Sunday, 15th December 2024

ನ್ಯಾಯಾಂಗ ನೇಮಕ ವಿವಾದ: ಕೋಳಿಗೂಡಲ್ಲಿ ತೋಳ

ಪ್ರಸ್ತುತ

ಇಂದಿರಾ ಜೈಸಿಂಗ್

ಕಾನೂನು ಮಂತ್ರಿಗಳು ಕೂಡ ಹೈಕೋರ್ಟುಗಳ ನ್ಯಾಯಾಧೀಶರ ನೇಮಕಾತಿ ಹೀಗೆಯೇ ಆಗಬೇಕೆಂದು ನಿರ್ದಿಷ್ಟವಾಗಿ ಹೇಳುತ್ತಿಲ್ಲ. ಅಂದರೆ ಸಮಸ್ಯೆ ಇರುವುದೇ ಇಲ್ಲಿ. ಆಯ್ಕೆ ಮಾಡುವ ಮುನ್ನ ಶೋಧ ಮತ್ತು ಮೌಲ್ಯಮಾಪನವನ್ನು ನ್ಯಾಯಾಧೀಶರನ್ನು ಒಳಗೊಂಡ ಒಂದು ಸಮಿತಿ ಮಾಡಬೇಕು. ಮತ್ತು ಅದಕ್ಕೆ ತಕ್ಕಂತೆ ಆಯ್ಕೆಗಳಾಗಬೇಕು.

ಸುಪ್ರೀಂ ಕೋರ್ಟು ಮತ್ತು ಹೈಕೋರ್ಟುಗಳ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಪಟ್ಟಂತೆ ಶೋಧ ಮತ್ತು ಮೌಲ್ಯಮಾಪನ ಸಮಿತಿಯಲ್ಲಿ ಪ್ರಾತಿನಿಧ್ಯ ಒದಗಿಸುವ ಕುರಿತಾಗಿ ಕೇಂದ್ರದ ಕಾನೂನು ಸಚಿವ ಕಿರಣ್ ರಿಜಿಜು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಹೇಳಲಾಗಿದೆ.

ಹೇಳಬೇಕೆಂದರೆ, ಅಂತಹ ಶೋಧ ಮತ್ತು ಮೌಲ್ಯಮಾಪನ ಸಮಿತಿಯೆಂಬುದೇ ವಾಸ್ತವದಲ್ಲಿ ಅಸ್ತಿತ್ವದಲ್ಲಿಲ್ಲ. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರೂ ಸೇರಿದಂತೆ ಇಬ್ಬರು ಹಿರಿಯ ನ್ಯಾಯಮೂರ್ತಿಗಳಿರುವ ಕೊಲೀಜಿಯಂ ಹೈಕೋರ್ಟುಗಳ ಮುಖ್ಯ ನ್ಯಾಯಾಧೀಶರ ನೇಮಕ ವನ್ನು ಮಾಡುತ್ತದೆ. ಅಂದ ಹಾಗೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಪಟ್ಟಂತೆ ಚೀಫ್ ಜಸ್ಟಿಸ್ ಮತ್ತು ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಪೀಠ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ.

ಹೀಗಿರುವಾಗ ಶೋಧ ಮತ್ತು ಮೌಲ್ಯಮಾಪನ ಸಮಿತಿಯ ಅಗತ್ಯವಿದೆಯೇ? ಒಂದು ವೇಳೆ ಅಗತ್ಯವಿದೆ ಎಂದಾದರೆ ಅಂತಹ ಸಮಿತಿಯ ಸಂರಚನೆ ಹೇಗಿರ ಬೇಕು? ಬಹಳ ಮುಖ್ಯವಾಗಿ ನೇಮಕಾತಿಗೆ ಸಂಬಂಧ ಪಟ್ಟಂತೆ ಮಾನದಂಡಗಳೇನು? ಹೈಕೋರ್ಟಿನ ಅತ್ಯಂತ ಹಿರಿಯ ನ್ಯಾಯಾಧೀಶ ರನ್ನು ಚೀಫ್ ಜಸ್ಟಿಸ್ ಆಗಿ ನೇಮಕ ಮಾಡುವುದು ನಡೆದು ಬಂದಿರುವ ಸಂಪ್ರದಾಯ. ಅದೇ ರಾಜ್ಯದ ವ್ಯಕ್ತಿಯನ್ನು ನೇಮಕ ಮಾಡಬೇಕೆಂಬ ಕಡ್ಡಾಯವೇನೂ ಇಲ್ಲ.

ಹಾಗಾಗಿ ಇಂತಹ ನೇಮಕಾತಿಗೆ ಸಂಬಂಧಿಸಿದಂತೆ ಇರುವ ಸೂತ್ರಗಳು ಸ್ಪಷ್ಟವಾಗಿವೆ. ಹಾಗಾಗಿ ಶೋಧ ಮತ್ತು ಮೌಲ್ಯಮಾಪನ ಸಮಿತಿಯ ಅಗತ್ಯವೇ ಕಂಡು ಬರುವುದಿಲ್ಲ. ಇಲ್ಲಿ ನಾವು ಬಹಳ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ ನ್ಯಾಯಾಧೀಶರ ಜೇಷ್ಠತೆಯನ್ನು ಪರಿಗಣಿಸದಿರುವ ಅಂಶ. ಇಲ್ಲಿ ಯಾರನ್ನು ಆ ಹುzಗೆ ಪರಿಗಣಿಸಬೇಕು ಎಂಬ ವಿಚಾರದಲ್ಲಿ ವ್ಯಾಪ್ತಿ ಕಮ್ಮಿ ಇದೆ. ಹಾಗಿದ್ದಾಗ ಇಂತಹದೊಂದು ಸಮಿತಿ ರಚನೆಯಿಂದ ಹೊಸದೇನನ್ನೂ ಸಾಧಿಸಲಾಗದು. ನ್ಯಾಯಾಧೀಶರುಗಳ ಕಾರ್ಯವೈಖರಿಯನ್ನು ಮಾಪನ ಮಾಡುವುದಕ್ಕೆ ಸುಪ್ರೀಂ ಕೋರ್ಟಿನ
ಹಿರಿಯ ನ್ಯಾಯಮೂರ್ತಿಗಳಿಗಿಂತ ಅರ್ಹರು ಬೇರಾರೂ ಇಲ್ಲ. ಅನೇಕ ಸಂದರ್ಭಗಳಲ್ಲಿ ನ್ಯಾಯಿಕ ವ್ಯವಸ್ಥೆಯಲ್ಲಿ ಕೊಡಲಾಗುವ ತೀರ್ಪುಗಳ ವಿಚಾರದಲ್ಲಿ ಸಾಮಾಜಿಕ ವಲಯಗಳಲ್ಲಿ ಚರ್ಚೆಗಳಾಗುವುದೂ ಇದೆ.

ಹೀಗಿರುವಾಗ ಕಾನೂನು ಮಂತ್ರಿಗಳು ಹೇಳುವಂತೆ ಆಯ್ಕೆ ಸಮಿತಿಯಲ್ಲಿ ಸಾಮಾಜಿಕ ವಲಯಕ್ಕೆ ಪ್ರಾತಿನಿಧ್ಯ ಕೊಡುವುದು ಅತಿರೇಕದ ಸಂಗತಿ.
ಈ ರೀತಿಯಲ್ಲಿ ನ್ಯಾಯಮೂರ್ತಿಗಳ ಆಯ್ಕೆಯ ವಿಚಾರದಲ್ಲೂ ಮೂಗು ತೂರಿಸುವ ಸರಕಾರದ ಉದ್ದೇಶ ಇದರ ಹಿಂದಿದೆ ಎಂಬುದು ಸ್ಪಷ್ಟ. ಇಂತಹದೊಂದು ಪ್ರಸ್ತಾವ ಸಂವಿಧಾನದ ಆಶಯಗಳಿಗೆ ಖಂಡಿತವಾಗಿಯೂ ವಿರುದ್ಧವಾದದ್ದು. ಸರಕಾರದ ನಡವಳಿಕೆಗಳನ್ನು ಕೂಡ ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇರುವುದು ನಮ್ಮ ದೇಶದ ನ್ಯಾಯಿಕ ವ್ಯವಸ್ಥೆಗೆ ಎಂಬು ದನ್ನು ಮರೆಯುವಂತಿಲ್ಲ. ಹಾಗೆ ತರಾಟೆಗೆ ಒಳಗಾಗತಕ್ಕ ಸರಕಾರವೇ ನ್ಯಾಯಮೂರ್ತಿಗಳ ಆಯ್ಕೆ ಸಮಿತಿಯೊಳಕ್ಕೆ ಸೇರಿಕೊಳ್ಳುವುದೆಂದರೆ ಅದೊಂದು ಬಗೆಯ ಆಭಾಸದ ಸಂಗತಿ. ಇದು ನ್ಯಾಯಿಕ ವ್ಯವಸ್ಥೆಯ ಅಡಿಪಾಯವನ್ನೇ ಅಭದ್ರಗೊಳಿಸಬಲ್ಲದು. ಅಂದರೆ ಕೋಳಿ ಗೂಡಿನೊಳಕ್ಕೆ ತೋಳ ನುಗ್ಗಿದ್ದರೆ ಏನಾದೀತು? ಅದೇ ಇಲ್ಲಿಯೂ
ಆಗುವುದು ಸಾಧ್ಯ.

ಎನ್‌ಜೆಎಸಿ ಪ್ರಕರಣದಲ್ಲಿ ನ್ಯಾಯಾಧೀಶರ ಆಯ್ಕೆ ಸಮಿತಿಯಲ್ಲಿ ಸರಕಾರ ಹಸ್ತಕ್ಷೇಪ ಮಾಡಿದರೆ ಅದು ನ್ಯಾಯಿಕ ವ್ಯವಸ್ಥೆಯ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತಾಗುತ್ತದೆ ಎಂದು ಸುಪ್ರೀಂ ಕೋರ್ಟು ಅಭಿಪ್ರಾಯಪಟ್ಟಿದೆ. ಅಷ್ಟೇ ಅಲ್ಲ ಹಾಗೆ ಆಯ್ಕೆಯಾದ ನ್ಯಾಯಮೂರ್ತಿಗಳು ಮುಂದೆ ತಾವು ಕೊಡತಕ್ಕ ತೀರ್ಪುಗಳ ಮೇಲೂ ಅದರ ಪರಿಣಾಮ ವ್ಯಕ್ತವಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇಲ್ಲಿ ಸುಪ್ರೀಂ ಕೋರ್ಟು ಪ್ರಮುಖವಾಗಿ ಎರಡು ವ್ಯವಸ್ಥೆಗಳನ್ನು ಸೂಚಿಸಿದೆ.

ಮೊದಲನೆಯದಾಗಿ ಕೋರ್ಟುಗಳು ನೀಡತಕ್ಕ ತೀರ್ಪುಗಳ ಮೇಲೆ ಪರಾಮರ್ಶೆ ಮಾಡುವುದಕ್ಕೆ ಒಂದು ಸಂಸತ್ತಿನಲ್ಲಿ ಮಸೂದೆ ಮಂಡನೆ ಮಾಡುವುದು. ಅಥವಾ ಯಾವುದೇ ವಿವಾದಿತ ತೀರ್ಪಿನ ವಿಚಾರದಲ್ಲಿ ಪರಾಮರ್ಶೆ ಮಾಡಲು ಇನ್ನೊಂದು ಬಹುಸದಸ್ಯ ಪೀಠವನ್ನು ರಚನೆ
ಮಾಡುವುದು. ಆದರೆ ಇಂದಿನ ಸರಕಾರ ಇದಾವುದನ್ನೂ ಮಾಡಿಲ್ಲ. ಅದಕ್ಕೆ ಹೊರತಾಗಿ ಉಪರಾಷ್ಟಪತಿಗಳು ಮತ್ತು ಕಾನೂನು ಸಚಿವರು ನ್ಯಾಯಾಲಯಗಳ ವಿಚಾರದಲ್ಲಿ ಬಹಿರಂಗ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇವರುಗಳ ಹೇಳಿಕೆಗಳ ಹಿಂದಿರುವ ಉದ್ದೇಶವಾದರೂ ಏನು?
ನ್ಯಾಯಾಲಯಗಳ ಘನತೆಗೆ ಕುಂದುಂಟು ಮಾಡುವುದು ಇಲ್ಲವೇ ಅದರ ಶಕ್ತಿ ಕುಂದುವಂತೆ ಮಾಡುವುದು.

ಒಂದು ವೇಳೆ ಸರಕಾರ ನ್ಯಾಯಾಽಶರುಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ತರಲೇಬೇಕೆಂದಿದ್ದರೆ ಎನ್‌ಜೆಎಸಿ ಕಾಯಿದೆಯನ್ನೇ ರದ್ದು ಪಡಿಸಬಹುದು. ಅದನ್ನೂ ಮಾಡಿಲ್ಲ. ಹಾಗೆ ಮಾಡುವ ಅಗತ್ಯವೂ ಕಂಡು ಬಂದಿಲ್ಲ. ಏಕೆಂದರೆ ನೇಮಕ ಮಾಡುವ ನ್ಯಾಯಾಧೀಶರುಗಳ ಪಟ್ಟಿಯನ್ನು ಸರಕಾರದ ಮುಂದಿಟ್ಟು ಅಂಕಿತ ಪಡೆದುಕೊಂಡ ನಂತರವೇ ನೇಮಕಗಳಾಗುತ್ತವೆ.

ರಾಷ್ಟ್ರಪತಿಗಳ ಅಂಕಿತವಿಲ್ಲದೇ, ಕೊಲೀಜಿಯಂ ತನ್ನದೇ ಸ್ವಯಮಾಧಿಕಾರದಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಕ ಮಾಡಿದ ಉದಾಹರಣೆಯೇ ಇಲ್ಲ. ಕೊಲೀಯಂ ಕೊಡುವ ಸಲಹೆಗಳನ್ನು ಸರಕಾರ ಒಪ್ಪದೇ ಇದ್ದಾಗ ಅದನ್ನು ಕೈಬಿಟ್ಟ ಉದಾಹರಣೆಗಳು ಸಾಕಷ್ಟಿವೆ. ಯುಪಿಎ ಸರಕಾರ ಇzಗ ಕೊನೆಯದಾಗಿ ನೇಮಕವಾದ ಮುಖ್ಯನ್ಯಾಯಮೂರ್ತಿಗಳೆಂದರೆ ಅದು ಜಸ್ಟಿಸ್ ಎನ್.ವಿ. ರಮಣ. ಉಳಿದೆಲ್ಲರೂ ಎನ್‌ಡಿಎ ಸರಕಾರವಿದ್ದಾಗಲೇ ನೇಮಕವಾದವರು.

ಹೈಕೋರ್ಟಿನ ನ್ಯಾಯಮೂರ್ತಿಗಳ ಆಯ್ಕೆ ವಿಚಾರದಲ್ಲಿ ಆಯ್ಕೆ ಪ್ರಕ್ರಿಯೆ ನಿಗದಿ ಪಡಿಸುವ ವಿಚಾರದಲ್ಲಿ ಯಾವುದೇ ತಕರಾರುಗಳಿಲ್ಲ. ಗಮನಿಸ
ಬೇಕಾದ ಸಂಗತಿಯೆಂದರೆ ಕಾನೂನು ಮಂತ್ರಿಗಳು ಕೂಡ ಹೈಕೋರ್ಟುಗಳ ನ್ಯಾಯಾಧೀಶರ ನೇಮಕಾತಿ ಹೀಗೆಯೇ ಆಗಬೇಕೆಂದು ನಿರ್ದಿಷ್ಟವಾಗಿ ಹೇಳುತ್ತಿಲ್ಲ. ಅಂದರೆ ಸಮಸ್ಯೆ ಇರುವುದೇ ಇಲ್ಲಿ. ಆಯ್ಕೆ ಮಾಡುವ ಮುನ್ನ ಶೋಧ ಮತ್ತು ಮೌಲ್ಯಮಾಪನವನ್ನು ನ್ಯಾಯಾಧೀಶರನ್ನು ಒಳಗೊಂಡ ಒಂದು ಸಮಿತಿ ಮಾಡಬೇಕು. ಮತ್ತು ಅದಕ್ಕೆ ತಕ್ಕಂತೆ ಆಯ್ಕೆಗಳಾಗಬೇಕು.

ಇನ್ನೂ ಸರಳವಾಗಿ ಹೇಳಬೇಕೆಂದರೆ, ಮುಖ್ಯ ನ್ಯಾಯಮೂರ್ತಿಗಳಾಗುವುದಕ್ಕೆ ಅಪೇಕ್ಷೆ ಇರುವ ಅಭ್ಯರ್ಥಿಗಳೇ ತಮ್ಮ ಆಸಕ್ತಿಯನ್ನು ಸ್ವಯಂ ವ್ಯಕ್ತಪಡಿಸುವುದಕ್ಕೆ ಅವಕಾಶ ಕೊಡುವುದು. ಇಂತಹ ಸೆಲ ನಾಮಿನೇಶನ್ ಪ್ರಕ್ರಿಯೆಗೆ ಅವಕಾಶ ಕೊಟ್ಟಾಗ ಸಮಾಜದ ವಿಭಿನ್ನ ಸ್ತರದ, ಎಲ್ಲ ಜಾತಿ, ಜನಾಂಗದವರು ಮುಂದೆ ಬರುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಅವರಲ್ಲಿ ಅರ್ಹರನ್ನು ಆಯ್ಕೆ ಮಾಡುವುದು ಕೂಡ ಸಮಿತಿಗೆ ಸುಲಭ ವಾಗಬಹುದು.