ವರ್ತಮಾನ
maapala@gmail.com
ಹಿಜಾಬ್-ಕೇಸರಿ ಶಾಲು ವಿವಾದ ಆರಂಭವಾದಾಗ ರಾಜಕೀಯ ನಾಯಕರು ಪಕ್ಷ ಬೇಧ ಮರೆತು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದರೆ ಪ್ರಕರಣ ಅಷ್ಟೊಂದು ಗಂಭೀರವಾಗುತ್ತಲೇ ಇರಲಿಲ್ಲ. ವೋಟ್ ಬ್ಯಾಂಕ್‌ಗಾಗಿ ಅವರು ವಿವಾದಕ್ಕೆ ತುಪ್ಪ ಸುರಿದರೇ ವಿನಃ ಪರಿಸ್ಥಿತಿ ತಿಳಿಗೊಳಿಸುವ ಮನಸ್ಸು ಮಾಡಲೇ ಇಲ್ಲ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ದುಷ್ಕರ್ಮಿಗಳನ್ನು ಮಟ್ಟ ಹಾಕಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಳೆದ ಏಳೆಂಟು ತಿಂಗಳಿನಿಂದ ಅತಿ ಹೆಚ್ಚು ಬಾರಿ ಕೇಳಿಬಂದ ಮಾತುಗಳು ಯಾವುದಾದರೂ ಇದೆ ಎಂದರೆ ಅದು ಈ ಎರಡು ಸಾಲುಗಳು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭವಾದ ಹಿಜಾಬ್ ವಿವಾದದಿಂದ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಮಡಿಕೇರಿಯಲ್ಲಿ ಮೊಟ್ಟೆ ಎಸೆದ ಪ್ರಕರಣ ದವರೆಗೆ ಎಲ್ಲಾ ಸಂದರ್ಭದಲ್ಲೂ ದಿನಕ್ಕೆ ನೂರಾರು ಬಾರಿ ಈ ಪದಗಳು ಆಡಳಿತ ಮತ್ತು ಪ್ರತಿಪಕ್ಷಗಳಿಂದ ಕೇಳುತ್ತಾ ಬರುತ್ತಿದ್ದೇವೆ.
ಆದರೆ, ಕಾನೂನು ಸುವ್ಯವಸ್ಥೆಯೂ ಸರಿದಾರಿಗೆ ಬಂದಿಲ್ಲ. ದುಷ್ಕರ್ಮಿಗಳ ಆಟಾಟೋಪಕ್ಕೂ ಕಡಿವಾಣ ಬಿದ್ದಿಲ್ಲ. ಈ ವರ್ಷದ ಆರಂಭದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭವಾದ ಹಿಜಾಬ್ ವಿವಾದ-ಅದಕ್ಕೆ ಪ್ರತಿಯಾಗಿ ಕೇಸರಿ ಶಾಲು ವಿವಾದ , ನಂತರ ಒಂದರ ಮೇಲೊಂದು ಬಂದ ಹಲಾಲ್‌ಕಟ್-ಝಟ್ಕಾಕಟ್, ಆಜಾನ್ -ಭಜನೆ, ಹಿಂದೂ ದೇವಾಲಯಗಳ ಜಾಗದಲ್ಲಿ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಣೆ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ ನಡೆದ ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣ, ಟಿಪ್ಪುಸುಲ್ತಾನ್- ಸಾವರ್ಕರ್ ಫ್ಲೆಕ್ಸ್ ಹರಿದುಹಾಕಿದ ವಿವಾದ… ಹೀಗೆ ಸಾಲು ಸಾಲು ವಿವಾದಗಳು ರಾಜಕೀಯ ನಾಯಕರಿಗೆ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಳ್ಳಲು ಒಳ್ಳೆಯ ವೇದಿಕೆ ಸೃಷ್ಟಿ ಮಾಡಿಕೊಟ್ಟಿತು. ಇದರಿಂದ ನೊಂದು, ಬೆಂದವರು ಮಾತ್ರ ಜನ ಸಾಮಾನ್ಯರು.
ಉದಾಹರಣೆಗೆ ಹೇಳುವುದಾದರೆ, ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ವಿವಾದ ಆರಂಭವಾದಾಗ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಎಂಬ ಸಂಘಟನೆ ಹಿಜಾಬ್ ಪರವಾಗಿ ಹೋರಾಟ ಆರಂಭಿಸಿತು. ಇದಕ್ಕೆ ಪ್ರತಿಯಗಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಶಾಲಾ- ಕಾಲೇಜುಗಳಿಗೆ ತೆರಳಿದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಹಿಜಾಬ್ ಧರಿಸುವುದು ಮುಸ್ಲಿಂ ಹೆಣ್ಣು ಮಕ್ಕಳ ಧಾರ್ಮಿಕ ಹಕ್ಕು. ಕೇಸರಿ ಶಾಲು ಧರಿಸುವುದು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕ್ರಮ ಎಂದಿತು.
ಇತ್ತ ಬಿಜೆಪಿ, ಹಿಜಾಬ್ ಧರಿಸುವುದು ಸರಿಯಲ್ಲ, ಹಾಗೆ ಮಾಡುವುದಾದರೆ ಕೇಸರಿ ಶಾಲು ಧರಿಸಲೂ ಮಕ್ಕಳಿಗೆ ಅವಕಾಶ ನೀಡಬೇಕು ಎಂದು ಹೇಳಿತು. ಸಮಸ್ಯೆ ಬಗೆಹರಿಸಲು ಶಿಕ್ಷಣ ಇಲಾಖೆ, ಶಾಲಾ-ಕಾಲೇಜುಗಳಿಗೆ ಹಿಜಾಬ್, ಕೇಸರಿ ಶಾಲು ಸೇರಿದಂತೆ ಧಾರ್ಮಿಕತೆಯನ್ನು ಸಂಕೇತಿಸುವ ವಸ ಧರಿಸುವುದನ್ನು ನಿಷೇಧಿಸಿತು. ಬಿಜೆಪಿ ಇದನ್ನು ಸ್ವಾಗತಿಸಿದರೆ, ಕಾಂಗ್ರೆಸ್ ವಿರೋಧಿಸಿತು.
ಮುಸ್ಲಿಂ ಹೆಣ್ಣು ಮಕ್ಕಳು ಶಾಲಾ- ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಒಂದು ಧರ್ಮದ ಪರ ನಿಂತಿತು. ಬಳಿಕ ಪ್ರಕರಣ ಕೋರ್ಟ್ ಮೆಟ್ಟಿಲೇರಿ ಶಾಲಾ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಧರಿಸು ವಂತಿಲ್ಲ ಎಂದು ಹೇಳಿದ್ದು, ಹೈಕೋರ್ಟ್ ತೀರ್ಪು ಖಂಡಿಸಿ ಮುಸ್ಲಿಂ ಸಂಘಟನೆಗಳು ಬಂದ್‌ಗೆ ಕರೆಕೊಟ್ಟಿದ್ದು, ಈ ಬಂದ್‌ಅನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿದ್ದು ಎಲ್ಲವೂ ನಡೆಯಿತು.
ಕಾಂಗ್ರೆಸ್ ಪೂರ್ಣ ಪ್ರಮಾಣದಲ್ಲಿ ಹಿಜಾಬ್ ಪರ ನಿಂತಿತು. ಬಿಜೆಪಿ, ಕೇಸರಿ ಶಾಲು ಪರ ಇತ್ತಾದರೂ ಅಧಿಕಾರದಲ್ಲಿ ಇದ್ದುದರಿಂದ ಬಹಿರಂಗವಾಗಿ ಸಮರ್ಥಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಂತರ ಆರಂಭವಾದ ಇತರೆ ಎಲ್ಲಾ ವಿವಾದಗಳಿಗೂ ಮೂಲ ಕಾರಣ ಹಿಜಾಬ್ ಪ್ರಕರಣವೇ ಆಗಿತ್ತು. ಇದೆಲ್ಲದರ ಪರಿಣಾಮ ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನ ಕೊಲೆಯಾಯಿತು. ಇದರ ಬೆನ್ನಲ್ಲೇ ಹಿಂದೂ ಕಾರ್ಯಕರ್ತರಿಗೆ ಬೆದರಿಕೆಗಳು ಬಂದವು. ನಂತರ ದಕ್ಷಿಣ ಕನ್ನಡದಲ್ಲಿ ಹಿಂದೂ
ಮತ್ತು ಮುಸ್ಲಿಂ ಯುವಕರ ಕೊಲೆಗಳಾದವು.
ಈ ಎಲ್ಲಾ ಸಂದರ್ಭದಲ್ಲೂ ಸರಕಾರದ ಕಡೆಯಿಂದ ಬಂದ ಮಾತು ಎಂದರೆ, ದುಷ್ಕರ್ಮಿಗಳನ್ನು ಮಟ್ಟ ಹಾಕಿ, ಅವರ ವಿರುದ್ಧ
ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬುದು. ಹಾಗೆಂದು ದುಷ್ಕರ್ಮಿಗಳನ್ನು ಮಟ್ಟ ಹಾಕಲು ಸಾಧ್ಯವಾಯಿತೇ ಎಂದರೆ ಖಂಡಿತವಾಗಿಯೂ ಆ ಕೆಲಸ ಆಗಲಿಲ್ಲ. ಈ ವಿಚಾರದಲ್ಲಿ ಪ್ರತಿಪಕ್ಷಗಳು ಹೇಳುವಂತೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದ್ದು ಸತ್ಯ.
ರಾಜ್ಯದ ಹಲವೆಡೆ ನಾನಾ ರೀತಿಯ ಕೋಮು ಸಂಘರ್ಷ, ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪ್ರಕರಣಗಳು ನಡೆಯುತ್ತಲೇ ಇವೆ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಸರಕಾರ ಬಂಧಿಸುತ್ತಿದೆಯೇ ಹೊರತು ಅಹಿತಕರ ಘಟನೆಗಳನ್ನು
ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಇದರಲ್ಲಿ ಗುಪ್ತಚರ ಇಲಾಖೆಯ ವೈಫಲ್ಯವೂ ಎದ್ದು ಕಾಣುತ್ತದೆ. ಹಾಗೆಂದು ಇದಕ್ಕೆ ಸರಕಾರ ಮಾತ್ರ ಕಾರಣವೇ? ಖಂಡಿತಾ ಅಲ್ಲ, ಸರಕಾರ ಕಾನೂನು ಸುವ್ಯವಸ್ಥೆ ಪಾಲಿಸುವಲ್ಲಿ ವಿಫಲವಾಗಲು ಪ್ರತಿಪಕ್ಷ ಕಾಂಗ್ರೆಸ್ಸಿನ ಕೊಡುಗೆಯೂ ಇದೆ.
ವೀರ್ ಸಾವರ್ಕರ್ ಫ್ಲೆಕ್ಸ್ ಹರಿದು ಹಾಕಿದ ಘಟನೆ, ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚೂರಿ ಇರಿತ ಪ್ರಕರಣವನ್ನೇ ತೆಗೆದುಕೊಳ್ಳುವುದಾದರೆ, ಪ್ರಕರಣ ವಿಕೋಪಕ್ಕೆ ತೆರಳಲು ಕಾಂಗ್ರೆಸ್ ನಾಯಕರ ಹೇಳಿಕೆಯೂ ಕಾರಣ ಎಂದರೆ ತಪ್ಪಾಗಲಾರದು. ಕಾಂಗ್ರೆಸ್ಸಿಗರ ಪಾಲಿಗೆ ಆರಾಧ್ಯ ದೇವತೆಯಾಗಿರುವ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸಾವರ್ಕರ್ ಅವರನ್ನು ಹೊಗಳಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಪಾತ್ರ ಅನನ್ಯವಾದುದು ಎಂದು ಹೇಳಿದ್ದರು. ಅಷ್ಟೇ ಅಲ್ಲ, ಅವರ ಗೌರವಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದ್ದರು.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮೂಲಕ ಸಾವರ್ಕರ್ ಕುರಿತ ಸಾಕ್ಷ್ಯಚಿತ್ರ ಹೊರತಂದಿದ್ದರು. ಮುಂಬೈ ನಲ್ಲಿರುವ ಸಾವರ್ಕರ್ ಸ್ಮಾರಕಕ್ಕೆ ವೈಯಕ್ತಿಕವಾಗಿ ಅನುದಾನ ನೀಡಿದ್ದರು. ಅಂತಹ ಸಾವರ್ಕರ್ ಅವರನ್ನು ಬಿಜೆಪಿಯವರು ಆರಾಽಸುತ್ತಿದ್ದಾರೆ ಎಂಬ ಏಕೈಕ ಕಾರಣಕ್ಕೆ ಕಾಂಗ್ರೆಸ್ಸಿಗರ ಪಾಲಿಗೆ ಅವರು ಖಳನಾಯಕರಾದರು. ಅವರನ್ನು ದೇಶದ್ರೋಹಿ ಎನ್ನುವಷ್ಟರ ಮಟ್ಟಿಗೆ ಟೀಕಿಸಲಾರಂಭಿಸಿದರು.
ಅಷ್ಟೇ ಆಗಿದ್ದರೆ ಸೈದ್ಧಾಂತಿಕ ವಿರೋಧ ಎಂದುಕೊಳ್ಳಬಹುದಿತ್ತು. ಬೆಂಗಳೂರಿನಲ್ಲಿ ಟಿಪ್ಪು ಭಾವಚಿತ್ರವನ್ನು ದುಷ್ಕರ್ಮಿಗಳು ಹರಿದುಹಾಕಿದರು ಎಂಬ ಕಾರಣಕ್ಕೆ ಶಿವಮೊಗ್ಗದಲ್ಲಿ ಕೆಲವು ದುಷ್ಕರ್ಮಿಗಳು ಸಾವರ್ಕರ್ ಭಾವಚಿತ್ರವನ್ನು ಕೆಡವಿದ್ದರು. ಅಷ್ಟೇ ಅಲ್ಲ, ಅದೇ ಸಂದರ್ಭವನ್ನು ನೋಡಿಕೊಂಡು ಮತಾಂಧರು ಪ್ರೇಮ್ ಸಿಂಗ್ ಎಂಬಾತನನ್ನು ಚಾಕುವಿನಿಂದ ಇರಿದು ಗಾಯ ಗೊಳಿಸಿದರು. ಈ ಎರಡೂ ಪ್ರಕರಣಗಳನ್ನು ಸಾರ್ವತ್ರಿಕವಾಗಿ ಖಂಡಿಸಿದ್ದರೆ ಅದು ಕಿಡಿಗೇಡಿಗಳ ಕೃತ್ಯವಾಗಿ ಆರೋಪಿಗಳ ಬಂಧನದೊಂದಿಗೆ ಪರಿಸ್ಥಿತಿ ಶಾಂತವಾಗುತ್ತಿತ್ತು.
ಆದರೆ, ಟಿಪ್ಪು ಭಾವಚಿತ್ರ ಹರಿದು ಹಾಕಿದ್ದನ್ನು ಖಂಡಿಸಿದ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಾವರ್ಕರ್ ಫ್ಲೆಕ್ಸ್ ಕಿತ್ತುಹಾಕಿದ್ದ ಪ್ರಕರಣದಲ್ಲಿ ಮಾತ್ರ, ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಚಿತ್ರ ಏಕೆ ಹಾಕಬೇಕಿತ್ತು ಎಂದು ಪ್ರಶ್ನಿಸಿ ಬಿಟ್ಟರು. ಜತೆಗೆ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲ ಎಂದರು. ವಿವಾದ ಭುಗಿಲೇಳಲು ಅಷ್ಟು ಸಾಕಾಯಿತು.
ಸಿದ್ದರಾಮಯ್ಯ ವಿರುದ್ಧ ಅಸಕ್ಕಾಗಿ ಕಾಯುತ್ತಿದ್ದವರಿಗೆ ಬೇಕಾಗಿದ್ದೂ ಅದೇ. ಟಿಪ್ಪುವನ್ನು ಹೊಗಳಿ ಸಾವರ್ಕರ್ ಅವರನ್ನು
ತೆಗಳಿದರು ಎಂಬ ಕಾರಣಕ್ಕೆ ಟಿಪ್ಪುವನ್ನು ನಖಶಿಖಾಂತ ವಿರೋಧಿಸುವ ಕೊಡಗಿನ ಮಡಿಕೇರಿಯಲ್ಲಿ ಅವರ ಕಾರಿಗೆ ಮೊಟ್ಟೆ
ಎಸೆದು ಪ್ರತಿಭಟನೆ ನಡೆಸಲಾಯಿತು.
ಮೊಟ್ಟೆ ಎಸೆದವರು ಬಿಜೆಪಿಯವರು. ಈ ಪ್ರಕರಣವನ್ನು ಯಾರೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ, ನಾಯಕರಾದ ವರು ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು ಅದಕ್ಕೆ ಕಿಚ್ಚು ಹತ್ತಿಸುವ ಕೆಲಸ ಮಾಡಬಾರದು. ಇದು ಸಿದ್ದರಾಮಯ್ಯ ಅವರಿಗೆ ಮಾತ್ರ ಸೀಮಿತವಾದ ವಿಚಾರವಲ್ಲ. ಬಿಜೆಪಿಯ ಕೆಲವು ನಾಯಕರೂ ಅದೇ ರೀತಿ ವರ್ತಿಸುತ್ತಿದ್ದಾರೆ. ಹಿಂದೂ- ಮುಸ್ಲಿಮರ ಮಧ್ಯೆ ದ್ವೇಷ ಭಾವನೆ ಬರುವ ಹೇಳಿಕೆ ನೀಡುತ್ತಿದ್ದಾರೆ.
ಆದರೆ, ಕಾಂಗ್ರೆಸಿಗರು ಇನ್ನೂ ಮೊಟ್ಟೆ, ಚಪ್ಪಲಿ ಎಸೆಯುವ ಮಟ್ಟಕ್ಕೆ ಇಳಿದಿಲ್ಲ. ಈ ರೀತಿ ಜಿದ್ದಿಗೆ ಬಿದ್ದಾಗ ನಾಯಕರೇನೋ ಸೂಕ್ತ ಪೊಲೀಸ್ ಭದ್ರತೆಯೊಂದಿಗೆ ಕ್ಷೇಮವಾಗಿ ಉಳಿಯಬಹುದು. ಆದರೆ, ನಾಯಕರ ಹೆಸರು ಹೇಳಿಕೊಂಡು ಬೀದಿ ಕಚ್ಚಾಟದಲ್ಲಿ ತೊಡಗುವ ಕಾರ್ಯಕರ್ತರ ಪರಿಸ್ಥಿತಿ ಏನು? ಹೀಗಿರುವಾಗ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರ ಸಫಲವಾಗುವುದಾದರೂ ಹೇಗೆ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಅವರನ್ನು ಮಟ್ಟ ಹಾಕುವು ದಾದರೂ ಹೇಗೆ?
ಲಾಸ್ಟ್ ಸಿಪ್: ಮನೆ ಹೊತ್ತಿ ಉರಿಯುತ್ತಿರುವಾಗ ಯಾರೂ ಆ ಬೆಂಕಿಯಲ್ಲಿ ಬೀಡಿ ಹಚ್ಚಿಕೊಳ್ಳಲು ಹೋಗಬಾರದು.