Saturday, 14th December 2024

ಜೂದಾಸ್ ಎಂಬ ವಿಶ್ವಾಸಘಾತುಕನಿಂದ ಪ್ರಕಟಗೊಂಡ ವಿಶ್ವಾಸ

ಅಭಿವ್ಯಕ್ತಿ

ಸೌಮ್ಯ ಗಾಯತ್ರಿ

ಕ್ರಿಶ್ಚಿಯನ್ ಪಂಗಡ ಅಥವಾ ಧರ್ಮ ಎಂದೊಡನೆ ಒಂದು ಚಿತ್ರಣ ಕಣ್ಣ ಮುಂದೆ ಬರುವುದು ಕ್ರಿಸ್ಮಸ್. ಬಗೆಬಗೆಯ ರೀತಿಯಲ್ಲಿ
ದೀಪಾಲಂಕೃತಗೊಂಡು ಕಂಗೊಳಿಸುವ ಕ್ರಿಸ್ಮಸ್ ವೃಕ್ಷಗಳು, ಎಲ್ಲೂ ಸಂಭ್ರಮ, ಸಡಗರ.

ಕ್ರಿಸ್ಮಸ್ ತಾತ ಅಥವಾ ಸಾಂತಾ ಕ್ಲಾಸ್ಸ್ ಎಂಬ ಒಬ್ಬ ಕಾಲ್ಪನಿಕ ಪಾತ್ರ, ಆ ವ್ಯಕ್ತಿ ತರುವ ಉಡುಗೊರೆಗಳಿಗೆ ರಾತ್ರಿಯೆಲ್ಲ ಕಾತುರ ದಿಂದ ಕಾಯುವ ಮಕ್ಕಳು, ಸ್ವಾದಿಷ್ಟ ಕೇಕು, ದ್ರಾಕ್ಷಾರಸ ಮತ್ತು ಇಂದಿನ ಯುವ ಪೀಳಿಗೆಯ ಸಂತಸದ ಪಾರ್ಟಿ ಸಮಯ ಈ ಕ್ರಿಸ್ಮಸ್‌ನ ವಿಶೇಷತೆ. ಈಗೀಗ ಇವೆಲ್ಲವೂ ಕ್ರೈಸ್ತ ಸಮುದಾಯಕ್ಕೆ ಮಾತ್ರ ಸೀಮಿತವಾಗಿರದೆ ಎಲ್ಲ ಜಾತಿ ಮತ ಧರ್ಮದವರೂ
ಸಂಭ್ರಮಿಸುವ ಹಬ್ಬವಾಗಿ ಮಾರ್ಪಟ್ಟಿದೆ ಕ್ರಿಸ್ಮಸ್.

ಆದರೆ ಈ ಕ್ರಿಶ್ಚಿಯನ್ ಅಥವಾ ಕ್ರೈಸ್ತ ಧರ್ಮದ ಬುನಾದಿ ಅಥವಾ ವಿಶ್ವಾಸದ ಮೂಲ ಅಡಿಪಾಯ ಕ್ರಿಸ್ತ ಯೇಸುವಿನ ಪುನರು ತ್ಥಾನ ಎಂಬುದು ಒಂದು ಬಹಳ ಮುಖ್ಯ ಅಂಶ. ಕ್ರೈಸ್ತರ ಅತಿ ಶ್ರೇಷ್ಠ ಆಚರಣೆ ಎಂದರೆ ಅದು ಈಸ್ಟರ್ ಹಬ್ಬ. ಈಸ್ಟರ್ ಎಂದಾಕ್ಷಣ ನೆನಪಾಗುವುದು ಗುಡ್ ಫ್ರೈಡೆ. ಅನೇಕರು ಹ್ಯಾಪಿ ಗುಡ್ ಫ್ರೈಡೆ ಎಂದು ಶುಭ ಕಾಮನೆಗಳನ್ನು ಕೋರುವುದುಂಟು,
ಕಾರಣ ಆ ಫ್ರೈಡೆಯೊಂದಿಗೆ ಗುಡ್ ಎಂಬ ಪದ ಸೇರಿರುವುದು. ಇಲ್ಲಿ ಗುಡ್ ಎನ್ನುವುದರ ಆಂತರಿಕ ಅರ್ಥ ಶುಭ ಅಥವಾ ಪವಿತ್ರ ಎಂದು. ಲೋಕ ಕಲ್ಯಾಣಕ್ಕಾಗಿ ತಮ್ಮನ್ನೇ ತಾವು ಬಲಿಯಾಗಿ ಪ್ರಾಣಾರ್ಪಣೆ ಮಾಡಿದ ಪವಿತ್ರ ಶುಕ್ರವಾರ ಅದು.

ಈಸ್ಟರ್ ಅಥವಾ ಗುಡ್ ಫ್ರೈಡೆ ಎಂದಾಗ ಜನಮನಗಳಲ್ಲಿ ಶಿಲುಬೆಗೇರಿಸಿದ ದಿನದ ಯೇಸುವಿನ ಜೀವನದಲ್ಲಿನ ಅಂತಿಮ ಹನ್ನೆರಡು ಗಂಟೆಗಳ ಕಾಲದ ಘೋರ ಚಿತ್ರಣವನ್ನು ನಮ್ಮ ಮನಸ್ಸಿನಾಳದಲ್ಲಿ ಮಮ್ಮಲ ಮರುಗುವಂತೆ ಛಾಪು ಮೂಡಿಸಿದ ಚಿತ್ರ ಎಂದರೆ ಅದು ದಿ ಪ್ಯಾಶನ್ ಆಫ್ ಕ್ರೈಸ್ಟ್. ೨೦೦೪ರಲ್ಲಿ ಮೂಡಿಬಂದ ಈ ಚಿತ್ರವು ಆಂಗ್ಲ ಭಾಷೆಯಲ್ಲದೆ ಯಹೂದಿ,
ಪ್ಯಾಲೇಸ್ತಿಯನ್ ಅರಾಮಿಕ್, ಲ್ಯಾಟಿನ್ ಮತ್ತು ಹೀಬ್ರೂ ಭಾಷೆಯಲ್ಲಿ ಬಿತ್ತರವಾಯಿತು.

ಇದೆಲ್ಲದರ ಜತೆಗೆ ಬೈಬಲ್ಲಿನ ಒಂದು ಪಾತ್ರ ಇಲ್ಲಿ ಬಹಳ ಮಹತ್ವ ಪಡೆದುಕೊಂಡಿದೆ. ಅದು ಯೇಸುವನ್ನು ಗುರುದ್ರೋಹ ಮಾಡಿ ರೋಮನ್ನರಿಗೆ ಹಿಡಿದುಕೊಡುವ ಜೂದಾಸ್ ಎಂಬ ವಿಶ್ವಾಸಘಾತುಕನದು. ಜೂದಾಸ್ ಇಸ್ಕರಿಯೊಟ್ ಯೇಸುವಿಗೆ ಮಾಡಿದ ದ್ರೋಹವನ್ನು ನೆನಪಿಸಿಕೊಳ್ಳುವ ಸಮಯ ಈ ಈಸ್ಟರ್ ಸಮಯ. ಜೂದಾಸ್ ಎಂಬುವುದು ಈಸ್ಟರ್ ಅಥವಾ ಕ್ರೈಸ್ತ ಪಂಗಡದ ಧಾರ್ಮಿಕ ವಿಚಾರಧಾರೆಗೆ ಮಾತ್ರ ಸೀಮಿತ ವಾಗಿರದೆ ಸಮಕಾಲೀನ ಸಂಸ್ಕೃತಿಯಲ್ಲಿ ವಿಶ್ವಾಸಘಾತುಕ ತನಕ್ಕೆ ಪರ್ಯಾಯ ಪದವಾಗಿದೆ. ಉದಾಹರಣೆಗೆ, ಫುಟ್ಬಾಲ್‌ನಲ್ಲಿ ಒಬ್ಬ ಆಟಗಾರ ಒಂದು ತಂಡದಿಂದ ಅದರ ಪ್ರತಿಸ್ಪರ್ಧಿ ತಂಡಕ್ಕೆ ವರ್ಗಾವಣೆ ಗೊಳ್ಳುವ ಕ್ರಿಯೆಯನ್ನು ಜುದಾಸ್ ವರ್ಗಾವಣೆ (Judas Transfer) ಎಂದು ಕರೆಯಲಾಗುತ್ತದೆ.

ಆದರೆ ಇವೆಲ್ಲವನ್ನೂ ಸ್ವಲ್ಪ ಕೂಲಂಕಷವಾಗಿ ಅರಿಯುವ ಪ್ರಯತ್ನ ಮಾಡಿದಲ್ಲಿ ಹಲವಾರು ಸತ್ಯಾಸತ್ಯತೆಗಳು ಅನಾವರಣ ಗೊಳ್ಳುತ್ತವೆ. ಈ ಜೂದಾಸ್ ಎಂಬ ವ್ಯಕ್ತಿ ಒಳ್ಳೆಯವನೇ? ಜೂದಾಸ್ ಕೇವಲ ೩೦ ಬೆಳ್ಳಿ ನಾಣ್ಯಗಳ ಆಮಿಷಕ್ಕೊಳಗಾಗಿ ಯೇಸುವಿಗೆ ಗುರುದ್ರೋಹ ಮಾಡಿದನೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಬೈಬಲ್ ಗ್ರಂಥದಲ್ಲಿ ಅನೇಕ ಉಖಗಳು ಇದನ್ನೇ ಹೇಳುತ್ತವೆ. ಆದರೆ ಜುದಾಸ್‌ನ ಮುಖ್ಯ ಉದ್ದೇಶ ದುರಾಸೆ ಎಂದು ಒಪ್ಪಿಕೊಳ್ಳುವಲ್ಲಿ ಕೆಲವು ಸಮಸ್ಯೆಗಳಿವೆ.

ಜೂದಾಸ್ ಕೇಳಿದ್ದ ಮೊತ್ತ ಬಹಳ ಸಣ್ಣ ಪ್ರಮಾಣದ್ದಾಗಿದೆ. ಬೈಬಲ್ ಹೇಳುವಂತೆ ಅದು ಒಂದು ಪುಟ್ಟ ಪ್ರದೇಶವನ್ನು ಖರೀದಿಸಲು ಸಾಕು. ಆದರೆ ಜುದಾಸ್‌ನ ಏಕೈಕ ಉದ್ದೇಶ ದುರಾಸೆಯಾಗಿದ್ದರೆ, ೧.ಅವನು ಯಾಕೆ ಇನ್ನೂ ಹೆಚ್ಚು ಕೇಳಲಿಲ್ಲ?
೨.ಜುದಾಸ್ ದುರಾಸೆ ಮತ್ತು ಅಪ್ರಾಮಾಣಿಕ ನಾಗಿದ್ದರೆ, ಯೇಸು ತಮ್ಮ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನನ್ನಾಗಿ ಏಕೆ ಆರಿಸಿಕೊಂಡರು? ೩.ಜುದಾಸ್ ದುರಾಸೆ ಮತ್ತು ಅಪ್ರಾಮಾಣಿಕನಾಗಿದ್ದರೆ ಹಣವನ್ನು ನೋಡಿಕೊಳ್ಳುವ ಕೆಲಸವನ್ನು ಯೇಸು ಏಕೆ ಆತನಿಗೆ ಕೊಟ್ಟರು? ೪.ಜೂದಾಸಿನ ದೃಷ್ಟಿಕೋನದಿಂದ ನೋಡಿದಲ್ಲಿ, ಅವನು ದುರಾಸೆ ಮತ್ತು ಅಪ್ರಾಮಾಣಿಕ ನಾಗಿದ್ದರೆ,
ಹಣ ಗಳಿಸುವ ಯಾವುದೇ ರೀತಿಯ ಅವಕಾಶಗಳನ್ನು ಒದಗಿಸದ ಈ ೧೨ ಮಂದಿಯ ಗುಂಪಿನೊಂದಿಗೆ ಅವನು ಏಕೆ ಸೇರಿಕೊಂಡನು? ಜುದಾಸಿನ ನಂಬಿಕೆದ್ರೋಹವು ದೇವರ ಮೋಕ್ಷ ಯೋಜನೆಯ ಅಗತ್ಯ ಭಾಗವಾಗಿತ್ತು.

ಯೇಸುವಿನ ಮಹಿಮೆಯನ್ನು ಪ್ರಕಟಪಡಿಸುವಿಕೆಯ ಯೋಜನೆಯ ಒಂದು ಅಂಗವೇ ಈ ಜೂ ದಾಸ. ಈ ಜೂದಾಸ ಯೇಸುವಿಗೆ ದ್ರೋಹ ಮಾಡದಿದ್ದರೆ ಯೇಸುಶಿಲುಬೆಗೇರುತ್ತಿದ್ದರೆ? ಶಿಲುಬೆಯ ಮರಣಾನಂತರದ ಪುನರುತ್ಥಾನ ಇರುತ್ತಿತ್ತೇ? ಶಿಲುಬೆ ಮತ್ತು ಪುನರುತ್ಥಾನ ಇವೆರಡೂ ಇಲ್ಲದೆ ಕ್ರಿಶ್ಚಿಯನ್ ಧರ್ಮದ ಅನೇಕ ಸ್ಥಾಪನಾ ಘಟನೆಗಳು, ಮೂಲ ವಿಶ್ವಾಸ, ಪರಮ ಪ್ರಸಾದವೆಂಬ ಸಾಂಗ್ಯ, ಯಾಜಕತ್ವದ ಸ್ಥಾಪನೆ ಇವೆಲ್ಲವೂ ಇರುತ್ತಲೇ ಇರಲಿಲ್ಲ ಅಲ್ಲವೇ? ಜುದಾಸ್ ಮಾಡಿದ ದ್ರೋಹ ಆಕಸ್ಮಿಕವಲ್ಲ; ಇದು
ಪೂರ್ವನಿರ್ಧರಿತ ಕಾಯಕ.

ಇಂದಿನ ದಿನಗಳಲ್ಲಿ ಯೋಚಿಸಿದಾಗ ಜೂದಾಸನನ್ನು ವಿಶ್ವಾಸಘಾತುಕತನಕ್ಕೆ ಪರ್ಯಾಯವಾಗಿ ಮಾತನಾಡುವ ನಾವು ಎಷ್ಟು ಬಾರಿ ಜೂದಾಸನಂತೆ ವರ್ತಿಸಿಲ್ಲ? ಪರರ ಪಾಪಕ್ಕಾಗಿ ಇಲ್ಲ ಸಲ್ಲದ ದೋಷಾರೋಪಣೆಗಳನ್ನು ತಮ್ಮ ಮುಡಿಗೇರಿಸಿಕೊಂಡು,
ಚಾಟಿ ಏಟು, ಧೂಳು, ಉಗುಳು ನಿಂದನೆಗಳನ್ನು ಸಹಿಸಿಕೊಂಡು ಶಿಲುಬೆಯ ಮೇಲೆ ಗಂಟೆಗಳ ಕಾಲ ನೋವನ್ನನುಭವಿಸಿ ಪ್ರಾಣತ್ಯಾಗ ಮಾಡಿ, ಕೊನೆಯ ಘಳಿಗೆಯಲ್ಲಿಯೂ ಜನರಿಗಾಗಿ ಮಿಡಿದು ಅವರಿಗೆ ಕ್ಷಮೆ ಕೋರಿದ ಆ ಪುಣ್ಯಪುರುಷ ಯೇಸು ಸ್ವಾಮಿಗೆ ಇಂದು ಎಷ್ಟು ಮಂದಿ ಜೂದಾಸನ ಪ್ರೀತಿ ತೋರುತ್ತಿಲ್ಲ? ಹೆಜ್ಜೆ ಹೆಜ್ಜೆಯಲ್ಲೂ ಜೂದಾಸನನ್ನು ಪ್ರಕಟಗೊಳಿಸುತ್ತಾ ಹೆಚ್ಚು ಹೆಚ್ಚು ಪಾಪಮಯ ಜೀವನವನ್ನು ಜೀವಿಸುತ್ತಿರುವ ನಾವು ಒಮ್ಮೆಯಾದರೂ ಪಶ್ಚಾತ್ತಾಪದ ನಿವೇದನೆ ಮಾಡಿದ್ದೇವೆಯೇ?
ಜೂದಾಸನನ್ನು ಪಾಪಿ, ಗುರುದ್ರೋಹಿ, ವಿಶ್ವಾಸ ಘಾತುಕ ಎನ್ನುವ ಜನರು, ಅವನಿಂದ ಪ್ರಕಟಗೊಂಡ ವಿಶ್ವಾಸಕ್ಕೆ ಯಾವ ರೀತಿಯ ನ್ಯಾಯ ಒದಗಿಸಿ ಕೊಡುತ್ತಿದ್ದಾರೆ? ಅಂದು ೧೨ ಮಂದಿಯಲ್ಲಿ ಒಬ್ಬ ಜೂದಾಸ ಆದರೆ ಇಂದು ಒಬ್ಬೊಬ್ಬರಲ್ಲಿಯೂ ಕ್ರೋಧ, ಲಾಭ, ಲಾಲಸೆ, ಈರ್ಷ್ಯೆ,ಮೋಹ, ಕಿಡಿಗೇಡಿತನ, ದುರಾಚಾರ, ಮೋಸ, ಸುಳ್ಳು, ವಂಚನೆ, ಅವಿಶ್ವಾಸ, ಕ್ರೌರ್ಯ, ಎಂಬುವ ಹನ್ನೆರಡು ಜೂದಾಸರು ಮನೆ ಮಾಡಿದ್ದಾರೆ.

ಈಸ್ಟರ್ ಹಬ್ಬದಂದು ದೇವರ ಮಹಿಮೆಯನ್ನು ಅರಿತು ಇನ್ನಾದರೂ ಪರಪ್ರೀತಿ, ಪರಸೇವೆ ಮತ್ತು ಲೋಕ ಕಲ್ಯಾಣಕ್ಕಾಗಿ
ಜೀವನವನ್ನು ಧಾರೆ ಎರೆಯುವ ಮನೋಭಾವನೆಯನ್ನು ಬೆಳೆಸಿಕೊಂಡು ಯೇಸುವಿಗೆ ಪ್ರಾಮಾಣಿಕವಾಗಿ ನಡೆಯುವ ಪ್ರಯತ್ನ ಮಾಡೋಣ.