Friday, 22nd November 2024

ಅಕ್ಕಿಆಲೂರಲ್ಲಿ ಕನ್ನಡ ನುಡಿ ಸಂಭ್ರಮದ ಮೃಷ್ಟಾನ್ನ

ವಿದೇಶವಾಸಿ

dhyapaa@gmail.com

ಫೆಬ್ರವರಿ ಮೊದಲನೆಯ ವಾರ ಶಿರಸಿಯಿಂದ ಬೆಂಗಳೂರಿಗೆ ಬರುತ್ತಿದ್ದಾಗ ಅಕ್ಕಿಆಲೂರಿನ ರಸ್ತೆಯಲ್ಲಿ ‘ನುಡಿ ಸಂಭ್ರಮ’ ದ ಬ್ಯಾನರ್ ಕಣ್ಣಿಗೆ ಬಿದ್ದಿತ್ತು. ಇತ್ತೀಚೆಗೆ ರಾಜ್ಯದಲ್ಲಿ ಊರ ಉತ್ಸವ-ಹಬ್ಬಗಳಿಗೆ ಯಾವ ಕೊರತೆಯೂ ಇಲ್ಲ. ನೂರಾರು ಕನ್ನಡದ ಉತ್ಸವದ ಯಾದಿಗೆ ಇನ್ನೂ ಒಂದು ಸೇರಿಕೊಂಡಿತು ಎಂದುಕೊಂಡಿದ್ದೆ.

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಒಂದು ಸಣ್ಣ ಊರು ಅಕ್ಕಿಆಲೂರ. ಸಣ್ಣ ಊರಾದರೂ, ಆ ಊರಿನಲ್ಲಿ ಸುಮಾರು ಆರು ನೂರಕ್ಕೂ ಹೆಚ್ಚು ಮಂದಿ ರಕ್ತ ದಾನಿಗಳಿದ್ದಾರೆ, ಅವಶ್ಯಕತೆ ಇದ್ದರೆ ಪಕ್ಕದ ಹುಬ್ಬಳ್ಳಿ, ಧಾರವಾಡ ಅಷ್ಟೇ ಅಲ್ಲ, ನೆರೆ ರಾಜ್ಯ ಗೋವಾಕ್ಕೂ ಹೋಗಿ ರಕ್ತದಾನ ಮಾಡಿ ಬರುತ್ತಾರೆ ಎಂದು ಕೇಳಿದ್ದೆ. ಅಲ್ಲಿ ನಾಟಕ ಕಂಪನಿಗಳು ತಿಂಗಳುಗಟ್ಟಲೆ ಟೆಂಟ್ ಹಾಕಿ ನಾಟಕ ಮಾಡುತ್ತಿದ್ದಾಗ ಶಿರಸಿಯಿಂದ ಅಕ್ಕಿಆಲೂರಿಗೆ ನಾಟಕ ನೋಡಲು ಹೋಗಿ ಬರುತ್ತಿದ್ದೆ. ಆದರೆ ಅಲ್ಲಿ ಕಳೆದ ಮೂವತ್ತೊಂದು ವರ್ಷದಿಂದ ವಿಶೇಷ ನುಡಿ ಜಾತ್ರೆ ಆಚರಿಸ ಲಾಗುತ್ತದೆ ಎಂದು ಪಕ್ಕದ ತಾಲೂಕಿ ನವನೇ ಆದ ನನಗೆ ತಿಳಿದಿರಲಿಲ್ಲ.

ಮೊದಲೆಲ್ಲ ನವೆಂಬರ್ ತಿಂಗಳಿನ ಚೌಕಟ್ಟಿನಲ್ಲಿ ಮಾತ್ರ ಚಲಿಸುತ್ತಿದ್ದ ಕನ್ನಡ ತೇರು, ಊರ ಹಬ್ಬ, ಉತ್ಸವ ಆರಂಭವಾದ ಮೇಲೆ, ನವೆಂಬರ್ ಮೀರಿಯೂ ಚಲಿಸುತ್ತಿರುವುದು ಎಷ್ಟು ಸಂತೋಷದಾಯಕವೋ, ನಾಡು-ನುಡಿಯ ಹೆಸರಿನಲ್ಲಿ ನಡೆಯುವ ಕೆಲವು ಉತ್ಸವಗಳು ದೇಣಿಗೆ, ವಂತಿಗೆಗಷ್ಟೇ ಸೀಮಿತವಾಗಿರುವುದು ಅಷ್ಟೇ ಖೇದಕರ. ದೇಣಿಗೆ ಪಡೆಯದೆ ಸಾರ್ವಜನಿಕ ಕಾರ್ಯಕ್ರಮ ಮಾಡುವುದು, ಅದರಲ್ಲೂ ಪ್ರತಿ ವರ್ಷ ಮಾಡುವುದು ಎಷ್ಟು ಕಷ್ಟ ಎನ್ನುವುದೂ ಗೊತ್ತು, ಚಂದಾ ಎತ್ತಿ ವರ್ಷಪೂರ್ತಿ ಚೆಂದವಾಗಿರಲು ಕಾರ್ಯಕ್ರಮ ಆಯೋಜಿಸು ವವರೂ ಇದ್ದಾರೆ ಎನ್ನುವುದೂ ಗೊತ್ತು.

ನಿಜ ಹೇಳುತ್ತೇನೆ, ಮೊನ್ನೆ ಅಕ್ಕಿ ಆಲೂರಿನಲ್ಲಿ ಬ್ಯಾನರ್ ನೋಡಿದಾಗಲೂ ನನಗೆ ಅನಿಸಿದ್ದು ಅದೇ. ಇದು ನಿಜವಾಗಿಯೂ ಕನ್ನಡದ ಕಾರ್ಯಕ್ರಮವೇ ಅಥವಾ ಕನ್ನಡದ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮವೇ? ಸ್ನೇಹಿತರಾದ ಕೆ. ರಾಜಕುಮಾರ ಅವರು ‘ನುಡಿ ಸಂಭ್ರಮದ’ ಕುರಿತು ಹೇಳದಿದ್ದರೆ, ನಾಗರಾಜ ಅಡಿಗರ, ತನ್ಮೂಲಕ ಷಣ್ಮುಖಪ್ಪ ಮುಚ್ಚಂಡಿಯವರ ಸಂಪರ್ಕ ಕಲ್ಪಿಸಿ ಕೊಡದಿದ್ದರೆ, ನಲವತ್ತು ಕಿಲೋಮೀಟರ್ ದೂರದಲ್ಲಿದ್ದರೂ, ವರ್ಷಕ್ಕೆ ಎಂಟು ಹತ್ತು ಬಾರಿ ಅದೇ ರಸ್ತೆಯಲ್ಲಿ ಓಡಾಡಿಕೊಂಡಿದ್ದರೂ ಇಂದಿಗೂ ಈ ವಿಷಯದಲ್ಲಿ ನಾನು ಅeತನಾಗಿರುತ್ತಿದ್ದೆ.

ಅಡಿಗರು ಮತ್ತು ಮುಚ್ಚಂಡಿಯವರೊಂದಿಗಿನ ಸುದೀರ್ಘ ಮಾತುಕತೆ ನನ್ನ ಶಂಕೆ ಮತ್ತು ಅಜ್ಞಾತ ಪ್ರಜ್ಞೆಯ ಪರದೆಯನ್ನು ಸರಿಸಿತ್ತು. ಇಂದಿಗೆ ಸುಮಾರು ಮೂರು ದಶಕದ ಹಿಂದೆ, ೧೯೯೦ ರ ಮಾತು. ಹಣ್ಣು-ತರಕಾರಿ, ಬೇಳೆ-ಕಾಳು ಮಾರುವ ಕೆಲವು ವ್ಯಾಪಾರಸ್ಥರು, ಇವತ್ತು ಒಂದೂರಾದರೆ, ನಾಳೆ ಇನ್ನೊಂದೂರು, ನಾಡಿದ್ದು ಮತ್ತೊಂದೂರು ಎಂದು ಅಲೆದಾಡಿಕೊಂಡಿದ್ದರು. ಊರ ಸಂತೆ ಮುಗಿಸಿ ದುಂಡಿಬಸವೇಶ್ವರ ದೇವಾಲಯದ ಕಟ್ಟೆಯ ಮೇಲೆ ಕುಳಿತು ಸುಖ-ದುಃಖ ಹಂಚಿಕೊಳ್ಳುತ್ತಿದ್ದರು. ಅಷ್ಟಕ್ಕೇ ಸೀಮಿತವಾಗಿರದೇ, ಕತೆ ಹೇಳುವುದು, ಹಾಡು ಹಾಡುವುದು, ಅನುಭವ ಹಂಚಿಕೊಳ್ಳುವುದು ಇತ್ಯಾದಿಗಳು ಆ ಕಟ್ಟೆಯಲ್ಲಿ ನಡೆಯುತ್ತಿತ್ತು. ಜತೆಗೆ, ಪ್ರತಿಯೊಬ್ಬರೂ ವಾರಕ್ಕೆ ಇಪ್ಪತ್ತು ರುಪಾಯಿಯಂತೆ ಕೂಡಿಡುತ್ತಿದ್ದರು. ಆ ಹಣದಲ್ಲಿ ಅವಶ್ಯಕತೆ ಇದ್ದವರಿಗೆ ಸಾಲ ನೀಡುತ್ತಿದ್ದರು. ಸಾಲದ ರೂಪದಲ್ಲಿ ನೀಡಿದ ಹಣಕ್ಕೆ, ತಿಂಗಳಿಗೆ ಮೂರು ರುಪಾಯಿ ಬಡ್ಡಿಯಂತೆ (ನೂರಕ್ಕೆ) ಸಂಗ್ರಹಿಸುತ್ತಿದ್ದರು. ಅದಕ್ಕೆ ‘ದುಂಡಿಬಸವೇಶ್ವರ ಮಿನಿ ಶೇರು’ ಎಂಬ ಹೆಸರನ್ನು ಇಟ್ಟುಕೊಂಡಿದ್ದರು.

ಹಾಗೆ ಹೆಚ್ಚುವರಿಯಾಗಿ ಸಂಗ್ರಹವಾದ ಹಣದಿಂದ ವರ್ಷಾಂತ್ಯದಲ್ಲಿ ಉಪ್ಪಿಟ್ಟು, ಚಹಾ ಕಾಫಿಯ ‘ದೊಡ್ಡ’ ಪಾರ್ಟಿ ಮಾಡುತ್ತಿದ್ದರು. ಅದರಲ್ಲೂ ಹಣ
ಉಳಿಸಿ, ಊರಿನ ಜನರಿಗೆ ಪ್ರೋತ್ಸಾಹಧನ, ಬಹುಮಾನ ನೀಡುತ್ತಿದ್ದರು. ದೇವಸ್ಥಾನಕ್ಕೆ ದೇಣಿಗೆ ನೀಡುತ್ತಿದ್ದರು. ಸುಮಾರು ಹದಿನೈದು ಲಕ್ಷ ರುಪಾಯಿ
ವೆಚ್ಚದಲ್ಲಿ ಊರಿನ ದುಂಡಿಬಸವೇಶ್ವರ ದೇವಾಲಯದ ಜೀರ್ಣೋದ್ಧಾರವಾಗಬೇಕಿದ್ದ ಸಂದರ್ಭ ದಲ್ಲಿ ಐದು ಲಕ್ಷ ರೂಪಾಯಿಯ ಕೊಡುಗೆ
ನೀಡಿದರು. ಉಳಿದ ಹತ್ತು ಲಕ್ಷರುಪಾಯಿ ಸಾರ್ವಜನಿಕರಿಂದ ಸಂಗ್ರಹಿಸಿ, ಸರಕಾರದಿಂದ ಅನುದಾನದ ಸಹಾಯವಿಲ್ಲದೇ (ಆ ಕಾಲದಲ್ಲಿ ಸರಕಾರ
ದೇವಸ್ಥಾನ, ಮಠಗಳಿಗೆ ಅನುದಾನ ನೀಡುತ್ತಿರಲಿಲ್ಲ) ಪೂರ್ಣಗೊಳಿಸಿದರು. ಇಷ್ಟರ ನಡುವೆಯೂ ಅವರ ಭಾಷಾಪ್ರೇಮಕ್ಕಾಗಲಿ, ಕನ್ನಡ ಅಭಿಮಾನ ಕ್ಕಾಗಲಿ ಯಾವುದೇ ಕೊರತೆ ಉಂಟಾಗಲಿಲ್ಲ.

ಗೋಕಾಕ ಚಳುವಳಿಯ ಕಾಲದಲ್ಲಿ ‘ಕನ್ನಡ ಕ್ರಿಯಾ ಸಮಿತಿ’ ಸಕ್ರಿಯವಾಗಿತ್ತು. ಅದು ವಿಸರ್ಜನೆ ಯಾದ ನಂತರ ‘ರಾಜಕುಮಾರ ಅಭಿಮಾನಿ ಸಂಘ’
ಎಂಬ ಹೆಸರಿನಲ್ಲಿ ಕನ್ನಡದ ಚಟುವಟಿಕೆಗಳು ನಡೆಯುತ್ತಿದ್ದವು. ಅದೇ ಸಮಯದಲ್ಲಿ, ಶಿಕ್ಷಕ ಪಿ. ಆರ್. ಮಠದ ಅವರ ನೇತೃತ್ವದ ‘ಚಿಂತನ ಬಳಗ’ದ
ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅಕ್ಕಿಆಲೂರ ಗ್ರಾಮಸ್ಥರನ್ನಷ್ಟೇ ಅಲ್ಲದೆ ಅಕ್ಕ ಪಕ್ಕದವರ ಗಮನವನ್ನೂ ಸೆಳೆದಿತ್ತು. ಕಾಲಕ್ರಮೇಣ ಆ ಎರಡೂ
ಸಂಸ್ಥೆಗಳ ಚಟುವಟಿಕೆ ಕ್ಷೀಣಿಸತೊಡಗಿತು. ಆದರೆ ಅದರ ಪದಾಽಕಾರಿಗಳ ಮಾರ್ಗದರ್ಶನದಲ್ಲಿ, ದೇವಸ್ಥಾನದ ಆವರಣದಲ್ಲಿ ‘ಶ್ರೀದುಂಡಿಬಸವೇಶ್ವರ
ಕಲಾ ಸಂಘ’ ರೂಪುಗೊಂಡಿತು.

ಆರಂಭದಲ್ಲಿ ಒಂದು ದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿತ್ತು. ಐವತ್ತು-ನೂರು ರುಪಾಯಿಯಂತೆ ಸೇರಿಸಿ ಕಾರ್ಯಕ್ರಮ ಮಾಡುತ್ತಿದ್ದರು.
ಆ ಕಾಲದಲ್ಲಿ ಅಬ್ಬಬ್ಬಾ ಎಂದರೆ ಒಂದು ಸಾವಿರ ರೂಪಾಯಿ ಖರ್ಚು. ಊರ ಜನರು, ಮಕ್ಕಳು ಅದರಲ್ಲಿ ಭಾಗವಹಿಸುತ್ತಿದ್ದರು. ಕಲಾವಿದರೂ
ಅವರೇ, ಪ್ರೇಕ್ಷಕರೂ ಅವರೇ. ಕ್ರಮೇಣ ಆಸು-ಪಾಸಿನವರೂ ಸೇರಿ ಸುಮಾರು ಒಂದು ಸಾವಿರ ಜನ ಸೇರುತ್ತಿದ್ದರು. ಎಲ್ಲರಿಗೂ ಭಾರತೀಯ ಆಸನ
ಪದ್ಧತಿ (ನೆಲ)ಯ ವ್ಯವಸ್ಥೆ. ತೀರಾ ಅವಶ್ಯಕತೆ ಇರುವವರಿಗೆ ಅಂತ ಎಂಟೋ ಹತ್ತೋ ಪ್ಲಾಸ್ಟಿಕ್ ಕುರ್ಚಿ. ನೂರರಿಂದ ನೂರೈವತ್ತು ರುಪಾಯಿ
ಬಾಬ್ತಿನಲ್ಲಿ ಬಾಡಿಗೆಗೆ ಒಂದು ಮೈಕ್, ಒಂದು ಎಂಪ್ಲಿ-ಯರ್, ಒಂದೆರಡು ಸ್ಪೀಕರ್ ಬಾಕ್ಸ್.

ವೇದಿಕೆಯ ಹಿಂದೆ ಕಟ್ಟಲು ಹತ್ತಿರದ ಶಾಲೆ-ಕಾಲೇಜಿನಿಂದ ಪರದೆ, ಬ್ಯಾನರ್ ತರುತ್ತಿದ್ದರು. ಇದು ಸುಮಾರು ಒಂದು ದಶಕದವರೆಗೂ ಮುಂದುವರಿ ಯಿತು. ನಂತರ ಒಂಬತ್ತು ಜನ ಸೇರಿ ‘ಶ್ರೀ ದುಂಡಿಬಸವೇಶ್ವರ ಜನಪದ ಕಲಾಸಂಘ’ ಎಂಬ ಹೆಸರಿನಲ್ಲಿ ನೋಂದಾಯಿಸಿಕೊಂಡರು. ಪ್ರಸ್ತುತ ಈ ಸಂಘಕ್ಕೆ ಬಸವರಾಜ ಕೋರಿ ಅಧ್ಯಕ್ಷರು, ಮುಚ್ಚಂಡಿ ಕಾರ್ಯದರ್ಶಿಗಳು. ಮಲ್ಲಿಕಾರ್ಜುನ ಕಂಬಾಳಿ, ಶಿವಕುಮಾರ್ ದೇಶಮುಖ, ಶಿವಯೋಗಿ ಕೊವರ, ಸದಾಶಿವ ಕಂಬಾಳಿ, ಮುತ್ತಪ್ಪ ಮುಚ್ಚಂಡಿ, ಸಂಗಮೇಶ ಕೊವರ, ಪ್ರಶಾಂತ ಮಿರ್ಜಿ ನಿರ್ದೇಶಕರುಗಳು.

ಅಂದಿನಿಂದ ಇಂದಿನವರೆಗೆ ಸಂಘಟನೆ ಹೆಮ್ಮರವಾಗಿ ಬೆಳೆದಿದೆ. ಹಣಕಾಸಿನ ನಿಟ್ಟಿನಲ್ಲಲ್ಲ, ಭಾಷಾ ಭಿಮಾನ, ಸಾಂಸ್ಕೃತಿಕ ಚಟುವಟಿಕೆಯ ನಿಟ್ಟಿನಲ್ಲಿ.
ಇದನ್ನು ಯಾಕೆ ಒತ್ತಿ ಹೇಳುತ್ತಿದ್ದೇನೆ ಎಂದರೆ, ಈಗ ಮೂರು ದಿನದ ಕಾರ್ಯಕ್ರಮ ನಡೆಯುತ್ತಿದೆ. ಮೊದಲನೆಯ ದಿನ ಉದ್ಘಾಟನೆ, ರಾಷ್ಟ್ರ-ನಾಡಿನ ಕುರಿತು ಸಂವಾದ, ಸಾಹಿತ್ಯದ ಚರ್ಚೆ, ಮನರಂಜನಾ ಕಾರ್ಯಕ್ರಮ, ಬಹುಮಾನ ವಿತರಣೆ, ಪ್ರತಿಭಾ ಪುರಸ್ಕಾರ, ಭುವನೇಶ್ವರಿಯ ಶೋಭಾಯಾತ್ರೆ
ನಡೆಯುತ್ತದೆ. ಇಪ್ಪತ್ತರಿಂದ ಇಪ್ಪತ್ತೈದು ಶಾಲೆ- ಕಾಲೇಜುಗಳು ಇದರಲ್ಲಿ ಭಾಗವಹಿಸುತ್ತವೆ.

ಎರಡನೆಯ ದಿನ ಜನಪದ ಮತ್ತು ಮೂರನೆಯ ದಿನ ಸಮಾರೋಪ ಸಮಾರಂಭ ಇರುತ್ತದೆ. ಪ್ರತಿನಿತ್ಯ ಬೆಳಿಗ್ಗೆ ಮತ್ತು ಮಧ್ಯಾಹ್ನ ಒಂದರಂತೆ ಎರಡು
ಗೋಷ್ಠಿಗಳು. ಅದರಲ್ಲಿ ಮಕ್ಕಳ, ಮಹಿಳೆಯರ, ಯುವಕರ ಗೋಷ್ಠಿಗಳೂ ಸೇರಿರುತ್ತವೆ. ಒಂದೊಮ್ಮೆ ಮಳೆಯೋ, ಗುಡುಗೋ ಬಂದು ವಿಳಂಬವಾದರೂ ಕಾರ್ಯಕ್ರಮ ಮಾತ್ರ ನಿಲ್ಲುವುದಿಲ್ಲ.

ಕಳೆದ ವರ್ಷವಂತೂ ಮಳೆಯಿಂದಾಗಿ ವಿಳಂಬಗೊಂಡ ಕಾರ್ಯಕ್ರಮವನ್ನು ರಾತ್ರಿ ಒಂಬತ್ತು ಗಂಟೆಗೆ ದೀಪ ಬೆಳಗಿ ಆರಂಭಿಸಿದ್ದರು. ಇದು ಅವರ ಬದ್ಧತೆಗೆ ಉದಾಹರಣೆ. ಈ ಉತ್ಸವದಲ್ಲಿ ತಮ್ಮ ಜೀವನ ಪೂರ್ತಿ ಕ್ಷೌರದ ಕೆಲಸ ಮಾಡಿಕೊಂಡಿದ್ದವರು, ಎಂಜಲು ಎತ್ತಿದವರು, ಸ್ವಂತ ಉದ್ಯೋಗ ಮಾಡಿಕೊಂಡಿರುವ ವಿಧವೆಯರು, ಸ್ವಾವಲಂಬಿ ವಿಕಲಚೇತನರು ಇತ್ಯಾದಿ ಸಾಮಾನ್ಯ ಜನರನ್ನು ಗುರುತಿಸಿ ‘ಸೇವಾ ಪುರಸ್ಕಾರ’ ನೀಡಿ ಗೌರವಿಸುತ್ತಾರೆ. ಐಎಎಸ್, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉತ್ತೀರ್ಣರಾದ ಊರಿನ ಪ್ರತಿಭೆಗಳಿಗೆ ‘ಈ ನೆಲದ ನಕ್ಷತ್ರ’ ಎಂಬ ಬಿರುದುಕೊಟ್ಟು ಸನ್ಮಾನಿಸುತಾರೆ.

ಕೆಲವು ವರ್ಷಗಳಿಂದ ಸಾಂಸೃತಿಕ, ಕಲೆಯ ವಿಭಾಗದಲ್ಲಿ ಸಾಧನೆ ಮಾಡಿದವರಿಗೆ ‘ಬಸವ ಚೇತನ’ ಪುರಸ್ಕಾರ ನೀಡುತ್ತಾರೆ. ಅಕ್ಕಿಆಲೂರು ಹೋಬಳಿ ಯಲ್ಲಿ ಓದಿ ಕನ್ನಡದಲ್ಲಿ ಗರಿಷ್ಟ ಅಂಕ ಪಡೆದ ವಿದ್ಯಾರ್ಥಿಗಳಿಗೆ ‘ನಮ್ಮೂರ ಕನ್ನಡ ರತ್ನ’ ಪ್ರಶಸ್ತಿಯಿಂದ ಪುರಸ್ಕರಿಸುತ್ತಾರೆ. ಈ ವರ್ಷ ಹದಿನೆಂಟು ಮಕ್ಕಳು ನೂರ ಇಪ್ಪತ್ತೈದು ಅಂಕ ಪಡೆದು ಇದಕ್ಕೆ ಭಾಜನರಾಗಿದ್ದಾರೆ ಎನ್ನುವುದು ಎಲ್ಲರೂ ಹೆಮ್ಮೆ ಪಡಬೇಕಾದ ವಿಷಯ.  ಗಮನಿಸಬೇಕಾದ ಅಂಶವೆಂದರೆ, ಈ ಎಲ್ಲ ಕೆಲಸಕ್ಕೆ ಸಂಘಟಕರು ಯಾರ ಮುಂದೆಯೂ ದೇಣಿಗೆಗೆ ಕೈಚಾಚುವುದಿಲ್ಲ. ಯಾರಲ್ಲಿಯೂ ಚಂದಾದ ಹೆಸರಿನಲ್ಲಿ ಹಿಂಸಿಸುವು ದಿಲ್ಲ. ಎಲ್ಲಿಯವರೆಗೆ ಎಂದರೆ, ಸರಕಾರದಿಂದಲೂ ಅನುದಾನ ಕೇಳುವುದಿಲ್ಲ.

ವಿಷಯ ತಿಳಿದು ಅವರಾಗಿಯೇ ಕೊಟ್ಟರೆ ಮಾತ್ರ ಸ್ವೀಕರಿಸುತ್ತಾರೆ. ಇಪ್ಪತ್ತೈದರಿಂದ ಮೂವತ್ತು ಅಂಗಡಿಗಳಿಗೆ ಅವಕಾಶ ಒದಗಿಸಿಕೊಡುತ್ತಾರೆ. ಅವರಿಂದ
ಸಣ್ಣ ಪ್ರಮಾಣದ ಹಣ ಸಂಗ್ರಹವಾಗುತ್ತದೆ. ವೇದಿಕೆಯ ಮುಂಭಾಗದಲ್ಲಿ ರಾಜ್ಯದ, ಜಿಲ್ಲೆ ಕವಿಗಳ ಹೆಸರಿನಲ್ಲಿ ಆಸನ ಕಾಯ್ದಿರಿಸುತ್ತಾರೆ. ಅದಕ್ಕೆ
ಗೌರವ ಪ್ರವೇಶಧನ ನಿಗದಿಪಡಿಸಿ, ಅದರಿಂದ ಬರುವ ಆದಾಯವನ್ನು ಕಾರ್ಯಕ್ರಮಕ್ಕೆ ಬಳಸಿಕೊಳ್ಳುತ್ತಾರೆ. ಮುಂಬರುವ ಮೂರು ದಿನದ ಕಾರ್ಯಕ್ರಮ ದಲ್ಲಿ ಪ್ಯಾಂಟು-ಶರ್ಟು, ಜುಬ್ಬಾ- ಕುರ್ತಾ ಹಾಕಿ ಓಡಾಡುವವರೆಲ್ಲ ಒಂದು ತಿಂಗಳ ಮೊದಲು ಚಡ್ಡಿ ಬನಿಯನ್ ಹಾಕಿಕೊಂಡು ಕಾರ್ಯಕ್ರಮದ ತಯಾರಿ ಮಾಡುತ್ತಾರೆ.

ಬ್ಯಾನರ್ ಕಟ್ಟುತ್ತಾರೆ. ಕಾರ್ಯಕ್ರಮಕ್ಕೆಂದು ಅವರು ಮುದ್ರಿಸುವ ಆಹ್ವಾನ ಪತ್ರಿಕೆ ಹೆಚ್ಚೆಂದರೆ ಒಂದು ಸಾವಿರ ಅಷ್ಟೇ. ಅದೂ ಆಹ್ವಾನಿತರಿಗೆ, ಊರ ಹೊರಗಿನ ಗಣ್ಯರಿಗೆ ನೀಡುವ ಸಲುವಾಗಿ. ಊರಿನ ಜನರಿಗೆ, ಅಕ್ಕ ಪಕ್ಕದವರಿಗೆ ಊರ ಬಾಗಿಲಲ್ಲಿ ಕಟ್ಟಿದ ಬ್ಯಾನರೇ ಆಹ್ವಾನ ಪತ್ರಿಕೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಈಗ ಕಾರ್ಯಕ್ರಮಕ್ಕೆ ಪ್ರತಿ ದಿನ ಏಳರಿಂದ ಎಂಟು ಸಾವಿರ ಜನ ಸೇರುತ್ತಾರೆ. ಬೆಳಿಗ್ಗೆ ಆರಂಭವಾದ ಕಾರ್ಯಕ್ರಮ ರಾತ್ರಿ ಎರಡು ಗಂಟೆಯವರೆಗೂ ನಡೆಯುತ್ತದೆ. ಅತಿಥಿಗಳ ಹೊರತಾಗಿ ಯಾರಿಗೂ ಊಟ, ಚಹಾ-ಕಾಫಿ ಕೊಡುವುದಿಲ್ಲ. ಊಟ ಕೊಡ  ಬೇಕೆಂದರೆ ಹಣ ಹೆಚ್ಚು ಬೇಕು. ಅದಕ್ಕೆ ಬೇರೆಯವರಲ್ಲಿ ಕೇಳಬೇಕು. ನಂತರವೂ ಕಾರ್ಯಕ್ರಮಕ್ಕಿಂತ ಊಟದ ವಿಷಯವೇ ಹೆಚ್ಚು ಚರ್ಚೆಯಾಗುತ್ತದೆ ಎಂಬುದು ಅವರ ನಿಲುವು. ಎಲ್ಲಿಯವರೆಗೆ ಹೆಚ್ಚು ಹಣ ಇರುವುದಿಲ್ಲವೋ ಅಲ್ಲಿಯವರೆಗೆ ಕೈ, ಹೃದಯ, ನಾಲಿಗೆ ಸ್ವಚ್ಛವಾಗಿರುತ್ತದೆ ಎಂಬುದು ಅವರ ನಂಬಿಕೆ.

ಅದು ನಿಜವೂ ಹೌದು ಎನ್ನಿ. ಹಾಗಂತ ಬಂದ ಅತಿಥಿಗಳಿಗೆ ಊಟ, ವಸತಿ, ಉಪಚಾರದಲ್ಲಿ ಯಾವ ಕೊರತೆಯೂ ಆಗದಂತೆ ನೋಡಿಕೊಳ್ಳುತ್ತಾರೆ. ಊರಿನ ಜನರೆಲ್ಲ ಊಟ ತಿಂಡಿಯನ್ನು ತಮ್ಮ ಮನೆಯಲ್ಲಿಯೇ ಪೂರೈಸಿ ಬಂದು ಕುಳಿತುಕೊಳ್ಳುತ್ತಾರೆ. ಮಧ್ಯರಾತ್ರಿಯವರೆಗೂ ಪೆಂಡಾಲಿನಲ್ಲಿ ಜನ ತುಂಬಿಕೊಂಡಿರುತ್ತಾರೆ. ವಿಶೇಷವೆಂದರೆ ಇದುವರೆಗೆ ಅವರಿಗೆ ಅವರದ್ದೇ ಆದ ಒಂದು ಕಟ್ಟಡವಾಗಲಿ, ಕಾರ್ಯಾಲಯವಾಗಲಿ ಇಲ್ಲ. ಇತ್ತೀಚೆಗೆ ಪಂಚಾಯತದಿಂದ ಒಂದು ಪುಟ್ಟ ನಿವೇಶನ ದೊರೆತಿದ್ದರೂ ಕಟ್ಟಡ ಕಟ್ಟಲಿಲ್ಲ. ಅಥವಾ ಅದರ ಗೋಜಿಗೆ ಹೋಗಲಿಲ್ಲ.

‘ಮೊನ್ನೆ ಫೆಬ್ರವರಿ ೨, ೩, ೪ ನೇ ತಾರೀಖಿಗೆ ಆದದ್ದು ಮೂವತ್ತೊಂದನೆಯ ನುಡಿ ಸಂಭ್ರಮ. ಹುಟ್ಟಿದವ ಸಾಯುತ್ತಾನೆ. ಸೂರ್ಯನಿಗೂ ಗ್ರಹಣ
ಹಿಡಿಯುತ್ತದೆ. ನಾವು ಎಷ್ಟು ದಿನ ಬದುಕಿರುತ್ತೇವೋ ಗೊತ್ತಿಲ್ಲ, ಒಳ್ಳೆಯ ಕೆಲಸ ಮಾಡಿದರೆ ಸತ್ತ ನಂತರವೂ ಬದುಕಿರುತ್ತೇವೆ ಎನ್ನುವುದಂತೂ ಗೊತ್ತು. ವೈಯಕ್ತಿಕವಾಗಿ ನಮಗೆ ಇದರಿಂದ ಯಾವ ಲಾಭವೂ ಇಲ್ಲ. ಉದ್ಯೋಗ ಬಿಟ್ಟ, ನಿzಗೆಟ್ಟ, ಒತ್ತಡವ ಹೊತ್ತ ನೋವನ್ನೆಲ್ಲ ಮೂರು ದಿನದ ಕಾರ್ಯಕ್ರಮದ
ಅಂದವನ್ನು ನೋಡಿ ಮರೆಯುತ್ತೇವೆ. ರಾಜ್ಯದ ವಿವಿಧೆಡೆಯಿಂದ ಬಂದ ಗಣ್ಯರ, ವಿದ್ವಜ್ಜನರ, ಅತಿಥಿಗಳ ಮಾತು ಕೇಳಿದಾಗ, ಕಲಾವಿದರ ಪ್ರದರ್ಶನ ನೋಡಿದಾಗ ಕಣ್ಣು, ಕಿವಿ ನೆತ್ತಿ ತಂಪಾಗುತ್ತದೆ.

ಈಗ ಅಕ್ಕ ಪಕ್ಕದ ಊರುಗಳಿಗೂ ನಾವು ಪ್ರೇರಣೆಯಾಗಿದ್ದೇವೆ. ‘ಮದ್ಯಪಾನ ಮಾಡಿದರೆ ಕೆಲ ಹೊತ್ತು ಮಾತ್ರ ನಶೆ. ಕನ್ನಡ ನುಡಿ ಸಂಭ್ರಮ ವರ್ಷಪೂರ್ತಿ
ನಶೆ. ನಮಗೆ ಇದೊಂದು ಹುಚ್ಚು. ಇದರಿಂದ ಗಳಿಕೆ ಇಲ್ಲ, ಆದರೆ ಖುಷಿ ಇದೆ. ಇದರಿಂದಾಗಿ ಈಗ ಊರಿನ ಹುಡುಗರು ವೇದಿಕೆಯಲ್ಲಿ ನಿಂತು
ಮಾತಾಡುತ್ತಾರೆ, ನಿರೂಪಣೆ ಮಾಡುತ್ತಾರೆ, ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಉನ್ನತಿಯಾಗುತ್ತಿದ್ದಾರೆ. ಇದಕ್ಕಿಂತ ಹೆಚ್ಚಿನ ಆನಂದ ಇನ್ನೇನು
ಬೇಕು?’ ಮುಚ್ಚಂಡಿ ಹೇಳುತ್ತಿದ್ದರೆ ನನ್ನಲ್ಲಿ ಮಾತೇ ಇರಲಿಲ್ಲ. ಮತ್ತೆ ಸಂಪರ್ಕಿಸುತ್ತೇನೆ ಎಂದು ಸಂಭಾಷಣೆ ನಿಲ್ಲಿಸಿದೆ.

ನಿಜ, ಕನ್ನಡದ ಕೆಲಸಕ್ಕೆ ನವೆಂಬರ್ ತಿಂಗಳೇ ಆಗಬೇಕೆಂದಿಲ್ಲ. ನಾಳೆ ಮಾತೃಭಾಷಾ ದಿನ ಎಂಬುದು ಸಾಂಕೇತಿಕ ಮಾತ್ರ. ಮಾತೃಭೂಮಿ, ಮಾತೃ ಅಭಾಷೆಗೆ ಕುರಿತಂತೆ ನಿತ್ಯವೂ ಹಬ್ಬವಾಗಿರಬೇಕು.