Friday, 13th December 2024

ಪತ್ರಕರ್ತರೆಲ್ಲ ಎಲ್ಲಿಗೆ ಹೋದರು ? ವೃತ್ತಿ ಬಿಟ್ಟರಾ ? ವಲಸೆ ಹೋದರಾ ?

ನೂರೆಂಟು ವಿಶ್ವ

vbhat@me.com

ಇಂದು ಸ್ವಚ್ಛ, ಪರಿಶುದ್ಧ ಕನ್ನಡದಲ್ಲಿ ಬರೆಯಲು ಬರುವ ಪತ್ರಕರ್ತರೇ ಸಿಗುತ್ತಿಲ್ಲ. ಕೆಲಸಕ್ಕೆ ಸಲ್ಲಿಸಿದ ಅರ್ಜಿಯ ಹತ್ತಾರು ಪ್ರಮಾದಗಳು. ‘ಎಷ್ಟು ಬರೆದಿದ್ದೀರಿ? ಇಲ್ಲಿ ತನಕ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದೀರಾ?’ ಅಂತ ಕೇಳಿದರೆ, ‘ಇಲ್ಲ’ ಎಂದು ಸಲೀಸಾಗಿ ಹೇಳುತ್ತಾರೆ. ಅವರ ಬರಹ ಹೇಗಿದೆ ಎಂದು ಪರೀಕ್ಷಿಸಲು ಟೆಸ್ಟ್ ನೀಡಿದರೆ ಬರೀ ತಪ್ಪು ತಪ್ಪು. ಕನ್ನಡವನ್ನಂತೂ ಕೇಳಲೇಬೇಡಿ.

ಈ ವರ್ಷ ರಂಗನತಿಟ್ಟು ಪಕ್ಷಿಧಾಮಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಪಕ್ಷಿಗಳು ಬಂದಿಲ್ಲ, ಸೈಬೀರಿಯಾ ದಿಂದ ಬರಬೇಕಿದ್ದ ಪಕ್ಷಿಗಳೂ ಈ ಸಲ ಇತ್ತ ಮುಖಮಾಡಿಲ್ಲ, ಮಂಡಗದ್ದೆ ಪಕ್ಷಿಧಾಮದಲ್ಲಿ ಈ ವರ್ಷ ಬಾನಾಡಿಗಳ ಸಂಖ್ಯೆ ಯಾಕೋ ಕಮ್ಮಿಯಾಗಿದೆ.. ಈ ರೀತಿಯ ಸುದ್ದಿಯನ್ನು ನೀವು ಪತ್ರಿಕೆ ಗಳಲ್ಲಿ ಆಗಾಗ ನೋಡುತ್ತಿರಬಹುದು. ಸುದ್ದಿಮನೆಯಲ್ಲಿ ಕುಳಿತ ಹಿರಿಯ ಸಂಪಾದಕರುಗಳು ಪರಸ್ಪರ ಈ ಭಾಷೆಯಲ್ಲಿ ಮಾತಾಡುತ್ತಿದ್ದಾ ರೆಂದರೆ ಅವರು ಪಕ್ಷಿಗಳ ಬಗ್ಗೆ ಮಾತಾಡುತ್ತಿಲ್ಲ, ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ ‘ಉಪಸಂಪಾದಕರು/ವರದಿಗಾರರು ಬೇಕಾಗಿದ್ದಾರೆ’ ಎಂಬ ಜಾಹೀರಾತು ಗಳಿಗೆ ಆ ರೀತಿ ಪ್ರತಿಕ್ರಿಯಿಸುತ್ತಿದ್ದಾರೆ ಎಂದರ್ಥ.

ಇಪ್ಪತ್ತು-ಇಪ್ಪತ್ತೈದು ವರ್ಷಗಳ ಹಿಂದೆ, ‘ಉಪಸಂಪಾದಕರು/ವರದಿಗಾರರು ಬೇಕಾಗಿದ್ದಾರೆ’ ಎಂಬ ಜಾಹೀರಾತು ಎಲ್ಲ ಪತ್ರಿಕೆಗಳಲ್ಲೂ ವರ್ಷಕ್ಕೊಮ್ಮೆ ಪ್ರಕಟವಾಗುತ್ತಿತ್ತು. ಇನ್ನು ಕೆಲವು ಪತ್ರಿಕೆಗಳಿಗೆ ಈ ಜಾಹೀರಾತನ್ನು ಪ್ರಕಟಿಸುವ ಅವಶ್ಯಕತೆಯೇ ಬರುತ್ತಿರಲಿಲ್ಲ. ಕಾರಣ ಕೆಲಸಕ್ಕೆ ಸೇರಿದ ಪತ್ರಕರ್ತರು ಉದ್ಯೋಗ ಬಿಡುತ್ತಿರಲಿಲ್ಲ. ಸುದ್ದಿಮನೆಯಲ್ಲಿ ಹುದ್ದೆಗಳು ಖಾಲಿಯಾಗುತ್ತಿರಲಿಲ್ಲ.

ಇನ್ನು ಖಾಲಿಯಾದರೆ, ಸಂಪಾದಕರು ತಮ್ಮ ಸಂಪರ್ಕ ಬಳಿಸಿ, ತಮಗೆ ಬೇಕಾದ ನುರಿತ, ಅನುಭವಿ ಪತ್ರಕರ್ತರನ್ನು ನೇಮಿಸಿಕೊಂಡುಬಿಡುತ್ತಿದ್ದರು. ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮ ಶಿಕ್ಷಣ ಜನಪ್ರಿಯವಾಗುತ್ತಿದ್ದಂತೆ, ಉತ್ತಮ ಟ್ಯಾಲೆಂಟ್‌ ಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಜಾಹೀರಾತು ನೀಡುವ ಸಂಪ್ರದಾಯ ಆರಂಭವಾಯಿತು. ಇನ್ನು ಒಂದು ಪತ್ರಿಕೆಯಿಂದ ಮತ್ತೊಂದು ಪತ್ರಿಕೆಗೆ ಜಿಗಿಯುವ ಸಂಪ್ರದಾಯ ಲಾಗಾಯ್ತಿನಿಂದಲೂ ಇದ್ದೇ ಇತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ‘ಉಪಸಂಪಾದಕರು/ವರದಿಗಾರರು ಬೇಕಾಗಿದ್ದಾರೆ’ ಎಂಬ ಜಾಹೀರಾತನ್ನು ಎಲ್ಲಾ ಪತ್ರಿಕೆಗಳೂ ಎರಡು-ಮೂರು ತಿಂಗಳುಗಳಿಗೊಮ್ಮೆ ಪ್ರಕಟಿಸುತ್ತಲೇ ಇರುತ್ತವೆ. ಸೋಷಿಯಲ್ ಮೀಡಿಯಾಗಳಲ್ಲೂ ಅವು ಆಗಾಗ ಕಾಣಿಸಿಕೊಳ್ಳುವುದುಂಟು. ಆದರೂ ನಿರೀಕ್ಷಿತ
ಪ್ರಮಾಣದಲ್ಲಿ ಇಂಥ ಜಾಹೀರಾತುಗಳಿಗೆ ಪ್ರತಿಕ್ರಿಯೆ ಬರುತ್ತಿಲ್ಲ. ಒಂದು ವೇಳೆ ಬಂದರೂ, ಗುಣಮಟ್ಟದ ಅಭ್ಯರ್ಥಿಗಳು ಬರುತ್ತಿಲ್ಲ. ಕೆಲವು ಸಲ ನಲವತ್ತು ಅರ್ಜಿಗಳು ಬಂದರೆ, ಆ ಪೈಕಿ ಇಬ್ಬರನ್ನು ಆಯ್ಕೆ ಮಾಡುವುದೂ ಕಷ್ಟ. ಈ ಕಾರಣದಿಂದ ಮತ್ತೆ ಮತ್ತೆ ‘ಬೇಕಾಗಿದ್ದಾರೆ’ ಜಾಹೀರಾತನ್ನು ಪ್ರಕಟಿಸುವುದು ಅನಿವಾರ್ಯವಾಗಿದೆ. ಇಬ್ಬರು ಸಂಪಾದಕರು ಒಟ್ಟಿಗೆ ಮಾತಿಗೆ ಸಿಕ್ಕಾಗ, ‘ಒಳ್ಳೆಯ ಹ್ಯಾಂಡ್ಸ್ ಸಿಗ್ತಾ ಇಲ್ಲ. ಜಾಹೀರಾತು ಕೊಟ್ಟರೂ ನೀರಸ ಪ್ರತಿಕ್ರಿಯೆ’ ಎಂಬ ಗೊಣಗಾಟ ಸಾಮಾನ್ಯ.

ಹಾಗಾದರೆ ಪತ್ರಕರ್ತರೆಲ್ಲ ಎಲ್ಲಿ ಹಾರಿಹೋದರು? ಊರು ಬಿಟ್ಟರಾ? ವೃತ್ತಿಯನ್ನೇ ಬಿಟ್ಟರಾ? ವಲಸೆ ಹೋದರಾ? ಪತ್ರಕರ್ತರು ಅಳಿವಿನಂಚಿ (endangered animals) ನಲ್ಲಿರುವ ಪ್ರಾಣಿಗಳಾದರಾ? ಏನು ಹಕೀಕತ್ತು? ಕೊಕ್ಕರೆ ಬೆಳ್ಳೂರಿಗೆ ಹಕ್ಕಿಗಳು ಬರುತ್ತಿಲ್ಲ ಎಂಬ ಸುದ್ದಿಯನ್ನು
ಬರೆಯುವಾಗ ಏನೂ ಅನಿಸುತ್ತಿರಲಿಲ್ಲ, ಬರಲಿರುವ ಆಪತ್ತಿನ ಸೂಚಕ ಎಂಬ ಗಾಬರಿ ಆವರಿಸುತ್ತಿರಲಿಲ್ಲ. ಆದರೆ ಸುದ್ದಿಮನೆಗೆ ಸುದ್ದಿಹಕ್ಕಿಗಳು ಬರುತ್ತಿಲ್ಲ ಎಂದು ಯೋಚಿಸುವಾಗ, ವೃತ್ತಿ ಬದುಕಿನ ಭವಿಷ್ಯ ಕಣ್ಣೆದುರು ನಿಲ್ಲುತ್ತದೆ.

ಇದು ಪ್ರಸ್ತುತ ಇಡೀ ಮಾಧ್ಯಮ ಲೋಕವನ್ನು ಕಾಡುತ್ತಿರುವ ಸಂಗತಿ. ಪ್ರಾಯಶಃ ಇಂದು ಪತ್ರಕರ್ತರಿಗೆ ಹಿಂದೆಂದೂ ಕಾಣದ ಬೇಡಿಕೆಯಿದೆ. ಆದರೆ ಉತ್ತಮ ಪತ್ರಕರ್ತರನ್ನು ಪಡೆಯುವುದು ಮತ್ತು ಅವರನ್ನು ಉಳಿಸಿಕೊಳ್ಳುವುದು ಎಲ್ಲ ಸುದ್ದಿಮನೆಗಳ ಮುಖ್ಯಸ್ಥರಿಗೆ ಸವಾಲಾಗಿದೆ. ಇಂದು ಸ್ವಚ್ಛ, ಪರಿಶುದ್ಧ ಕನ್ನಡದಲ್ಲಿ ಬರೆಯಲು ಬರುವ ಪತ್ರಕರ್ತರೇ ಸಿಗುತ್ತಿಲ್ಲ. ಕೆಲಸಕ್ಕೆ ಸಲ್ಲಿಸಿದ ಅರ್ಜಿಯ ಹತ್ತಾರು ಪ್ರಮಾದಗಳು. ‘ಎಷ್ಟು ಬರೆದಿದ್ದೀರಿ?
ಇಲ್ಲಿ ತನಕ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದೀರಾ?’ ಅಂತ ಕೇಳಿದರೆ, ‘ಇಲ್ಲ’ ಎಂದು ಸಲೀಸಾಗಿ ಹೇಳುತ್ತಾರೆ.

ಅವರ ಬರಹ ಹೇಗಿದೆ ಎಂದು ಪರೀಕ್ಷಿಸಲು ಟೆಸ್ಟ್ ನೀಡಿದರೆ ಬರೀ ತಪ್ಪು ತಪ್ಪು. ಕನ್ನಡವನ್ನಂತೂ ಕೇಳಲೇಬೇಡಿ. ಇವರೆಲ್ಲ ಕನ್ನಡ ನಾಡಿನ ಹುಟ್ಟಿ, ಕನಿಷ್ಠ ಹೈಸ್ಕೂಲ್ ತನಕ ಕನ್ನಡದ ಓದಿ, ಎಂಎ ಪತ್ರಿಕೋದ್ಯಮವನ್ನು ಮುಗಿಸಿ ಬಂದವರು. ಆದರೂ ಕನ್ನಡದಲ್ಲಿ ನೆಟ್ಟಗೆ ತಪ್ಪಿಲ್ಲದೇ ನಾಲ್ಕು ವಾಕ್ಯ ಗಳನ್ನು ಬರೆಯಲು ಬರದವರು. ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಕಲಿತು ಬರುವವರನ್ನು ನೋಡಿದರೆ, ಪತ್ರಿಕೆಯ ಮೇಲೆ ಆಕ್ರಮಣ ಮಾಡಲು ಬರುತ್ತಿದ್ದಾರೋ ಏನೋ ಎಂದು ಭಯವಾಗುತ್ತದೆ.

ನೂರಲ್ಲಿ ಎಂಬತ್ತು ಮಂದಿ ಹೀಗೇ. ಇಂಥವರಲ್ಲಿ ಸ್ವಲ್ಪ ಯೋಗ್ಯರಾದವರನ್ನು ನೇಮಿಸಿಕೊಂಡು, ಆರು ತಿಂಗಳು ಚೆನ್ನಾಗಿ ಅರೆದು, ಇನ್ನಾರು ತಿಂಗಳು ಕೆಲಸ ಕಲಿಸಿದರೆ, ಮುಂದಿನ ತಿಂಗಳು ಅವರು ಮತ್ತೆ ಹಾರಲು ಸಿದ್ಧರಾಗಿರುತ್ತಾರೆ. ಐದು ವರ್ಷ ಮುಗಿಯುವುದರೊಳಗೆ ಕನ್ನಡದ ಎಲ್ಲಾ ಸುದ್ದಿಮನೆ ಗಳ ಸುತ್ತ ಒಂದು ಸುತ್ತು ಹಾಕಿ, ‘ಯಾಕೋ ಪತ್ರಿಕೋದ್ಯಮ ಬೋರಾಗುತ್ತಿದೆ, ಮನಸು ಚೇಂಜ್ ಬಯಸುತ್ತಿದೆ’ ಎಂದು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿ, ವಾಟ್ಸಾಪ್ ಸ್ಟೇಟಸ್ ಹಾಕಿ ಕಾಣೆಯಾಗಿಬಿಡುತ್ತಾರೆ (ನೀವು ಕೆ.ಎಸ್. ಸಚ್ಚಿದಾನಂದಮೂರ್ತಿ ಅವರ ಹೆಸರನ್ನು ಕೇಳಿರಬಹುದು.

ಅವರು ‘ಮಲಯಾಳ ಮನೋರಮಾ’ ಸಂಸ್ಥೆಗೆ ಸೇರಿದ ‘ದಿ ವೀಕ್’ ಆಂಗ್ಲ ವಾರಪತ್ರಿಕೆಯ ದಿಲ್ಲಿಯ ಸ್ಥಾನಿಕ ಸಂಪಾದಕರಾಗಿದ್ದರು. ಅವರು
ನಲವತ್ತೊಂದು ವರ್ಷಗಳ ಕಾಲ ಅದೇ ಸಂಸ್ಥೆಯಲ್ಲಿ ದುಡಿದರು. ಇತ್ತೀಚೆಗಷ್ಟೇ ನಿವೃತ್ತರಾದರು. ಅವರು ನಿವೃತ್ತರಾದಾಗ ಮಲಯಾಳ ಮನೋರಮಾ ಪತ್ರಿಕೆ ಒಂದು ಇಡೀ ಪುಟವನ್ನು ಅವರಿಗೆ ಮೀಸಲಾಗಿಟ್ಟಿತ್ತು. ಒಬ್ಬ ವ್ಯಕ್ತಿ ಅಷ್ಟೊಂದು ದೀರ್ಘ ಅವಧಿಗೆ ಒಂದೇ ಸಂಸ್ಥೆಗೆ ನಿಯತ್ತಾಗಿರುವುದು ಈ ದಿನಗಳಲ್ಲಿ ಅಪರೂಪವೇ). ಇಂದು ಪತ್ರಕರ್ತರಲ್ಲಿ ಅದೆಂಥ ವಿಚಿತ್ರ ಮನಸ್ಥಿತಿ ಇದೆಯೆಂದರೆ, ಒಂದು ಸಂಸ್ಥೆ ಈಗಿನ ಸಂಬಳಕ್ಕಿಂತ, ಎರಡು-ಮೂರು ಸಾವಿರ ರುಪಾಯಿ ಹೆಚ್ಚು ಸಂಬಳ ನೀಡಿದರೆ ಸಾಕು, ‘ಗುಡ್ ಬೈ’ ಎಂದು ಹೊರಟುಬಿಡುತ್ತಾರೆ.

ಒಂದು ತಿಂಗಳು ಅವಧಿಯ ನೋಟಿಸನ್ನೂ ನೀಡದೇ, ಜಾಗ ಖಾಲಿಮಾಡಿಬಿಡುತ್ತಾರೆ. ಅದಾಗಿ ಒಂದು ವರ್ಷದ ಬಳಿಕ, ‘ಆರೇಳು ಸಾವಿರ ಜಾಸ್ತಿ ಕೊಡ್ತೀನಿ ಅಂದ್ರೆ ನಿಮ್ಮಲ್ಲಿಗೇ ಬರ್ತೀವಿ’ ಅಂತ ಹೇಳುತ್ತಾರೆ. ಸಂಸ್ಥೆ, ಐಡೆಂಟಿಟಿಗಿಂತ ಸಂಬಳವೇ ಪ್ರಧಾನ. ‘ಹತ್ತು ಕೊಟ್ಟವ ನಿನ್ನಪ್ಪ, ಮೂವತ್ತು
ಕೊಟ್ಟವ ನನ್ನಪ್ಪ’ ಎಂಬ ಮನೋಭಾವ. ಇದೊಂದೇ ಕಾರಣದಿಂದ ಪತ್ರಕರ್ತರು ಸುದ್ದಿಮನೆಯೊಂದನ್ನು ಬಿಟ್ಟು, ಎಲ್ಲಾ ಹೋಗುತ್ತಿದ್ದಾರೆ. ಪತ್ರ ಕರ್ತರೆಂದು ಕರೆಯಿಸಿಕೊಂಡವರು ಮಾಡಲೇಬಾರದ ಕೆಲಸವನ್ನು ಮಾಡುತ್ತಿದ್ದಾರೆ.

ರಾಜ್ಯದ ಪ್ರತಿಯೊಬ್ಬ ಶಾಸಕ, ಸಂಸದ, ಸಚಿವ ಮತ್ತು ರಾಜಕಾರಣಿಯ ಜತೆಗೆ ಇಂದು ಒಬ್ಬ ಪತ್ರಕರ್ತ ಇದ್ದಾನೆ. ಆತನ ಮಾಧ್ಯಮ ಬೇಕು-ಬೇಡಿಕೆಗಳನ್ನು ನಿರ್ವಹಿಸುವವರು ಅವರೇ. ಅದರಲ್ಲೂ ಹದಿನೈದು- ಇಪ್ಪತ್ತು ವರ್ಷ ಅನುಭವ ಹೊಂದಿದವರೆಲ್ಲ ರಾಜಕಾರಣಿಗಳ ಗರ್ಭಗೃಹ ಸೇರಿಬಿಟ್ಟಿದ್ದಾರೆ. ಪತ್ರಕರ್ತರಿಗೆ ಅಧಿಕಾರದ ಪಡಸಾಲೆಯ ಅನುಭವ ಇರಬೇಕು, ನಿಜ. ಅದು ಅಪೇಕ್ಷಣೀಯ ಕೂಡ. ನಾನು ಸಹ ಅಂದಿನ ಕೇಂದ್ರ ಸಚಿವ ಅನಂತಕುಮಾರ ಅವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿದ್ದೆ. ನಾನು ಹೋಗಿದ್ದೇ ಮೂರು ವರ್ಷಗಳ ಅವಧಿಗೆ. ಸರಕಾರ ಮತ್ತು ನಮ್ಮ ಆಡಳಿತ ಯಂತ್ರ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಹತ್ತಿರದಿಂದ ನೋಡುವ, ಅರಿಯುವ ಅನುಭವ ಆಗಿದ್ದೇ ಆಗ. ಹತ್ತು ರುಪಾಯಿಯನ್ನು ಸರಕಾರ ಹೇಗೆ ಬಿಡುಗಡೆ ಮಾಡುತ್ತದೆ ಎಂಬ ಸರಳ ಸಂಗತಿ ಪತ್ರಕರ್ತರಿಗೆ ಗೊತ್ತಿರುವುದಿಲ್ಲ.

ರಾಜಕಾರಣದ ಒಳಮನೆಯ ಪಟ್ಟುಗಳನ್ನು ಹತ್ತಿರದಿಂದ ನೋಡುವ ಅವಕಾಶ ಪತ್ರಕರ್ತರಿಗೆ ಸಿಗಬಹುದಾದ ಅತಿ ದೊಡ್ಡ ವೃತ್ತಿ ಅನುಭವವದು. ಹಾಗಂತ ಅಲ್ಲಿಯೇ ಇದ್ದುಬಿಡಬಾರದು. ನಾನು ಮೂರು ವರ್ಷ ಮುಗಿಯುವುದರೊಳಗೇ ಅಲ್ಲಿಂದ ಹೊರಬಂದುಬಿಟ್ಟೆ. ಇರಲಿ. ಒಂದು ಕಾಲದಲ್ಲಿ ಕನ್ನಡ ಪತ್ರಿಕೋದ್ಯಮದ ರಾಜಕೀಯ ವರದಿಗಾರಿಕೆಯ ಮುಂಚೂಣಿಯಲ್ಲಿದ್ದ ಹಿರಿಯರೆಲ್ಲ ಇಂದು ಬೇರೆ ಬೇರೆ ರಾಜಕಾರಣಿಗಳ ಒಳಮನೆ ಸೇರಿಬಿಟ್ಟಿ
ದ್ದಾರೆ. ಅವರು ಮಾಧ್ಯಮ ಮತ್ತು ರಾಜಕಾರಣಿಗಳ ನಡುವೆ Firewall ಗಳಾಗಿದ್ದಾರೆ. ಇಂದು ಪತ್ರಕರ್ತರನ್ನು ಇಟ್ಟುಕೊಳ್ಳದ ರಾಜಕಾರಣಿಗಳೇ ಇಲ್ಲ. ಇತ್ತೀಚೆಗೆ ನಾನು ಬೆಂಗಳೂರಿನ ಶಾಸಕರೊಬ್ಬರ ಕಚೇರಿಗೆ ಅವರ ಆಹ್ವಾನದ ಮೇರೆಗೆ ಹೋಗಿದ್ದೆ.

ತಾವು ಸಿದ್ಧಪಡಿಸಿರುವ ಮಾಧ್ಯಮ ಕೇಂದ್ರವನ್ನು ನನಗೆ ತೋರಿಸುವುದು ಅವರ ಉದ್ದೇಶವಾಗಿತ್ತು. ಅಲ್ಲಿಗೆ ಹೋದಾಗ ನನಗೆ ಪುಟ್ಟ ಆಶ್ಚರ್ಯ
ಕಾದಿತ್ತು. ಅವರ ಮಾಧ್ಯಮ ಕೇಂದ್ರದಲ್ಲಿ ಆರು ಮಂದಿ ನನ್ನೊಂದಿಗೆ ಕೆಲಸ ಮಾಡಿದ ಹಿರಿ-ಕಿರಿಯ ಪತ್ರಕರ್ತರಿದ್ದರು. ಜತೆಗೆ ಕೆಮರಾಮನ್, ವಿಡಿಯೋ ಎಡಿಟರ್, ಕ್ರಿಯೇಟಿವ್ ಆರ್ಟಿಸ್ಟ್‌ಗಳೆ ಇದ್ದರು. ಅಂದರೆ ಪೂರ್ಣಾವಧಿ ಕೆಲಸ ಮಾಡುವ ಹನ್ನೆರಡು ಮಂದಿ ಇರುವ ಸುಸಜ್ಜಿತ ಒಂದು ತಂಡವನ್ನು ಅವರು ಕಟ್ಟಿದ್ದರು.

ಯಾವುದೇ ಪತ್ರಿಕೆ ನೀಡುವುದಕ್ಕಿಂತ ಎರಡು ಪಟ್ಟು ಹೆಚ್ಚು ಸಂಬಳ ಕೊಟ್ಟು ಅವರನ್ನೆ ನೇಮಿಸಿಕೊಂಡಿದ್ದರು. ಈ ತಂಡದ ಜತೆಗೆ ‘ವರ್ಕ್ ಫ್ರಮ್ ಹೋಮ’ ಮಾಡುವ ಎಂಟು ಮಂದಿ. ಕಳೆದ ಆರು ತಿಂಗಳಿನಿಂದ ಕೆಲಸ ಮಾಡುತ್ತಿರುವ ಅವರು, ಸದ್ಯೋಭವಿಷ್ಯದಲ್ಲಿ ಸುದ್ದಿಮನೆ ಕಡೆ ಸುಳಿಯ ಲಾರರು. ಕಾರಣ ಅವರಿಗೆ ಯಾವ ಮಾಧ್ಯಮ ಸಂಸ್ಥೆಯೂ ಈಗ ಪಡೆಯುತ್ತಿರುವಷ್ಟು ಸಂಬಳ ನೀಡಲಾರದು. ಇನ್ನು ಸುದ್ದಿಮನೆ ಗಳಲ್ಲಿರುವ ತಮ್ಮ ಪಕ್ಷದ ಬಗೆಗೆ ಮೃದು ಧೋರಣೆ ಇರುವ ಪತ್ರಕರ್ತರರನ್ನು ರಾಜಕೀಯ ಪಕ್ಷಗಳೇ ನೇಮಿಸಿಕೊಂಡುಬಿಟ್ಟಿವೆ. ಇಂದು ರಾಜ್ಯದ ಪ್ರಮುಖ  ಮೂರು ರಾಜಕೀಯ ಪಕ್ಷಗಳ ಕಾರ್ಯಾಲಯಗಳಲ್ಲಿ ಕನ್ನಡದ ಕನಿಷ್ಠ ಐವತ್ತು ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ.

ಅವರೆಲ್ಲರೂ ಪ್ರತಿದಿನ ರಾಜಕೀಯ ಪಕ್ಷಗಳ ಕಾರ್ಯಾಲಯಗಳಿಗೆ ಬರಲಿಕ್ಕಿಲ್ಲ. ಅವರವರ ಮನೆಗಳಿಂದಲೇ ಕೆಲಸ ಮಾಡುತ್ತಿದ್ದಾರೆ. ರಾಜಕಾರಣಿ ಗಳ ಫೇಸ್ಬುಕ್, ಟ್ವಿಟರ್ ಹ್ಯಾಂಡಲ್ ನಿರ್ವಹಿಸುವ, ಭಾಷಣ ಬರೆದುಕೊಡುವ, ಲೇಖನ ಬರೆದುಕೊಡುವ, ಪ್ರತಿಕ್ರಿಯೆಗೆ ಪಾಯಿಂಟ್ಸ್ ಬರೆದು ಕೊಡುವ, ಮಾಧ್ಯಮಗಳನ್ನು ಅಭ್ಯಸಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇಂಥ ಪತ್ರಕರ್ತರಿಗೆ ಕೈತುಂಬಾ ಸಂಬಳ ಮತ್ತು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಒಂದು ಪತ್ರಿಕೆ ಮತ್ತು ರಾಜಕೀಯ ಪಕ್ಷ ಏಕಕಾಲದಲ್ಲಿ ‘ಪತ್ರಕರ್ತರು ಬೇಕಾಗಿದ್ದಾರೆ’ ಎಂಬ ಜಾಹೀರಾತನ್ನು ನೀಡಿದರೆ, ರಾಜಕೀಯ ಪಕ್ಷ ನೀಡಿದ ಜಾಹೀರಾತಿಗೇ ಹೆಚ್ಚು ಪತ್ರಕರ್ತರು ಅರ್ಜಿ ಹಾಕುವುದರಲ್ಲಿ ಸಂದೇಹವೇ ಇಲ್ಲ.

ರಾಜಕೀಯ ಪಕ್ಷಗಳ ಸೋಷಿಯಲ್ ಮೀಡಿಯಾ ಟೀಮ್ ಸುದ್ದಿಮನೆಗಳಿಗಿಂತ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತವೆ. ತಮ್ಮ ಎದುರಾಳಿ ಪಕ್ಷದ ರಾಜಕಾರಣಿಗಳ ಹೇಳಿಕೆಗಳನ್ನು ಕಾಮೆಂಟ್ ಮಾಡುವುದು, ಕೌಂಟರ್ ಮಾಡುವುದು, ಟ್ರೋಲ್ ಮಾಡುವುದು ಈ ತಂಡದ ಪ್ರಮುಖ
ಟಾಸ್ಕ್. ಇಂದು ಹಳ್ಳಿಯಿಂದ ಬೆಂಗಳೂರು ಮತ್ತು ದಿಲ್ಲಿಯ ಮಟ್ಟದ ಬಹುತೇಕ ಎಲ್ಲ ರಾಜಕಾರಣಿಗಳಿಗೂ ಒಂದು ಸೋಷಿಯಲ್ ಮೀಡಿಯಾ ತಂಡವಿದೆ. ರಾಜಕಾರಣಿಯೊಬ್ಬ ಯಾರನ್ನಾದರೂ ಪ್ರಮುಖರನ್ನು ಭೇಟಿ ಮಾಡಲಿ, ತಕ್ಷಣ ಅವರ ಜತೆಗಿರುವ ಮಾಧ್ಯಮ ತಂಡದಲ್ಲಿರುವವರು ಫೋಟೋ ತೆಗೆದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಾರೆ. ಈ ಪೋಸ್ಟಿಗೆ ಹೆಚ್ಚು ಲೈಕ್ಸ್, ಕಾಮೆಂಟ್‌ಗಳನ್ನೂ ಅವರೇ generate
ಮಾಡುತ್ತಾರೆ. ವಾಟ್ಸಾಪ್ ಗ್ರೂಪ್‌ಗಳಲ್ಲಿ ಶೇರ್, ಫಾರ್ವರ್ಡ್ ಮಾಡುವುದು, ವಿಡಿಯೋವನ್ನು ವೈರಲ್ ಮಾಡುವುದು, ರೀಲ್ಸ ಮಾಡಿ ಹಾಕುವುದು ಸಹ ಅವರ ಪ್ರಮುಖ ಕೆಲಸ.

ರಾಜ್ಯದ ಬಿಜೆಪಿ ನಾಯಕರೊಬ್ಬರಿದ್ದಾರೆ, ಅವರು ಫೇಸ್ಬುಕ್‌ನಲ್ಲಿ ಒಂದು ಪೋಸ್ಟ್ ಮಾಡಲಿ ಅಥವಾ ಟ್ವೀಟ್ ಮಾಡಲಿ, ಎರಡು ನಿಮಿಷಗಳಲ್ಲಿ ಐನೂರು ಜನ ಪ್ರತಿಕ್ರಿಯಿಸುತ್ತಾರೆ. ಅವರ ಸೋಷಿಯಲ್ ಮೀಡಿಯಾ ಟೀಮ್ ಅಂಥ ಪ್ರತಿಕ್ರಿಯೆಗಳನ್ನು ಉತ್ಪಾದಿಸುತ್ತದೆ. ಈ ತಂಡವನ್ನು ನಿರ್ವಹಿಸುವವರು ಅನುಭವಿ ಪತ್ರಕರ್ತರು. ಇನ್ನು ವಿಶ್ವವಿದ್ಯಾಲಯಗಳಿಂದ ಹಸಿಹಸಿಯಾಗಿ ಬರುವ ವಿದ್ಯಾರ್ಥಿಗಳು ಸುದ್ದಿಮನೆಗಳತ್ತ ಹೆಜ್ಜೆ ಹಾಕದೇ ಹಣದಾಸೆಗೆ ರಾಜಕಾರಣಿಗಳ ಮನೆಯ ಹೊಸ್ತಿಲನ್ನು ತುಳಿಯುತ್ತಿದ್ದಾರೆ. ಇನ್ನು ಕೆಲವರಂತೂ ತಮ್ಮದೇ ಯುಟ್ಯೂಬ್ ಚಾನೆಲ್ಲು ಗಳನ್ನು ಆರಂಭಿಸಿಕೊಂಡಿದ್ದಾರೆ. ಯಾವುದೇ ಹೊಸ ಸಿನಿಮಾ ಬಿಡುಗಡೆಗೆ ಮುನ್ನ ಕನಿಷ್ಠ ನಲವತ್ತು ಯುಟ್ಯೂಬ್ ಚಾನೆಲ್ಲುಗಳ ಪ್ರತಿನಿಧಿಗಳು ಬಂದಿರುತ್ತಾರೆ. ಇವೆಲ್ಲವುಗಳ ಪರಿಣಾಮವಾಗಿ, ಪತ್ರಿಕೆ ಮತ್ತು ಟಿವಿ ಚಾನೆಲ್ಲುಗಳಲ್ಲಿ ಪತ್ರಕರ್ತರ ಸಂಖ್ಯೆ ಕ್ಷೀಣಿಸುತ್ತಿದೆ. ಇದು ಪತ್ರಕರ್ತರಿಗಾಗಲಿ, ಪತ್ರಿಕೋದ್ಯಮ ಕ್ಕಾಗಲಿ ಒಳ್ಳೆಯದಲ್ಲ. ರಾಜಕಾರಣಿಗಳ ಮನೆ ಕಾಯುವುದು ಪತ್ರಿಕೋದ್ಯಮ ಅಲ್ಲ.