Saturday, 14th December 2024

S G Hegde Column: ಕಾಮಾಗ್ನಿ ಸುಡುವುದು ಗೊತ್ತಿದ್ದರೂ ಪತಂಗವಾಗುವುದೇಕೆ ?

ಕಳಕಳಿ

ಎಸ್‌.ಜಿ.ಹೆಗಡೆ

ಕೋಲ್ಕತ್ತಾ ವೈದ್ಯಕೀಯ ಕಾಲೇಜಿನ ಟ್ರೇನಿ ವೈದ್ಯೆಯೊಬ್ಬಳ ಮೇಲೆ ಕೆಲ ದಿನಗಳ ಹಿಂದೆ ನಡೆದ ಕರಾಳ ಲೈಂಗಿಕ ದೌರ್ಜನ್ಯ ಮತ್ತು ಹತ್ಯೆ ಸಂಬಂಧಿತ ಜ್ವಾಲೆ ಉರಿಯುತ್ತಲೇ ಇದೆ. ಭಾರಿ ಪ್ರತಿಭಟನೆಗಳು ಇನ್ನೂ ನಡೆಯುತ್ತಿವೆ. ಉನ್ನತ ಸಂಸ್ಥೆಯಿಂದ ಘಟನೆಯ ಕೂಲಂಕಷ ತನಿಖೆ ನಡೆದಿದ್ದು, ಘಟನೆಯು ದೇಶದ ಅತ್ಯುನ್ನತ ನ್ಯಾಯಾಲಯವನ್ನು ತಲುಪಿದೆ. ಆಕೆಯ ಮೇಲಾದ ದೌರ್ಜನ್ಯಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣರಾದವರಿಗೆ ನೆಲದ ಕಾನೂನಿನಂತೆ ಯೋಗ್ಯ ಶಿಕ್ಷೆಯಾಗದೇ ಇರಲಿಕ್ಕಿಲ್ಲ. ಅಂಥ ಭೀಕರ ಕೇಡಿಗಳು ಹೇಗೂ ತಪ್ಪಿಸಿಕೊಳ್ಳಲಾರರು. ಆದರೆ, ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನಲ್ಲಿ ಕಿರಿಯ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದ, ಇನ್ನೂ ಎಷ್ಟೋ ವರ್ಷದ ಬದುಕು ಮತ್ತು ಭವಿಷ್ಯವನ್ನು ಕಳೆದುಕೊಂಡ, ೩೧ ವರ್ಷ ವಯಸ್ಸಿನ ಆ ಯುವತಿ ಯದ್ದು ಮಾತ್ರ ದುರಂತವೇ.

ಅವಳು ಮತ್ತೆ ಬದುಕನ್ನು ಕಾಣುವುದು ಹೇಗೆ ಸಾಧ್ಯ? ಹೀಗಾಗಿ ಈ ಘಟನೆಯು ದೇಶಾದ್ಯಂತ ಜನರ ಗಮನ ಸೆಳೆದುಅವರ ಆಕ್ರೋಶಕ್ಕೆ ಗುರಿಯಾಗಿದ್ದು ಸಹಜವೇ. ಕೋಲ್ಕತ್ತಾದಲ್ಲಿ ನಡೆದುಹೋದ ಈ ದೌರ್ಜನ್ಯದ ನಂತರ ಕೆಲ ದಿನಗಳಲ್ಲಿಯೇ ಇನ್ನೂ ಅನೇಕ ಹೀನಾಯ ಕೃತ್ಯಗಳು ಬೆಳಕಿಗೆ ಬಂದಿದ್ದು, ಅವು ಒಂದಕ್ಕಿಂತ ಒಂದು ಭಯಂಕರವಾಗಿವೆ. ಆಗಸ್ಟ್ ೨೨ರಂದು ಅಸ್ಸಾಂನ ನಾಂಗಾಂವ್ ಜಿಲ್ಲೆ ಯಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಯಿತು. ಸಂಜೆ ಟ್ಯೂಷನ್ ಮುಗಿಸಿ ಸೈಕಲ್ ಮೇಲೆ ಮನೆಗೆ ಬರುತ್ತಿದ್ದಾಗ, ಮೂವರು ದುಷ್ಕರ್ಮಿಗಳು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ದೌರ್ಜನ್ಯ ಎಸಗಿದ್ದಾರೆ. ರಸ್ತೆ ಬದಿಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಈ ಹುಡುಗಿಯನ್ನು ಕಂಡ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿದರು. ಸಂತ್ರಸ್ತೆಯ ಆರೋಗ್ಯ ಸ್ಥಿತಿ ಗಂಭೀರವಿತ್ತು.

ಮಾರನೇ ದಿನ, ಜೈಪುರದಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ಆಕೆಯ ಸಂಬಂಽಕನೇ ದೌರ್ಜನ್ಯ ನಡೆಸಿದ್ದು ಸುದ್ದಿ ಯಾಯಿತು. ತುರ್ತು ಕೆಲಸದ ನಿಮಿತ್ತ ತಾಯಿ ಹೊರಹೋದಾಗ ಈ ಘಟನೆ ನಡೆದಿದೆ. ಆಗಸ್ಟ್ ೨೩ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದಲ್ಲಿ ಯುವತಿಯೊಬ್ಬಳ ಸಾಮೂಹಿಕ ಅತ್ಯಾಚಾರವಾಯಿತು. ಹುಡುಗಿಯನ್ನು ಸಮೀಪದ ರಂಗನಪಲ್ಕೆಯ ಕಾಡಿಗೆ ಕರೆತಂದು, ಮಾದಕವಸ್ತು ಬೆರೆಸಿದ ಬಿಯರ್ ಕುಡಿಸಿ ಈ ಕುಕೃತ್ಯವನ್ನು ನಡೆಸಲಾಗಿದೆ ಎನ್ನಲಾಗಿದೆ. ಸಂತ್ರಸ್ತೆಯನ್ನು ತದನಂತರ ಮಣಿಪಾಲ ಆಸ್ಪತ್ರೆಗೆ ಸೇರಿಸಲಾಯಿತು.

ರಾಯಬಾಗಿನಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯು ಶಾಲೆ ಬಿಟ್ಟ ನಂತರ ಮನೆಯ ಹಾದಿ ಹಿಡಿದಿರುವಾಗ, ದುರುಳನೊಬ್ಬ ಆವಳನ್ನು ತಗ್ಗುಪ್ರದೇಶಕ್ಕೆ ಕೊಂಡೊಯ್ದು ಅತ್ಯಾಚಾರವೆಸಗಲು ಯತ್ನಿಸಿದಾಗ ಆಕೆಯ ಕಿರುಚಾಟ ಕೇಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಈ ದುರಂತವನ್ನು ತಪ್ಪಿಸಿದ್ದು ತಿಳಿದುಬಂದಿದೆ. ಈ ಎಲ್ಲ ಲೈಂಗಿಕ ದೌರ್ಜನ್ಯದ ಘಟನೆಗಳು ಕಳೆದ ಕೆಲವೇ ದಿನಗಳ ಅಂತರದಲ್ಲಿ ವರದಿಯಾಗಿವೆ ಎಂಬುದನ್ನು ಗಮನಿಸಬೇಕು. ಕೆಲ ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ‘ನಿರ್ಭಯಾ’ ಹತ್ಯೆಯ ಪ್ರಕರಣವು ಭಾರಿ ಸದ್ದು ಮಾಡಿತ್ತು. ಆ ಸಂದರ್ಭದಲ್ಲೂ ದೇಶವ್ಯಾಪಿಯಾಗಿ ಕ್ರೋಧ ಭುಗಿಲೆದ್ದಿತ್ತು. ಈ ಪ್ರಕರಣದ ನಂತರ ಕಾನೂನಿನಲ್ಲಿ ಅಪ್ರಾಪ್ತೆಯರ ಮೇಲಿನ ದೌರ್ಜನ್ಯದ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಯನ್ನು
ಅಳವಡಿಸಲಾಯಿತು. ಈ ಪ್ರಕರಣದ ಅಪರಾಧಿಗಳು ಗಲ್ಲಿಗೇರಿದ್ದೂ ಹೌದು. ಇಷ್ಟೆಲ್ಲಾ ಕಟ್ಟುನಿಟ್ಟುಗಳ ನಂತರವೂ ಲೈಂಗಿಕ ದೌರ್ಜನ್ಯದ ಘಟನೆಗಳು ನಡೆಯುತ್ತಲೇ ಬಂದಿರುವುದು,
ಇಂಥ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಬಹುದೊಡ್ಡ ಸವಾಲಾಗೇ ಉಳಿದಿದೆ.

ಇಂಥ ಇನ್ನೊಂದು ಹೀನಾಯ ಘಟನೆ ಇತ್ತೀಚೆಗೆ ನಡೆದಿದ್ದು ಮಹಾರಾಷ್ಟ್ರದ ಬದ್ಲಾಪುರ್‌ನಲ್ಲಿ. ನಾಲ್ಕು ವರ್ಷ ವಯಸ್ಸಿನ ಇಬ್ಬರು ಹುಡುಗಿಯರ ಮೇಲೆ ಶಾಲೆಯ ಮೂತ್ರಖಾನೆಯ
ಸ್ವಚ್ಛತಾಕರ್ಮಿಯು ಅತ್ಯಾಚಾರ ಎಸಗಿದ ಘೋರ ಘಟನೆಯಿದು. ಈ ಇಬ್ಬರಲ್ಲಿ ಒಬ್ಬಳು ತನ್ನ ಮೇಲಾದ ದೌರ್ಜನ್ಯದ ಕುರಿತು ಆಗಸ್ಟ್ ೧೩ರಂದು ಮನೆಯವರಲ್ಲಿ ಹೇಳಿಕೊಂಡಿದ್ದಳು. ಮತ್ತೊಬ್ಬಾಕೆ ಎರಡು ದಿನಗಳ ನಂತರ ಮನೆಯವರಿಗೆ ವಿಷಯ ತಿಳಿಸಿ ಶಾಲೆಗೆ ಹೋಗಲು ನಿರಾಕರಿಸಿದಳು. ಇವೆರಡೂ ಸಂಗತಿಗಳು ತಿಳಿದುಬಂದಾಗ ಶಾಲೆಯ ಅಧಿಕಾರಿ ವರ್ಗವು ತನಿಖೆ ನಡೆಸಿತು. ನೊಂದ ಬಾಲಕಿಯರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಘಟನೆ ನಡೆದದ್ದು ನಿಜವೆಂದು ತಿಳಿಯಿತು. ಸಿಟ್ಟಿಗೆದ್ದ ಜನರು ಬಹುದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಗಿಳಿದರು. ಮಹಾರಾಷ್ಟ್ರ ಮಾತ್ರವಲ್ಲದೆ ದೇಶದೆಲ್ಲಡೆಯ ಶಾಲೆಗಳಲ್ಲಿ ಹುಡುಗಿಯರ ರಕ್ಷಣೆ ಕುರಿತಂತೆ ಮತ್ತೆ ಎಚ್ಚರ ಮೂಡಿಸಿದ ಘಟನೆಯಿದು.

ಇವೆಲ್ಲ ಇತ್ತೀಚಿನ ಕೆಲ ದಿನಗಳಲ್ಲಿ ತಿಳಿದುಬಂದ ಲೈಂಗಿಕ ದೌರ್ಜನ್ಯದ ಪ್ರಕರಣಗಳು. ಆಯಾ ಘಟನೆಗೆ ಸಂಬಂಧಿಸಿದಂತೆ ಕೆಲ ವಿಶಿಷ್ಟ ಸಂಗತಿಗಳು ಹೊರಬಿದ್ದಿವೆ. ಕಾರ್ಕಳದ ಘಟನೆಯಲ್ಲಿ ದೌರ್ಜನ್ಯವೆಸಗಿದವನ ಜತೆ ಸಂತ್ರಸ್ತೆಯು ಇನ್ ಸ್ಟಾಗ್ರಾಮ್‌ನಲ್ಲಿ ಪರಿಚಿತಳೆಂದು ಹೇಳಲಾಗಿದ್ದರೆ, ರಾಯಭಾಗದ ಘಟನೆಯಲ್ಲಿ ದಾರಿಹೋಕ ಬೈಕ್ ಸವಾರನು ತನ್ನನ್ನು ಬೈಕ್ ಮೇಲೆ ಮನೆಗೆ ತಲುಪಿಸುವನೆಂಬ ಅನುಕೂಲಕ್ಕೆ ಬಾಲಕಿಯು ಬೈಕ್ ಏರಿದ್ದಾಗಿ ತಿಳಿದುಬಂದಿದೆ. ನಂಬಿಕೆ ಹುಟ್ಟಿಸಿ ಹೀಗೆ ದೌರ್ಜನ್ಯಗಳು ನಡೆದುಬಿಡುತ್ತವೆ! ಅವು ಸಾಮಾಜಿಕ ಜಾಲತಾಣದ್ದಿ ರಬಹುದು ಅಥವಾ ಇನ್ಯಾವುದೇ ಆಕರ್ಷಣೆಯ ಮೂಲದ್ದಿರಬಹುದು. ಹಾಗಾದರೆ, ನಂಬಿಕೆ ಅಥವಾ ಇನ್ನಾವುದೇ ನೆಲೆಯಲ್ಲಿ ಇನ್ನೊಬ್ಬರ ಹತ್ತಿರವಾಗುವುದು ತಪ್ಪೇ? ಸಾಮಾಜಿಕ ಜಾಲ ತಾಣದ ಮೂಲಕ ಉನ್ನತಿಗೆ, ಜನಪ್ರಿಯತೆಗೆ ಯತ್ನಿಸುವ ಮತ್ತು ಹೊಸದಾಗಿ ಪರಿಚಯವಾದವರ ಜತೆಗೆ ಸಲೀಸಾಗಿ ಸಂವಹನಕ್ಕೆ ಪ್ರೋತ್ಸಾಹ ಸಿಗುತ್ತಿರುವ ಸಮಾಜದಲ್ಲಿ, ಇನ್ನೊಬ್ಬರ ದುರುದ್ದೇಶದ ಅರ್ಥವಾಗುವುದಾದರೂ ಹೇಗೆ? ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಸಂಶಯ ಪ್ರವೃತ್ತಿಯಿಂದ ಕಾಣುತ್ತ, ಅದೇ ಪ್ರಕಾರದಲ್ಲಿ ನಡೆದುಕೊಳ್ಳಬೇಕೇ? ಹೆಣ್ಣು ಮಗುವನ್ನು ಪರಿಚಿತರ ಜತೆ ಒಮ್ಮೊಮ್ಮೆ ಬಿಟ್ಟುಹೋಗುವುದೂ ಸರಿಯಲ್ಲವೇ? ಲೈಂಗಿಕ ದೌರ್ಜನ್ಯದ ವಿಚಾರದಲ್ಲಿ ಅಪ್ರಾಪ್ತೆ ಮತ್ತು ವಯಸ್ಕಳ ಅತ್ಯಾಚಾರವನ್ನು ಬೇರೆಯಾಗಿ ನೋಡಬಹುದು.

ಎರಡೂ ಸಂದರ್ಭದಲ್ಲಿನ ಕೃತ್ಯವೂ ಹೀನಾಯವಾದದ್ದೇ. ಆದರೆ ವಯಸ್ಕಳು ತನ್ನ ಮೇಲಾದ ಅತ್ಯಾಚಾರವನ್ನು ತಿಳಿಯಬಲ್ಲಳು, ದೈಹಿಕವಾಗಿ ಹೇಗೋ ಅಹಿಸಿಕೊಳ್ಳಬಲ್ಲಳು; ಆದರೆ ಬಾಲೆಯೊಬ್ಬಳು ತನ್ನ ಮೇಲಾದ ದೌರ್ಜನ್ಯವನ್ನು ಅರಿಯುವ ಅಥವಾ ಸಹಿಸಿಕೊಳ್ಳುವ ಹಂತವನ್ನೂ ತಲುಪಿರುವುದಿಲ್ಲ. ಕ್ರೌರ್ಯದ ಬಲಿಪಶುವಾಗುವುದಷ್ಟೇ. ಎರಡೂ ಸಂದರ್ಭದಲ್ಲೂ ಕಾಣಬರುವುದು ಮೃಗೀಯ ಕ್ರಿಯೆಯೇ. ಇಲ್ಲಿ ಮನುಷ್ಯನಾಗಿ ಪಡುವ ಆನಂದವಿರುವುದೇ ಸಾಧ್ಯವಿಲ್ಲ. ಹಾಗಾದರೆ ಅತ್ಯಾಚಾರದಿಂದ ಯಾವ ಪುರುಷಾರ್ಥ ಸಿದ್ಧಿಯಾಗುವುದು? ದೌರ್ಜನ್ಯ ಎಸಗಿದವನು ಹೇಗೂ ಅಪರಾಧಿಕ ಶಿಕ್ಷೆಯ ನೋವನ್ನು ಅನುಭವಿಸಬೇಕು, ಲಜ್ಜಾಹೀನನಾಗಿ ಸಮಾಜದ ಎದುರು ತಲೆತಗ್ಗಿಸಬೇಕು, ಜೀವನದುದ್ದಕ್ಕೂ ಅಪಮಾನಿತನಾಗಬೇಕು.

ಅತ್ಯಾಚಾರದ ಸಂತ್ರಸ್ತೆಯು ಹಿಂಸೆಯಿಂದ ನರಳಬೇಕು, ತನಗಾದ ಅನ್ಯಾಯದ ನೆನಪಲ್ಲಿ ಕೊರಗುತ್ತ ಬದುಕಬೇಕು. ಇದೇ ಅಲ್ಲವೇ ಲೈಂಗಿಕ ಅಪರಾಧದ ಫಲಶ್ರುತಿ? ಲೈಂಗಿಕ ದೌರ್ಜನ್ಯ ದಂಥ ಕೃತ್ಯವು ಕ್ಷಣಿಕ, ಪರಿಣಾಮ ಮಾತ್ರ ಘೋರ ಮತ್ತು ನಿರಂತರವೆಂದು ತಿಳಿದೂ ಇಂಥ ದುಷ್ಕೃತ್ಯದಲ್ಲಿ ಏಕೆ ತೊಡಗುತ್ತಾರೋ ಎಂಬುದು ಅರ್ಥವಾಗದ ವಿಷಯ. ಸೈರಂಧಿಯನ್ನು ಬಲಾತ್ಕರಿಸಲು ಯತ್ನಿಸಿದ ಕೀಚಕನು ಭೀಮನಿಂದ ವಧೆಯಾಗಿ ಹೋದ. ಸೀತೆಗೆ ಉಪಟಳ ನೀಡಲು ಯತ್ನಿಸಿದ ರಾವಣನು ತನ್ನೊಂದಿಗೆ ತನ್ನ ರಾಕ್ಷಸ ಕುಲವೇ ನಾಶವಾಗುವುದಕ್ಕೆ ಕಾರಣ ನಾದ. ಇವರೆಲ್ಲ ಈ ವಿಚಾರದಲ್ಲಿ ಸದಾ ಕೆಟ್ಟವರಾಗಿಯೇ ಚರಿತ್ರೆಯ ಪುಟದಲ್ಲಿ ದಾಖಲಾದರು. ನಮ್ಮ ಭಾರತೀಯ ಸಂಸ್ಕೃತಿಯು ಲೈಂಗಿಕ ವಿಚಾರದಲ್ಲಿ ಪ್ರಶ್ನಾತೀತತೆಯನ್ನು ಆದರಿಸುತ್ತದೆ.

ಕಳಂಕರಾ ಹಿತ್ಯದ ಕುರಿತು ನಮ್ಮದೇ ಆದ ದೃಷ್ಟಿಕೋನ ಬೆಳೆದುಬಂದಿದೆ. ಲೈಂಗಿ ಅಪರಾಧವನ್ನು ಎಸಗಿರುವುದು ಸಾಬೀತಾದರೆ ಕೋಲ್ಕತ್ತಾದ ಸಂಜಯ್ ರಾಯ್ ಮತ್ತಿತರ ಎಲ್ಲ
ಅಪರಾಧಿಗಳೂ ತಮ್ಮ ಮುಖಕ್ಕೆ ಕಪ್ಪುಮಸಿ ಬಳಿದುಕೊಂಡು ಬದುಕಬೇಕಿರುವುದು ನಿಶ್ಚಯ. ಹಾಗಿರುವಾಗ ಇಂಥ ದೌರ್ಜನ್ಯ ಎಸಗುವುದೇಕೆ? ಲೈಂಗಿಕ ಆಕಾಂಕ್ಷೆಯ ಮತ್ತಿನಲ್ಲಿ ವ್ಯಕ್ತಿಯು ಕಿವುಡನೂ ಕುರುಡನೂ ಆಗಿಬಿಡುತ್ತಾನೆ ಎಂಬುದನ್ನು ಬಿಟ್ಟು ಬೇರೇನೂ ಕಾರಣ ಕಾಣಸಿಗುವುದಿಲ್ಲ. ಇಂಥವರ ಮಿದುಳಿನ ಅಧ್ಯಯನವನ್ನು ಸಾಕಷ್ಟು ಸಲ ಮಾಡಿ ಆಗಿದೆ. ಇಂಥ ಅತ್ಯಾಚಾರಿ ಗಳೆಲ್ಲರ ಮಿದುಳೂ ಹಪಹಪಿಸುವುದು ಲೈಂಗಿಕ ತೃಷೆಯ ಈಡೇರಿಕೆಗಷ್ಟೇ. ಒಬ್ಬೊಬ್ಬರ ಸನ್ನಿವೇಶ ಬೇರೆ ಬೇರೆ ಇರಬಹುದು. ಕೆಲವರಿಗೆ ಹಣ, ಅಧಿಕಾರದ ಮದ, ಅಹಂಕಾರದ ಮನಸ್ಥಿತಿ. ಇನ್ನು ಕೆಲವರಿಗೆ ಮದ್ಯ-ಮಾದಕವಸ್ತು ಇತ್ಯಾದಿ ವ್ಯಸನ, ಹತಾಶೆ. ಹೆಚ್ಚಿನ ಪ್ರಕರಣಗಳಲ್ಲಿ, ದೌರ್ಜನ್ಯ ಎಸಗಿದವರು ಅಲಕ್ಷಿತ ಕೌಟುಂಬಿಕೆ ಹಿನ್ನೆಲೆಯುಳ್ಳವರು. ಕೌಟುಂಬಿಕ ಪ್ರೀತಿ-ವಾತ್ಸಲ್ಯ ಗಳಿಂದ ದೂರವುಳಿದು ಬೇರೆ ಬೇರೆ ವ್ಯಸನಗಳಿಗೆ ಸಿಲುಕಿಕೊಂಡವರು.

ಇಂಥ ಸನ್ನಿವೇಶ ಮತ್ತು ತಪ್ಪುದಾರಿಗೆಳೆಯುವ ಸಂಗದಿಂದ ಪ್ರಭಾವಿತರಾದವರು. ಇಂದು ಸಾಮಾಜಿಕ ತಾಣಗಳಲ್ಲಿ ಲಭ್ಯವಿರುವ ಲೈಂಗಿಕ ವಿಕಾರ ಹುಟ್ಟಿಸುವ ಸರಕುಗಳೂ ಇಂಥ
ಮನಸ್ಥಿತಿಯವರನ್ನು ಕೆಟ್ಟ ಕೆಲಸ ಮಾಡುವಂತೆ ಪ್ರಚೋದಿಸಬಲ್ಲವಾಗಿವೆ. ಕೋಲ್ಕತ್ತಾ ದೌರ್ಜನ್ಯದ ಆರೋಪಿಯನ್ನುಳಿದಂತೆ ಇತ್ತೀಚಿನ ಉಳಿದೆಲ್ಲ ಘಟನೆಗಳ ಆರೋಪಿಗಳೂ ಹತಾಶೆಯಲ್ಲಿ
ಮತ್ತು ಅಡ್ಡದಾರಿಯಲ್ಲಿ ಸಿಲುಕಿದವರಂತೆ ಕಾಣಿಸುತ್ತಾರೆ. ಕೋಲ್ಕತ್ತಾ ಪ್ರಕರಣದ ಆರೋಪಿಯು ಶಿಕ್ಷಿತನಾಗಿದ್ದೂ, ಆತ ನಲ್ಲಿ ಪಶ್ಚಾತ್ತಾಪದ ಕುರುಹು ಕಂಡಿಲ್ಲ. ಇವರಲ್ಲಿ ಯಾರೂ ಭವಿಷ್ಯ ದಲ್ಲಿ ತಮಗೆ ಒದಗಬಹುದಾದ ಶಿಕ್ಷೆ ಅಥವಾ ಅಧಃಪತನದ ಬದುಕಿನ ಕುರಿತು ಯೋಚಿಸುತ್ತಿರುವಂತೆಯೂ ಕಾಣಿಸುತ್ತಿಲ್ಲ. ಅಷ್ಟು ಮೂಢಾತ್ಮರು, ಇಂಥ ನೀಚಕೃತ್ಯಕ್ಕೆ ಇಳಿಯುವವರು. ಲೈಂಗಿಕ ಅಪರಾಧಗಳನ್ನು ನಿಯಂತ್ರಿಸುವುದು ಹೇಗೆಂಬುದು ಒಂದು ದೊಡ್ಡ ಸವಾಲಿನ ವಿಚಾರ.

ಶಿಕ್ಷೆ ಮತ್ತು ಅಪಮಾನದ ಪರಿಣಾಮವನ್ನೂ ಧಿಕ್ಕರಿಸಿರುವ ಸಂಗತಿ ಇದಾದ್ದರಿಂದ, ಮನುಷ್ಯ ಈ ಕುರಿತು ಆರಂಭ ದಿಂದಲೇ ಶಿಕ್ಷಿತನಾಗುವುದು ಒಳ್ಳೆಯ ಪರಿಹಾರೋ ಯವಾಗ ಬಹುದು. ಲೈಂಗಿಕ ದೌರ್ಜನ್ಯಗಳು, ಅವುಗಳ ಕಾರಣ ಮತ್ತು ಗಂಭೀರ ಪರಿಣಾಮಗಳು ಮತ್ತು ಸುರಕ್ಷತೆಯ ಕುರಿತು, ಹಾಗೂ ಆ ಅಪರಾಧಕ್ಕೆ ಒದಗುವ ಕಠೋರ ಶಿಕ್ಷೆ ಮತ್ತು ಅವಮಾನದ ಬಗ್ಗೆ ಶಾಲಾ ಪಠ್ಯಗಳಲ್ಲೇ ಸೂಕ್ತ ಮಾಹಿತಿ ಗಳನ್ನು ನೀಡಿ ತಿಳಿವಳಿಕೆ ಹೆಚ್ಚಿಸುವುದು ಪರಿಣಾಮಕಾರಿ ಮಾರ್ಗವಾಗಬಲ್ಲದು. ಏಕೆಂದರೆ ವಿದ್ಯಾರ್ಥಿಗಳಿಗೆ ಚಿಕ್ಕಂದಿನಲ್ಲೇ ದಕ್ಕಿದ ಎಚ್ಚರವು ಬದುಕಿನುದ್ದಕ್ಕೂ ಮನಸ್ಸಿನಲ್ಲಿ ಉಳಿದುಕೊಂಡಿರುತ್ತದೆ. ಪ್ರಧಾನಿ ಮೋದಿಯವರು ಲೈಂಗಿಕ ದೌರ್ಜನ್ಯದ ವಿಚಾರವನ್ನು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಸ್ತಾಪಿಸಿದ್ದರ ಜತೆಗೆ ಇತ್ತೀಚೆಗೆ ಈ ಕುರಿತು
ಪದೇಪದೆ ದನಿಯೆತ್ತಿರುವುದು ಈ ಸಮಸ್ಯೆಯ ಗಂಭೀರತೆಯನ್ನು ತಿಳಿಸುವುದರ ಜತೆಗೆ, ಕಾನೂನು ಕ್ರಮಗಳು ಮತ್ತಷ್ಟು ಸಶಕ್ತವಾಗುವುದರ ಸೂಚಕವೂ ಆಗಿದೆ.

(ಲೇಖಕರು ಮುಂಬೈನ ಲಾಸಾ ಸೂಪರ್‌ಜೆನರಿಕ್ಸ್‌ನ
ನಿರ್ದೇಶಕರು)