Thursday, 12th December 2024

ಭಾರತೀಯ ಅಥ್ಲೆಟಿಕ್ಸ್ ಲೋಕದ ನವತಾರೆ- ಜ್ಯೋತಿ ಯರ‍್ರಾಜಿ

ತಾರಾ-ಗಾನ

ಡಾ.ಕಾರ್ತಿಕ್ ಜೆ.ಎಸ್

ಜಾಗತಿಕ ಕ್ರೀಡಾ ಹಬ್ಬವಾದ ಒಲಿಂಪಿಕ್ಸ್ ನಲ್ಲಿ ೧೦೦ ಮೀಟರ್ ಹರ್ಡಲ್ಸ (ಅಡೆ ತಡೆ) ಓಟಕ್ಕೆ ವಿಶೇಷ ಸ್ಥಾನಮಾನವಿದೆ. ಕಠಿಣ ಸ್ಪರ್ಧೆ ಎಂದೇ ಗುರುತಿಸಲ್ಪಟ್ಟ ಈ ಓಟದಲ್ಲಿ  ಸ್ಪರ್ಧಾಳುಗಳು ಚಿಗರೆಯಂತೆ ಜಿಗಿಯುತ್ತಾ ವೇಗವಾಗಿ ಅಡೆ ತಡೆ ದಾಟಿಕೊಂಡು ಗುರಿಮುಟ್ಟುವತ್ತ ಸಾಗುವ ದೃಶ್ಯ ಪ್ರೇಕ್ಷಕರ ಮೈನವಿರೇಳಿಸುವಂತೆ ಮಾಡುತ್ತದೆ. ಅತ್ಯುತ್ತಮ ಕೌಶಲ್ಯ ಮತ್ತು ದೈಹಿಕ ಪರಿಶ್ರಮ ಬೇಡುವ ಈ ಟ್ರ್ಯಾಕ್ ಮತ್ತು ಫೀಲ್ಡ್ ಓಟದಲ್ಲಿ ನಮ್ಮ ದೇಶದ ಯುವತಿಯೊಬ್ಬಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡದ್ದು ಅಸಾಧಾರಣ ಸಾಧನೆಯೇ ಸರಿ.

ಆಕೆಯೇ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ನ ಮಹಿಳೆಯರ ೧೦೦ ಮೀಟರ್ ಹರ್ಡಲ್ಸ್ ಓಟದಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಪ್ರಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾದ ಜ್ಯೋತಿ ಯರ್ರಾಜಿ. ಜ್ಯೋತಿ ಯರ್ರಾಜಿ ಮೂಲತಃ ಆಂಧ್ರದ ವಿಶಾಖಪಟ್ಟಣದವಳು. ಕೆಳ ಮಧ್ಯಮ ವರ್ಗ ಕುಟುಂಬದವ ಳಾದ ಜ್ಯೋತಿಯ ಬಾಲ್ಯದ ಜೀವನ ಕಠಿಣವಾಗಿತ್ತು. ಆಕೆಯ ತಂದೆ ಕಾವಲುಗಾರ ವೃತ್ತಿಯಲ್ಲಿದ್ದರೆ, ತಾಯಿ ಆಸ್ಪತ್ರೆಯಲ್ಲಿ ದಿನಗೂಲಿ ನೌಕರಳಾಗಿ ಕೆಲಸಮಾಡುತ್ತಿದ್ದರು. ಕಠಿಣ ಪರಿಸ್ಥಿತಿಯ ನಡುವೆಯೂ ಹೆತ್ತವರು ಆಕೆಯನ್ನು ವಿಶಾಖಪಟ್ಟಣದ ಪ್ರತಿಷ್ಠಿತ ಶಾಲೆಯೊಂದಕ್ಕೆ ಸೇರಿಸುತ್ತಾರೆ. ಬಾಲ್ಯದಲ್ಲಿಯೇ ಆಟೋಟಗಳಲ್ಲಿ ಅಪರಿಮಿತ ಆಸಕ್ತಿ ಹೊಂದಿದ್ದ ಜ್ಯೋತಿ ಮೈದಾನದಲ್ಲಿ ಮಿಂಚಿನ ವೇಗದಲ್ಲಿ ಓಡುತ್ತಿದ್ದಳು.

ಆಕೆಯ ಪ್ರತಿಭೆಯನ್ನು ಗುರುತಿಸಿದ ಶಾಲೆಯ ತರಬೇತುದಾರರು ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಅರ್ಹತಾ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸು ತ್ತಾರೆ. ೨೦೧೬ ನೇ ಇಸವಿ. ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯ ಆಯೋಜಿಸಿದ್ದ ಆಯ್ಕೆ ಸ್ಪರ್ಧೆಯಲ್ಲಿ ತನ್ನ ಪ್ರತಿಭೆ ತೋರಿಸಿದ ಜ್ಯೋತಿ ಕ್ರೀಡಾ ಹಾಸ್ಟೆಲ್‌ಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗುತ್ತಾಳೆ. ಮಾತ್ರವಲ್ಲದೆ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ತರಬೇತುದಾರ ಧರ್ಮಪುರಿ ರಮೇಶ್ ಅವರ ಶಿಷ್ಯೆಯಾಗುವ ಅವಕಾಶ ಗಿಟ್ಟಿಸಿಕೊಳ್ಳುತ್ತಾಳೆ. ಇದು ಆಕೆಯ ಜೀವನಕ್ಕೆ ಬಹುದೊಡ್ಡ ತಿರುವನ್ನು ತಂದುಕೊಡುತ್ತದೆ.

ತನ್ನ ತರಬೇತಿ ಸಮಯದಲ್ಲಿ ಹರ್ಡಲ್ಸ ಓಟಕ್ಕೆ ಪ್ರಾಮುಖ್ಯತೆ ಕೊಟ್ಟ ಆಕೆ ಕಠಿಣ ಪರಿಶ್ರಮದಿಂದ ಆ ಓಟದಲ್ಲಿನ ನಿಯಮಗಳನ್ನು ಕರಗತ ಮಾಡಿ ಕೊಳ್ಳುತ್ತಾಳೆ. ೨೦೧೭ ರ ರಾಷ್ಟ್ರೀಯ ಯುವ ಅಥ್ಲೆಟಿಕ್ಸ್ ಕೂಟದ ೧೦೦ ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಅನಿರೀಕ್ಷಿತವಾಗಿ ಚಿನ್ನದ ಪದಕ ಗಳಿಸಿ ಎಲ್ಲರ ಗಮನ ಸೆಳೆಯುತ್ತಾಳೆ. ೨೦೧೯ ರಲ್ಲಿ ಆಕೆಯ ಸಾಧನೆ ಗುರುತಿಸಿದ ರಿಲಯ ಫೌಂಡೇಶನ್ ಸಂಪೂರ್ಣ ತರಬೇತಿಯ ಜವಾಬ್ದಾರಿಯನ್ನು  ವಹಿಸಿಕೊಳ್ಳು ತ್ತದೆ.

ಖ್ಯಾತ ಬ್ರಿಟಿಷ್ ತರಬೇತುದಾರ ಜೇಮ್ಸ ಹಿಲಿಯರ್‌ನ ಮಾರ್ಗದರ್ಶನದಲ್ಲಿ ಜ್ಯೋತಿ ತನ್ನ ಓಟದ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳುತ್ತಾಳೆ. ಮುಂದೆ ನಡೆದದ್ದು ಇತಿಹಾಸ. ಚೀನಾದ ಹಾಂಗ್ಜು ವಿನಲ್ಲಿ ಜರುಗಿದ ಏಷ್ಯನ್ ಗೇಮ್ಸ್ -೨೦೨೨ ರ ೧೦೦ ಮೀಟರ್ ಹರ್ಡಲ್ಸ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕಕ್ಕೆ ಭಾಜನಳಾಗುತ್ತಾಳೆ. ಈ ವಿಭಾಗದಲ್ಲಿ ಏಷ್ಯನ್ ಗೇಮ್ಸನಲ್ಲಿ ಪದಕ ಗೆದ್ದ ಪ್ರಥಮ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆ ಜ್ಯೋತಿಗೆ ಸಲ್ಲುತ್ತದೆ. ೨೦೨೩ ನೇ
ಇಸವಿ. ಆಕೆಯ ಪಾಲಿಗೆ ಮರೆಯಲಾಗದ ವರ್ಷ. ಬ್ಯಾಂಕಾಕ್‌ನಲ್ಲಿ ಜರುಗಿದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿ ಯನ್‌ಶಿಪ್‌ನಲ್ಲಿ ಚಿನ್ನದ ಪದಕ, ಚೀನಾದ ಚೆಂಗ್ಡುವಿನಲ್ಲಿ ನಡೆದ ವಲ್ಡ ಯೂನಿವರ್ಸಿಟಿ ಗೇಮ್ಸ್ ನಲ್ಲಿ ರಾಷ್ಟ್ರೀಯ ದಾಖಲೆ (೧೨.೭೮ ಸೆಕೆಂಡ್) ಯೊಂದಿಗೆ ಕಂಚಿನ ಪದಕ ಜಯಿಸಿ ಅಂತಾ ರಾಷ್ಟ್ರೀಯ ಮಟ್ಟದ ಭರವಸೆಯ ಯುವ ಭಾರತೀಯ ಓಟಗಾರ್ತಿ ಎಂದು ಕರೆಸಿಕೊಳ್ಳುತ್ತಾಳೆ.

ಪ್ರಸಕ್ತ ಋತುವಿನಲ್ಲಿ ೧೩ ಸೆಕೆಂಡ್‌ಗಿಂತಲೂ ಕಡಿಮೆ ಅವಧಿಯಲ್ಲಿ ೧೦೦ ಮೀಟರ್ ಹರ್ಡಲ್ಸ್ ಓಟ ಪೂರ್ಣ ಗೊಳಿಸಿದ ಸಾಧನೆ ಆಕೆಯದ್ದು. ಪ್ರಸ್ತುತ ಹರ್ಡಲ್ಸ ಓಟದಲ್ಲಿ ಹೆಸರು ಮಾಡಿದ ಏಷ್ಯಾದ ಅಗ್ರಗಣ್ಯ ಅಥ್ಲೀಟ್ ಗಳಲ್ಲಿ ೨೪ ರ ಹರೆಯದ ಜ್ಯೋತಿಯೂ ಒಬ್ಬಳು. ‘ವಿಶಾಖಾ ಬುಲೆಟ’ ಎಂದೇ ಹೆಸರಾದ, ಭಾರತೀಯ ಅಥ್ಲೆಟಿಕ್ಸ್ ಲೋಕದ ಈ ನವತಾರೆ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪದಕಕ್ಕೆ ಕೊರಳೊಡ್ಡಲಿ ಎಂದು ಆಶಿಸೋಣ.

(ಲೇಖಕರು: ಹವ್ಯಾಸಿ ಬರಹಗಾರ)