Sunday, 15th December 2024

ನದಿಯ ಹೆಸರಿಟ್ಟುಕೊಂಡು ನೀರಿಗಾಗಿ ನರಳುವ ಜೋರ್ಡಾನ್‌ !

ನೂರೆಂಟು ವಿಶ್ವ

vbhat@me.com

ಜೋರ್ಡಾನ್ ನನಗೆ ಅಪರಿಚಿತವೇನಲ್ಲ. ಮೊನ್ನೆ ನಾನು ಆ ದೇಶಕ್ಕೆ ಹೋಗುವುದಕ್ಕಿಂತ ಮೊದಲು, ಎರಡು ಸಲ ಹೋಗಿದ್ದೆ. ಮೊದಲ ಭೇಟಿಯ ಎಲ್ಲಾ ದೇಶಗಳೂ ಆಪ್ತವಾಗುವುದಿಲ್ಲ. ಕೆಲವು ದಿನ ಅಲ್ಲಿ ಓಡಾಡಬೇಕು, ದೇಶದ ಉದ್ದಗಲ ಸುತ್ತಾಡಬೇಕು, ಆಗ ನಿಧಾನವಾಗಿ ಒಂದು ದೇಶ ತನ್ನೊಳಗೆ ಕರೆದುಕೊಳ್ಳುತ್ತದೆ.

ಅಲ್ಲಿ ತನಕ, ಸೇರುವುದು ತನ್ನೊಳಗೇ ಆದರೂ, ಕ್ಷಣ ಕಾಲ ಸಮುದ್ರ ನದಿಯನ್ನು ಒದ್ದು ನಿಲ್ಲಿಸಿರುತ್ತದಲ್ಲ, ಹಾಗೆ ನಿಂತಿರಬೇಕು. ಆದರೆ ಅದೇಕೋ ಗೊತ್ತಿಲ್ಲ, ಜೋರ್ಡಾನ್ ಮಾತ್ರ ನನಗೆ ಹಾಗೆ ಅನಿಸಲಿಲ್ಲ. ಮೊದಲ ಭೇಟಿಯಲ್ಲಿಯೇ ಆ ನೆಲದ ಜತೆಗಿನ ಕರುಳ ಕಕ್ಕುಲಾತಿ ಹಿಡಿದು ಜಗ್ಗಿದ್ದು ಸುಳ್ಳಲ್ಲ. ಕೆಲವೊಂದು ದೇಶಗಳು ನಮಗೆ ಗೊತ್ತಿಲ್ಲದೇ, ತನ್ನಷ್ಟಕ್ಕೇ, ವಿನಾಕಾರಣ ಇಷ್ಟ ವಾಗಿ ಬಿಡುತ್ತವೆ. ಅದಕ್ಕೆ ಸುರುಳಿ ಸುತ್ತಿ ಕಾರಣಗಳು ಹೇಳಿ ಅಂದ್ರೆ ಹೇಳುವುದು ಕಷ್ಟ. ಅದು ಹೃದಯದ ಯಾವುದೋ ಪಕ್ಕೆಲುಬುಗಳ ಸಂದಿಯೊಳಗೆ ಹುಟ್ಟುವ ಪ್ರೀತಿಯಂತೆ. ನನಗೆ ಹೀಗೆ ಇಷ್ಟವಾದ ಇನ್ನೊಂದು ದೇಶವೆಂದರೆ ರವಾಂಡ. ‘ನೀವು ಅಷ್ಟೆ ದೇಶ ಸುತ್ತಿದ್ದೀರಿ, ಹೋಗಿ ಹೋಗಿ ರವಾಂಡವನ್ನು ಇಷ್ಟಪಡ್ತೀರಲ್ಲ?.. ಇಸ್ಶೀ..’ ಎಂದು ಮೂಗು ಮುರಿಯುತ್ತಾರೆ.

ಅವರಿಗೆ ಹೇಳಲು ನನ್ನಲ್ಲಿ ಉತ್ತರವಿಲ್ಲ. ನನಗೆ ಹೇಳಲೂ ಬರುವುದಿಲ್ಲವೆನ್ನಿ. ಒಂದು ವೇಳೆ ಉತ್ತರ ಹೇಳಿದರೂ, ಆ ಪ್ರಶ್ನೆ ಕೇಳಿದವರು ಸಂತೃಪ್ತರಾಗುವುದೂ ಇಲ್ಲ. ಹೀಗಾಗಿ ನಾನು ಏನೂ ಹೇಳುವುದಿಲ್ಲ. ಜೋರ್ಡಾನ್ ನನ್ನಲ್ಲಿ ಮೂಡಿಸಿದ್ದು ಇಂಥದೇ ಮೋಹ, ಪ್ರೀತಿಯನ್ನು. ‘ಹೋಗಿ ಹೋಗಿ ಆ ಸಾಬರ ದೇಶ ನಿಮಗೇಕೆ ಅಷ್ಟು ಇಷ್ಟ?’ ಎಂದು ಕೇಳಿದವರುಂಟು. ಈ ಮಾತಿಗೂ ನನ್ನಲ್ಲಿ ಉತ್ತರವಿಲ್ಲ. ಒಂದು ದೇಶವನ್ನು ಮೆಚ್ಚಲು ಹೇಗೆ ಕಾರಣಗಳು ಬೇಕಿಲ್ಲವೋ, ಅದೇ ರೀತಿ, ಒಂದು ದೇಶವನ್ನು ಮೆಚ್ಚಲು ಹಲವಾರು ಕಾರಣಗಳಿರುತ್ತವೆ.

ಅವೆಲ್ಲವನ್ನೂ ನಮ್ಮೊಳಗೆ ಹತ್ತಿಯನ್ನು ಮೂಟೆಯೊಳಗೆ ಹಿಡಿದು ಗಿಡಿದ ಹಾಗೆ ತುಂಬಿಕೊಳ್ಳಬೇಕು. ಒಂದು ದೇಶವನ್ನು ನಮ್ಮೊಳಗೇ ಬಿಟ್ಟುಕೊಳ್ಳಬೇಕು. ಅದು ನಮ್ಮ ಮನಸ್ಸಿನ ಎಲೆಯಂಚಿನಲ್ಲಿ ಹನಿ ಹನಿ ತೊಟ್ಟಿಕ್ಕುತ್ತಿರಬೇಕು. ಆ ಹನಿಗಳ ಪ್ರತಿಬಿಂಬಗಳ ರಾಶಿಗಳನ್ನು ನಮ್ಮೊಳಗೆ ಹಿಡಿದಿಟ್ಟುಕೊಂಡು ಒಂದು ಅಣೆಕಟ್ಟನ್ನು ಕಟ್ಟಿಬಿಡಬೇಕು. ಒಂದು ದೇಶವನ್ನು ಮನದೊಳಗೆ ಇಳಿಬಿಡುವ ಈ ಪ್ರಕ್ರಿಯೆ ಒಂದು ದಿವ್ಯ ಅನುಭೂತಿ.

ನಾನು ಜೋರ್ಡಾನ್ ನನ್ನು ಈ ರೀತಿ ಪ್ರೀತಿಸಿದವನು. ಇದು ನೋಡಲು ಫಕ್ಕನೆ ಇಸ್ರೇಲಿನ ತಮ್ಮನಂತೆ ಕಾಣುವುದೂ
ಅದಕ್ಕೊಂದು ಕಾರಣವಿರಬಹುದು. ಇಸ್ರೇಲ್ ಮತ್ತು ಜೋರ್ಡಾನ್ ಮಗ್ಗುಲ ದೇಶಗಳು. ಎರಡೂ ದೇಶಗಳನ್ನು ಒಂದು ಸೇತುವೆ ಅಥವಾ ಒಂದು ಮೃತ ಸಮುದ್ರವೆಂಬ ಸರೋವರ ಬೇರ್ಪಡಿಸಿವೆ. ಜೋರ್ಡಾನಿನಲ್ಲಿ ನಿಂತು ಕವಣೆ ಕಲ್ಲಿನ, ಚಿಟಬಿಲ್ಲಿನ ಹೊಡೆದರೆ, ಕಲ್ಲು ಇಸ್ರೇಲಿನಲ್ಲಿ ಹೋಗಿ ಬಿದ್ದೀತು. ಅಷ್ಟೇ ಕಸುವು ಹಾಕಿ ಇನ್ನೊಮ್ಮೆ ಚಿಮ್ಮಿದರೆ, ಪ್ಯಾಲೆಸ್ಟೈನ್‌ನಲ್ಲಿ ಬಿದ್ದೀತು. ಕಣ್ಣಿಗೆ ಬಟ್ಟೆ ಕಟ್ಟಿ ಜೋರ್ಡಾನಿನಲ್ಲಿ ಬಿಟ್ಟರೆ, ‘ಇಸ್ರೇಲ್’ ಎಂದು ಉದ್ಗರಿಸಿದರೆ ಅಚ್ಚರಿಯಿಲ್ಲ.

ಅಂಥ ಹೋಲಿಕೆ! ಮದ್ದೂರು-ಮಂಡ್ಯದ ಜನರ ಮಧ್ಯೆ ವ್ಯತ್ಯಾಸವಿದ್ದೀತೇ? ಜೋರ್ಡಾನ್ ನನ್ನೊಳಗೆ ಗೂಡು ಕಟ್ಟಲು ಇದೂ ಒಂದು ಕಾರಣವಿರಬಹುದು. ಹೀಗಾಗಿ ಮೊನ್ನೆ ಬೆಹರೀನ್ ಕನ್ನಡ ಸಂಘದ ಸಂಘಟಕರು ನೂತನವಾಗಿ ನಿರ್ಮಿಸಿದ ‘ಕನ್ನಡ ಭವನ’ ಉದ್ಘಾಟನೆಗೆ ಕರೆದಾಗ, ಸ್ನೇಹಿತ ಕಿರಣ್ ಉಪಾಧ್ಯಾಯ ಹಾಗೆ ಪಕ್ಕದ ಜೋರ್ಡಾನಿಗೆ ಒಂದು ರೋಡ್ ಟ್ರಿಪ್ ಹೋಗಿ ಬರೋಣವಾ ಎಂದು ಹೇಳಿದಾಗ, ನನ್ನಂಥ ಅಲೆಮಾರಿ ಇಲ್ಲ ಎನ್ನುವುದುಂಟಾ? ಮೊದಲೆರಡು ಸಲ ಹೋಗಿ ಬಂದಿದ್ದರೂ, ಅಲ್ಲಿ
ನೋಡುವುದು ಮತ್ತೇನಿದೆ ಎಂದು ಯಾವತ್ತೂ ಅನ್ನಿಸಿದ್ದಿಲ್ಲ.

ಪ್ರತಿ ಸಲ ಹೋದಾಗಲೂ ಅಲ್ಲಿ ನೋಡಿದ್ದನ್ನೇ ನೋಡಬಹುದು. ಆದರೆ ಪ್ರತಿಸಲವೂ ನೋಡುವ ನಮ್ಮ ದೃಷ್ಟಿ, ಪರಿಸ್ಥಿತಿ ಮತ್ತು ಮನಸ್ಥಿತಿ ಮಾತ್ರ ಭಿನ್ನವಾಗಿರುತ್ತದೆ. ಹೀಗಾಗಿ ಪ್ರತಿ ಭೇಟಿಯೂ, ಪ್ರತಿ ನೋಟವೂ ಭಿನ್ನವೇ. ಯಾವುದೇ ದೇಶವನ್ನೇ ಆಗಲಿ, ಪೂರ್ತಿ ನೋಡಿ ಮುಗಿಯಿತು ಎಂಬುದಿಲ್ಲ. ಅದು ನೋಡಿದಷ್ಟೂ ಹೊಸ ಹೊಸ ಸಂಗತಿಗಳನ್ನು ಬಿಟ್ಟುಕೊಡುತ್ತಲೇ  ಹೋಗುತ್ತದೆ. ನೋಡುವ ಮತ್ತು ಮೊಗೆದುಕೊಳ್ಳುವ ಆಸೆ ನಮ್ಮದಾಗಿರಬೇಕಷ್ಟೆ. ನಾನು ಮೊದಲ ಬಾರಿಗೆ ಇಸ್ರೇಲ್‌ಗೆ ಹೋಗಿದ್ದು ಜೋರ್ಡಾನ್ ಮೂಲಕವೇ. ರಾಜಧಾನಿ ಅಮ್ಮಾನ್‌ನಿಂದ ರಸ್ತೆ ಮಾರ್ಗವಾಗಿ ಸುಮಾರು ಒಂದೂವರೆ ಗಂಟೆ ಪ್ರಯಾಣಿಸಿದರೆ, ಮೃತ ಸಮುದ್ರ. ಅದನ್ನು ಬಳಸಿ ಕಿಂಗ್ ಹುಸೇನ್ ಸೇತುವೆ ದಾಟಿದರೆ ಮಗ್ಗುಲ ಇಸ್ರೇಲ್.

ಜೋರ್ಡಾನ್ ಮತ್ತು ಇಸ್ರೇಲ್ ಮಗ್ಗುಲ ದೇಶಗಳಾದರೂ, ಸುಮಾರು ಐವತ್ತು ವರ್ಷಗಳ ಕಾಲ ನಿರಂತರ ಶರಂಪರ
ಬಡಿದಾಡಿಕೊಂಡವರು. ಎರಡೂ ದೇಶಗಳ ನಡುವೆ ಶಾಂತಿ ಮಂತ್ರ ಪಠಿಸಿದ್ದಕ್ಕಿಂತ, ಶಸಾಸಗಳನ್ನು ಝಳಪಿಸಿದ್ದೇ ಹೆಚ್ಚು.
ಇಬ್ಬರೂ ಪರಮವೈರಿಗಳಂತೆ ಬಡಿದಾಡಿಕೊಂಡರೂ ಯಾರೂ ಸೋತೆ ಎನ್ನಲಿಲ್ಲ. ಸಣ್ಣಪುಟ್ಟ ಕಾರಣಕ್ಕೂ ಉಭಯ ದೇಶಗಳ
ನಡುವೆ ಸಂಭವಿಸಿದ ಯುದ್ಧ ಅವೆಷ್ಟೋ. ೧೯೬೭ ರಲ್ಲಿ ನಡೆದ ‘ಆರು ದಿನಗಳ ಯುದ್ಧ’ದಲ್ಲಿ ಇಸ್ರೇಲಿನ ಎಚ್ಚರಿಕೆಯನ್ನೂ
ಲೆಕ್ಕಿಸದ ಜೋರ್ಡಾನ್, ಈಜಿ ಪರವಹಿಸಿದ್ದರಿಂದ ದೊಡ್ಡ ಪಾಠವನ್ನೇ ಕಲಿಯಬೇಕಾಯಿತು. ಈ ಯುದ್ಧದಿಂದಾಗಿ ಜೋರ್ಡಾನ್, ವೆ ಬ್ಯಾಂಕ್ ಮತ್ತು ಪೂರ್ವ ಜೆರುಸಲೇಮ್ ಮೇಲಿನ ತನ್ನ ನಿಯಂತ್ರಣವನ್ನು ಕಳೆದುಕೊಳ್ಳುವಂತಾಗಿದ್ದು
ದೊಡ್ಡ ಮುಖಭಂಗ.

ಇದರಿಂದ ಸ್ವಲ್ಪ ಮೆತ್ತಗಾದ ಜೋರ್ಡಾನ್, 1973 ರಲ್ಲಿ ‘ಯೋಮ್ ಕಿಪ್ಪುರ್ ಯುದ್ಧ’ದಲ್ಲಿ ಇಸ್ರೇಲ್ ವಿರುದ್ಧ ತನ್ನ ಮಿಲಿಟರಿ
ಕಾರ್ಯಾಚರಣೆಯನ್ನು ಕಡಿಮೆ ಮಾಡಿತು. ಇಸ್ರೇಲ್ ಜತೆಗಿನ ಸತತ ಸಂಘರ್ಷದಿಂದ ಕಲ್ಲವಿಲಗೊಂಡಿದ್ದ ಜೋರ್ಡಾನ್, 1994 ರಲ್ಲಿ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಜತೆಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿತು. ಈ ಮಧ್ಯೆ ಜೋರ್ಡಾನಿನ ಕಿಂಗ್ ಹುಸೇನ್, ಪ್ಯಾಲೆಸ್ಟೈನ್ ವಿಚಾರವಾಗಿ ತೆಗೆದುಕೊಂಡ ಕಠಿಣ ನಿರ್ಧಾರದಿಂದ ಇಸ್ರೇಲಿಗೆ ಹತ್ತಿರವಾದರು.

ಇಪ್ಪತ್ತೆಂಟು ವರ್ಷಗಳ ಹಿಂದೆಯೇ, ಇಸ್ರೇಲ್-ಜೋರ್ಡಾನ್ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿದ್ದರೂ, ಉಭಯ ದೇಶಗಳ ನಡುವೆ ಸಂಪೂರ್ಣ ಶಾಂತಿ ಮರೀಚಿಕೆಯಾಗಿಯೇ ಉಳಿದಿದೆ. ಆಗಾಗ ಸಣ್ಣ-ಪುಟ್ಟ ಕಿತಬಿ, ಕೀಟಲೆಗಳು ಇದ್ದೇ ಇರುತ್ತವೆ.
ಅಷ್ಟಾಗಿಯೂ ಜೋರ್ಡಾನ್ ತಾನು ಬುದ್ಧ್ಯಪೂರ್ವಕ ಬಡಿದಾಡಿದ್ದಕ್ಕಿಂತ ತನ್ನ ನೆರೆ- ಹೊರೆಯ ಬಾಂಧವರ ಮಾತು ಕೇಳಿ, ಒತ್ತಾಯದಿಂದ ಇಸ್ರೇಲ್ ವಿರುದ್ಧ ಕಾದಾಡಿದ್ದೇ ಹೆಚ್ಚು. ಜೋರ್ಡಾನ್ ಯಾರದ್ದೇ ಮಾತು ಕೇಳಿ ಸುಖಾಸುಮ್ಮನೆ ಇಸ್ರೇಲಿ ಗಳಿಂದ ಬುರುಡೆಗೆ ತಿಂದಿದ್ದೇ ಜಾಸ್ತಿ.

ಇದರ ಮಧ್ಯವೂ ಉಭಯ ದೇಶಗಳ ನಡುವೆ ವ್ಯಾಪಾರ- ವ್ಯವಹಾರ-ವಾಣಿಜ್ಯ, ಕೊಡು-ತೆಗೆದುಕೊಳ್ಳುವುದು ಅಬಾಧಿತವಾಗಿ ಮುಂದುವರಿದಿದೆ. ಇಂದಿಗೂ ಜೋರ್ಡಾನಿನಲ್ಲಿ ಕುಡಿಯುವ ನೀರು ಬೀಳಬೇಕೆಂದರೆ ಇಸ್ರೇಲ್ನಲ್ಲಿ ತಿರುವಬೇಕು! ಇದೇನೇ ಇರಲಿ, ದೈತ್ಯರ ನಡುವಿನ ಕಾದಾಟದಲ್ಲಿ ನಮ್ಮದಲ್ಲದ ತಪ್ಪಿಗೆ ಆಗಾಗ ಕಪಾಳಮೋಕ್ಷ ಮಾಡಿಸಿಕೊಳ್ಳಬೇಕಾಗುತ್ತದೆ. ಅದು ಜೋರ್ಡಾನ್‌ಗೆ ರೂಢಿಯಾಗಿದೆ.

ಇದಕ್ಕೆ ಅದು ಇರುವ ಭೌಗೋಳಿಕ ಸಂಗತಿಯೂ ಕಾರಣವಾಗಿದೆ. ಏಷ್ಯಾ, ಆಫ್ರಿಕಾ ಮತ್ತು ಯುರೋಪ್ ನ ಕೂಡು
ಸಂದಿಯಲ್ಲಿರುವ ಜೋರ್ಡಾನ್, ದಕ್ಷಿಣ ಮತ್ತು ಪೂರ್ವಕ್ಕೆ ಸೌದಿ ಅರೇಬಿಯಾ, ಈಶಾನ್ಯಕ್ಕೆ ಇರಾಕ್, ಉತ್ತರಕ್ಕೆ ಸಿರಿಯಾ,
ಪಶ್ಚಿಮಕ್ಕೆ ಇಸ್ರೇಲ, ಪ್ಯಾಲಸ್ಟೈನ್ ವೆ ಬ್ಯಾಂಕ್ ಮತ್ತು ಮೃತ ಸಮುದ್ರವನ್ನು ಹೊಂದಿದೆ. ನೈರುತ್ಯದಲ್ಲಿ ಕೆಂಪು ಸಮುದ್ರದಲ್ಲಿರುವ ಅಕಾಬಾ ಕೊಲ್ಲಿಯನ್ನು ದಾಟಿದರೆ ಪಕ್ಕದ ಈಜಿ. ಸುಮಾರು ಇಪ್ಪತ್ತಾರು ಕಿಮೀ ತೀರದ ಸಮುದ್ರ ತೀರದ ಅಕಾಬಾ ಕೊಲ್ಲಿ ಇಲ್ಲದಿದ್ದರೆ ಜೋರ್ಡಾನ್ ಮತ್ತು ಈಜಿ ಒಟ್ಟಿಗೆ ಸೇರಿಕೊಳ್ಳುತ್ತಿದ್ದವು.

ಸಿರಿಯಾ, ಪ್ಯಾಲಸ್ಟೈನ್, ಸೌದಿ ಅರೇಬಿಯಾ, ಇರಾಕ್ ದೇಶಗಳನ್ನು ಕಟ್ಟಿಕೊಂಡು ಆಗಾಗ ಇಸ್ರೇಲ್ ವಿರುದ್ಧ ಸಂಘರ್ಷಕ್ಕಿಳಿ
ಯುವುದು ಜೋರ್ಡಾನಿನ ಅನಿವಾರ್ಯ ಕರ್ಮ. ಜೋರ್ಡಾನ್ ಒಂದು ದೇಶವಲ್ಲ, ಅದೊಂದು ಪವಿತ್ರ ಮರುಭೂಮಿ ಎಂದು ಹಳೆ ಒಡಂಬಡಿಕೆ (Old Testament) ಯಲ್ಲಿ ಬಣ್ಣಿಸಲಾಗಿದೆ. ಜೋರ್ಡಾನ್ ವಿಚಿತ್ರ ಸುಂದರಿ, ಸದಾ ಕಾಡುವ ಸುಂದರಿ. ಇದು ಕಾಲವನ್ನು ಮೀರಿದ ಬಹುರೂಪ ಹೊಂದಿರುವ ನಾಡು.

ನಾಳಿನ ಜಗತ್ತಿನಲ್ಲಿ ನಿನ್ನೆಯ ಕೊನೆಯ ತಾಣ. ನಾನು ಈ ಮಣ್ಣಿನ ಕನಕನವನ್ನೂ ಪ್ರೀತಿಸುತ್ತೇನೆ, ಚುಂಬಿಸುತ್ತೇನೆ. ಹೀಗೆಂದು
ಹೇಳಿದವನು ಜೋರ್ಡಾನಿನ ಕಿಂಗ್ ಹುಸೇನ್. ಜಗತ್ತಿನ ಹಲವು ಪ್ರವಾಸಿ ಲೇಖಕರು ಹುಸೇನನ ಈ ಮಾತನ್ನು ಪ್ರಸ್ತಾಪಿಸು ತ್ತಾರೆ ಮತ್ತು ಸಹಮತ ವ್ಯಕ್ತಪಡಿಸುತ್ತಾರೆ. ಜೋರ್ಡಾನ್ ಮರುಭೂಮಿಯಾಗಿರಬಹುದು, ಆದರೆ ಅದು ಸುಂದರ, ರುದ್ರರಮಣೀಯ, ಮೌನದಲ್ಲೂ ಮೋಹಕತೆ ಬೀರುವ, ಸಾಗಿದಷ್ಟೂ ಸಾಗುವ ಮರುಭೂಮಿ. ಭೂಮಿಯ ತುತ್ತತುದಿಯ ತನಕ ಕರೆದೊಯ್ಯಬಹುದೇನೋ ಎಂದು ಅನಿಸುವಷ್ಟು ವಿಶಾಲ ಮರುಭೂಮಿ.

ಮರೀಚಿಕೆಯಷ್ಟೇ ಇದರ ಲಕ್ಷಣವಲ್ಲ, ಮನಮೋಹಕತೆಯೇ ಇದರ ವೈಶಿಷ್ಟ್ಯ. ಎಲ್ಲರೂ ಜೋರ್ಡಾನಿನ ಸೌಂದರ್ಯೋಪಾಸನೆ
ಮಾಡಲಾರರು. ಅದಕ್ಕೆ ಅನುಪಮ ನೋಟ, ಆಸ್ವಾದಭಾವ ಮತ್ತು ರಸಗ್ರಹಣ ಶಕ್ತಿ ಬೇಕು. ಅದು ಜೋರ್ಡಾನಿನ ಸಂಕ್ಷಿಪ್ತ
ಗುಣಕಥನ. ಜೋರ್ಡಾನ್ ಪವಿತ್ರ ಮರುಭೂಮಿ ಎಂದು ಯಾರು ಕರೆದರೋ ಅದು ಮುಖ್ಯವಲ್ಲ. ಆದರೆ ಅಲ್ಲಿನ ಬಿಸಿಲು ಮಾತ್ರ ಪರಮಪವಿತ್ರ!

ಅಪ್ಪಟ ಬೀನ್ಕಿ ಕೆಂಡ! ಅರ್ಧಗಂಟೆ ಆ ಮರುಭೂಮಿಯಲ್ಲಿ ನಿಂತರೆ ಇಡೀ ಶರೀರವೆಲ್ಲ ಸುಟ್ಟು ಕರಕಲಾದ ಕಾಗೆ! ಥೇಟು ‘ಮುರ್ಮು’ ಅವತಾರ! ಕಣ್ಮುಚ್ಚಿ ದರೂ ಜೋಗದ ಜಲಪಾತದಂತೆ ಸುರಿಯುವ ನಿಗಿನಿಗಿ ಬಿಸಿಲ ಧಾರೆ. ಜೋರ್ಡಾನ್ ಇರುವುದೇ ಹಾಗೆ. ಇಡೀ ದೇಶದ ಭೂಭಾಗದ ಮುಕ್ಕಾಲು ಭಾಗ (75%) ಬೋಳು ಮರುಭೂಮಿ. ಅಲ್ಲಿ ಒಂದೇ ಒಂದು ಹಸಿರು ಕಡ್ಡಿಯೂ ಕಾಣಸಿಗದು. ಅಂಥ ರಣಚಂಡಿ ಮರಳುಹಾಸು.

ಎಲ್ಲ ಸೇರಿಸಿದರೆ ಒಂದು ಕೋಟಿ ಜನಸಂಖ್ಯೆ. ಬೆಂಗಳೂರಿನ ಅರ್ಧದಷ್ಟು. ಹತ್ತಾರು ಕಿಮೀ ಸಾಗಿದರೂ ಒಂದೇ ಒಂದು
ನರಪಿಳ್ಳೆಯೂ ಕಾಣಸಿಗದ ನಿರ್ಜನ ಕಳೆ. ಆ ಪೈಕಿ ಶೇ.೯೫ ರಷ್ಟು ಸುನ್ನಿ ಮುಸ್ಲಿಮರು. ಉಳಿದವರಲ್ಲಿ ಸಿರ್ಕ್ಯಾಸಿಯನರು,
ಚೆಚನರು, ಅರಬ್ ಕ್ರಿಶ್ಚಿಯನ್ನರು, ಅರ್ಮೇನಿಯನರು ಮತ್ತು ಏಷ್ಯನ್ನರು ಪ್ರಮುಖರು. ಭಾರತೀಯರು ತೀರಾ ಕಡಿಮೆ. ಅರಬ್ ರಾಷ್ಟ್ರಗಳ ಭಾರತೀಯರು ಕಡಿಮೆ ಇರುವ ದೇಶಗಳಲ್ಲಿ ಜೋರ್ಡಾನ್ ಸಹ ಒಂದು. ಈ ಮಧ್ಯೆ ಸುಮಾರು ಇಪ್ಪತ್ತು ಲಕ್ಷ ಪಾಲೆಸ್ಟೈನಿಯರು ಮತ್ತು ಹದಿನೈದು ಲಕ್ಷ ಸಿರಿಯಾದ ನಿರಾಶ್ರಿತರು ಜೋರ್ಡಾನಿಗೆ ಬಂದು ನೆಲೆಸಿದ್ದಾರೆ ಮತ್ತು ತಲೆನೋವಾಗಿಯೂ ಪರಿಣಮಿಸಿದ್ದಾರೆ.

ಸಾಮಾನ್ಯವಾಗಿ ಯಾವ ದೇಶಕ್ಕೆ ಹೋದರೂ, ಯಾರೂ ಅಲ್ಲಿನ ನದಿಯನ್ನು ನೋಡದೇ ವಾಪಸ್ ಬರುವುದಿಲ್ಲ. ಅಷ್ಟಕ್ಕೂ ಎಲ್ಲಾ ದೇಶಗಳ ರಾಜಧಾನಿಗಳು ನದಿ ದಂಡೆಯ ಮೇಲೆಯೇ ನಿರ್ಮಾಣಗೊಂಡಿವೆ. ನದಿಗಳೇ ನಾಗರಿಕತೆಯ
ತೊಟ್ಟಿಲು ತಾನೇ. ಥೇಮ್ಸ ನದಿ ಲಂಡನ್ನಿನ ಹೃದಯಭಾಗದಲ್ಲಿ ಹಾದು ಹೋದರೆ, ಸಿಯೆನಾ ನದಿ ಪ್ಯಾರಿಸ್‌ನಲ್ಲಿ, ಮಾಸ್ಕೊವಾ
ನದಿ ಮಾಸ್ಕೊದಲ್ಲಿ ಹಾದು ಹೋಗುತ್ತವೆ. ಇದಕ್ಕೆ ದಿಲ್ಲಿಯೂ ಹೊರತಲ್ಲ.

ಜೋರ್ಡಾನಿಗೆ ಹೆಸರು ಬಂದಿದ್ದೇ ಜೋರ್ಡಾನ್ ನದಿಯಿಂದ. ಆದರೆ ಆರು ದಿನ ಆ ದೇಶದಲ್ಲಿ ಓಡಾಡುವಾಗ, ಆ ನದಿಯ ಅಸ್ತಿತ್ವವೇ ಅನುಭವಕ್ಕೆ ಬರಲಿಲ್ಲ. ಮದಾಬಾ ಸನಿಹದಲ್ಲಿರುವ ಮುಜೀಬ್‌ನಲ್ಲಿ ಅಣೆಕಟ್ಟೆನೋ ಕಂಡಿತು. ನಾವು ಅಲ್ಲಿಗೆ ಹೋದಾಗ, ಅದರ ಹಿಂಬದಿ ನೀರಿರಬಹುದು ಎಂದು ಯೋಚಿಸಿದರೆ, ಅಲ್ಲಿ ಹತ್ತಾರು ಕುರಿಗಳು ಮೇಯುತ್ತಿರುವುದು ಕಾಣಿಸಿತು. ಅಣೆಕಟ್ಟಿನ ಸಿಮೆಂಟು ಕುರುಹು ಇಲ್ಲದಿದ್ದರೆ ಅಂದು ನದಿಯಿತ್ತು ಎಂಬುದು ಸಹ ಗೊತ್ತಾಗುವುದಿಲ್ಲ. ಜೋರ್ಡಾನಿನ ದಕ್ಷಿಣ ತುದಿಯಲ್ಲಿರುವ ಅಕಾಬಾ ಕೊಲ್ಲಿಯಿಂದ ಸಮುದ್ರ ನೀರನ್ನು ಸಿಹಿ ನೀರಾಗಿ (desalination) ಪರಿವರ್ತಿಸಿ, ದೇಶದ ಪ್ರಮುಖ ನಗರಗಳಿಗೆ ಸರಬರಾಜು ಮಾಡಲಾಗುತ್ತದೆ.

ರಾಜಧಾನಿ ಅಮ್ಮಾನ್ ಮತ್ತು ಉತ್ತರ ತುದಿಯಲ್ಲಿರುವ ಇದ್ರಿಬ್ ನಗರಗಳಿಗೆ ಇಸ್ರೇಲ್ ನಿಂದ ನೀರು ಪೂರೈಕೆಯಾಗುತ್ತದೆ.
ಅರವತ್ತರ ದಶಕದಲ್ಲಿ ಇಸ್ರೇಲ್-ಜೋರ್ಡಾನ್ ನಡುವಿನ ‘ಆರು ದಿನಗಳ ಯುದ್ಧ’ಕ್ಕೆ ಜೋರ್ಡಾನ್ ನದಿ ನೀರು ಹಂಚಿಕೆಯೂ ಒಂದು ಕಾರಣವಾಗಿತ್ತು. ಜೋರ್ಡಾನ್ ನದಿ ಇಸ್ರೇಲಿನ ಉತ್ತರದ ‘ಸ್ತ್ರೀ ಆಫ್ ಗೆಲೆಲಿ’ಯಲ್ಲಿ ಹುಟ್ಟಿ 251 ಕಿಮೀ ದಕ್ಷಿಣಾಭಿ ಮುಖವಾಗಿ ಹರಿದು ಮೃತ ಸಮುದ್ರವನ್ನು ಸೇರುತ್ತದೆ.

ಈ ನದಿಯ ಪಶ್ಚಿಮದ ದಂಡೆಯಲ್ಲಿರುವುದರಿಂದ ಪ್ಯಾಲೆಸ್ಟೈನ್‌ಗೆ ವೆ ಬ್ಯಾಂಕ್ ಎಂದು ಹೆಸರು. ಇಸ್ರೇಲ್ ಕೂಡ ಈ ನದಿಯ ಪಶ್ಚಿಮಕ್ಕಿದೆ. ಜುದಾಯಿಗಳು ಮತ್ತು ಕ್ರಿಶ್ಚಿಯನ್‌ರಿಗೆ ಈ ನದಿ ಪವಿತ್ರವಾದುದು. ಇಸ್ರೇಲ, ಜೋರ್ಡಾನ್ ಮತ್ತು ಸಿರಿಯಾ ಈ ಮೂರೂ ದೇಶಗಳು ಜೋರ್ಡಾನ್ ನದಿಗೆ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಕಾಲುವೆ ಮತ್ತು ಅಣೆಕಟ್ಟುಗಳನ್ನು
ನಿರ್ಮಿಸಿಕೊಂಡಿರುವುದರಿಂದ ಆ ನದಿಯ ಮುಖಜ ಭೂಮಿಯನ್ನೇ ಹಾಳುಗೆಡವಿವೆ.

ಹೀಗಾಗಿ ಜೋರ್ಡಾನ್ ನದಿ ಜೋರ್ಡಾನಿನ ಅಲ್ಲಲ್ಲಿ ಸಣ್ಣ ತೊರೆಯಂತೆ, ಝರಿಯಂತೆ ಹರಿಯುತ್ತದೆ. ವರ್ಷದಲ್ಲಿ ಮೂರ್ನಾಲ್ಕು
ತಿಂಗಳು ಸಂಪೂರ್ಣ ಬತ್ತಿ ಹೋಗುವುದುಂಟು. ಹೀಗಾಗಿ ಜೋರ್ಡಾನ್ ದೇಶ ಅದೇ ಹೆಸರಿನ ನದಿಯ ಹೆಸರನ್ನಿಟ್ಟುಕೊಂಡು, ನೀರಿನ ಅಭಾವವನ್ನು ಎದುರಿಸುತ್ತಿರುವುದು ವಿಪರ್ಯಾಸವೇ ಸರಿ. ಅದೇ ನೀರನ್ನು ತಾನು ಸಂಪೂರ್ಣ ಬಳಸಿಕೊಂಡು, ಜೋರ್ಡಾನಿಗೆ ಇಸ್ರೇಲಿಗಳು ಆ ನೀರನ್ನು ಮಾರಾಟ ಮಾಡುತ್ತಿರುವುದು ಸಹ ವಿಪರ್ಯಾಸವೇ.

ಜೋರ್ಡಾನ್ ದೇಶ ಮತ್ತು ಜೋರ್ಡಾನ್ ನದಿ ಬಗ್ಗೆ ಯೋಚಿಸಿದಾಗ, ಮಾರ್ಕ್ ಟ್ವೈನ್ ಹೇಳಿದ, ‘The Jordan
river has great wisdom and whispers its secrets to the hearts of human beings’ ಎಂಬ ಮಾತು ಬತ್ತುತ್ತಿರುವ ಆ ನದಿಯ ಸೆಲೆಯಲ್ಲಿ ಆವಿಯಾಗುತ್ತಿರುವಂತೆ ಭಾಸವಾಗುತ್ತದೆ.