ಅಭಿಪ್ರಾಯ
ಬಾಲಾಜಿ ಕುಂಬಾರ
ನಿಜಾಮರು ಆಳಿಸಿಕೊಂಡ ದಾಸ್ಯದ ಧ್ವನಿಯಾದ ‘ಹೈದರಾಬಾದ್ ಕರ್ನಾಟಕ’ ಭಾಗವನ್ನು ‘ಕಲ್ಯಾಣ ಕರ್ನಾಟಕ’ ಎಂದು ಬದಲಾಗಿದೆ. 2019ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಈ ಪ್ರದೇಶಕ್ಕೆ ‘ಕಲ್ಯಾಣ ಕರ್ನಾಟಕ’ ಎಂದು ಮರುನಾಮಕರಣ ಮಾಡಿದೆ.
ಹೆಸರು ಬದಲಾಗಿ ಈಗ ಎರಡು ವರ್ಷವೇ ಕಳೆದಿದೆ. ಆದರೆ, ಈ ಪ್ರದೇಶದ ಹೆಸರು ಬದಲಾವಣೆ ವಿಷಯದಲ್ಲಿ ಜನರು, ಜನಪ್ರತಿನಿಧಿಗಳು ಇನ್ನಿಲ್ಲದ ಕಸರತ್ತು ನಡೆಸಿದ ಕಾರಣಕ್ಕೆ ಹೆಸರು ಬದಲಾಗಿದೆ. ಆದರೆ ಈಗ ನೋಡಿದರೆ ಜನರ ಭಾವನೆಗೆ ಸರಕಾರ ನೀಡುವ ಸ್ಪಂದನೆ, ಇಲ್ಲಿನ ಅಭಿವೃದ್ಧಿಯ ವಿಚಾರದಲ್ಲಿ ನೀಡುತ್ತಿಲ್ಲ
ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಬಸವಾದಿ ಶರಣರ ತವರು ನೆಲ, ಶರಣರ ಕಲ್ಯಾಣ ಸಮಾಜದ ಪರಿಕಲ್ಪನೆ ಸೇರಿದಂತೆ ಸೂಫಿ, ಸಂತ, ತತ್ವಪದಕಾರರ ನೆಲೆವೀಡಾದ ಈ ಪ್ರದೇಶಕ್ಕೆ ‘ಕಲ್ಯಾಣ ಕರ್ನಾಟಕ’ ಎಂದು ಮರುನಾಮಕರಣ ಮಾಡಿರುವುದಾಗಿ ಸಮರ್ಥಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಈ ಭಾಗದ ಸರ್ವತೋಮುಖ ಅಭಿವೃದ್ದಿಯ ಮೂಲಕ ಈ ಪ್ರದೇಶ ದಾಸ್ಯದ ಸಂಕೋಲೆಯನ್ನು ಕಳಚುವುದಾಗಿ ಘೋಷಿಸಿದ್ದರು. ಮಾನವ ಸಂಪನ್ಮೂಲಗಾಗಿ 500 ಕೋಟಿ ರು. ಅನುದಾನವೂ ಘೋಷಿಸಲಾಗಿತ್ತು. ಈ ಘೋಷಣೆ ಅನುದಾನದಿಂದ ಅದೆಷ್ಟು ಅಭಿವೃದ್ಧಿ ಕಂಡಿದೆ ಎಂದು ಹುಡುಕಲು ಹೋದರೆ ಉತ್ತರ ದೊರಕುವುದು ತೀರ ಕಷ್ಟ. ಕಲ್ಯಾಣ ಎಂದರೆ ಅದೊಂದು ಸ್ಥಳವಲ್ಲ, ನಿಗದಿತ ಪ್ರದೇಶದ ಹೆಸರೂ ಅಲ್ಲ. ಕಲ್ಯಾಣ ಎಂದರೆ ಒಳಿತು, ಸಮೃದ್ಧಿ, ಅಭ್ಯುದಯ, ಸರ್ವ ಸಮಾನತೆ ಸಮಾಜ, ಯಾವ ಕೊರತೆಗಳಿಲ್ಲದ ಒಂದು ಪ್ರದೇಶವನ್ನು ಕಲ್ಯಾಣ ನೆಲ ಎಂದು ಕರೆಯಬಹುದು. ಅಂಥ ’ಜನ ಕಲ್ಯಾಣ’
ಕ್ಕಾಗಿಯೇ ಶರಣರು ಕಾಯಕ ಚಳವಳಿ ಮೂಲಕ ಸಮಾನತೆ ಕನಸು ಕಂಡಿದ್ದರು.
ಒಂದು ಭಾಗದ ಜನರು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ
ಪ್ರಗತಿಯಾಗಿ ಜನ ಕಲ್ಯಾಣ ಹೊಂದಬೇಕಾಗಿದೆ. ಅದನ್ನು ಸರಕಾರಗಳು ಕಾರ್ಯಗತಗೊಳಿಸಿದಾಗ ಮಾತ್ರ ‘ಕಲ್ಯಾಣ’ ಎಂಬ ಪದಕ್ಕೆ ಸೂಕ್ತ ಅರ್ಥ ಬರುವುದು. ಸುಮ್ಮನೆ ‘ನಾಮ್ ಕೆ ವಾಸ್ತೆ’ ನಾಮ ಬದಲಾವಣೆಯಿಂದ ಯಾವ ಕಲ್ಯಾಣವೂ ಆಗುವುದಿಲ್ಲ. ಯಾವ ಉದ್ಧಾರವೂ ಆಗಲ್ಲ. ಕಲ್ಯಾಣ ಕರ್ನಾಟಕ ಎಂದು ಹೆಸರಿಟ್ಟು ಕೊಂಡ ಈ ಭಾಗದ ಜನರ ಬದುಕಿನಲ್ಲಿ ಯಾವ ಬದಲಾವಣೆಯೂ ಕಂಡುಕೊಳ್ಳಲಿಲ್ಲ. ಪುಟ್ಟ ಪುಟ್ಟ ಮಕ್ಕಳಿಗೆ ಒಡಲಲ್ಲಿ ಇಟ್ಟುಕೊಂಡು ಹೊರ ರಾಜ್ಯಗಳಿಗೆ ಗುಳೆ ಹೋಗುವುದು ಇನ್ನೂ ತಪ್ಪಿಲ್ಲ.
ಉದ್ಯೋಗ ಅರಸಿಕೊಂಡು ಹೋದ ಈ ಭಾಗದ ಸುಶಿಕ್ಷಿತ ವರ್ಗದಿಂದ ರಾಜಧಾನಿ, ನಗರಗಳು ಮತ್ತಷ್ಟು ಅಭಿವೃದ್ಧಿಗೊಳ್ಳುತ್ತಿವೆ. ಆದರೆ ಇಲ್ಲಿರುವ ಜನರ
ಜೀವನಮಟ್ಟ ಸುಧಾರಣೆಗಾಗಿ ಯಾವ ಅಭಿವೃದ್ಧಿ ಯೋಜನೆಗಳು ಜಾರಿಗೆ ಬರಲಿಲ್ಲ, ಇದ್ದ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಹೇಳಿ ಕೊಳ್ಳುವಂಥ ಜನನಾಯಕರಿಲ್ಲ. ಸರಕಾರ ವರ್ಷಕ್ಕೆ ಒಂದುವರೆ ಸಾವಿರ ಕೋಟಿ ರು. ಅನುದಾನ ಬಿಡುಗಡೆ ಮಾಡುತ್ತದೆ. ಆದರೆ ಈ ಭಾಗದ ಜನಪ್ರತಿನಿಧಿಗಳು ಅದನ್ನು ಹೇಗೆ ಸದುಪಯೋಗ ಪಡೆದುಕೊಳ್ಳುವ ಬಗ್ಗೆ ಯಾವ ದರ್ದು ಇಲ್ಲ.
ಅಭಿವೃದ್ಧಿಗಾಗಿ ಬಂದ ಒಟ್ಟು ಬಜೆಟ್ ನಲ್ಲಿ ಎಷ್ಟು ಬಳಕೆಯಾಗುವುದೋ ಅಷ್ಟೇ ಸಮವಾದ ಹಣ ಬಳಕೆಯಾಗದೆ ಖಜಾನೆಯಲ್ಲಿ ಹಾಗೇ ಕೊಳೆತು ವಾಪಸ್
ಹೋಗುತ್ತದೆ. ಈ ಭಾಗದ ಕೆಲವು ಜಿಲ್ಲೆಗಳಿಗೆ ಸರಕಾರಿ ಎಂಜಿನಿಯರಿಂಗ್ ಕಾಲೇಜು ಇಲ್ಲ. ನೂರಾರು ಜನರಿಗೆ ಉದ್ಯೋಗ ನೀಡುವ ದೊಡ್ಡ ಕಂಪನಿಗಳು ಇಲ್ಲ. ಬೇಸಿಗೆ ಬಂದರೆ ಸಾಕು, ಹನಿ ನೀರಿಗಾಗಿ ಪಡಬಾರದ ಕಷ್ಟಪಡುವ ಬಹುತೇಕ ಹಳ್ಳಿಗಳಿಗೆ ರಸ್ತೆ ಇಲ್ಲ, ಬಸ್ ಓಡಲ್ಲ, ಜಿಲ್ಲೆಯಿಂದ ಜಿಲ್ಲೆಗೆ ಬರೀ ಟ್ರೈನ್ ಓಡಿತು, ವಿಮಾನ ಹಾರಿದ ಮಾತ್ರಕ್ಕೆ ಅಭಿವೃದ್ಧಿ ಅಂತ ಹೇಳಬೇಕೇ? ಅದಕ್ಕೆ ಬಿಟ್ಟು ಹಲವು ತಾಪತ್ರಯಗಳು ಈ ಭಾಗದವರು ಅಂದಿನಿಂದ ಇಂದಿನವರೆಗೂ ಎದುರಿಸಿ ಕೊಂಡೆ ಬರುತ್ತಿದ್ದಾರೆ.
ಆದರೂ ಮಂತ್ರಿ ಮಹನೀಯರು, ಉಳಿದ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಮಾತ್ರ ಕಣ್ಣಿದ್ದು ಕುರುಡರಂತೆ ‘ನಾವು ಹಿಂದುಳಿದಿಲ್ಲ’ ಎಂದು ನಂಬಿಸಿ ಜನರಿಗೆ ಅಚ್ಛೇ ದಿನ ಭ್ರಮೆಯೊಳಗೆ ಮುಳುಗಿಸ್ತಾರೆ. ಪ್ರತಿವರ್ಷ ಸೆ.೧೭ಕ್ಕೆ ಕಲಬುರಗಿಯಲ್ಲಿ ಧ್ವಜಾರೋಹಣ ನೆರವೇರಿಸಿ ಹೈದರಾಬಾದ್ ಕರ್ನಾಟಕ ವಿಮೋಚನೆ ಕುರಿತು ಮಾತನಾಡಿ ಹೋಗುವ ಮುಖ್ಯಮಂತ್ರಿಗಳು ಈ ಭಾಗದ ಅಭಿವೃದ್ಧಿ ವಿಷಯದಲ್ಲಿ ಹಿಂದೇಟು ಹಾಕುತ್ತಾರೆ. ಹೊಸ ಯೋಜನೆ, ಕಾರ್ಯಕ್ರಮ ಜಾರಿಗಾಗಿ
ಜನ ಪ್ರತಿನಿಧಿಗಳು ತೋರುವ ಆಸಕ್ತಿ, ಉತ್ಸಾಹ ಅನುಷ್ಠಾನ ವಿಷಯ ಬಂದಾಗ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಾರೆ. ಕಲ್ಯಾಣ ಕರ್ನಾಟಕದ ಭಾಗದ ಸಮಸ್ಯೆಗಳನ್ನು ಪರಿಹರಿಸಲು ವರ್ಷಕೊಮ್ಮೆ ಅಽವೇಶನ ನಡೆಸಬೇಕು.
ಅಭಿವೃದ್ಧಿಗಾಗಿ ಇರುವ ಯೋಜನೆಗಳನ್ನು ಕಾಲಮಿತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡ ಬೇಕು. ಈ ಭಾಗದ ಮಂತ್ರಿ, ಸಂಸದರು, ಶಾಸಕರು ಸೇರಿದಂತೆ ಉಳಿದ ಜನಪ್ರತಿನಿಧಿಗಳು ಅಭಿವೃದ್ಧಿಗಾಗಿ ಇಚ್ಛಾಶಕ್ತಿ ತೋರಿಸಿ ವಿಭಿನ್ನ ಯೋಜನೆ ರೂಪಿಸಿ ಅವುಗಳನ್ನು ಜಾರಿಗೆ ತಂದರೆ ಮಾತ್ರ ಈ ಭಾಗದ ಪ್ರಗತಿ ಸಾಧ್ಯ. ಇಲ್ಲದಿದ್ದರೆ ‘ಕಲ್ಯಾಣ ಕರ್ನಾಟಕ’ ಅಭಿವೃದ್ಧಿ ಕನ್ನಡಿಯೊಳಗಿನ ಗುಟ್ಟಾಗಿಯೇ ಉಳಿಯಲಿದೆ.