Tuesday, 10th September 2024

ಅದನ್ನೆಲ್ಲ ಬಿಚ್ಚಿಟ್ಟು ಸಮವಸ್ತ್ರ ಧರಿಸಬೇಕು !

ವಿದೇಶವಾಸಿ

dhyapaa@gmail.com

ವಿದೇಶವಾಸಿ: ಏನು ಸ್ವಾಮೀ, ಕಂಗನಾ ರನೌತ್‌ಗೆ ಯಾರೋ ಕಪಾಳಕ್ಕೆ ಹೊಡೆದರಂತೆ? ಏನು ಕತೆ?

ದೇಶವಾಸಿ: ಅದಾ? ಮೊನ್ನೆ ಮೊನ್ನೆಯಷ್ಟೇ ನಡೆದ ಲೋಕಸಭೆ ಚುನಾವಣೆಯ ಫಲಿತಾಂಶ ಬಂತಲ್ಲ, ಆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಕಂಗನಾ ಕೂಡ ಸ್ಪರ್ಧಿಸಿದ್ದಳು. ಸುಮಾರು ಐದೂವರೆ ಲಕ್ಷ ಮತ ಪಡೆದು ಪ್ರತಿಸ್ಪರ್ಧಿಯನ್ನು ಎಪ್ಪತ್ತೈದು ಸಾವಿರ ಮತಗಳ ಅಂತರದಿಂದ ಸೋಲಿಸಿ ಗೆದ್ದುಬಂದಳು. ನರೇಂದ್ರ ಮೋದಿಯವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭದಲ್ಲಿ ಭಾಗಿಯಾಗಲು ದೆಹಲಿಗೆ ಹೊರಟಿದ್ದಳು. ಚಂಡೀಗಢದ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಗಳು ತಪಾಸಣೆ ನಡೆಸಬೇಕಿತ್ತು. ಆ ಸಂದರ್ಭದಲ್ಲಿ ಕುಲ್ವಿಂದರ್ ಕೌರ್
ಎಂಬಾಕೆ ಕಂಗನಾಳ ಕೆನ್ನೆಗೆ ಹೊಡೆದಿರ್ಧಿಳೆ ಎಂಬ ಆರೋಪವಿದೆ.

ವಿದೇಶವಾಸಿ: ಕೇವಲ ಆರೋಪ ಮಾತ್ರವೇ?
ದೇಶವಾಸಿ: ಬರೀ ಆರೋಪ ಮಾತ್ರವಾಗಿರಲು ಸಾಧ್ಯವಿಲ್ಲ. ಈಗ ಇಲೆಕ್ಟ್ರಾನಿಕ್ ಯುಗ, ಸಾಮಾಜಿಕ ಜಾಲತಾಣಗಳೂ ಅಷ್ಟೇ ಮಜಬೂತಾಗಿರುವಾಗ
ವಿಷಯ ವೇಗವಾಗಿಯೂ, ನಿಖರವಾಗಿಯೂ ತಿಳಿಯುತ್ತದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಸ್ವತಃ ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಹಂಚಿಕೊಂಡಿದ್ದಳು. ‘ವಿಮಾನನಿಲ್ದಾಣದಲ್ಲಿ ಸಿಬ್ಬಂದಿಯೊಬ್ಬರು ತನ್ನ ಕಪಾಳಕ್ಕೆ ಹೊಡೆದರು. ಅಭಿಮಾನಿಗಳು ಚಿಂತಿಸಬೇಕಾಗಿಲ್ಲ, ನಾನು
ಸುರಕ್ಷಿತವಾಗಿದ್ದೇನೆ. ಆದರೆ ಈ ರೀತಿಯ ನಡವಳಿಕೆ ಭಯ ಹುಟ್ಟಿಸುತ್ತದೆ. ದೇಶದ ಭವಿಷ್ಯದ ಕುರಿತು ಚಿಂತೆಯಾಗುತ್ತಿದೆ’ ಎಂದು ಹೇಳಿದಳು.

ವಿದೇಶವಾಸಿ: ಹೊಡೆಯುವುದು ತಪ್ಪು ನಿಜ, ಆದರೆ ಕೆನ್ನೆಗೆ ಹೊಡೆದದ್ದಕ್ಕೆ ದೇಶದ ಭವಿಷ್ಯದ ಬಗ್ಗೆ ಯಾಕೆ ಚಿಂತಿಸಬೇಕು? ಕಂಗನಾಳದ್ದು ಟqಛ್ಟಿ Zಠಿಜ್ಞಿಜ, uqಛ್ಟಿ ಛಿZಠಿಜ್ಞಿಜ ಅಂತ ಅನ್ನಿಸುವದಿಲ್ಲವೇ?

ದೇಶವಾಸಿ: ಕಂಗನಾ ಓವರ್ ಆಕ್ಟಿಂಗ್ ಮಾಡುತ್ತಿದ್ದರೆ ಅವಳ ಅಭಿನಯಕ್ಕೆ ನಾಲ್ಕು ಬಾರಿ ರಾಷ್ಟ್ರಪ್ರಶಸ್ತಿ ಬರುತ್ತಿರಲಿಲ್ಲ. ಅವಳ ಮಾತು ಹೆಚ್ಚು
ಎನ್ನುವುದಕ್ಕಿಂತ ನೇರ ಎಂದು ಯಾಕೆ ಎಣಿಸಬಾರದು? ಅವಳು ಇದುವರೆಗೆ ಆಡಿದ ಮಾತಿನಲ್ಲಿ ಎಷ್ಟು ಸತ್ಯವಿದೆ, ಎಷ್ಟು ಸುಳ್ಳಿದೆ ಎಂದು ಏಕೆ ಲೆಕ್ಕ ಮಾಡಬಾರದು? ಅವಳ ಮಾತಿನಲ್ಲಿ ಸತ್ಯಾಂಶ ಇದೆಯೇ ಎಂದು ಯಾಕೆ ನೋಡಬಾರದು? ತಾನಿರುವ ಕ್ಷೇತ್ರದ ನ್ಯೂನತೆಯ ಬಗ್ಗೆಯೇ ಅವಳು ಸಾಕಷ್ಟು ಬಾರಿ ಹೇಳಿರುವಾಗ, ನಾವೂ ಒಮ್ಮೆ ಯಾಕೆ ಪರಾಮರ್ಶೆ ಮಾಡಬಾರದು? ಚಿತ್ರರಂಗ ಎಂದರೆ ದೇವಲೋಕ, ಅದೇ ಸ್ವರ್ಗ, ಸ್ಪಟಿಕದಷ್ಟು ಶುಭ್ರ ಎನ್ನುವುದನ್ನು ಯಾರೂ ನಂಬುವುದಿಲ್ಲ. ಮೊದಲೂ ಅಷ್ಟೇ, ಈಗಲೂ ಅಷ್ಟೇ. ಎಲ್ಲ ಕ್ಷೇತ್ರದಲ್ಲಿ ಇರುವಂತೆ ಅಲ್ಲಿಯೂ ಸಾಕಷ್ಟು ಕರಾಳ ಛಾಯೆ ಇದೆ. ಸಿನಿಮಾ ಜಗತ್ತಿನಲ್ಲಿ ಸ್ವಲ್ಪ ಹೆಚ್ಚೇ ಇದೆ ಎಂದರೂ ತಪ್ಪಲ್ಲವೇನೋ. ಜನರು ಬಾಯಿ ಬಿಡುವುದಿಲ್ಲ ಎಂದ ಮಾತ್ರಕ್ಕೆ ಅದು ಮಡಿಯಾಗುವುದಿಲ್ಲ.
ಅದರಲ್ಲೂ ಬಾಲಿವುಡ್ ಖಂಡಿತ ಪವಿತ್ರ ಪಾವನವಲ್ಲ. ಹಿಂದಿ ಚಿತ್ರರಂಗದಲ್ಲಿ ಉಳಿದವರಿಗೆ ಹೋಲಿಸಿದರೆ ಅವಳ ಮಾತು ಸ್ವಲ್ಪ ಹೆಚ್ಚು ಎಂದೆನಿಸಿದರೂ ಹುಚ್ಚು ಎಂದು ಅನಿಸುವುದಿಲ್ಲ.

ವಿದೇಶವಾಸಿ: ಉಳಿದವರು ಎಂದರೆ? ಈ ವಿಷಯದ ಕುರಿತಾಗಿ ಯಾರಾದರೂ ಹುಚ್ಚರಂತೆ ಮಾತಾಡಿದ್ದಾರಾ?
ದೇಶವಾಸಿ: ಅಯ್ಯೋ, ಬರೀ ಹುಚ್ಚಲ್ಲ, ತೀರಾ ಹುಚ್ಚು-ಹುಚ್ಚಾಗಿ ಆಡಿದ್ದಾರೆ.

ವಿದೇಶವಾಸಿ: ಯಾರು? ಹೇಗೆ? ದೇಶವಾಸಿ: ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲು ಪ್ರತಿಕ್ರಿಯೆ ನೀಡಿದ್ದು ‘ವಿಶಾಲ’ ಎಂದು ಹೆಸರಿಟ್ಟುಕೊಂಡಿರುವ ಸಂಕುಚಿತ ಬುದ್ಧಿಯ ‘ದಡ್ಡ’ಲಾನಿ.

ವಿದೇಶವಾಸಿ: ಯಾರು? ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕನೇ?

ದೇಶವಾಸಿ: ಸಂಗೀತ ನಿರ್ದೇಶಕ ಹೌದು, ಖ್ಯಾತ-ಗೀತ ಏನೂ ಇಲ್ಲ. ಆತ ಚಿತ್ರರಂಗಕ್ಕೆ ಬಂದು ಬರೊಬ್ಬರಿ ಮೂರು ದಶಕವಾಯಿತು. ಈ ಮೂವತ್ತು
ವರ್ಷದಲ್ಲಿ ಆತ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿದ್ದು ಅರವತ್ತು ಚಿತ್ರಗಳಿಗೆ. ಅದೂ ಅವನೊಬ್ಬನೇ ಅಲ್ಲ, ಅದರಲ್ಲಿ ಶೇಖರ್ ಎನ್ನುವವರ ಪಾಲೂ ಇದೆ. ಸಂಗೀತ ಸಂಯೋಜನೆ ಮಾಡಿದ ಒಟ್ಟೂ ಹಾಡುಗಳ ಸಂಖ್ಯೆ ಸುಮಾರು ಮುನ್ನೂರು. ಅಷ್ಟೇ ಅಲ್ಲ, ಮೂರು ಚಿತ್ರದಲ್ಲಿ ಅಭಿನಯವನ್ನೂ ಮಾಡಿzನೆ. ಇಪ್ಪತ್ತೈದು ಹಾಡು ಬರೆದಿದ್ದಾನೆ. ಹಿಂದಿಯಲ್ಲಿ ಸುಮಾರು ಇನ್ನೂರು, ಇತರ ಭಾಷೆಯ ಇಪ್ಪತ್ತೈದು ಸೇರಿಸಿ ಒಟ್ಟೂ ಇನ್ನೂರ ಇಪ್ಪತ್ತೈದರಷ್ಟು ಹಾಡನ್ನೂ ಹಾಡಿದ್ದಾನೆ.

ವಿದೇಶವಾಸಿ: ಸಾಕಲ್ಲವೇ! ಖ್ಯಾತನಾಗಲು ಇನ್ನೇನು ಬೇಕು?
ದೇಶವಾಸಿ: ಕೇವಲ ಸಂಖ್ಯೆಯೇ ಮಾನದಂಡ ಅಲ್ಲವಲ್ಲ. ಆತ ಬರೆದ ಅಥವಾ ರಾಗ ಸಂಯೋಜನೆ ಮಾಡಿದ ಹಾಡುಗಳು ಯಾವವು ಎಂದು ಕೇಳಿದರೆ,
ಹತ್ತು ಹಾಡು ಕೂಡಲೇ ನೆನಪಾಗುವುದಿಲ್ಲ. ಆತ  ಕನ್ನಡದಲ್ಲೂ ಒಂದೆರಡು ಹಾಡು ಹಾಡಿದ್ದಾನಂತೆ. ಯಾವುದು ಗೊತ್ತೇ? ಇಲ್ಲ, ಅದನ್ನೂ ಗೂಗಲ್
ಮಾಡಿಯೇ ನೊಡಬೇಕು. ಇರಲಿ, ಆತನ ಕೆಲಸಕ್ಕೆ ಇದುವರೆಗೆ ಒಂದೇ ಒಂದು ರಾಷ್ಟ್ರಪ್ರಶಸ್ತಿಯಾಗಲಿ, ರಾಜ್ಯಪ್ರಶಸ್ತಿಯಾಗಲಿ ದಕ್ಕಲಿಲ್ಲ, ಫಿಲ್ಮ್ ಫೇರ್ ಕೂಡ ಸಿಗಲಿಲ್ಲ. ಹೋಗಲಿ, ಕೊನೆ ಪಕ್ಷ ಮಿರ್ಚಿ ಮ್ಯೂಸಿಕ್, ಅಪ್ಸರಾದಂತಹ ಸಣ್ಣ-ಪುಟ್ಟ ಪ್ರಶಸ್ತಿಗಳೂ ಸಿಗಲಿಲ್ಲ. ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಶೋಗಳಿಗೆ ತೀರ್ಪುಗಾರನಾಗಿ ಬರುವ ದಡ್ಡಲಾನಿಗಿಂತ ಎಷ್ಟೋ ಪ್ರತಿಭಾನ್ವಿತ ಸ್ಪಽಗಳೇ ವಾಸಿ. ತಲೆಯ ಮೇಲೂ, ಒಳಗೂ ಮಂಡೆ ಇಲ್ಲದ, ಮಂಡೆಪೆಟ್ಟಿನ ಮನುಷ್ಯ ನಿಂತದ್ದು ಯಾರ ಪರವಾಗಿ ಗೊತ್ತೆ? ಕಳೆದ ಎರಡು ದಶಕದಲ್ಲಿ, ಅಭಿನಯಿಸಿದ ನಲವತ್ತು ಚಿತ್ರಗಳ ಪೈಕಿ ನಾಲ್ಕು ರಾಷ್ಟ್ರಪ್ರಶಸ್ತಿ, ಐದು ಫಿಲ್ಮ್ ಫೇರ್ ಪ್ರಶಸ್ತಿ, ಮೂರು ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಪ್ರಶಸ್ತಿ, ಸ್ಕ್ರೀನ್, ಝೀ ಸಿನಿಮಾ, ಸೈಮಾ ಪ್ರಶಸ್ತಿಗಳನ್ನೆಲ್ಲ ಪಡೆದ, ಫೋರ್ಬ್ಸ ಇಂಡಿಯಾ ಪ್ರತಿವರ್ಷ ಪ್ರಕಟಿಸುವ ನೂರು ಪ್ರಸಿದ್ಧ ವ್ಯಕ್ತಿಗಳ ಪಟ್ಟಿಯಲ್ಲಿ ಆರು ಬಾರಿ ಸ್ಥಾನ ಪಡೆದ, ಪದ್ಮಶ್ರೀ ಪ್ರಶಸ್ತಿ ವಿಜೇತೆ, ಈಗ ಸಂಸದೆಯೂ ಆಗಿರುವ ಕಂಗನಾ ರನೌತ್ ಳ ಕೆನ್ನೆಗೆ ಹೊಡೆದವಳ ಪರವಾಗಿ. ಈತನ ಹಾಡಿಗಿಂತ ವಿವಾದಗಳು ಜನಪ್ರಿಯವಾದದ್ದೇ ಹೆಚ್ಚು. ‘ಪನಾಮಾ ಪೇಪರ್ ಲೀಕ್’ ಕೇಸ್ ಗೊತ್ತಲ್ಲ? ದಡ್ಡಲಾನಿ ಒಡೆತನದಲ್ಲಿರುವ ಸನ್ನಿ ಬ್ಲೆಸಿಂಗ್ ಹೋಲ್ಡಿಂಗ್ ಕಂಪನಿ ಬ್ರಿಟಿಷ್ ವರ್ಜಿನ್ ದ್ವೀಪದಲ್ಲಿ ಹಣ ಹೂಡಿಕೆ ಮಾಡಿದ್ದಾಗಿ ಪನಾಮಾ ವರದಿ ಹೇಳಿತ್ತು. ಅದರಲ್ಲಿ ದಡ್ಡಲಾನಿಯ ಜತೆಗೆ ಅವನ ಕುಟುಂಬದವರ ಹೆಸರೂ ಸೇರಿಕೊಂಡಿತ್ತು. ಅದರಲ್ಲಿ ನಡೆಸಿದ ವಹಿವಾಟಿನ ಕುರಿತಂತೆ ಈಗಲೂ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಈಗ ಏಳೆಂಟು ವರ್ಷದ ಹಿಂದೆ ಆತ ಟ್ವಿಟರ್‌ನಲ್ಲಿ ಜೈನ ಮುನಿ ತರುಣ್ ಸಾಗರ್ ಅವರನ್ನು ಟೀಕಿಸಿ ವಿವಾದಕ್ಕೆ ಗುರಿಯಾಗಿದ್ದ. ಧಾರ್ಮಿಕ ಭಾವನೆಗೆ ಧಕ್ಕೆ ತಂದ ಕಾರಣದಿಂದ ಆತನ ಮೇಲೆ ಎಫ್ಐಆರ್ ದಾಖಲಾಯಿತು. ಪಂಜಾಬ್ ಮತ್ತು ಹರಿಯಾಣ ನ್ಯಾಯಾಲಯ ಆತನಿಗೆ ಛೀಮಾರಿ ಹಾಕಿ ದಂಡವನ್ನೂ ವಿಧಿಸಿದವು. ಈ ಕುರಿತಂತೆ ಆತ ಕ್ಷಮೆಯನ್ನೂ ಕೇಳಿದ್ದ.

ವಿದೇಶವಾಸಿ: ಅದೆಲ್ಲ ಇರಲಿ, ಆತ ಮಾಡಿದ್ದಾದರೂ ಏನು?
ದೇಶವಾಸಿ: ಕಂಗನಾಳ ಕೆನ್ನೆಗೆ ಹೊಡೆದ ಭದ್ರತಾ ಸಿಬ್ಬಂದಿ ಉದ್ಯೋಗ ಕಳೆದುಕೊಂಡರೆ ತಾನು ನೌಕರಿ ಕೊಡುವುದಾಗಿ ಹೇಳಿzನೆ. ಅವನಿಗೇ ಸರಿಯಾದ
ಒಂದು ಉದ್ಯೋಗವಿಲ್ಲ, ಇತ್ತೀಚೆಗಂತೂ ವರ್ಷಕ್ಕೆ ಎರಡೋ ಮೂರೋ ಸಿನಿಮಾ ಸಿಕ್ಕರೆ ಹೆಚ್ಚು. ಇನ್ನು ಅವಳಿಗೆ ಯಾವ ನೌಕರಿ ಕೊಟ್ಟಾನು? ಏನು ಅವಳಿಂದ ಹಾಡಿಸುತ್ತಾನಾ? ವಾದ್ಯ ನುಡಿಸಲು ಹೇಳುತ್ತಾನಾ? ಅಥವಾ ಮನೆಕೆಲಸದವಳನ್ನಾಗಿ ನೇಮಿಸಿಕೊಳ್ಳುತ್ತಾನಾ? ಗೊತ್ತಿಲ್ಲ. ಆತ ಕೆಲವೊಮ್ಮೆ ಆಮ್ ಆದ್ಮಿ ಪಕ್ಷದ ಪರವಾಗಿ ಮಾತನಾಡಿದ, ಪ್ರಚಾರ ನಡೆಸಿದ ಪುರಾವೆಗಳಿವೆ. ಅದು ಅವರವರ ಇಷ್ಟ. ಒಂದು ರಾಜಕೀಯ ಪಕ್ಷದ ಕಡೆಗೆ ಒಲವು ಇರಬಾರದು ಎಂದೇನೂ ಇಲ್ಲ. ಕೆಲವು ವರ್ಷದ ಹಿಂದೆ ಅದೇ ಪಕ್ಷದ ಅರವಿಂದ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿರುವಾಗಲೇ ಒಂದು ವಾರದ
ಅವಽಯಲ್ಲಿ ಎರಡು ಬಾರಿ ಕಪಾಳಕ್ಕೆ ಏಟು ತಿಂದಿದ್ದ. ಹಾಗಾದರೆ ಕೇಜ್ರಿವಾಲನ ಕಪಾಲಕ್ಕೆ ಹೊಡೆದವರಿಗೂ ನೌಕರಿ ಕೊಡಬೇಕು ಅಲ್ಲವೇ? ದಡ್ಡಲಾನಿ ಕೊಡದಿದ್ದರೆ ಬೇಡ, ಬೇರೆಯವರು ಕೊಟ್ಟರೆ? ಈ ರೀತಿಯ ಪ್ರೋತ್ಸಾಹ ಯಾರಿಗೂ ಶೋಭೆ ತರುವಂಥದ್ದಲ್ಲ. ಯಾವುದೇ ಕಾರಣಕ್ಕೂ ಹಿಂಸೆ ಸರಿಯಾದ ಮಾರ್ಗವಲ್ಲ. ಹಿಂಸೆ ಕೊಲೆಯೇ ಆಗಬೇಕೆಂದೇನೂ ಇಲ್ಲ, ಕೆನ್ನೆಗೆ ಹೊಡೆಯುವುದು, ಕಾಲರ್ ಹಿಡಿಯುವುದು, ಮಸಿ ಬಳಿಯುವುದು ಎಲ್ಲವೂ ಹಿಂಸೆಯ ಮುಖಗಳೇ ಅಲ್ಲವೇ?

ವಿದೇಶವಾಸಿ: ನಿಜ. ಇದು ಸಂಸ್ಕಾರವಂತ ಸಮಾಜದ ಲಕ್ಷಣಗಳಲ್ಲ. ಈಗ ಅವನ ಬೋಳು ತಲೆಯ ಮೇಲೆ ಯಾರಾದರೂ ಮೊಟ್ಟೆ ಒಡೆದರೆ? ಅವರಿಗೂ
ಉದ್ಯೋಗ ಕೊಡುತ್ತಾನಂತಾ? ಅದೂ ತಪ್ಪು ತಾನೆ? ಇರಲಿ, ಅವನೊಬ್ಬ ಹೇಳಿದರೆ ಏನಾಯಿತು? ಬೇರೆ ಯಾರಾದರೂ ಮಾತಾಡಿದ್ದಾರಾ?

ದೇಶವಾಸಿ: ಪರ-ವಿರೋಧಗಳು ಸಾಕಷ್ಟಿವೆ. ಕಂಗನಾಳ ಹಳೆಯ ಸ್ನೇಹಿತ ಹೃತಿಕ್ ರೋಷನ್, ಶಬನಾ ಆಜ್ಮಿ, ಸೇರಿದಂತೆ ಅನೇಕರು ಈ ವಿಷಯ ಸರಿಯಲ್ಲ ಎಂದಿದ್ದಾರೆ. ಕೆಲವರು ಕೆನ್ನೆಗೆ ಹೊಡೆದವಳ ಪರವಾಗಿಯೂ ಮಾತಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಹೆಚ್ಚೇನೂ ಹೆಸರಿಲ್ಲದ ನಾಯಕಿಯೊಬ್ಬಳು ‘ಆಕೆ ಕೆನ್ನೆಗೆ ಹೊಡೆಯಬೇಕಾದರೆ ಅದರ ಹಿಂದೆ ಎಷ್ಟು ನೋವು ಇದ್ದಿರಬಹುದು ಎಂದು ಊಹಿಸಿಕೊಳ್ಳಿ’ ಎಂದಿದ್ದಾಳೆ. ಅದೇ ತರ್ಕ ಎಂದಾದರೆ, ಶ್ರೀಲಂಕಾದಲ್ಲಿ ಭಾರತದ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ತಲೆಗೆ ಬಂದೂಕಿನಿಂದ ಹೊಡೆದ ಶ್ರೀಲಂಕಾದ ಸೈನಿಕನಿಗೆ ಎಷ್ಟು ನೋವಿರಬೇಡ? ರಾಜೀವ್ ಗಾಂಧಿ, ಇಂದಿರಾ ಗಾಂಧಿಯನ್ನು ಹತ್ಯೆ ಮಾಡಿದವರೂ ತಮಾಷೆಗೆ ಎಂದು ಮಾಡಲಿಲ್ಲ ಅಲ್ಲವೇ? ಅವರೂ ನೊಂದಿದ್ದರು ಎಂದರೆ? ಗಾಂಧಿಗೆ ಗುಂಡುಹೊಡೆದ ಗೋಡ್ಸೆಯದ್ದೂ ತಪ್ಪಿಲ್ಲ, ಅವನಿಗೂ ಅಷ್ಟೇ ನೋವಿತ್ತು ಎಂದರೆ? ಅವಮಾನವಾದರೆ, ಮಾನಹಾನಿಯಾದರೆ ದೇಶದಲ್ಲಿ ಕಾನೂನು ಎನ್ನುವುದು ಇದೆಯಲ್ಲ? ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಅಥವಾ ಅಂಥವರನ್ನು ಪ್ರೋತ್ಸಾಹಿಸುವುದು ಎಷ್ಟು ಸರಿ? ಅದರಲ್ಲೂ ರಕ್ಷಣೆಗೆ ನಿಂತ ಸಿಬ್ಬಂದಿಯೇ ಈ ರೀತಿ ಮಾಡಿದರೆ? ಅವರ ಮೇಲೆ ಸಾಮಾನ್ಯ ಜನರಿಗೆ ಹೇಗೆ ಭರವಸೆ ಬರಬೇಕು?

ವಿದೇಶವಾಸಿ: ಏನು? ಕಂಗನಾಳ ಕೆನ್ನೆಗೆ ಹೊಡೆದವರು ಭದ್ರತಾ ಸಿಬ್ಬಂದಿಯೇ?
ದೇಶವಾಸಿ: ಅಲ್ಲದೆ ಇನ್ನೇನು? ಇಷ್ಟು ಹೊತ್ತು ಹೇಳಿದ್ದು ಅರೇಬಿಯನ್ ರಾತ್ರಿಗಳ ಕಥೆಯೇ ಅಥವಾ ಅಲಿಬಾಬಾ ಮತ್ತು ಕಳ್ಳರ ಕಥೆಯೇ? ಕಂಗನಾಳ ಕೆನ್ನೆಗೆ ಹೊಡೆದದ್ದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ ಎಫ್)ಯ ಮಹಿಳಾ ಕಾನ್ಸ್‌ಟೇಬಲ್ ಕುಲ್ವಿಂದರ್ ಕೌರ್. ಸಾಮಾನ್ಯ ಜನ ಮತ್ತು ಭದ್ರತಾ ಸಿಬ್ಬಂದಿಗಳ ನಡುವೆ ಅಂತರವಿದೆ. ಭಾರತೀಯ ಸೇನೆ, ಪೊಲೀಸ್, ಅರೆ ಸೇನಾ ಪಡೆ ಅಥವಾ ಇನ್ಯಾವುದೇ ಭದ್ರತಾ ಪಡೆಯಿರಲಿ ಅವರಲ್ಲಿ ಮುಖ್ಯವಾಗಿ ಇದ್ದದ್ದು, ಇರಬೇಕಾದದ್ದು ಶಿಸ್ತು. ಈ ವಿಭಾಗಗಳೆಲ್ಲ ಹೆಸರಾದದ್ದು, ಅವರು ಅಷ್ಟು ಸಕ್ಷಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿದ್ದುದೂ ಅವರಲ್ಲಿರುವ ಶಿಸ್ತಿನಿಂದ. ಅವರ ಶಿಸ್ತನ್ನು ಇಡೀ ದೇಶವೇ ಮಾದರಿಯಾಗಿ ಸ್ವೀಕರಿಸುತ್ತದೆ. ಅಪರಾಧಿಗಳನ್ನು, ದಂಗೆಕೋರರನ್ನು ಹದ್ದುಬಸ್ತಿನಲ್ಲಿ ಇಡಬೇಕಾದವರೇ ಹದ್ದು ಮೀರಿದರೆ? ಶಿಸ್ತನ್ನು ಉಲ್ಲಂಘಿಸಿದರೆ ಅದು ಚಿಂತೆಯ ವಿಷಯ ಅಲ್ಲವೆ? ಇದುವರೆಗೆ ಆ ಸಿಬ್ಬಂದಿಯನ್ನು ಅಮಾನತು ಮಾಡಿದ್ದನ್ನು ಬಿಟ್ಟರೆ ಮುಂದೆ ಯಾವ ಕ್ರಮ ಕೈಗೊಳ್ಳಲಾಯಿತು ಎಂದು ತಿಳಿದಿಲ್ಲ. ಭಾರತ ಸರಕಾರಕ್ಕೆ ಇದು ಗಂಭೀರ ವಿಷಯ ಎಂದು ಅನಿಸುವು ದಿಲ್ಲವೇ?

ವಿದೇಶವಾಸಿ: ಅವಳು ಹೊಡೆಯಲು ಕಾರಣವಾದರೂ ಏನು?
ದೇಶವಾಸಿ: ಎರಡು- ಮೂರು ವರ್ಷದ ಹಿಂದೆ ನಡೆದ ರೈತ ಚಳುವಳಿಯ ಸಂದರ್ಭದಲ್ಲಿ ಭಾಗವಹಿಸಿದ್ದವರ ಕುರಿತು ಕಂಗನಾ ಒಂದು ಟ್ವೀಟ್ ಮಾಡಿದ್ದರಂತೆ. ಅದರಲ್ಲಿ, ನೂರು-ಇನ್ನೂರು ರುಪಾಯಿ ಪಡೆದು ಇವರು ಚಳುವಳಿಗೆ ಕುಳಿತಿದ್ದಾರೆ ಎಂದು ಬರೆದಿದ್ದಳಂತೆ. ಆ ಪ್ರತಿಭಟನೆಯಲ್ಲಿ ಕುಲ್ವಿಂದರ್ ತಾಯಿ ಕೂಡ ಇದ್ದಳಂತೆ. ಆ ಕಾರಣಕ್ಕೆ ಕೆನ್ನೆಗೆ ಹೊಡೆದೆ ಎಂದಿದ್ದಾಳೆ ಕೌರ್.

ವಿದೇಶವಾಸಿ: ರೈತ ಚಳುವಳಿಗೂ ಕುಲ್ವಿಂದರ್‌ಗೂ ಏನು ಸಂಬಂಧ?
ದೇಶವಾಸಿ: ಅವಳ ಸಹೋದರ ರೈತ ಮುಖಂಡ, ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಸಂಘಟನಾ ಕಾರ್ಯದರ್ಶಿ. ಅವಳ ಇನ್ನೊಬ್ಬ ಸಹೋದರನೂ ಭದ್ರತಾ ಸಿಬ್ಬಂದಿಯಂತೆ, ಅಲ್ಲಿಯೇ ಕೆಲಸ ಮಾಡುತ್ತಿದ್ದಾನಂತೆ. ಅದೆಲ್ಲ ಈಗ ತಿಳಿದುಬರುತ್ತಿರುವ ವಿಷಯ.

ವಿದೇಶವಾಸಿ: ಅವಳ ವಿಷಯದಲ್ಲಿ ಮುಂದೆ ಏನಾದೀತು?
ದೇಶವಾಸಿ: ಮುಂದೇನು? ಅವಳು ಬಿಗ್‌ಬಾಸ್‌ಗೆ ಬರಬಹುದು, ಕ್ರಮೇಣ ರಾಜಕೀಯಕ್ಕೂ ಬರಬಹುದು, ಜನ ಅವಳನ್ನು ಗೆಲ್ಲಿಸಲೂಬಹುದು. ಖಲಿಸ್ತಾನ್ ಪರವಾಗಿರುವ, ಕಾಶ್ಮೀರದ ಪ್ರತ್ಯೇಕತೆ ಬಯಸಿದ ಇಬ್ಬರು ಉಗ್ರರನ್ನು ನಮ್ಮ ಜನ ಲಕ್ಷಕ್ಕೂ ಅಧಿಕ ಮತದಿಂದ ಆರಿಸಲಿಲ್ಲವೇ? ಹಾಗಿರುವಾಗ…

ವಿದೇಶವಾಸಿ: ಒಹೋ, ಇತ್ತೀಚಿನ ಬೆಳವಣಿಗೆ ಏನಾದರೂ ಇದೆಯೇ?

ದೇಶವಾಸಿ: ನಿನ್ನೆ ಚಂಡೀಘಡ ಕೇಂದ್ರಾಡಳಿತ ಪ್ರದೇಶದ ಪೊಲೀಸ್ ಸಿಬ್ಬಂದಿಯೊಬ್ಬ ಸಂಸಾರ ಸಮೇತ ಹಿಮಾಚಲದ ಡಾಲ್ಹೌಸಿಗೆ ಪ್ರವಾಸಕ್ಕೆ ಬಂದಿದ್ದನಂತೆ. ಅಲ್ಲಿಯ ಜನ ತಮ್ಮ ಕ್ಷೇತ್ರದ ಸಂಸದೆ ಕಂಗನಾಳ ಕೆನ್ನೆಗೆ ಹೊಡೆದ ಪ್ರದೇಶದಿಂದ ಬಂದ ಅಧಿಕಾರಿ ಎಂಬ ಕಾರಣಕ್ಕೆ ಪ್ರತಿರೋಧ ಪ್ರಕಟಿಸಿದ್ದಕ್ಕೆ ಹಿಂತಿರುಗಿ ಬರಬೇಕಾಯಿತಂತೆ. ಈ ಕುರಿತಂತೆ ಆತ ದೂರು ದಾಖಲಿಸಿದ್ದಾನಂತೆ. ಅದೇ ಸರಿ, ದೂರು ಕೊಡಬೇಕೇ ವಿನಃ ತಾವು ಅಧಿಕಾರಿಗಳು, ತಮ್ಮ ಬಳಿ ಆಯುಧ ಇದೆ ಎಂದು ಅದನ್ನು ಬಳಸಬಾರದು. ಭದ್ರತಾ ಸಿಬ್ಬಂದಿಯವರಲ್ಲಿ ಸಾಮಾನ್ಯವಾಗಿ ಆಯುಧ ಇರುತ್ತದೆ. ಅಂದು ಆ ಕ್ಷಣದಲ್ಲಿ ಕುಲ್ವಿಂದರ್ ಬಳಿ ಆಯುಧ ಇರಲಿಲ್ಲ. ಒಂದು ವೇಳೆ ಅವಳ ಕೈಯಲ್ಲಿ ಬಂದೂಕು ಇದ್ದಿದ್ದರೆ? ಅವಳು ಅದನ್ನು ಬಳಸಿದ್ದರೆ? ಮಾತಿಗೆ-ಟ್ವೀಟಿಗೆ ಏಟು ಎಂದರೆ ಹೇಗೆ? ಹೀಗೇ ಮುಂದುವರಿದರೆ ಇದು ಎಲ್ಲಿ ನಿಂತೀತು? ದಡ್ಡಲಾನಿಯಂಥ ಬುದ್ಧಿವಂತರೇ ಉತ್ತರ ಹೇಳಬೇಕು!

ವಿದೇಶವಾಸಿ: ನಿಜ, ಯಾರೇ ಆದರೂ ಬೇರೆಯವರ ಮನೆಗೆ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಳ್ಳಬಾರದು. ಹಾಗೆಯೇ, ಕರ್ತವ್ಯ ನಿರ್ವಹಣೆಗೆ ಭಾವನೆಗಳು ಅಡ್ಡಿಯಾಗಬಾರದು. ಸ್ವಾರ್ಥದ ಲವಲೇಶವೂ ಕರ್ತವ್ಯದಲ್ಲಿ ಇಣುಕಿ ನೋಡಬಾರದು. ಪ್ರೀತಿ, ಪ್ರೇಮ, ಕಾಮ, ವಾತ್ಸಲ್ಯ, ಸಿಟ್ಟು, ಸೇಡು, ಸೆಡವು, ಸಂಬಂಧ, ಬೇಸರ ಯಾವುದೂ ಕರ್ತವ್ಯಕ್ಕೆ ಅಡ್ಡಬರಬಾರದು. ಅದನ್ನೆಲ್ಲ ಬಿಚ್ಚಿಟ್ಟು ಸಮವಸ್ತ್ರ ಧರಿಸಬೇಕು. ಉಳಿದದ್ದನ್ನು ಕಾನೂನು ಪ್ರಕಾರ
ಬಗೆಹರಿಸಿಕೊಳ್ಳಬೇಕು.

Leave a Reply

Your email address will not be published. Required fields are marked *