Saturday, 23rd November 2024

ಕೂಚಿಪೂಡಿ: ಶುದ್ಧ ನೃತ್ಯವೋ? ಯಕ್ಷಗಾನವೋ?

ಕೂಚಿಪೂಡಿ ಎಂದ ತಕ್ಷಣ ನೆನಪಾಗುವುದು, ವರ್ಣಮಯ ಉಡುಪು ಧರಿಸಿದ ನೃತ್ಯಗಾತಿಯರು ಕರ್ನಾಟಕ ಸಂಗೀತದ ಪದ್ಯಗಳಿಗೆ ಸುಲಲಿತವಾಗಿ ನೃತ್ಯಮಾಡುವ ದೃಶ್ಯ. ಭಾರತದ ಎಂಟು ನೃತ್ಯ ಪ್ರಕಾರಗಳಲ್ಲಿ ಕೂಚಿಪುಡಿಯೂ ಒಂದು. ಆದರೆ, ಈ ಜನಪ್ರಿಯ ನೃತ್ಯ ಪ್ರಕಾರದ ಮೂಲಡ್ಠವು ಯಕ್ಷಗಾನದಲ್ಲಿದೆ ಎಂಬ ವಿಚಾರ ಬಹುಜನರಿಗೆ ತಿಳಿದಿಲ್ಲ! ‘ಕೂಚಿಪೂಡಿ ಯಕ್ಷಗಾನ’ವು ಸುಮಾರು ೧೬ನೆಯ ಶತಮಾನದಿಂದ ೨೦ನೆಯ ಶತಮಾನದ ಮೊದಲ ರ್ಧದ ತನಕ ಆಂಧ್ರಪ್ರದೇಶದಲ್ಲಿ ಜನಪ್ರಿಯವಾಗಿತ್ತು. ಕೆಲವೇ ದಶಕಗಳ ಹಿಂದೆ ಹಳ್ಳಿಗಾಡಿನ ಗಂಡುಕಲೆಯಾಗಿದ್ದ , ಗಂಡಸರೇ ಹಾಡು, ನೃತ್ಯವನ್ನು ನಿರ್ವಹಿಸುತ್ತಿದ್ದ ಈ ‘ಕೂಚಿಪೂಡಿ ಯಕ್ಷಗಾನವು’ ,ಕ್ರಮೇಣ ‘ಕೂಚಿಪೂಡಿ ನೃತ್ಯ’ವಾಗಿ ರೂಪಾಂತರ ಹೊಂದಿ, ತನ್ನ ಮೂಲ ಹೆಸರನ್ನೇ ಮರೆಮಾಡುವಂತಾದದ್ದು ಹೇಗೆ? ಕೆರೆಮನೆ ಶಂಭುಹೆಗಡೆ ರಾಷ್ಟ್ರೀಯ ನಾಟಕೋತ್ಸವದಲ್ಲಿ, ಕೂಚಿಪೂಡಿ ಭಾಗವತ ಮೇಳಂ (ಕೂಚಿಪೂಡಿ ಗ್ರಾಮ, ಆಂಧ್ರಪ್ರದೇಶ) ಇವರು ಒಂದು ಯಕ್ಷಗಾನ ಪ್ರದರ್ಶನ ನೀಡಿ (೮.೨.೨೦೧೫ರಂದು) ಪ್ರೇಕ್ಷಕರ ಮನಗೆದ್ದರು. ಅಂದು ಅವರಾಡಿದ ಕಥನದ ಹೆಸರು ‘ಭಕ್ತ ಪ್ರಹ್ಲಾದ’. ನಮ್ಮ ಯಕ್ಷಗಾನ ಪರಂಪರೆಯನ್ನು ಹಲವು ರೀತಿಯಲ್ಲಿ ಹೋಲುವ ಈ ‘ಕೂಚಿಪೂಡಿ ಯಕ್ಷಗಾನ’ವನ್ನು ಪ್ರಸ್ತುತಪಡಿಸಲು, ಆ ತಂಡದ ರೂವಾರಿ ವೇದಾಂತಂ ವೆಂಕಟನಾಗ ಚಲಪತಿಯವರು ಕಾರಣ. ನೃತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರದರ್ಶನದ ಕೊನೆಯಲ್ಲಿ ಅರಿಕೆ ಮಾಡಿಕೊಂಡಿದ್ದು ಹೀಗೆ : ‘ಹತ್ತು ವರ್ಷಗಳ ಹಿಂದೆ ನಮ್ಮ ಕೂಚಿಪೂಡಿ ಗ್ರಾಮದ ಯುವಕರೆಲ್ಲ ಸೇರಿ, ಈ ಮೇಳ ಕಟ್ಟಿದೆವು. ನಮ್ಮ ಹಿರಿಯರು ಆಡುತ್ತಿದ್ದ, ಈ ‘ಯಕ್ಷಗಾನ’ ಕಲೆಯನ್ನು ಪುನಃ ಕಲಿತು, ತರಬೇತಿ ಮಾಡಿಕೊಂಡು ಈಗ ಕೂಚಿಪೂಡಿ ಯಕ್ಷಗಾನವನ್ನು ನಿಮ್ಮೆದುರು ಪ್ರಸ್ತುತ ಪಡಿಸಿದ್ದೇವೆ… ಹಿಂದೆ ಕಲಾವಿದರು ತಮ್ಮ ಹಾಡುಗಳನ್ನು ಅವರೇ ಹಾಡುತ್ತಿದ್ದರು. ಇಂದು
ಸೂತ್ರಧಾರಿ (ಭಾಗವತ) ಹಾಡುತ್ತಾರೆ. ಈ ಕಲೆಯನ್ನು ಪುನರುಜ್ಜೀವನಗೊಳಿಸುವ ನಮ್ಮ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಅಗತ್ಯ’ಆಂಧ್ರಪ್ರದೇಶದ ಕೃಷ್ಣಾ ಜಿಯ ಕೂಚಿಪೂಡಿ ಗ್ರಾಮದಲ್ಲಿ ಜನಿಸಿದ ಈ ಕಲೆ, ‘ಕೂಚಿಪೂಡಿ ಭಾಗವತಮೇಳ’ ಎಂದೇ ಹೆಸರಾಗಿತ್ತು. ಹಾಡು-ನೃತ್ಯ-ಸಂಭಾಷಣೆ- ಹಿಮ್ಮೇಳವನ್ನು ಹೊಂದಿದ್ದ ಈ‘ಯಕ್ಷಗಾನ’ ಕಲೆಯು, ‘ಶುದ್ಧ ನೃತ್ಯ’ ಪ್ರಕಾರವಾಗಿ ಮಾರ್ಪಟ್ಟಿದ್ದು ೨೦ನೆಯ ಶತಮಾನದಲ್ಲಿ.

ಇಂದಿನ ಜನಸಾಮಾನ್ಯರನ್ನು ಕೇಳಿದರೆ, ಕೂಚಿಪೂಡಿಯು ಭರತನಾಟ್ಯವನ್ನು ಹೋಲುವ, ಅದೇ ರೀತಿ ಝಗಮಗಿಸುವ ವೇಷಭೂಷಣ, ಆಂಗಿಕ ಅಭಿನಯ, ಸಂಗೀತದ ಹಿನ್ನೆಲೆ ಹೊಂದಿರುವ ನೃತ್ಯಪ್ರಕಾರ ಎಂದೇ ಹೇಳುತ್ತಾರೆ. ಆದರೆ ಇದಕ್ಕೆ ಮೂಲವು ನಮ್ಮ ರಾಜ್ಯದ ಯಕ್ಷಗಾನವನ್ನು ಹೋಲುವ ಕಲಾಪ್ರಕಾರ ಎಂದರೆ ನಿಮಗೆ ಅಚ್ಚರಿ ಎನಿಸಬಹುದು! ‘ಕೂಚಿಪೂಡಿ ಯಕ್ಷಗಾನ’ವು ‘ಕೂಚಿಪೂಡಿ ನೃತ್ಯ’ವಾಗಿ ರೂಪಾಂತರವಾಗಿದ್ದು ದೇಶ ಸ್ವಾತಂತ್ರ್ಯ ಪಡೆದ ನಂತರ. ಹಾಗಾದರೆ, ಹಿಂದೆ ‘ಕೂಚಿಪೂಡಿ ಯಕ್ಷಗಾನ’ವು ಹೇಗಿತ್ತು? ಕರಾವಳಿಯ ಯಕ್ಷಗಾನದಲ್ಲೂ, ಕೂಚಿ ಪೂಡಿ ಯಕ್ಷಗಾನದಲ್ಲೂ ಹಲವು ಸಮಾನಾಂತರ ವಿಚಾರಗಳಿವೆ. ಕೂಚಿಪೂಡಿ ಯಕ್ಷಗಾನದ ಕುರಿತು ಸಂಶೋಧನೆ ಮಾಡಿದ ವಿದ್ವಾಂಸರು, ಇದರ ಪ್ರಾಚೀನತೆಯನ್ನು ಕ್ರಿ.ಶ.೧೦ನೆಯ ಶತಮಾನದ ತನಕ ಕೊಂಡೊಯ್ಯುತ್ತಾರೆ. (ಕಾಲನಿರ್ಣಯದ ಕುರಿತು ಇನ್ನಷ್ಟು ಚರ್ಚೆ ಆಗಬೇಕು). ಅದೇನಿದ್ದರೂ, ೧೭ನೆಯ ಶತಮಾನದಲ್ಲಿದ್ದ ತೀರ್ಥನಾರಾಯಣ ಯತಿಯವರು ಕೂಚಿಪೂಡಿ ಯಕ್ಷಗಾನದ ಮೂಲ ಪುರುಷರು ಎಂದು ಗುರುತಿಸಿದ್ದಾರೆ. ಇವರ ಶಿಷ್ಯರಲ್ಲಿ ಒಬ್ಬರಾದ ಸಿದ್ದೇಂದ್ರ ಯೋಗಿಯು, ಕೂಚಿಪೂಡಿ ಗ್ರಾಮದಲ್ಲಿ ಯಕ್ಷಗಾನ ನೆಲೆಗೊಳ್ಳಲು ಕಾರಣ.

ಈ ಸಿದ್ದೇಂದ್ರ ಯತಿಗಳು, ಉಡುಪಿಯಲ್ಲೂ ವೇದಾಧ್ಯಯನ ಮಾಡಿದ್ದರು ಎನ್ನುವ ವಿಚಾರ ಕುತೂಹಲಕಾರಿ. ಉಡುಪಿಯಿಂದ ಕೂಚಿಪೂಡಿಗೆ ಬಂದ ಅವರು, ಕೂಚಿಪೂಡಿಯ ಬ್ರಾಹ್ಮಣ ಯುವಕರನ್ನು ಹುರಿದುಂಬಿಸಿ, ಅವರಿಗೆ ಯಕ್ಷಗಾನವನ್ನು ಹೇಳಿಕೊಟ್ಟರು ಎಂದು ತಿಳಿಯಲಾಗಿದೆ. ಕೂಚಿಪೂಡಿ ಯ ದೇವಾಲಯದಲ್ಲಿ, ಕೃಷ್ಣನ ಆರಾಧನೆಯ ಭಾಗವಾಗಿ, ವರ್ಷಕ್ಕೊಂದು ಭಾಗವತ ಮೇಳದ ಪ್ರದರ್ಶನ ನೀಡಿ ಎಂದು ಸಿದ್ದೇಂದ್ರ ಯತಿಗಳು ಅಲ್ಲಿನವರಿಗೆ ಹೇಳಿದ್ದರು. ತೀರ್ಥನಾರಾಯಣ ಯತಿಗಳು ಬರೆದ ‘ಶ್ರೀ ಕೃಷ್ಣಲೀಲಾ ತರಂಗಿಣಿ’, ಸಿದ್ದೇಂದ್ರ ಯತಿಗಳು ಬರೆದ ‘ಪಾರಿಜಾತಾಪಹರಣ’ ಅಥವಾ ‘ಭಾಮಾ ಕಲಾಪಂ’ ಅಂದು ಜನಪ್ರಿಯಗೊಂಡಿದ್ದ
ಯಕ್ಷಗಾನ ಕಥನಗಳು. ಇವುಗಳ ಜೊತೆಯ, ನಂತರದ ದಿನಗಳಲ್ಲಿ ಶ್ರೀನಿವಾಸ ಕಲ್ಯಾಣಂ, ಶಶಿರೇಖಾ ಪರಿಣಯಂ, ರುಕ್ಮಿಣಿ ಕಲ್ಯಾಣಂ, ಉಷಾ ಪರಿಣಯಂ, ರಾಮನಾಟಕಂ, ಮೋಹಿನಿ ರುಕ್ಮಾಂಗದ ಮೊದಲಾದ ಕಥನಗಳನ್ನೂ ಆಡುತ್ತಿದ್ದರು.

ಇಪ್ಪತ್ತನೆಯ ಶತಮಾನದ ಮಧ್ಯಭಾಗದ ತನಕವೂ ಈ ಯಕ್ಷಗಾನ ನಡೆಯುತ್ತಿದ್ದುದು ರಾತ್ರಿಯ ದೊಂದಿಯ ಬೆಳಕಿನಲ್ಲಿ. ನಮ್ಮ ನಾಡಿನ ಯಕ್ಷಗಾನದಂತೆಯೇ, ರಾತ್ರಿ ಆರಂಭಗೊಂಡರೆ, ಆರೆಂಟು ಗಂಟೆಗಳ ತನಕ ನಡೆಯುವ ಯಕ್ಷಗಾನವು, ಸಾಮಾನ್ಯವಾಗಿ ದೇವಸ್ಥಾನದ ಹತ್ತಿರ ನಡೆಯುತ್ತಿತ್ತು. ಸೀಪಾತ್ರಗಳನ್ನು ಪುರುಷರೇ ನಟಿಸುತ್ತಿದ್ದರು. ಸೂತ್ರ ಧಾರನು ತಾಳ ಬಡಿದು ಹಾಡುತ್ತಾ, ಇಡೀ ಪ್ರದರ್ಶನವನ್ನು ನಿರ್ದೇಶಿಸುತ್ತಿದ್ದನು. ತಾಳ, ಮೃದಂಗ, ತಂಬೂರಿ ಮುಖ್ಯವಾದ ಪಕ್ಕವಾದ್ಯಗಳು. ಜೊತೆ ಯಲ್ಲಿ ವಯೊಲಿನ್, ಕೊಳಲುವಾದಕರೂ ಸಹ ಸೇರಿಕೊಳ್ಳುತ್ತಿದ್ದರು. ಮೊದಲಿಗೆ ಗಣೇಶನ ಪೂಜೆ. ನಂತರ, ಅಂಬಾಪರಾಕು, ಅರ್ಧಚಂದ್ರಿಕಾ, ಸೂತ್ರಧಾರನ ಪ್ರವೇಶ; ದ್ವಾರಕುಡು (ದ್ವಾರಪಾಲಕ) ಎಂಬಾತ ಎಲ್ಲಾ ಪಾತ್ರಗಳನ್ನು ಪರಿಚಯ ಮಾಡಿಸುತ್ತಿದ್ದ. ಪುಟ್ಟ ಪರದೆಯನ್ನು ಅಡ್ಡ ಹಿಡಿದು, ಅದರ ಮರೆಯಲ್ಲಿ ವೇದಿಕೆಯನ್ನು ಪ್ರವೇಶಿಸುವ ವೇಷಧಾರಿಗಳು,
ನಂತರ ಪರದೆಯನ್ನು ಸರಿಸಿ ಪೂರ್ತಿ ಕಾಣಿಸಿಕೊಳ್ಳುವುದು ವಾಡಿಕೆ. (ಇದು ಇಂದಿಗೂ ನಮ್ಮ ಯಕ್ಷಗಾನದಲ್ಲಿದೆ). ಸೂತ್ರಧಾರನು ತಾಳವನ್ನು ಬಡಿಯುತ್ತಾ, ಪದ್ಯಗಳನ್ನು ಹಾಡಿದಾಗ ಪಾತ್ರಧಾರಿಗಳು ನೃತ್ಯಮಾಡುತ್ತಿದ್ದರು.

ಪಾತ್ರಧಾರಿಗಳೂ ಸಹಪದ್ಯಗಳನ್ನು ಹಾಡುತ್ತಾ, ನೃತ್ಯಮಾಡಿ, ಅರ್ಥವನ್ನು ಹೇಳುತ್ತಾರೆ. ಕೊನೆಯಲ್ಲಿ ಮಂಗಳಸ್ತುತಿ ಮತ್ತು ಫಲಸ್ತುತಿಯೊಂದಿಗೆ ಮುಕ್ತಾಯ. ಕೂಚಿಪೂಡಿ ಗ್ರಾಮದವರು ಪ್ರಸ್ತುತ ಪಡಿಸುತ್ತಿದ್ದ ಈ ಯಕ್ಷಗಾನವನ್ನು ನೋಡಿ ಮೆಚ್ಚಿದ ಗೋಲ್ಕೊಂಡಾದ ನವಾಬನು, ಕ್ರಿ..ಶ.೧೬೭೮ರಲ್ಲಿ ಅವರಿಗೆ ದತ್ತಿ ಬಿಟ್ಟಿದ್ದು ದಾಖಲಾಗಿದೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ, ದೇವಾಲಯದ ಸನಿಹ ನಡೆಯುವ ನೃತ್ಯಗಳಿಗೆ ನಿರ್ಬಂಧ ಹೇರಿದ್ದರಿಂದಾಗಿ, ಮದರಾಸ್ ಪ್ರೆಸಿಡೆನ್ಸಿ ಆಳ್ವಿಕೆಗೆ ಒಳಪಟ್ಟ ಆ ಪ್ರದೇಶದಲ್ಲಿ ಕೂಚಿ ಪೂಡಿ ಯಕ್ಷಗಾನಕ್ಕೆ ಸ್ವಲ್ಪ ಹಿನ್ನಡೆ ಆಯಿತು ಎನ್ನಲಾಗಿದೆ. ಶಾಸಬದ್ಧವಾಗಿ ರಾತ್ರಿ ಪೂರ್ತಿ ನಡೆಯುತ್ತಿದ್ದ ‘ಕೂಚಿಪೂಡಿ ಯಕ್ಷಗಾನ’ ಪ್ರಕಾರವು ಹೆಚ್ಚಿನ ಹಿನ್ನಡೆ ಯನ್ನು ಅನುಭವಿಸಿದ್ದು ಸಿನಿಮಾಗಳ ದಾಳಿಯಿಂದ. ಮದರಾಸಿಗೆ ಹತ್ತಿರವಿದ್ದ, ನೇರ ರೈಲು ಸಂಪರ್ಕ ಇದ್ದ ಆಂಧ್ರಪ್ರದೇಶದಲ್ಲಿ ಬಹುಬೇಗ ಸಿನಿಮಾಗಳು ಜನ ಪ್ರಿಯವಾದವು. ೧೯೩೦ -೧೯೬೦ರ ದಶಕಗಳಲ್ಲಿ ಹೊರಬಂದ ಪೌರಾಣಿಕ ತೆಲುಗು ಸಿನಿಮಾಗಳ ಪ್ರವಾಹದಲ್ಲಿ ಕೂಚಿಪೂಡಿ ಭಾಗವತಮೇಳವು ಕೊಚ್ಚಿಹೋಯಿತು. ಇಡೀ ರಾತ್ರಿ ನಡೆಯುತ್ತಿದ್ದ ಪ್ರದರ್ಶದ ಬದಲು, ಕೇವಲ ಮೂರು ಗಂಟೆಗಳಲ್ಲಿ ಅಂತಹದೇ ಪೌರಾಣಿಕ ಕಥೆಗಳನ್ನು ನೀಡುತ್ತಿದ್ದ ಸಿನಿಮಾಗಳು ಜನಪ್ರಿಯವಾದವು. ಆಂಧ್ರ ಪ್ರದೇಶ ದಿಂದ ಸುಲಭ ಸಂಪರ್ಕ ಹೊಂದಿದ್ದ ಮದರಾಸಿನ ಸಿನಿಮಾ ಕ್ಷೇತ್ರಕ್ಕೆ ಕೂಚಿಪೂಡಿ ಭಾಗವತರ ಪ್ರತಿಭೆಗಳು ವಲಸೆ ಹೋದರು. ಸಿನಿಮಾಗಳಲ್ಲಿ ನೃತ್ಯ ಮತ್ತು ಸಂಗೀತಕ್ಕೆ ತಮ್ಮನ್ನು ಒಪ್ಪಿಸಿಕೊಂಡರು. ಊರಿಂದೂರಿಗೆ ಮೇಳವನ್ನು ಕಟ್ಟಿಕೊಂಡು ಹೋಗಿ, ರಾತ್ರಿಪೂರ್ತಿ ನಡೆಸುವ ಪ್ರದರ್ಶನ ಕಲೆಯನ್ನು
ನೋಡುವ ಜನರೂ ಕಡಿಮೆಯಾದರು. ಇದರಿಂದ ಕೂಚಿಪೂಡಿ ಭಾಗವತ ಮೇಳಕ್ಕೆ ಹಿನ್ನೆಡೆ ಆಗಿದ್ದು ಒಂದು ವಾಸ್ತವ. ಆ ಸಮಯದಲ್ಲಿ ವೇದಾಂತಂ ಸತ್ಯನಾರಾಯಣ ಶರ್ಮ(೧೯೩೫-೨೦೧೨)ರಂತಹ ಕಲಾವಿದರು, ಏಕವ್ಯಕ್ತಿ ಯಕ್ಷಗಾನ ನೃತ್ಯವನ್ನು ರೂಪಿಸಿದರು. ಅವರು ಏಕವ್ಯಕ್ತಿ ಪ್ರದರ್ಶನ ನೀಡುತ್ತಾ, ತಮ್ಮಲ್ಲಿದ್ದ ಅದ್ಭುತ ನೃತ್ಯ ಕೌಶಲವನ್ನು ಮದರಾಸ್, ಹೈದರಾಬಾದ್ ಮೊದಲಾದ ನಗರಗಳಲ್ಲಿ ಪ್ರದರ್ಶಿಸತೊಡಗಿದರು.

ಏಕವ್ಯಕ್ತಿ ಸ್ತ್ರೀ ಪಾತ್ರ ಪ್ರದರ್ಶನದಲ್ಲಿ ಪರಿಣಿತರಾದ ಅವರು ತಮ್ಮ ಗುರು ಚಿಂತಾ ಕೃಷ್ಣಮೂರ್ತಿಯವರೊಂದಿಗೆ ಮದರಾಸಿಗೆ ಹೋಗಿ, ಅಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಏಕವ್ಯಕ್ತಿ ಪ್ರದರ್ಶನಕ್ಕೆ ಸೂಕ್ತ ಎನಿಸುವ ‘ಸತ್ಯಭಾಮಾ’ ಪಾತ್ರದಲ್ಲಿ ಮತ್ತು ‘ಗೊಲ್ಲಕಲಾಪ’ದಲ್ಲಿ ಇವರು ಪ್ರಸಿದ್ಧರು. ಇವರ ಏಕವ್ಯಕ್ತಿ ಕೂಚಿಪೂಡಿ ಸೀಪಾತ್ರವನ್ನು ನೋಡಿದ ಅಂದಿನ ಖ್ಯಾತ ನೃತ್ಯಗಾತಿ ರುಕ್ಮಿಣಿ ಅರುಂದೇಲ, ಅಂತಹ ಪ್ರದರ್ಶನಗಳನ್ನು ಹೆಚ್ಚು ಹೆಚ್ಚು ಮಾಡುವಂತೆ ಅವರಿಗೆ ಸಲಹೆ ನೀಡಿದರು. ಇವರು ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ್ದಲ್ಲದೆ, ನೃತ್ಯದಲ್ಲಿ ಕೆಲವು ಬದಲಾವಣೆ ಮಾಡುತ್ತಲೇ, ಆ ಕಲೆಯನ್ನು ಹಲವು ಯುವಕರಿಗೆ
ಮತ್ತು ಯುವತಿಯರಿಗೆ ತರಬೇತಿ ನೀಡಿದರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ ಹತ್ತುವರ್ಷಗಳ ನಂತರ, ೧೯೫೮ರಲ್ಲಿ ದೆಹಲಿಯಲ್ಲಿ ಸಂಗೀತ ನಾಟಕ ಅಕಾಡೆಮಿಯ ಆಶ್ರಯದಲ್ಲಿ ನಡೆದ ನೃತ್ಯ ಸೆಮಿನಾರಿನಲ್ಲಿ ಪ್ರದರ್ಶನಗೊಂಡ ‘ಕೂಚಿಪೂಡಿ ನೃತ್ಯ’ (ಗಮನಿಸಿ : ಭಾಗವತಮೇಳ ಅಲ್ಲ) ಎಲ್ಲರ ಗಮನ ಸೆಳೆಯಿತು. ಆ ಹೊತ್ತಿಗೆ ಸಾಕಷ್ಟು ಜನರು ಕೂಚಿಪೂಡಿ ನೃತ್ಯದಲ್ಲಿ ಪರಿಣತಿ ಗಳಿಸಿದ್ದರು.

ಒಂದು ಕಾಲದಲ್ಲಿ ಹಾಡು, ಕುಣಿತ, ಸಂಭಾಷಣೆ, ವೈವಿಧ್ಯಮಯ ಹಿಮ್ಮೇಳವನ್ನು ಹೊಂದಿದ್ದ ಕೂಚಿಪೂಡಿ ಯಕ್ಷಗಾನವು, ಬರಬರುತ್ತಾ ನೃತ್ಯ ಮಾತ್ರ ಪ್ರಮುಖವಾಗಿರುವ ಕಲಾಪ್ರಕಾರವಾಯಿತು. ವೇದಾಂತಂ ಲಕ್ಷ್ಮೀನಾರಾಯಣ ಶಾಸಿ, ಅವರ ಮಗ ವೇದಾಂತಂ ಜಗನ್ನಾಥ ಶರ್ಮ, ವಿ. ಸತ್ಯನಾರಾಯಣ ಶರ್ಮ ಮೊದಲಾದವರು ಹಲವು ಮಹಿಳಾ ನೃತ್ಯಗಾತಿಯರನ್ನು ತರಬೇತಿಗೊಳಿಸಿದರು. ಪುರುಷರು ಮಾತ್ರ ನೃತ್ಯ ಮಾಡುತ್ತಿದ್ದ ಕೂಚಿಪೂಡಿ ಯಕ್ಷಗಾನವು ಮರೆಯಾಗಿ, ಏಕವ್ಯಕ್ತಿ ಮತ್ತು ಗುಂಪು ಪ್ರದರ್ಶನ ನೀಡುವ ಮಹಿಳಾ ಕಲಾವಿದರಿಂದ ಈ ಕಲಾಪ್ರಕಾರವು ಹೆಸರುಗೊಂಡಿತು. ೧೯೬೩ರಲ್ಲಿ ಖ್ಯಾತ ಕೂಚಿಪೂಡಿ ನೃತ್ಯಪಟು,
ವೆಂಪಾಟಿ ಚಿನ್ನ ಸತ್ಯಂ (೧೯೨೯-೨೦೧೨) ಮದರಾಸಿನಲ್ಲಿ ಆರಂಭಿಸಿದ ಕೂಚಿಪೂಡಿ ಆರ್ಟ್ಸ್ ಅಕಾಡೆಮಿಯು, ಮಹಿಳೆಯರಿಗೆ ‘ಕೂಚಿಪೂಡಿ ನೃತ’ ವನ್ನು ಕಲಿಸತೊಡಗಿತು. ಇವರೂ ಸಹ ಏಕವ್ಯಕ್ತಿ ನೃತ್ಯ ಪ್ರದರ್ಶನದಲ್ಲಿ ಸಿದ್ಧಹಸ್ತರು. ಕಾಳಿದಾಸ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ ಮೊದಲಾದ ಗೌರವಗಳನ್ನು ಪಡೆದಿರುವ ವೆಂಪಾಟಿ ಚಿನ್ನ ಸತ್ಯಂ ಸುಮಾರು ೧೦,೦೦೦ ಏಕವ್ಯಕ್ತಿ ಪ್ರದರ್ಶನ ನೀಡಿದ್ದರು. ಕೂಚಿ
ಪೂಡಿಯು ಒಂದು ನೃತ್ಯ ಪ್ರಕಾರವಾಗಿ ವಿಶ್ವದ ಎಲ್ಲೆಡೆ ಪ್ರಚುರಗೊಳ್ಳಲು ಇವರ ಕೊಡುಗೆ ಅನನ್ಯ.

ಭರತನಾಟ್ಯ ಕಲಿತ ವಿದೇಶಿ ಮಹಿಳೆ ರಾಗಿಣಿ ದೇವಿ (ಎಸ್ತರ್ ಶರ್ಮನ್), ಕೂಚಿಪೂಡಿಯನ್ನು ಕಲಿತು, ವಿದೇಶಗಳಲ್ಲಿ ಏಕವ್ಯಕ್ತಿ ಪ್ರದರ್ಶನವನ್ನು ನೀಡಿದರು. ಅವರ ಮಗಳು ಇಂದ್ರಾಣಿ ರೆಹಮಾನ್, ಯಾಮಿನಿ ಕೃಷ್ಣಮೂರ್ತಿ ಮೊದಲಾದವರು ೧೯೬೦ರ ನಂತರದ ದಶಕಗಳಲ್ಲಿ ಕೂಚಿಪೂಡಿ ನೃತ್ಯವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದರು. ಏಕವ್ಯಕ್ತಿ ಸ್ತ್ರೀ ನೃತ್ಯ, ಪುರುಷ ಮತ್ತು ಸೀ ಪಾತ್ರಗಳ ನೃತ್ಯ, ಸಮೂಹ ಸ್ತ್ರೀ ನೃತ್ಯಗಳು ಜನಪ್ರಿಯವಾದವು. ಮೂಲ ಕೂಚಿಪೂಡಿಯಲ್ಲಿದ್ದ ಸಂಭಾಷಣೆ, ಕಥನ ಕಲೆ, ಕುಣಿತ ಮೊದಲಾದವು ಮರೆಯಾದವು. ಕೂಚಿಪೂಡಿ ಭಾಗವತ ಮೇಳಗಳು ಸಂಪೂರ್ಣ ತೆರೆಯ ಮರೆಗೆ ಸರಿದವು. ಕೂಚಿಪೂಡಿ ಯಕ್ಷಗಾನವು, ಕ್ರಮೇಣ ‘ಕೂಚಿ ಪೂಡಿ ನೃತ್ಯ’ವಾಗಿ ರೂಪಾಂತರಗೊಂಡು, ತಮ್ಮ ಪುರಾತನ ಗಂಡುಕಲೆಯು ಕೈತಪ್ಪಿ ಹೋಗಿದ್ದರ ಅರಿವು ಕೂಚಿಪೂಡಿ ಪ್ರದೇಶದ ಜನರಲ್ಲಿ ಇದೆ. ಅಲ್ಲಿನ ಸ್ಥಳೀಯರು ‘ಕೂಚಿಪೂಡಿ ಯಕ್ಷಗಾನ’ವನ್ನು ಪುನಃ ಕಲಿಯುತಿದ್ದಾರೆ. ಏಕವ್ಯಕ್ತಿ ನೃತ್ಯ ಪ್ರದರ್ಶನವನ್ನು ಇಂದಿನ ಯುವ ಜನಾಂಗಕ್ಕೆ ಹೇಳಿಕೊಡುತ್ತಿರುವ ಸಮಯದ, ಪಸುಪರ್ತಿ ರತ್ತಯ್ಯ ಶರ್ಮ, ವೇದಾಂತಂ ವೆಂಕಟನಾಗ ಚಲಪತಿ ಮೊದಲಾದವರು ಹಳೆಯ ಶೈಲಿಯ ಪ್ರದರ್ಶನವನ್ನೂ ಕಲಿಸುತ್ತಿದ್ದಾರೆ. ವೇದಾಂತಂ ವೆಂಕಟನಾಗಚಲಪತಿಯವರು, ಆ ಗ್ರಾಮದಲ್ಲಿ ‘ಕೂಚಿಪೂಡಿ ಭಾಗವತ ಮೇಳಂ’ ಸ್ಥಾಪಿಸಿ, ವಿವಿಧ ಪ್ರದೇಶಗಳಲ್ಲಿ ತಮ್ಮ
ಶೈಲಿಯ ಪ್ರದರ್ಶನ ನೀಡುತ್ತಿದ್ದಾರೆ.

ಈಚಿನ ವರ್ಷಗಳಲ್ಲಿ ಕರ್ನಾಟಕದ ಉತ್ತರಕನ್ನಡ, ತೀರ್ಥಹಳ್ಳಿ, ಬೆಂಗಳೂರ ಮೊದಲಾದ ಕಡೆ ಇವರ ಪ್ರದರ್ಶನ ಕಂಡು ಕಲಾರಸಿಕರು ಅಚ್ಚರಿಪಟ್ಟರು! ಶುದ್ಧ ಯಕ್ಷಗಾನ ಪ್ರಕಾರವಾಗಿದ್ದ ಈ ಕಲೆಯು, ಕಳೆದ ನಾಲ್ಕಾರು ದಶಕಗಳಲ್ಲಿ, ಖ್ಯಾತಿವೆತ್ತ ನೃತ್ಯ ಪ್ರಕಾರವಾಗಿ ರೂಪಾಂತರ ಹೊಂದಿದ ಪ್ರಕ್ರಿಯೆಯು ವಿಸ್ಮಯಕಾರಿ ಮತ್ತು ಚಿಂತನೆಗೆ ಹಚ್ಚುವಂತಹದ್ದು. ಕರ್ನಾಟಕದ ಯಕ್ಷಗಾನವು, ಕೂಚಿಪೂಡಿಯಂತೆ ರೂಪಾಂತರ ಹೊಂದಿಲ್ಲ ಏಕೆ? ವಾಸ್ತವವೆಂದರೆ, ಅಂತಹುದೇ ಸವಾಲುಗಳನ್ನು ನಮ್ಮ ರಾಜ್ಯದ ಕಲೆಗಳೂ ಎದುರಿಸಿದ್ದವು. ಬಯಲು ಸೀಮೆಯಲ್ಲಿದ್ದ ಮೂಡಲಪಾಯ ಯಕ್ಷಗಾನವು ಈಗ ಬಹುಮಟ್ಟಿಗೆ ಕುಂದಿದೆ. ಕರಾವಳಿಯ ಯಕ್ಷಗಾನವು ಉಳಿದುಕೊಂಡು ಬರಲು ಹಲವು ಕಾರಣಗಳಿವೆ. ಕೂಚಿಪೂಡಿಯಲ್ಲಿ ಯಕ್ಷಗಾನವನ್ನು ನಡೆಸುತ್ತಿದ್ದವರು, ಕೆಲವೇ ಕುಟುಂಬಗಳವರು. ನಮ್ಮಲ್ಲಿ ಜಾತಿ ಮತ ಬೇಧವಿಲ್ಲದೇ, ಹಲವು ಸ್ಥಳ, ಊರುಗಳ ಉತ್ಸಾಹಿಗಳು ಯಕ್ಷಗಾನಕ್ಕೆ ತಮ್ಮನ್ನು ಮುಡಿಪಾಗಿಟ್ಟರು. ೧೯೬೦ರ ದಶಕದ ನಂತರ, ಬಯಲಾಟದ ಜಾಗದಲ್ಲಿ ಟೆಂಟ್ ಆಟಗಳು ಬಂದವು. ಈಚೆಗೆ, ಟೆಂಟ್ ಆಟಗಳು ಕುಸಿದಿವೆ. ಕರಾವಳಿಯಲ್ಲಿ ಸಿನಿಮಾ ಪ್ರಭಾವ
ಹೆಚ್ಚಳಗೊಂಡಿದ್ದು ೧೯೮೦ರ ದಶಕದ ನಂತರ. ಈಗ, ಅಂದರೆ ೨೧ನೆಯ ಶತಮಾನದಲ್ಲಿ, ಕರಾವಳಿಯ ಯಕ್ಷಗಾನವು ತೀವ್ರ ಬದಲಾವಣೆಯ ಕಾಲಘಟ್ಟ ದಲ್ಲಿದೆ. ಈಗಾಗಲೇ ‘ಕಾಲಮಿತಿ ಯಕ್ಷಗಾನ’ ಎಂಬ ಪ್ರಕಾರವು ಬಳಕೆಗೆ ಬಂದಿದ್ದು, ಇಡೀ ರಾತ್ರಿ ನಡೆಯುತ್ತಿದ್ದ ಯಕ್ಷಗಾನವು, ಎರಡರಿಂದ ನಾಲ್ಕು ಗಂಟೆಯಲ್ಲಿ ಮುಗಿಯುತ್ತಿದೆ. ಅದೇನೇ ಇದ್ದರೂ, ಯಕ್ಷಗಾನವನ್ನು ಕಲಿಯುವವರು, ಕಲಿಸುವವರು, ಮೇಳಗಳು ಮತ್ತು ಆ ಕುರಿತು ಬಹಳಷ್ಟು ಜನರಲ್ಲಿ ಇರುವ ತೀವ್ರ ಆಸಕ್ತಿ, ಹೊಸ ಸವಾಲುಗಳನ್ನು ಎದುರಿಸುವ ಛಲ ಇವೆಲ್ಲವುಗಳಿಂದಾಗಿ ಕರಾವಳಿ ಮತ್ತು ಮಲೆನಾಡಿನ ಯಕ್ಷಗಾನ ತನ್ನ ಅಸ್ಮಿತೆಯನ್ನುಇಂದಿಗೂ ಉಳಿಸಿಕೊಂಡಿದೆ.