Saturday, 14th December 2024

ಕನ್ನಡದಾ ಮಕ್ಕಳೆಲ್ಲಾ ಒಂದಾಗಿ ಬರಬೇಡಿ

ತುಂಟರಗಾಳಿ

ಹರಿ ಪರಾಕ್

ಸಿನಿಗನ್ನಡ 
ದೀಪಾವಳಿಗೆ ಮುನ್ನವೇ ಕನ್ನಡ ಚಿತ್ರರಂಗದಲ್ಲಿ ಪಟಾಕಿ ಸದ್ದು ಜೋರಾಗಿ ಕೇಳಿಬರುವ ದಿನಗಳು ಹತ್ತಿರದಲ್ಲಿವೆ. ಆದರೆ ಇವು ಆಟಂ ಬಾಂಬ್, ಲಕ್ಷ್ಮೀ ಪಟಾಕಿ
ಥರ ಒಂದೊಂದೇ ಬಂದು ಸದ್ದು ಮಾಡದೆ, ಸರ ಪಟಾಕಿ ರೀತಿಯಲ್ಲಿ ಒಂದರ ಹಿಂದೊಂದು ಸರಣಿಯಲ್ಲಿ ಬ್ಲ್ಯಾಸ್ಟ್ ಆಗುವ ಬಗ್ಗೆ ಚಿತ್ರರಂಗ ಕೊಂಚ ಆತಂಕ ಗೊಂಡಿದೆ. ದುನಿಯಾ ವಿಜಯ್ ಅವರ ಸಲಗ ಮತ್ತು ಸುದೀಪ್ ಅವರ ಕೋಟಿಗೊಬ್ಬ ೩ ಒಂದೇ ದಿನ ಬಿಡುಗಡೆ ಆಗೋಕೆ ರೆಡಿಯಾಗಿರೋದೇ ಇದಕ್ಕೆ ಕಾರಣ. ಹೊಸ ಚಿತ್ರಗಳು ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿವೆ ಅನ್ನೋದು ಸಂತಸಕ್ಕೆ ಕಾರಣವಾದರೆ.

ಹೀಗೆ ದೊಡ್ಡ ದೊಡ್ಡ ಸ್ಟಾರ್‌ಗಳ ಚಿತ್ರಗಳು ಒಂದೇ ದಿನ ಬಿಡುಗಡೆ ಆಗುತ್ತಿರೋದು ಎಷ್ಟರ ಮಟ್ಟಿಗೆ ಸರಿ ಅಂತಲೂ ಪ್ರಶ್ನೆಗಳು ಎದ್ದಿವೆ. ಎರಡೆರಡು ಸಿನಿಮಾ ಗಳು ಒಟ್ಟಿಗೇ ರಿಲೀಸ್ ಆಗ್ತಾ ಇರೋದು ನೋಡಿದ ಕನ್ನಡ ಪ್ರೇಕ್ಷಕ ಕನ್ಯೂಸ್ ಆಗಿದ್ದಾನೆ. ಚಿತ್ರರಂಗದಲ್ಲಿ ಸಿನಿಮಾ ಬಿಡುಗಡೆಯ ವಿಷಯದಲ್ಲಿನ ಸ್ಟಾರ್ ವಾರ್ ಹೊಸದಲ್ಲ. ಕೆಲವು ನಟರಂತೂ ಜಿದ್ದಿಗೆ ಬಿದ್ದವರಂತೆ ಇನ್ನೊಬ್ಬ ನಟನ ಸಿನಿಮಾ ಬಿಡುಗಡೆಯ ದಿನವೇ ತಮ್ಮ ಚಿತ್ರ ಬಿಡುಗಡೆ ಮಾಡುತ್ತಾರೆ. ಇದಕ್ಕೆ ಇಡೀ ಭಾರತೀಯ ಚಿತ್ರರಂಗದಲ್ಲೇ ಅನೇಕ ಉದಾಹರಣೆಗಳಿವೆ. ಆದರೆ, ಸಲಗ ಮತ್ತು ಕೋಟಿಗೊಬ್ಬ ೩ ಚಿತ್ರಗಳ ನಾಯಕರ ನಡುವೆ ಅಂತಹ ಪೈಪೋಟಿ ಇಲ್ಲ. ಇಲ್ಲಿ ಇರೋದು ಸಾಕಷ್ಟು ದಿನಗಳಿಂದ ಡಬ್ಬಾದಲ್ಲೇ ಇದ್ದ ಚಿತ್ರಗಳು ಕರೋನಾ ನಂತರ ಸಿಕ್ಕ ಅವಕಾಶವನ್ನು ಬಾಚಿಕೊಳ್ಳುವ ಆತುರ ಅಷ್ಟೇ.

ಅದನ್ನೇ ಎರಡೂ ಚಿತ್ರಗಳ ನಿರ್ಮಾಪಕರು ಮಾಡುತ್ತಿದ್ದಾರೆ. ಈ ವಿಷಯದ ಬಗ್ಗೆ ಶಿವರಾಜ್ ಕುಮಾರ್ ಅವರು ಮಾತನಾಡಿ ಒಂದೇ ದಿನ ಎರಡು ಚಿತ್ರ ಬಿಡುಗಡೆ ಆಗಿ ಇಬ್ಬರಿಗೂ ತೊಂದರೆ ಆಗೋದು ಸರಿ ಅಲ್ಲ. ಎರಡೂ ಚಿತ್ರಗಳ ನಿರ್ಮಾಪಕರು ಕೊಂಚ ಯೋಚನೆ ಮಾಡಿ ಬಿಡುಗಡೆ ಮಾಡಲಿ ಎಂದಿದ್ದಾರೆ. ಆದರೆ ಸ್ವತಃ ದುನಿಯಾ ವಿಜಯ್ ಮಾತನಾಡಿ, ಒಟ್ಟಿಗೇ ಬಿಡುಗಡೆ ಆದರೆ ತೊಂದರೆ ಏನಿದೆ, ಜನ ಎರಡೂ ಚಿತ್ರಗಳನ್ನು ನೋಡಲಿ ಬಿಡಿ ಎಂದು ಸಹಜವಾಗಿ ಹೇಳಿದ್ದಾರೆ.

ಅದೂ ತಕ್ಕಮಟ್ಟಿಗೆ ನಿಜವೇ. ಅದೆಷ್ಟೋ ಸಿನಿಮಾಗಳು ಒಂದೇ ದಿನವೇ ಬಿಡುಗಡೆ ಆಗಿ ಸೂಪರ್ ಹಿಟ್ ಆದ ಅನೇಕ ಉದಾಹರಣೆಗಳು ನಮ್ಮಲ್ಲಿವೆ. ಕೊನೆಗೂ ಚಿತ್ರದ ಕಂಟೆಂಟ್ ಮುಖ್ಯ ಆಗುತ್ತದೆಯೇ ಹೊರತು ಬಿಡುಗಡೆಯ ದಿನಾಂಕ ಅಲ್ಲ.

ಲೂಸ್ ಟಾಕ್
ಪರಮಹಂಸ ಆಚಾರ್ಯ ಮಹಾರಾಜ್ (ಕಾಲ್ಪನಿಕ ಸಂದರ್ಶನ) ಭಾರತವನ್ನ ಹಿಂದೂ ರಾಷ್ಟ್ರ ಅಂತ ಘೋಷಣೆ ಮಾಡದೇ ಇದ್ರೆ ಅಕ್ಟೋಬರ್ 2ಕ್ಕೆ ‘ಜಲ’ಸಮಾಽ ಆಗ್ತೀನಿ ಅಂತ ಹೇಳಿದ್ರಿ, ಯಾಕೆ ಆಗ್ಲಿಲ್ಲ?

-ಯಾಕಂದ್ರೆ ಅಕ್ಟೋಬರ್ ೨ ‘ಡ್ರೈ’ ಡೇ.
ಏನ್ ಸ್ವಾಮೀಜಿ, ಕೊಟ್ಟ ಮಾತಿಗೆ ತಪ್ಪಿ ಹಿಂಗೆಲ್ಲಾ ನೆಪ ಹೇಳ್ತಾ ಇದ್ದೀರಾ?

-ನಾವು ಜಪ, ತಪ ಮಾಡೋರು ಕಣ್ರೀ, ಹಂಗೆಲ್ಲಾ ನೆಪ ಹೇಳಲ್ಲ.

ಓಹೋ, ಏನ್ ಸ್ವಾಮೀಜಿಗಳು

ಕವಿಗಳ ಥರ ಪ್ರಾಸ ಮಾತಾಡ್ತಾ ಇದ್ದಾರೆ?
-ನಮ್ದೇನಿದ್ರೂ ಕಾವಿ ಜನಾಂಗ, ಕವಿ ಜನಾಂಗ ಅಲ್ಲ.

ಯಾಕೆ ಕವಿಗಳು ರೊಮ್ಯಾಂಟಿಕ್ ಆಗಿ ಬರೀತಾರೆ, ಆದ್ರೆ, ನೀವು ಎಲ್ಲವನ್ನೂ ತ್ಯಜಿಸಿದ ಸನ್ಯಾಸಿಗಳು ಅಂತನಾ?

-ಹೌದು. ನಾವು ಅಷ್ಟು ರೊಮ್ಯಾಂಟಿಕ್ ಅಲ್ಲ, ಏನೋ ‘ಕೂದ್ಲು’ ಉದ್ದ ಬಿಟ್ಟಿರ್ತೀವಿ ಅಂತ ‘ರೋಮ್ಯಾಂಟಿಕ್’ ಅನ್ನಬಹುದು ಅಷ್ಟೇ.

ಸರಿ, ಈಗಿನ ಕಾಲದ ಕೆಲವು ಸ್ವಾಮೀಜಿಗಳ ಮೇಲೆ ಜನಕ್ಕೆ ಯಾಕೆ ನಂಬಿಕೆ ಹೋಗ್ತಾ ಇದೆ ಅಂತ ನಿಮ್ಮ ಅಭಿಪ್ರಾಯ?

– ವತ್ಸಾ, ಅದು ಅವರವರ ಭಾವಕ್ಕೆ ಬಿಟ್ಟಿದ್ದು. ನೀನು ಕ್ಲಾಸ್ ಆಗಿ ಹೇಳಿದ್ಯಲ್ಲ, ನಾವು ಎಲ್ಲವನ್ನೂ ತ್ಯಜಿಸಿದವರು ಅಂತ. ಅದನ್ನ ಕೆಲವರು ಮಾಸ್ ಆಗಿ, ಮೂರೂ
ಬಿಟ್ಟವರು ಅಂತ ಅರ್ಥ ಮಾಡ್ಕೊತಾರೆ. ಅದಕ್ ನಾವೇನ್ ಮಾಡೋಕಾಗುತ್ತೆ.

ನೆಟ್ ಪಿಕ್ಸ್
ಕಾಲೇಜಿಗೆ ಹಳೇ ಬೈಕ್ ತಗೊಂಡು ಹೋಗ್ತಾ ಇದ್ದ ಖೇಮು ಅವತ್ತು ಮನೆಗೆ ಬೆಂಜ್ ಕಾರಲ್ಲಿ ಬಂದ. ಅದನ್ನ ನೋಡಿ ಅವನ ಅಪ್ಪ ಅಮ್ಮ ಗಾಬರಿ ಆದ್ರು.
ಖೇಮುನ ಕೇಳಿದ್ರು.
‘ಯಾರ್ದು ಕಾರು?’
‘ನಂದೇ, ಇವತ್ತು ಕೊಂಡುಕೊಂಡೆ?’
‘ಅಷ್ಟು ದುಡ್ಡು ಎಲ್ಲಿತ್ತು’
‘೨೦೦೦ ರುಪಾಯಿ ಕೊಟ್ಟೆ ಅಷ್ಟೆ’
‘೨೦೦೦ ರುಪಾಯಿಗೆ ನಿಂಗೆ ಬೆಂಜ್ ಕಾರ್ ಯಾರ್ ಕೊಡ್ತಾರೆ. ಏನ್ ತಮಾಷೆ ಮಾಡ್ತೀಯಾ?’
‘ಇಲ್ಲ, ಎದುರುಮನೆ ಆಂಟಿ ನಂಗೆ ಮಾರಿದ್ರು’
ಖೇಮು ಅಪ್ಪ ಅಮ್ಮ ಈ ಆಂಟಿ ಕಾಲೇಜು ಹುಡುಗ ಸಿಕ್ಕ ಅಂತ ಬುಟ್ಟಿಗೆ ಹಾಕ್ಕೊಳ್ಳೋಕೆ ಟ್ರೈ ಮಾಡ್ತಾ ಇದ್ದಾಳೆ ಅನ್ಸುತ್ತೆ ಅಂತ ಗುಸುಗುಸು ಮಾತಾಡಿಕೊಳ್ಳೋಕೆ
ಶುರು ಮಾಡಿದ್ರು. ನಂತರ ನಡಿ ಅಂತ ಅವನನ್ನು ಕರ್ಕೊಂಡು ಆಂಟಿ ಮನೆಗೆ ಹೋದ್ರು. ಮೂವರೂ ಎದುರು ಮನೆ ಆಂಟಿ ಮನೆಗೆ ಹೋದಾಗ, ಆಂಟಿ ಆರಾಮಾಗಿ ಹೂವಿನ ಗಿಡಗಳಿಗೆ ನೀರು ಹಾಕ್ತಾ ಇದ್ರು. ಖೇಮು ಅಪ್ಪ ಕೇಳಿದ ‘ನನ್ನ ಮಗನಿಗೆ ನೀವು ೨೦೦೦ ರುಪಾಯಿಗೆ ಬೆಂಜ್ ಕಾರ್ ಮಾರಿದ್ರಂತೆ. ಯಾಕಂತ ಕೇಳಬಹುದಾ?’.

ಆಂಟಿ ಹೇಳಿದ್ಳು ‘ನನ್ನ ಗಂಡ ಒಂದು ವಾರದಿಂದ ಮನೆಯಲ್ಲಿ ಇಲ್ಲ. ಇವತ್ತು ಬೆಳಿಗ್ಗೆ ಕಾಲ್ ಮಾಡಿ, ನಾನು ನನ್ನ ಸೆಕ್ರೆಟರಿ ಜೊತೆ ಹೋಗ್ತಾ ಇದ್ದೀನಿ. ಇನ್ಮೇಲೆ
ಮನೆಗೆ ಬರಲ್ಲ. ನಾನು ಅವಳ ಜತೆನೇ ಇರ್ತೀನಿ. ನಿನ್ನ ಹೆಸರಿಗೆ ಈಗಾಗಲೇ ಬೇಕಾದಷ್ಟು ದುಡ್ಡು ಇಟ್ಟಿದ್ದೇನೆ. ಮನೆಯಲ್ಲಿ ಇರೋ ಬೆಂಜ್ ಕಾರು ನನ್ನ
ಹೆಸರಲ್ಲಿದೆ. ಅದನ್ನ ಮಾರಿ ಆ ದುಡ್ಡನ್ನ ನನ್ನ ಅಕೌಂಟಿಗೆ ಹಾಕು ಅಂದ. ಅದಕ್ಕೇ ಮಾರಿದೆ’

ಲೈನ್ ಮ್ಯಾನ್

ಒಂದೇ ದಿನ ಎರಡೆರಡು ಸಿನಿಮಾಗಳು ಬಿಡುಗಡೆ ಆಗ್ತಾ ಇರೋದನ್ನ ನೋಡಿದ ಪ್ರೇಕ್ಷಕ ಹೇಳುತ್ತಿರೋ ಮಾತು
-ಕನ್ನಡದಾ ಮಕ್ಕಳೆಲ್ಲಾ ಒಂದಾಗಿ ಬರಬೇಡಿ
ಜತೆಗೇ ಬರ್ತಾ ಇರೋ ಎರಡು ಸಿನಿಮಾಗಳು ಹೇಳ್ತಾ ಇರೋದೇನು?
-ಇದು ಒಂಟಿ ಸಲಗ ಅಲ್ಲ
-ನಾನು ಕೋಟಿಗ್ ಒಬ್ಬನೂ ಅಲ್ಲ
ಕೊಹ್ಲಿ ಹೊಡೆಯೋ ಸಿಕ್ಸರ್ ಗಳು ಬೌಂಡರಿ ಗೆರೆಯ ಬಳಿಯೇ ಬೀಳುತ್ತವೆ- ಸಂಜಯ್ ಮಂಜ್ರೇಕರ್
ಸಾರ್, ಎಷ್ಟ್ ದೂರ ಬಿದ್ರೂ ಆರೇ ರನ್ ಕೊಡೋದು
ಈ ಐಪಿಎಲ್ ಆರಂಭದಿಂದಲೂ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ತಸ್ಥಾನದಲ್ಲಿರೋದು
-‘ಪರ್ಪಲ್’ ಪಟೇಲ್
ಮ್ಯಾಕ್ಸ್ ವೆಲ್ ಬರೀ ‘ಸ್ವಿಚ್ ಹಿಟ್’ ಹೊಡೆಯೋದು ನೋಡಿದವರು ಹೇಳಿದ ಮಾತು
-ಇವ್ನಿಗೆ ‘ನೆಟ್ಟಗೆ’ ಒಂದ್ ರನ್ ಹೊಡೆಯೂಕೂ ಬರಲ್ಲ.

ಸಿದ್ದರಾಮಯ್ಯ ಅವರನ್ನೇ ಕಾಲೆಳೆಯುವ ಕಾಂಗ್ರೆಸ್ಸಿಗರು
ಸಿದ್ದ ‘ಹಸ್ತ’ರು
ಕುಮಾರಸ್ವಾಮಿ ಅವರು ಜೆಡಿಎಸ್ ಬಾವುಟದ ಜೊತೆ ಕನ್ನಡ ಬಾವುಟನೂ ಇಡ್ತಾ ಇರೋದು ಯಾಕೆ?
-ತಮ್ಮ ಜೆಡಿಎಸ್ ಪಕ್ಷ ಫ್ಲ್ಯಾಗ್ ಶಿಪ್ ಮಾಡೆಲ್ ಅಂತ ಭ್ರಮೆ ಹುಟ್ಟಿಸೋಕೆ

ನಿಖಿಲ್ ಕುಮಾರಸ್ವಾಮಿಗೆ ಗಂಡು ಮಗು ಆಯ್ತಂತೆ
-ಮಗು ಹುಟ್ಟಿದ್ರೆ ನಾಮಕರಣ ಮಾಡಬೇಕು ಅಷ್ಟೇ, ಅದಕ್ಕೂ ಕಾಮೆಂಟ್ ಮಾಡಬೇಕಾ?

ಕೆಟ್ಟ ಸೌಂಡ್ ಕ್ವಾಲಿಟಿ ಇರೋ ವೈರ್ಡ್ ಹೆಡ್ ಸೆಟ್
-‘ವಿಯರ್ಡ್’ ಹೆಡ್ ಸೆಟ್