Saturday, 14th December 2024

ಕಚ್ಚತೀವು ಏಕೆ ಸುದ್ದಿಯಲ್ಲಿದೆ ?

ವಿದ್ಯಮಾನ

ಪ್ರಕಾಶ ಹೆಗಡೆ

ಈ ಪುಟ್ಟ ಬರಹದ ಹೂರಣವು ಕಚ್ಚತೀವು ದ್ವೀಪದ ಕುರಿತಾಗಿದ್ದರೂ, ಇಂಥ ಅನೇಕ ವಿವಾದಿತ ಪ್ರದೇಶಗಳನ್ನು ಗಮನದಲ್ಲಿಟ್ಟು ಕೊಂಡು ವಿಶ್ಲೇಷಿಸುವುದು ಇದರ ಮೂಲೋದ್ದೇಶವಾಗಿದೆ. ಹೇಳಿಕೇಳಿ ಇದು ಲೋಕಸಭಾ ಚುನಾವಣೆಯ ಕಾಲಘಟ್ಟ; ಹೀಗಾಗಿ ಈ ಕಚ್ಚತೀವು ದ್ವೀಪವೂ ವಿವಾದ ಹುಟ್ಟುಹಾಕಿದೆ.

ಭಾರತದಿಂದ ೨೦ ಕಿ. ಮೀ. ದೂರದಲ್ಲಿ ಪಾಕ್ ಜಲಸಂಧಿಯಲ್ಲಿರುವ, ಸುಮಾರು ೨ ಚದರ ಕಿ.ಮೀ. ವಿಸ್ತಾರದ, ಮೀನುಗಾರಿಕೆ ಯೇ ಮುಖ್ಯ ಕಸುಬಾಗಿರುವ ಈ ದ್ವೀಪವು ರಾಜಕೀಯ ಚರ್ಚೆಗೆ ಗ್ರಾಸವಾಗಿ ಎಲ್ಲರ ಗಮನ ಸೆಳೆದಿದೆ. ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಅವರು ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) ಅಡಿಯಲ್ಲಿ ಅರ್ಜಿ ಸಲ್ಲಿಸಿ ಪಡೆದ ದಾಖಲೆಗಳು, ದಶಕಗಳಿಂದ ಹೋರಾಡಿದ ಆಧಾರದ ಮೇಲೆ ಹೇಗೆ ಶ್ರೀಲಂಕಾ ದೇಶವು ಈ ಸಣ್ಣದ್ವೀಪವನ್ನು ದೃಢವಾಗಿ ಮತ್ತು ಸತತವಾಗಿ ಬೆನ್ನತ್ತುವ ಮೂಲಕ ತನ್ನ ಹಕ್ಕನ್ನು ಯಶಸ್ವಿಯಾಗಿ ಸಾಧಿಸಿತು ಎಂಬುದನ್ನು ಎತ್ತಿ ತೋರಿಸುತ್ತವೆ.

ಇನ್ನು ಭಾರತೀಯ ಸಂಸತ್ತಿನ ಅಧಿಕೃತ ದಾಖಲೆಗಳು, ಕಚ್ಚತೀವ್‌ನ ನಿಯಂತ್ರಣಕ್ಕಾಗಿ ಎರಡು ದೇಶಗಳ ನಡುವೆ ನಡೆದ ರಾಜತಾಂತ್ರಿಕ ಯುದ್ಧದಲ್ಲಿ, ಅದರ ವಶಕ್ಕೆ ನಿರ್ಧರಿಸಿದ ಶ್ರೀಲಂಕಾದಂಥ ಸಣ್ಣ ದೇಶದ ವಿರುದ್ಧ ಭಾರತವು ಹೇಗೆ ಮನಸ್ಸಿಲ್ಲದ ಧೋರಣೆಯಿಂದ ಸೋತಿತು ಎಂಬುದನ್ನು ತಿಳಿಸುತ್ತವೆ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ೧೯೬೧ರ ಮೇ ೧೦ರಂದು ಲಿಖಿತ ಹೇಳಿಕೆಯಲ್ಲಿ ಭಾರತದ ನಿಲುವನ್ನು ಬಹಿರಂಗಪಡಿಸಿದರು. ಈ ವಿಷಯವನ್ನು ಅಪ್ರಸ್ತುತ ಎಂದು ತಳ್ಳಿಹಾಕಿದ ಅವರು, ‘ನಾನು ಈ ಸಣ್ಣ ದ್ವೀಪಕ್ಕೆ ಯಾವುದೇ ಪ್ರಾಮುಖ್ಯವನ್ನು ನೀಡುವುದಿಲ್ಲ ಮತ್ತು ಅದರ ಮೇಲಿನ ನಮ್ಮ ಹಕ್ಕುಗಳನ್ನು ಬಿಟ್ಟುಕೊಡಲು ನನಗೆ ಯಾವುದೇ ಹಿಂಜರಿಕೆಯಿಲ್ಲ.

ಇದು ಅನಿರ್ದಿಷ್ಟವಾಗಿ ನಿರ್ಧಾರಿತವಾಗದಿರುವುದು ಮತ್ತು ಸಂಸತ್ತಿನಲ್ಲಿ ಮತ್ತೆ ಪ್ರಸ್ತಾಪವಾಗುವುದು ನನಗೆ ಇಷ್ಟವಿಲ್ಲ’  ಎಂದರು. ಆರ್‌ಟಿಐ ಅಡಿಯಲ್ಲಿ ಪಡೆದ ಸಂಬಂಧಿತ ದಾಖಲೆಗಳು, ಪ್ರಧಾನಿ ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಭಾರತದ ಪ್ರತಿಕ್ರಿಯೆಯನ್ನು ಗುರುತಿಸುವ ನಿರ್ಧಾರದ ಪರಿಭಾಷೆಯನ್ನು ಬಹಿರಂಗಪಡಿಸುತ್ತವೆ. ಅದು ೧೯೭೪ರಲ್ಲಿ ಔಪಚಾರಿಕವಾಗಿ ತನ್ನ ಹಕ್ಕನ್ನು ಸಂಪೂರ್ಣವಾಗಿ ತ್ಯಜಿಸಿತು.

ಸಂಬಂಧಿತ ಸಚಿವಾಲಯದ ಹೇಳಿಕೆ ಹೀಗಿದೆ: ‘ಪ್ರಶ್ನೆಯ ಕಾನೂನು ಅಂಶಗಳು ಅತ್ಯಂತ ಕ್ಲಿಷ್ಟಕರವಾಗಿವೆ. ಈ ಪ್ರಶ್ನೆಯ ಕೆಲವು ವಿವರಗಳನ್ನು ನಮ್ಮ ಸಚಿವಾಲಯದಲ್ಲಿ ವಿಶ್ಲೇಷಿಸಿ ಪರಿಗಣಿಸಲಾಗಿದೆ. ಭಾರತದ ಅಥವಾ ಶ್ರೀಲಂಕಾದ ಸಾರ್ವಭೌಮತ್ವದ
ಹಕ್ಕಿನ ಬಲದ ಬಗ್ಗೆ ಯಾವುದೇ ಸ್ಪಷ್ಟ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದಿಲ್ಲ’. ಕಚ್ಚತೀವು ದ್ವೀಪದ ಬಗೆಗಿನ ಇತಿಹಾ ಸದ ಕೆಲವು ಪುಟಗಳನ್ನು ತಿರುಗಿಸೋಣ. ಅಂದು ಅದು ಜನವಸತಿರಹಿತವಾಗಿತ್ತು. ಅಲ್ಲಿ ಕೇವಲ ಒಂದು ಚರ್ಚ್ ಇತ್ತು. ಈ ದ್ವೀಪದ ಮೇಲೆ ರಾಮನಾಡ್ (ರಾಮನಾಥಪುರಂ) ರಾಜನಿಗೆ ಈಸ್ಟ್ ಇಂಡಿಯಾ ಕಂಪನಿ ನೀಡಿದ ಜಮೀನ್ದಾರಿಕೆ ಹಕ್ಕುಗಳು ಮತ್ತು ಮೀನುಗಾರಿಕೆಗಾಗಿನ ಅದರ ಸುತ್ತಲಿನ ನೀರಿನ ಹಕ್ಕು ಅತಿಮುಖ್ಯ ದಾಖಲೆಯಾಗಿವೆ. ಈ ಮೂಲಕ, ಸ್ವಾತಂತ್ರ್ಯಾನಂತರ ಕಚ್ಚತೀವು ದ್ವೀಪದ ಮೇಲೆ ತನ್ನ ಹಕ್ಕು ಸ್ಥಾಪಿಸಲು ಭಾರತವು ಶ್ರಮಿಸಬಹುದಾಗಿತ್ತು.

ಇದನ್ನು ೧೯೬೦ರಲ್ಲಿ, ಅಂದಿನ ಅಟಾರ್ನಿ ಜನರಲ್ ಎಂ.ಸಿ.ಸೆಟಲ್ವಾಡ್ ಅವರು, ‘ಭಾರತವು ಬಲವಾದ ಹಕ್ಕನ್ನು ಹೊಂದಿದೆ’ ಎಂಬ ಅಭಿಪ್ರಾಯದಿಂದ ದೃಢಪಡಿಸಿದರು. ಅವರು ಹೀಗೆಂದಿದ್ದಾರೆ: ‘ಈ ವಿಷಯವು ಯಾವುದೇ ರೀತಿಯಲ್ಲಿ ಸ್ಪಷ್ಟವಾಗಿಲ್ಲ
ದಿದ್ದರೂ ಅಥವಾ ಕಷ್ಟದಿಂದ ಮುಕ್ತವಾಗಿಲ್ಲದಿದ್ದರೂ, ಸಂಪೂರ್ಣ ಸಾಕ್ಷ್ಯದ ಮೌಲ್ಯಮಾಪನದ ಮೇಲೆ ಸಮತೋಲನವು ಭಾರತದ ಸಾರ್ವ ಭೌಮತ್ವದಲ್ಲಿ ಇತ್ತು ಮತ್ತು ಇದೆ ಎಂಬ ತೀರ್ಮಾನಕ್ಕೆ ಬರುವಂತೆ ನನಗೆ ತೋರುತ್ತದೆ’.

ಭಾರತೀಯ ಮೀನುಗಾರರಿಗೆ ಮೀನುಗಾರಿಕೆ ಹಕ್ಕುಗಳನ್ನು ಭದ್ರಪಡಿಸಿಕೊಳ್ಳುವ ಮೂಲಕ ಭಾರತವು ಪ್ರಬುದ್ಧ ರಾಜತಾಂತ್ರಿಕ ತೆಯನ್ನು ತೋರಿಸಬಹುದಿತ್ತು ಎಂದು ಈಗ ಅನಿಸುತ್ತದೆ. ದ್ವೀಪದ ಸುತ್ತಲೂ ಶ್ರೀಲಂಕಾದ ನೌಕಾಪಡೆಯಿಂದ ಬಂಧನಕ್ಕೆ ಒಳಗಾದ ಮತ್ತು ಒಳಗಾಗುವ ನೂರಾರು ಭಾರತೀಯ ಮೀನುಗಾರರ ನಿರಂತರ ಅಗ್ನಿಪರೀಕ್ಷೆಗೆ ಇದು ಕಾರಣವಾಗಿದೆ. ಕಚ್ಚತೀವು
ಇಂಥ ವಿವಾದಕ್ಕೊಳಗಾಗಿರುವ ಅಖಂಡ ಭಾರತದ ಅನೇಕ ಪ್ರದೇಶಗಳಲ್ಲೊಂದು. ಅರುಣಾಚಲ ಪ್ರದೇಶ, ಪಾಕ್ ಆಕ್ರಮಿತ ಕಾಶ್ಮೀರ, ಮ್ಯಾಕ್ ಮೋಹನ್ ಗಡಿರೇಖೆ ಹೀಗೆ ಇನ್ನೂ ಹಲವಾರು ಪ್ರದೇಶಗಳು ಸರಿಯಾಗಿ ಇತ್ಯರ್ಥಗೊಳ್ಳದಿದ್ದರೆ, ಅವು ಕೂಡ ಕಚ್ಚತೀವ್‌ನ ಹಾದಿ ಹಿಡಿಯಬಹುದು.

(ಲೇಖಕರು ಹವ್ಯಾಸಿ ಬರಹಗಾರರು)