ನೂರೆಂಟು ವಿಶ್ವ
vbhat@me.com
ಕೆಲವು ದಿನಗಳ ಹಿಂದೆ, ಮಾಜಿ ರಾಷ್ಟ್ರಪತಿ ದಿವಂಗತ ಡಾ.ಅಬ್ದುಲ್ ಕಲಾಂ ಅವರಿಗೆ ಸುಮಾರು ಇಪ್ಪತ್ತೆರಡು ವರ್ಷಗಳ ಕಾಲ ಆಪ್ತ ಕಾರ್ಯದರ್ಶಿಯಾಗಿದ್ದ ಆರ್.ಕೆ.ಪ್ರಸಾದ ಅವರು ತಾವು ತಮ್ಮ ‘ಬಾಸ್’ ಬಗ್ಗೆ ಬರೆದ ಪುಸ್ತಕವೊಂದನ್ನು ಕಳಿಸಿ ಕೊಟ್ಟಿದ್ದರು. ಆ ಕೃತಿಯ ಹೆಸರು Kalam : The Untold Story. ಡಾ.ಕಲಾಂ ಅವರ ನೆರಳಿನಂತೆ, 1993 ರಿಂದ 2015ರವರೆಗೆ, ಅಂದರೆ ಅವರು ನಿಧನರಾಗುವವವರೆಗೆ, ಅವರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದವರೊಬ್ಬರು ಪುಸ್ತಕವನ್ನು ಬರೆದಾಗ ಕುತೂಹಲ ಮೂಡುವುದು ಸಹಜ.
ಡಾ.ಕಲಾಂ ಜತೆ ಹದಿನಾಲ್ಕು ದಿನ ಕಳೆದ ನಾನೇ ಒಂದು ಪುಸ್ತಕ (ರಾಷ್ಟ್ರಪತಿ ಡಾ.ಕಲಾಂ ಜತೆ ಹದಿನಾಲ್ಕು ದಿನಗಳು) ಬರೆದಿರುವಾಗ, ಇಪ್ಪತ್ತೆರಡು ವರ್ಷ ಕಳೆದವರೊಬ್ಬರು ಪುಸ್ತಕ ಬರೆಯುವುದು ದೊಡ್ಡದಲ್ಲ. ಹಾಗೆಯೇ ನಾನೇ ಅಷ್ಟೊಂದು ಮಾಹಿತಿ, ವಿಷಯ ನೀಡಿರುವಾಗ, ಅವರೊಂದಿಗೆ ಎರಡು ದಶಕ ಕಳೆದವರೊಬ್ಬರು ನಮಗೆ ಗೊತ್ತಿಲ್ಲದ ಎಷ್ಟೆಲ್ಲ ವಿಷಯ ಗಳನ್ನು ಹೇಳಬಹುದಲ್ಲವೇ? ಈ ಕುತೂಹಲದಿಂದ ಆ ಕೃತಿಯನ್ನು ಓದಲಾರಂಭಿಸಿದೆ.
ಪ್ರಸಾದ ಅವರನ್ನು ನಾನು ಡಾ.ಕಲಾಂ ಜತೆಗಿನ ಪ್ರವಾಸ ಸಂದರ್ಭದಲ್ಲಿ ಭೇಟಿ ಮಾಡಿದ್ದೆ. ಹದಿನಾಲ್ಕು ದಿನಗಳ ಕಾಲ ನಾಲ್ಕು ದೇಶಗಳ ಪ್ರವಾಸ ಸಂದರ್ಭದಲ್ಲಿ ಪ್ರಸಾದ ಅವರೂ ಜತೆಯಲ್ಲಿದ್ದರು. ತಮಿಳುನಾಡಿನ ರಾಮೇಶ್ವರದಲ್ಲಿ ಹುಟ್ಟಿ, ಬಾಲ್ಯದಲ್ಲಿ
ಸೈಕಲ್ನಲ್ಲಿ ಮನೆಮನೆಗೆ ಹೋಗಿ ಪತ್ರಿಕೆಗಳನ್ನು ಹಂಚುತ್ತಿದ್ದ ಬಾಲಕನೊಬ್ಬ ಪದ್ಮಭೂಷಣ, ಪದ್ಮವಿಭೂಷಣ, ನೂರಕ್ಕೂ
ಅಽಕ ಗೌರವ ಡಾಕ್ಟರೇಟ್ ಹಾಗೂ ರಾಷ್ಟ್ರದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಯಾದ ಭಾರತರತ್ನದವರೆಗೆ ಭಾಜನ
ರಾದ ಡಾ.ಕಲಾಂ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಸ್ಥಾನದವರೆಗೆ ಏರಿದ್ದು ಜೀವಂತ ದಂತಕತೆ.
ಪ್ರಧಾನಿಗಳ ರಕ್ಷಣಾ ಸಲಹೆಗಾರ, ಭಾರತದ ಬಾಹ್ಯಾಕಾಶ ವಿಜ್ಞಾನಿ, ಮಿಸೈಲ್ ಮ್ಯಾನ್, ರೋಲ್ ಮಾಡೆಲ, ಉತ್ತಮ
ಬರಹಗಾರ, ಮೇಷ್ಟ್ರು, ವ್ಯಕ್ತಿತ್ವ ವಿಕಸನ ಉಪನ್ಯಾಸಕ… ಹೀಗೆ ಡಾ.ಕಲಾಂ ಅವರದ್ದು ಬಹುಶ್ರುತ ವ್ಯಕ್ತಿತ್ವ. ರಾಷ್ಟ್ರಪತಿಯಾಗಿ ಈ ರಾಷ್ಟ್ರದ ದೇಶವಾಸಿಗಳೊಂದಿಗೆ ನೇರ ಸಂವಾದ ಮಾಡಿದ ಏಕೈಕ ವ್ಯಕ್ತಿ ಅಂದ್ರೆ ಡಾ.ಕಲಾಂ. ಹೀಗಾಗಿ ಅವರು ‘ಕಾಮನ್ ಮ್ಯಾನ್ ಪ್ರೆಸಿಡೆಂಟ್’ ಎಂದು ಕರೆಯಿಸಿಕೊಂಡರು.
ಡಾ.ಕಲಾಂ ಅವರಿಂದಾಗಿ ರಾಷ್ಟ್ರಪತಿ ಭವನ ಜನಸಾಮಾನ್ಯರಿಗೂ ತೆರೆದುಕೊಂಡಿತು. ರಾಷ್ಟ್ರಪತಿಗಳಿಗೆ ಹೆಜ್ಜೆಹೆಜ್ಜೆಗೆ ಅಂಟಿ ಕೊಂಡಿದ್ದ ಶಿಷ್ಟಾಚಾರ ಎಂಬ ಬಡಿವಾರವನ್ನು ಕಿತ್ತೆಸೆದವರೂ ಅವರೇ. ಸಾಮಾನ್ಯವಾಗಿ ರಾಷ್ಟ್ರಪತಿಗಳಾದವರು, ಅಶೋಕ ಲಾಂಛನವಿಲ್ಲದ ಕುರ್ಚಿಯ ಮೇಲೆ ಕುಳಿತುಕೊಳ್ಳುವುದಿಲ್ಲ. ಸ್ವಾಮೀಜಿಗಳು ಕೃಷ್ಣಾಜಿನದ ಮೇಲೆ ಕುಳಿತುಕೊಳ್ಳು ವಂತೆ, ರಾಷ್ಟ್ರಪತಿಗಳು ಅಶೋಕ ಲಾಂಛನವಿರುವ ಆಸನದ ಮೇಲೆಯೇ ಆಸೀನರಾಗಬೇಕು. ಅಂಥ ಶಿಷ್ಟಾಚಾರ. ಆದರೆ ಡಾ.ಕಲಾಂ ಆ ಎಲ್ಲ ಪ್ರೋಟೋಕಾಲ್ ಗಳನ್ನು ಕಿತ್ತೆಸೆದರು. ಇಬ್ಬರು ಪತ್ರಕರ್ತರ (ರಾಜದೀಪ್ ಸರದೇಸಾಯಿ ಮತ್ತು ಬರ್ಖಾ ದತ್) ಸನ್ಮಾನ ಸಮಾರಂಭದಲ್ಲಿ, ಎಲ್ಲ ಶಿಷ್ಟಾಚಾರಗಳನ್ನು ಮುರಿದು, ಎಲ್ಲರನ್ನೂ ನಿಬ್ಬೆರಗಾಗಿಸಿ, ಅವರು ವೇದಿಕೆಯ ನೆಲದ ಮೇಲೆ ಕುಳಿತುಬಿಟ್ಟಿದ್ದರು!
ತಾವೊಬ್ಬ ರಾಷ್ಟ್ರಪತಿ ಎಂಬ ಮದ, ಅಹಂಕಾರ, ಪೊಗರು ಅವರ ತಲೆಗೆ ಎಂದೂ ಏರಿರಲಿಲ್ಲ. ಯಾವುದೇ ಊರಿಗೆ ಹೋಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿ, ಅಲ್ಲಿ ಮಕ್ಕಳನ್ನುದ್ದೇಶಿಸಿ ಮಾತಾಡಲು ಅವರು ಮರೆಯುತ್ತಿರಲಿಲ್ಲ. ಮಕ್ಕಳೊಂದಿಗೆ ಸಂವಾದ ಮಾಡುವುದು ಅವರಿಗೆ ಇಷ್ಟವಾಗಿತ್ತು. ಡಾ.ಕಲಾಂ ಮನಸ್ಸು ಮಾಡಿದ್ದರೆ, ಇನ್ನೊಂದು ಅವಧಿಗೆ ಅವರು ರಾಷ್ಟ್ರಪತಿ ಆಗಬಹು ದಿತ್ತು. ಆದರೆ ಆ ಆಲೋಚನೆ ಅವರಲ್ಲಿ ಒಂದು ಕ್ಷಣವೂ ಸುಳಿಯಲಿಲ್ಲ. ಆ ಬಗ್ಗೆ ಅವರು ಲಾಬಿ ಮಾಡಲಿಲ್ಲ. ತಮಗೆ ಎರಡನೇ ಅವಽ ಬೇಡ ಎಂದು, ಆರು ತಿಂಗಳ ಮೊದಲೇ ತಮ್ಮ ಆಪ್ತರಿಗೆ ತಿಳಿಸಿದ್ದರು.
ಡಾ.ಕಲಾಂ ಅವರೇ ರಾಷ್ಟ್ರಪತಿಯಾಗಿ ಮುಂದುವರಿಯಬೇಕು ಎಂದು ಇಡೀ ದೇಶವೇ ಒಕ್ಕೊರಲಿನಿಂದ ಆಗ್ರಹಿಸಿತು. ಆ
ರೀತಿಯ ಆಗ್ರಹ, ವರಾತ ಹಿಂದೆ ಯಾವ ರಾಷ್ಟ್ರಪತಿಗೂ ವ್ಯಕ್ತವಾಗಿರಲಿಲ್ಲ. ಅದರಲ್ಲೂ ಅವರು ರಾಷ್ಟ್ರಪತಿ ಹುದ್ದೆಯಿಂದ ಇಳಿದು, ಆ ಭವನದಿಂದ ನಿರ್ಗಮಿಸಿದ ದಿನ ಇಡೀ ದೇಶ ಮಮ್ಮಲ ಮರುಗಿತು. ಅವರ ನಂತರ ಪ್ರತಿಭಾ ಪಾಟೀಲ್ ರಾಷ್ಟ್ರಪತಿಯಾದರು. ಅವರನ್ನು ರಾಷ್ಟ್ರಪತಿ ಎಂದು ಒಪ್ಪಿಕೊಳ್ಳಲು ದೇಶವಾಸಿಗಳು ಸಿದ್ಧರಿರಲಿಲ್ಲ ಎನ್ನುವುದಕ್ಕಿಂತ, ಇನ್ನು ಮುಂದೆ ಡಾ.ಕಲಾಂ ರಾಷ್ಟ್ರಪತಿ ಅಲ್ಲ ಎಂದು ಒಪ್ಪಿಕೊಳ್ಳುವುದು ನೂರಾರು ಕೋಟಿ ಭಾರತೀಯರಿಗೆ ಕಷ್ಟವಾಗಿತ್ತು. ಅವರು ಮಾಜಿ ಆದರೂ, ಅವರಿಗೆ ಬರುವ ಪತ್ರದಲ್ಲಿ ನಿಜ ಬುದ್ಧ್ಯಾಪೂರ್ವಕವಾಗಿಯೇ ‘ರಾಷ್ಟ್ರಪತಿ’ ಎಂದೇ ಬರೆದಿರುತ್ತಿದ್ದರು.
2007 ರ ಜುಲೈ 25 ರಂದು ಡಾ.ಕಲಾಂ ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದರು. ಸಾಮಾನ್ಯವಾಗಿ ರಾಷ್ಟ್ರಪತಿ
ಹುದ್ದೆಯಿಂದ ಕೆಳಗಿಳಿದವರು ಜನಮಾನಸದಿಂದ ನಿಧಾನವಾಗಿ ಪಕ್ಕಕ್ಕೆ ಸರಿದು ಹೋಗುತ್ತಾರೆ. ನಂತರ ಅವರು ನಿಧನರಾ
ದಾಗಲೇ ಅವರು ಬದುಕಿದ್ದರಾ ಎಂಬುದು ಗೊತ್ತಾಗುತ್ತದೆ. ಅಷ್ಟರಮಟ್ಟಿಗೆ ಅವರು ಅಪ್ರಸ್ತುತರಾಗಿರುತ್ತಾರೆ. ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಆ ಹುದ್ದೆಯಿಂದ ಇಳಿದು ಹತ್ತು ವರ್ಷಗಳಾದವು. ಅವರು ಏನು ಮಾಡುತ್ತಿದ್ದಾರೆ ಎಂಬುದು
ಯಾರಿಗೂ ಗೊತ್ತಿಲ್ಲ. ಆದರೆ ಡಾ.ಕಲಾಂ ಈ ವಿಷಯದಲ್ಲಿ ಸಂಪೂರ್ಣ ಭಿನ್ನ.
ದೇಶ-ವಿದೇಶಗಳಿಂದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಅವರಿಗೆ ಪ್ರತಿದಿನ ಕನಿಷ್ಠ ಮುನ್ನೂರು ಆಹ್ವಾನಗಳು ಬರುತ್ತಿದ್ದವು. ಅವರು ರಾಷ್ಟ್ರಪತಿ ಇದ್ದಾಗ ಮತ್ತು ಮಾಜಿ ಆದಾಗ ಅವರ ದೈನಂದಿನ ಕಾರ್ಯಕ್ರಮಗಳಲ್ಲಿ ಹೆಚ್ಚು ವ್ಯತ್ಯಾಸ ಇರಲಿಲ್ಲ. ಒಮ್ಮೊಮ್ಮೆ ಅವರು ಒಂದೇ ದಿನ ಐದು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದುಂಟು. ಒಂದೇ ದಿನ ಮೂರು ರಾಜ್ಯ ಗಳಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದುಂಟು. ಅಷ್ಟೇ ಅಲ್ಲ, ಡಾ.ಕಲಾಂ ಅವರನ್ನು ಭೇಟಿ ಮಾಡಲು ದಿನವೂ ನೂರಕ್ಕೂ ಅಽಕ ಮಂದಿ ಮನವಿ ಸಲ್ಲಿಸುತ್ತಿದ್ದರು.
ಆ ಪೈಕಿ ಅವರು ಕನಿಷ್ಠ ಮೂವತ್ತು- ನಲವತ್ತು ಜನರನ್ನಾದರೂ ಭೇಟಿ ಮಾಡುತ್ತಿದ್ದರು. ಅವರು ಮಾಜಿ ಆದ ಆರು ತಿಂಗಳ ಅವಧಿಯಲ್ಲಿ, ಹನ್ನೆರಡು ದೇಶಗಳಿಗೆ ಭೇಟಿ ನೀಡಿ ಉಪನ್ಯಾಸ ಮತ್ತಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಅವರ ಕುಂದದ
ಜನಾನುರಾಗಿತ್ವಕ್ಕೆ ಸಾಕ್ಷಿ. ಅಂದಿನ ರಾಷ್ಟ್ರಪತಿ ಮತ್ತು ಪ್ರಧಾನಿಗಿಂತ ಅವರು ಜನಪ್ರಿಯತೆಯಲ್ಲಿ ಅಗ್ರೇಸರರಾಗಿದ್ದರು. ದೇಶದೆಡೆ ಪ್ರಮುಖ ಸಂಘ- ಸಂಸ್ಥೆಗಳು ಯಾವುದೇ ಪ್ರತಿಷ್ಠಿತ ಕಾರ್ಯಕ್ರಮ ಸಂಘಟಿಸಿದಾಗ ಮುಖ್ಯ ಅತಿಥಿ ಅಥವಾ ಉದ್ಘಾಟಕರಾಗಿ ಅವರ ಮೊದಲ ಆದ್ಯತೆ ಪ್ರಧಾನಿಗಿಂತ, ಮಾಜಿ ರಾಷ್ಟ್ರಪತಿ ಡಾ.ಕಲಾಂ ಅವರಾಗಿರುತ್ತಿದ್ದರು.
ಕೆಲವು ದಿನಗಳಲ್ಲಿ ರಾಜಾಜಿ ಮಾರ್ಗದಲ್ಲಿರುವ ಅವರ ನಿವಾಸದ ಮುಂದೆ, ಅವರನ್ನು ದೂರದಿಂದಾದರೂ ಕಣ್ತುಂಬಿಸಿ ಕೊಳ್ಳಲು ನೂರಾರು ಜನ ಸಾಲಿನಲ್ಲಿ ನಿಂತಿರುತ್ತಿದ್ದರು. ದೇವಸ್ಥಾನ ಇರುವ ರಸ್ತೆಯಲ್ಲಿ ಹಾದು ಹೋಗುವಾಗ, ಅಯಾಚಿತ ವಾಗಿ ನಮಸ್ಕಾರಿಸುವಂತೆ, ರಾಜಾಜಿ ಮಾರ್ಗ ರಸ್ತೆಯಲ್ಲಿ ಹಾದು ಹೋಗುವವರು, ಡಾ.ಕಲಾಂ ಅವರನ್ನು ಅದೇ ರೀತಿ ನೆನಪಿಸಿಕೊಳ್ಳುತ್ತಿದ್ದರು.
ಒಮ್ಮೆ ಒಬ್ಬರು ಆಟೋರಿಕ್ಷಾದಲ್ಲಿ ಬಂದು, ಡಾ.ಕಲಾಂ ಅವರನ್ನು ನೋಡಲೇಬೇಕು, ದೂರದಿಂದಾದರೂ ಅವರ ದರ್ಶನ ಭಾಗ್ಯ ಕರುಣಿಸಿ ಎಂದು ಬೇಡಿಕೊಂಡರು. ಈ ವಿಷಯವನ್ನು ತಿಳಿಸಿದಾಗ, ಡಾ.ಕಲಾಂ ಅವರೇ ಹೊರಗೆ ಬಂದು, ಆ ಆಟೋ ದಲ್ಲಿ ಬಂದವನ ಕೈ ಹಿಡಿದು ಅವನ ಜತೆ ಐದು ನಿಮಿಷ ಮಾತಾಡಿದರು, ಫೋಟೋ ತೆಗೆಸಿಕೊಂಡರು. ‘ನನ್ನ ಮನೆಗೆ ಭೇಟಿ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು’ ಎಂದು ಹೇಳಿ ಬೀಳ್ಕೊಟ್ಟರು. ಆಟೋದಲ್ಲಿ ಆಗಮಿಸಿದವ, ಆಟೋ ಡ್ರೈವರ್ಗೆ ಹಣ ನೀಡಲು ಮುಂದೆ ಬಂದಾಗ, ’ನನಗೆ ಹಣ ಬೇಡ, ನಿಮ್ಮಿಂದಾಗಿ ನನಗೆ ಇಂದು ಡಾ.ಕಲಾಂ ಅವರ ದರ್ಶನವಾಯಿತು’ ಎಂದು ಖುಷಿಪಟ್ಟು ಅಲ್ಲಿಂದ ನಿರ್ಗಮಿಸಿದ.
ಡಾ.ಕಲಾಂ ಮಾಜಿ ಆದ ಬಳಿಕ, ಅವರ ಮನೆಗೆ ತಾವು ಡ್ಯೂಟಿ ಮಾಡುತ್ತೇವೆ ಎಂದು ಭದ್ರತಾ ಸಿಬ್ಬಂದಿ ಯಾರದ್ದೇ ಪ್ರಭಾವ ಬೀರಿ ಆಗಮಿಸುತ್ತಿದ್ದರು. ಅಲ್ಲಿ ಡ್ಯೂಟಿ ಮಾಡಿದರೆ ಅವರಿಗೆ ಹೆಚ್ಚುವರಿ ಕಮಾಯಿ ಸಿಗುತ್ತಿರಲಿಲ್ಲ. ಆದರೂ ಡಾ.ಕಲಾಂ ಮನೆಯಲ್ಲಿ ಡ್ಯೂಟಿ ಮಾಡಿದ್ದೀವೆ ಎಂಬ ಧನ್ಯತೆಯನ್ನು ಅನುಭವಿಸುವುದು ಅವರ ಇರಾದೆಯಾಗಿರುತ್ತಿತ್ತು. ಅವರೆಲ್ಲ ತಾವು ‘ಮಾಜಿ ರಾಷ್ಟ್ರಪತಿ ನಿವಾಸದಲ್ಲಿ ಡ್ಯೂಟಿ ಮಾಡುತ್ತಿದ್ದೇವೆ’ ಎನ್ನುವುದಕ್ಕಿಂತ ‘ನಾವು ಡಾ.ಕಲಾಂ ನಿವಾಸದಲ್ಲಿ ಡ್ಯೂಟಿ
ಮಾಡುತ್ತಿದ್ದೇವೆ ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದರು.
ಅವರನ್ನು ಮಾಜಿ ರಾಷ್ಟ್ರಪತಿ’ ಎಂದು ಹೇಳಲು ಇಷ್ಟವಿಲ್ಲದವರು Kalam : The Untold Story ಎಂದು ಹೇಳುತ್ತಿದ್ದರು. ಇನ್ನು ಕೆಲವ ರಂತೂ ‘ಪ್ರೆಸಿಡೆಂಟ’ ಎಂದೇ ಸಂಬೋಧಿಸುತ್ತಿದ್ದರು. ಆಹ್ವಾನ ಪತ್ರಿಕೆಯಲ್ಲೂ ‘ರಾಷ್ಟ್ರಪತಿ’ ಎಂದೇ ಮುದ್ರಿತ ವಾಗಿರುತ್ತಿತ್ತು. ಈ ಪ್ರಮಾದವನ್ನು ಕಾರ್ಯಕ್ರಮ ಸಂಘಟಕರ ಗಮನಕ್ಕೆ ತಂದಾಗಲೆಲ್ಲ,‘ಅದು ನಮಗೆ ಗೊತ್ತಿದೆ, ನಾವು ಬೇಕೆಂದೇ ಹಾಗೆ ಅಚ್ಚು ಹಾಕಿಸಿದ್ದೇವೆ, ನಮ್ಮ ಪಾಲಿಗೆ ಅವರು ಇನ್ನೂ ರಾಷ್ಟ್ರಪತಿಯೇ’ ಎಂಬ ಒಂದೇ ರೀತಿಯ ಉತ್ತರ ಬರುತ್ತಿತ್ತು.
ಒಮ್ಮೆ ಅವರು ಕೇರಳದ ವಾಯ್ನಾಡ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಶೈಕ್ಷಣಿಕ ವೆಬ್ ಪೋರ್ಟಲ್ ಉದ್ಘಾಟನೆಗೆಂದು ಡಾ.ಕಲಾಂ ಅವರನ್ನು ಜಿಲ್ಲಾಧಿಕಾರಿ ಆಮಂತ್ರಿಸಿದ್ದರು. ಇದರ ಜತೆಗೆ, ವೈತಿರಿ ಎಂಬ ಊರಿನಲ್ಲಿ ಜವಾಹರ ನವೋದಯ ವಿದ್ಯಾಲಯದಲ್ಲಿ
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಬೇಕಿತ್ತು.
ಬೆಳಗ್ಗೆ ಹನ್ನೊಂದು ಗಂಟೆಗೆ ದಿಲ್ಲಿಯಿಂದ ಹೊರತು ಬೆಂಗಳೂರಿಗೆ ಮಧ್ಯಾಹ್ನ ಒಂದೂವರೆಗೆ ಆಗಮಿಸಿ, ಅಲ್ಲಿಂದ ವಿಮಾನದಲ್ಲಿ
ಕಲ್ಲಿಕೋಟೆಗೆ ಹೋಗಿ, ಅಲ್ಲಿಂದ ಮುಂದೆ ವಾಯ್ನಾಡಿಗೆ ರಸ್ತೆ ಮೂಲಕ ಸಾಗಿ, ಸಾಯಂಕಾಲ ನಾಲ್ಕೂವರೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ಆ ರೀತಿ ಅವರ ಪ್ರಯಾಣವನ್ನು ಜೋಡಿಸಲಾಗಿತ್ತು. ಆದರೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರತಿಕೂಲ ವಾತಾವರಣ ಇದ್ದುದರಿಂದ, ದಿಲ್ಲಿಯಿಂದ ವಿಮಾನ ಟೇಕಾಫ್ ಆಗಲು ಮೂರು ಗಂಟೆ ವಿಳಂಬವಾಯಿತು. ಈ ಕಾರ್ಯಕ್ರಮ ರದ್ದುಪಡಿಸುವುದೇ ಒಳ್ಳೆಯದು ಎಂದು ಪ್ರಸಾದ, ಡಾ.ಕಲಾಂ ಅವರಿಗೆ ಸಲಹೆ ನೀಡಿದರು.
ತಕ್ಷಣ ಡಾ.ಕಲಾಂ, ‘ಇಂಪಾಸಿಬಲ, ಪ್ರತಿಕೂಲ ವಾತಾವರಣ ಇರಬಹುದು, ಆದರೆ ಇದರಿಂದ ಕಾರ್ಯಕ್ರಮ ಸಂಘಟಕರಿಗೆ ಬೇಸರವಾಗುತ್ತದೆ. ಅಲ್ಲಿನ ಮಕ್ಕಳಿಗೂ ನಿರಾಸೆ ಆಗುತ್ತದೆ. ಏನೇ ಆದರೂ ಅಲ್ಲಿಗೆ ಹೋಗೋಣ. ವಾಯ್ನಾಡ್ ಜಿಲ್ಲಾಧಿಕಾರಿ ಅವರನ್ನು ಸಂಪರ್ಕಿಸಿ, ತಡವಾಗಿ ಆಗಮಿಸುತ್ತೇವೆ ಮತ್ತು ಎಷ್ಟು ಗಂಟೆ ತಡವಾಗಬಹುದು ಎಂಬುದನ್ನು ಸ್ಪಷ್ಟವಾಗಿ ತಿಳಿಸಿ’ ಎಂದು ಹೇಳಿದರು. ‘ನಾವು ತಲುಪುವುದು ತಡವಾಗುವುದರಿಂದ ಪ್ರೇಕ್ಷಕರು ಹೊರಟು ಹೋಗಬಹುದು’ ಎಂದು ಪ್ರಸಾದ
ಹೇಳಿದರು.
ಅದಕ್ಕೆ ಡಾ.ಕಲಾಂ, ‘ನಾವು ಹೋಗುವಾಗ ನಾಲ್ಕೇ ಜನ ಇರಲಿ, ಪರವಾಗಿಲ್ಲ. ಆದರೆ ಯಾವ ಕಾರಣಕ್ಕೂ ರದ್ದು ಮಾಡುವುದು ಬೇಡ’ ಎಂದು ಹೇಳಿದರು. ಸರಿ, ಡಾ.ಕಲಾಂ ದಿಲ್ಲಿಯಿಂದ ಮೂರು ತಾಸು ತಡವಾಗಿ ಹೊರಟರು. ಬೆಂಗಳೂರಿಗೆ ಬರುವಾಗ ಸಾಯಂಕಾಲ ಐದೂ ಮುಕ್ಕಾಲು. ಕಲ್ಲಿಕೋಟೆಗೆ ಹೋಗುವ ಕನೆಕ್ಟಿಂಗ್ ಫ್ಲೈಟ್ ತಪ್ಪಿ ಹೋಯಿತು. ಹೀಗಾಗಿ ಬೆಂಗಳೂರಿನಿಂದ ರಸ್ತೆ ಮೂಲಕ ವಾಯ್ನಾಡಿಗೆ ಹೋಗಲು ನಿರ್ಧರಿಸಲಾಯಿತು. ಆದರೆ ಸಾಯಂಕಾಲ ಆರು ಗಂಟೆ ಆಗುತ್ತಿದ್ದಂತೆ ಅಭಯಾರಣ್ಯದ ಗೇಟುಗಳನ್ನು ಬಂದ್ ಮಾಡುವುದರಿಂದ ಮೈಸೂರಿನಿಂದ ವಾಯ್ನಾಡಿಗೆ ಹೋಗುವುದು ಸಾಧ್ಯವಿಲ್ಲ ಎಂಬುದು ಗೊತ್ತಾಯಿತು. ಆದರೆ ಮೈಸೂರು ಜಿಲ್ಲಾಧಿಕಾರಿ ಬೆಂಗಳೂರಿನಲ್ಲಿರುವ ಪ್ರಧಾನ ಅರಣ್ಯ ಸಂರಕ್ಷಣಾ ಧಿಕಾರಿ ಅವರನ್ನು ಸಂಪರ್ಕಿಸಿ, ಅವರಿಂದ ವಿಶೇಷ ಅನುಮತಿ ಪಡೆದು ಡಾ.ಕಲಾಂ ಅವರ ಎಂಟು ಬೆಂಗಾವಲು ವಾಹನಗಳ
ಪ್ರಯಾಣಕ್ಕೆ ಅನುವು ಮಾಡಿ ಕೊಟ್ಟರು.
ಮೈಸೂರಿನಲ್ಲಿ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಭೋಜನ ಸೇವಿಸಿ ರಾತ್ರಿ ಒಂಬತ್ತು ಕಾಲು ಗಂಟೆಗೆ ಹೊರಟರು. ಆ ಮಧ್ಯರಾತ್ರಿ ಪ್ರಯಾಣ ಮಾಡುವುದು ಬೇಡ, ಕಾಡುಪ್ರಾಣಿಗಳು ಸಂಚಾರಕ್ಕೆ ಅಪಾಯ ತಂದೊಡ್ಡಬಹುದು,
ಮರುದಿನ ಹೋಗೋಣ ಎಂಬ ಸಲಹೆಯೂ ಬಂದಿತು. ಆದರೆ ಡಾ.ಕಲಾಂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಏನೇ ಆದರೂ ವಾಯ್ನಾಡ್ ತಲುಪಲೇ ಬೇಕು ಎಂದು ಹಠ ಹಿಡಿದರು.
ಅಂತೂ ಡಾ.ಕಲಾಂ ವಾಯ್ನಾಡ್ ತಲುಪಿದರು. ಆಗ ಸಮಯ ಮಧ್ಯರಾತ್ರಿ ಒಂದು ಗಂಟೆ! ಕಾರ್ಯಕ್ರಮ ನಡೆಯುವ ಮೈದಾನದಲ್ಲಿ ಸುಮಾರು ಎರಡು ಸಾವಿರ ಮಂದಿ ಕದಲಿರಲಿಲ್ಲ. ಡಾ.ಕಲಾಂ ಬರುತ್ತಾರೆ ಎಂದು ಅವರೆಲ್ಲ ಸುಸ್ತಾಗಿ ನಿತ್ರಾಣರಾಗಿದ್ದರೂ, ನಿದ್ದೆ ಮಾಡದೇ, ಕಲ್ಲಿನಂತೆ ಕುಳಿತಿದ್ದರು. ಡಾ.ಕಲಾಂ ಬಂದವರೇ ಜಿಲ್ಲಾಧಿಕಾರಿಯವರನ್ನು ಕರೆದು, ‘ಇವರಿಗೆ ಊಟದ ವ್ಯವಸ್ಥೆ ಆಗಿದೆಯಾ?’ ಎಂದು ಕೇಳಿದರು. ಆಗಿದೆಯೆಂದು ಜಿಲ್ಲಾಧಿಕಾರಿ ತಲೆಯಾಡಿಸಿದಾಗ, ‘ಈ ಹೊತ್ತಿನಲ್ಲಿ ಇವರಿಗೆ ಹೇಗೆ ಊಟದ ವ್ಯವಸ್ಥೆ ಮಾಡಿದಿರಿ?’ ಎಂದು ಕೇಳಿದರು.
ಅದಕ್ಕೆ ಜಿಲ್ಲಾಧಿಕಾರಿ, ‘ಊರಿನಲ್ಲಿರುವ ಹೋಟೆಲಿನವರೆ ಸೇರಿ ಉಚಿತವಾಗಿ ಭೋಜನದ ಏರ್ಪಾಟು ಮಾಡಿದ್ದಾರೆ’ ಎಂದು
ತಿಳಿಸಿದರು. ಡಾ.ಕಲಾಂ ನೋಡುತ್ತಿದ್ದಂತೆ ಪ್ರೇಕ್ಷಕ ಸಮೂಹದಲ್ಲಿ ವಿದ್ಯುತ್ ಸಂಚಾರ! ಡಾ.ಕಲಾಂ ಭಾಷಣ ಆರಂಭಿಸಿದಾಗ ಬೆಳಗಿನ ಜಾವ ಎರಡು ಗಂಟೆ. ಆ ಸರಹೊತ್ತಿನಲ್ಲಿ ಅವರ ಮಾತು ಆರಂಭವಾಯಿತು. ಮಲಯಾಳಂ, ಇಂಗ್ಲಿಷ್, ತಮಿಳಿನಲ್ಲಿ ಒಂದೂವರೆ ಗಂಟೆ ನಿರರ್ಗಳ ಮಾತು. ಮಾತು ಮಾತಿಗೆ ಜನರ ಚಪ್ಪಾಳೆ. ಅದಾದ ಬಳಿಕ ಜವಾಹರ ನವೋದಯ ವಿದ್ಯಾಲಯದಲ್ಲಿ ಕಾರ್ಯಕ್ರಮ. ಅಲ್ಲಿನ ವಿದ್ಯಾರ್ಥಿಗಳು ಸಣ್ಣ ನಿದ್ದೆ ತೆಗೆದು ಡಾ.ಕಲಾಂ ಮಾತು ಕೇಳಲು ಕಾತರದಿಂದ ಕಾಯುತ್ತಿದ್ದರು.
ಭಾಷಣ ಮಾಡುವವರಿಗೆ ಮತ್ತು ಕೇಳುವವರಿಗೆ ಉತ್ಸಾಹ ಬತ್ತಿರಲಿಲ್ಲ. ಮಾತು-ಚಪ್ಪಾಳೆಗಳ ಧಾರೆ! ಇವೆರಡೂ ಕಾರ್ಯಕ್ರಮ ಮುಗಿಸಿ ಡಾ.ಕಲಾಂ ಕಲ್ಲಿಕೋಟೆ ಗೆಸ್ಟ್ ಹೌಸಿಗೆ ಬಂದಾಗ ಬೆಳಗಿನ ಜಾವ ಐದೂವರೆ ಗಂಟೆ. ಎರಡು ತಾಸು ನಿದ್ದೆ ಮಾಡಿದ ಅವರು ಅಂದಿನ ಕಾರ್ಯಕ್ರಮಕ್ಕೆ ಸಿದ್ಧರಾಗಿದ್ದರು! ಅಬ್ದುಲ್ ಕಲಾಂ ಬಿಟ್ಟು ಹೋದ ಆ ಉನ್ನತ ಪರಂಪರೆ ಮತ್ತೊಮ್ಮೆ ಮರಳಿ ಗರಿಗೆದರಬಹುದೆಂಬ ನಿರೀಕ್ಷೆ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾದ ಈ ಹೊತ್ತಿನಲ್ಲಿ ನನ್ನಲ್ಲಿ ಮೂಡಿದೆ.