ಕನ್ನಡ ಡಿಂಡಿಮ
ರಂಗನಾಥ ಎನ್.ವಾಲ್ಮೀಕಿ
‘ಇತಿಹಾಸವನ್ನು ಅರಿಯದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ’ ಎಂಬ ಮಾತು ಅಕ್ಷರಶಃ ಸತ್ಯವಾದುದು. ಕನ್ನಡನಾಡು ಮತ್ತು ನುಡಿಯ ಸಂರಕ್ಷಣೆಯು, ನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರ ಆದ್ಯಕರ್ತವ್ಯ, ಅದರಲ್ಲಿಯೂ ಈ ನಿಟ್ಟಿನಲ್ಲಿ ಯುವಕರ ಪಾತ್ರ ಅಧಿಕ ಎಂತಲೇ ಹೇಳಬಹುದು.
ಕಾರಣ, ಯುವಶಕ್ತಿ ಮನಸ್ಸು ಮಾಡಿದರೆ ಮಹತ್ಕಾರ್ಯಗಳು ಜರುಗುತ್ತವೆ.
ಒಂದೀಡಿ ವ್ಯವಸ್ಥೆಯು ಸಕಾರಾತ್ಮಕವಾಗಿ ಬದಲಾಗುವ ಹಾದಿಯೂ ಸುಲಭವಾಗುತ್ತದೆ. ಇದಲ್ಲದೆ ಇಂದಿನ ಯುವಕರೇ ಭವಿಷ್ಯತ್ತಿನ ಭವ್ಯನಾಡಿನ ನಿರ್ಮಾಣಕಾರರು. ಹೀಗಾಗಿ, ಯುವಜನಾಂಗ ಸದಾ ಒಳ್ಳೆಯ ಕೆಲಸ ಮಾಡುತ್ತಾ, ನಾಡು-ನುಡಿಯ ಬಗ್ಗೆ ಗೌರವ ಹೊಂದಿರಬೇಕು. ನಾಡಪ್ರೇಮವನ್ನು
ಸ್ವತಃ ಬೆಳೆಸಿಕೊಳ್ಳುವುದರ ಜತೆಗೆ, ಇತರರಲ್ಲೂ ಬೆಳೆಸಬೇಕಾದ ಗುರುತರವಾದ ಹೊಣೆ ಅವರ ಹೆಗಲ ಮೇಲಿದೆ. ಈ ನಾಡು ರೂಪುಗೊಳ್ಳುವುದರ ಹಿಂದೆ ಏನೆಲ್ಲಾ ಕಸರತ್ತುಗಳಾಗಿವೆ ಎಂಬುದನ್ನು ನಮ್ಮ ಯುವಪೀಳಿಗೆ ಅರಿಯಬೇಕಿದೆ.
ಕನ್ನಡನಾಡು ರಚನೆಗೊಳ್ಳುವುದರ ಹಿಂದೆ ಅನೇಕರ ಹೋರಾಟ, ಪರಿಶ್ರಮ ಇವೆ. ೧೮೯೦ರಲ್ಲಿ ಸ್ಥಾಪನೆಯಾದ ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡ ನಾಡು-ನುಡಿಯ ರಕ್ಷಣೆಗೆ ಕಟಿಬದ್ಧವಾಗಿ ನಿಂತ ಹೆಗ್ಗಳಿಕೆಯನ್ನು ಪಡೆದಿದೆ. ರಾ.ಹ. ದೇಶಪಾಂಡೆ, ಡಿ.ಸಿ. ಪಾವಟೆ, ಬೆನಗಲ್ ರಾಮರಾಯರು ನಾಡಿನ ಏಕೀಕರಣದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತ ಮಹನೀಯರು. ತದನಂತರದ ವಿವಿಧ ಕಾಲಘಟ್ಟಗಳಲ್ಲಿ ಗಳಗನಾಥರು, ಬಿ.ಎಂ.ಶ್ರೀಕಂಠಯ್ಯ, ಕುವೆಂಪು, ಬೇಂದ್ರೆ, ತೀ.ನಂ.ಶ್ರೀಕಂಠಯ್ಯ, ಪಾಟೀಲ ಪುಟ್ಟಪ್ಪ ಮೊದಲಾದವರು ತಮ್ಮದೇ ಆದ ನೆಲೆಯಲ್ಲಿ ಕನ್ನಡದ ಸೇವೆ
ಮಾಡಿದ್ದಿದೆ. ಗಳಗನಾಥರು ಕನ್ನಡದ ಪುಸ್ತಕಗಳನ್ನು ತಲೆಯ ಮೇಲೆ ಹೊತ್ತು ಮನೆ ಮನೆಗೆ ತಿರುಗಿ ಮಾರಾಟ ಮಾಡಿ ಕನ್ನಡಪ್ರೇಮ ಮೆರೆದಿದ್ದು ಇತಿಹಾಸದಲ್ಲಿ ದಾಖಲಾಗಿದೆ.
ನಾಡಿನ ಏಕೀಕರಣ ಕ್ಕಾಗಿ ೨೧ ದಿನ ಉಪವಾಸ ಕೈಗೊಂಡ ಹೆಗ್ಗಳಿಕೆ ಅದರಗುಂಚಿ ಶಂಕರಗೌಡ ಪಾಟೀಲ ಅವರದ್ದು. ಮಾತ್ರವಲ್ಲದೆ ನಾಡು-ನುಡಿಗಾಗಿ ಇನ್ನೂ ಅನೇಕರು ಬಲಿದಾನಗೈದ ಉದಾಹರಣೆಗಳಿವೆ. ಹೀಗೆ ಅನೇಕರ ಪರಿಶ್ರಮದ ಫಲವಾಗಿ ಕನ್ನಡನಾಡು ೧೯೫೬ರಂದು ರಚನೆಗೊಂಡಿತು. ‘ಮೈಸೂರು’ ಎಂಬುದು ನಮ್ಮ ರಾಜ್ಯದ ಮೊದಲ ಹೆಸರು. ಮೈಸೂರು ಅರಸರು ಬಹಳ ವರ್ಷಗಳ ಕಾಲ ನಾಡನ್ನು ಆಳಿ ಅಭಿವೃದ್ಧಿ ಮಾಡಿದರು. ಅವರ ದೂರದೃಷ್ಟಿಯು ನಾಡಿನ ಅಭಿವೃದ್ಧಿಗೆ ಪ್ರೇರಕವಾಗಿತ್ತು ಎಂದೇ ಹೇಳಬಹುದು. ಮೈಸೂರು ರಾಜ್ಯಕ್ಕೆ ತರುವಾಯದಲ್ಲಿ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲಾಯಿತು. ಕಲೆ, ಶಿಕ್ಷಣ, ಸಾಹಿತ್ಯ, ವಾಸ್ತುಶಿಲ್ಪ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮಿಕೆಯನ್ನು ಹೊಮ್ಮಿಸುತ್ತಾ ಬಂದಿರುವ ಕನ್ನಡ ನಾಡು, ದೇಶದ ಮಿಕ್ಕ ರಾಜ್ಯಗಳಿಗೆ ಹೋಲಿಸಿದಾಗ ಅನನ್ಯತೆಯನ್ನು ಕಾಪಾಡಿಕೊಂಡು ಬಂದಿದೆ.
ಸುಮಾರು ೨೦೦೦ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಇದುವರೆಗೆ ೮ ಜ್ಞಾನಪೀಠ ಪ್ರಶಸ್ತಿಗಳು ದೊರಕಿರುವುದು ಅತ್ಯಂತ ಹೆಮ್ಮೆಯ ಸಂಗತಿ ಯೇ ಸರಿ. ಹೀಗೆ ನಮ್ಮ ನಾಡು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದರೂ, ಒಂದಷ್ಟು ಸಮಸ್ಯೆಗಳು ಹಾಗೇ ಉಳಿದಿದ್ದು ಅವಕ್ಕೆ ಪರಿಹಾರ ಕಂಡುಕೊಳ್ಳುವುದು ಇಂದಿನ ಅಗತ್ಯವಾಗಿದೆ. ಗಡಿವಿವಾದ, ನದಿನೀರು ಹಂಚಿಕೆಯ ಸಮಸ್ಯೆ ಹಾಗೇ ಉಳಿದುಬಿಟ್ಟಿದೆ. ಕನ್ನಡವು ಶಿಕ್ಷಣ ಮಾಧ್ಯಮವಾಗಿ, ಆಡಳಿತ ಭಾಷೆಯಾಗಿ ಬೆಳೆಯ ಬೇಕು ಎಂಬ ಕನಸು ನಿಜಾರ್ಥದಲ್ಲಿ ಸಾಕಾರಗೊಳ್ಳದಿರುವುದು ಕೂಡ ಮತ್ತೊಂದು ಎದ್ದು ಕಾಣುವಂಥ ಸಮಸ್ಯೆ ಯಾಗಿದೆ.
ಕನ್ನಡ ನಾಡಿನ ಹಿತರಕ್ಷಣೆಗೆ ಅನೇಕ ಸಂಘಟನೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಕಾವಲು ಸಮಿತಿ, ಕನ್ನಡ ವಿಶ್ವವಿದ್ಯಾಲಯ ಹೀಗೆ ಅನೇಕ ಸ್ಥಾಪಿತ ವ್ಯವಸ್ಥೆಗಳಿರುವುದು ಹೌದಾದರೂ, ನಾಡಿನ ಯುವಜನಾಂಗವು ಈ ನಿಟ್ಟಿನಲ್ಲಿ ಸಮರ್ಥವಾಗಿ ತೊಡಗಿಸಿಕೊಳ್ಳ ಬೇಕಿರುವುದು ಇಂದಿನ ಅಗತ್ಯವಾಗಿದೆ. ಆದರೆ, ನಮ್ಮ ಯುವಪೀಳಿಗೆ ಕನ್ನಡದ ಸಂಸ್ಕೃತಿ ಮತ್ತು ಪರಂಪರೆಯ ಪ್ರಜ್ಞೆಯಿಂದ ನಿಧಾನವಾಗಿ ಹಿಂದೆ ಸರಿಯುತ್ತಿರುವುದು ಆತಂಕದ ಸಂಗತಿಯಾಗಿದೆ. ಜೀವನೋಪಾಯಕ್ಕಾಗಿ ತಮ್ಮಿಷ್ಟದ ಯಾವುದೇ ಕಾರ್ಯಕ್ಷೇತ್ರವನ್ನು ಅಪ್ಪಿದರೂ, ಕನ್ನಡತನದಿಂದ ದೂರ ಸರಿಯುವುದಿಲ್ಲ ಎಂದು ಇಂಥವರು ಸಂಕಲ್ಪಿಸಬೇಕಿದೆ.
ಕನ್ನಡದಲ್ಲಿ ಪರಸ್ಪರ ಮಾತನಾಡಿದರೆ, ವ್ಯವಹರಿಸಿದರೆ ಅವಮಾನ ಎಂಬ ತಪ್ಪುಗ್ರಹಿಕೆಯನ್ನು ಇಂಥವರು ಮೊದಲು ಕಳಚಬೇಕಾಗಿದೆ. ವಿದೇಶಿ ಮೂಲದ ಅರ್ಥವಿಲ್ಲದ ಆಚರಣೆಗಳು, ಉಡುಪು, ಆಹಾರ ಪದ್ಧತಿ ಇವುಗಳ ಅಂಧಾನುಕರಣೆ ಮಾಡುವ ಬದಲು, ಕನ್ನಡ ಮೂಲಕ್ಕೆ ಸೇರಿದಂಥವನ್ನು ಉತ್ತೇಜಿಸಬೇಕಿದೆ. ಕನ್ನಡನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಅರಿತು ಅವನ್ನು ಬೆಳೆಸಲು ಪ್ರೋತ್ಸಾಹಿಸಬೇಕಿದೆ.
ಇನ್ನು ನಮ್ಮ ಆಳುಗರ ಕುರಿತು ಒಂದೆರಡು ಮಾತು. ಯಕ್ಷಗಾನ, ಡೊಳ್ಳುಕುಣಿತ, ವೀರಗಾಸೆ, ಕಂಸಾಳೆ, ಭರತನಾಟ್ಯ, ಸುಗಮ ಸಂಗೀತ, ಜಾನಪದ ಸಂಗೀತ ಮತ್ತು ಕಲೆಗಳು, ಕಸೂತಿ ಕೌಶಲಗಳು, ಶಿಲ್ಪಕಲೆ, ನೇಕಾರಿಕೆ, ಗುಡಿಕೈಗಾರಿಕೆಗಳು, ಗ್ರಾಮೀಣ ಕ್ರೀಡೆಗಳು ಹೀಗೆ ಹೇಳುತ್ತ ಹೋದರೆ ವೈವಿಧ್ಯಮಯ ಕಲೆ ಮತ್ತು ಪರಿಣತಿಗಳ ತವರೂರಾಗಿದೆ ಕನ್ನಡನಾಡು. ಇವುಗಳ ಮಹತ್ವವನ್ನು ಜಾಗತಿಕ ಸಮುದಾಯಕ್ಕೆ ಮತ್ತಷ್ಟು ಪರಿಣಾಮಕಾರಿಯಾಗಿ ಮನ ದಟ್ಟು ಮಾಡಿಕೊಡುವ ನಿಟ್ಟಿನಲ್ಲಿ ಸರಕಾರ ಆದ್ಯಗಮನವನ್ನು ಹರಿಸಬೇಕಿದೆ. ರಾಜ್ಯದ ಮೂಲೆಮೂಲೆಗಳಲ್ಲಿ ಮೈಚೆಲ್ಲಿಕೊಂಡಿರುವ ಸುಂದರ ತಾಣಗಳು, ದೇಗುಲಗಳು, ಸಂಸ್ಕೃತಿ ಮತ್ತು ಇತಿಹಾಸದ ದೃಷ್ಟಿಯಿಂದ ಮಹತ್ವವನ್ನು ಪಡೆದಿರುವ ನೆಲೆಗಳು ಇತ್ಯಾದಿಗಳ ಅಭಿವೃದ್ಧಿಗೆ ಸರಕಾರ ಮನಸ್ಸು ಮಾಡಿದರೆ, ಪ್ರವಾಸೋದ್ಯಮದ ವರ್ಧನೆಯ ದೃಷ್ಟಿಯಿಂದಲೂ ಅದು ಮಹತ್ವದ ಉಪಕ್ರಮವಾಗುತ್ತದೆ ಮತ್ತು ಅದರಿಂದಾಗಿ ಸ್ಥಳೀಯ ಉದ್ಯೋಗಿಗಳು, ಕುಶಲಕರ್ಮಿಗಳು, ವ್ಯಾಪಾರಿಗಳಿಗೆ ಉತ್ತೇಜನ ನೀಡಿದಂತಾಗುತ್ತದೆ.
ಜತೆಗೆ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ದೊರೆಯುವಂತಾಗಬೇಕು, ಕನ್ನಡ ಭಾಷೆಯು ‘ಅನ್ನದ ಭಾಷೆ’ಯೂ ಆಗಬೇಕು. ತನ್ಮೂಲಕ ಕನ್ನಡ ವನ್ನು ನೆಚ್ಚಿರುವವರ ಬಾಳು ಬಂಗಾರವಾಗಬೇಕು. ನಾಡು, ನುಡಿ, ಗಡಿಭಾಗದ ಸಂರಕ್ಷಣೆಯ ವಿಷಯ ಬಂದಾಗ ಹಾಗೂ ನದಿನೀರು ಹಂಚಿಕೆ ಯಲ್ಲಿ ರಾಜ್ಯಕ್ಕೆ ಅನ್ಯಾಯವಾಗುವ ಸಂದರ್ಭ ಒದಗಿದಾಗ, ನಮ್ಮ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಒಂದಾಗಿ ಹೋರಾಡಬೇಕು.
ರೇಲ್ವೆ ಇಲಾಖೆ ಸೇರಿದಂತೆ ಕೇಂದ್ರ ಸರಕಾರದ ತೆಕ್ಕೆಯಲ್ಲಿರುವ ಎಷ್ಟೋ ವಲಯಗಳಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ ಸಿಗುತ್ತಿಲ್ಲ. ಬ್ಯಾಂಕುಗಳು ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಕೆಲವರು ಕನ್ನಡದ ಬಳಕೆಗೆ ಮಣೆ ಹಾಕದೆ ಹಿಂದಿ ಭಾಷೆಯನ್ನು ಹೇರುತ್ತಿರುವುದನ್ನು ಇಂದಿಗೂ ಕಾಣಬಹುದಾಗಿದೆ. ಇವನ್ನೆಲ್ಲ ನೋಡಿದಾಗ ‘ಚೆಲುವ ಕನ್ನಡ ನಾಡು ಇನ್ನೂ ಸಮರ್ಥವಾಗಿ ಉದಯವಾಗಿಲ್ಲ’ ಎಂಬ ವಿಷಾದಭಾವ ಕನ್ನಡ ಪ್ರೇಮಿಗಳಲ್ಲಿ ಮೂಡುವುದು ನಿಜ. ‘ಕನ್ನಡ ನಾಡಿನಲ್ಲಿ ಕನ್ನಡಕ್ಕೇ ಮನ್ನಣೆ ಸಿಗಬೇಕು, ಕನ್ನಡಿಗರೇ ಸಾರ್ವಭೌಮರಾಗಬೇಕು’ ಎಂಬುದಾಗಿ ನಮ್ಮ ಹಿಂದಿನ ಹೋರಾಟಗಾರರು ಕಂಡ ಕನಸುಗಳು ಇಷ್ಟು ದಶಕಗಳಾದರೂ ಸಾಕಾರಗೊಂಡಿಲ್ಲ ಎಂದಾದರೆ ಅದಕ್ಕೆ ಯಾರನ್ನು ದೂರಬೇಕು? ಸಂಬಂಧಪಟ್ಟವರು ಈ ಕುರಿತಾದ ಆತ್ಮಾವ ಲೋಕನವನ್ನು ಮಾಡಿಕೊಳ್ಳಲು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಒಂದು ಪರ್ವಕಾಲವಾಗಲಿ.
(ಲೇಖಕರು ಪ್ರೌಢಶಾಲಾ ಶಿಕ್ಷಕರು)