Saturday, 14th December 2024

ಪದ್ಯದಲಿ ಅದ್ದಿದರೆ ಕಬ್ಬಿಣದ ಕಡಲೆಯೂ ಮೃದುವೇ !

ತಿಳಿರುತೋರಣ

ಶ್ರೀವತ್ಸಜೋಶಿ

ಅಗಣಿತ ಗುಣಗಣ ಎಂದು ನಾನು ತಮಾಷೆಗಾಗಿ ಗುರುತಿಸುವುದು ಮತ್ತು ಗೌರವಿಸುವುದು ಗಣಿತದ್ವೇಷಿಗಳನ್ನು.

ಹಾಂ… ಅದರಲ್ಲಿ ನೀವೂ ಇದ್ದೀರಾದರೆ ಗಾಬರಿಯಾಗಬೇಡಿ! ಗೌರವಿಸುವುದು ಎಂದು ಮುದ್ದಾಂ ಆಗಿ ಸೇರಿಸಿದ್ದೇನೆ. ಏಕೆಂದರೆ ನನ್ನ ಆ ತಮಾಷೆಯು ಮೂದಲಿಕೆಯಲ್ಲ. ಕೀಳಾಗಿ ಕಾಣುವುದಂತೂ ಅಲ್ಲವೇಅಲ್ಲ. ಕೆಲವರಿಗೆ (ಹಲವರಿಗೆ ಎನ್ನೋಣವೇ?) ಗಣಿತವೆಂದರೆ ಕಬ್ಬಿಣದ ಕಡಲೆ, ಅದು ತಲೆ ಮೇಲಿಂದ ಹಾರಿ ಹೋಗುತ್ತದೆ, ಕೈ- ಕಾಲು ಎದೆ ನಡುಕ ಉಂಟುಮಾಡುತ್ತದೆ… ಎಂಬಿತ್ಯಾದಿ ಭಾವನೆಗಳು ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚೊತ್ತಿರುತ್ತವೆ.

ಹಾಗೇಕೆ ಎಂದು ನನಗೆ ಯಾವತ್ತಿಗೂ ಆಶ್ಚರ್ಯ. ನಾನೇನೂ ಗಣಿತದಲ್ಲಿ ಕೋವಿದನಲ್ಲ. ಅದರಲ್ಲಿ ಸ್ನಾತಕೋತ್ತರ ಶಿಕ್ಷಣವನ್ನೋ ಪಿಎಚ್‌ಡಿಯನ್ನೋ ಮಾಡಿದವನಲ್ಲ. ಶಾಲೆ – ಕಾಲೇಜಿನಲ್ಲಿ ಕಲಿತದ್ದೆಲ್ಲ ನೆನಪಿದೆಯೆಂದಾಗಲೀ, ಎಲ್ಲವನ್ನೂ ಅರೆದು ಕುಡಿದಿದ್ದೇ ನೆಂದಾಗಲೀ ಖಂಡಿತ ಅಲ್ಲ. ಆದರೆ ನನಗೆ ಗಣಿತವೆಂದರೆ ಯಾವುದೇ ತೆರನಾದ ಪೂರ್ವಗ್ರಹವಿಲ್ಲ. ಅದನ್ನು ಮುಕ್ತ
ಮನಸ್ಸಿನಿಂದ ಸ್ವಾಗತಿಸುತ್ತೇನೆ. ನನಗೆ ಅರ್ಥವಾದಷ್ಟು ಮಟ್ಟಿಗೆ ಅರಿತು ಅರಗಿಸಿಕೊಂಡು ಅನುಭವಿಸಿ ಆನಂದಿಸುತ್ತೇನೆ.

ಗಣಿತ ನನ್ನ ಬೌದ್ಧಿಕ ಆರೋಗ್ಯವನ್ನು ಚೆನ್ನಾಗಿಟ್ಟಿದೆ ಎಂದು ನಂಬುತ್ತೇನೆ. ತಥಾಕಥಿತ ಗಣಿತದ್ವೇಷಿ ಬಂಧುಮಿತ್ರರು ಇಂಥ ದೊಂದು ಆನಂದದ ಅನುಭವದಿಂದ ವಂಚಿತರಾಗಿದ್ದಾರಲ್ಲ ಎಂದು ಕೆಲವೊಮ್ಮೆ ಮರುಗುತ್ತೇನೆ. ಗಣಿತದ ಬಗ್ಗೆ ಇಷ್ಟೊಂದು ಪ್ರಮಾಣದಲ್ಲಿ ಅಸ್ಪೃಶ್ಯತೆಗೆ ಕಾರಣವೇನಿರಬಹುದು? ನನಗನಿಸುತ್ತದೆ ನಮ್ಮ ಲಾಲಿಹಾಡುಗಳಲ್ಲಿ, ಶಿಶುಗೀತೆ ಗಳಲ್ಲಿ, ಅಭಿನಯ ಗೀತೆಗಳಲ್ಲಿ ಗಣಿತವನ್ನು ಕುರಿತಾದುವು ಇಲ್ಲವೇಇಲ್ಲ ಎನ್ನುವಷ್ಟು ಕಡಿಮೆ.

ಗಣಿತವನ್ನು ಒಂದು ಮನೋರಂಜನೆಯ ಸಾಧನವೆಂದು ನಾವು ಪರಿಗಣಿಸಿದ್ದೇ ಇಲ್ಲ. ಗಣಿತದ ಬಗ್ಗೆ ಆತ್ಮೀಯತೆ  ಬೆಳೆಸಿ  ಕೊಂಡದ್ದೇ ಇಲ್ಲ.

ಎಲ್ಲೋ ಒಂದು ‘ಒಂದು ಎರಡು ಬಾಳೆಲೆ ಹರಡು|
ಮೂರು ನಾಲ್ಕು ಅನ್ನ ಹಾಕು…’ ಊಟದ ಆಟ ಪದ್ಯವೋ, ‘ಹತ್ತು  ಹತ್ತು ಇಪ್ಪತ್ತು| ತೋಟಕೆ ಹೋದನು ಸಂಪತ್ತು| ಇಪ್ಪತ್ತು
ಹತ್ತು ಮೂವತ್ತು| ಕೈಯಲ್ಲಿ ಒಂದು ಕಲ್ಲಿತ್ತು…’ ಎಂಬ ಕಥಾನಕವೋ, ‘ಎರಡೆತ್ತೆಮ್ಮೆಯ ಮರಿ ಎರಡೆರಡಾಡಿನ ಮರಿ
ಎರಡು’ ರೀತಿಯ ಟಂಗ್‌ಟ್ವಿಸ್ಟರೋ, ‘ಕಾಲಾರು ಕಂಗಳಾರು ತಲೆಮೂರು ಕಿವಿನಾಲ್ಕು ಬಾಲಂಗಳೆರಡು ಭಾಮಿನಿ ಹೇಳೇ’
ರೀತಿಯ ಒಗಟೋ ಮಾತ್ರ ನಮ್ಮ ವಿನೋದಭಂಡಾರದಲ್ಲಿ ಸಿಗಬಹುದು ಅಷ್ಟೇ.

ಬೇರೆಲ್ಲ ವಸ್ತು – ವಿಷಯ – ವ್ಯಾಪ್ತಿಯ ಪದ್ಯ ಕಥೆ ಒಗಟು ಗಾದೆ ಇತ್ಯಾದಿಗೆ ಹೋಲಿಸಿದರೆ ಇದು ತೀರ ನಗಣ್ಯ. ಹಾಗೆನ್ನುವಾಗ ನನಗೆ ಇನ್ನೂ ಒಂದು ನೆನಪಾಯ್ತು, ಇದು ಹೆಚ್ಚಿನವರಿಗೆ ಗೊತ್ತಿಲ್ಲವೇನೊ. ಚೆನ್ನಾಗಿದೆ ಮತ್ತು ಧರಣಿಮಂಡಲ ಮಧ್ಯದೊಳಗೆ ಹಾಡಿನ ಧಾಟಿಯಲ್ಲಿ ಹಾಡಿಕೊಂಡರೆ ಮತ್ತಷ್ಟು ಚೆನ್ನಾಗಿದೆ: ‘ಒಂದು ಕಾಡಿನ ಮಧ್ಯದೊಳಗೆ| ಎರಡು ಗುಹೆಗಳ ನಡುವೆ ಮಲಗಿ| ಮೂರು ಕರಡಿಗಳಾಡುತ್ತಿದ್ದವು| ನಾಲ್ಕು ಮರಿಗಳ ಸೇರಿಸಿ|| ಐದು ಜನರಾ ಬೇಟೆಗಾರರು| ಆರು ಬಲೆಗಳನೆಳೆದು ತಂದು| ಏಳು
ಕರಡಿಗಳ್ಹಿಡಿದು ನೋಡದೆ| ಎಂಟು ಹಿಡಿದೆವು ಎಂದರು||
ಒಂಬತ್ತೆಂದನು ಅವರಲೊಬ್ಬ| ಹತ್ತು ಎಂದನು ಬೇರೆಯವನು| ಎಣಿಸಿ ನೋಡಿದರೇಳೇ ಏಳು| ಇಲ್ಲಿಗೀ ಕಥೆ ಮುಗಿಯಿತು||’
ಇರಲಿ, ನಾನು ಹೇಳುತ್ತಿರುವುದೇನೆಂದರೆ ಕಷ್ಟಪಟ್ಟು ನೆನಪಿಸಿಕೊಂಡರೆ ಇಂಥ ಗಣಿತಪರ ಗಾನಗಳು ಗಾಥೆಗಳು ಕೈಬೆರಳೆಣಿಕೆಯಷ್ಟು ಸಿಗಬಹುದು.

ಇವನ್ನು ಬಿಟ್ಟರೆ ಬೇರೆ ಗತಿಯಿಲ್ಲ. ಅಂದಹಾಗೆ ನಿಮಗೆ ಕುತೂಹಲವಿದೆಯಾದರೆ – ಆ ಟಂಗ್‌ಟ್ವಿಸ್ಟರ್‌ನಲ್ಲಿ ಒಟ್ಟು ಹನ್ನೊಂದು ಪ್ರಾಣಿಗಳಿವೆ. ಅಂತೆಯೇ ಒಗಟಿನ ಉತ್ತರ: ಮೂಷಕವಾಹನನೂ ಸರ್ಪಾಲಂಕೃತನೂ ಆದ ಗಣೇಶ. ಹೇಗೆ ಎಂದು ನೀವೇ ಲೆಕ್ಕ ಹಾಕಿ. ನಮ್ಮಲ್ಲಿ ಜಾಣ್ಮೆಲೆಕ್ಕಗಳು, ವಿನೋದಗಣಿತ ಇಲ್ಲ ಎನ್ನುತ್ತಿಲ್ಲ ನಾನು. ಪದ್ಯ ರೂಪದಲ್ಲಿ ಇಲ್ಲ ಅಷ್ಟೇ.

ಅದರಿಂದಾಗಿ ಗಣಿತದ ನಿರೂಪಣೆ – ಅದು ಮೆದುಳಿಗೆ ಮೇವಾಗಿಸಲಿಕ್ಕೆ ಅಥವಾ ಮನೋರಂಜನೆ ಒದಗಿಸಲಿಕ್ಕೆ ಮಾಡಿದ್ದಿದ್ದರೂ ಗದ್ಯರೂಪದಲ್ಲಿ ಇರುವುದರಿಂದ ಯಾವಾಗಲೂ ಶುಷ್ಕವಾಗಿ ಇರುತ್ತದೆ. ಹೇಗೆಂದು ಹೇಳುತ್ತೇನೆ. ‘ಮೂವರು ಅಂಬಿಗರು ಮೂರು ಪ್ರತ್ಯೇಕ ದೋಣಿಗಳಲ್ಲಿ ಹೋಗುತ್ತಿರುತ್ತಾರೆ. ಪ್ರತಿಯೊಂದು ದೋಣಿಯಲ್ಲೂ ಅಂಬಿಗನೂ ಸೇರಿದಂತೆ ಎಷ್ಟೋ ಸಂಖ್ಯೆಯ
ಜನರಿರುತ್ತಾರೆ.

ಮೂರರ ಪೈಕಿ ಹೆಚ್ಚು ಜನರಿರುವ ದೋಣಿ ಹಠಾತ್ತನೆ ಮುಳುಗಲಾರಂಭಿಸುತ್ತದೆ. ತತ್‌ಕ್ಷಣವೇ ಉಳಿದೆರಡು ದೋಣಿಗಳವರು ಆಯಾ ದೋಣಿಗಳಲ್ಲಿ ಮೊದಲಿಗೆಷ್ಟು ಜನರಿದ್ದರೋ ಅಷ್ಟು ಜನರನ್ನು ಮೂರನೆಯ ದೋಣಿಯಿಂದ ತಮ್ಮ ದೋಣಿಗೆ ಏರಿಸಿಕೊಳ್ಳುತ್ತಾರೆ. ಆಗ ಮೂರೂ ದೋಣಿಗಳಲ್ಲಿ ಸಮಪ್ರಮಾಣದಲ್ಲಿ ಜನರು ಇದ್ದಂತಾಗುತ್ತದೆ.

ಮೂರೂ ಸಲೀಸಾಗಿ ತೇಲಿಕೊಂಡು ಹೋಗುತ್ತವೆ. ಹಾಗಾದರೆ ಆರಂಭದಲ್ಲಿ ಆ ದೋಣಿಗಳಲ್ಲಿ ಅನುಕ್ರಮವಾಗಿ ಎಷ್ಟು ಜನರಿ ದ್ದರು?’ ಇದೊಂದು ಜಾಣ್ಮೆಲೆಕ್ಕ. ಆದರೆ ಗದ್ಯರೂಪದಲ್ಲಿ ಕೇಳಿರುವುದರಿಂದ, ನೀರ ಮೇಲಿನ ದೋಣಿಗಳ ಬಗ್ಗೆಯಾದರೂ,
ಬರೀ ಶುಷ್ಕ. ಅದನ್ನೇ ಈ ಕೆಳಗಿನಂತೆ ಪದ್ಯರೂಪದಲ್ಲಿ, ಅದೂ ಭೋಜರಾಜ-ಕಾಳಿದಾಸ, ಕೃಷ್ಣದೇವರಾಯ – ತೆನಾಲಿರಾಮ,
ಅಥವಾ ಅಕ್ಬರ್-ಬೀರಬಲ್ ಪ್ರಸಂಗಗಳಲ್ಲಿದ್ದಂತೆ ಮಂತ್ರಿಯು ರಾಜನಿಗೆ ಒಗಟಿನ ರೂಪದಲ್ಲಿ ಕೇಳುತ್ತಾನೆಂದುಕೊಂಡರೆ ಎಷ್ಟು
ಚೆನ್ನಾಗಿರುತ್ತದೆ! ನೆನಪಿಟ್ಟುಕೊಳ್ಳಲಿಕ್ಕೂ ಸುಲಭ.

ರಾಗವಾಗಿ ಹಾಡಿಕೊಂಡರೆ ಮನಸ್ಸಿಗೂ ರಂಜನೀಯ. ಇಲ್ಲಿದೆ ನೋಡಿ ಅಂಥದೊಂದು ಪದ್ಯ. ಮೂರು ಅಂಬಿಗರು ಹರಗೋಲು ತರುತಿರಲು ಮೂರರೊಳಗೊಂದು ತಾ ಮುಳುಗುತಿರಲು ಧೀರತನದಿಂದ ತಮ್ಮಷ್ಟು ತೆಗೆದುಕೊಳ್ಳಲು ಮೂರು ಸಮನಾದವು ಜನಪ ಪೇಳೆನಲು||

ಇದರ ಉತ್ತರ: ಮೊದಲೆರಡು ದೋಣಿಗಳಲ್ಲಿ ತಲಾ ಇಬ್ಬರು ಮತ್ತು ಮೂರನೆಯ ದೋಣಿಯಲ್ಲಿ ಎಂಟು ಜನರು ಇರುತ್ತಾರೆ.
ಇನ್ನೊಂದು ಉದಾಹರಣೆ, ಪಾಂಡವರ ವಯಸ್ಸಿನ ಲೆಕ್ಕದ್ದು. ಯುಧಿಷ್ಠಿರನಿಂದ ಹಿಡಿದು ನಕುಲ – ಸಹದೇವರವರೆಗೆ, ಆ
ಸನ್ನಿವೇಶದಲ್ಲಿ ಎಷ್ಟು ವಯಸ್ಸಾಗಿತ್ತು ಮತ್ತು ಅವರೆಲ್ಲರಿಗೆ ನಡುವೆ ಎಷ್ಟು ವರ್ಷ ಅಂತರವಿತ್ತು ಎಂದು ತಿಳಿಸುವ ಪದ್ಯ.

ಕುಮಾರವ್ಯಾಸನ ಕರ್ಣಾಟಭಾರತ ಕಥಾಮಂಜರಿಯ ಆದಿಪರ್ವದಲ್ಲಿ ಬರುತ್ತದೆ: ‘ವರುಷ ಹದಿನಾರಾಯ್ತು ಧರಣೀ| ಶ್ವರನ ಹಿರಿಯ ಮಗಂಗೆ ಭೀಮಗೆ| ವರುಷ ಹದಿನೈದರ್ಜುನಗೆ ಹದಿನಾಲ್ಕು ಹದಿಮೂರು|| ಕಿರಿಯರಿಬ್ಬರಿಗನಿಬರಾ ಮುನಿ| ವರರಿನಧ್ಯಯನಾದಿ ವಿದ್ಯಾ| ನಿರತರಾದರು ಬಂದುದೊಂದು ವಸಂತಮಯ ಸಮಯ||’

ಇದರ ಅರ್ಥ: ಯುಧಿಷ್ಠಿರನಿಗೆ ಹದಿನಾರು ವರ್ಷ; ಭೀಮನಿಗೆ ಹದಿನೈದು ತುಂಬಿತು; ಅರ್ಜುನನಿಗೆ ಹದಿನಾಲ್ಕು ವರ್ಷ; ನಕುಲ ಸಹದೇವ ಕಿರಿಯರಿಬ್ಬರಿಗೆ ಹದಿಮೂರು ತುಂಬಿತು. ಅವರೆಲ್ಲರೂ ಮುನಿವರರ ಬಳಿ ವಿದ್ಯೆಯನ್ನು ಕಲಿಯುವುದರಲ್ಲಿ ನಿರತ ರಾದರು. ಆಗ ಒಂದು ವಸಂತ ಕಾಲ ಬಂದಿತು. – ಈ ಎರಡು ಪದ್ಯಗಳನ್ನಾದರೂ ಅಷ್ಟೇ.

ಬಲು ಪ್ರಯಾಸದಿಂದ ಹಾರೆ ಪಿಕ್ಕಾಸಿ ಎಲ್ಲ ಬಳಸಿ ಉತ್ಖನನ ಮಾಡಿ, ಇವುಗಳಲ್ಲಿ ಗಣಿತ ಇದೆ ಎಂದು ತೋರಿಸಲಿಕ್ಕಾಗಿ ಎತ್ತಿ ತಂದು ಇಲ್ಲಿ ದಾಖಲಿಸಿದ್ದೇನೆ. ಇನ್ನು ನನ್ನ ಉಗ್ರಾಣದಲ್ಲಿ ಒಂದೂ ಕಾಣುತ್ತಿಲ್ಲ. ನಿಮಗ್ಯಾವುದಾದರೂ ನೆನಪಾದರೆ ದಯವಿಟ್ಟು ತಿಳಿಸಿ. ಗಣಿತಪರ ಗೀತೆಗಳು ಗಾಥೆಗಳು ಕನ್ನಡದಲ್ಲಿ ತುಂಬ ಕಮ್ಮಿ, ಅದರಿಂದಾಗಿಯೇ ಗಣಿತವು ಅನೇಕರಿಗೆ ಅಷ್ಟಕ್ಕಷ್ಟೆ ಅಂತಾಯಿತು ಎಂಬ ನನ್ನ ಚಿಂತನೆಗೆ ಮೊನ್ನೆ ಒಂದು ಅಪರೂಪದ ಹಳೆಯ ಗ್ರಂಥದಲ್ಲಿ ಪ್ರಬಲವಾದ ಅನುಮೋದನೆ ಸಿಕ್ಕಿತು. ಅದನ್ನೋದಿ ನನಗೆ ತುಂಬ ಖುಷಿಯಾಯಿತು.

ಆ ಎಲ್ಲ ವಿವರಗಳನ್ನು ಈಗ ನಿಮ್ಮೊಡನೆ ಹಂಚಿಕೊಳ್ಳುತ್ತೇನೆ. ಮೊದಲಾಗಿ ಅದನ್ನು ನಾನು ಗ್ರಂಥ ಎಂದಿದ್ದು ಅತ್ಯಮೂಲ್ಯ ಎಂಬ ದೃಷ್ಟಿಯಿಂದ. ಭಾರತ – ಭಾರತಿ ಪುಸ್ತಕಗಳಂತೆ ಅಂಗೈಗಾತ್ರದ, ಒಟ್ಟು 84 ಪುಟಗಳ ಪುಟ್ಟ ಪುಸ್ತಕದ ಬೆಲೆ ಕೇವಲ 25 ಪೈಸೆ ಮಾತ್ರ. ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗವು 1964ರಲ್ಲಿ ಪ್ರಕಟಿಸಿದ್ದು.

ಪುಸ್ತಕದ ಹೆಸರು: ‘ಲೀಲಾವತೀ ಗಣಿತ ಮತ್ತು ಶ್ರೀನಿವಾಸ ರಾಮಾನುಜನ್(ಎರಡು ಗಣಿತೋಪನ್ಯಾಸಗಳು).’ ಲೇಖಕರು:
ಬಿ.ಸೀತಾರಾಮ ಶಾಸ್ತ್ರೀ. ಅವರು ಮೈಸೂರು ವಿವಿಯಲ್ಲಿ ಗಣಿತಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಲೀಲಾವತೀ ಗಣಿತ ಎಂಬ ಮೊದಲ ಪ್ರಬಂಧವನ್ನು ಶಾಸ್ತ್ರಿಗಳು ಭಾರತದ ಶ್ರೇಷ್ಠ ಗಣಿತಜ್ಞರಲ್ಲೊಬ್ಬ ಭಾಸ್ಕರಾಚಾರ್ಯರ ಕಥೆಯೊಂದಿಗೆ ಆರಂಭಿಸುತ್ತಾರೆ.

‘ಭಾಸ್ಕರಾಚಾರ್ಯರಿಗೆ ಲೀಲಾವತಿಯೆಂಬ ಮುದ್ದಿನ ಮಗಳಿದ್ದಳು. ಚೆಲುವೆ, ಜಾಣೆ. ಆಕೆಯ ಹಣೆಯಲ್ಲಿ ವಿಧಿ ವೈಧವ್ಯ ದುಃಖವನ್ನು ಲಿಖಿಸಿದ್ದನು…’ ಎಂದು ಶುರುವಾಗುವ ಜನಜನಿತ ಕಥೆ. ಲೀಲಾವತಿಯ ಮದುವೆಗೆ ಭಾಸ್ಕರಾಚಾರ್ಯರೇ ಕಂಡು ಕೊಂಡ ಸುಮುಹೂರ್ತ, ಅದರ ಗಣನೆಗೆ ಒಂದು ವಿಶೇಷ ಜಲಯಂತ್ರ, ಅದೇನೆಂದು ಕುತೂಹಲದಿಂದ ಲೀಲಾವತಿ ಬಗ್ಗಿ ನೋಡಲು ಅವಳ ಕಂಠಮಾಲೆಯಿಂದ ಒಂದು ಮುತ್ತು ಸರಿದು ಯಂತ್ರದ ಲಾಳಿಕೆಯೊಳಗೆ ಬೀಳುವುದು, ನೀರು ಹನಿಯುವಿಕೆ ನಿಂತು ಮುಹೂರ್ತ ಲೆಕ್ಕಾಚಾರ ತಪ್ಪುವುದು. ವಿವಾಹವಾದ ಸ್ವಲ್ಪ ಕಾಲದಲ್ಲೇ ವೈಧವ್ಯ ಪ್ರಾಪ್ತಿ.

ಮಗಳ ದುಃಖವನ್ನು ನೋಡಲಾರದೆ ಆಕೆಯ ಮನಸ್ಸನ್ನು ಬೇರೆಡೆ ತಿರುಗಿಸುವುದಕ್ಕಾಗಿ ಭಾಸ್ಕರಾಚಾರ್ಯರಿಂದ ಆಕೆಗೆ ಗಣಿತಶಾಸ್ತ್ರ ಬೋಧನೆ. ಅದರ ಫಲವೇ ‘ಲೀಲಾವತೀ ಗಣಿತ’ ಗ್ರಂಥರಚನೆ. ಇದು ಕಟ್ಟುಕಥೆಯೇ ಇರಬೇಕೆನ್ನುತ್ತಾರೆ ಶಾಸ್ತ್ರಿಗಳು. ಗ್ರಂಥದಲ್ಲಿ ಎಲ್ಲ ಶ್ಲೋಕಗಳ ಕೊನೆಯಲ್ಲಿ ಸ್ತ್ರೀಸಂಬೋಧನೆಯು ಮಗಳನ್ನು ಕುರಿತಾದ್ದು ಅಲ್ಲ, ಪ್ರೇಯಸಿಯನ್ನು ಕುರಿತಾದ್ದು ಇರಬೇಕು. ಗಂಡಹೆಂಡಿರು ವಿನೋದಕ್ಕಾಗಿ ಗಣಿತ ಸಮಸ್ಯೆಗಳನ್ನು ಹೇಳಿಕೊಳ್ಳುವ ರೀತಿ ಆ ಪದ್ಯಗಳಲ್ಲಿ ಕಾಣಬರುತ್ತದೆ ಎಂದು ಅವರ ವಾದ.

ಉದಾಹರಣೆಗೆ: ‘ಅಲಿಕುಲ ದಲ ಮೂಲಂ ಮಾಲತೀಂ ಯಾತಮಷ್ಟಾ| ನಿಖಿಲ ನವಭಾಗಾಶ್ಚಾಲಿನೀ ಭೃಂಗಮೇಕಂ| ನಿಶಿ
ಪರಿಮಲಲುಬ್ಧಂ ಪದ್ಮಮಧ್ಯೇ ನಿರುದ್ಧಂ| ಪ್ರತಿ ರಣತಿ ರಣಂತಂ ಬ್ರೂಹಿ ಕಾಂತೇಧಿಲಿ ಸಂಖ್ಯಾಂ||’ ಅಂದರೆ- ‘ಎಲೈ ಕಾಂತೆ,
ಒಂದು ಭೃಂಗಸಮೂಹವಿತ್ತು.

ಅದರ ಅರ್ಧಭಾಗದ ವರ್ಗಮೂಲದಷ್ಟು ಭೃಂಗಗಳು ಮಾಲತೀ ಪುಷ್ಪದ ಕಡೆ ತೆರಳಿದವು. ಒಂಬತ್ತನೆಯ ಭಾಗದ ಎಂಟರಷ್ಟೂ ಹಾಗೆಯೇ ಹೋದವು. ಪದ್ಮಕೋಶದಲ್ಲಿ ಸಿಲುಕಿ ಒಂದು ಭೃಂಗವು ಝೇಂಕರಿಸುತ್ತಿರಲು ಇನ್ನೊಂದು ಭೃಂಗವು ಆ ಪದ್ಮದ ಬಳಿ ಅದಕ್ಕೆ ಪ್ರತಿಧ್ವನಿಕೊಡುತ್ತಿತ್ತು. ರಾತ್ರಿಯಲ್ಲಿ ಪರಿಮಲ ಲುಬ್ಧತೆಯಿಂದ ಪದ್ಮಮಧ್ಯವನ್ನು ಸಾರಿದ್ದ ಆ ಭೃಂಗವು ಆಮೇಲೆ ಪದ್ಮವು  (ಇಂದೀವರವು) ಮುಚ್ಚಿಕೊಂಡ ಕಾರಣದಿಂದ ಅಲ್ಲಿಯೇ ಸಿಲುಕಿಕೊಂಡಿತ್ತು.

ಭೃಂಗಗಳ ಸಂಖ್ಯೆಯನ್ನು ಹೇಳು.’ (ಉತ್ತರ:72). ಹಾಗೆಯೇ ನವಿಲು ಮತ್ತು ಹಾವಿನ ಇನ್ನೊಂದು ಸಮಸ್ಯೆಯಲ್ಲಿ ಕೊನೆಗೆ ‘ಕ್ಷಿಪ್ರಂ ಬ್ರೂಹಿ’ ಅಂದರೆ ‘ಬೇಗ ಹೇಳು’ ಎಂದಷ್ಟೇ ಇದೆ. ಆದ್ದರಿಂದ ಒಟ್ಟಾರೆಯಾಗಿ ಗ್ರಂಥವನ್ನು ಬರೆದದ್ದು ಗಣಿತದ ಅಭ್ಯಾಸಿಗಳಿಗಾಗಿ, ಮುಖ್ಯವಾಗಿ ಭಾಸ್ಕರಾಚಾರ್ಯರ ಶಿಷ್ಯವರ್ಗಕ್ಕಾಗಿ ಎನ್ನುವುದು ವಿದಿತ.

ಗ್ರಂಥರಚನೆಯ ಉದ್ದೇಶವನ್ನೂ ಭಾಸ್ಕರರು ಆರಂಭದಲ್ಲೇ ಸ್ಪಷ್ಟವಾಗಿ ಹೇಳಿದ್ದಾರೆ: ‘ಪಾಟೀಂ ಸಂಗಣಿತಸ್ಯ ವಚ್ಮಿ ಚತುರ
ಪ್ರೀತಿಪ್ರದಾಂ ಪ್ರಸ್ಪುಟಾಂ| ಸಂಕ್ಷಿಪ್ತಾಕ್ಷರ ಕೋಮಲಾಮಲ ಪದೈರ್ಲಾಲಿತ್ಯ ಲೀಲಾವತೀಂ|| – ಅಂದರೆ ಪ್ರೀತಿಪ್ರದವೂ
ಲಲಿತವೂ ಆದ ಈ ಗ್ರಂಥವನ್ನು ಸಂಕ್ಷಿಪ್ತ ಮತ್ತು ಕೋಮಲ ಪದಗಳನ್ನು ಬಳಸಿ ಬರೆದಿದ್ದೇನೆ.’

‘ಲೀಲಾವತಿಯು ನಮ್ಮನ್ನು ಯಾವುದೋ ಒಂದು ಮನಮೋಹಕವಾದ ನೂತನ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ. ಹೂವಿನ ತೋಟಗಳಲ್ಲಿ ಝೇಂಕರಿಸುತ್ತ ಹಾರಾಡುವ ಭೃಂಗಸಮೂಹಗಳು, ನಲಿದು ನರ್ತಿಸುವ ನವಿಲುಗಳು, ಮರಗಳಿಂದ ಇಳಿದು ಬರುತ್ತಿರುವ ಅಥವಾ ಮರಗಳ ಮೇಲೆ ಹಾರುತ್ತಿರುವ ಕಪಿಗಳು, ವಿವಿಧ ಲೀಲೆಯಲ್ಲಿರುವ ಆನೆಗಳ ಗುಂಪುಗಳು, ಚಕ್ರಕ್ರೌಂಚಾ ಕುಲಿತವಾದ ಸರೋವರಗಳು, ಸ್ಥಲಪದ್ಮಿನೀ ವನಗಳು, ಜಲಕೇಲಿ ಕಲಹದಲ್ಲಿರುವ ಅಥವಾ ವರ್ಷಾಕಾಲದಲ್ಲಿ ಮಾನಸಾಭಿ ಮುಖವಾಗಿರುವ ಕಲಹಂಸಗಳು, ರಾಜಮಾರ್ಗಗಳು, ತೀರ್ಥಯಾತ್ರಿಕರು, ಶತ್ರುನಗರಗಾಮಿ ಗಳಾದ ರಾಜಸೈನ್ಯಗಳು, ಯುದ್ಧ ಭೂಮಿಗಳು, ಮಾಣಿಕ್ಯ ಇಂದ್ರನೀಲ ಮುಕ್ತಾಫಲಾದಿ ರತ್ನ ವ್ಯಾಪಾರಿಗಳು, ಕವಿಗಳು, ದೇವಪೂಜಾ ದುರಂಧರರು, ತ್ಯಾಗಿಗಳು, ರಾಜ ಹರ್ಮ್ಯಗಳು, ನಂದಾದೀಪಗಳು, ಕರ್ಪೂರಾದಿ ಪರಿಮಳ ದ್ರವ್ಯಗಳು ಈ ಪ್ರಪಂಚದಲ್ಲಿ ಮೈ ಮರೆತು ಹೋಗುತ್ತದೆ.

ಚಿತ್ರಗಾರನು ಕುಂಚಿಯಿಂದ ಮಾಡಬಹುದಾದ ಎಷ್ಟೋ ಕೆಲಸವನ್ನು ಭಾಸ್ಕರರು ಅನೇಕವೇಳೆ ಒಂದೇ ಪದದಿಂದ ಮಾಡಿದ್ದಾರೆ.
ಶಾಶ್ವತವಾಗಿರುವಂತೆ ಒಂದು ಕಲಾಶಾಲೆಯ ಗೋಡೆಗಳ ಮೇಲೆ ಒಳ್ಳೆಯ ಚಿತ್ರಗಾರನಿಂದ ಲೀಲಾವತಿಯ ಒಂದೊಂದು
ಸಮಸ್ಯೆಯನ್ನೂ ಚಿತ್ರಗಳ ರೂಪದಲ್ಲಿ ಬರೆಸಿದರೆ, ಆಗ ಈ ಗ್ರಂಥಕ್ಕೆ ಸರಿಯಾದ ಕಾಣಿಕೆಯನ್ನು ಸಲ್ಲಿಸಿದಂತಾಗುತ್ತದೆ. ಇಂಥ
ನೂತನ ಪ್ರಪಂಚವನ್ನು ನಿರ್ಮಿಸುವುದಕ್ಕೆ ಭಾಸ್ಕರರು ಪದ್ಯರೂಪವನ್ನಾರಿಸಿಕೊಂಡುದು ನ್ಯಾಯವಾಗಿಯೇ ಇದೆ.

ಬುದ್ಧಿಯನ್ನು ಶ್ರಮಿಸುವಾಗ ಹಾಡಿಕೊಳ್ಳುವುದಕ್ಕೂ ಅನುಕೂಲವಾಗುವಂತೆ ಅವರ ಪದಗಳು ಸುಮಧುರವಾಗಿವೆ. ಹೊಲ ಕೊಯ್ಯುವವರು, ದೋಣಿ ನಡೆಸುವವರು, ಪಲ್ಲಕ್ಕಿ ಹೊರುವವರು, ದಾರಿ ನಡೆಯುವವರು ಎಲ್ಲರಿಗೂ ಹಾಡುಗಳು ಬೇಕು. ಆ ಹಾಡುಗಳು ಕೆಲಸಕ್ಕೆ ತಕ್ಕಂತಿರಬೇಕು. ಕೆಲಸದಲ್ಲಿ ಹೆಚ್ಚು ಆಸಕ್ತಿಯನ್ನು ಹುಟ್ಟಿಸುವಂತಿರಬೇಕು. ಮನಸ್ಸನ್ನು ಸೂರೆಮಾಡಿ
ಶ್ರಮವನ್ನು ಮರೆಸಬೇಕು. ಇಂಥ ಹಾಡುಗಳು ಬುದ್ಧಿಶ್ರಮ ವಹಿಸುವವರಿಗೂ ಬೇಕು.

ಗಣಿತ ಅಥವಾ ವಿಜ್ಞಾನದ ಅಭ್ಯಾಸದ ದೃಷ್ಟಿಯಿಂದಲೂ ಗ್ರಂಥಗಳನ್ನು ರಸವತ್ತಾಗಿ ಬರೆಯುವುದು ಸಾಧ್ಯವೆಂಬುದಕ್ಕೆ ಲೀಲಾವತಿಯೇ ಸಾಕ್ಷಿ. ಇದನ್ನೋದಿದರೆ ಸುಂದರವಾದ ಒಂದು ರತ್ನಾಭರಣದ ನೆನಪುಂಟಾಗುತ್ತದೆ. ಆಭರಣದ ಚಿನ್ನದ ಗೂಡುಗಳಲ್ಲಿ ಹೊಳೆಯುವ ರತ್ನಗಳಂತೆ ಲೀಲಾವತಿಯ ಸಾಹಿತ್ಯದ ಗೂಡುಗಳಲ್ಲಿ ಗಣಿತದ ರತ್ನಗಳು ಪ್ರಕಾಶಿಸುತ್ತವೆ. ಲೀಲಾವತಿಯು ಸಾಹಿತ್ಯ ಗ್ರಂಥವಲ್ಲ. ಜೀವನದ ಅಥವಾ ವೇದಾಂತ ತತ್ತ್ವಗಳ ರಸಾನುಭವದಿಂದ ಉಕ್ಕಿ ಹರಿದ ಪದ್ಯಗಳು ಇದರಲ್ಲಿಲ್ಲ. ಪ್ರೌಢ ಸಾಹಿತಿಯೂ ವಿಜ್ಞಾನಿಯೂ ಆಗಿದ್ದವನೊಬ್ಬನು ಬರೆದ ಶಾಸ್ತ್ರಗ್ರಂಥವಿದು.’ – ಲೀಲಾವತೀ
ಗ್ರಂಥದ ಬಗ್ಗೆ ಸೀತಾರಾಮ ಶಾಸ್ತ್ರಿಗಳ ಈ ಟಿಪ್ಪಣಿಯಂತೂ ನನಗೆ ಬಹಳವೇ ಇಷ್ಟವಾಯಿತು.

ಇಷ್ಟಾಗಿ ಲೀಲಾವತಿಯು ಭಾಸ್ಕರಾಚಾರ್ಯರ ಸಿದ್ಧಾಂತ ಶಿರೋಮಣಿಯೆಂಬ ಗ್ರಂಥದ ಪ್ರಥಮ ಭಾಗ ಮಾತ್ರ. ಬೀಜಗಣಿತ, ಗೋಳಾಧ್ಯಾಯ, ಭುವನಕೋಶ, ಗ್ರಹಗಣಿತ – ಇವು ಇತರ ಭಾಗಗಳು. ಭಾಸ್ಕರರ ಕಾಲಕ್ಕೆ ನಮ್ಮ ದೇಶದಲ್ಲಿ ಗಣಿತಶಾಸ್ತ್ರ ಯಾವ ಮಟ್ಟದಲ್ಲಿತ್ತೆಂದು ಈ ಗ್ರಂಥದಿಂದ ಊಹಿಸಬಹುದಾಗಿದೆ.

ಭಾಸ್ಕರರು ಕ್ರಿ.ಶ.1114ರಲ್ಲಿ (ಬೇಲೂರಿನ ದೇವಾಲಯ ನಿರ್ಮಾಣಕ್ಕೆ ಮೂರು ವರ್ಷ ಮುಂಚೆ) ಸಹ್ಯಾದ್ರಿ ಎಂಬ ಕುಲಪರ್ವತಗಳ ಬಳಿ ಬಿಜ್ಜಡಬಿಡವೆಂಬ ಊರಿನಲ್ಲಿ ಹುಟ್ಟಿದರು. ತಂದೆಯ ಹೆಸರು ಮಹೇಶ್ವರೋಪಾಧ್ಯಾಯ, ಶಾಂಡಿಲ್ಯ ಗೋತ್ರಜರು. ಬಿಜ್ಜಡ ಬಿಡವು ಈಗಿನ ಕರ್ಣಾಟಕದ ವಿಜಯಪುರ ಜಿಲ್ಲೆಯ ಆಸುಪಾಸಿನಲ್ಲಿದ್ದ ಪಟ್ಟಣ. ಭಾಸ್ಕರರಿಗೆ ತಂದೆಯೇ ವಿದ್ಯಾಗುರು. ಸಿದ್ಧಾಂತ ಶಿರೋಮಣಿಯನ್ನು ತಮ್ಮ 36ನೆಯ ವಯಸ್ಸಿನಲ್ಲಿ ಬರೆದು ಮುಗಿಸಿದರು.

ಭಾಸ್ಕರಾಚಾರ್ಯರೂ ಅವರ ಹಿಂದಿನ ಸಿದ್ಧಾಂತಿಗಳೂ ಎಂತಹ ಮೇಧಾವಿಗಳಾಗಿದ್ದರು, ಹನ್ನೆರಡನೆಯ ಶತಮಾನದ ವೇಳೆಗೆ
ನಮ್ಮ ದೇಶದಲ್ಲಿ ಗಣಿತವನ್ನು ಯಾವ ಹಂತಕ್ಕೇರಿಸಿದ್ದರು ಎಂಬುದನ್ನು ಒಂದು ಮಾತಿನಲ್ಲಿ ಹೇಳಬೇಕಾದರೆ ಅವರು ಅಂದು ವಿಧಿಸಿದ ಗಣಿತಮಾರ್ಗಗಳ ಆಧಾರದಿಂದ ಇಂದು ನಮ್ಮ ಪಂಚಾಂಗಗಳು ಗುಣಿಸಲ್ಪಡುತ್ತಿವೆ. ಸೂರ್ಯಚಂದ್ರ ಗ್ರಹಣಾದಿ ನಿರ್ಣಯಗಳು ಮಾಡಲ್ಪಡುತ್ತಿದೆಯೆಂದು ಹೇಳಿದರೆ ಸಾಕು. ಭಾಸ್ಕರರಿಗೆ ಗಣಿತವೆಂಬುದು ಒಂದು ಆಟ. ಒಳ್ಳೆಯ ಆಟಗಾರನಾದ ಬಾಲಕನು ಚೆಂಡಾಟದಲ್ಲಿ ನಲಿಯುವಂತೆ ಭಾಸ್ಕರರು ಗಣಿತದಲ್ಲಿ ನಲಿದಾಡಿದ್ದಾರೆ.

ಒಮ್ಮೆ ಅವರ ಮನಸ್ಸು ಆಟದಲ್ಲಿ ಲೀನವಾಗಿ ಉಳಿದ ಎಲ್ಲವನ್ನೂ ಮರೆತು ಬಿಡುತ್ತದೆ. ಮತ್ತೊಮ್ಮೆ ಚೆಂಡು ಮೇಲಕ್ಕೆ ಹಾರಿರಲು ಅವರ ಗಮನವು ನಕ್ಷತ್ರ ಸಮೂಹಗಳ ಕಡೆಗೋ, ಮೇಘಾಕೃತಿಗಳ ಕಡೆಗೋ, ಚಂದ್ರಬಿಂಬದ ಕಡೆಗೋ ಹೋಗಿ, ಆಟದ ಸೊಂಪು ಮತ್ತಷ್ಟು ಹೆಚ್ಚಾಗುತ್ತದೆ. ಅವರು ಆಡುವಾಗ ಹಾಡಿಯೂ ಇದ್ದಾರೆ. ವಿಶಾಲವಾದ ಮನೋಹರವಾದ ಬಯಲಿನ ಪ್ರದೇಶವಾದರೆ
ಆಟವು ಮತ್ತಷ್ಟು ಸ್ವಾರಸ್ಯವಾಗುತ್ತದೆಯೆಂದು ಅವರಿಗೆ ಗೊತ್ತು. ಅದಕ್ಕೆ ಅವರು ಆಟವನ್ನು ಪ್ರಾರಂಭಿಸುವುದಕ್ಕೆ ಮುಂಚೆ
ರಮ್ಯವಾದ ಪ್ರದೇಶಕ್ಕೆ ಹೋಗುವ ನಿಯಮವನ್ನಿಟ್ಟುಕೊಂಡರು.

ಅವರ ಜೊತೆಯಲ್ಲಿ ಹೋಗಿ ಅವರ ಹಾಗೆ ಆಟವಾಡುವುದನ್ನು ಕಲಿಯುವುದಕ್ಕೆ ಯಾರಿಗೆ ತಾನೆ ಹುಮ್ಮಸು ಹುಟ್ಟುವುದಿಲ್ಲ?
ಸೀತಾರಾಮ ಶಾಸ್ತ್ರಿಗಳು ಬರೆದಿರುವುದು ಖಂಡಿತ ಒಪ್ಪತಕ್ಕ ಮಾತು. ಈಗ ನಮಗೆ ತುರ್ತಾಗಿ ಬೇಕಾಗಿರುವುದು ಗಣಿತವನ್ನು
ಸರಳ ಕನ್ನಡ ಪದ್ಯಗಳ ರೂಪದಲ್ಲಿ, ಭಾಸ್ಕರಾಚಾರ್ಯರು ಪ್ರಕೃತಿಯ ಕ್ಯಾನ್ವಾಸ್ ಮೇಲೆ ಬಿಡಿಸಿದ ಸುಂದರ ಚಿತ್ರಗಳಂತೆ
ಬರೆಯುವವರು. ತಮಗೆ ತಾವೇ ಪ್ರಶಸ್ತಿಗಳ ಏರ್ಪಾಡು ಮಾಡಿಕೊಳ್ಳುವ, ನೀ ನನಗಿದ್ದರೆ ನಾ ನಿನಗೆ ಎನ್ನುತ್ತ ಒಳಒಪ್ಪಂದ
ಮಾಡಿಕೊಂಡು ಪ್ರಶಸ್ತಿಗಳನ್ನು ಕೊಟ್ಟುಕೊಳ್ಳುವ, ಬೇರೆ ಯವರಿಂದ ಬರೆಸಿ ಪ್ರಶಸ್ತಿ ಬಾಚುವ ಸಾಹಿತಿಗಳನ್ನು ನೋಡಿ ರೇಜಿಗೆ ಹುಟ್ಟಿದೆ. ಹಿಡಿಶಾಪ ಹಾಕುವಂತಾಗಿದೆ.

ನಿಸ್ವಾರ್ಥ ಭಾವದಿಂದ ಬರೆದು ಸಮಾಜದ ಬೌದ್ಧಿಕ ಮಟ್ಟವನ್ನು ಮೇಲೆತ್ತಬಲ್ಲ ಸಾಹಿತಿಗಳು ಈಗ ತುರ್ತಾಗಿ ಬೇಕಾಗಿದ್ದಾರೆ. ಅಂಥವರು ಹುಟ್ಟಿಬಂದರೆ ಗಣಿತವೆಂಬ ಕಬ್ಬಿಣದ ಕಡಲೆಯನ್ನೂ ಪದ್ಯದಲ್ಲಿ ಅದ್ದಿ ಮೃದು-ಮಧುರವಾಗಿಸುವುದು
ಸಾಧ್ಯವಿದೆ!

ಆಸಕ್ತರ ಗಮನಕ್ಕೆ: ಸೀತಾರಾಮ ಶಾಸ್ತ್ರೀಯವರ ಪುಸ್ತಕದ ಪಿಡಿಎಫ್ archive.org ಜಾಲತಾಣದಲ್ಲಿ ಉಚಿತವಾಗಿ ಸಿಗುತ್ತದೆ. ಲೀಲಾವತೀ ಕೃತಿಯಿಂದ ಆಯ್ದ ೧೦೮ ಗಣಿತ ಸಮಸ್ಯೆಗಳನ್ನು ಮೂಲ ಶ್ಲೋಕಗಳು, ಸರಳ ಕನ್ನಡದಲ್ಲಿ ಅವುಗಳ ಭಾವಾರ್ಥ, ಮತ್ತು ಗಣಿತರೀತಿಯಲ್ಲಿ ಸಮಸ್ಯೆಗಳ ಪರಿಹಾರ ಹಾಗೂ ಟಿಪ್ಪಣಿಗಳೊಂದಿಗೆ ವಿವರಿಸಿರುವ ಪುಸ್ತಕ (ಲೇಖಕ: ಡಾ. ಎಸ್.ಬಾಲ ಚಂದ್ರ ರಾವ್) ಬೆಂಗಳೂರಿನ ಪುಸ್ತಕ ಮಳಿಗೆಗಳಲ್ಲಿ ಸಿಗುತ್ತದೆ.