Friday, 13th December 2024

ಹಲ್ಲೆ ಸಮರ್ಥನೀಯವೇ?

ಕಳಕಳಿ

ತಿಪ್ಪೂರು ಪುಟ್ಟೇಗೌಡ

ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಂಸದೆ ಕಂಗನಾ ರಣಾವತ್ ಅವರ ಮೇಲೆ ಸಿಐಎಸ್‌ಎಫ್ ನ ಕರ್ತವ್ಯನಿರತ ಮಹಿಳಾ ಪೊಲೀಸ್ ಹಲ್ಲೆ ನಡೆಸಿರುವು ದನ್ನು ಕೆಲವರು ಮೆಚ್ಚಿ ಸಮರ್ಥಿಸುತ್ತಿದ್ದರೆ, ಇನ್ನು ಕೆಲವರು ಖಂಡಿಸುತ್ತಿದ್ದಾರೆ. ಹಲ್ಲೆಗೆ ಪ್ರೇರಕವಾಗಿರುವ ಅಂಶ- ಪಂಜಾಬಿನಲ್ಲಿ ಪ್ರತಿಭಟನಾನಿರತ ರೈತರನ್ನು ಕಂಗನಾ ಹೀಯಾಳಿಸಿ ಮಾತನಾಡಿರುವುದು ಮತ್ತು ಆ ಮಹಿಳಾ ಪೊಲೀಸರ ತಾಯಿಯೂ ಆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂಬುದು.

ಖ್ಯಾತನಾಮರು ಎನಿಸಿಕೊಂಡ ಮಾತ್ರಕ್ಕೆ ಯಾರಿಗೂ ಕೋಡು ಇರುವುದಿಲ್ಲ, ಕಂಗನಾ ಕೂಡ ಇದಕ್ಕೆ ಹೊರತಲ್ಲ. ವಿಷಯ ಅತಿ ಸೂಕ್ಷ್ಮವಾಗಿದ್ದುದರಿಂದ ಆಕೆ ಇತರರಿಗಿಂತ ಹೆಚ್ಚು ಎಚ್ಚರಿಕೆ ವಹಿಸಬೇಕಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಜತೆಗೆ, ಅನ್ನದಾತರ ಕುರಿತು ಅವರು ಹಗುರವಾಗಿ, ಅನುಚಿತ ವಾಗಿ ಮಾತನಾಡಿರುವುದನ್ನು ಜನರು ಸಹಿಸುವುದಿಲ್ಲ ಎಂಬುದೂ ಸ್ವಾಭಾವಿಕವೇ. ಆದರೆ, ವಿಮಾನ ನಿಲ್ದಾಣದ ಭದ್ರತೆಗೆ ನಿಯೋಜಿಸ ಲ್ಪಟ್ಟಿದ್ದ, ಸಮವಸ್ತ್ರದಲ್ಲಿದ್ದ ಸಿಬ್ಬಂದಿಯು ಜನಪ್ರತಿನಿಧಿಯೊಬ್ಬರ ಮೇಲೆ ಹಲ್ಲೆ ನಡೆಸುವುದು ಎಷ್ಟರಮಟ್ಟಿಗೆ ಸರಿ? ಕಾನೂನು ಪಾಲಿಸಬೇಕಾದವರೇ ಹೀಗೆ ನಡೆದುಕೊಳ್ಳಬಹುದೇ? ಅದೇ ಮಾನದಂಡದಿಂದ ನೋಡುವುದಾದರೆ, ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಕೈಗೊಂಡಿದ್ದ ನಿರ್ಣಯದಂತೆ, ಪಂಜಾಬಿನ ಸ್ವರ್ಣಮಂದಿರದಲ್ಲಿ ನಡೆದ ಸೇನಾ ಕಾರ್ಯಾಚರಣೆಯಿಂದ ಅದು ಅಪವಿತ್ರವಾಯಿತು ಎಂದು ಬಗೆದ ಮತ್ತು ತಮ್ಮ ಧರ್ಮಕ್ಕೆ ಸೇರಿದ ಜನ ಹತರಾಗಿದ್ದುದರಿಂದ ಮನನೊಂದಿದ್ದ ಇಂದಿರಾರ ಭದ್ರತಾ ಸಿಬ್ಬಂದಿಯೇ ಅವರನ್ನು ಹತ್ಯೆ ಗೈದುದನ್ನು, ತತ್ಪರಿಣಾಮವಾಗಿ ಸಿಖ್ಖರ ನರಮೇಧವೇ ನಡೆದುದನ್ನು ಸಮರ್ಥಿಸಿಕೊಳ್ಳಬೇಕೇ?

ಲಂಕಾದಲ್ಲಿ ಉಲ್ಬಣಗೊಂಡಿದ್ದ ಜನಾಂಗೀಯ ಸಂಘರ್ಷದ ಸಂದರ್ಭದಲ್ಲಿ, ಅಲ್ಲಿ ಶಾಂತಿ ನೆಲೆಯೂರುವಂತೆ ಮಾಡುವ ನಿಟ್ಟಿನಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಅಲ್ಲಿಗೆ ‘ಭಾರತೀಯ ಶಾಂತಿಪಾಲನಾ ಪಡೆ’ಯನ್ನು ಕಳಿಸಿದ್ದರು. ಈ ಪಡೆಯು ನಡೆಸಿದ ಕಾರ್ಯಾಚರಣೆಯಲ್ಲಿ ಕೆಲ ತಮಿಳರು ಹತರಾದರು. ಈ ಘಟನೆ ಯಿಂದಾಗಿ ಕ್ರೋಧಗೊಂಡ ಕೆಲ ತಮಿಳರು ರಾಜೀವ್ ಗಾಂಧಿಯವರನ್ನು ಹತ್ಯೆಗೈದುದನ್ನು ಸಮರ್ಥಿಸಿಕೊಳ್ಳಬೇಕೇ? ತದನಂತರ ಕಾನೂನಿನನ್ವಯ ನ್ಯಾಯಾಲಯವು ಇವರೆಲ್ಲರಿಗೆ ಶಿಕ್ಷೆ ವಿಧಿಸಿದುದು ಸರಿಯಿರಲಿಲ್ಲ ಎನ್ನಬೇಕೇ? ಎಲ್ಲವೂ ಈ ನೆಲದ ಕಾನೂನಿನ ಅನ್ವಯ
ನಡೆಯಬೇಕೇ ಅಥವಾ ಕೆಲವು ವಿಷಯಗಳು ಭಾವನಾತ್ಮಕವೆಂಬ ಏಕಮಾತ್ರ ಕಾರಣಕ್ಕೆ, ಆ ಕುರಿತಂತೆ ಕಾನೂನನ್ನು ಕೈಗೆತ್ತಿಕೊಳ್ಳುವವರಿಗೆ ವಿನಾಯಿತಿ ನೀಡಿಬಿಡಬೇಕೇ? ಅಸಂಬದ್ಧ ಮತ್ತು ಅನುಚಿತ ಹೇಳಿಕೆ ನೀಡಿರುವವರಲ್ಲಿ ಕಂಗನಾ ರಣಾವತ್ ಮೊದಲಿಗರಲ್ಲ; ಅನೇಕ ರಾಜಕಾರಣಿಗಳು ಮಾಡುವುದು
ಅದನ್ನೇ ಅಲ್ಲವೇ? ಅಂಥವರಿಗೂ ವಿಮಾನ ನಿಲ್ದಾಣದಲ್ಲೋ, ರೈಲು ನಿಲ್ದಾಣದಲ್ಲೋ, ಬಸ್ ನಿಲ್ದಾಣದಲ್ಲೋ ಹಲ್ಲೆಗೈದರೆ ಅದನ್ನೂ  ಸಮರ್ಥಿಸಿ ಕೊಳ್ಳಬೇಕೇ? ಇದರಿಂದ ಕಾನೂನಿಗೆ ಅಗೌರವ ತೋರಿದಂತಾಗುವುದಿಲ್ಲವೇ? ಅರಾಜಕತೆ ಸೃಷ್ಟಿಯಾದಂತಾಗು ವುದಿಲ್ಲವೇ? ಕಂಗನಾ ಇರಲಿ, ಇತರ ಯಾರೇ ಆಗಲಿ, ಹದ್ದುಮೀರಿ ವರ್ತಿಸಿದ್ದರೆ ಮತ್ತು ಸೂಕ್ಷ್ಮ ವಿಷಯಗಳಲ್ಲಿ ಹಲ್ಲುಹಿಡಿದು ಮಾತಾಡದಿದ್ದರೆ ಅಥವಾ ದುರ್ನಡತೆಯೆಸಗಿದ್ದರೆ, ಈ ನಾಡಿನ ಕಾನೂನಿನ ಅನು ಸಾರವೇ ಅವರ ಮೇಲೆ ಕ್ರಮ ಜರುಗಬೇಕಲ್ಲವೇ?

(ಲೇಖಕರು ಹವ್ಯಾಸಿ ಬರಹಗಾರರು)