Thursday, 12th December 2024

ಮತ್ತೆ ಮತ್ತೆ ಓದಬೇಕಿದೆ ಕಗ್ಗವನ್ನು

ದಾಸ್ ಕ್ಯಾಪಿಟಲ್

ರಾಮಕೃಷ್ಣರ ‘ವಿಚಿತ್ರಾನುಭವ’ಗಳು ಭೈರವೀ ಬ್ರಾಹ್ಮಣಿಯ ಮೂಲಕ ಶಾಸಗಳಲ್ಲಿ ತಾಳೆಯಾದಂತೆ, ಶ್ರೀ ರಮಣರ ನಿರ್ವಿಶೇಷಾನುಭವವು ಶಂಕರಭಾಷ್ಯಗಳಲ್ಲಿ ವಿದ್ವಾಂಸರಿಗೆ ತೋರಿಕೊಂಡಂತೆ.

ಜೀವನ ಧರ್ಮಯೋಗವೆನಿಸಿದ ಮಂಕುತಿಮ್ಮನ ಕಗ್ಗಕ್ಕೆ ಕೇವಲ ಬೌದ್ಧಿಕ ವರ್ಗದ ಓದುಗರಿದ್ದಾರೆಂಬ ಅಪದ್ಧವೊಂದಿದೆ. ಇಂದಿನ ಸಂದರ್ಭದಲ್ಲಿ ಹೆಚ್ಚಿನವರು ಯಾರೂ ಓದುವುದಿಲ್ಲವೆಂದೂ, ಅದರೊಳಗಿನ ಕನ್ನಡ ನಡುಗನ್ನಡವೋ ಹಳಗನ್ನಡವೋ ಹೊಸಗನ್ನಡವೋ ಎಂದರಿಯಲಾರದ, ಪದ ಪುಂಜಗಳ ಅರ್ಥವನ್ನು ಗ್ರಹಿಸಲಾಗದ, ಬಹಆಯಾಸದಿಂದ, ಹತಾಶೆ ಯಿಂದ, ವರ್ತಮಾನದಲ್ಲಿ ಯಾರ ಓದಿಗೂ ಬೇಕಿಲ್ಲದ ಕಗ್ಗ ಉಳಿದಿರುವುದು ಕೆಲವು ಶಿಷ್ಟ ಓದುಗರಲ್ಲಿ ಮಾತ್ರವೆಂದೂ, ಅನೇಕರಿಗೆ ಇದು ಬೌದ್ಧಿಕ ವ್ಯಾನಿಟಿ ಬ್ಯಾಗ್, ಬೌದ್ಧಿಕ ಪೌರೋಹಿತ್ಯಕ್ಕೆ ಅನುಕೂಲಕರವಾದ ಒಣಸಮಿತ್ತೆಂದೂ ಆರೋಪಿಸಲಾಗಿದೆ.

ಕಗ್ಗದ ಕುರಿತಾಗಿ ನಮ್ಮ ಹಿರಿಯರಲ್ಲಿ ಇದ್ದ ಪ್ರೀತಿ, ಗೌರವ, ಶ್ರದ್ಧೆ, ನಿತ್ಯಬದುಕಿನಲ್ಲೂ ಸಾಧ್ಯವಾದಷ್ಟೂ ಮಟ್ಟಿಗೆ ಅದನ್ನವರು ಅಳವಡಿಸಿಕೊಳ್ಳುತ್ತಿದ್ದ ರೀತಿಯನ್ನು ನಮ್ಮ ಮಕ್ಕಳು ಕಲಿಯಬೇಕು. ಆಸಕ್ತಿ-ಅಭಿರುಚಿಗಳಿಗೆ ಬದ್ಧರಾಗಿ ಬದುಕುವಾಗಲೂ ಬಾಲ್ಯ ದಲ್ಲಿ ಕಲಿತ ಜೀವನ ಪಾಠಗಳು ಅಷ್ಟು ಸುಲಭವಾಗಿ ಮರೆತು ಹೋಗುವುದಿಲ್ಲ.

ಡಿವಿಜಿಯವರೇ ಕಗ್ಗವನ್ನು ಮನನ ಕಾವ್ಯವೆಂದು ಹೇಳಿದ್ದಾರೆ. ಜೀವನ ಧರ್ಮಯೋಗ ವೆಂತಲೂ ಕರೆದಿದ್ದಾರೆ. ಅಂಥ ಕಗ್ಗವು ವಿದ್ವಜ್ಜನರ ಮೆಚ್ಚುಗೆಯನ್ನೂ, ಪಾಮರರ ನಾಲಗೆಯಲ್ಲಿ ಉಲಿಯುವುದನ್ನೂ ಕಂಡಿದೆ. ಕಗ್ಗ ಜನಮನದಿಂದ ದೂರವಾಗಲಿಲ್ಲ. ಅಕಾಡೆಮಿಕ್ ವಲಯದಲ್ಲಿ ಕಗ್ಗದ ಅಳವಡಿಕೆ ಕಡಿಮೆಯಾದ್ದರಿಂದ ಕಗ್ಗ ಜನರಿಂದ ದೂರವಾಗಿರಬಹುದು. ಆದರೆ, ಕಗ್ಗದ ಆಸಕ್ತಿ ಕುಂದಿಲ್ಲ, ಕುಂದುವುದೂ ಇಲ್ಲ. ಕಗ್ಗದ ವಾಚನ, ವ್ಯಾಖ್ಯಾನ ಇಂದಿಗೂ ನಡೆಯುತ್ತಲೇ ಇರುತ್ತದೆ. ಹಿಂದೆ ರಾಜಕಾರಣಿಗಳ ಬಾಯಿಯಲ್ಲೂ ಕಗ್ಗದ ಸಾಲುಗಳು ಕೇಳುತ್ತಿತ್ತು.

ಕಗ್ಗವು ನೀತಿಕಾವ್ಯವೆಂದು ಜನಜನಿತವಾಗಿದೆ. ಅಂದೂ ಇಂದೂ ದೊಡ್ಡ ಕಾವ್ಯಗಿಂತಲೂ ಜನರ ಮನಸ್ಸನ್ನು ಗೆದ್ದಿರುವುದು ಕಗ್ಗವೇ! ಆಳದ ಅರ್ಥವ್ಯಾಪ್ತಿಯನ್ನು ಹೊಕ್ಕಿ ನೋಡದೆ ಕಗ್ಗದ ಮೇಲಿನ ಅರ್ಥವನ್ನು ಗ್ರಹಿಸಿ ಜೀವನದ ಗತಿ ಬಿಂಬಕ್ಕೆ ಮೌಲ್ಯ ವನ್ನಾಗಿ ಸ್ವೀಕರಿಸುವವರಿಗೆ ಕಗ್ಗವು ಭಗವದ್ಗೀತೆಯೇ ಸರಿ. ಕಗ್ಗದ ಅರ್ಥವನ್ನು ಹೇಳುವಾಗ ಡಿವಿಜಿಯವರು ಈ ವಿಚಾರಗಳನ್ನು ಎಲ್ಲಿಂದ ಕಡ ತಂದರು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

ಡಿವಿಜಿಯವರ ಬಗ್ಗೆ, ಕಗ್ಗದ ಬಗ್ಗೆ ಡಾ.ಆರ್.ಗಣೇಶರ ಮಾತುಗಳಿವು: ತುಂಬ ಜನ ಭಾವಿಸಿದಂತೆ ಕಗ್ಗವು ಭಾರತೀಯ ಪರಂಪರೆಯ ತತ್ವ ಜ್ಞಾನವನ್ನು ಶುಕ ಪಾಠವಾಗಿ ಒಪ್ಪಿಸುವುದಿಲ್ಲ. ಈ ನಿಟ್ಟಿನಲ್ಲಿ ಕಗ್ಗದ ಅಭಿಮಾನಿಗಳು ಕುರುಡಾಗಿದ್ದಾರೆ. ಡಿವಿಜಿಯವರು ಕಗ್ಗದಲ್ಲಿ ತಮ್ಮ ಜೀವನದರ್ಶನವನ್ನು ಪ್ರಾಮಾಣಿಕತೆವಾಗಿ, ಸರ್ವಂಕಷವಾಗಿ, ಸುಂದರವಾಗಿ ನಿವೇದಿಸಿದ್ದಾರೆ. ಇದು ಸನಾತನ ಧರ್ಮದ ಮೂಲ ತತ್ವಕ್ಕೆ ಸಂವಾದಿಯಾಗಿರುವುದು ಸಹಜವಾದ ಆಕಸ್ಮಿಕ.

ಇದು ರಾಮಕೃಷ್ಣರ ‘ವಿಚಿತ್ರಾನುಭವ’ಗಳು ಭೈರವೀ ಬ್ರಾಹ್ಮಣಿಯ ಮೂಲಕ ಶಾಸ್ತ್ರಗಳಲ್ಲಿ ತಾಳೆಯಾದಂತೆ, ಶ್ರೀ ರಮಣರ ನಿರ್ವಿಶೇಷಾನುಭವವು ಶಂಕರಭಾಷ್ಯಗಳಲ್ಲಿ ವಿದ್ವಾಂಸರಿಗೆ ತೋರಿಕೊಂಡಂತೆ. ಸರ್ವಜ್ಞ, ವೇಮನ, ವಳ್ಳುವ, ಭರ್ತೃಹರಿ, ಚಾಣಕ್ಯ, ಕೃಷ್ಣರ ಕೃತಿಗಳಲ್ಲಿ ತೋರುವ ಜೀವನಧರ್ಮವೇ ಇಲ್ಲಿಯೂ ಬಿಂಬಿಸಿದೆ. ವಚನಕಾರರ, ಹರಿದಾಸರ, ಆಳ್ವಾರುಗಳ,
ನಾಯನ್ಮಾರುಗಳ, ವಾರಕರೀ ಸಂಪ್ರದಾಯದವರ, ಸಿದ್ಧ- ನಾಥ-ಅವಧೂತರ ಸಂವೇದನೆಗಳಲ್ಲಿ ಸ್ಪಂದಿಸಿವೆ. ಅಷ್ಟೇಕೆ, ಬ್ರೌನಿಂಗ್, ಉರ್ಮ, ಪ್ಲೇಟೋ, ಸಾಕ್ರೆಟಿಸ್‌ರಂಥ ವಿದೇಶೀಯರ ಭಾವಗಳೂ ಬೆಸೆದಿವೆ. ಆದರೆ, ಇವರಿಗಿಂತ ಭಿನ್ನವಾಗಿ ಕಗ್ಗವು ಮೈದಳೆದ ಭಾಷೆ-ಭಣಿತಿಗಳು ತುಂಬ ವಿಶಿಷ್ಟ.

ಇಲ್ಲಿರುವುದು ಮತಾತೀತವಾದ ವಿಶ್ವಜನೀನದೃಷ್ಟಿ. ಪ್ರವಾದಿಯ ಅಟ್ಟಹಾಸಕ್ಕೆ ಇಲ್ಲಿ ಎಳ್ಳಷ್ಟೂ ಅವಕಾಶವಿಲ್ಲ. ಇದು ಸರ್ವಾತ್ಮ
ನಾ ಸುಹೃತ್ ಸಂಹಿತೆ, ಸ್ವಹೃತ್ಸಂಹಿತೆ, ತನಗೆ ತಾನು ಹೇಳಿಕೊಳ್ಳುವ ಜೀವನಧರ್ಮ ಸಂಹಿತೆ. ಅಲ್ಲದೆ, ಕಗ್ಗದ ಪ್ರತಿಯೊಂದು ಪದ್ಯವೂ ಸಾಲಂಕಾರ, ರಸಾವಹ. ಇಲ್ಲಿಯ ಉಕ್ತಿ ವೈಚಿತ್ರ್ಯಗಳು ಅದೆಷ್ಟು ಸಹಜವೆಂದರೆ ಓದುಗನಿಗೆ ಅವುಗಳ ಚೆಲುವು-ಭೋಜನ ರಸಿಕನಿಗೆ ಪದಾರ್ಥಗಳ ಸಮಷ್ಟಿ ರುಚಿಯಂತೆ ತಾತ್ಪರ್ಯವಾಗಿ ದಕ್ಕುತ್ತಿವೆಯೇ ಹೊರತು ಬಿಡಿಬಿಡಿಯಾಗಿ ಗಮನಕ್ಕೆ ಬರುತ್ತಿಲ್ಲ.

ಎಡಪಂಥೀಯ ಅನಂತಮೂರ್ತಿ ಕಗ್ಗದ ಬಗ್ಗೆ ಹೇಳಿದ ಮಾತುಗಳಿವು: ನೀತಿಯನ್ನು, ಸಂತೋಷವನ್ನು ಒಟ್ಟಾಗಿ ಕೊಡುವ ಕೃತಿಯೆಂದರೆ ಕಗ್ಗ. ಹಲವು ನೀತಿ ಹೇಳುವ ಸಂಸ್ಕೃತ ಶ್ಲೋಕಗಳಿಗಿಂತ ಕಗ್ಗದಲ್ಲಿ ನೀತಿ ಹೇಳುವ ಕ್ರಮವೇ ಬೇರೆ. ಇದಮಿತ್ಥಂ ಎನ್ನುವ ಕ್ರಮ ನೀತಿ ಶ್ಲೋಕಗಳದ್ದು. ಆದರೆ, ಕಗ್ಗದ ಬಹಳ ಮೌಲಿಕವಾದ ಭಾಗಗಳು ಅನುಮಾನದಿಂದಲೇ ಹುಟ್ಟುವ ಮಾತು ಗಳು ಎನ್ನುವುದಕ್ಕೆ ಅದರ ಮೊದಲ ಪದ್ಯವನ್ನೇ ಅವರು ಉದಾಹರಿಸುತ್ತಾರೆ.

ಮ್ಯಾಥ್ಯೂ ಅರ್ನಾಲ್ಡಿನಂತೆ ಡಿವಿಜಿಯವರಿಗೂ ತಾತ್ವಿಕವಾಗಿ ಎಲ್ಲವನ್ನೂ ಅರ್ಥಮಾಡಿಕೊಳ್ಳುವ ತವಕ ಇತ್ತು. ಇದನ್ನು ತಿಳಿಯುವ ಪ್ರಯತ್ನ ಮಾಡದೆ ನಾವು ಡಿವಿಜಿಯವರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ದೊಡ್ಡ ಸಾಹಿತ್ಯ ಹೇಗೆ ಸೃಷ್ಟಿ
ಯಾಗುತ್ತದೆಂದು ಡಿವಿಜಿ ಬರೆಯುವಾಗ, ಕನ್ನಡದಲ್ಲಿ ದೊಡ್ಡ ಸಾಹಿತ್ಯ ಬರುವುದಿಲ್ಲ, ಏಕೆಂದರೆ ನಾವೆಲ್ಲರೂ ವ್ಯವಸ್ಥೆಯನ್ನು ನಂಬಿ ಕೂತವರು. ನಾವು ದೊಡ್ಡ ಪ್ರಶ್ನೆಗಳನ್ನು ಕೇಳದ ಹೊರತು, ಅನುಮಾನಗಳನ್ನು ವ್ಯಕ್ತಪಡಿಸದ ಹೊರತು ದೊಡ್ಡದರ ಸೃಷ್ಟಿ ಸಾಧ್ಯವಿಲ್ಲ.

ಜಗತ್ತಿನ ಅತ್ಯುತ್ತಮ ಮನಸ್ಸುಗಳಿಗೆ ಬೌದ್ಧಿಕ ಸಂಕಟ ಇರುತ್ತದೆಂದ ಅವರ ಮಾತುಗಳನ್ನು ಅನಂತಮೂರ್ತಿಯವರು ಉಲ್ಲೇಖಿಸುತ್ತಾರೆ. ಕನ್ನಡ ಸಾಹಿತ್ಯದಲ್ಲಿ ಬದಲಾವಣೆ ಆಗಬೇಕು, ನಾವು ಹೊಸದನ್ನು ಓದಬೇಕು. ಷೆಲ್ಲಿ, ಕೀಟ್ಸ್ ಮೊದಲಾ ದವರನ್ನು ತಿಳಿದುಕೊಳ್ಳಬೇಕು. ನಮ್ಮ ಆಚಾರ ವಿಚಾರಗಳಲ್ಲಿ ಮಡಿ ಮೈಲಿಗೆಗಳಲ್ಲಿ ಬದಲಾವಣೆ ಆಗಬೇಕು ಎನ್ನುವುದು ಡಿವಿಜಿಯವರ ಆಶಯವಾಗಿತ್ತು. ಸಂಸ್ಕೃತವೂ ಬೇಕು, ಇಂಗ್ಲೀಷು ಬೇಕು. ಕಗ್ಗದ ರಚನೆಯ ಹಿನ್ನೆಲೆಯಲ್ಲಿ ಅನಂತಮೂರ್ತಿಯವರು ಡಿವಿಜಿಯವರ ಬಗೆಗೆ ಆಡಿದ ಈ ಮಾತುಗಳ ಪ್ರಭಾವ ಇದ್ದಿರಬಹುದು!

ಡಿವಿಜಿಯವರು ಇಂಗ್ಲಿಷ್, ಸಂಸ್ಕೃತದಿಂದ ಸಾಕಷ್ಟು ಪದ್ಯಾನುವಾದ ಮಾಡಿದ್ದಾರೆ. ಹಾಗಂತ ಡಿವಿಜಿಯವರು ಶಾಲೆ ಕಾಲೇಜುಗಳಲ್ಲಿ ಪದವಿ ಶಿಕ್ಷಣವನ್ನು ಔಪಚಾರಿಕವಾಗಿ ಪಡೆದವರಲ್ಲ. ಡಿಗ್ರಿ ಸರ್ಟಿಫಿಕೆಟ್ ಅವರಲ್ಲಿಲ್ಲ. ಏನಿದ್ದರೂ ಸಂಪೂರ್ಣ ವಾದ ಸಮಗ್ರವಾದ ಸ್ವಾಧ್ಯಾಯವೇ! ಎಲ್ಲವೂ ಸ್ವಯಂ ಆರ್ಜಿತವಾದ ಸಂಪತ್ತೇ. ವಿದ್ವಜ್ಜನರು ನೀಡಿದ ಮನ್ನಣೆಯ ಸರ್ಟಿಫಿ ಕೆಟ್ಟೇ ಬಹುದೊಡ್ಡ ಆಸ್ತಿ. ಕಾವ್ಯ, ನಾಟಕ, ಭಾಷೆ, ಸಾಹಿತ್ಯ ಮೀಮಾಂಸೆ, ವಿಮರ್ಶೆ, ಪತ್ರಿಕೋದ್ಯಮ, ರಾಜ್ಯಶಾಸ್ತ್ರ, ಸಂಸ್ಕೃತಿ, ಅನುವಾದ, ದೇವರು, ಧರ್ಮ, ವೇದಾಂತ, ಪುರುಷ ಸೂಕ್ತ, ಉಪನಿಷತ್ತು- ಹೀಗೆ ಇವರ ಬರವಣಿಗೆಯೇ ಹನ್ನೊಂದು
ಸಾವಿರ ಪುಟಗಳಷ್ಟು!

ಇಂಥ ಪರಮ ಮೇಧಾವಿಗಳ ಋಷಿಕಲ್ಪರ ಕಗ್ಗವನ್ನೇ ಪ್ರಧಾನವಾಗಿ ಗಮನಿಸಿದರೆ ಇದು ಜೀವನ ತತ್ವ ನಿರೂಪಿಸುವ ಕೃತಿ ಯೆಂಬುದು ಗೊತ್ತಾಗುತ್ತದೆ. ಇದು ವ್ಯಕ್ತಿತ್ವ ವಿಕಾಸ ಸಾಹಿತ್ಯದ ಅಪ್ಪಟ ಭಾರತೀಯ ರೂಪ, ಅತಿ ಹೃದಯಂಗಮ ಸತ್ವರೂಪ ಎಂಬುದು ಡಾ.ಆರ್.ಗಣೇಶರ ಅಭಿಪ್ರಾಯ. ಇದರಲ್ಲಿನ ಅನೇಕ ಪದಗಳು ಕನ್ನಡ ವ್ಮಾಯ ಲೋಕಕ್ಕೆ ಹೊಸತು.

ಬೆಳೆಯುತ್ತಿರುವ ಭಾಷೆಗೆ ಹೊಸಪದಗಳ ಸೃಷ್ಟಿಯಾಗುತ್ತಲೇ ಇರಬೇಕು. ಕಗ್ಗದಲ್ಲಿ ಇಂಥ ಅನಿವಾರ್ಯತೆಯು ಸಾಕಾರಗೊಂಡಿದೆ. ಸ್ವೋಪಜ್ಞತೆಯಿಲ್ಲದೆ ಇಂಥ ಸಾಕಾರಗೊಳ್ಳುವಿಕೆ ಅಸಾಧ್ಯದ ಮಾತು. ಈ ಹಿನ್ನೆಲೆಯಲ್ಲಿ ಕಗ್ಗ ಅಸಾಮಾನ್ಯ ಅ ಪ್ರತಿಮ ಸಾಹಸದ ಫಲವೇ ಸರಿ. ಕಗ್ಗದ ಬಗ್ಗೆ ಮೊದಲಿಂದಲೂ ಅಪಪ್ರಚಾರ, ಅಪಸ್ವರ ಸಾಹಿತ್ಯಲೋಕದಲ್ಲಿದ್ದಂತೆ ಕಾಣುತ್ತದೆ.

ಶತಾವಧಾನಿಗಳ ಈ ಮಾತುಗಳನ್ನು ಕೇಳಿ: ಕಗ್ಗದಲ್ಲಿ ಏಕಸೂತ್ರತೆಯಿಲ್ಲ, ಮಣ್ಣಿನ ವಾಸನೆಯಿಲ್ಲ, ಅದು ಅನುಭವದ ಮೂಸೆಯಿಂದ ಹೊರಬಿದ್ದುದಲ್ಲ, ಅದರಲ್ಲಿ ಧ್ವನಿ-ರಸಗಳಿಲ್ಲ, ಹೊಸತೇನೂ ಇಲ್ಲ ಇತ್ಯಾದಿ ‘ಇಲ್ಲ’ಗಳ ಪಟ್ಟಿ ಒಂದಾದರೆ. ಇದು ಪ್ರತಿಗಾಮಿ, ಮೂಲಭೂತವಾದಿ, ಬಂಡವಾಳಶಾಹಿ, ಪುರೋಹಿತಶಾಹಿ, ಯಾಜಮಾನ ಸಂಸ್ಕೃತಿಯ ಪ್ರತೀಕ (ಸಂಕ್ಷೇಪಿಸಿ ಹೇಳುವುದಾದರೆ ಹಿಂದುತ್ತ್ವವಾದಿ) ಇತ್ಯಾದಿ ‘ಇದೆ’ಗಳ ಪಟ್ಟಿ ಇನ್ನೊಂದು. ಆದರೆ ಈ ಬಗೆಯ ಇಲ್ಲ-ಇದೆಗಳ ಕರ್ತರನ್ನು ಕನ್ನಡಿಗರು ಲೆಕ್ಕವಿರಿಸಿಲ್ಲ.

ಅವರಿಗಿಷ್ಟು ಗೊತ್ತು: ಕಗ್ಗದ ಮಾತುಗಳು ನೊಂದ ಮನಸ್ಸಿಗೆ ನೇಹಿಗರಾಗುತ್ತವೆ. ಬೆಂದ ಜೀವಕ್ಕೆ ತಂಪೆರೆಯುತ್ತದೆ. ಧೃತಿ ಗೆಟ್ಟವರಿಗೆ ಗತಿಯಾಗುತ್ತವೆ. ಮತಿಭ್ರಾಂತರಿಗೆ ಪಥವಾಗುತ್ತದೆ. ಪಥ್ಯವೂ ಆಗುತ್ತವೆ. ಮಾತ್ರವಲ್ಲ, ಉಸದಲ್ಲಿದ್ದವರಿಗೆ ಅಂತರ್ಮು ಖತೆಯನ್ನು ಕಲ್ಪಿಸುತ್ತವೆ. ಸಾಧನೆಯ ಶಿಖರದಲ್ಲಿದ್ದವರಿಗೆ ನಮ್ರತೆಯನ್ನು ಕಲಿಸುತ್ತವೆ. ಕಗ್ಗವು ವರ್ತಮಾನದಲ್ಲಿ ಪ್ರಸ್ತುತವೇ ಅಥವಾ ಜನ ಅದನ್ನು ಓದುತ್ತಾರೆಯೇ ಎನ್ನುವುದೇ ದೊಡ್ಡ ಮೂರ್ಖತನ. ಕಗ್ಗವೇನು, ಓದಬೇಕೆನಿಸಿದಾಗ ಎಷ್ಟೇ ಕಷ್ಟವಾ ದರೂ, ಯಾವ ಗ್ರಂಥವಾದರೂ ಅದೆಲ್ಲಿಯೇ ಇದ್ದರೂ ಹುಡುಕಿಕೊಂಡು ಹೋಗಿ ಓದುವುದು ನಿಜವಾದ ಅಧ್ಯಯನ ಶೀಲ ಮನಸೊಂದರ ತಹತಹ.

ನಮ್ಮ ಮಕ್ಕಳು ಕಗ್ಗದ ಜೀವನ ಮೌಲ್ಯಗಳನ್ನು, ಪ್ರಾಥಮಿಕ, ಪ್ರೌಢ ಮತ್ತು ಪಿಯು ಹಂತದಲ್ಲಿ ಓದಬೇಕಿದೆ. ಉದಾತ್ತವಾದ ಭಾವನೆಗಳಿಗೂ ನಿತ್ಯ ಜೀವನದ ಪ್ರಯೋಜನಕ್ಕೂ ಕಗ್ಗ ಒದಗುತ್ತದೆ. ಕಗ್ಗಕ್ಕೆ ಯಾವ ದೊಡ್ಡ ಪ್ರಶಸ್ತಿ ಪುರಸ್ಕಾರಗಳು ಸಿಕ್ಕಿಲ್ಲ. Of course, ವಿದ್ವಜ್ಜನರು, ಪಂಡಿತ ಪಾಮರರ ನಾಲಗೆಯಲ್ಲಿ ಉಲಿದರೆ ಅದಕ್ಕಿಂತಲೂ ಯಾವ ಪ್ರಶಸ್ತಿಯೂ ದೊಡ್ಡದಲ್ಲ. ವಿದ್ವಾಂಸರಾದ ಸೇಡಿಯಾಪು ಕೃಷ್ಣಭಟ್ಟರು ಡಾ.ಆರ್.ಗಣೇಶರಲ್ಲಿ ತಿಳಿಸಿದ್ದು: ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮೂರು ಕಾವ್ಯಗಳು ಮಹನೀಯವಾಗಿವೆ.

ಅವು, ಮಹಾಕಾವ್ಯವಾಗಿ ಶ್ರೀ ರಾಮಾಯಣ ದರ್ಶನಂ, ಖಂಡಕಾವ್ಯವಾಗಿ ಮೈಸೂರು ಮಲ್ಲಿಗೆ, ಮನನಕಾವ್ಯವಾಗಿ ಮಂಕು ತಿಮ್ಮನ ಕಗ್ಗ. ಕನ್ನಡ ಸಾಹಿತ್ಯದ ದಿಗ್ಗಜರಾದ ಕಾರಂತ, ಕುವೆಂಪು ಅವರೂ ಕಗ್ಗದ ಬಲ್ಮೆಯನ್ನು ಮೆಚ್ಚಿ ಕೊಂಡಾಡಿ ದವರೇ.