ಕನ್ನಡ ಕಸ್ತೂರಿ
ಡಾ.ಗೀತಾ ಬಸವರಾಜು
‘ನಾವೆಲ್ಲರೊಡಗೂಡಿ ಒಡನಾಡಿ ಕಲೆತು, ಕನ್ನಡದ ಸೇವೆಯಲಿ ನಮ್ಮ ಮೈ ಮರೆತು, ಕುಂದು-ಕೊರತೆಗಳೊಂದಕಿಂಬಿಲ್ಲದಂತೆ, ದೇವಿ ಕರುಣಿಸಲಿ ವರವ’- ತೀನಂಶ್ರೀಯವರ ಈ ನುಡಿ ಎಷ್ಟೊಂದು ಅರ್ಥಪೂರ್ಣ. ಕನ್ನಡವೆಂದರೆ ಬರೀ ನುಡಿಯಲ್ಲ. ಅದೊಂದು ಸಂಸ್ಕೃತಿ, ಬದುಕು, ಭಾವನೆ, ಜೀವನ ವಿಧಾನ. ಕೇಶಿರಾಜ ಹೇಳುವಂತೆ ಶ್ರವಣ ಮತ್ತು ಚಾಕ್ಷುಷ ಎರಡೂ ಒಂದೇ ಆಗಿರುವ ವಿಶ್ವದ ಅಪರೂಪದ ಭಾಷೆ.
ಸ್ವಂತ ಲಿಪಿ, ಸ್ವಂತ ಸಂಖ್ಯೆ, ಸ್ವಂತ ವ್ಯಾಕರಣ, ಸುಂದರ ವರ್ಣಮಾಲೆ, ಉಚ್ಚರಿಸುವುದನ್ನೇ ಬರೆಯುವ, ಬರೆದಿದ್ದನ್ನೇ ಉಚ್ಚರಿ ಸುವ ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡದ ಶಬ್ದ, ಧ್ವನಿ, ಹಾಡುಗಳಲ್ಲಿ ಮಾನವನ ಬದುಕಿಗೆ ಸ್ಪೂರ್ತಿ ನೀಡುವ ಬೆಳಕಾಗುವ ಪ್ರಖರ ಶಕ್ತಿ ಇದೆ. ಕನ್ನಡ ಭಾಷೆಯೆಂದರೆ ನುಡಿ, ಬೆಡಗು, ಅದು ಸೊಬಗಿನ ಸೋನೆ, ಬೆಳಕಿನ ಖಜಾನೆ. ಅಲ್ಲಮನ ಶೈಲಿಯಲ್ಲಿ ಅದು ಜ್ಯೋತಿರ್ಲಿಂಗದ ಬೆರಗು. ಬಸವಣ್ಣನ ದೃಷ್ಟಿಯಲ್ಲಿ ಮುತ್ತಿನ ಹಾರ, ಸಟಿಕದ ಸಲಾಕೆ, ಮಾಣಿಕ್ಯದ ದೀಪ್ತಿ.
ಲಿಂಗಮೆಚ್ಚಿ ಅಹುದಹುದೆನ್ನುವ ಚುಂಬಕ ಶಕ್ತಿ. ಅದು ಕನ್ನಡಿಯೊಳಗಿನ ಪ್ರತಿಬಿಂಬದಂತೆ ನಮ್ಮ ಮುಖವನ್ನೇ ತೋರಿಸುವ ಕನ್ನಡಿಯಾಗಿದೆ. ಭಾವೋಪಯೋಗಿ, ಜೀವೋಪಯೋಗಿಯಾಗಿ, ಲೋಕೋಪಯೋಗಿಯಾಗಿಯೂ ಕಂಗೊಳಿಸುತ್ತಿದೆ. ಬೇಂದ್ರೆ
ಹೇಳುವಂತೆ ಅರ್ಥವಿಲ್ಲ, ಸ್ವಾರ್ಥವಿಲ್ಲ ಬರಿಯ ಭಾವ ಗೀತ-ನಾದದ ನವನೀತ, ಬದುಕಿನ ಬಾಳಗೀತ. ಕನ್ನಡ ಭಾಷೆಯಲ್ಲಿ ಕಂಪಿದೆ, ಕರ್ನಾಟಕದಲ್ಲಿ ಸುಗಂಧವಿದೆ, ಭಾಷೆಯ ಕಂಪಿನ ಜತೆಗೆ ತನ್ನ ಜನರ ಸಾಂಸ್ಕೃತಿಕ ಸೌರಭವನ್ನು ಬೀರಿದೆ.
‘ಮೊಹೆಂಜೊದಾರೊ-ಹರಪ್ಪ ನಾಗರಿಕತೆಗಳ ಕಾಲದಲ್ಲಿ ಕನ್ನಡಿಗರನ್ನು ಕಣ್ಣನೀರ್ ಎಂದು ಕರೆಯುತ್ತಿದ್ದರಂತೆ. ಹಾಗೆಂದರೆ ಉನ್ನತ ದೃಷ್ಟಿಯುಳ್ಳವರು ಎಂದರ್ಥ. ಕನ್ನಡನಾಡು ಪರಿಮಳಯುಕ್ತವಾದುದು. ಅದನ್ನು ಕಮ್ಮಿತ್ತುನಾಡು, ಕಂಪು ಬೀರುವ ನಾಡು ಎಂದು ವರ್ಣಿಸಿಕೊಂಡು ಬರೆಯಲಾಗಿದೆ. ಕನ್ನಡ ನುಡಿಯ ಕಂಪು ಕನ್ನಡಿಗರ ಸಂಸ್ಕೃತಿಯ ದ್ಯೋತಕ. ಇಲ್ಲಿಯ ನೆಲ ಮಾತ್ರ ಸುಗಂಧವನ್ನು ಸೂಸಲಿಲ್ಲ, ಇಲ್ಲಿಯ ಭಾಷೆ ಸಂಸ್ಕೃತಿಗಳೂ ಸುಗಂಧವನ್ನು ಸೂಸಿವೆ’ (ಚೆಲುವ ಕನ್ನಡ ನಾಡು ಪು.೨-ಪಾಟೀಲ ಪುಟ್ಟಪ್ಪ).
ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್ ೧೯೦೫ರಲ್ಲಿ ಕರ್ನಾಟಕ ಏಕೀಕರಣ ಚಳವಳಿಯನ್ನು ಪ್ರಾರಂಭಿಸಿ ದರು. ಭಾರತವು ೧೯೫೦ರಲ್ಲಿ ಗಣರಾಜ್ಯವಾದ ನಂತರ ದೇಶದ ವಿವಿಧ ಪ್ರಾಂತ್ಯಗಳು ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪುಗೊಂಡವು. ಹಾಗೆಯೇ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಟ್ಟಿಗೆ ಸೇರಿಸಿ ಕನ್ನಡ ರಾಜ್ಯದ ಸ್ಥಾಪನೆಗೆ ಹಲವಾರು ಮಹನೀಯರು ಶ್ರಮಿಸಿದರು.
ಮದ್ರಾಸ್, ಹೈದರಾಬಾದ್ ಹಾಗೂ ಮುಂಬೈ ಪ್ರಾಂತ್ಯದ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ೧೯೫೬ರ ನವೆಂಬರ್ ೧ರಂದು ಉದಯವಾಯಿತು. ೧೯೭೩ರ ನವೆಂಬರ್ ೧ರಂದು ‘ಕರ್ನಾಟಕ’ ಎಂದು ಪುನರ್‌ನಾಮಕರಣವಾಯಿತು. ಇದಕ್ಕೆ ೫೦ ವರ್ಷಗಳು ತುಂಬಿದ್ದರ ದ್ಯೋತಕವಾಗಿ ಈ ವರ್ಷ ಪೂರ್ತಿ ರಾಜ್ಯೋತ್ಸವದ ಸುವರ್ಣ ಸಂಭ್ರಮವು ಆಚರಿಸಲ್ಪಡಲಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಕನ್ನಡ, ತುಳು, ಕೊಂಕಣಿ, ಕೊಡವ, ಬ್ಯಾರಿ ಈ ಐದು ಭಾಷೆಗಳ ಏಕೀಕೃತ ಕರ್ನಾಟಕ ರಾಜ್ಯೋ ತ್ಸವ ಕನ್ನಡಿಗರಿಗೆ ವಿಶೇಷವಾದದ್ದು, ಭಾವನಾತ್ಮಕವಾದದ್ದು.
ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಅನೇಕ ಮಹನೀಯರ ಕೊಡುಗೆಯಿದೆ. ಬೇಲೂರು, ಹಳೇಬೀಡು, ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಶ್ರೇಷ್ಠ ವಾಸ್ತುಶಿಲ್ಪವನ್ನು ಹೊಂದಿದ್ದು ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು ಇತ್ಯಾದಿ ರಾಜ ಮನೆ ತನಗಳ ಕೊಡುಗೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೆಚ್ಚಿಸಿವೆ. ೮ ಜ್ಞಾನ ಪೀಠ ಪ್ರಶಸ್ತಿ ಪಡೆದ ಈ ನಾಡು ಪಂಪ, ರನ್ನ, ಪೊನ್ನ, ಜನ್ನ, ಕುಮಾರವ್ಯಾಸ, ಹರಿಹರರಂಥ ಮಹಾಕವಿಗಳನ್ನು ನೀಡಿದೆ. ಮನುಕುಲೋದ್ಧಾರದ ಹೊಂಗಿರಣವಾದ ವಿಶ್ವಗುರು ಬಸವಣ್ಣನವರಂಥ ತತ್ತ್ವಚಿಂತಕರನ್ನು, ಕರ್ನಾಟಕ ಸಂಗೀತವನ್ನು ವಿಶ್ವಮಟ್ಟಕ್ಕೇರಿಸಿದ ಪುರಂದರದಾಸ ರನ್ನು, ವೈಚಾರಿಕ ಪ್ರeಯ ಹರಿಕಾರರಾದ ಕನಕದಾಸರನ್ನು, ಕನ್ನಡದ ಮೂಲಕ ಕಲಿತು ಶ್ರೇಷ್ಠ ವಿಜ್ಞಾನಿಯಾದ ಸಿ.ಎನ್. ಆರ್. ರಾವ್ ಅವರನ್ನು ಕೊಡುಗೆಯಾಗಿ ನೀಡಿದೆ.
ಇಂಥ ಶ್ರೀಮಂತ ಭಾಷೆಯನ್ನು ಕುರಿತು ಕವಿವರ್ಯರು ಹಾಡಿ ಹೊಗಳಿದ್ದಾರೆ. ‘ಕನ್ನಡ ನಾಡು ಚೆಲುವಾದುದು’ ಎಂದು ಕವಿ
ಆಂಡಯ್ಯ, ‘ಎನಿತು ಇನಿದು ಈ ಕನ್ನಡ ನುಡಿಯು ಮನವನು ತಣಿಸುವ ಮೋಹನ ಸುಧೆಯು’ ಎಂದು ಕವಿ ಆನಂದಕಂದರು, ‘ನಗುತಿಹಳು ತಾಯಿ ಕನ್ನಡದದೇವಿ ಬಾನೆ ದೆಗೆ ಮುತ್ತು ಕೊಟ್ಟು’ ಎಂದು ಕೆ.ಎಸ್.ನರಸಿಂಹಸ್ವಾಮಿ ಯವರು, ‘ತನುಕನ್ನಡ, ಮನ ಕನ್ನಡ, ನುಡಿಕನ್ನಡವೆಮ್ಮವು’ ಎಂದು ಗೋವಿಂದ ಪೈಯವರು, ‘ಕನ್ನಡದ ಒಂದೊಂದು ನುಡಿಯು ಕಿಡಿಯಾಗಬೇಕು, ಸಿಡಿಲಾಗ ಬೇಕು, ನಕ್ಷತ್ರವಾಗಬೇಕು, ಅಮೃತದ ಬಿಂದುವಾಗಬೇಕು’ ಎಂದು ಡಿ.ವಿ.ಜಿ. ಯವರು, ‘ಏಳ್ಗೆ ಕರ್ನಾಟಕಂ, ಬಾಳ್ಗೆ ಕರ್ನಾಟಕಂ, ಆಳ್ಗೆ ಕರ್ನಾಟಕಂ ಜಗದೀಶ್ವರಿ’ ಎಂದು ಕೈಯಾರ ಕ್ಞಿಣ್ಣ ರೈ ಅವರು ಕನ್ನಡದ ಶ್ರೇಷ್ಠತೆಯನ್ನು ಎತ್ತಿಹಿಡಿದಿದ್ದಾರೆ.
ಕವಿ ಮಹಲಿಂಗರಂಗನಿಗೆ ಕಬ್ಬಿನರುಚಿ ಹಾಲಿನ ಸವಿ ಎರಡೂ ಕನ್ನಡದಲ್ಲಿವೆ. ರಾಷ್ಟ್ರಕವಿ ಕುವೆಂಪು ಈ ನಾಡನ್ನು ಅಖಂಡ
ಕರ್ನಾಟಕವೆಂದು ಹೊಗಳಿದ್ದಾರೆ. ಹೀಗೆ ಅನೇಕ ಕವಿಗಳ ನಾಲಗೆಯ ಮೇಲೆ ಕನ್ನಡತಾಯಿ ನಲಿದಾಡಿದ್ದಾಳೆ. ಮನುಷ್ಯನನ್ನು ಅವನ ಮಾತೃಭಾಷೆಯಂತೆ ಬೇರೆ ಯಾವುದೂ ಹಿಡಿದುಕೊಂಡಿರುವುದಿಲ್ಲ. ತಾಯಿಯ ಎದೆಹಾಲಿನೊಂದಿಗೆ ಹರಿದುಬಂದು ಅದು ಅವನ ಉಸಿರಿರುವವರೆಗೆ ಉಳಿದುಕೊಳ್ಳುತ್ತದೆ. ಅವರವರ ಭಾಷೆ ಅವರನ್ನು ಹಿಡಿದುಕೊಂಡಿರುವಂತೆ ಕನ್ನಡ ಭಾಷೆ
ಕನ್ನಡಿಗರನ್ನು ಹಿಡಿದಿದೆ. ನಮ್ಮ ಹಿಂದಿನವರು ಕಟ್ಟಿ ಬೆಳೆಸಿದ ಈ ನಾಡಿನ ಸಂಸ್ಕೃತಿಯನ್ನು ಇಂದಿನ ಯುವಪೀಳಿಗೆ ಮುಂದು ವರಿಸಿಕೊಂಡು ಹೋಗಬೇಕಾದ ಅವಶ್ಯಕತೆಯಿದೆ.
ನಮ್ಮ ಭಾಷೆಯ ಸಾಹಿತ್ಯದ ಅಭಿವೃದ್ಧಿಗಾಗಿ, ಕನ್ನಡ ನಾಡಿನ ಸರ್ವಾಂಗೀಣ ಬೆಳವಣಿಗೆಗಾಗಿ ನಾವೆಲ್ಲರೂ ಸಂಕಲ್ಪತೊಡ
ಬೇಕಾಗಿದೆ. ಆದರೆ ಭಾಷೆಗೆ ಒದಗಿರುವ ಸವಾಲುಗಳನ್ನು ಕುರಿತು ಡಾ. ಹಾ.ಮಾ.ನಾಯಕ ಅವರು ಹೀಗೆಂದಿದ್ದಾರೆ: ಇಂಗ್ಲಿಷ್ ನಮಗೆ ಪ್ರಪಂಚಕ್ಕಿರುವ ಕಿಟಕಿ ಎಂಬುದರಲ್ಲಿ ಸಂದೇಹವಿಲ್ಲ. ಹಾಗೆಂದು ಅದನ್ನು ತಲೆಯ ಮೇಲೆ ಹೇರಿಕೊಳ್ಳಲಾಗುವುದಿಲ್ಲ. ಇಂಗ್ಲಿಷಿನ ದುರ್ದೈವವೆಂದರೆ ಅದರ ನಿಜವಾದ ಸಾರ್ಥಕವಾದ ಬಳಕೆಯಾಗದೆ ಕೇವಲ ಒಂದು ಪ್ರತಿಷ್ಠೆಯ ವಿಷಯ ವಾಗಿರುವುದು. ಕಾನ್ವೆಂಟ್‌ಗಳ ಶಿಕ್ಷಣದಲ್ಲಿ ಅದು ಗಿಳಿಪಾಠವಾಗಿ ನಮ್ಮ ವಿದ್ಯಾರ್ಥಿಗಳಲ್ಲಿ ಒಂದು ಕೃತಕ ವ್ಯಕ್ತಿತ್ವವನ್ನು ಮೂಡಿಸುತ್ತದೆ.
ಕನ್ನಡಿಗರಾದ ನಾವು ಎಲ್ಲಾ ಭಾಷೆಗಳನ್ನು ಕಲಿಯುತ್ತಾ ಕನ್ನಡ ಭಾಷೆಯನ್ನು ಪ್ರೀತಿಸಿ ಪ್ರೋತ್ಸಾಹಿಸಬೇಕು. ಇಂಥ ಕನ್ನಡವು ಕನ್ನಡಿಗರ ಬದುಕಿನಲ್ಲಿ, ಭಾವನೆಯಲ್ಲಿ ಬೆರೆತಿದೆ. ಅದು ಅವರ ಉಸಿರಿನ ಉಸಿರು, ಜೀವದಜೀವ. ಕನ್ನಡವು ಜೀವವಾಹಿನಿಯಾಗಿ ಕಂಗೊಳಿಸುತ್ತಿದೆ. ನಿನ್ನೆ ನವೆಂಬರ್ ೧ರಂದು ೬೮ನೇ ಕನ್ನಡ ರಾಜ್ಯೋತ್ಸವವನ್ನು ನಾಡಿನಾದ್ಯಂತ ಆಚರಿಸಲಾಗಿದೆ. ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೆ ಹೊರರಾಜ್ಯ ಮತ್ತು ಹೊರರಾಷ್ಟ್ರದಲ್ಲಿರುವ ಕನ್ನಡಿಗರೂ ಈ ಆಚರಣೆಯಲ್ಲಿ ತೊಡಗಿಸಿ ಕೊಳ್ಳುತ್ತಾರೆ ಎಂಬುದು ಸಂತಸದ ಸಂಗತಿ. ಈ ಆಚರಣೆಯ ಸಂದರ್ಭದಲ್ಲಿ ಮಾತ್ರವೇ ಭಾಷೆ ಮತ್ತು ನಾಡಿನ ಬಗ್ಗೆ ಕೇವಲ ಭಾವಾವೇಶ ಪ್ರದರ್ಶಿಸಿದರೆ ಭಾಷೆ ಉಳಿದು ಬೆಳೆಯುವುದಿಲ್ಲ.
ಭಾಷೆ ಉಳಿಯಬೇಕಾದರೆ ಅದನ್ನು ಬಳಸಬೇಕು ಹಾಗೂ ಬಳಕೆಯು ಪರಭಾಷಾ ಶಬ್ದಗಳ ಅನವಶ್ಯಕ ಕಲಬೆರಕೆಯಾಗಿರದೆ ಆದಷ್ಟು ಶುದ್ಧವಾಗಿರಬೇಕು. ಕನ್ನಡ ಭಾಷೆಯನ್ನು ಬೆಳೆಸಬೇಕಾದರೆ ಅದರ ಮಹತ್ವವನ್ನು ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ತಿಳಿಸಿಕೊಡಬೇಕು. ಪುಸ್ತಕ ಓದುವ, ಚರ್ಚಿಸುವ, ವಿಮರ್ಶಿಸುವ ಕೆಲಸದಲ್ಲಿ ಅವರನ್ನು ತೊಡಗಿಸಬೇಕು. ಕನ್ನಡದಲ್ಲಿ ಮಾತ ನಾಡುವುದರಿಂದ ಆಗುವ ಲಾಭಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಕರ್ನಾಟಕದಲ್ಲಿ ಕನ್ನಡ ಭಾಷೆ, ಕನ್ನಡ ಪುಸ್ತಕ, ಕನ್ನಡ ಕವಿಗಳು, ಲೇಖಕರನ್ನು ಗೌರವಿಸಬೇಕು. ಮಕ್ಕಳ ಪ್ರತಿಭೆ ಅರಳುವಿಕೆಯಲ್ಲಿ, ಬೌದ್ಧಿಕ ಬೆಳವಣಿಗೆಯಲ್ಲಿ, ವ್ಯಕ್ತಿತ್ವ ವಿಕಸನದಲ್ಲಿ, ಭಾಷೆಯಿಂದ ದೊರೆಯುವ ಆನಂದದ ಅನುಭವಕ್ಕೆ ಅವಕಾಶ ಕಲ್ಪಿಸಬೇಕು.
ಕನ್ನಡಿಗರು ಫಲವತ್ತಾದ ಕನ್ನಡ ನೆಲದಲ್ಲಿ ಆಳಕ್ಕೆ ಬೇರೂರಿ ಹೆಮ್ಮರವಾಗಿ ಬೆಳೆಯಬೇಕು. ಸಾಮರಸ್ಯದ ಬೀಡಾಗಿರುವ ಕರ್ನಾಟಕದಲ್ಲಿ ನಾವು ನಮ್ಮ ತಾಯ್ನುಡಿಯ ಬಗ್ಗೆ ನಿರಭಿಮಾನ, ದುರಭಿಮಾನ ಹೊಂದದೆ ಸದಭಿಮಾನ ರೂಢಿಸಿಕೊಂಡಾಗ ರಾಜ್ಯೋತ್ಸವದ ಆಚರಣೆ ಅರ್ಥಪೂರ್ಣವೆನಿಸುತ್ತದೆ.
(ಲೇಖಕಿ ಉಪನ್ಯಾಸಕಿ)