Thursday, 21st November 2024

ಕನ್ನಡದ ಮೂಲಾಕ್ಷರ ರ ಹೇಳಿದ ಸ್ವಗತದ ಮಾತುಗಳು

ತಿಳಿರು ತೋರಣ

srivathsajoshi@yahoo.com

ಅಕ್ಷರಗಳ ಪೈಕಿ ತಾನು ಅ ಆಗಿದ್ದೇನೆ ಎಂದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನಿರಬಹುದು; ಸಂಸ್ಕೃತ, ಕನ್ನಡ ಸೇರಿದಂತೆ ಭಾರತೀಯ ಭಾಷೆಗಳ ವರ್ಣಮಾಲೆಯಲ್ಲಿ ಅ ಮೊತ್ತಮೊದಲ ಅಕ್ಷರವಾಗಿರುವುದೂ ಇರಬಹುದು; ಅದನ್ನೇ ಹಿಡಿದುಕೊಂಡು ಶ್ರೀವತ್ಸ ಜೋಶಿ ಎಂಬ ಮನುಷ್ಯ ತಿಳಿರುತೋರಣ ಅಂಕಣದ ಪ್ರತಿಯೊಂದು ಲೇಖನವನ್ನೂ ಅ ಅಕ್ಷರದಿಂದಲೇ ಆರಂಭಿಸಿದ್ದೇನೆಂದು ಬೀಗುವುದೂ ಇರಬಹುದು; ಎಟೆಂಡೆನ್ಸ್ ರಿಜಿಸ್ಟರ್‌ನಲ್ಲಿ ಅಥವಾ ಮತ್ತ್ಯಾವುದೇ ಆಲಾಬೆಟಿಕಲ್ ಲಿಸ್ಟ್‌ನಲ್ಲಿ ಮೊದಲಿಗೇ ಬರಬೇಕೆಂಬ ಉದ್ದೇಶದಿಂದ ಮಕ್ಕಳಿಗೆ ಅ ಅಕ್ಷರದಿಂದ ಆರಂಭವಾಗುವ ಹೆಸರನ್ನಿಡುವುದೊಂದು ಫ್ಯಾಷನ್ ಆಗಿರುವುದೂ ಇರಬಹುದು; ಅಷ್ಟೇಕೆ, ಅದಕ್ಕೂ ಮುಂಚೆ ಪುಟ್ಟ ಮಗುವು ತೊದಲು ಮಾತಿನಲ್ಲಿ ಅಮ್ಮ ಅಪ್ಪ ಎನ್ನುವಾಗ ಮೊದಲಿಗೆ ಬರುವುದು ಅ ಎಂಬ ಅಕ್ಷರವೇ ಇರಬಹುದು; ದೊಡ್ಡವರಾದ ಮೇಲೂ ನೋವಿನಿಂದ ಸಂಕಟದಿಂದ ದುಃಖದಿಂದ ಚೀರುವ ಸಂದರ್ಭದಲ್ಲಿ ಅಯ್ಯೋ ಎನ್ನುವಾಗಲೂ ಮೊದಲಿನದು ಅ ಅಕ್ಷರವೇ ಇರಬಹುದು.

ಇಲ್ಲವೆನ್ನುತ್ತಿಲ್ಲ, ಎಲ್ಲ ಸರಿಯೇ. ಆದರೆ ಇವರಿಗೆಲ್ಲ ಗೊತ್ತಿರದ ಒಂದು ರಹಸ್ಯವೇನೆಂದರೆ ರ ಅಕ್ಷರವೆಂಬ ನನ್ನ ಮಹಿಮೆ. ಇದನ್ನು ನೀವು ರಹಸ್ಯ ಎಂದು
ಗೌರವಿಸುತ್ತೀರೋ ರ-ಹಾಸ್ಯ ಎಂದು ಹಗುರಾಗಿಸುತ್ತೀರೋ ನಿಮಗೆ ಬಿಟ್ಟದ್ದು. ಹೇಳೋದನ್ನಂತೂ ನಾನು ಮಾಡುತ್ತೇನೆ. ತಗೊಳ್ಳೋದು ಬಿಡೋದು ನಿಮ್ಮಿಷ್ಟ. ನಾನು ರ ಅಕ್ಷರ. ಕನ್ನಡದ ಮೂಲಾಕ್ಷರ. ಕನ್ನಡವೇನು, ದೇವ ನಾಗರಿಯಲ್ಲೂ ವೇದೋಪನಿಷತ್ತುಗಳಲ್ಲೂ ನಾನು ಬೀಜಾಕ್ಷರವೇ. ಅದರ ಬಗ್ಗೆ ಆಮೇಲೆ ಹೇಳುತ್ತೇನೆ. ಮೊದಲಿಗೆ ಕನ್ನಡದ ವಿಚಾರ ನೋಡೋಣ. ಮಗುವಿಗೆ ಕನ್ನಡ ಅಕ್ಷರಗಳ ಪರಿಚಯ ಮಾಡಿಸುವಾಗ, ಬರೆಸುವಾಗ ಮೊತ್ತ ಮೊದಲಿಗೆ ರ ಅಕ್ಷರವನ್ನು ಕಲಿಸುವ ಕ್ರಮ ಇರುವುದು ನಿಮಗೆ ಗೊತ್ತೇ? ಅದೇ ‘ರಠಈಕ’ ಕ್ರಮ.

ಬಹಳ ತಾರ್ಕಿಕ ಮತ್ತು ವೈಜ್ಞಾನಿಕವಾದದ್ದು. ಯಾಕೆ ಹೇಳಿ? ಅಕ್ಷರ ಕಲಿಕೆಗಿಂತಲೂ ಮೊದಲಿಗೆ ಮಗು ಬಣ್ಣಗಳನ್ನು ಆಕಾರಗಳನ್ನು ಗುರುತಿಸ ತೊಡಗುತ್ತದೆ. ವೃತ್ತಾಕಾರವು ಮಗುವಿಗೆ ಅರ್ಥವಾಗುವ, ಬರೆಯಲಿಕ್ಕೆ ಸುಲಭವೆನಿಸುವ ಮೊದಲ ಆಕಾರ. ವೃತ್ತವನ್ನು ಬಿಡಿಸಲಿಕ್ಕೆ ಕಲಿತ ಮಗುವಿಗೆ ಮೊತ್ತಮೊದಲ ಅಕ್ಷರವಾಗಿ ನನ್ನನ್ನು ಪರಿಚಯಿಸುವುದು ಸಹಜ ಮತ್ತು ಸುಲಭ. ವೃತ್ತಕ್ಕೆ ಒಂದು ತಲೆಕಟ್ಟು ಕೂಡಿಸಿದರೆ ನಾನು ಪ್ರತ್ಯಕ್ಷನಾಗುತ್ತೇನೆ. ಮೊದಲ ಅಕ್ಷರವನ್ನು ಕಲಿತೆನೆಂಬ ಮಗುವಿನ ಗೆಲುವಿಗೆ, ಸಂಭ್ರಮಕ್ಕೆ ಸಾಕ್ಷಿಯಾಗುತ್ತೇನೆ. ಆಮೇಲೆ ಎರಡನೆಯ ಅಕ್ಷರವಾಗಿ ನನ್ನ ಹೊಟ್ಟೆಯ ಮೇಲೊಂದು ಚುಕ್ಕಿ ಇಟ್ಟರೆ ಆಯ್ತು, ನನ್ನ ಸಹೋದರ ಠ ಕಾಣಿಸಿಕೊಳ್ಳುತ್ತಾನೆ. ಚುಕ್ಕಿ ತೆಗೆದು ಹೊಟ್ಟೆಗೆ ಬೆಲ್ಟ್ ಕಟ್ಟಿದರೆ ತಂಗಿ ಈ ರೆಡಿ.

ಆಕೆಯನ್ನೇ ಅಷ್ಟಿಷ್ಟು ಸಿಂಗರಿಸಿದರೆ ಕ ಕಂಗೊಳಿಸುತ್ತದೆ! ಎಷ್ಟು ಲಾಜಿಕಲ್ ಅಲ್ವಾ ರಠಈಕ ಕ್ರಮ? ಅ, ಆ, ಇ, ಈಯನ್ನು ಇಷ್ಟು ಸುಲಭವಾಗಿ, ತಾರ್ಕಿಕವಾಗಿ ಕಲಿಸುವುದು ಸಾಧ್ಯವೇ? ಖಂಡಿತ ಇಲ್ಲ. ಕರ್ನಾಟಕದ ಕೆಲವು ಪ್ರದೇಶಗಳಲ್ಲಿ, ಮುಖ್ಯವಾಗಿ ಉತ್ತರ ಕರ್ನಾಟಕದಲ್ಲಿ, ಹಿಂದೆಲ್ಲ ರಠಈಕ ದಿಂದಲೇ ಅಕ್ಷರಾಭ್ಯಾಸ ಶುರು ಮಾಡಿಸುತ್ತಿದ್ದದ್ದು. ಅದರಿಂದಲೇ ಈ ಒಂದು ಶಿಶುಗೀತೆಯೂ ಹುಟ್ಟಿಕೊಂಡಿರುವುದು: ‘ನನ್ನ ಪಾಟಿ ಕರಿಯದು, ಸುತ್ತು ಕಟ್ಟು ಬಿಳಿಯದು; ಬರೆಯಲಿಕ್ಕೆ ಬರುವುದು, ಬಹಳ ಚಂದ ಇರುವುದು; ಅಪ್ಪ ದುಡ್ಡು ಕೊಟ್ಟರು, ಬಳಪ ಒಂದು ತಂದೆನು; ರಠಈಕ ಬರೆದೆನು, ಅಮ್ಮನ ಮುಂದೆ ಹಿಡಿದೆನು; ಅಮ್ಮ ಉಂಡೆ ಕೊಟ್ಟಳು, ಗಪಗಪ ತಿಂದೆನು, ಥಕಥಕ ಕುಣಿದೆನು!’ ಆಮೇಲೊಂದಿಷ್ಟು ಕಾಲ ಎಲ್ಲ ಕಡೆಯೂ ಅ-ಆ ದಿಂದಲೇ ಅಕ್ಷರಕಲಿಕೆ ಎಂಬ ಅಲಿಖಿತ ನಿಯಮ ಬಂತು.

ಪಾಪ, ಆ ಸುರುಳಿಗಳು, ಆ ತಿರುವುಗಳು, ಆ ಮಡಚುವಿಕೆ… ಕನ್ನಡದ ಕಂದಮ್ಮಗಳು ಎಷ್ಟು ಒದ್ದಾಡಿದವೋ ಎಷ್ಟು ಕಣ್ಣೀರು ಸುರಿಸಿದವೋ… ಈಗ ಮತ್ತೊಮ್ಮೆ ಪ್ರಾಥಮಿಕ ಶಾಲೆಗಳಲ್ಲಿ ನಲಿ-ಕಲಿ ಚಟುವಟಿಕೆಗಳಲ್ಲಿ ರಠಈಕ ದಿಂದಲೇ ಅಕ್ಷರ ಪರಿಚಯ ಮಾಡಿಸುತ್ತಾರಂತೆ. ಅಷ್ಟರ ಮಟ್ಟಿಗೆ ನನಗೆ ಖುಷಿಯೋ ಖುಷಿ!

ಆದರೆ ಒಂದು ವಿಪರ್ಯಾಸವೂ ಇದೆ. ಚಿಕ್ಕ ಮಗುವಿಗೆ ಅಕ್ಷರ ಬರೆಯುವುದಕ್ಕೆ ನಾನೆಷ್ಟು ಸುಲಭನೋ ಉಚ್ಚರಿಸಲಿಕ್ಕೆ ಅಷ್ಟೇ ಕಷ್ಟ! ಹೆಚ್ಚಿನೆಲ್ಲ ಮಕ್ಕಳೂ ಬೇರೆ ಅಕ್ಷರಗಳನ್ನು ಸಲೀಸಾಗಿ ಉಚ್ಚರಿಸಬಲ್ಲವರು ನನ್ನನ್ನು ಸರಿಯಾಗಿ ಉಚ್ಚರಿಸಲಾರರು. ಕೆಲವರಂತೂ ೮-೧೦ ವರ್ಷ ಪ್ರಾಯವಾಗು ವವರೆಗೂ ನನ್ನನ್ನು ಲ ಎಂದೇ ಉಚ್ಚರಿಸುವರು. ನೀರು ಎನ್ನಲಿಕ್ಕೆ ನೀಲು, ಸಾರು ಎನ್ನಲಿಕ್ಕೆ ಸಾಲು, ಎರಡು-ಮೂರು ಎನ್ನಲಿಕ್ಕೆ ಎಲಡು ಮೂಲು. ಇಂಗ್ಲಿಷ್ ಪದಗಳಾದರೂ ಅಷ್ಟೇ- ಬ್ರೆಡ್ ಎನ್ನಲಿಕ್ಕೆ ಬೆದ್ದು; ಬೆಡ್‌ರೂಮ್ ಎನ್ನಲಿಕ್ಕೆ ಬೆಡ್‌ಲೂಮ್.

ಒಂಥರದಲ್ಲಿ ಮುದ್ಮುದ್ದಾಗಿ ಕೇಳಲಿಕ್ಕೆ ಚೆನ್ನಾಗಿಯೇ ಇರುತ್ತದೆನ್ನಿ. ಆದರೆ ಗಾಳಿಪಟ-೨ ಚಿತ್ರದ ದೇವ್ಲೇ ದೇವ್ಲೇ ಹಾಡನ್ನು ಕೇಳಿದಾಗಂತೂ ನಾನು ದಂಗಾಗಿ ಹೋದೆ! ‘ಹೊಂಟೋಗಿಲೋ ಹುಡ್ಗೀಲೆಲ್ಲ ತಿಲ್ಗಾ ವಾಪಸ್ ಬಂದವ್ಲಲ್ಲಾ ಎಲ್ಲಾ ನಿನ್ನ ಆಸೀಲ್ವಾದ…’ ಅಂತೆ. ‘ಪಾಲ್ಟಿ ಮಾಡೋ ಟೈಮಿನಲ್ಲಿ ನಿನ್ನುಪ್ಕಾಲ ಮಲೆಯಂಗಿಲ್ಲ ನಿಂಗೆ ನೂಲು ಧನ್ಯವಾದ…’ ಅಂತೆ. ಅಬ್ಬಬ್ಬಾ ಈ ಯೋಗಲಾಜ್ ಬಟ್ಲು, ಅಲ್ಜುನ್ ಜನ್ಯ, ವಿಜಯ ಪ್ಲಕಾಶ್, ಗೋಲ್ಡನ್ ಸ್ಟಾಲ್ ಗಣೇಶ್ ಎಲ್ಲರದೂ ಅದೇನು ಮಕ್ಕಳಾಟ! ಕೇಳುತ್ತ ಕೇಳುತ್ತ ನನಗರಿವಿಲ್ಲದಂತೆಯೇ ನಾನೂ ಹೆಜ್ಜೆಹಾಕಿದೆ. ಆಮೇಲೆ ಕಸಿವಿಸಿಯೂ ಆಯ್ತು. ಅಷ್ಟೂ ನಾಲಾಯಕ್ ಆಗಿ ಹೋದೆನಾ ನಾನು!? ಇರಲಿಬಿಡಿ ತಮಾಷೆಗೆಂದು ಆ ಹಾಡಿನಲ್ಲಿ ರ-ಕಾರವನ್ನೆಲ್ಲ ಲ-ಕಾರ ಆಗಿಸಿದ್ದಾರೆ. ಆದರೆ ನನಗೆ
ಯೋಚನೆ ಬಂದದ್ದೇನೆಂದರೆ ಅಂತಾಕ್ಷರಿ ಆಡುವಾಗ ರ ಬಂದೊಡನೆ ಥಟ್ಟನೆ ನೆನಪಾಗುವ ಬಿಳಿಹೆಂಡ್ತಿ ಚಿತ್ರದ ರಂಗೇನಹಳ್ಳಿಯಾಗಿ ಬಂಗಾರ ಕಪ್ಪತೊಟ್ಟ ರಂಗಾದ ರಂಗೇಗೌಡ ಮೆರೆದಿದ್ದ ಹಾಡಲ್ಲೇ ನಾದರೂ ಹಾಗೆ ಮಾಡಿದ್ದಿದ್ದರೆ ರಂಗೇಗೌಡನ ಅವಸ್ಥೆ ಏನಾಗಿರೋದು!

ಅಥವಾ, ದೇವರದುಡ್ಡು ಚಿತ್ರದ ತರೀಕೆರೆ ಏರಿಮೇಲೆ ಮೂರು ಕರಿ ಕುರಿಮರಿ ಹಾಡಿನಲ್ಲಿ ನನ್ನನ್ನು ಲ-ಕಾರವಾಗಿಸಿದ್ದರೆ? ಪುಣ್ಯಕ್ಕೆ ಹಾಗಾಗಲಿಲ್ಲ. ಏಕೆಂದರೆ ಕನ್ನಡ ಚಿತ್ರಗೀತೆಗಳ, ಚಿತ್ರರಂಗದ ವಿಷಯಕ್ಕೆ ಬಂದರೆ ಅಲ್ಲಿ ಒಟ್ಟಾರೆಯಾಗಿ ನನ್ನ ಬಗ್ಗೆ ಜನರಿಗೆ ಹೆಚ್ಚು ಗೌರವ ಇದೆ. ಹೆಸರಿನ ಅಕ್ಷರಗಳಲ್ಲಿ ನಾನಿದ್ದರೆ ಅವರ ಅದೃಷ್ಟ ಖುಲಾಯಿಸುತ್ತದೆಂದು ನಂಬಿಕೆ ಇದೆ. ಬೇಕಿದ್ದರೆ ನೋಡಿ: ಕರ್ನಾಟಕ ರತ್ನ, ಕೆಂಟಕಿ ಕರ್ನಲ್ ಪ್ರಶಸ್ತಿ ವಿಜೇತ, ನಟಸಾರ್ವಭೌಮ ಅಣ್ಣಾವ್ರ ಮೊದಲಿನ ಹೆಸರು ಮುತ್ತುರಾಜ್ ನಲ್ಲೂ ಆಮೇಲಿನ ಹೆಸರು ರಾಜ್ ಕುಮಾರ್‌ನಲ್ಲೂ ನಾನಿದ್ದೇನೆ.

ವಿಷ್ಣುವರ್ಧನ್ (ಸಂಪತ್‌ಕುಮಾರ್), ಶ್ರೀನಾಥ್, ಅಂಬರೀಶ್, ಶಂಕರನಾಗ್, ಪ್ರಭಾಕರ್, ಮುರಳಿ, ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್, ರಮೇಶ್ ಅರವಿಂದ್, ದರ್ಶನ್, ರಾಜ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ… ಎಲ್ಲರಲ್ಲೂ ನಾನಿದ್ದೇನೆ! ತಮಿಳಿನ ರಜನೀಕಾಂತ್(ಶಿವಾಜಿರಾವ್ ಗಾಯ ಕ್ವಾಡ್), ತೆಲುಗಿನ ಎನ್.ಟಿ.ರಾಮರಾವ್, ನಾಗೇಶ್ವರ ರಾವ್, ಚಿರಂಜೀವಿ, ನಾಗಾರ್ಜುನ್, ರಾಜೇಂದ್ರಪ್ರಸಾದ್… ಅಂದರಿ ಪೇರುಲೊ ನೇನುನ್ನಾನು! ನಟೀಮಣಿಯರನ್ನು ನೆನಪಿಸಿಕೊಂಡರೆ ಪಂಡರೀಬಾಯಿ, ಸರೋಜಾದೇವಿ, ಆರತಿ, ಭಾರತಿ, ತಾರಾ, ಸುಧಾರಾಣಿ, ಈಗಿನ ಹಿರೋಯಿನ್‌ಗಳಾದ ರಕ್ಷಿತಾ, ರಮ್ಯಾ, ರಚಿತಾರಾಮ್, ರಶ್ಮಿಕಾ ಮಂದಣ್ಣ, ರಾಗಿಣಿ… ಗೊತ್ತಾಯ್ತಲ್ವಾ ನನ್ನ ಮಹಿಮೆ? ಅಂದಹಾಗೆ ಕನ್ನಡಕವಿ ಗೋಪಾಲಕೃಷ್ಣ ಅಡಿಗರಿಗೂ ರ ವ್ಯಾಮೋಹ ಇತ್ತಂತೆ. ಅವರ ‘ಯಾವ ಮೋಹನ ಮುರಳಿ’, ‘ಕೆಂದಾವರೆ’, ‘ಪ್ರಾರ್ಥನೆ’, ‘ನನ್ನ ಅವತಾರ’, ‘ನೆಹರೂ ನಿವೃತ್ತರಾಗುವುದಿಲ್ಲ’ ಮುಂತಾದ ಕವನಗಳ ಶೀರ್ಷಿಕೆ ಗಮನಿಸಿದಾಗ ನನಗೂ ಇದು ಹೌದೆಂದು ಅನಿಸುತ್ತದೆ.

ಇನ್ನು, ಕನ್ನಡದಂತೆಯೇ ಸಂಸ್ಕೃತ ಲೋಕದಲ್ಲಿ ನನ್ನ ಛಾಪು ಹೇಗಿದೆಯೆಂದು ನಿಮಗೆ ತಿಳಿಸುತ್ತೇನೆ. ಮೊದಲನೆಯದಾಗಿ ಸಂಸ್ಕೃತದಲ್ಲಿ ನಾನೊಂದು ಬರೀ ಅಕ್ಷರವಲ್ಲ. ಒಂದಕ್ಷರದ ಪದ ಎಂದು ಪರಿಗಣಿಸಿದರೆ ಅಲ್ಲಿ ನನಗೆ ಯಾವುದೆಲ್ಲ ಅರ್ಥಗಳಿವೆ ಅಂತ ಕೇಳಿದರೆ ನೀವು ಬೆಕ್ಕಸಬೆರಗಾಗುತ್ತೀರಿ! ಸಂಸ್ಕೃತದಲ್ಲಿ ರ ಎಂಬ ಪುಲ್ಲಿಂಗ ಪದಕ್ಕೆ ಅಗ್ನಿ, ತಾಪ, ಮನ್ಮಥ, ವಜ್ರ, ಕ್ಷಯ, ನಾಶ, ಹಸ್ತ, ಋತು, ಧೈರ್ಯ, ಧನ, ಸಂಪತ್ತು, ರಾಜನಿಂದ ಭಯ, ಶಬ್ದ,  ಧ್ವನಿ, ಹೆಂಗಸು, ಗಾಳಿ, ರಾಮ, ಭೂಮಿ, ಇಂದ್ರಿಯ ಮುಂತಾದ ಅರ್ಥಗಳೂ, ನಪುಂಸಕ ಲಿಂಗದಲ್ಲಾದರೆ ರಕ್ತ, ಶಿರಸ್ಸು, ಧ್ಯಾನ, ಆಕಾಶ, ನಕ್ಷತ್ರ, ಉದರ, ಹೆದರಿಕೆ, ತ್ಯಾಗ, ದಾನ, ಮುಖ ಎಂಬ ಅರ್ಥಗಳೂ ಇವೆ. ವಿಶೇಷಣಪದವಾಗಿ ಬಳಸಿದರೆ ಬಿಸಿಯಾದ, ವಿರಸವಾದ ಎಂಬರ್ಥಗಳೂ ಇವೆ.

ಇಷ್ಟು ಸಾಕಲ್ವಾ? ಮತ್ತೆ ಛಂದಸ್ಸಿನ ಸಂದರ್ಭದಲ್ಲಾದರೆ ಎರಡು ಗುರುಗಳ ನಡುವೆ ಲಘುವೊಂದು ಬರುವ ಗಣಕ್ಕೂ ನನ್ನದೇ ಹೆಸರು (‘ಯಮಾತಾ ರಾಜಭಾನಸಲಗಂ’ನಲ್ಲಿ ರಾಜಭಾ ಭಾಗದಿಂದಾಗಿ ಆ ಹೆಸರು). ಸಂಸ್ಕೃತದಲ್ಲಿ ನನಗೆ ‘ರೇಫ’ ಎಂಬ ಇನ್ನೊಂದು ಹೆಸರೂ ಇದೆ. ಇಲ್ಲೊಂದು ಸ್ವಾರಸ್ಯಕರ ಅಂಶವನ್ನೂ ನಿಮ್ಮೊಡನೆ ಹಂಚಿಕೊಳ್ಳಬೇಕಿದೆ. ದ್ವಿರೇಫ ಎಂಬ ಪದವನ್ನು ನೀವು ಕೇಳಿದ್ದೀರಾ? ಚಿಟ್ಟೆ ಅಥವಾ ದುಂಬಿ ಎಂದು ಅದಕ್ಕೆ ಅರ್ಥ. ‘ಯಾ ಪಂಚಪ್ರಣವ ದ್ವಿರೇಫ ನಲಿನೀ ಯಾ ಚಿತ್ಕಲಾಮಾಲಿನೀ’ ಎಂದು ರಾಜರಾಜೇಶ್ವರಿ ಸ್ತೋತ್ರದ ಕೊನೆಯಲ್ಲಿ ಬರುತ್ತದೆ.

ದ್ವಿರೇಫ ಪುಷ್ಪಲಿಟ್ ಭೃಂಗ ಷಟ್ಪದ ಭ್ರಮರ ಅಲಿ- ಇವೆಲ್ಲ ಸಮಾನಾರ್ಥಕ ಪದಗಳನ್ನೆತ್ತದೆ ಅಮರಕೋಶ. ಭ್ರಮರ ಎಂಬ ಪದದ ಉಚ್ಚಾರದಲ್ಲಿ ಎರಡು ರ-ಕಾರಗಳು ಬರುತ್ತವೆಂಬ ಕಾರಣಕ್ಕೆ ಭ್ರಮರಕ್ಕೆ (ದುಂಬಿಗೆ) ದ್ವಿರೇಫ ಎಂಬ ಹೆಸರಂತೆ. ಹಾಗೆ ನೋಡಿದರೆ ತಿಳಿರುತೋರಣದಲ್ಲೂ ಎರಡು ರ-ಕಾರಗಳಿವೆ! ಆದರೆ ನನಗನಿಸುತ್ತದೆ, ಚಿಟ್ಟೆಗೆ ದ್ವಿರೇಫ ಎಂಬ ಹೆಸರು ಬರುವುದಕ್ಕೆ ಇನ್ನೊಂದು ಕಾರಣವೂ ಇರಬಹುದು. ದೇವನಾಗರಿ ಲಿಪಿಯಲ್ಲಿ ನನ್ನನ್ನು ಹೇಗೆ ಬರೆಯುತ್ತಾರೆಂದು ಗೊತ್ತಲ್ಲ? ಆ ರೀತಿಯ ಎರಡು ಆಕೃತಿಗಳನ್ನು ಎದುರುಬದುರಾಗಿಟ್ಟರೆ ಚಿಟ್ಟೆಯಂತೆ ಕಾಣುತ್ತದಲ್ಲ, ಅದೇ ದ್ವಿರ ಅಥವಾ ದ್ವಿರೇಫ!

ಅಂದಹಾಗೆ ದೇವನಾಗರಿಯಲ್ಲಿ ನನ್ನ ಸ್ವರೂಪವನ್ನು ಈಗ್ಗೆ ಹತ್ತು ವರ್ಷಗಳಿಂದೀಚೆಗೆ ರೂಪಾಯಿ ಚಿಹ್ನೆಯಾಗಿ ನೀವೆಲ್ಲ ಬಳಸುತ್ತೀರೆನ್ನುವುದೂ ನನಗೆ ಹೆಮ್ಮೆಯ ವಿಷಯವೇ. ದೇವನಾಗರಿಯಲ್ಲಿ (ಅಂದರೆ ಸಂಸ್ಕೃತದಲ್ಲಿ, ಹಿಂದೀಯಲ್ಲಿ) ನನ್ನನ್ನು ಬರೆಯುವ ಕ್ರಮದಲ್ಲೂ ನಾಲ್ಕು ಬೇರೆಬೇರೆ ರೀತಿಗಳಿವೆ.
ಒಂದು ಸ್ವರಸಹಿತ ರ-ಕಾರದ ಪೂರ್ಣರೂಪ. ಎರಡನೆಯದು ಸಂಯುಕ್ತಾಕ್ಷರದಲ್ಲಿ ಮೊದಲ ವ್ಯಂಜನವಾಗಿ ನಾನಿದ್ದಾಗ ಎರಡನೆಯದರ ತಲೆಮೇಲೆ ನಾನು ಕುಳಿತುಕೊಳ್ಳುತ್ತೇನೆ, ಅದರದೊಂದು ಕೊಂಬಿನಂತೆ ಕಾಣಿಸಿಕೊಳ್ಳುತ್ತೇನೆ.

ಕರ್ಮ, ವರ್ಗ, ಪರ್ಯಾಯ ಮುಂತಾದ ಪದಗಳನ್ನು ದೇವನಾಗರಿಯಲ್ಲಿ ಬರೆಯುವುದು ಆ ರೀತಿ. ಆಗ ನನ್ನನ್ನು ರೇಫ ಎಂದೇ ಗುರುತಿಸುತ್ತಾರೆ. ಕನ್ನಡದಲ್ಲಾದರೆ ಅದನ್ನೇ ಅರ್ಕಾರೊತ್ತು ಎನ್ನುತ್ತೀರಿ. ಮೂರನೆಯ ವಿಧಾನ ಸಂಯುಕ್ತಾಕ್ಷರದಲ್ಲಿ ನಾನು ಎರಡನೆಯ ವ್ಯಂಜನವಾಗಿ ಇದ್ದಾಗ ಮೊದಲನೆಯದರ ಸೊಂಟದ ಕೆಳಗೆ ಒಂದು ಓರೆ ಕಡ್ಡಿಯಾಗಿ ಕಾಣಿಸಿಕೊಳ್ಳುತ್ತೇನೆ. ಮಿತ್ರ, ಕ್ರಮ, ಸಪ್ರೇಮ ಮುಂತಾದ ಪದಗಳನ್ನು ದೇವನಾಗರಿಯಲ್ಲಿ
ಬರೆಯುವುದು ಆ ರೀತಿ. ಅದನ್ನು ಪದೇನ ಎಂದು ಗುರುತಿಸುತ್ತಾರೆ. ಕನ್ನಡದಲ್ಲಾದರೆ ಅರ್ಧಚಂದ್ರ ಒತ್ತು ಎನ್ನುತ್ತೀರಿ.

ನಾಲ್ಕನೆಯದು ದೇವನಾಗರಿಯಲ್ಲಿ ಟ, ಢ ಮುಂತಾಗಿ ಕೆಳಗೆ ಉರುಟಾಗಿರುವ ಅಕ್ಷರಗಳೊಂದಿಗೆ ಜಾಲಪಾದದಂತೆ ಕಾಣಿಸಿಕೊಳ್ಳುವ ನನ್ನ ಅವತಾರ. ಈ ನಾಲ್ಕೂ ವಿಧಗಳನ್ನು, ಅವುಗಳ ಸಂದರ್ಭ ಮತ್ತು ವ್ಯತ್ಯಾಸಗಳನ್ನು ಚಿಕ್ಕ ಮಕ್ಕಳಿಗೆ ಕಲಿಸುವ ಹೊತ್ತಿಗೆ ಹೆತ್ತವರಿಗೆ ಶಿಕ್ಷಕರಿಗೆ ಸಾಕುಸಾಕಾಗುತ್ತದೋ ಏನೋ. ಅದಕ್ಕಾಗಿ ನನ್ನ ಮೇಲೆ ಹಿಡಿಶಾಪ ಹಾಕುವುದೂ ಇದೆಯೇನೋ. ಆದರೆ ನಾನೇನೂ ಅದಕ್ಕೆಲ್ಲ ಹೆದರುವುದಿಲ್ಲ. ಏಕೆಂದರೆ ಟ, ಠ, ಡ, ಢ, ಣಗಳ
ಮೂರ್ಧನ್ಯ ಗುಂಪಿಗೇ ಸೇರಿದ್ದೇನೆ ನಾನೂ (ನನ್ನೊಂದಿಗೆ ಋ ಮತ್ತು ಷ ಕೂಡ). ನಾವೆಲ್ಲ ಬಲುಗಟ್ಟಿಗರು. ಕನ್ನಡದ ಆದಿಕವಿ ಪಂಪ ಭೀಮಸೇನನ ಬಾಯಿಯಿಂದ ‘ಎನ್ನ ನುಡಿ ಟಾಠಡಾಢಣಂ’ ಎಂದು ಹೇಳಿಸಿದ್ದು ನೆನಪಿದೆಯಲ್ಲ? ಠ ಅಕ್ಷರದೊಡನೆ ನನ್ನ ನಂಟನ್ನು ಸಾಬೀತುಪಡಿಸಲಿಕ್ಕೆಂದೇ ಇರಬೇಕು, ಬೆಂಗಳೂರಿನಲ್ಲಿ ಕೆಲವು ಕಿಲಾಡಿ ಹುಡುಗರು ‘ರಂಗರಾವ್ ರಸ್ತೆ’ ಫಲಕವನ್ನು ‘ಠಂಗಠಾವ್ ಠಸ್ತೆ’ ಎಂದು ವಿರೂಪಗೊಳಿಸುವುದು.
ಬರವಣಿಗೆ ಮತ್ತು ಉಚ್ಚಾರಕ್ಕೆ ಸಂಬಂಽಸಿದಂತೆ ನನ್ನ ಇನ್ನೂ ಕೆಲವು ವೈಶಿಷ್ಟ್ಯಗಳಿವೆ.

ಸಂಸ್ಕೃತದಲ್ಲಿ ‘ರಷಾಭ್ಯಾಂ ನೋ ಣಃ ಸಮಾನಪದೇ’ ಎಂಬ ನಿಯಮ ಇದೆ. ಅಂದರೆ, ಒಂದು ಪದದಲ್ಲಿ ನಾನು (ಅಥವಾ ಷ ವ್ಯಂಜನ) ಇದ್ದು ಆ ಬಳಿಕ ಅದೇ ಪದದಲ್ಲಿ ನ-ಕಾರವು ಬಂದಿದ್ದರೆ, ಅದು ಣ-ಕಾರವಾಗಿ ಬದಲಾಗುತ್ತದೆ. ಉದಾ: ರಾಮಾಯನ ಅಲ್ಲ ರಾಮಾಯಣ. ಅಪರಾಹ್ನ ಅಲ್ಲ ಅಪರಾಹ್ಣ. ಈ ನಿಯಮದ ಪ್ರಕಾರವೇ ಕರ್ನಾಟಕದ ಹೆಸರು ಕರ್ಣಾಟಕ ಎಂದಾಗಬೇಕು ಅಂತ ಕೆಲವು ವಿದ್ವಾಂಸರ ಅಭಿಪ್ರಾಯ. ಇರಲಿ, ಇಲ್ಲಿ ಆ ಚರ್ಚೆಗೆ ನಾವೀಗ ಕೈಹಾಕುವುದು ಬೇಡ. ಇನ್ನೊಂದು ವಿಚಾರವೆಂದರೆ ಚಿಕ್ಕ ಮಕ್ಕಳು (ಮತ್ತು ಯೋಗರಾಜ ಭಟ್ಟರು) ಮಾತ್ರ ನನ್ನನ್ನು ಲ ಎಂದು ಉಚ್ಚರಿಸುವುದಲ್ಲ.
ಸಂಸ್ಕೃತದಲ್ಲಿ ಪ್ರೌಢರೂ ಪ್ರಬುದ್ಧರೂ ನನ್ನನ್ನು ಲ ಎಂದು ಉಚ್ಚರಿಸಲಿಕ್ಕೆ ಅವಕಾಶ ಇದೆ. ಅನೇಕ ಶಬ್ದಗಳು ಹಾಗೆಯೇ ರೂಪುಗೊಂಡಿವೆ ಕೂಡ. ಉದಾಹರಣೆಗೆ, ಶ್ರೀಃ ಎಂಬ ಸಂಸ್ಕೃತ ಶಬ್ದಕ್ಕೆ ಕಾಂತಿ, ಲಾವಣ್ಯ, ಸಂಪತ್ತು, ಮಂಗಲ, ಒಳಿತು ಮೊದಲಾದ ಅರ್ಥಗಳಿವೆ. ಅಂತಹ ಗುಣಗಳನ್ನುಳ್ಳದ್ದು ಶ್ರೀಲ. ಸಂಪದ್ಯುಕ್ತವಾದ, ಕಾಂತಿಯುಳ್ಳ ಮಂಗಲಮಯನಾದ ವ್ಯಕ್ತಿಯನ್ನು ಶ್ರೀಲಃ ಎನ್ನಬಹುದು (ಲೋಕಪ್ರಸಿದ್ಧವಾದ ಇಸ್ಕಾನ್ ಭಕ್ತಿಪಂಥವನ್ನು ಸ್ಥಾಪಿಸಿದ ಮಹಾಪುರುಷ ಸ್ವಾಮಿ ಪ್ರಭುಪಾದರನ್ನು ಶ್ರೀಲ ಪ್ರಭುಪಾದ ಎಂದು ಕರೆಯುತ್ತಾರೆ).

ಶ್ರೀ ಶಬ್ದವನ್ನು ಶ್ಲೀ ಅಂತಲೂ ಹೇಳಬಹುದಾದ ಅನುಕೂಲವನ್ನು ಸಂಸ್ಕೃತ ವ್ಯಾಕರಣವು ಒದಗಿಸುತ್ತದೆ. ರೇಫದ(ರ ವರ್ಣದ) ಜಾಗದಲ್ಲಿ ಲ-ಕಾರವನ್ನು ಹೇಳಬಹುದಾದ ಶಬ್ದಗಳದ್ದೇ ಗುಂಪೊಂದಿದೆ. ಈ ಗುಂಪಿನಲ್ಲಿ ಬರುವ ಶುಕ್ರ ಶಬ್ದವನ್ನು ಶುಕ್ಲ ಅಂತಲೂ, ರೋಮವನ್ನು ಲೋಮ ಅಂತಲೂ, ಕರ್ಮ ಶಬ್ದವನ್ನು ಕಲ್ಮ ಅಂತಲೂ, ಶ್ರೀ ಶಬ್ದವನ್ನು ಶ್ಲೀ ಅಂತಲೂ ಹೇಳುವ ಸೌಕರ್ಯ ಉಂಟು. ಶ್ಲೀ(ಶ್ರೀಃ, ಕಾಂತಿ) ಉಳ್ಳದ್ದು/ಉಳ್ಳವನು/ಉಳ್ಳವಳು ಶ್ಲೀಲ ಎನಿಸಿಕೊಳ್ಳುತ್ತದೆ. ತದ್ವಿರುದ್ಧವಾದದ್ದು ಅಶ್ಲೀಲ. ಹಾಗೆಯೇ ತಮಿಳು ಭಾಷೆಯಲ್ಲಿ ಇನ್ನೊಂದು ನಿಯಮವೇನೆಂದರೆ ನನ್ನಿಂದ (ಅಂತೆಯೇ ಲ-ಕಾರ, ಳ-ಕಾರಗಳಿಂದಲೂ) ಯಾವುದೇ ಪದ ಆರಂಭವಾಗುವಂತಿಲ್ಲ. ಆ ಸಂದರ್ಭದಲ್ಲಿ ಮೊದಲೊಂದು ಸ್ವರಾಕ್ಷರವನ್ನು ಸೇರಿಸಿಕೊಳ್ಳುತ್ತಾರೆ. ಆದ್ದರಿಂದಲೇ ಅವರಿಗೆ ಲೋಕ ಪದದ ತದ್ಭವರೂಪ ಉಲಗಂ ಆಗುತ್ತದೆ. ರಂಗ ಪದದ ತದ್ಭವರೂಪ ಅರಂಗು ಆಗುತ್ತದೆ. ಆ ಕಾರಣದಿಂದಲೇ ತಮಿಳರ ರಂಗಪ್ರವೇಶವು ಅರಂಗೇಟ್ರಮ್ ಆಗುವುದು.

ಇನ್ನು, ವೇದೋಪನಿಷತ್ತುಗಳಲ್ಲೂ ನಾನು ಬೀಜಾಕ್ಷರ ಎಂದು ಮೊದಲಿಗೇ ಹೇಳಿದ್ದೆನಷ್ಟೆ? ಅದನ್ನೊಂದಿಷ್ಟು ವಿವರಿಸುತ್ತೇನೆ. ವೇದಗಳಲ್ಲೇ ಅತಿ ಪ್ರಾಚೀನವಾದ ಋಗ್ವೇದದ ಮೊತ್ತಮೊದಲ ಮಂತ್ರದ ಮೊದಲ ಪದವು ‘ಅಗ್ನಿ’ ಎಂದು ಇರುವುದು (ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ
ದೇವಮೃತ್ವಿಜಮ್…). ಅಗ್ನಿ ಎಂದರೆ ನಾನೇ! ರಕಾರೋ ವಹ್ನಿವಚನಃ ಎನ್ನಲಾಗಿದೆ. ರ ಪದಕ್ಕಿರುವ ಛಪ್ಪನ್ನೈವತ್ತಾರು ಅರ್ಥಗಳ ಪೈಕಿ ಮೊದಲನೆಯದೇ ಅಗ್ನಿ ಎಂಬ ಅರ್ಥವೆಂದು ಮೇಲೆ ಈಗಾಗಲೇ ತಿಳಿದುಕೊಂಡಿದ್ದೀರಲ್ಲ? ರೇಫೋಧಿ ಗ್ನಿರಹಮೇವೋಕ್ತೋ ವಿಷ್ಣುಃ ಸೋಮೋ ಮ ಉಚ್ಯತೇ| ಆವಯೋರ್ಮಧ್ಯಗೋ ಬ್ರಹ್ಮಾ ರವಿರಾಕಾರ ಉಚ್ಯತೇ|| ಅಂತ ಇನ್ನೊಂದು ಶ್ಲೋಕವಿದೆ, ಅಥರ್ವವೇದದ ರಾಮರಹಸ್ಯ ಉಪನಿಷತ್ತಿನಲ್ಲಿ ಬರುತ್ತದಂತೆ. ಹನುಮಂತನು ತನ್ನೊಡೆಯ ರಾಮನೇ ಪರಬ್ರಹ್ಮ ಎಂದು ಸಾರುವ ಉಪನಿಷತ್ ಇದು.

ಇದರ ಪ್ರಕಾರ ರಾಮನು ಹನುಮಂತನಿಗೆ ಹೀಗೆನ್ನುತ್ತಾನಂತೆ: ನನ್ನ ಹೆಸರಿನಲ್ಲಿರುವ ರೇಫ(ರ-ಕಾರ)ವು ಅಗ್ನಿಯನ್ನು ಸೂಚಿಸುತ್ತದೆ. ಮ-ಕಾರವು ಸೋಮ ಅಥವಾ ವಿಷ್ಣುವನ್ನು ಸೂಚಿಸುತ್ತದೆ. ಅವೆರಡರ ನಡುವಿನ ಆ-ಕಾರವು ಬ್ರಹ್ಮ ಅಥವಾ ಸೂರ್ಯನನ್ನು ಸೂಚಿಸುತ್ತದೆ.’ ಇಲ್ಲಿ ‘ಗಕಾರಸ್ತ್ವನ್ಧಮಜ್ಞಾನಂ ರಕಾರೋ eನಮುಜ್ಜ್ವಲಮ್’ ಎಂಬ ಇನ್ನೊಂದು ಸೂಕ್ತಿಯನ್ನೂ ನೆನಪಿಸಿಕೊಳ್ಳಬಹುದು. ಗುರು ಎಂಬ ಪದದಲ್ಲಿ
ಗ-ಕಾರವು ಅಂಧಕಾರವನ್ನೂ ಅeನವನ್ನೂ ಸೂಚಿಸಿದರೆ ರ-ಕಾರವು ಅದನ್ನು ಹೊಡೆದೋಡಿಸುವ ಉಜ್ಜ್ವಲ eನವನ್ನು ಸೂಚಿಸುತ್ತದೆ. ಈಗ ಹೇಳಿ. ಇದಿಷ್ಟು ಜ್ಞಾನವನ್ನು ರ-ಕಾರ ಬಿಚ್ಚಿಟ್ಟ ರಹಸ್ಯ ಎನ್ನುತ್ತೀರೋ ಅಥವಾ ಇದು ಬರೀ ರ-ಹಾಸ್ಯ ಎನ್ನುತ್ತೀರಿ? ನನ್ನ ಸ್ವಗತವನ್ನು ತಾಳ್ಮೆಯಿಂದ ಕೇಳಿಸಿಕೊಂಡಿದ್ದಕ್ಕೆ ನಿಮಗೆ ಧನ್ಯವಾದಗಳು. ಹಾಗೆಯೇ ನನ್ನದೊಂದು ಸುಂದರ ಚಿತ್ರ ಬರೆದುಕೊಟ್ಟ ವ್ಯಂಗ್ಯಚಿತ್ರಕಾರ ‘ರ’ಘುಪತಿ ಶೃಂಗೇರಿ ಅವರಿಗೂ
ಪ್ರೀತಿಪೂರ್ವಕ ಧನ್ಯವಾದ. ಇಂತೀ, ರ.