Thursday, 12th December 2024

ಬರಬಾರದ್ದೇನೂ ಬಂದಿಲ್ಲ, ಸ್ವಾಗತಿಸಿ ಸಜ್ಜಾಗೋಣ !

ಸುಪ್ತ ಸಾಗರ

rkbhadti@gmail.com

ಇಂಥದ್ದೊಂದು ಬರಗಾಲ ಯಾಕೆ ಬೇಕಿತ್ತು ಎಂಬುದಕ್ಕೆ ಕಾರಣಗಳು ಸ್ಪಷ್ಟ. ಅತ್ಯಂತ ಮುಖ್ಯವಾಗಿ ನಮ್ಮಲ್ಲಿ ನೀರಿನ ಬಗೆಗೆ, ಅದರ ಮೌಲ್ಯದ ಕುರಿತು ಪುಟ್ಟದೊಂದು ಭಯ, ಆತಂಕಯುಕ್ತ ಜಾಗೃತಿ ಮೂಡಲು ಬರವೇ ಬರಬೇಕಿತ್ತು. ಅದಿಲ್ಲದಿದ್ದರೆ ನಾವು ನೀರಿನ ಬಗ್ಗೆ ಯೋಚಿಸುವುದೇ ಇಲ್ಲ.

ನಿಮಗೆ ಖಂಡಿತಾ ಇದನ್ನು ಓದುತ್ತಿದ್ದಂತೆಯೇ ಇನ್ನಿಲ್ಲದ ಕೋಪ ಬರುತ್ತದೆ. ಎಂಥಾ ವಿಘ್ನ ಸಂತೋಷಿ ಮನಸ್ಸು ಎಂದುಕೊಳ್ಳುತ್ತೀರಿ. ಹಿಡಿ ಹಿಡಿ ಶಾಪ ಹಾಕುತ್ತೀರಿ. ಆದರೂ ಸರಿಯೇ ದೇಶಕ್ಕೆ ಬರ ಬರುತ್ತಿರುವುದು ಭರಪೂರ ಸಂತೋಷವನ್ನು ತಂದಿದೆ! ಇಂಥ ಸುಂದರ ದಿನಗಳು ಸಿಗುವುದು ಅಪರೂಪ. ಈವರೆಗೆ ಸಿಕ್ಕಿರುವುದೂ ಅಪರೂಪ. ನಿಜಕ್ಕೂ ಸಂತಸವಾಗುತ್ತಿದೆ. ಕೆಲ ವರ್ಷಗಳಿಂದ ಬಯಸಿದ ಬರಗಾಲ ಕೊನೆಗೂ ದೇಶವನ್ನೇ ಆಕ್ರಮಿಸಿಕೊಳ್ಳುತ್ತಿದೆ ಯಂತೆ.

ಸಿಕ್ಕಾಪಟ್ಟೇ ಕಾದ ಸಂಗಾತಿ ಕೊನೆಗೊಮ್ಮೆ ಅನಿರೀಕ್ಷಿತವಾಗಿ ಸಿಕ್ಕಷ್ಟು ಸಂತಸ ಈ ವರ್ಷ ಆಗುತ್ತಿದೆ. ಏಕೆಂದರೆ ಭಾರತದಲ್ಲಿ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆಯಂತೆ. ಹಾಗೆಂದು ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈಮೆಟ್ ವರದಿ ಮಾಡಿದೆ. ಮುಂಬರುವ ಮಾನ್ಸೂನ್‌ನಲ್ಲಿ ಸಾಮಾನ್ಯ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಲಿದ್ದು, ಶೇಕಡಾ ೯೪ ರಷ್ಟು ಮಳೆಯಾಗಲಿದೆ ಎಂದು ಹೇಳಿದೆ. ಜೂನ್ ನಿಂದ ಸೆಪ್ಟೆಂಬರ್‌ವರೆಗೆ ನಾಲ್ಕು ತಿಂಗಳ ದೀರ್ಘಾವಧಿಯಲ್ಲಿ ದೀರ್ಘಾವಧಿಯ ಸರಾಸರಿ (ಎಲ್‌ಪಿಎ) ೮೬೮.೬ ಮಿಮೀ ಮಳೆಯಾಗಲಿದೆ ಎನ್ನಲಾಗಿದೆ.

ಇದನ್ನು ಭಾರತೀಯ ಹವಾಮಾನ ಇಲಾಖೆಯೂ ದೃಢಪಡಿಸಿದೆ. ಅದಕ್ಕೆ ಪೂರಕವಾಗಿ ರಾಜ್ಯದಲ್ಲಿ ಈ ಬಾರಿಯ ಬೇಸಿಗೆ ಬೇಗೆಯೂ ಮಿತಿಮೀರಿದ್ದು, ಧಗೆಗೆ ಅಕ್ಷರಶಃ ಕರ್ನಾಟಕದ ಜನತೆ ತತ್ತರಿಸಿ ಹೋಗಿದೆ. ಈಗಿನ ಸ್ಥಿತಿ ನೋಡಿದರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಸಿಲು ಹೆಚ್ಚಾಗಲಿದೆ ಎಂದು ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ವಿವಿಧ ಜಿಲ್ಲಿಗೆಳಲ್ಲಿ ದಾಖಲೆಯ ತಾಪಮಾನ ದಾಖಲಾಗಿದ್ದು, ರಾಜಧಾನಿ ಬೆಂಗಳೂರಿನಲ್ಲೇ ಮೊನ್ನೆ ಗುರುವಾರ ಈ ವರ್ಷದ ಗರಿಷ್ಠ ತಾಪಮಾನ ೩೬.೪ ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

ಮತ್ತೊಂದೆಡೆ ಕಲಬುರಗಿಯಲ್ಲಿ ಗರಿಷ್ಠ ೪೧.೫ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಪರಿಣಾಮವೇ ಇದಕ್ಕೆ ಕಾರಣವೆಂದು ತಜ್ಞರು ಹೇಳಿದ್ದು, ಒಂದೊಮ್ಮೆ ಇದು ನಿಜವೇ ಆಗಿದ್ದರೆ ಮುಂದಿನ ಒಂದು ವರ್ಷ ತೀವ್ರ ರ ದೇಶವನ್ನು ಕಾಡುವುದರಲ್ಲಿ ಅನುಮಾನವಿಲ್ಲ. ಇಂಥದ್ದೊಂದು ಅವಕಾಶ ಮತ್ತೆಂದೂ ಸಿಗಲು ಸಾಧ್ಯವೇ ಇಲ್ಲ. ಚುನಾವಣಾ ರಾಜಕೀಯ ಮುಗಿಯುತ್ತಿದ್ದಂತೆಯೇ ಬರದ ರಾಜಕೀಯ ಆರಂಭವಾಗುವುದು ನಿರೀಕ್ಷಿತ. ಹೀಗಾಗಿ ಅಧಿಕಾರಿಗಳು, ರಾಜಕಾರಣಿಗಳು ಈಗಲೇ ಹಬ್ಬಕ್ಕೆ ಅಣಿಯಾಗುತ್ತಿದ್ದಾರೆ.

ಪರಿಹಾರದ ವಿಚಾರದಲ್ಲಿ ಕೇಂದ್ರದ ಮೇಲೆ ರಾಜ್ಯ ಸರಕಾರ, ರಾಜ್ಯದ ಮೇಲೆ ಕೇಂದ್ರ ಸರಕಾರ ಕೆಸರೆರಚಾಟಕ್ಕೆ ನಿಲ್ಲುವುದರಲ್ಲಿ ಅನುಮಾನವೇ ಇಲ್ಲ. ಒಟ್ಟಾರೆ ಜೇಬು ತುಂಬಿಸಿಕೊಳ್ಳಲು ಪೈಪೋಟಿಯೇ ನಡೆಯಲಿದೆ. ಕೆರೆ ಕಾಮಗಾರಿ, ಕಾಲುವೆ ದುರಸ್ತಿ, ಟ್ಯಾಂಕರ್ ನೀರಿನ ಪೂರೈಕೆ, ಕಾಳ ಸಂತೆಯಲ್ಲಿ ಆಹಾರ ಧಾನ್ಯಗಳ ಮಾರಾಟ ಎಲ್ಲೆಂದರಲ್ಲಿ ಹಣವೇ ಕಾಣಲಿದೆ. ಹೀಗಾಗಿ ಬರಗಾಲವೆಂಬುದು ಆಪ್ತವಾಗಿ ತೋರುತ್ತಿರಬಹುದು ಆ ವರ್ಗಕ್ಕೆ. ಬಿಡಿ, ಆ ಮಾತು. ಅವರು ಬದಲಾಗುವುದಿಲ್ಲ. ಇದರ ಹೊರತಾಗಿಯೂ ನಾವು ಬರವನ್ನು ಆದರಿಂದ ಬರಮಾಡಿಕೊಳ್ಳಲೇಬೇಕು. ಬಯಸಿದ ಬರವೂ ಬಂದಾಗಿದೆ. ಯಾರು ಹೇಳಿದ್ದು ಬರವೆಂದರೆ ಅನಿಷ್ಟ, ಸಂಕಷ್ಟಗಳೆಂದು? ಬರಬಾರದ್ದೇನೂ ಬಂದಿಲ್ಲ.

ಹೀಗೆ ಹೇಳಿದರೆ, ಬಹುಶಃ ಮೊದಲೇ ಬೆಂದು ಬಸವಳಿದು ಕುಳಿತ ಮಂದಿ ಇನ್ನಷ್ಟು ಹಿಡಿ ಶಾಪ ಹಾಕುತ್ತಾರೆ ಎಂಬುದು ಗೊತ್ತು. ಆದರೆ, ಇಂಥದ್ದೊಂದು ಬರಗಾಲ ಯಾಕೆ ಬೇಕಿತ್ತು ಎಂಬುದಕ್ಕೆ ಕಾರಣಗಳು ಸ್ಪಷ್ಟ. ಅತ್ಯಂತ ಮುಖ್ಯವಾಗಿ ನಮ್ಮಲ್ಲಿ ನೀರಿನ ಬಗೆಗೆ, ಅದರ ಮೌಲ್ಯದ ಕುರಿತು ಪುಟ್ಟದೊಂದು ಭಯ, ಆತಂಕಯುಕ್ತ ಜಾಗೃತಿ ಮೂಡಲು ಬರವೇ ಬರಬೇಕಿತ್ತು. ಅದಿಲ್ಲದಿದ್ದರೆ ನಾವು ನೀರಿನ ಬಗ್ಗೆ ಯೋಚಿಸುವುದೇ ಇಲ್ಲ. ಹೇಗೂ ಕಳೆದ ನಾಲ್ಕೈದು ವರ್ಷಗಳಲ್ಲಿ ಉತ್ತ ಮಳೆಯಾಗಿ ಕೆರೆ- ಕಟ್ಟೆಗಳು ತುಂಬಿದ್ದವು, ಅಂತರ್ಜಲ ವೃದ್ಧಿಯಾಗಿ ಬೋರ್‌ವೆಲ್‌ಗಳಲ್ಲಿ ನೀರು ಸಿಗುತ್ತಿತ್ತು.

ಹೀಗಾಗಿ ನೀರುಳಿಸುವ ಯೋಚನೆಯಿಂದ ದೂರ ಬಂದು, ಕೆರೆ-ಕಟ್ಟೆಗಳ ನಿರ್ವಹಣೆಯನ್ನು ಮರೆತು ನಾವೆಲ್ಲರೂ ಆರಾಮವಾಗಿದ್ದೆವು. ನೀರಿನ ಕೆಲಸ ವೆಂದರೆ ಶಾಂತಿ ಕಾಲದ ಶಸಾಸಗಳಿದ್ದಂತೆ. ದೇಶದೆಲ್ಲೆಡೆ ಸುಖ ಸಮೃದ್ಧಿಯಿದ್ದು, ನೆರೆ ದೇಶಗಳು ನಮ್ಮ ತಂಟೆಗೆ ಬಾರದೇ, ಜಗತ್ತಿನ ಎಲ್ಲ ರಾಷ್ಟ್ರ ಗಳೊಂದಿಗೆ ಸೌಹಾರ್ದ ನೆಲೆಸಿದ್ದರೆ, ದೇಶದ ಒಳಗೂ ಬಂಡಾಯ, ಚಳವಳಿ, ಕಿಡಿಗೇಡಿ ಕೃತ್ಯಗಳು ನಡೆಯದೇ ಇದ್ದರೆ, ಕಳ್ಳ-ಕಾಕರು ಕುಲ ವೃತ್ತಿಯನ್ನು ತೊರೆದು ಪರ್ಯಾಯ ಉದ್ಯೋಗದಲ್ಲಿ ತೊಡಗಿದ್ದರೆ ಮತ್ತೆ ಯೋಧರ ಶಸಗಳಿಗೆ ಏನು ಕೆಲಸ? ಅವುಗಳ ತುಕ್ಕು ತೆಗೆಯುವ, ಎಣ್ಣೆಸವರಿ ಸಜ್ಜುಗೊಳಿಸಲು
ಅಣಿಯಾಗುವುದು ದೇಶದಲ್ಲಿ ಅಭದ್ರತೆ ಬಂದಾಗಲೇ.

ಕೆಚ್ಚದೆಯ ಯೋಧನಿಗೆ ಯುದ್ಧವೆಂದರೆ ಉತ್ಸಾಹ. ತನ್ನ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶಿಸಲು, ದೇಶಕ್ಕಾಗಿ ಪ್ರಾಣವನ್ನು ಪಣಕ್ಕಿಡಲು ಯುದ್ಧವೊಂದು ಸುವರ್ಣಾವಕಾಶ. ಪ್ರತಿ ಯೋಧನೂ ಇಂಥ ಕ್ಷಣಕ್ಕಾಗಿ ಕಾತರಿಸುತ್ತಿರುತ್ತಾನೆ. ಹಾಗೆಂದು ದೇಶದ ಅಭದ್ರತೆಯನ್ನೇನೂ ಅವನು ಬಯಸುವುದಿಲ್ಲ.
ಬರವೂ ಜಲಯೋಧರ ಪಾಲಿಗೆ ಇಂಥದ್ದೊಂದು ಅವಕಾಶವೇ. ಅದಿಲ್ಲದಿದ್ದರೆ ಜನತೆ ನೀರ ಕೆಲಸಗಳಿಗೆ ಮನಸ್ಸು ಮಾಡುವುದೇ ಇಲ್ಲ. ಕೆರೆಗಳ ಹೂಳೆತ್ತಲು ಯೋಚಿಸುವುದೇ ಇಲ್ಲ. ಹೊಸ ಕೆರೆಗಳನ್ನು ತೋಡಲು ತಾಣಗಳು ಸಿಗುವುದಿಲ್ಲ. ಕಾಲುವೆಗಳನ್ನು ದುರಸ್ತಿಗೊಳಿಸಲು ಚಿಂತಿಸುವುದೇ ಇಲ್ಲ. ಜಮೀನುಗಳಲ್ಲಿ ಹೊಂಡಗಳನ್ನು ತೋಡಲು, ಮುಂದಿನ ಮಳೆಗಾಲಕ್ಕಾದರೂ ಬಿದ್ದೋಡುವ ಮಳೆ ನೀರನ್ನು ಹಿಡಿದಿಡಲು, ಮನೆಯ ಚಾವಣಿಗೆ ಒಂದು ಪೈಪು ಜೋಡಿಸಿಕೊಳ್ಳಲು ಮುಂದಾಗುವುದೇ ಇಲ್ಲ.

ನೆಗಡಿ ಹತ್ತಿದ ಮೂಗಿನಂತೆ ದಿನವಿಡೀ ಸೋರುವ ಟ್ಯಾಪ್‌ಗಳು ರಿಪೇರಿಯಾಗುವುದಿಲ್ಲ. ಗಂಟೆಗಟ್ಟಲೆ ಸ್ನಾನದ ಹೆಸರಿನಲ್ಲಿ ನೀರು ಪೋಲು ನಿಲ್ಲುವುದಿಲ್ಲ.
ಭತ್ತ, ಕಬ್ಬುಗಳನ್ನೇ ಮುಖ್ಯ ಕೃಷಿ ಬೆಳೆಯೆಂದುಕೊಂಡು ಯಥೇಚ್ಛ ನೀರು ನಿಲ್ಲಿಸುವುದನ್ನು ರೈತರು ಬಿಡುವುದಿಲ್ಲ. ಕನಿಷ್ಠ ನೀರಿನಲ್ಲಿ ಬೆಳೆಯ ಬಹುದಾದ ಕಿರುಧಾನ್ಯಗಳು ನಮ್ಮ ಕಣ್ಣಿಗೆ ಬೀಳುವುದಿಲ್ಲ. ಒಣ ಭೂಮಿ ಹಸನಾಗುವುದೇ ಇಲ್ಲ. ಬೆಳೆ ವೈವಿಧ್ಯದ ಬಗ್ಗೆ ಯೋಚಿಸುವುದೇ ಇಲ್ಲ. ಪಾರಂಪರಿಕ ಜಲ ಸಂರಕ್ಷಣಾ ಪದ್ಧತಿಗಳ ವಿಸ್ಮೃತಿಯಿಂದ ಹೊರ ಬರುವುದಿಲ್ಲ.

ಭೂಮಿ ಒಮ್ಮೆ ಮೈ ಕೊಡವಿಕೊಳ್ಳಲೂ, ತನ್ನ ಧಾರಣಾ ಸಾಮರ್ಥ್ಯವನ್ನು ಹೆಚ್ಚಸಿಕೊಳ್ಳಲೂ ಬರವೆಂಬುದು ಸೂಕ್ತ ಕಾಲ. ವರ್ಷವಿಡೀ ದುಡಿದ ಮೈ ಮನಸ್ಸುಗಳಿಗೆ ಆಯಾಸ, ಬಳಲಿಕೆಯಾಗಿ ಒಮ್ಮೆ ನಾಲ್ಕು ದಿನ ವಿಶ್ರಾಂತಿ ಬೇಕೆನಿಸುವಾಗ ಜ್ವರ ಬಾಧಿಸಿದಂತೆ, ಅಜೀರ್ಣವಾದ ಹೊಟ್ಟೆ ಒಮ್ಮೆ ಕಸರ ನ್ನೆಲ್ಲಾ ಹೊರಹಾಕಿ ಸ್ವಚ್ಛಗೊಳ್ಳಲು ಅತಿಸಾರ ಕೆಣಕಿದಂತೆ ಭೂಮಿಯ ಮೇಲಿನ ಕೆಸರೆಲ್ಲ ಆರಿ, ಜವುಳುಗಳೆಲ್ಲ ಒಣಗಿ ಹೂಳೆಲ್ಲ ಹೊರ ಬಂದು, ಜಡ್ಡುಗಳೆಲ್ಲ ನಿರ್ನಾಮವಾಗಿ ಹೊಸ ಚಿಗುರೊಂದು ಮೂಡಿ ಬರಲು, ಇನ್ನಷ್ಟು, ಮತ್ತಷ್ಟು ಒಡಲೊಳಗೆ ಇಂಗಿ ಹೋಗಲು ಒಮ್ಮೆ ಮೇಲ್ಮೈ ಬಿರುಕು
ಬಿಡುವಷ್ಟು ಬರಗಾಲ ಬಾರಿಸಲೇಬೇಕು.

ಒಪ್ಪೋಣ, ಈ ವರ್ಷದ ಬರದಿಂದ ರಾಜ್ಯದ ಜನ ಇನ್ನಿಲ್ಲದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮೀಣ ಭಾಗದಲ್ಲಂತೂ ಇನ್ನಿಲ್ಲದಂತೆ ಪರಿಸ್ಥಿತಿ ಬಿಗಡಾ ಯಿಸಿದೆ. ಬೇರೆ ಮಾತು ಹಾಗಿರಲಿ, ಕುಡಿಯುವ ನೀರಿಗೇ ಎಲ್ಲಿ ನೋಡಿದರೂ ಹಾಹಾಕಾರ ಎದ್ದಿದೆ. ರಾಜ್ಯದ ಎಲ್ಲ ಜಲಾಶಯಗಳು ಬರಿದಾಗಿವೆ. ಎಂದೂ ಬತ್ತದ ರೀತಿಯಲ್ಲಿ ರಾಜ್ಯದ ಪ್ರಮುಖ ನದಿಗಳಾದ ತುಂಗೆ-ಕಾವೇರಿಯರೂ ಬೆತ್ತಲಾಗಿದ್ದಾರೆ. ಜನ, ಜಾನುವಾರು, ಜಲಚರ, ವನ್ಯಜೀವಿಗಳು ಕಂಗಾಲಾಗಿ ಕುಳಿತಿವೆ. ಬಡವರ ಬದುಕಂತೂ ದುಸ್ತರವಾಗಿದೆ.

ಇಂಥ ಸನ್ನಿವೇಶದಲ್ಲೂ ನಾವು ನಾಳಿನ ಬಗ್ಗೆ ಯೋಚಿಸುವುದು ಬೇಡವೇ? ನೀರ ನೆಮ್ಮದಿಯೆನ್ನುವುದು ತನ್ನಿಂದ ತಾನೇ ಬೆಳೆಯುವ ಇಡುಗಂಟಲ್ಲ. ಅದು ಹಿರಿಯರ ಪುಣ್ಯವಿದ್ದಂತೆ. ಅವರು ಮಾಡಿದ್ದನ್ನು ನಾವು ಅನುಭವಿಸುತ್ತೇವೆ. ನಾವು ಮಾಡಿದ್ದನ್ನು ನಮ್ಮ ಮಕ್ಕಳು ಫಲದ ರೂಪದಲ್ಲಿ ಪಡೆಯುತ್ತಾರೆ. ನಮ್ಮ ಹಿಂದಿನವರು ಎಲ್ಲೆಂದರಲ್ಲಿ ಕೆರೆಗಳನ್ನು ನಿರ್ಮಿಸಿದ್ದರು ಎಂಬುದನ್ನು ಸ್ಮರಿಸಿಕೊಳ್ಳಲೇಬೇಕು. ಯಾರಿಗೇನು ಕಡಿಮೆಯಿದ್ದರು ಹೇಳಿ. ನಮ್ಮಲ್ಲಿ ರಾಜಮಹರಾಜರು ಕೆರೆಗಳನ್ನು ಕಟ್ಟಿಸಿದ್ದರೆಂಬುದನ್ನು ಬಿಡಿ, ವೇಶ್ಯೆಯರು ಕೆರೆ ಕಟ್ಟಿಸಿ ಪುಣ್ಯಕಟ್ಟಿಕೊಂಡಿದ್ದರು. ಮಕ್ಕಳಿಲ್ಲದವರು
ಮುಂದಿನ ಜನ್ಮದಲ್ಲಾದರೂ ಆಭಾಗ್ಯ ಸಿಗಲಿ ಎಂದು ನೀರ ಕೆಲಸಗಳನ್ನು ಮಾಡಿಸಿದ್ದರು.

ಬಾಲ್ಯದಲ್ಲೇ ಪತಿಯನ್ನು ಕಳಕೊಂಡು ಜೀವಮಾನವನ್ನೆಲ್ಲಾ ಹೊಸಲಿನೊಳಗೇ ಸವೆಸಿದ ವಿಧವೆಯರು ನೀರ ನಿಲ್ಲಿಸಿ ವೈಧವ್ಯದ ಸಂಕಟ, ಬೇಗುದಿಗಳನ್ನು ಮರೆತಿದ್ದರು. ಅಂಚೆ, ವೆಂಚೆ, ತಲಪರಿಕೆ, ಕಟ್ಟ, ಸುರಂಗ, ಒಡ್ಡು, ಮದಕ, ಊರಣಿ, ಗೋಕಟ್ಟೆ, ಬಾವಡಿ, ಕಲ್ಯಾಣಿ, ಅರವಟಿಗೆಗಳ ಹೆಸರಿನಲ್ಲಿ ನಾಳಿನ ನೀರ ನೆಮ್ಮದಿಗೆ ಭಾಷ್ಯ ಬರೆದ ನಮ್ಮ ಹಿರಿಕರ ಕಲ್ಯಾಣ ಕಾರ್ಯದ -ಲವನ್ನು ಈವರೆಗೆ ನಾವು ಕುಳಿತೇ ಭೋಗಿಸಿದ್ದೇವೆ. ಆದರೆ, ಇವೆಲ್ಲವೂ ನಮ್ಮ ನಿರ್ಲಕ್ಷ್ಯ ದಿಂದ ಮರೆಗೆ ಸಂದಿವೆ. ಹೇಗೆ ನೋಡಿದರೂ ಭಾರತಕ್ಕೆ ಬರ ಬರಲೇಬಾರದು. ಅಷ್ಟೊಂದು ಸಮೃದ್ಧ ಮಳೆ ದಿನಗಳು ನಮ್ಮಲ್ಲಿವೆ. ಬೇರೆ ದೇಶಗಳಿಗೆ ಹೋಲಿಸಿದರೆ ನಾವು ನಿಜಕ್ಕೂ ಪುಣ್ಯವಂತರು. ಆದರೂ ಬರದ ಬರೆ ಎಳೆಸಿಕೊಳ್ಳುತ್ತಿದ್ದೇವೆಂದರೆ ಕುಳಿತು ತಿಂದ ಕುಡಿಕೆ
ಹೊನ್ನಿನ ಕಥೆಯಾಗಿದೆ ನಮ್ಮದು ಎಂಬುದರಲ್ಲಿ ಅನುಮಾನವೇ ಇಲ್ಲ.

ಕನಿಷ್ಠ ನಾವು ಹೊಸ ಕೆಲಸವನ್ನು ಮಾಡುವುದು ಹಾಗಿರಲಿ, ಹಿಂದಿನವರು ಮಾಡಿದ್ದನ್ನು ಉಳಿಸಿಕೊಂಡಿದ್ದರೂ ಸಾಕಿತ್ತು ಇವತ್ತು ಇಂಥ ಪರಿಸ್ಥಿತಿ
ಬರುತ್ತಿರಲಿಲ್ಲ. ಬಂದಿದೆ, ಬಿಡಿ ಮತ್ತದೇ ಹೇಳುತ್ತೇನೆ; ಇದು ಒಳ್ಳೆಯದಕ್ಕೇ ಬಂದಿದೆ. ಈಗಲೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮನುಕುಲಕ್ಕೆ ಮತ್ತೆ ಪಶ್ಚಾತ್ತಾಪ ಪಡಲಿಕ್ಕೂ ಸಮಯ ಉಳಿಯುವುದಿಲ್ಲ. ಹಾಗೆಂದು ನಾವು ಕಂಗಾಲಾಗಬೇಕಿಲ್ಲ. ಮುಂದಿನ ಮಳೆ ದಿನಗಳು ನಮಗಾಗಿಯೇ ಕಾದಿದೆ. ಕಳೆದು
ಹೋದ ಸಮೃದ್ಧಿಯನ್ನು ದುಪ್ಪಟ್ಟು ಗಳಿಸಲು ನಮಗೆ ಇದಕ್ಕಿಂತ ಸುಂದರ ಅವಕಾಶ ಇನ್ನೊಂದಿಲ್ಲ. ಹೇಗೂ ಕೆರೆ ಗಳಲ್ಲಿ ನೀರಿಲ್ಲ. ಒಣಗಿ ಮೈದಾನವಾಗಿ ನಿಂತ ಅವುಗಳ ಹೂಳೆತ್ತಿಬಿಡಿ. ಬರುವ ಮಳೆಗೇ ಅದು ತುಂಬಿ ತೊನೆಯ ತೊಡಗುತ್ತದೆ.

ಎಲ್ಲವನ್ನೂ ಸರಕಾರವೇ ಮಾಡಬೇಕೆಂದು ಏಕೆ ಕುಳಿತಿರುತ್ತೀರಿ? ನಮ್ಮ ಪ್ರಾಣಕ್ಕೆ ಸಂಚಕಾರ ಬಂದರೆ ಸರಕಾರ ಅಬ್ಬಬ್ಬಾ ಅಂದರೆ ಪರಿಹಾರ ಘೋಷಿಸಬಹುದು. ಅದು ಬಿಟ್ಟರೆ, ಹೋದ ಪ್ರಾಣವನ್ನು ಮರಳಿ ಕೊಡಲು ಸಾಧ್ಯವೇ ಇಲ್ಲ. ಸೋತಿರುವವರಿಗೆ, ಸೋಲುತ್ತಿರುವವರಿಗೆ ಸೂರ್ತಿಯೇ ಸೋಪಾನ. ಬರಗಾಲ ನಮ್ಮೆಲ್ಲರಲ್ಲಿ ನೀರ ಕೆಲಸಕ್ಕೆ ಸೂರ್ತಿ ತುಂಬಲಿ. ಹಾಗೆಂದು ನೀವೇನೂ ನಿರಂತರ ಪರ್ಜನ್ಯಕ್ಕೆ ಕುಳಿತುಕೊಳ್ಳಬೇಕಿಲ್ಲ. ಭಗೀರಥ ನಂಥ ಭಯಂಕರ ತಪಸ್ಸನ್ನು ಮಾಡಬೇಕಿಲ್ಲ. ಯಾಗ ಯಜ್ಞಾದಿಗಳನ್ನು ಕೈಗೊಳ್ಳಬೇಕಿಲ್ಲ. ಪುಟ್ಟದೊಂದು ಪ್ರಾರ್ಥನೆಯೊಂದಿಗೆ ಸುಮನಸನ್ನು ಸೇರಿಸಿಕೊಂಡು ಹೊರಟುಬಿಡಿ. ನೀರೇ ಇಲ್ಲದೆ, ಬರಗೆಟ್ಟು ಹೋದ ನಿಮ್ಮ ಸುತ್ತಮುತ್ತಲ ಗ್ರಾಮಗಳನ್ನು ಗುರುತಿಸಿ. ಅಲ್ಲಿನವರನ್ನೂ ಪ್ರೇರೇಪಿಸಿ. ಕೆರೆ, ಒಡ್ಡು, ಕೃಷಿಹೊಂಡ, ಬದುಗಳನ್ನು ನಿರ್ಮಿಸಲು ಟೊಂಕಕಟ್ಟಿ. ನೆರವು ನೀಡಲು, ಮಾಘ್ಗಳನ್ನು ಸೂಚಿಸಲು ರಾಜ್ಯದಲ್ಲಿ ತಜ್ಞರಿಗೆ ಏನೂ ಕೊರತೆಯಿಲ್ಲ. ನಾವೆಲ್ಲರೂ ನಿಮ್ಮ ಜತೆಗಿದ್ದೇವೆ.

ಎಲ್ಲರೂ ಒಗ್ಗಟ್ಟಾದರೆ, ಕಾಡು ಗುಡ್ಡಗಳಲ್ಲಿ ನೀರು ಹಿಡಿಯುವುದೇನೂ ದೊಡ್ಡ ಮಾತಲ್ಲ. ನಮ್ಮೂರಿನಲ್ಲೂ ಒಂದು ಕಣಿವೆ ಕೆರೆ ನಿರ್ಮಿಸಬಹುದು.
ಮಳೆನೀರನ್ನು ಭೂಮಿಗೆ ಇಂಗಿಸುವ, ಹಿಡಿದಿಡುವ ಕಾರ್ಯವನ್ನು ಸಾರ್ವಜನಿಕ ದಾನ, ದೇಣಿಗೆಯ ಮೂಲಕ ಸಮರೋಪಾದಿಯಲ್ಲಿ ನಡೆಸೋಣ. ಯಾರು ಬರುತ್ತಾರೋ ಬಿಡುತ್ತಾರೋ. ನಾವಂತೂ ಹೊರಟು ಬಿಡೋಣ. ಕೆಲಸ ನಮ್ಮ ಮನೆಯಿಂದ, ನನ್ನಿಂದಲೇ ಆರಂಭವಾಗಲಿ. ನಮ್ಮನ್ನು ನೋಡಿ ಒಬ್ಬೊಬ್ಬರಾಗಿ ಬಂದು ಸೇರಿಕೊಳ್ಳುತ್ತಾರೆ. ನೆರವಿಗೆ ಉದಾರಿಗಳಿಗೂ ನಮ್ಮಲ್ಲಿ ಕೊರತೆಯಿಲ್ಲ.

ಸಿ- ಏಕ್ ಕದಂ ಆಗೇ… ಒಂದೇ ಒಂದು ಹೆಜ್ಜೆ ಎತ್ತಿ ಮುಂದಿಟ್ಟುಬಿಡೋಣ. ನಿಧಾನಕ್ಕೆ ಸಲಹೆ, ಸಹಾಯ, ಮಾರ್ಗದರ್ಶನ ನೀಡುವ ಒಳ್ಳೆಯ ಮನಸ್ಸುಗಳು ನಿಮ್ಮನ್ನು ಹುಡುಕಿ ಬರಬಹುದು. ಪುಣ್ಯಕ್ಕೆ ಈಗಂತೂ ಬರಗಾಲವಿದೆ. ಇದು ಇನ್ನೆಷ್ಟು ದಿನವಿರುತ್ತೋ ಗೊತ್ತಿಲ್ಲ. ಮತ್ತೆ ಮಳೆ
ಸುರಿಯುವುದರೊಳಗಾಗಿ ನಮ್ಮ ಸುತ್ತಮುತ್ತಲು ಬೀಳುವ ಪ್ರತಿ ಮಳೆ ಹನಿಯನ್ನೂ ಹಿಡಿದಿಟ್ಟುಕೊಳ್ಳಲು ಸಜ್ಜಾಗಿ ನಿಂತುಬಿಡೋಣ. ಒಮ್ಮೆ ಮಳೆ ಬೀಳಲು ಆರಂಭಿಸಿದರೆ ಈ ಕೆಲಸ ಮಾಡಲಾಗುವುದಿಲ್ಲ. ಇದೊಂಥರಾ ಮುಂಜಾನೆ ನಲ್ಲಿಯಲ್ಲಿ ನೀರು ಬರುವುದರೊಳಗೆ ಮನೆಯ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿಕೊಂಡು ಇಟ್ಟಂತೆ. ಬಕೀಟು, ಕೊಡ, ಪಾತ್ರೆಗಳನ್ನು ಬೆಳಗಿ ಒರೆಸಿಟ್ಟುಕೊಂಡತೆ.

ಬಯಸದೇ ಬಂದ ಭಾಗ್ಯದಂತೆ ಬರ ಬಂದಿದೆ. ಇಂಥ ಬರ ಬಂದಾಗ ಗರಬಡಿದು ಕೂರುವುದು ಮೂರ್ಖತನವಾದೀತು. ನೀರ ನೆಮ್ಮದಿಯ ಕೆಲಸವನ್ನು ನಾಳೆ ಮಾಡುತ್ತೇನೆಂದರೆ ಆಗದು. ಇಂದೇ ಮಾಡಿದರೆ ನಾಳೆಗಳು ನಮ್ಮದಿಯಾಗುವುದರಲ್ಲಿ ಅನುಮಾನಗಳಿಲ್ಲ.