೨೦೧೬ ರಿಂದ ಆಸ್ಸಾಮಿನ ಸಾಂಸ್ಕ ತಿಕ ರಾಜಧಾನಿ ಎಂದೇ ಗುರುತಿಸಿಕೊಳ್ಳುತ್ತಿದ್ದರೆ ಅದು ಮಜೂಲಿ ಮಾತ್ರ.

ಸಂಜೆಯ ಸೂರ್ಯಾಸ್ತ, ನೀರ ಮೇಲಿನ ನಿರಂತರ ಪಯಣ ಮತ್ತು ನದಿ ದಂಡೆಯಂಥ ದ್ವೀಪದ ತುದಿಗೆ ಮರದ ಮೇಲೆ ನಿರ್ಮಿಸಿದ ಅಟ್ಟಣಿಗೆ ಮನೆಗಳು ಇಲ್ಲಿನ ಪ್ರವಾಸಿ ಆಕರ್ಷಣೆ. ಅಲ್ಲಲ್ಲಿ ಚದುರಿದಂತೆ ಬಿದ್ದಿರುವ ನೂರಾರು ಚಿಕ್ಕಪುಟ್ಟ ನಡುಗಡ್ಡೆಗಳು ಈ ಸುತ್ತುವರೆದ ನೀರಿನಲ್ಲಿ ಇವೆಯಲ್ಲ. ಬಾಕಿ ಹೊತ್ತಲ್ಲಿ ಯಾವ ಉಪಯೋಗಕ್ಕೂ ಬಾರದೆ ನೀರಿನಲ್ಲಿ ಮುಳುಗಿದ್ದರೆ, ಉಳಿದ ಆರು ತಿಂಗಳು ಪ್ರವಾಸೋದ್ಯಮಕ್ಕೆ ನಿರ್ಜನ ಪ್ರದೇಶಕ್ಕೆ ಹೇಳಿ ಮಾಡಿಸಿದ ಪ್ರದೇಶವಾಗುತ್ತಿದೆ. ಹಾಗಾಗಿ ಬಿದಿರಿನ ಅಟ್ಟಣಿಗೆಯ ಸಂಕ್ಗಳ ಸಾಲುಗಳನ್ನು ನಿರ್ಮಿಸಿ ಇವುಗಳನ್ನು ಸಂಪರ್ಕಕ್ಕೆ ವ್ಯವಸ್ಥೆ ಮಾಡುತ್ತಾರೆ. ಏಕಾಂತ ಬಯಸಿ ಬರುವ ಜೋಡಿ ಪ್ರವಾಸಿಗರಿಗೆ ಒಂದೊಂದು ಪುಟಾಣಿ ದ್ವೀಪಗಳನ್ನೆ ಕೊಡಲಾಗುತ್ತಿದೆ. ಅದಕ್ಕಾಗಿ ಕೆಲವು ಚಿಕ್ಕ ದ್ವೀಪಗಳಲ್ಲಿ ಒಂದೊಂದೆ ರೂಮುಗಳನ್ನು ಎತ್ತರದಲ್ಲಿ ನಿರ್ಮಿಸಿ ಆಕರ್ಷಣೆ ಹೆಚ್ಚಿಸಿದ್ದಾರೆ.

ಎಲ್ಲೆಲ್ಲಿಂದಲೋ ಬರುವ ಕಪಲ್  ಫ್ರೆಂಡ್ಲಿಗಳು ಈಗ ಇದರ ಸ್ವಾದ ಹೆಚ್ಚಿಸುತ್ತಿದ್ದಾರೆ. ಸಂಪೂರ್ಣ ದ್ವೀಪವೇ ನಮ್ಮದು ಎನ್ನುತ್ತಾ ಎರಡ್ಮೂರು ದಿನ ಹಾರಾಡಿ ಹೋಗುತ್ತಾರೆ. ಸಾಕಷ್ಟು ಪ್ರವಾಸಿ ಸ್ಥಳಗಳ ಜತೆಗೆ ನೈಜ ದೋಣಿ ವಿಹಾರ, ಮೀನುಗಾರಿಕೆಗೂ ಪ್ರವಾಸಿಗರಿಗೆ ಅವಕಾಶ ಇರುವುದು ಹೆಚ್ಚುತ್ತಿರುವ ಆಕರ್ಷಣೆ.
ತೇಲು ದ್ವೀಪದಂಥ ಪ್ರದೇಶದಲ್ಲಿ ನಡುಗಡ್ಡೆಯ ತುದಿಗೆ ಇರುವ ಅಟ್ಟಣಿಗೆಯ ಮನೆಗಳ ಮೆಟ್ಟಿಲ ಮೇಲೆ ಕುಳಿತು ಕಾಲು ಚಾಚಿದರೆ ನೀರಿಗೆ ನೇರ, ಪಚ ಪಚ ಮಾಡುತ್ತ ಕೂತಲ್ಲಿ, ಬಿಸಿ ಚಹದ ಜತೆಗೆ ಅನುಭವವೇ ಅದ್ಭುತ. ಅದಕ್ಕಾಗೇ ಪ್ರತಿ ವರ್ಷ ಪ್ರವಾಸಿಗರ ಸಂಖ್ಯೆ ಏರುತ್ತಿದ್ದು, ಸದ್ಯಕ್ಕೆ ಪೂರ್ತಿ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ವ್ಯಾಪ್ತಿಗೆ ಹೋಲಿಸಿದರೆ ಮಜೂಲಿ ತುಂಬ ಕಡಿಮೆ ಖರ್ಚಿನ ಶ್ರೀಮಂತ ಪ್ರವಾಸಿ ತಾಣ. ಬದಲಾಗಲು ಸಮಯ ಹೆಚ್ಚು ಬೇಕಿಲ್ಲ ಎಂದು ನನಗನ್ನಿಸಿದ್ದು ಹೌದು. ಮೊಬೈಲ್ ಮತ್ತು ನೆಟ್ ಪ್ಲಿಕ್ಸ್ ಹಾಗೂ ಟಿ.ವಿ. ಹಾವಳಿಗೆ ಬದಲಾವಣೆ ವೇಗ ಪ್ರತಿವರ್ಷ ಬರುವ ನೆರೆಗಿಂತಲೂ ಜೋರಾಗಿಯೇ ಕಾಣಿಸುತ್ತಿದೆ. ಕಪಲ್ ಫ್ರೆಂಡ್ಲಿಗಳ ದೌಡು ಲೆಕ್ಕದ ಹೊರಗೆ ತಲುಪುತ್ತಿದೆ.

೧೬ನೇ ಶತಮಾನದಿಂದಲೂ ಅಸ್ಸಾಂನ ಸಾಂಸ್ಕೃತಿಕ ರಾಜಧಾನಿ ಎನ್ನಿಸಿಕೊಂಡಿರುವ ಮಜೂಲಿ ದ್ವೀಪ ಜಿಲ್ಲೆಯ ಮುಖ್ಯಪಟ್ಟಣ ವೆಂದರೆ ನಾಗ್ಮಾರ್. ಇಲ್ಲಿಯೇ ಪ್ರಮುಖ ವ್ಯವಹಾರವೆಲ್ಲ ನಡೆಯುವುದು. ವಿಶೇಷವೆಂದರೆ ನಾಗ್ಮಾರ್ ಈಶಾನ್ಯ ರಾಜ್ಯಗಳ ಭತ್ತದ ಕಣಿವೆಯ ಕೇಂದ್ರ ಬಿಂದುವು ಹೌದು. ಪ್ರತೀ ಪ್ರವಾಸಿಯೂ
ಮಾಡಲೇ ಬೇಕಾದ ಕೆಲಸ ಎಂದರೆ ಇಲ್ಲಿನ ವಿಭಿನ್ನ ಭತ್ತದ ಮೂಲಕ ಉತ್ಪಾದನೆ ಯಾಗುವ ನೂರಕ್ಕೂ ಹೆಚ್ಚು ಅಕ್ಕಿ ತಳಿಗಳ ರುಚಿ ನೋಡುವುದು. ವಿವಿಧ ರೀತಿಯ ಅನ್ನದ ತಿನಿಸುಗಳು ಸಸ್ಯಾಹಾರಿಗಳಿಗೆ ಹಬ್ಬ. ದ್ವೀಪದ ಪ್ರತಿ ಮನೆಗಳಲ್ಲೂ ಒಂದಲ್ಲ ಒಂದು ಜಾತಿಯ ಅಕ್ಕಿ ಉತ್ಪನ್ನದ ವ್ಯವಹಾರವೇ ಇರುವುದರಿಂದ ಅಕ್ಕಿಯಿಂದ ಮಾಡುವ ಪದಾರ್ಥಗಳಿಗೆ ಭಾರಿ ಡಿಮ್ಯಾಂಡು. ನಮ್ಮ ಇಡ್ಲಿ ರೀತಿಯ ಅಕ್ಕಿ ಹಿಟ್ಟಿನ ಒಗ್ಗರಣೆ ಹಾಕಿದ ಉತ್ಪನ್ನ ಎಲೆಗಳಲ್ಲಿ ಕಟ್ಟಿಸಿಕೊಂಡು ಕುಕ್ಕರ್ ರೀತಿಯ ಮಣ್ಣಿನ ಗಡಿಗೆಗಳಲ್ಲಿ ಬೆಂದು ಈಚೆ ಬರುವಾಗ ಹಬೆಯಾಡುವ ಮುದ್ದೆಗೆ ಸ್ಥಳೀಯ ಪಡಾಂಗ್‌ನ ಸಾಂಬಾರು ಮತ್ತು ಸೂಜು ಮೆಣಿಸಿಗೆ ಶುಂಠಿ ಸೇರಿಸಿದ ಖಾರ ಚಟ್ನಿ ಬೆವರಿಳಿಸಿದರೂ ಅದ್ಭುತ. ಇದಾದ ಮೇಲೆ ಅಲ್ಲಿನ ಹಸಿರು ಎಲೆಯ ಚಹ ನನ್ನ ಹಾಟ್ ಫೇವರಿಟ್.

ಅದರಲ್ಲೂ ಅಕ್ಕಿಯ ವಿವಿಧ ತಳಿಗಳ ಮೇಲೆ ಇಂಥ ಹತ್ತು ಹಲವು ಖಾದ್ಯಗಳು ಮಜೂಲಿಯಲ್ಲಿ ಸ್ಥಳೀಯವಾಗಿ ಮರದ ಮಡಿಕೆಯಲ್ಲಿ ಬೇಯಿಸುವುದೂ, ಅಲ್ಲಿಯೇ ತಟ್ಟೆಗೆ ಹಾಕಿ ಕೊಡುವ ಸ್ಥಳೀಯ ಆದರಾತಿಥ್ಯ ಪ್ರವಾಸಿಗನಿಗೆ ದ್ವೀಪವೊಂದರಲ್ಲೇ ಉಳಿದು ಬಿಡಲಾ ಎನ್ನಿಸುತ್ತದೆ. ದೊಡ್ಡ ಮಡಿಕೆಯ ಒಡೆದ ತಳಭಾಗವನ್ನು
ಒಲೆಯ ಒಳಕ್ಕೆ ಸೇರಿಸಿ ಹೊರಗಿನಿಂದ ಒಟ್ಟುವ ಬೆಂಕಿಯಲ್ಲಿ ಬಿಸಿಯೇರಿಸಿ ಅದಕ್ಕೆ ಅಕ್ಕಿಯ ತೆಳು ದ್ರಾವಣ ಸವರಿ, ಗರಿಗರಿಯಾಗಿಸಿ ಎಬ್ಬಿಸಿ, ಅದನ್ನೆ ಮುರಿದು ಮತ್ತೆ ಅದಕೊಂದು ಒಗ್ಗರಣೆ ಹಾಕಿ ಕೊಡುತ್ತಿದ್ದರೆ ಥೇಟು ಅವಲಕ್ಕಿ ಸವಿದಂತೆ. ಸಿಹಿ ಪ್ರಿಯರಿಗೆ ನಮ್ಮ ಅಕ್ಕಿ ಕಡುಬಿನ ಮಾದರಿಯ ಬೆಲ್ಲದ ಖಾದ್ಯಗಳ
ಸಂತೆಯೇ ಇಲ್ಲಿದೆ. ಆದರೆ ಇದಕ್ಕೆಲ್ಲ ಸತತ ಸಮಯ ಮತ್ತು ನೀವು ಅಲ್ಲಿಯೇ ಅವರೊಂದಿಗೆ ಕೂತು ಕಾಯುವ ಸಹನೆ ಎರಡೂ ಇರಲೇಬೇಕು.

ಹಾಗೆಯೇ ನಾನ್‌ವೆಜ್ ಪ್ರಿಯರಿಗೆ ಖುಲಾ ರೈಸ್(ಕೋಳಿ ಮತ್ತು ಮೀನಿನ ಖಾದ್ಯ ಎರಡನ್ನೂ ಸೇರಿಸಿಯೇ ಬೇಯಿಸುವ) ಅದ್ಭುತ ರುಚಿ ಮತ್ತು ಆಕರ್ಷಣೆ. ಸ್ಥಳೀಯ ಮಸಾಲೆಯೊಂದಿಗೆ ಎಲ್ಲೆಲ್ಲೂ ಖುಲಾರೈಸ್‌ನ ಘಮಘಮ ಮಾಂಸದೂಟ ಕೈ ಬೀಸುತ್ತದೆ. ಉತ್ತರ ಅಸ್ಸಾಂನ ಮಧ್ಯದಲ್ಲಿರುವ ಮಜೂಲಿ, ಈ ನೆರೆಹಾವಳಿಯ ರಾಜ್ಯಕ್ಕೆ ಬ್ರಹ್ಮಪುತ್ರೆಯ ಕೊಡುಗೆ. ಅಗಾಧವಾಗಿ ಅವಾಹಿಸಿಕೊಂಡು ಹರಿಯುವ ಬ್ರಹ್ಮಪುತ್ರೆಯ ಸುತ್ತುವರಿಕೆ ಹೇಗಿದೆಯೆಂದರೆ ಈ ನಡುಗಡ್ಡೆಗಳ ವಿಸ್ತೀರ್ಣವೇ ಅನಾಮತ್ತು ೭೦೦ ಚ.ಕಿ.ಗಳು. ಅದರಲ್ಲಿ ತರಹೇವಾರಿ ಸೈಜಿನ, ಉದ್ದುದ್ದ ವಿಮಾನದ ರನ್‌ವೇಯಂತೆ ಇರುವ ದ್ವೀಪದಿಂದ ಹಿಡಿದು ಅಮೀಬಾ ದಂತೆ ಕೈ ಕಾಲು ಚಾಚಿಕೊಂಡಿರುವ, ಎತ್ತರ ಬೆಳೆಯಲೊಲ್ಲದ, ಆಳದ ಗುಟ್ಟು ಬಿಟ್ಟುಕೊಡದ ವಿಪರೀತ ಹಸಿರಿನ ನಡುಗಡ್ಡೆಗಳ ಸಮೂಹ ಇದು.

2014ರ ಮಹಾಪ್ರವಾಹದಲ್ಲಿ  ಸುಮಾರು 150 ಚ.ಕೀ.ನಷ್ಟು ಅಗಾಧ ಪ್ರಮಾಣದ ಕ್ಷೇತ್ರ ಮಜೂಲಿಯ ತೆಕ್ಕೆಯಿಂದ ಬ್ರಹ್ಮಪುತ್ರೆಯ ಮಡಿಲು ಸೇರಿದೆ. ಹಾಗೆ
ಉಳಿದ ನಡುಗಡ್ಡೆಗಳ ಸಂಖ್ಯೆ ಬರೊಬ್ಬರಿ 144 ಮಾತ್ರ. ಉಳಿದ ಸ್ಥಳವೀಗ ಪ್ರವಾಸಿ ಕೇಂದ್ರಗಳು. ಬ್ರಹ್ಮಪುತ್ರೆ ಉತ್ತರದಿಂದ ಸುತ್ತುವರಿದಿದ್ದರೆ ಇದಕ್ಕೆ ಪೂರಕವಾಗಿ ನಡುಗಡ್ಡೆಯಾಗಿಸಲು ಪೂರಕವಾಗಿ ಕೈ ಸೇರಿಸಿದ್ದು ಸುಭಾಂಸ್ರಿ ನದಿ ದಕ್ಷಿಣದಲ್ಲಿ ಅಗಲ ಬಾಹು ಚಾಚಿದೆ. ಮಜೂಲಿ ಎಂದರೆ ಎರಡು ನದಿಗಳ ಮಧ್ಯದ ಭಾಗ ಅಥವಾ ನದಿ ಮಧ್ಯದ ಬಯಲು ಎಂದಾಗುತ್ತದೆ ಆಸ್ಸಾಮಿ ಭಾಷೆಯಲ್ಲಿ. ಒಂದು ಕಾಲದಲ್ಲಿ ಹಾಗೆ ಒಂದೆಡೆ ಬ್ರಹ್ಮಪುತ್ರೆ ಇನ್ನೊಂದೆಡೆಗೆ ಸುಭಾಂಸ್ರಿ ನದಿ ಸಮಾನಾಂತರವಾಗಿ ಹರಿಯುತ್ತಿದ್ದುರಿಂದ ಮಜೂಲಿ ಹೆಸರಾಗಿ ನಿರುಮ್ಮಳವಾಗಿತ್ತು. ಆದರೆ ಕಾಲಕ್ರಮೇಣ ಪ್ರತಿವರ್ಷದ ಅಬ್ಬರದ ಪ್ರವಾಹಕ್ಕೆ ತುತ್ತಾಗುತ್ತಾ ದ್ವೀಪಗಳ ಸಮೂಹವಾಗುತ್ತಾ, ಕೊನೆಗೊಮ್ಮೆ ದ್ವೀಪಗಳದ್ದೇ ಜಿಲ್ಲೆಯಾಗುವ ಮೂಲಕ ಮಜೂಲಿ ಹೊಸ ಮಜಲಿಗೆ ತೆರೆದುಕೊಳ್ಳುತ್ತಿದೆ.

ಎಲ್ಲೆಲ್ಲೂ ಪ್ರೈವೆಸಿಗೆ ಹಾತೊರೆಯುವ ಪ್ರವಾಸಿಗರಿಂದಾಗಿ ಮಜೂಲಿಯಲ್ಲೀಗ ಜೋಡಿಗಳ ಮೆರವಣಿಗೆ ನೆರೆಯುತ್ತಿದೆ. ತಲುಪುವುದು ತೀರಾ ಸುಲಭ ಇಲ್ಲದಿದ್ದರೂ ಮಜೂಲಿಯಲ್ಲಿ ಸೇವೆಗೆ ಸಿದ್ಧರಾಗಿ ನಿಲ್ಲುತ್ತಿರುವ ಟೂರ್ ಆಪರೇಟರ್ಸ್‌ನಿಂದಾಗಿ ಜನ ತಲುಪುತ್ತಾ ಮಜೂಲಿ ಆರ್ಥಿಕವಾಗಿ ಚೇತರಿಕೆ ಕಾಣಿಸಿಕೊಳ್ಳುತ್ತಿದೆ. ಹೆಚ್ಚಿನ ವೇಗಕ್ಕಾಗಿ ಇದಕ್ಕೆ ಈಗ 120 ಕೋಟಿ ರುಪಾಯಿಗಳ ಪ್ಯಾಕೇಜನ್ನು ಅಲ್ಲಿನ ಸರಕಾರ ಬಿಡುಗಡೆ ಮಾಡಿದ್ದರೆ, ಜನರಿಗೆ ಮೂಲ ಉದ್ಯೋಗಗಳಾದ ಭತ್ತ
ಬೆಳೆಯುವುದು, ಮೀನುಗಾರಿಕೆ, ನೇಕಾರಿಕೆ, ಮಾಂಜು ಎನ್ನುವ ವಿಶೇಷ ಮೇಲುವಸ ವಿನ್ಯಾಸ ಈಗಲೂ ಮೂಲ ಉದ್ಯೋಗವೇ ಆಗಿ ಉಳಿದಿದೆ.

ರಾಜಧಾನಿ ಗುವಾಹಟಿಯಿಂದ 300 ಕಿ.ಮೀ ದೂರದ ಜೋರಾಟ್ ತಲುಪಿದರೆ ಅಲ್ಲಿಂದ ಮಜೂಲಿಯ ಮೊದಲ ದ್ವೀಪ ನಾಗ್ಮಾರ್‌ಗೆ ಕೇವಲ ಇಪ್ಪತ್ತು ಕಿ.ಮೀ. ಅಲ್ಲಿಂದಾಚೆಗೆ ಸತತ ಸಾಲುಸಾಲು ದ್ವೀಪಗಳು ಊಹಿಸದಷ್ಟು ಕಡಿಮೆ ಖರ್ಚಿನಲ್ಲಿ ದೋಣಿ ಮೂಲಕ ಕೈಗೆಟುಕುತ್ತವೆ. ಇನ್ನು ದೊಡ್ಡ ದೊಡ್ಡ ದ್ವೀಪದಲ್ಲಿ
ಒಳಸಾರಿಗೆಯಾಗಿ ಸೈಕಲ್ಲು ಲಭ್ಯ ಇದೆ. ತುಂಬ ಕಡಿಮೆ ಬೆಲೆಯಲ್ಲಿ ಕೈಗೆಟುಕುವ ಇದನ್ನು ಪಡೆದು ದಿನಪೂರ್ತಿ ಓಡಾಡಿಕೊಂಡಿರಬಹುದಾಗಿದೆ. ಲಖೀಂಪುರ್‌ ದಿಂದಲೂ ಒಂಭತ್ತು ತಾಸು ಪಯಣ ಬೇಡುವ ಮಜೂಲಿ ತಲುಪುವವರೆಗೆ ಹೈರಾಣಾಗುವುದು ನಿಶ್ಚಿತ. ಆದರೆ ಮಜೂಲಿಯ ಮಜಲನ್ನೊಮ್ಮೆ ಏರಿದರೆ ಮಾತ್ರವೇ ಅದರ ಜಾಲಿತನದ ಅರಿವಾಗೋದು.