Monday, 14th October 2024

ಕನ್ನಡಿಗರು ಯುಕೆ; ಈ ತಲುಬು ಯಾಕೆ !

ವಿದೇಶವಾಸಿ

dhyapaa@gmail.com

ಕಳೆದ ವಾರ ಇಂಗ್ಲಿಷರ ನಾಡಿನಲ್ಲೊಂದು ಕನ್ನಡದ ಕಾರ್ಯಕ್ರಮ. ಕನ್ನಡಿಗರುಯುಕೆ (ಕನ್ನಡಿಗರು ಯುನೈಟೆಡ್ ಕಿಂಗ್‌ಡಮ್)
ಆಯೋಜಿಸಿದ ಕನ್ನಡ ರಾಜ್ಯೋತ್ಸವ. ಅಂದು ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ಟರ ಈಜಿಪ್ಟ್ ಪ್ರವಾಸದ ಕೆಲವು ಟಿಪ್ಪಣಿಗಳು ಮತ್ತು ನಾನು ವಿಶ್ವವಾಣಿಗೆ ಬರೆದ ಅಂಕಣಗಳ ಸಂಗ್ರಹ ವಿದೇಶವಾಸಿ ಪುಸ್ತಕ, ಭಾರತೀಯ ವಿದ್ಯಾ ಭವನದ ನಿರ್ದೇಶಕರಾದ ನಂದಕುಮಾರ್ ಅವರಿಂದ ಲೋಕಾರ್ಪಣೆ.

ಕನ್ನಡ ಬಳಗ ಯುಕೆಯ ಅಧ್ಯಕ್ಷರಾದ ಸುಮನಾ ಗಿರೀಶ್, ಕನ್ನಡಿಗರು ಯುಕೆಯ ಅಧ್ಯಕ್ಷರಾದ ಗಣಪತಿ ಭಟ್ ಅವರ ಉಪಸ್ಥಿತಿ. ಸ್ಥಳೀಯ ಪ್ರತಿಭೆಗಳಿಂದ ಕನ್ನಡದ ಹಾಡು, ನೃತ್ಯ, ನಾಟಕ, ಕವನ ವಾಚನ ಇತ್ಯಾದಿ. ನಂತರ ಕರ್ನಾಟಕದ ಪ್ರತಿಭಾವಂತ ಗಾಯಕ ಗಣೇಶ್ ದೇಸಾಯಿ ಅವರಿಂದ ಸಂಗೀತ ರಸಧಾರೆ. ನಂದಿನಿ ಶಿವಮೊಗ್ಗ ಅವರ ನವಿರಾದ ನಿರೂಪಣೆ. ಅದಕ್ಕೆ ಸ್ಥಳೀಯ ಕನ್ನಡಿಗ ಆರ್‌ಜೆ ಗಿರೀಶ್, ರಶ್ಮಿ ಸಾಥ್. ಜತೆಗೆ, ಊಟ-ಉಪಾಹಾರ, ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆ. ಒಟ್ಟಿನಲ್ಲಿ ಒಂದು ಅಚ್ಚುಕಟ್ಟಾದ ಕನ್ನಡದ ಕಾರ್ಯಕ್ರಮ.

ಕನ್ನಡಿಗರುಯುಕೆಗೆ ಈಗ ಹದಿನೈದು ವರ್ಷ ಪ್ರಾಯ. ಆ ದಿನಗಳಲ್ಲಿ ಕನ್ನಡದ ಕಾರ್ಯಕ್ರಮ ಗಳು ಹೆಚ್ಚಾಗಿ ಮ್ಯಾಂಚೆಸ್ಟರ್, ಲಿವರ್‌ಪೂಲ್ ಮುಂತಾದ ದೂರದ ಊರಿನಲ್ಲಿ ನಡೆಯುತ್ತಿತ್ತು. ಲಂಡನ್ ಕನ್ನಡಿಗರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ, ಗಾಯತ್ರಿ ವಿನಯ್ ರಾವ್ ಅವರ ಪ್ರೇರಣೆಯಿಂದ ಉಗಮಗೊಂಡ ಸಂಸ್ಥೆ ಕನ್ನಡಿಗರುಯುಕೆ. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಕನ್ನಡ ಕಟ್ಟುವ ಕೆಲಸ ಮಾಡಿಕೊಂಡು ಬಂದಿದೆ.

ಕನ್ನಡ ಚಲನಚಿತ್ರಗಳ ಬಿಡುಗಡೆಯಿಂದ ಹಿಡಿದು, ಕರ್ನಾಟಕದ ಕಲಾವಿದರಿಗೆ ವೇದಿಕೆ ಒದಗಿಸಿಕೊಡುವವರೆಗೆ ಕನ್ನಡ ಪರ ಚಟುವಟಿಕೆ ನಡೆಸಿಕೊಂಡು ಬಂದಿದೆ. ಈ ವರ್ಷದ ಪುಸ್ತಕ ಬಿಡುಗಡೆ ಕಾರ್ಯಕ್ರಮ, ಸಂಘಟನೆ ನೆಟ್ಟ ನೂತನ ಮೈಲಿಗಲ್ಲು.
ಕನ್ನಡಿಗರುಯುಕೆಯ ಪ್ರಸಕ್ತ ಅಧ್ಯಕ್ಷರಾದ ಗಣಪತಿ ಭಟ್ ಸ್ವತಃ ಮಾಹಿತಿ ತಂತ್ರಜ್ಞಾನದ ಎಂಜಿನಿಯರ್ ಆಗಿದ್ದು, ಲಂಡನ್‌ನಲ್ಲಿರುವ ಫ್ರೆಂಚ್ ಕಂಪನಿಯಲ್ಲಿ ಐಟಿ ಆರ್ಕಿಟೆಕ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ.

ಉಪಾಧ್ಯಕ್ಷರಾದ ಪವಿತ್ರಾ ವೀರಪ್ಪ, ಇನ್ನೋರ್ವ ಉಪಾಧ್ಯಕ್ಷರಾದ ರವಿ ಬಿಕ್ಕಣ್ಣವರ್, ತಂಡದ ಇತರ ಹುದ್ದೆಯನ್ನು
ನಿಭಾಯಿಸುತ್ತಿರುವ ರಶ್ಮಿ ಮಚಾನಿ, ರಮೆಶ್ ಮರೆಗುಡ್ಡಿ, ಅರುಣ್ ಪಾತೀಲ್, ಅನಿಲ್ ಕೊಂಡೆಬೆಟ್ಟು, ರಜನಿ ರಾಜು, ವಿವೇಕ್ ಹೆಗ್ಡೆ, ಸೊಗಸಾಗಿ ಹಾಡುವ ಲಕ್ಷ್ಮಿ ಹೊಯ್ಸಳ್ ಎಲ್ಲರೂ ಮಾಹಿತಿ ತಂತ್ರಜ್ಞಾನದ ಅಭಿಯಂತರುಗಳು. ನಿರ್ದೇಶಕರಾದ ವಿನಯ್ ರಾವ್ ಕೂಡ ಐಟಿ ಅಭಿಯಂತರಾಗಿದ್ದು, ತಮ್ಮ ಸಂಸ್ಥೆಯ ಸಂಪೂರ್ಣ ಯುರೋಪ್ ದೇಶಗಳ ಉಸ್ತುವಾರಿ ನೋಡಿ
ಕೊಳ್ಳುತ್ತಿದ್ದಾರೆ.

ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಮಾಡುತ್ತಿರುವ ಕಿಶನ್ ಶಾಸ್ತ್ರಿ ವಿದ್ಯಾರ್ಥಿ ಸಮುದಾಯದ ಕಮಾನು ಹಿಡಿದಿದ್ದಾರೆ. ನೂರು ಭಾಷೆ ಮಾತಾಡಬಲ್ಲ ಎಂಜಿನಿಯರ್ ಅಶ್ವಿನ್ ಶೇಷಾದ್ರಿಗೆ ಕನ್ನಡ ಹೃದಯದ ಭಾಷೆ. ವನ್ಯ
ಪ್ರಾಣಿ ಗಳ ಕುರಿತು ವಿಶೇಷ ಆಸಕ್ತಿ ಹೊಂದಿದ ನೃತ್ಯಪಟು ಮಧುಶ್ರೀಗೆ ಕನ್ನಡ ಪ್ರಾಣ. ಇನ್ನೋರ್ವ ಭರತನಾಟ್ಯ ಪ್ರವೀಣೆ ಅಖಿಲಾ, ಮನೋವೈದ್ಯರಾದ ಯಶವಂತ್ ಬೆಂಗಳೂರು ಎಲ್ಲರಿಗೂ ಕನ್ನಡ ಧಮನಿಯ ಧಾತು.

ಇದರೊಂದಿಗೆ, ಕನ್ನಡ ಕಲಿ ಮೂಲಕ ಮಕ್ಕಳಿಗೆ ಕನ್ನಡ ಕಲಿಸುವ ಶಿಕ್ಷಕರ ತಂಡವೂ ಅತ್ಯಂತ ಸಕ್ರಿಯವಾಗಿದೆ. ಪ್ರಾಧ್ಯಾಪಕಿ ನೂರ್‌ಜಹಾನ್ ಬಶೀರ್, ಅಶ್ವಿನ್ ಶೇಷಾದ್ರಿ, ರಾಜೇಶ್ ಕೆ, ಮಾನಸ, ವಾಣಿಶ್ರೀ, ಗೋವರ್ಧನ್ ಗಿರಿ ದಾಸ್, ವಿನುತಾ,
ವಿಜಯ್, ರಾಕೇಶ್, ಶಾಲಿನಿ, ವಿಶ್ವನಾಥ್ ಜತೆ ಸೇರಿ ಹಲವು ಕನ್ನಡದ ಕಟ್ಟಾಳುಗಳು ಲಂಡನ್‌ನಲ್ಲಿ ಬೆಳೆಯುತ್ತಿರುವ ಕರ್ನಾಟಕದ ಕುಡಿಗಳಿಗೆ ಕನ್ನಡದ ನೀರೆರೆದು ಬೆಳೆಸುತ್ತಿದ್ದಾರೆ. ಯುಕೆಯ ಕನ್ನಡ ಕಲಿಯಲ್ಲಿ ಒಟ್ಟೂ ಐವತ್ತಕ್ಕೂ ಹೆಚ್ಚು ತರಬೇತಿ ಪಡೆದ ಶಿಕ್ಷಕರಿದ್ದು, ಸುಮಾರು ನಾಲ್ಕು ನೂರು ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ.

ಕರ್ನಾಟಕದಲ್ಲಿಯೇ ಕನ್ನಡ ಶಾಲೆಗಳ ಬಾಗಿಲಿಗೆ ಬೀಗ ಜಡಿಯುತ್ತಿರುವ ಕಾಲಘಟ್ಟದಲ್ಲಿ, ಇಂಗ್ಲಿಷರ ನಾಡಿನಲ್ಲಿ ಕನ್ನಡದ ಕಹಳೆ ಮೊಳಗುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇದನ್ನು ಕಂಡಾಗ, ಕರ್ನಾಟಕದಲ್ಲಿ ಕನ್ನಡ ಮಾಯವಾದರೂ ವಿದೇಶದಲ್ಲಿ ಕನ್ನಡ
ಸುಭದ್ರವಾಗಿಯೂ, ಸುಭಿಕ್ಷವಾಗಿಯೂ ಇರುತ್ತದೆ ಎಂಬುದಕ್ಕೆ ಅನುಮಾನ ಬೇಡ. ಇಂದೇನಾದರೂ ಖ್ಯಾತ ಕವಿ ಡಿ.ಎಸ್. ಕರ್ಕಿಯವರು ಇದ್ದು, ಹಚ್ಚೇವು ಕನ್ನಡದ ದೀಪ ಬರೆಯುತ್ತಿದ್ದರೆ, ನಡು ನಾಡೆ ಇರಲಿ, ಗಡಿ ನಾಡೆ ಇರಲಿ ಎನ್ನುವುದರ
ಜತೆಗೆ, ಹೊರ ನಾಡೆ ಇರಲಿ ಎನ್ನುವುದನ್ನೂ ಸೇರಿಸಿಕೊಳ್ಳುತ್ತಿದ್ದರೇನೋ!

ಇಂದು ವಿದೇಶಗಳಲ್ಲಿ ಕನ್ನಡದ ಕೆಲಸ ಅಷ್ಟು ಚುರುಕಾಗಿದೆ. ಇದನ್ನೆಲ್ಲ ಯಾಕೆ ಹೇಳುತ್ತಿದ್ದೇನೆಂದರೆ, ಇವರು ಅಥವಾ  ಇವರಂಥ ಅನೇಕರು ವಿದೇಶಕ್ಕೆ ಕಾರ್ಯ ನಿಮಿತ್ತ ಬಂದು ನೆಲೆಸಿದವರು. ಎಲ್ಲರಿಗೂ ತಮ್ಮದೇ ಆದ ಕೆಲಸವಿದೆ, ವೈಯಕ್ತಿಕ ಆಸಕ್ತಿಯಿದೆ. ವ್ಯಸ್ತರಾಗಿರಲು ಬೇಕಾದಷ್ಟು ಹವ್ಯಾಸವಿದೆ, ತಮ್ಮ ಇಷ್ಟ ಈಡೇರಿಸಿಕೊಳ್ಳುವಷ್ಟು ಸಂಬಳ-ಸಮಯ ಎರಡೂ ಇದೆ. ಸಹೋದ್ಯೋಗಿಗಳೊಂದಿಗೆ, ಸಂಸಾರದೊಂದಿಗೆ ಸುಖವಾಗಿ ಸಮಯ ಕಳೆಯುವ ಅವಕಾಶವೂ ಇದೆ.

ಪ್ರತಿ ಗಂಟೆಗೂ ಡಾಲರ್ ಮೀಟರ್ ತಿರುಗುತ್ತಿರುತ್ತದೆ, ಪೌಂಡ್ ತೂಕ ತೂಗುತ್ತಿರುತ್ತದೆ. ಆದರೂ ತಮ್ಮ ಕಿಸೆಯಿಂದ ಖರ್ಚು
ಮಾಡಿ ಕನ್ನಡದ ಕಟ್ಟುವ ಕೆಲಸ ಮಾಡುತ್ತಾರೆ. ವಿದೇಶದಲ್ಲಿರುವವರಿಗೆ ಈ ತಲುಬು ಯಾಕೆ? ನಿಜ, ಇದನ್ನು ತಲುಬು ಎಂದೇ ಹೇಳಬೇಕು. ಇದು ಕನ್ನಡದ ತಲುಬು. ಇದು ಕೇವಲ ಕನ್ನಡಿಗರುಯುಕೆ ಬಳಗಕ್ಕೆ ಮಾತ್ರ ಅನ್ವಯಿಸುವ ಮಾತಲ್ಲ, ವಿದೇಶದಲ್ಲಿರುವ ಬಹುತೇಕ ಕನ್ನಡ ಸಂಘಟನೆಗಳದ್ದೂ ಇದೇ ಕಥೆ. ವಿದೇಶದಲ್ಲಿದ್ದ ಮಾತ್ರಕ್ಕೆ ಎಲ್ಲ ಸಂಘಟನೆಗಳೂ ಆರ್ಥಿಕವಾಗಿ ಉಚ್ಛ್ರಾಯ ಸ್ಥಿತಿಯಲ್ಲಿರಬೇಕೆಂದೇನೂ ಇಲ್ಲ.

ಒಂದು ವೇಳೆ ಆರ್ಥಿಕವಾಗಿ ಸಬಲರಾಗಿದ್ದರೂ ಇತರ ವಸ್ತುಗಳನ್ನು ಹೊಂದಿಸುವುದು ಸುಲಭವಲ್ಲ. ಕನ್ನಡದ ಬಾವುಟದಿಂದ ಹಿಡಿದು, ಸನ್ಮಾನದ ಪೇಟದವರೆಗೆ ಯಾವುದೂ ವಿದೇಶದಲ್ಲಿ ಲಭ್ಯವಿಲ್ಲ. ವಿದೇಶಗಳಲ್ಲಿ ಪರಿಕರಗಳನ್ನು ಹೊಂದಿಸುವುದು
ಊರಿನಲ್ಲಿ ಹೊಂದಿಸಿದಷ್ಟು ಸುಲಭವಲ್ಲ. ಕಾರ್ಯಕ್ರಮಕ್ಕೆ ಬೇಕಾದ ಒಡವೆ, ಆಭರಣ, ವಸ್ತುಗಳನ್ನು ತಯಾರಿಸಲು ಯಾರೂ ಇರುವುದಿಲ್ಲ. ಪೂರ್ಣ ಪ್ರಮಾಣದಲ್ಲಿ ಅದಕ್ಕೆಂದೇ ಇರುವ ಆಚಾರಿಯಾಗಲೀ ಅಕ್ಕಸಾಲಿಯಾಗಲೀ ಇಲ್ಲಿ ಸಿಗುವುದಿಲ್ಲ. ಇದ್ದವರಲ್ಲಿಯೇ ಹೊಂದಿಕೊಂಡು, ಕಾರ್ಯಕ್ರಮಕ್ಕೆ ಏರ್ಪಾಡು ಮಾಡಿಕೊಳ್ಳಬೇಕು.

ಕನ್ನಡತನದ ಕಣ ಕಣವನ್ನೂ ಕರ್ನಾಟಕದಿಂದಲೇ ಕೊಂಡು ಹೊತ್ತು ತರಬೇಕು. ಅದಕ್ಕಾಗಿ ಊರಿನ ಉಪ್ಪಿನಕಾಯಿ ಬಿಟ್ಟು, ತುಪ್ಪ ತ್ಯಜಿಸಿ, ಜೇನುತುಪ್ಪತೊರೆದು ಅವುಗಳ ಜಾಗದಲ್ಲಿ ಕನ್ನಡದ ಕಲೆ, ಸಂಸ್ಕೃತಿಯನ್ನು ಬೊಕ್ಕಸದಲ್ಲಿ ತುಂಬಿಸಿಕೊಂಡು
ತರಬೇಕು. ಒಂದು ಕಾರ್ಯಕ್ರಮ ಆಯೋಜಿಸಲು ತಿಂಗಳುಗಟ್ಟಲೆ ಹೆಣಗಬೇಕು. ಸಭಾಭವನ, ಧ್ವನಿ-ಬೆಳಕಿನ ಆಯೋಜನೆ, ಆಸನಗಳು, ಕಾರ್ಯಕ್ರಮಕ್ಕೆ ಬೇಕಾದ ಇತರ ಪರಿಕರಗಳು, ಎಲ್ಲವನ್ನೂ ಹೊಂದಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಪ್ರಾಯೋಜಕತ್ವಕ್ಕೆ ಓಡಾಡಬೇಕು.

ಇನ್ನು ತಾಯ್ನಾಡಿನಿಂದ ಅತಿಥಿಗಳನ್ನು ಕರೆಸುವುದು ಎಂದರಂತೂ ಕೇಳುವುದೇ ಬೇಡ. ಅವರ ವಿಸಾ, ಟಿಕೆಟ್, ವಸತಿ, ಊಟ-ಉಪಚಾರ, ಒಂದಲ್ಲ, ಎರಡಲ್ಲ. ಕೇವಲ ಚಿತ್ರಾನ್ನ, ಮೊಸರನ್ನ ದಿಂದ ಬಂದವರ ಹೊಟ್ಟೆ ತಣ್ಣಗಿರಲು ಸಾಧ್ಯವಿಲ್ಲ,
ಸರಿಯಾದ ಹಾಸಿಗೆ, ದಿಂಬು ಇಲ್ಲವಾದರೆ ಬಂದವರ ಕಣ್ಣಿಗೆ ಸೊಂಪಾದ ನಿದ್ದೆ ಬರುವುದಿಲ್ಲ. ಎಲ್ಲರಿಗೂ, ಎಲ್ಲದಕ್ಕೂ ಸರಿಯಾದ ವ್ಯವಸ್ಥೆ ಕಲ್ಪಿಸಬೇಕು. ಆದರೂ ವಿದೇಶದಲ್ಲಿ ಕನ್ನಡದ ಕಾರ್ಯಕ್ರಮ ಎಂದರೆ ಏನೋ ಒಂದು ರೀತಿಯ
ಸಡಗರದ ಅಮಿತ ಸಂಭ್ರಮ! ತವರು ಮನೆಯಿಂದ ಅಪ್ಪನೋ, ಅಣ್ಣನೋ ಬರುತ್ತಿರುವ ಭಾವ!

ಅತಿಥಿಗಳು ಕಳೆಯುವ ಸಮಯ, ಪಾಂಡಿತ್ಯದ ಸಿಂಚನ ನಮಗೆ ಹೋಳಿಗೆಯೊಂದಿಗೆ ಜೇನು ಸವಿದ ಅನುಭವ. ಊರಿಂದ ಬಂದವರ ಪ್ರತಿಭಾ ಪ್ರದರ್ಶನ ನೋಡುವುದೆಂದರೆ ಅಮ್ಮ ಕಳುಹಿಸಿ ಕೊಟ್ಟ ಉಪ್ಪಿನಕಾಯಿ, ಚಕ್ಕುಲಿ, ಸಿಹಿ ಉಂಡೆ
ಮೆದ್ದಂತೆ. ಅವರು ತಿರುಗಿ ತಾಯ್ನಾಡಿಗೆ ಹೊರಟಾಗ, ಮಗಳನ್ನು ಮದುವೆ ಮಾಡಿ ಗಂಡನ ಮನೆಗೆ ಬೀಳ್ಕೊಡುವ ತಂದೆಯಂತೆ, ಮಾತು ಮೌನ, ಕಣ್ಣು ತೇವ, ಹೃದಯ ಭಾರ. ಆಡಿದ ನಾಡು, ಆಡಿದ ಭಾಷೆಯನ್ನು ಎಂದಾದರೂ ಮರೆಯಲುಂಟೇ? ಅದು ಕರುಳು ಬಳ್ಳಿಯ ಸಂಬಂಧ!

ಒಂದು ಕಾರ್ಯಕ್ರಮದ ಯಶಸ್ಸಿಗೆ ಸಂಘದ ಸದಸ್ಯರು, ಕಾರ್ಯಕರ್ತರು, ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಕಟ್ಟಾಳುಗಳಾಗಿ ನಿಲ್ಲುತ್ತಾರೆ. ಅವಡುಗಚ್ಚಿ ಕೆಲಸಮಾಡುತ್ತಾರೆ. ಅನ್ನ ನೀರಿನ ಪರಿವೆಯೇ ಇಲ್ಲದೆ ದುಡಿಯುತ್ತಾರೆ.
ಲೀಟರ್ ಗಟ್ಟಲೆ ಬೆವರು ಸುರಿಸುತ್ತಾರೆ. ಎಷ್ಟೊ ಬಾರಿ ತಮ್ಮ ಕಿಸೆಯಿಂದಲೇ ಹಣವನ್ನೂ ಖರ್ಚು ಮಾಡುತ್ತಾರೆ. ಕೈಗೆತ್ತಿಕೊಂಡ ಕಾರ್ಯಕ್ರಮ ಯಶಸ್ವಿಯಾದ ನಂತರವೇ ನಿಟ್ಟುಸಿರು ಬಿಡುತ್ತಾರೆ.

ವಿದೇಶದಲ್ಲಿ ಕನ್ನಡದ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ಹೊಂದಿಸುವಾಗ ಕಣ್ಣೀರು ಕಾಲಿಗೆ ಬರುತ್ತದೆ. ವಿದೇಶದಲ್ಲಿ ಇರುವವರಿಗೆ ಹಣದ ಕೊರತೆಯಿಲ್ಲ, ಅದಕ್ಕಾಗಿ ಕನ್ನಡದ ಕೆಲಸ ಮಾಡುತ್ತಾರೆ ಎಂದರೆ ಅದು ಶುದ್ಧ ಸುಳ್ಳು. ಕ್ರಿಕೆಟ್
ಪಂದ್ಯಾಟಕ್ಕೋ, ಸೌಂದರ್ಯ ಸ್ಪರ್ಧೆಗೋ ಆದರೆ ಪ್ರಾಯೋಜಕರಾದರೂ ಸಿಗುತ್ತಾರೆ. ಕನ್ನಡದ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡಲು ಯಾರೂ ಮುಂದೆ ಬರುವುದಿಲ್ಲ.

ಅದರಿಂದ ಅವರಿಗೆ ಯಾವ ಲಾಭವೂ ಇಲ್ಲ. ನಮಗೆ ನಾವು ಗೋಡೆಗೆ ಮಣ್ಣು ಎಂಬ ಸ್ಥಿತಿ! ತಮ್ಮ ಪರಿವಾರದ ಕನಸು ಕಟ್ಟಿಕೊಳ್ಳಲು ವಿದೇಶಕ್ಕೆ ಬಂದ ಇವರಿಗೆಲ್ಲ ಕನ್ನಡ ಕಟ್ಟಬೇಕೆಂಬ ಯಾವ ದರ್ದೂ ಇಲ್ಲ. ಆದರೂ ತಮ್ಮ ನೆಲ, ಭಾಷೆಯ ವಿಷಯ ಬಂದಾಗ ಇವರ ಹೃದಯದ ಬೇಲಿ ಬಿಚ್ಚಿಕೊಳ್ಳುತ್ತದೆ. ವಿದೇಶದಲ್ಲಿ ಕನ್ನಡ ಕಟ್ಟುವ ಕೆಲಸ ಸುಲಭವಲ್ಲ,
ನಿಜ. ಆದರೆ, ವಿದೇಶದಲ್ಲೇ ಕನ್ನಡ ಕಟ್ಟುವ ಕೆಲಸ ಶ್ರದ್ಧೆಯಿಂದ ನಡೆಯುತ್ತದೆ. ನಾವು ಯಾವುದಾರೂ ಒಂದು ವಸ್ತುವನ್ನು ಕಳೆದುಕೊಂಡಾಗ ಅದರ ಬೆಲೆ ತಿಳಿಯುತ್ತದೆ. ನಮಗೆ ಬೇಕಾದ ವ್ಯಕ್ತಿಯೋ, ವಸ್ತುವೋ ದೂರವಾದಾಗಲೇ ಅದರ ಮೌಲ್ಯ
ಅರ್ಥವಾಗುತ್ತದೆ. ಈ ಕಾರಣಕ್ಕೇ ಇರಬೇಕು, ಕನ್ನಡದ ವೃಕ್ಷಕ್ಕೆ ಕರ್ನಾಟಕದಲ್ಲಿ ನೀರೆರೆಯುವ ವರಿಗಿಂತ ಹೆಚ್ಚು ನೀರೆರೆಯುವ ತೋಟಗಾರರು ವಿದೇಶದಲ್ಲಿ ಕಾಣಸಿಗುತ್ತಾರೆ.

ಜತೆಗೆ, ವಿದೇಶದಲ್ಲಿ ಕನ್ನಡದ ಕೆಲಸ ಎಂದರೆ ಅದು ತೋರಿಕೆಗೆ ಮಾಡುವ, ನವೆಂಬರ್‌ಗೆ ಮಾತ್ರ ಮೀಸಲಾದ ಕೆಲಸವಲ್ಲ. ವಿದೇಶಗಳಲ್ಲಿ ಕನ್ನಡದ ಕೆಲಸ ಒಂದು ತಪಸ್ಸು! ಅದನ್ನು ನಿರಂತರ ಮಾಡಬೇಕು. ಒಮ್ಮೆ ನಿಂತಿತು, ಕೊಂಡಿ ಕಳಚಿತು ಎಂದಾದರೆ, ಅದರ ಪುನರುಜ್ಜೀವನ ಇನ್ನೂ ಕಷ್ಟ. ಕರ್ನಾಟಕದಿಂದ ಹೊರಗೆ ವಿಶ್ವದಾದ್ಯಂತ ಸುಮಾರು ಆರರಿಂದ ಏಳು ಲಕ್ಷ ಕನ್ನಡಿಗರಿದ್ದಾರೆಂದು ಅಂದಾಜಿಸಲಾಗಿದೆ.

ಅಲ್ಲಿರುವ ಕನ್ನಡಿಗರ ಮುಂದಿನ ತಲೆಮಾರು ನಮ್ಮ ಭಾಷೆ, ಕಲೆ ಮತ್ತು ಸಂಸ್ಕೃತಿಯೊಂದಿಗೆ ಬಲವಾದ ಬಾಂಧವ್ಯ ಉಳಿಸಿ
ಕೊಳ್ಳಬೇಕೆಂದರೆ ವಿದೇಶದಲ್ಲಿ ಕನ್ನಡದ ಕಾರ್ಯ ಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು. ಅದಕ್ಕೆ ಸರಕಾರದ ಸಹಾಯ ಅತ್ಯವಶ್ಯಕ. ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಚ್ಚು ಹೆಚ್ಚು ಕನ್ನಡ ಪರ ಕಾರ್ಯಕ್ರಮಗಳು ಆಗುವಂತೆ ಮುತುವರ್ಜಿ ವಹಿಸಬೇಕು, ಕಾಳಜಿ ತೋರಿಸಬೇಕು, ಪ್ರೋತ್ಸಾಹಿಸಬೇಕು. ಧನ ಸಹಾಯದಿಂದ ಹಿಡಿದು ಬೇಕಾದ
ಸೌಲಭ್ಯಗಳನ್ನು ಒದಗಿಸಲು ಸಹಕರಿಸಬೇಕು.

ಇದರ ಅರ್ಥ ಎಲ್ಲವನ್ನೂ ಸರಕಾರವೇ ಮಾಡಬೇಕು ಎಂದಲ್ಲ. ಕನಿಷ್ಟ ಏಣಿಗೆ ಕವೆಯಾಗಿ ನಿಲ್ಲುವ ಕೆಲಸವನ್ನಾದರೂ ಮಾಡಬೇಕು. ಆಗ ಮಾತ್ರ ಕರುನಾಡ ಮಣ್ಣಿನ ಮತ್ತು ವಿದೇಶಗಳಲ್ಲಿರುವ ಕನ್ನಡಿಗರ ನಡುವಿನ ಸೇತುವೆ ಭದ್ರವಾಗಿರುತ್ತದೆ. ಕನ್ನಡ ಬೆಳೆಯುತ್ತದೆ, ಬಾಳುತ್ತದೆ!