Sunday, 15th December 2024

ಐವತ್ತರಲ್ಲೇ ಕನ್ನಡತನಕ್ಕೆ ಅಡರಿದ ಅರಳು, ಮರಳು

ಸುಪ್ತ ಸಾಗರ

rkbhadti@gmail.com

ನಾಮಕರಣದ ಐವತ್ತನೇ ವರ್ಷದಲ್ಲಿ ‘ಕರ್ನಾಟಕ’ ಮತ್ತದರ ಪ್ರಜೆಗಳಾದ ನಾವು ಇದ್ದೇವೆ. ಇಂಥ ಸನ್ನಿವೇಶದಲ್ಲೇ ‘ಕನ್ನಡಿಗ ಸಮಾಜ’ ಹಿಂದೆಂದಿ ಗಿಂತಲೂ ಹೆಚ್ಚು ವಿಘಟನಾ ಸ್ಥಿತಿಯನ್ನು ತಲುಪಿದೆ. ಅದರಲ್ಲೂ ನಾಡಿನ ರಾಜಧಾನಿಯಾದ ಬೆಂಗಳೂರೆಂಬ ಬೆಂಗಳೂರು ಗಂಭೀರವಾದ ಸ್ಥಿತ್ಯಂತರವನ್ನು ಎದುರಿಸುತ್ತಿದೆ, ಕಳೆದ ಇಪ್ಪತ್ತನೆ ಶತಮಾನದ ಅಂತ್ಯ ಭಾಗ ಹಾಗೂ ಇಂದಿನ ಇಪ್ಪತ್ತೊಂದನೆ ಶತಮಾನದ ಆರಂಭದ ಭಾಗವನ್ನು ನಾವು ಸಂಧಿಕಾಲವೆಂದು ಪರಿಗಣಿಸುವುದಾದರೆ ಅದು ಭೌತಿಕ ಕಾಲಸೂಚಿಯಷ್ಟೇ ಅಲ್ಲ. ಹಲವು ಮಜಲುಗಳಲ್ಲಿ ಈ ಸನ್ನಿವೇಶ ತೆರೆದುಕೊಳ್ಳುತ್ತದೆ.

ಮೊದಲಿಂದಲೂ ಅತ್ಯಂತ ಸ್ವಾಭಿಮಾನಿ ಸಮುದಾಯವೆನಿಸಿಕೊಂಡು ಬಂದಿರುವ ಕನ್ನಡಿಗರು ಈ ಸಂಧಿಕಾಲದಲ್ಲೇ ಬಹಳಷ್ಟು ಬದಲಾವಣೆಗಳನ್ನು ಕಂಡಿದ್ದು ಸುಳ್ಳಲ್ಲ. ವ್ಯಕ್ತಿಗತವಾಗಿ ನಾಡಿನ ಬಹಳಷ್ಟು ಮಂದಿ ಔನ್ನತ್ಯವನ್ನು ಸಾಧಿಸಿದರಾದರೂ ಸಾಮೂಹಿಕವಾಗಿ, ಒಟ್ಟಾರೆ ಸಮಾಜದ ಪುರೋಭಿ ವೃದ್ಧಿಯನ್ನು ಗಮನಿಸಿದರೆ ನಾವು ಕನ್ನಡಿಗರು ಹಿಂದಕ್ಕೆ ಮುಖಮಾಡಿರುವುದು ಸ್ಪಷ್ಟ. ನಾಡಿನ ಒಳ ಹೊರಗೆ, ದೇಶ ವಿದೇಶಗಳಲ್ಲೂ ಚದುರಿ
ಹೋಗಿರುವ ಕನ್ನಡಿಗರು ಸಂಘಟನಾತ್ಮಕ ದೃಷ್ಟಿಕೋನದಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅತ್ಯಂತ ನಿಷ್ಠುರ ಪದಗಳಲ್ಲಿ ಹೇಳುವುದಿದ್ದರೆ ಹೊರಗಿನ ಪ್ರಹಾರ ನಮ್ಮನ್ನು ಇಂದು ನಿಜಕ್ಕೂ ದಾಲಿತ್ಯದ ಸ್ಥಿತಿಗೆ ತಂದು ನಿಲ್ಲಿಸಿದೆ.

ಹಾಗೆ ನೋಡಿದರೆ, ಜಗತ್ತಿಗೆ ಭಾಷಾ ಔದಾರ್ಯವನ್ನು ಕಲಿಸಿದ್ದೇ ನಾವು ಕನ್ನಡಿಗರು. ಬಹುಶಃ ಇದೇ ನಮಗೆ ಮುಳುವಾಗಿರಲಿಕ್ಕೂ ಸಾಕು. ನಮ್ಮ ಭಾಷಾ ಪರಂಪರೆ ಪ್ರಾಚೀನ ವಾದುದಷ್ಟೇ ಅಲ್ಲ ಚಲನಶೀಲವಾದುದು. ಮಹಾ ಪರಿವರ್ತನಶೀಲ ಪ್ರವರ್ತಕರು, ವಿಶ್ವದ ಗಮನವನ್ನು ಸೆಳೆದ ಸಾಹಿತಿಗಳ, ಬರಹಗಾರರ, ಕವಿಗಳ, ಮಹರ್ಷಿಗಳ, ವಿಜ್ಞಾನಿಗಳ, ಸಾಧಕರ ಸಮುದಾಯ ನಮ್ಮದು ಎಂಬುದೊಂದು ಹೆಮ್ಮೆ. ಅಂಥ ಕನ್ನಡಿಗ ಸಮುದಾಯಕ್ಕೆ ಇಂದು ಸ್ಪಷ್ಟ ಮಾರ್ಗದರ್ಶನ ಮತ್ತು ಪರಂಪರೆಯ ಪರಿಕಲ್ಪನೆಗಳಿಲ್ಲದ ಪರಿಣಾಮ ಅಭಿವೃದ್ಧಿಯ ಹಾದಿಯಲ್ಲಿ ಅಧಃಪತನದ ಆತಂಕವನ್ನು ಎದುರಿಸುತ್ತಿದ್ದೇವೆ ಎಂಬುದು ಸೂರ್ಯ ಸ್ಪಷ್ಟ.

ಅಖಂಡತೆ, ಏಕತೆಯ ಪ್ರತೀಕವಾಗಿದ್ದ ಕನ್ನಡಿಗರು ಒಂದಾಗಿ ನಿಲ್ಲುವುದೇ ಬಹುದೊಡ್ಡ ಸಾಹಸವಾಗಿದೆ. ಸಮಕಾಲೀನ ಕನ್ನಡ ಭಾಷೆ ಹತ್ತು ಹಲವು ಸಮಸ್ಯೆಗಳ ಕೂಪದಲ್ಲಿ ತೊಳಲುತ್ತಿದೆ. ಈ ಸನ್ನಿವೇಶದಲ್ಲಿ ಕನ್ನಡಿಗರ ಮೂಲಭೂತ ಆಶಯ ವನ್ನು ಎತ್ತಿ ಹಿಡಿಯುವ ಕಾಯಕ ಸರಕಾರಗಳಿಂದಾಗಲೀ,
ಸಂಘಟನೆಗಳಿಂದಾಗಲೀ ಆಗುತ್ತಿಲ್ಲ. ನಿರ್ದಿಷ್ಟ ಪ್ರದೇಶ ವೊಂದರಲ್ಲಿ ಜನಿಸಿದ ವ್ಯಕ್ತಿ, ಅವನು ಉದ್ಯಮಿ, ಅಧಿಕಾರಿ, ರಾಜಕೀಯ ಮುಖಂಡ, ಬರಹಗಾರ ಹೀಗೆ ಯಾವುದೇ ಕ್ಷೇತ್ರದಲ್ಲಿರಬಹುದು, ಆತ ತನ್ನ ಕೈಂಕರ್ಯದ ಅರ್ಥ ಶೋಧನೆಯನ್ನು ತನ್ನ ತಾಯ್ನೆಲದ ಬಗೆಗಿನ ಅಭಿಮಾನದ ನೆಲೆಯಲ್ಲೇ ಕಂಡುಕೊಳ್ಳಬೇಕು.

ತನ್ನ ಕಾಯಕಕ್ಕೆ ನ್ಯಾಯ ಬದ್ಧತೆ ಕಂಡುಕೊಳ್ಳುವ ಮಾರ್ಗವಾಗಿ ನಾಡು, ನುಡಿಯ ಬಗ್ಗೆ ಪ್ರತಿಯೊಬ್ಬನೂ ವಿಮರ್ಶೆಗಿಳಿಯಲೇಬೇಕು. ಅದಾಗುತ್ತಿಲ್ಲ. ಕನ್ನಡತನವೆನ್ನುವುದು ನಮ್ಮಿಂದ ಮರೆಯಾಗಿ ನಾವು ಯಾವ ವೃತ್ತಿಯಲ್ಲಿದ್ದೇವೋ, ಯಾವ ಪ್ರದೇಶದಲ್ಲಿದ್ದೇವೋ ಅದೇ ಆಗುತ್ತಿದ್ದೇವೆಯೇ ವಿನಃ ಮೂಲ ಬೇರನ್ನು ಮರೆತು ಬಿಡುತ್ತಿದ್ದೇವೆ. ಈಗಿನ ಜಾಗತಿಕ ಜೀವನ ವಲಯದಲ್ಲಿ ಪ್ರತಿಯೊಂದೂ ಭಾಷಾ ಸಮುದಾಯದ ವಿಮರ್ಶೆ ತುರ್ತು ಅಗತ್ಯವೆಂದು ಭಾವಿಸುತ್ತೇನೆ.

ಪ್ರಾಯಶಃ ಇದು ಕೇವಲ ಕನ್ನಡದ ಸ್ಥಿತಿಯಷ್ಟೇ ಅಲ್ಲ. ಒಟ್ಟಾರೆ ಸ್ಥಳೀಯ ಭಾಷಾ ವಲಯಕ್ಕೇ ಸಂಬಂಧಿಸಿದ ಪ್ರಶ್ನೆ. ಜೀವನ ವ್ಯವಸ್ಥೆಯನ್ನು ಅರ್ಥೈಸುವಲ್ಲಿ ಅಥವಾ ವಿಮರ್ಶಿಸುವಲ್ಲಿ ಭಾಷೆಗೆ ಬಹುಮುಖ್ಯ ಸ್ಥಾನವಿದೆ. ಇದು ಅರ್ಥವಾಗಬೇಕಾದಲ್ಲಿ ನಮ್ಮ ಭಾಷೆ ಬೆಳೆದು ಬಂದ ಬಗೆಗಿನ ಸಮಗ್ರ
ಕಲ್ಪನೆ ಅಗತ್ಯ. ಕನ್ನಡದ ಬೆಳವಣಿಗೆಯ ಹಿನ್ನೋಟದಲ್ಲಿ ನಮಗೆ ಸಾಮರಸ್ಯವೊಂದೇ ಅಲ್ಲ, ಹಿಂಸೆ, ಯುದ್ಧ, ಸಂಘರ್ಷಗಳ ಪುಟಗಳೂ ಕಂಡುಬರು ತ್ತವೆ. ಇಂದಿನ ವೈಚಾರಿಕ, ಜಾಗತೀಕರಣ ಯುಗವೂ ಇದರಿಂದ ಹೊರತಲ್ಲ. ಅವೆಲ್ಲದರ ಹೊರತಾಗಿಯೂ ಉಳಿದು ಬೆಳೆದು ಬಂದ ಕನ್ನಡ ಇಂದು ಬೆಂಗಳೂರಿನಂಥ ಬಹು ಸಂಸ್ಕೃತಿಯ ನಗರ ಜೀವನದ ದಾಳಿಗೆ ನಲುಗುತ್ತಿದೆ. ನಮ್ಮೊಳಗಿನ ಸಹಜ ಭಾವನೆಗಳನ್ನು ಅಷ್ಟೇ ಸಹಜವಾಗಿ ಅಭಿವ್ಯಕ್ತಿಸಲು ನಮಗೆ ನಮ್ಮ ಮಾತೃಭಾಷೆಯೊಂದರಿಂದಲೇ ಸಾಧ್ಯವೇ ವಿನಃ ಮತ್ತೊಂದರಿಂದಲ್ಲ. ಅದನ್ನು ನಿರ್ಲಕ್ಷಿಸಿದ್ದೇವೆಂಬುದು ದುರಂತ.

ಬಂಡವಾಳಶಾಹಿ ಪರಿಕಲ್ಪನೆಯಡಿಯ ಸಮಕಾಲೀನ ಜೀವನ ಕ್ರಮದಲ್ಲಿ ಭೋಗವೇ ಬದುಕಿನ ಪ್ರಧಾನ ಸಂಗತಿ ಎಂದುಕೊಂಡು ಬಿಟ್ಟಿದ್ದೇವೆ. ಇದು ಕೊಳ್ಳುಬಾಕತನವನ್ನು ಪ್ರೋತ್ಸಾಹಿಸುತ್ತಿದೆ. ತಂತ್ರeನದ ಬೆಳವಣಿಗೆಯೊಂದಿಗೆ ಆಧುನಿಕ ಜೀವನವೆಂದರೆ ‘ನನ್ನದು ಎಂಬುದೆಲ್ಲ ನಿಕೃಷ್ಟ’ ಎಂಬ ಮನೋಭಾವ ಬೆಳೆದು ಬಂದುಬಿಟ್ಟಿದೆ. ಪಾರಂಪರಿಕ ಭಾಷಾ ವಲಯಗಳು, ಭಾವನಾ ಲಹರಿ, ಸಾಂಪ್ರದಾಯಿಕ ನಂಬಿಕೆಗಳು, ಆಚರಣೆ, ಜೀವನ ಶಿಸ್ತುಗಳ ಮೇಲೆ ಸೊಲ್ಲೆತ್ತಲಾ ಗದಂಥ ಆಕ್ರಮಣವನ್ನು ‘ಆಧುನಿಕ ಜೀವನ ಶೈಲಿ’ ನಡೆಸಿಬಿಟ್ಟಿದೆ.

ಇದರ ಫಲವಾಗಿ ದೇಸೀ ಆಚರಣೆಗಳು, ಹಬ್ಬ ಸಂಪ್ರದಾಯ ಮುಂತಾದ ನಮ್ಮತನದ ಮೇಲೆ ಹೊರಗಿನ ಆಕರ್ಷಣೆಗಳು ದಾಷ್ಟ ತೋರುತ್ತಿವೆ. ಆದ್ದರಿಂದಲೇ ಏಕರೂಪಿ ಜೀವನ ಕ್ರಮದಲ್ಲಿ ವೈಶಿಷ್ಟ್ಯ ಮರೆಯಾಗಿ ಬಿಟ್ಟಿದೆ. ಇಂಥ ಸಂಕೀರ್ಣತೆಯಲ್ಲಿ ಕನ್ನಡತನದ ಪುನರ್ಸ್ಥಾಪನೆಯೆಂಬುದು ಮತ್ತಷ್ಟು ಜಟಿಲವೂ, ಅರ್ಥಹೀನವೂ ಅನಿಸಿಕೊಳ್ಳುತ್ತಿದೆ. ಇದರ ಅರಿವಾಗಬೇಕಾದಲ್ಲಿ ತಾತ್ವಿಕವಾಗಿ ನಮ್ಮ ಪರಂಪರೆಯ ಕುರಿತು ಚಿಂತನೆ ನಡೆಸಬೇಕಿದೆ. ಭಾವನೆ ಎಂಬುದು ಕನಸು, ಫ್ಯಾಂಟಸಿಗಳ ಲೋಕವಾಗಿ ತೋರುತ್ತಿರುವಾಗ ಇಂಥ ಸ್ಥಿತಿಯ ಪರಿವರ್ತನೆ ಸಣ್ಣ ಮಾತಲ್ಲ. ಹೊಸ ಸಮಾಜವೊಂದರ ನಿರ್ಮಾಣಕ್ಕೆ ಅಂಥದೇ ಕಸುವು ತುಂಬಿದ ಕ್ರಾಂತಿ, ಚಳವಳಿಯೊಂದರ ಅಗತ್ಯವಿದೆ.

ಇದೆಲ್ಲಕ್ಕಿಂತ ಮಿಗಿಲಾಗಿ ಮಾನವ ಸಹಜ ಪ್ರವೃತ್ತಿಯಲ್ಲಿಯೇ ಈ ಕ್ರಾಂತಿ ಘಟಿಸಬೇಕಿದೆ. ಹಿಂದೆ ಇಂಥದ್ದೇ ಸನ್ನಿವೇಶದಲ್ಲಿ ಗೋಕಾಕ್ ಚಳವಳಿಯಂಥವು ನಡೆದವು. ಅಂಥ ಕ್ರಾಂತಿಗೆ ಮತ್ತೊಮ್ಮೆ ನಾವು ಸಜ್ಜಾಗಬೇಕಿದೆ. ಬಹು ಮುಖಿ ಸಂಸ್ಕೃತಿಯ ಹೆಸರಿನಡಿ ಕನ್ನಡದ ದೇಸಿ ಜೀವನ ಕ್ರಮ ಪಾಲನೆಗೆ ನಾವಿಂದು ಹಿಂಜರಿಯುತ್ತಿದ್ದೇವೆ. ನಮ್ಮ ಸಾಂಸ್ಕೃತಿಕ ಒಳತೋಟಿಯೇ ನಾಶವಾಗುತ್ತಿದೆ. ನಮ್ಮ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ನೆಲೆಗಳು ಸಂಪೂರ್ಣ ಛಿದ್ರ ಗೊಂಡಿವೆ.

ಜೀವನ ಕ್ರಮವೆನ್ನುವುದು ನಗರ ವಲಯದಲ್ಲಿ ಸುತ್ತಲಾರಂಭಿಸಿ ವ್ಯಕ್ತಿ, ತನ್ನ ಮೂಲ ಗ್ರಾಮೀಣ ಸೃಜನಶೀಲತೆಗೆ ಪ್ರತಿಸ್ಪಂದಿಸುವುದನ್ನೇ ಮರೆತುಬಿಡುತ್ತಿದ್ದಾನೆ. ಹೋಗಲಿ ಎಂದರೆ ಹಾಗೆ ನಗರಕ್ಕೆ ವಲಸೆ ಹೋದ ಯುವಕರಾದರೂ ಅಲ್ಲಿ ತಮ್ಮತನವನ್ನು ಉಳಿಸಿಕೊಂಡಿದ್ದಾರೆಯೇ ಎಂದರೆ
ಕನಿಷ್ಠ ಮನೆಯಲ್ಲಿ ಕನ್ನಡ ಮಾತಾಡುವುದೂ ಅವರಿಗೆ ಬೇಡ ವಾಗಿದೆ. ಅಂಥದೊಂದು ಪ್ರೇರಣೆಯ ಬಗ್ಗೆ ಸಣ್ಣ ಚರ್ಚೆಗೂ ಅವಕಾಶವಾಗುತ್ತಿಲ್ಲ. ಅವಕಾಶಹೀನ ಮಾರ್ಗದಲ್ಲಿ ಎಲ್ಲೋ ಕೆಲವೆಡೆ ಹುಟ್ಟುವ ಸಣ್ಣ ದನಿಗಳೂ ಆಧುನಿಕತೆಯ ಆರ್ಭಟದಲ್ಲಿ ಕೇಳದಾಗಿದೆ.

ಇದೇ ಕಾರಣಕ್ಕೆ ಬಹುರಾಷ್ಟ್ರೀಯ ಕಂಪನಿಯೊಂದರಿಂದ ಕನ್ನಡಿಗ ಉದ್ಯೋಗಿಯನ್ನು ಹೊರದಬ್ಬಿದರೂ, ಕೀಳಾಗಿ ಕಂಡರೂ ನಮಗದು ದೊಡ್ಡದಾಗಿ ಕಾಣುತ್ತಿಲ್ಲ. ಪ್ರತೀ ಕನ್ನಡಿಗನಲ್ಲಿಯೂ ಆಂತರಿಕವಾಗಿ ಜನಿಸುವ ಸ್ವಪ್ರಜ್ಞೆಯೊಂದೇ ಇದಕ್ಕಿರುವ ಪರಿಹಾರ. ಆರ್ಥಿಕ, ಔದ್ಯಮಿಕ, ಉದ್ಯೋಗ ಕೇಂದ್ರಿತ ಈ ಜಗದಲ್ಲಿ ಉಳಿದೆಲ್ಲವೂ ಗೌಣವಾಗಿದೆ. ನಾಗರಿಕತೆಯ ಆಂತರಿಕ ಸಾಂಗತ್ಯಕ್ಕೆ ಇಲ್ಲಿ ಅರ್ಥವೇ ಉಳಿದಿಲ್ಲ. ಮಾನವೀಯ ಭಾವತೀವ್ರತೆಯೇ ಮನುಷ್ಯನ ಅನ್ವರ್ಥವೆಂಬುದು ಈ ವ್ಯವಸ್ಥೆಯ ತರ್ಕಕ್ಕೆ ಸಿಲುಕಿ ನಾಶವಾಗಿದೆ. ಯಂತ್ರ ಯುಗದಲ್ಲಿ ಮನುಷ್ಯ ಆತ್ಮಹೀನವಾಗಿ ಬಿಟ್ಟಿದ್ದಾನೆ. ಈ ಬಗ್ಗೆ ಅಲ್ಲಲ್ಲಿ ಕೆಲ ಆತಂಕಗಳು ಧ್ವನಿಸಿದೆಯಾದರೂ ಜಾತ್ರೆಯ ಗದ್ದಲದೆಡೆಗೆ ದಾಟುವ ಪ್ರಯತ್ನ ಇಣುಕಿದ್ದರೂ ಅದು ಭೀಮನೆಗೆತವಾಗಿಲ್ಲ.

ಇದಕ್ಕೆ ಕನ್ನಡಿಗನೂ ಬೇರೆಯಲ್ಲ. ಜಾಗತೀಕರಣದ ಈ ಸನ್ನಿವೇಶದಲ್ಲಿ ಕನ್ನಡದ ಉಳಿವು ಎಂಬುದು ವೃಥಾಲಾಪವಾಗಿ ತೋರುತ್ತಿರುವುದು ದುರಂತ. ವಸಾಹತುಶಾಹಿ ಚಿಂತನಾ ಕ್ರಮಗಳಲ್ಲಿನ ಜಡತೆಯೇ ಕನ್ನಡವನ್ನೂ ಆವರಿಸಿಕೊಂಡಿದೆ. ವಸಾಹತೋತ್ತರ ಭಾರತದ ಮೇಲೆ ಅಚ್ಚಳಿಯದೇ ಉಳಿದು ಹೋದ ಪಾಶ್ಚಾತ್ಯ ಪರಂಪರೆಯ ಕಲೆಗಳು ನಮ್ಮ ಮನಸ್ಸುಗಳನ್ನು ದಿನ ದಿಂದ ದಿನಕ್ಕೆ ಕಂಗೆಡಿಸುತ್ತಿದೆ. ಈ ನೆಲದ ಭಾವನಾತ್ಮಕ ಆಕೃತಿಗಳು ಮನ್ನಣೆ ಕಳೆದುಕೊಂಡಿವೆ. ಆನುಷಂಗಿಕವಾದ ಅಮುಖ್ಯ ಸಂಗತಿಗಳಿಗೆ ಒತ್ತು ನೀಡುತ್ತಿರುವ ಪರಿಣಾಮ ಸಾಮೂಹಿಕ ಆಸಕ್ತಿಗಳು ಕರಗಿಹೋಗಿವೆ. ಆಸಕ್ತಿ ಹಾಗೂ
ಅನಿವಾರ್ಯ ಇವೆರಡರ ನಡುವಿನ ಸಂಘರ್ಷದಿಂದಾಗಿ ಗೊಂದಲಮಯ ಜೀವನ ಪ್ರತಿ ಕನ್ನಡಿಗನ ಪಾಲಿನದಾಗಿದೆ.

ಜೀವನದ ಸಮಗ್ರ ತಿಳಿವಳಿಕೆಗೆ ಕಾರಣವಾಗುವ ಪ್ರೀತಿಯ ಅನುಪಸ್ಥಿತಿಯಲ್ಲಿ ಮನಸ್ಸು ನಿರ್ದಯವಾಗಿದೆ. ನಿರ್ದಯ ಸ್ಪರ್ಧೆ ಹಾಗೂ ಪರಸ್ಪರ ನಾಶಗಳ ವಿಷ ಚಕ್ರದಲ್ಲಿ ನಮ್ಮ ಕನ್ನಡತನ ಅರಳುವ ಅವಕಾಶವನ್ನೇ ಕಳೆದುಕೊಂಡಿರುವುದು ದುರದೃಷ್ಟಕರ. ಸ್ವತಂತ್ರ ನೆಲೆಯ ಆಲೋಚನೆಯನ್ನು ನಾವು ಕನ್ನಡಿಗರು ಇಂದು ಕಳೆದುಕೊಂಡು ಬಿಟ್ಟಿದ್ದೇವೆ. ನಿರ್ದಿಷ್ಟ ವಿನ್ಯಾಸ ಗಳಿಗಷ್ಟೇ ಸೀಮಿತವಾಗಿರುವ ಆಧುನಿಕ ಮನಸ್ಸುಗಳಿಂದ ನಮ್ಮ ಶಕ್ತಿ ಎನಿಸಿದ್ದ ಸೃಜನಶೀಲತೆ ಕಳೆದು ಹೋಗುತ್ತಿದೆ. ಕನ್ನಡಿಗರ ಪ್ರಾಬಲ್ಯ ಅಡಗಿದ್ದುದೇ ನಮ್ಮ ಅವಿಭಜಿತ ಕುಟುಂಬ ವ್ಯವಸ್ಥೆಯಲ್ಲಾಗಿತ್ತು. ಮೂಲಭೂತ ಸಂಘಟಿತ
ಜೀವನ ಕ್ರಮದಲ್ಲಿನ ಶಕ್ತಿ ಈ ಸನ್ನಿವೇಶದಲ್ಲಿ ಕುಂದಿರುವುದು ಜಾಗತೀಕರಣದ ನಿಶ್ಶಬ್ದ ಪರಿಣಾಮಗಳಲ್ಲಿ ಪ್ರಮುಖ. ಹೀಗಾಗಿ ಗ್ರಾಮಗಳ ಯುವಕರು ನಗರ ಸೇರುತ್ತಿದ್ದಾರೆ.

ನಗರೀಕರಣದ ಸುಖದಲ್ಲಿ ತೇಲುವ ಅದೇ ಯುವ ಜನಾಂಗಕ್ಕೆ ಕನ್ನಡಕ್ಕಿಂತ ಇಂಗ್ಲಿಷ್‌ನಂಥ ಭಾಷೆಯೇ ಪ್ರತಿಷ್ಠೆ ಆಗುತ್ತಿದೆ. ಹೀಗಾಗಿ ತಮ್ಮ ಮಕ್ಕಳಿಂದ ಕನ್ನಡವನ್ನು ದೂರ ಇಡುತ್ತಿದ್ದಾರೆ. ಪರಿಣಾಮ ಒಂದಿಡೀ ತಲೆಮಾರು ಕನ್ನಡದಿಂದ ದೂರ ಹೋಗುತ್ತಿದೆ. ನೆಲೆಗೊಂಡ ಇಂಥ ಮನೋಭಾವದ ವಿರುದ್ಧ ಮೂಡಿಸಬಹುದಾದ ಆಂತರಿಕ ಜಾಗೃತಿ ಸುಲಭದ ಮಾತಲ್ಲ. ಒಂದೋ ಸಂಪೂರ್ಣ ನಾಶದ ತುದಿಯಲ್ಲಿ ಎಚ್ಚರ ಬರಬೇಕು. ಇಲ್ಲವೇ ಮುಂದಾಗಬಹು
ದಾದ ಅನಾಹುತದ ಕುರಿತು ಬಲವಾದ ಚಳವಳಿಯೇ ರೂಪುಗೊಳ್ಳಬೇಕು. ಕನ್ನಡದ ಅತ್ಯಂತ ಸಂಕೀರ್ಣ ಇಂದಿನ ಸ್ಥಿತಿಯಲ್ಲಿ ಇವೆರಡೂ ಕಷ್ಟ ಸಾಧ್ಯ. ಸಂಸ್ಕೃತಿಯ ಅಂತಃ ಶ್ಚೇತನವನ್ನು ಪುನಃ ಜಾಗೃತಿಗೊಳಿಸುವುದು ಯಾವುದೇ ರಕ್ತಪಾತದಂಥ ಕ್ರಿಯೆಗಳಿಂದ ಆಗುವ ಮಾತಲ್ಲ.

ಯಾವುದೇ ವಿಚಾರರಲಿ, ‘ನಾನೇ ಶ್ರೇಷ್ಠ, ನನ್ನದೇ ಸರಿ’ ಎಂಬ ಅಹಮಿಕೆ ಸಂಬಂಧಕ್ಕೆ ಮಾರಕ. ಇದು ಭಾಷೆಗೂ ಅನ್ವಯ. ನಮ್ಮ ಇಂಥ ವಿಚಿತ್ರ ಽಮಾಕು ಎಂಥದೇ ಭದ್ರ ತಳಹದಿಯನ್ನಾದರೂ ಹಾಳುಗೆಡಬಿಡಬಲ್ಲುದು. ಇದು ನಮ್ಮ ಅಜ್ಞಾನದ -ಲ. ಭಾಷೆಯೆ ವಿಚಾರದಲ್ಲಿ ಪರಸ್ಪರ ತುಲನೆಯೂ ಸಂಬಂಧವನ್ನು ಕೆಡಿಸುತ್ತದೆ. ಭೇದರಹಿತ, ಸಮಾನ ನೆಲೆಯ ವೈಚಾರಿಕ ಮನಸ್ಸು ಮಾತ್ರ ಇವೆಲ್ಲದರಿಂದ ಹೊರತಾಗಿ ಸುಂದರ ಬಾಂಧವ್ಯವನ್ನು ಉಳಿಸಿಕೊಳ್ಳುತ್ತದೆ. ಗಟ್ಟಿಗೊಳಿಸುತ್ತದೆ. ನಿರಂತರ ಸಂವಾದದೊಂದಿಗೆ ಇತರರ ಆಲೋಚನೆಗಳನ್ನೂ ಸ್ವೀಕರಿಸಿ, ಗೌರವಿಸುವುದು ಅತ್ಯಂತ ಅಗತ್ಯ. ಕನ್ನಡದಲ್ಲಿ ಇದು ಆಘುತ್ತಲೇ ಬಂದಿದೆ. ಸಂಸ್ಕೃತ ಸೇರಿದಂತೆ ಜಗತ್ತಿನ ಅವೆಷ್ಟೋ ಭಾಷೆಯ ಪದಗಳನ್ನು ನಾವು ಎರವು ಪಡೆದು ನಮ್ಮದೇ ಪದ ಗಳೆಂಬಂತೆ ಬಳಸುತ್ತ ಬಂದಿದ್ದೇವೆ.

ಅವೀಗ ಕನ್ನಡದ್ದೇ ಪದಗಳಾಗಿಬಿಟ್ಟಿವೆ. ಬೇಕಿದ್ದರೆ ನೋಡಿ, ಉತ್ತರ ಕನ್ನಡಕ್ಕೆ ಹೋದರೆ ಹಿಂದಿ, ಮರಾಠಿ, ಕೊಂಕಣಿಯ ಪದಗಳೂ ಢಾಳಾಗಿ ಸ್ಥಳೀಯ ಆಡುಭಾಷೆಗಳಲ್ಲಿ ಕಾಣುತ್ತವೆ. ಬೆಳಗಾವಿಗೆ ಹೋದರೆ ಮರಾಠ, ಬೀದರ್‌ನಲ್ಲಿ ಉರ್ದು, ಕೋಲಾರದಲ್ಲಿ ತಮಿಳು, ತೆಲಗು, ದಕ್ಷಿಣ ಕನ್ನಡದಲ್ಲಿ ಮಲೆಯಾಳದ ಪದಗಳೇನಕವು ನಮ್ಮದೇ ಕನ್ನಡದ ಪದಗಳಾಗಿ ಬಳಕೆಯಲ್ಲಿವೆ. ಹಾಗೆಂದು ತೀರಾ ಅವಲಂಬನೆ ಕೂಡ ಭಾಷಾ ಭದ್ರತೆ ಯನ್ನು ಘಾಸಿಗೊಳಿಸಬಹುದು. ಇಂಗ್ಲಿಷ್ ವಿಚಾರದಲ್ಲಿ ಈಗಾಗಿರುವುದೂ ಅದೇ. ಅತಿ ಅವಲಂಬನೆ ಪ್ರತಿರೋಧಕ್ಕೆ, ಜುಗುಪ್ಸೆಗೆ ಮಾರ್ಗವಾಗುತ್ತದೆ. ನಾವು ಪಡೆಯುವ ನೆರವು ನಮ್ಮ ಪ್ರಯತ್ನಕ್ಕೆ ಪೂರವಾಗಿಯಷ್ಟೇ ಇರಬೇಕು. ಸ್ವಪ್ರಯತ್ನಲ್ಲದ, ಪ್ರತಿಫಲ ನೀಡದ ಸ್ವಾರ್ಥ ಗುಲಾಮತನವೆಂದೂ ಕರೆಸಿಕೊಳ್ಳು ತ್ತದೆ.

ನಮ್ಮ ಖಾಲಿತನವನ್ನು ಪ್ರದರ್ಶಿಸಿದಂತೆಲ್ಲ ನಮ್ಮಿಂದ ಇತರರು ದೂರಾಗಿಬಿಡುವ ಅಪಾಯಗಳಿವೆ. ಹೃದಯದ ವ್ಯಾಪಾರವಾಗಿ ಬಾಂಧವ್ಯ ಬೆಳೆಯದಿದ್ದರೆ ಇನ್ನೊಬ್ಬರ ಆಗು ಹೋಗುಗಳನ್ನು ಗಮನಿಸಲು ನಮಗೆ ಪುರುಸೊತ್ತಿಲ್ಲದಂತಾಗುತ್ತದೆ. ಅಷ್ಟು ಜಡತ್ವವೂ ಸಲ್ಲ. ಮೂಲತಃ ಕನ್ನಡ ಸಂಸ್ಕೃತಿ ಅತ್ಯಂತ ಸಬಲವಾದದ್ದು. ಸಣ್ಣ ಪುಟ್ಟ ಹೊಡೆತಗಳಿಂದ ಅದು ಬಗ್ಗುವಂತಹುದಲ್ಲ. ಆದರೂ ನಿರಂತರ ದಾಳಿ ಕೆಲಮಟ್ಟಿಗೆ ಅದನ್ನು ಘಾಸಿಗೊಳಿಸಿ ಬಿಡಬಹುದಾದ್ದರಿಂದ ಈ ನಿಟ್ಟಿನಲ್ಲಿ ಸ್ವಜಾಗರಣದ, ಭಾವ ಜಾಗೃತಿಯ ಆಂದೋಲನ ವೊಂದರ ಅಗತ್ಯ ಎದ್ದು ಕಾಣುತ್ತಿದೆ. ದೇಶದ ಅತಿ ಪುಟ್ಟ, ಆದರೆ ಅತಿ ಪುರಾತನ ಭಾಷಾ ಸಮುದಾಯದ ಮೇಲೆ ಆಧುನಿಕತೆಯ ನಿರಂತರ ಆಕ್ರಮಣದ ಜತೆಗೆ ದೇಸೀತನದ ಬಗೆಗಿನ ಕೀಳರಿಮೆ ಈ ಆತಂಕಕ್ಕೆ ಕಾರಣ. ಇದನ್ನು ಮೆಟ್ಟಿ ನಿಲ್ಲೋಣ.

ಹಾಗೆಂದು ಹೊರಗಿನ ಎಲ್ಲ ಸುಧಾರಣೆಗಳನ್ನು, ಆಧುನಿಕತೆಯನ್ನು ನಾವು ತಿರಸ್ಕರಿಸಬೇಕೆಂದೂ ಅಲ್ಲ. ಆ ಹಠವೂ ನಮಗೆ ಬೇಡ. ಆದರೆ ಸಾಮರಸ್ಯದ ಜತೆಜತೆಗೇ ಮೂಲ ಕನ್ನಡತನದ ಸ್ವಂತಿಕೆಯನ್ನು, ಅದರ ಅಸ್ತಿತ್ವವನ್ನು ಉಳಿಸಿಕೊಂಡು ಹೋಗ ಬೇಕಾದ್ದು ಇಂದಿನ ತುರ್ತು. ಹಾಗಿದ್ದಲ್ಲಿ ಕನ್ನಡ, ಕನ್ನಡಿಗನ ಎಂದಿನ ಶ್ರೇಷ್ಠತೆ ಉಳಿದೀತು.