ಶಶಾಂಕಣ
shashidhara.halady@gmail.com
ಇದನ್ನು ನಾನು ಕನಸಿನಲ್ಲೂ ನಿರೀಕ್ಷಿಸಿರಲಿಲ್ಲ. ಕರಾವಳಿಯ ಅಪ್ಪಟ ಗ್ರಾಮೀಣರು ಸಂಭ್ರಮದಿಂದ, ತಮ್ಮ ಬದುಕಿನ ಒಂದು ಭಾಗವೆಂದು ತಿಳಿದು ಭಾಗವಹಿ ಸುವ, ನಕ್ಕು ನಲಿಯುವ, ಅವರ ಅಸ್ಮಿತೆಯ ಭಾಗವೇ ಆಗಿರುವ ‘ಕಂಬಳ’ವು ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿ ನಲ್ಲಿ ನಡೆಯುತ್ತಿದೆ! ತುಸು ರಿಚುವಲ್ ಸ್ವರೂಪ ಹೊಂದಿರುವ, ಗ್ರಾಮೀಣ ದಿನಚರಿಯ ಭಾಗವಾಗಿ ರುವ ಕೋಣಗಳ ಕಂಬಳವು, ಐಟಿ ಕ್ಯಾಪಿಟಲ್‌ನಲ್ಲಿ ಆಯೋಜನೆಗೊಂಡಿರುವುದು ನಿಜಕ್ಕೂ ಅಚ್ಚರಿಯ ವಿಚಾರ, ಸಂಭ್ರಮ ಕೂಡ. ಕರಾವಳಿಯ ಜನಪದ ಕ್ರೀಡೆಯು ಘಟ್ಟವೇರಿ, ಬೆಂಗಳೂರನ್ನು ತಲುಪಿ, ಇಲ್ಲಿನ ‘ಆಧುನಿಕರನ್ನು’ ಬೆರಗುಗೊಳಿಸಲು ಸನ್ನದ್ಧವಾಗಿರುವ ಪರಿಯೇ ಒಂದು ಬೆರಗು!
ಕಂಬಳವು ಅಪ್ಪಟ ಗ್ರಾಮೀಣ ಕ್ರೀಡೆ; ಕಂಬಳದಲ್ಲಿ ಕೇವಲ ‘ಕೋಣಗಳನ್ನು ಓಡಿಸುವುದು’ ಮಾತ್ರವಲ್ಲ, ಆ ಉಲ್ಲಾಸಭರಿತ ಚಟುವಟಿಕೆಯಲ್ಲಿ ಹಲವು ಆಯಾಮ
ಗಳು ಅಡಗಿವೆ. ಅದೊಂದು ರಿಚುವಲ್ ಸ್ವರೂಪದ್ದು ಎಂದೆ; ಕಂಬಳಕ್ಕೆ ಆಧುನಿಕ ಸ್ಪರ್ಶ ದೊರಕುವ ಕೆಲವು ದಶಕಗಳ ಹಿಂದೆ ಅದು ಸಂಪೂರ್ಣ ಹಾಗೆಯೇ ಇತ್ತು.
ಕಂಬಳಕ್ಕೆ ೭೦೦ ವರ್ಷಗಳ ಇತಿಹಾಸವಿದೆ ಎಂದು ನಿನ್ನೆ ಗಣ್ಯರು ಹೇಳಿದ ವಿಚಾರ ವರದಿಯಾಗಿದೆ. ಕಂಬಳವು ಅದಕ್ಕೂ ಮುಂಚಿನಿಂದಲೇ ಜನಪ್ರಿಯವಾಗಿತ್ತು
ಎಂಬುದು ಸ್ಪಷ್ಟ. ಬಹುಶಃ ಕರಾವಳಿ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಆರಂಭಗೊಂಡಾಗಲೇ ಕಂಬಳವೂ ಆರಂಭಗೊಂಡಿರಬೇಕು, ಆ ಮೂಲಕ ಅದು ಒಂದು ಫಲ
ವಂತಿಕೆಯ ಆಚರಣೆಯಾಗಿಯೂ ರೂಪು ಗೊಂಡಿರಬೇಕು.
ಕೋಣಗಳು ಓಡಿದ ಕೆಸರುಗದ್ದೆ ಯಲ್ಲಿ ಬೀಜ ಬಿತ್ತುವ ಒಂದು ಫಲವಂತಿಕೆ ಚಟುವಟಿಕೆಯು ಕೃಷಿಗೆ ಪೂರಕ ಎನಿಸಿದರೆ, ಅದರ ಜತೆಯಲ್ಲೇ ಜನರ ಬದುಕಿನ
-ಲವಂತಿಕೆಗೂ ಕಂಬಳವು ಇಂಬು ಕೊಡುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಹಳ್ಳಿಹಳ್ಳಿಗಳಲ್ಲೂ ಕಂಬಳ ನಡೆಯುತ್ತಿದ್ದವು! ತಮ್ಮ ಊರಿನಲ್ಲಿ ಕಂಬಳ ನಡೆಸುವುದು
ಪ್ರತಿಷ್ಠೆಯ ವಿಷಯವೂ ಆಗಿತ್ತು. ಚಳಿಗಾಲದ ಆರಂಭ ದಲ್ಲಿ, ಎರಡನೆಯ ಬತ್ತದ ಬೆಳೆಯ ಬಿತ್ತನೆಗೆ, ನಾಟಿಗೆ ಪೂರಕವಾಗಿ ಕಂಬಳಗಳು ಆಯೋಜನೆಗೊಳ್ಳುತ್ತವೆ.
‘ಕಂಬಳಗದ್ದೆ’ಗಳಲ್ಲಿ ನಾಟಿಗೆ ಅಗತ್ಯವಾದ ಕೆಸರು ತುಂಬಿಸಲು ಕಂಬಳವೇ ಪ್ರಶಸ್ತ! ಕರಾವಳಿಯ ಕೆಲವು ಪ್ರದೇಶಗಳಲ್ಲಿ ಜೋಡುಕೆರೆ ಕಂಬಳಗಳು ಸ್ಪರ್ಧಾತ್ಮಕ
ಚಟುವಟಿಕೆ ಯಾಗಿದ್ದರೆ, ಇನ್ನು ಕೆಲವು ಭಾಗಗಳಲ್ಲಿ ಕೋಣಗಳ ನಡುವೆ ಸ್ಪರ್ಧೆ ಇಲ್ಲದಂಥ, ಕೇವಲ ಭಾಗವಹಿಸುವಿಕೆಯೇ ಮುಖ್ಯ ಎನಿಸುವ ಕಂಬಳ
ನಡೆಯುತ್ತದೆ.
ತಮ್ಮ ಮನೆಯ ಕೋಣಗಳನ್ನು ಕಂಬಳ ಗದ್ದೆಯಲ್ಲಿ ಒಂದು ಸುತ್ತು ನಡೆಸಿಕೊಂಡು ಬರುತ್ತೇನೆ ಎಂದು ‘ಹರಕೆ’ ಹೊರುವ ಕೃಷಿಕರು ನೂರಾರು. ಆ ರೀತಿ
ಕಂಬಳದ ದಿನ ಆ ಕೆಸರುಗದ್ದೆಯಲ್ಲಿ ತಮ್ಮ ಕೋಣ ಗಳನ್ನು ನಡೆಸಿಕೊಂಡು ಬಂದರೆ, ಅವುಗಳಿಗೆ ಯಾವುದೇ ರೀತಿಯ ರೋಗ ಬರುವುದಿಲ್ಲ ಎಂಬ ನಂಬಿಕೆ. ಈ
ಹರಕೆಯು, ದೇವರಿಗೆ ಹೊರುವ ಹರಕೆಯ ಸಮಾನ ಸ್ವರೂಪಿ! ಕಂಬಳವು ಗ್ರಾಮೀಣರ ಬದುಕಿನೊಂದಿಗೆ ಹೇಗೆ ತಳುಕು ಹಾಕಿಕೊಂಡಿದೆ ಎಂಬುದಕ್ಕೆ ಇದು ಒಂದು ಪುಟ್ಟ ಉದಾಹರಣೆ ಮಾತ್ರ; ಇಂಥ ಹಲವು ಆಚರಣೆ, ನಂಬಿಕೆ, ಪದ್ಧತಿ, ಭಕ್ತಿ ಎಲ್ಲವೂ ‘ಕಂಬಳ’ದಲ್ಲಿ ಅಡಗಿದೆ.
ನಮ್ಮ ಹಳ್ಳಿಯಲ್ಲಿ, ನಮ್ಮ ಮನೆಯ ಹತ್ತಿರವೇ ಎರಡು ಕಂಬಳಗದ್ದೆಗಳಿವೆ! ಮನೆ ಎದುರಿನ ಎರಡು ಪುಟ್ಟ ಗದ್ದೆಗಳನ್ನು ಹಾದು ನಡೆದರೆ ದೊರಕುವುದೇ ವಿಶಾಲ
ವಾದ ‘ಕಂಬಳಗದ್ದೆ’. ಅದನ್ನು ಎಲ್ಲರೂ ಕರೆಯುವುದು ‘ಕಂಬಳಗದ್ದೆ’ ಎಂದೇ. ಆ ಗದ್ದೆಯ ಅಂಚಿನ ಗಾತ್ರವೇ ಭರ್ಜರಿ; ಅಗಲವಾದ, ಎತ್ತರ ವಾದ ಅದರ ಅಂಚಿನ
ಮೇಲೆ ನಾನು ಹಿಂದೆ ಸೈಕಲ್ ಹೊಡೆದದ್ದುಂಟು. ಈಗ ಅದನ್ನೇ ವಿಸ್ತರಿಸಿ, ಕಾರು ಚಲಿಸುವಷ್ಟು ರಸ್ತೆಯನ್ನೇ ನಿರ್ಮಿಸಿದ್ದಾರೆ.
ಇನ್ನೊಂದು ಕಂಬಳಗದ್ದೆಯು ನಮ್ಮ ಮನೆಯ ಎದುರಿನ ಉದ್ದನೆಯ ಬೈಲಿನ ಮಧ್ಯೆ, ನಮ್ಮ ಮನೆಯಿಂದ ಸುಮಾರು ಒಂದು ಫರ್ಲಾಂಗ್ ದೂರ ದಲ್ಲಿದೆ.
ಆ ಕಂಬಳಗದ್ದೆಯ ಅಂಚು ಸಹ ಅಗಲ ವಾಗಿದೆ. ಅದಕ್ಕೆ ‘ಗುಳಿನ ಬೈಲು ಕಂಬಳಗದ್ದೆ’ ಎಂಬ ಹೆಸರು. ಈ ಎರಡೂ ಕಂಬಳಗದ್ದೆಗಳು ಆರೆಂಟು ಎಕರೆ ವಿಶಾಲವಾಗಿವೆ. ಸುಮಾರು ೪೦೦ ವರ್ಷಗಳ ಹಿಂದೆ ನಮ್ಮ ಹಳ್ಳಿಯಲ್ಲಿ ಪಾಳೆಗಾರನಾಗಿದ್ದು, ಕೋಟೆ ಕಟ್ಟಿಕೊಂಡಿದ್ದ ಮುದ್ದಳ ರಾಜ ಎಂಬಾತನ ಕಾಲದಲ್ಲಿ ಈ ಎರಡೂ ಕಂಬಳ ಗದ್ದೆಗಳು ರೂಪು ಗೊಂಡಿರಬೇಕು; ಬಹು ಹಿಂದೆಯೇ ಅಲ್ಲಿ ಕಂಬಳ ನಡೆಯುವುದು ನಿಂತುಹೋಗಿತ್ತು- ಬಹುಶಃ ಮುದ್ದಳರಾಜನ ಪಾಳೆಗಾರಿಕೆ ಅವನತಿ ಕಂಡ ನಂತರ, ಅವನ ಆಶ್ರಯದಲ್ಲಿ ನಡೆಯುತ್ತಿದ್ದ ಕಂಬಳವೂ ನಿಂತುಹೋಗಿರಬಹುದು. ಹಿಂದೆ ಅಲ್ಲಿ ಕಂಬಳ ನಡೆಯುತ್ತಿದ್ದುದಕ್ಕೆ ಪುರಾವೆಯೇ ‘ಕಂಬಳ ಗದ್ದೆ’ ಎಂಬ ಹೆಸರು.
ನಮ್ಮ ಮನೆ ಎದುರು ನಿಂತರೆ ಕಾಣಿಸುವ ಈ ಎರಡೂ ಕಂಬಳಗದ್ದೆಗಳು ಈಗ ಹೆಸರಿಗೆ ಮಾತ್ರ ಕಂಬಳಗದ್ದೆಗಳು; ನಿಜವಾಗಿ ಕಂಬಳ ನಡೆಯುವ ಎರಡು ಕಂಬಳಗದ್ದೆಗಳು ನಮ್ಮ ಮನೆಯಿಂದ ಕಾಲ್ನಡಿಗೆಯಷ್ಟು ದೂರದಲ್ಲಿವೆ; ದಕ್ಷಿಣ ದಿಕ್ಕಿಗೆ ೩ ಕಿ.ಮೀ. ನಡೆದರೆ ‘ಚೋರಾಡಿ’ ಎಂಬ ಸ್ಥಳದಲ್ಲಿರುವ ಕಂಬಳಗದ್ದೆ ಸಿಗುತ್ತದೆ. ಅಲ್ಲಿಂದ ಇನ್ನೂ ೫ ಕಿ.ಮೀ. ನಡೆದರೆ, ಹೆಚ್ಚು ಪ್ರಸಿದ್ಧ ಎನಿಸಿರುವ ‘ವಂಡಾರು’ ಎಂಬಲ್ಲಿನ ಕಂಬಳಗದ್ದೆ ಸಿಗುತ್ತದೆ. ಈ ಎರಡೂ ಕಂಬಳಗದ್ದೆಗಳಲ್ಲಿ ಕೋಣಗಳ ಕಂಬಳ ಬಹಳ ವಿಜೃಂಭಣೆಯಿಂದ ನಡೆಯುತ್ತಿತ್ತು, ಈಗಲೂ ನಡೆಯುತ್ತಿದೆ. ಚಳಿಗಾಲದ ಆರಂಭದಲ್ಲಿ ನಡೆಯುವ ಈ ಎರಡೂ ಕಂಬಳಗಳು ಕೆಲವು ದಿನಗಳ ಅಂತರದಲ್ಲಿ ನಡೆಯುತ್ತವೆ; ಎರಡೂ ಊರಿನವರು ಪರಸ್ಪರ ಸಮಾಲೋಚನೆಯ ನಂತರ ಕಂಬಳದ ದಿನ ನಿರ್ಧರಿಸಿ, ಆಸಕ್ತ ಕೃಷಿಕರೆಲ್ಲರೂ ಎರಡೂ ಕಂಬಳಗಳಿಗೆ ಬರಲು ಅನುವು ಮಾಡಿಕೊಡುತ್ತಾರೆ.
ಇವೆರಡು ಕಂಬಳಗಳ ಪೈಕಿ ಚೋರಾಡಿ ಕಂಬಳವು ತುಸು ಸರಳ; ನಮ್ಮ ಪ್ರದೇಶದಲ್ಲಿ ಕಂಬಳ ಎಂದರೆ ಕೇವಲ ಕೋಣಗಳನ್ನು ಓಡಿಸುವುದು ಮಾತ್ರವಲ್ಲ. ಆ
ಉಲ್ಲಾಸಭರಿತ ಕ್ರೀಡೆಯ ಜತೆಯಲ್ಲೇ, ಕೃಷಿ, ಹೊಸ ಜೋಡಿಗಳ ಪ್ರವಾಸ, ನಾಟಿ ವೈದ್ಯ, ಹರಕೆ, ಸಂತೆ, ಜಾತ್ರೆ, ಮನರಂಜನೆ ಎಲ್ಲವೂ ಸೇರಿವೆ. ಚೋರಾಡಿ
ಕಂಬಳದಲ್ಲಿ ನಾಟಿವೈದ್ಯದ ಅನುಭವ ವನ್ನು ನಾನೊಮ್ಮೆ ಪಡೆದದ್ದುಂಟು! ಆಗಿನ್ನೂ ನಾಲ್ಕನೆಯ ತರಗತಿಯಲ್ಲಿದ್ದೆ; ನನ್ನ ಭುಜದ ಬಳಿ ಸಿಬ್ಬು (ಚಿಬ್ಬು) ಎಂಬ ಚರ್ಮದ ಸಮಸ್ಯೆ ಕಾಣಿಸಿತು. ನಮ್ಮ ಹಳ್ಳಿಯ ೨೫ ಕಿ.ಮೀ. ಫಸಲೆಯಲ್ಲಿ ಚರ್ಮ ರೋಗದ ವೈದ್ಯರು ಇರಲಿಲ್ಲ; ಆಗೆಲ್ಲಾ ಇಂಥ ಪುಟ್ಟ ಸಮಸ್ಯೆಗಳಿಗೆ ವೈದ್ಯರನ್ನು ಕಾಣುವ ಪರಿಪಾಠವೂ ಇರಲಿಲ್ಲ ಬಿಡಿ.
ಸರಿ, ಚರ್ಮದ ಸಿಬ್ಬು ವಾಸಿ ಮಾಡಲು ಏನು ಮಾಡುವುದು? ಎಂದು ಯೋಚನೆ ಯಾದಾಗ, ಚೋರಾಡಿ ಕಂಬಳಗದ್ದೆಯ ಸುತ್ತಲೂ ಅಕ್ಕಿಯನ್ನು ಚೆಲ್ಲುವ ‘ಹರಕೆ’ಯನ್ನು ನಮ್ಮ ಅಮ್ಮಮ್ಮ ಹೊತ್ತುಕೊಂಡರು. ಅದು ನನ್ನ ಪರವಾಗಿ ಹೊತ್ತುಕೊಂಡ ಹರಕೆಯಾದ್ದರಿಂದ, ಅದನ್ನು ತೀರಿಸುವ ಕೆಲಸವು ನನ್ನದೇ ತಾನೆ! ಅದಕ್ಕೆಂದು, ಒಂದು ದಿನ ಬೆಳಗ್ಗೆ ಒಂದು ಪುಟ್ಟ ಕೈಚೀಲದಲ್ಲಿ ಅರ್ಧ ಸೇರು ಬೆಳ್ತಿಗೆ ಅಕ್ಕಿಯನ್ನು ಹಾಕಿಕೊಂಡು, ರಾಧಾಬಾಯಿ ಎಂಬ ಕೃಷಿಕ ಮಹಿಳೆಯ ಜತೆ ಹೊರಟೆ.
ಮನೆ ಹಿಂದಿನ ಸೊಪ್ಪಿನಅಣೆ ಎಂಬ ಹಸಿರು ತುಂಬಿದ ಬೆಟ್ಟದ ಅಂಚಿನಲ್ಲೇ, ಕಾಡಿನ ನಡುವೆ ಸಾಗುವ ಕಾಲ್ದಾರಿ ಹಿಡಿದು, ಮುಕ್ಕಾಲು ಗಂಟೆ ನಡೆದಾಗ ಚೋರಾಡಿ ಬೈಲು ಸಿಕ್ಕಿತು. ಅಲ್ಲಿನ ಕಂಬಳಗದ್ದೆಯ ತುಂಬಾ ನೀರು ತುಂಬಿಸಿ, ಕೆಸರು ಮಾಡಿದ್ದರು- ಮರುದಿನ ನಾಟಿ ಆಗಬೇಕು. ಕಂಬಳ ಗದ್ದೆಯಲ್ಲಿ ನಡೆಯಲು, ಓಡಲು
ಹಲವಾರು ಕೋಣಗಳು ಅಲ್ಲಲ್ಲಿ ನಿಂತಿದ್ದವು, ಅವುಗಳ ಮಾಲೀಕ ರಿಗೆ ಅಪಾರ ಉತ್ಸಾಹ. ತಮ್ಮ ತಮ್ಮ ಕೋಣಗಳ ಮೈ ತೊಳೆದು, ಎಣ್ಣೆ ಹಚ್ಚಿ, ಕೈಲಾದಂತೆ ಸಿಂಗರಿಸಿ, ಸ್ನೇಹಿತರಿಗೆ ಅವನ್ನು ತೋರಿಸುತ್ತಿದ್ದರು. ಬಿಸಿಲಿನ್ನೂ ಏರಿರಲಿಲ್ಲ. ಮಧ್ಯಾಹ್ನದ ನಂತರ ಇನ್ನಷ್ಟು ಕೋಣ ಗಳು ಬರುತ್ತವೆ ಎಂದರು. ಕಂಬಳಗದ್ದೆಯ ಸುತ್ತಲೂ ಆಗಲವಾದ ಅಂಚು ಇತ್ತು; ಅದರ ಮೇಲೆ ನಡೆ ಯುತ್ತಾ ಗದ್ದೆಗೆ ಒಂದು ಸುತ್ತು ಪ್ರದಕ್ಷಿಣೆ ಬರಬೇಕು.
ಆ ರೀತಿ ನಡೆಯುವಾಗ, ಕೈಚೀಲದಲ್ಲಿ ತಂದಿದ್ದ ಅಕ್ಕಿಯನ್ನು ಗದ್ದೆಯ ಅಂಚಿನ ಮೇಲೆ ಚೆಲ್ಲುತ್ತಾ ಹೋಗುವುದು- ರಂಗೋಲಿ ಬಿಟ್ಟಂತೆ! ನನ್ನ ರೀತಿಯೇ ಕೆಲವು ಜನರು ಗದ್ದೆಯ ಅಂಚಿನುದ್ದಕ್ಕೂ ಅಕ್ಕಿಯನ್ನು ಹಾಕುತ್ತಾ ಸಾಗಿದ್ದರು- ‘ಇವರೆಲ್ಲ ರಿಗೂ ಸಿಬ್ಬು ಇರಬೇಕು, ಅದಕ್ಕೇ ಅಕ್ಕಿ ಚೆಲ್ಲುತ್ತಿದ್ದಾರೆ’ ಎಂದಳು ನನ್ನ ಜತೆ ಬಂದಿದ್ದ ರಾಧಾ ಬಾಯಿ. ಸುಮಾರು ಅರ್ಧ ಕಿ.ಮೀ. ಇರಬಹು ದಾದ ಗದ್ದೆಯಂಚಿನುದ್ದಕ್ಕೂ ಅಕ್ಕಿ ಚೆಲ್ಲಿ, ಕಂಬಳ ಗದ್ದೆಗೆ ಒಂದು ಪ್ರದಕ್ಷಿಣೆ ಬಂದು, ಬೆಂಡು ಬತ್ತಾಸು ಖರೀದಿಸಿ, ನಾನು ಮನೆಗೆ ವಾಪಸಾದೆ. ಗದ್ದೆ ಯುದ್ದಕ್ಕೂ ಅಕ್ಕಿ ಚೆಲ್ಲುವುದು ಏತಕ್ಕೆ ಎಂದು ನನಗೆ ಸ್ಪಷ್ಟವಾಗಿ ತಿಳಿವಳಿಕೆ ಆಗ ಇರಲಿಲ್ಲ. ನಂತರ ಗೊತ್ತಾ
ಯಿತು- ಅದೊಂದು ರಿಚುವಲ್- ತೀರ್ಥಹಳ್ಳಿ ಹತ್ತಿರದ ತುಂಗಾನದಿ ತಟದ ಚಿಬ್ಬಲುಗುಡ್ಡೆಯಲ್ಲಿ ಮೀನುಗಳಿಗೆ ಮಂಡಕ್ಕಿ ಹಾಕುವುದು, ಕೋಟೇಶ್ವರ ಕೆರೆಯ ಸುತ್ತಲೂ ಜಾತ್ರೆಯ ದಿನ ಅಕ್ಕಿಯನ್ನು ಚೆಲ್ಲುವುದು, ಇತರ ಕಂಬಳಗದ್ದೆಗಳ ಅಂಚಿನುದ್ದಕ್ಕೂ ಅಕ್ಕಿ ಹಾಕುವುದು- ಎಲ್ಲವೂ ಜಲಚರಗಳಿಗೆ ಆಹಾರ ನೀಡುವ ಪರಿಕ್ರಮ. ಆ ಮೂಲಕ, ಚರ್ಮರೋಗ ವನ್ನು ವಾಸಿ ಮಾಡುವ ಪ್ರಯತ್ನದ ಭಾಗವಾದ ಒಂದು ಮುಷ್ಠ. ಗದ್ದೆಯ ಅಂಚಿನ ಮೇಲೆ ಅಕ್ಕಿ ಚೆಲ್ಲಿದರೆ, ಜಲಚರ ಗಳಿಗೆ ತೃಪ್ತಿಯಾದೀತೆ ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಬಹುದು. ಇದಕ್ಕೆ ಸ್ಪಷ್ಟತೆ ಸಿಗಬೇಕಾದರೆ, ಚೋರಾಡಿ ಯಿಂದ ೫ ಕಿ.ಮೀ. ದೂರದ ವಂಡಾರು ಕಂಬಳಕ್ಕೆ
ಹೋಗಬೇಕು. ಇಲ್ಲಿನ ಕಂಬಳವು ಹೆಚ್ಚು ವಿಜೃಂಭಣೆ ಯಿಂದ ನಡೆಯುವ ಕೃಷಿಕರ ಕ್ರೀಡಾ ಕೂಟ!
ಕಂಬಳದ ಹಿಂದಿನ ರಾತ್ರಿಯೇ ನಮ್ಮ ಹಳ್ಳಿಯ ಗುಂಟ ಸಾಗುವ ಕಚ್ಚಾರಸ್ತೆಯಲ್ಲಿ ಡೋಲು ಬಡಿಯುತ್ತಾ ಕೋಣಗಳನ್ನು ಓಡಿಸಿಕೊಂಡು ಹೋಗುವ ಉತ್ಸಾಹಿಗಳ ಕೇಕೆಗಳು ಕೇಳುತ್ತವೆ. ವಂಡಾರು ಕಂಬಳವೆಂದರೆ, ಉಡುಪಿ ಜಿಲ್ಲೆಯಲ್ಲೇ ಪ್ರಸಿದ್ಧ, ಅಂದೂ, ಇಂದೂ. ವಂಡಾರು ಕಂಬಳಗದ್ದೆಯು ವಿಶಾಲವಾದ, ಚೌಕಾಕಾರದ ನಿರ್ಮಿತಿ. ವಂಡಾರು ಕಂಬಳದ ದಿನ ಆ ವಿಶಾಲ ಗದ್ದೆಯಲ್ಲಿ ತಮ್ಮ ಕೋಣಗಳನ್ನು ಒಂದೆರಡು ಸುತ್ತು ಹಾಕಿಸುವುದು ಎಲ್ಲಾ ಕೃಷಿಕರ ಕನಸು, ಪ್ರತಿಷ್ಠೆಯ
ವಿಚಾರ. ಇಲ್ಲಿ ಕೋಣಗಳ ನಡುವೆ ಸ್ಪರ್ಧೆ ನಡೆಯು ವುದು ವಿರಳ. ಬದಲಿಗೆ, ಗದ್ದೆಯ ಉದ್ದಕ್ಕೂ ಓಡಿಸುವ ಪದ್ಧತಿ ಇದೆ. ಎಲ್ಲರೂ ತಮ್ಮ ಕೋಣಗಳನ್ನು ಓಡಿಸಿದ
ನಂತರ, ಗದ್ದೆಯ ಯಜಮಾನರ ಕೋಣಗಳು ಹೆಚ್ಚು ಹುರುಪಿನಿಂದ ಓಡುತ್ತವೆ. ಗದ್ದೆಯ ಮಧ್ಯೆ ಎತ್ತರವಾಗಿ ಕಟ್ಟಿರುವ ನಿಶಾನೆಗೆ ಓಟದ ಕೋಣಗಳು ಕೆಸರನ್ನು ಹಾರಿ ಸುವುದನ್ನು ನೋಡಲು ನೂರಾರು ಜನರು ಕಾಯುತ್ತಾರೆ. ಸುತ್ತಲಿನ ಕೃಷಿಕ ಕುಟುಂಬಗಳಲ್ಲಿ ಆ ವರ್ಷ ಮದುವೆ ಯಾಗಿದ್ದರೆ, ದಂಪತಿಯು ವಂಡಾರು ಕಂಬಳವನ್ನು ನೋಡಲೇಬೇಕು ಎಂಬ ಅಲಿಖಿತ ನಿಯಮವಿದೆ; ಅದೇ ರೀತಿ ಕೋಟೇಶ್ವರದ ಜಾತ್ರೆಯಲ್ಲಿ ಸಹ ನವ ದಂಪತಿಗಳು ಭಾಗವಹಿಸಬೇಕು ಎಂಬ ಸಂಪ್ರದಾಯ.
ವಂಡಾರು ಕಂಬಳ ಮತ್ತು ಕೋಟೇಶ್ವರ ಜಾತ್ರೆಗಳು ಒಂದೆರಡು ವಾರಗಳ ಅಂತರದಲ್ಲಿ ಬರುತ್ತವೆ. ವಂಡಾರಿನಲ್ಲೂ ಗದ್ದೆಯ ಅಂಚಿನುದ್ದಕ್ಕೂ ಅಕ್ಕಿಯನ್ನು ಚೆಲ್ಲಿ, ಹರಕೆ ತೀರಿಸುವವರನ್ನು ಕಾಣ ಬಹುದು. ಸ್ವಾರಸ್ಯಕರ ಐತಿಹ್ಯವೇನೆಂದರೆ, ವಿಶಾಲ ವಾದ ವಂಡಾರು ಕಂಬಳವು ಬಹಳ ಹಿಂದೆ ಕೆರೆ ಯಾಗಿತ್ತಂತೆ! ಅಲ್ಲಿಂದ
ಕೋಟೇಶ್ವರ ಕೆರೆಗೆ (ಸುಮಾರು ೨೫ ಕಿ.ಮೀ.) ಸುರಂಗ ಮಾರ್ಗವಿದೆ ಯಂತೆ; ವಂಡಾರು ಕಂಬಳದ ದಿನ ಕೋಟೇಶ್ವರ ಕೆರೆಯ ಒಂದು ಭಾಗದ ನೀರಿನಲ್ಲಿ ಕೆಸರಿನ ಅಂಶ ವಿರುತ್ತದಂತೆ; ಪುರಾತನ ಕಾಲದಲ್ಲಿ ಈ ಸುರಂಗ ವನ್ನು ನಿರ್ಮಿಸಲಾಯಿತೆಂಬ ಐತಿಹ್ಯ. ವಂಡಾರು ಕಂಬಳ ಗದ್ದೆಯಲ್ಲಿ ಹಿಂದೆ ಜಲಚರಗಳಿದ್ದು, ಅವಕ್ಕೆ ಅಕ್ಕಿ ತಿನ್ನಿಸಿ ತೃಪ್ತಿಪಡಿಸುವ ಮೂಲಕ, ಚಿಬ್ಬನ್ನು ವಾಸಿ ಮಾಡಿ ಕೊಳ್ಳುವ ಗ್ರಾಮೀಣರ ನಂಬಿಕೆಯು, ನಮ್ಮ ದೇಶದಾದ್ಯಂತ ಜಲಚರಗಳಿಗೆ ಅಕ್ಕಿ, ಮುಂಡಕ್ಕಿ ಮೊದಲಾದವನ್ನು ತಿನ್ನಿಸುವ ಪದ್ದತಿಗೆ ಹೋಲುತ್ತದೆ. ಉತ್ತರ ಭಾರತದ ಕೆರೆ ಗಳಲ್ಲೂ ಮೀನುಗಳಿಗೆ ಮುಂಡಕ್ಕಿ ತಿನ್ನಿಸುವ ಪದ್ಧತಿ ಇರು
ವುದನ್ನು ಕಂಡಾಗ, ಸಿಬ್ಬು ದೂರಮಾಡುವ ಈ ರಿಚುವಲ್ ಅಥವಾ ‘ಮುಷ್ಠ’ವು ಕೃಷಿ ಪದ್ಧತಿ ಆರಂಭ ವಾದಾಗ ಅಥವಾ ಅದಕ್ಕೂ ಮುಂಚೆಯೇ ರೂಪು
ಗೊಂಡಿರಬೇಕು ಎನಿ ಸುತ್ತದೆ.
ವಂಡಾರು ಕಂಬಳ ಗದ್ದೆಗೂ, ಕೋಟೇಶ್ವರ ಕೆರೆಗೂ ಸಂಪರ್ಕ ಇದೆ ಎಂಬ ಐತಿಹ್ಯವು ಬಹಳ ಕುತೂಹಲಕಾರಿ; ಇದು ಕೇವಲ ಐತಿಹ್ಯವೇ ಅಥವಾ ಇದರಲ್ಲಿ ತಥ್ಯದ ಎಳೆ ಇದೆಯೇ ಎಂಬುದನ್ನು ಸಂಶೋಧಕರು ಪತ್ತೆಮಾಡಬಹುದು! ವಂಡಾರು ಕಂಬಳಗದ್ದೆಯ ಪಕ್ಕದಲ್ಲೇ ಇರುವ ಬಾವಿಯೊಂದರಲ್ಲಿ ಇದೆ ಎಂಬ ಐತಿಹ್ಯ ಹೊಂದಿರುವ ‘ನೆಗಳ’ ಎಂಬ ಮೊಸಳೆ ಪ್ರಭೇದದ ಜೀವಿಯ ಕಥೆಯೂ ಸಾಕಷ್ಟು ಸ್ವಾರಸ್ಯಕರ. ಕಂಬಳದ ದಿನ ನೆಗಳನಿಗೆ ಆಹಾರ ನೀಡುವ ಪದ್ಧತಿ ಇಂದಿಗೂ ಮುಂದುವರಿದಿದೆ.ಕರಾವಳಿ ಜನರ ಅತಿ ಉತ್ಸಾಹದ ಕಂಬಳದ ಕುರಿತು ನೆನಪಿಸಿಕೊಳ್ಳುತ್ತಾ ಹೋದಂತೆ, ಇಷ್ಟೆಲ್ಲಾ ವಿಚಾರಗಳು ಮೂಡಿಬಂದವು.
ಜೋಡುಕೆರೆ ಕಂಬಳ ಗಳಲ್ಲಿ ಎರಡು ಕೋಣಗಳನ್ನು ಸಮಾನಾಂತರವಾಗಿ ಓಡಿಸಿ, ಸ್ಪರ್ಧೆ ಏರ್ಪಡಿಸಿ, ಯಾವ ಕೋಣ ಗೆದ್ದಿತು ಎಂದು ನಿರ್ಧರಿಸು
ವುದರಿಂದಾಗಿ, ಈಗ ಇದಕ್ಕೆ ಕ್ರೀಡೆಯ ಸ್ವರೂಪ ಬಂದಿದೆ. ಇಂದಿನ ದಿನಗಳಲ್ಲಿ, ಆಧುನಿಕ ಉಪಕರಣಗಳನ್ನು ಬಳಸಿ, ಯಾವ ಕೋಣ ಎಷ್ಟು ಸೆಕೆಂಡುಗಳಲ್ಲಿ ತನ್ನ ಗುರಿ ಯನ್ನು ಮುಟ್ಟಿತು ಎಂದು ನಿಖರವಾಗಿ ನಿರ್ಧರಿಸುವ ವಿಧಾನವೂ ಜನಪ್ರಿಯವಾಗಿದ್ದು, ಕಂಬಳ ಎಂಬ ಕ್ರೀಡೆಗೆ ಇನ್ನಷ್ಟು ರೋಚಕತೆಯನ್ನು ತುಂಬಿದೆ. ಕಂಬಳದ ಕೋಣದ ಬಾಲವನ್ನು ಹಿಡಿದು ಓಡುವ ಓಟ ಗಾರರು, ವಿಶ್ವದ ಪ್ರಸಿದ್ಧ ಓಟಗಾರರಷ್ಟೇ ವೇಗವಾಗಿ ಓಡಬಲ್ಲರು ಎಂಬ ಪ್ರಚಾರವು ಸಹ ಕಂಬಳಕ್ಕೆ ಇನ್ನಷ್ಟು ಮೆರುಗನ್ನು ತುಂಬಿದೆ.
ಅಪ್ಪಟ ಗ್ರಾಮೀಣರ ಸಾಂಪ್ರದಾಯಿಕ ಮತ್ತು ರಿಚು ವಲಿಸ್ಟಿಕ್ ಓಟವಾಗಿದ್ದ ಕಂಬಳವು ಆಧುನಿಕ ಸ್ಪರ್ಶವನ್ನು ಪಡೆದು, ಬೆಂಗಳೂರಿನಂಥ ಆಧುನಿಕ ನಗರಕ್ಕೆ
ಬಂದಿರುವುದು ಈ ಕಾಲಮಾನದ ಅಚ್ಚರಿ. ಹಳ್ಳಿಯಿಂದ ನಗರಕ್ಕೆ ಕಂಬಳವನ್ನು ತಂದಿರುವ ಈ ವಿದ್ಯಮಾನದ ಕುರಿತು ಸಣ್ಣಪುಟ್ಟ ಅಪಸ್ವರಗಳು ಕೇಳಿಬಂದಿ ದ್ದರೂ, ಇದರ ಹಿಂದೆ ತುಂಬಿರುವ ಉಲ್ಲಾಸ, ಸಂತಸವನ್ನು ಗುರುತಿಸಿ, ಆನಂದಿಸೋಣ; ಬೆಂಗಳೂರಿಗೆ ಬಂದ ಕಂಬಳದ ಕೋಣಗಳಿಗೆ, ಅವುಗಳನ್ನು ಓಡಿಸುವವರಿಗೆ, ಕೋಣಗಳ ಮಾಲೀಕರಿಗೆ ಸ್ವಾಗತವನ್ನು ಬಯಸೋಣ!