Tuesday, 17th September 2024

ಕನ್ನಡಿಗರಿಗೆ ಮೀಸಲಿನ ವಿಷಯದಲ್ಲೇಕೆ ಮೌನ ?

ಅಶ್ವತ್ಥಕಟ್ಟೆ

ranjith.hoskere@gmail.com

‘ಕನ್ನಡ ಭಾಷೆ, ನೆಲ-ಜಲ ವಿಷಯದಲ್ಲಿ ಸಣ್ಣ ಕೊಂಕಾದರೂ ಸುಮ್ಮನೆ ಕೂರುವುದಿಲ್ಲ’. ‘ಕನ್ನಡ ನಮ್ಮ ಉಸಿರು-ಅದಕ್ಕಾಗಿ ಪ್ರಾಣ ತೆತ್ತಾದರೂ ನ್ಯಾಯ ದೊರಕಿಸುವ ಕೆಲಸ ಮಾಡುತ್ತೇವೆ’… ಹೀಗೆ ಹೇಳಿಕೊಂಡು ಓಡಾಡುವ ಕನ್ನಡಪರ ಹೋರಾಟಗಾರರು ಅದ್ಯಾಕೋ ಕಳೆದ ಕೆಲ ದಿನಗಳಿಂದ ಮೌನವಾಗಿ ದ್ದಾರೆ. ಕನ್ನಡದ ರಕ್ಷಣೆಯೇ ನಮ್ಮ ‘ಕೆಲಸ’ ಎನ್ನುವ ಬಹುತೇಕ ಹೋರಾಟಗಾರರು, ಕನ್ನಡದ ಯುವ ಮನಸ್ಸುಗಳಿಗೆ ಸಹಾಯವಾಗುವ ಖಾಸಗಿ ಕಂಪನಿ ಗಳ ಕೆಲಸದಲ್ಲಿ ಮೀಸಲು ಎನ್ನುವ ಸರಕಾರದ ಮಹತ್ವದ ವಿಧೇಯಕಕ್ಕೆ ವಿರೋಧ ವ್ಯಕ್ತವಾದ ಸಮಯದಲ್ಲಿ ಅದ್ಯಾಕೋ ನಮಗೂ ಅದಕ್ಕೂ ಸಂಬಂಧ ವಿಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿರುವುದು ಅಚ್ಚರಿಯ ಜತೆಜತೆಗೆ ಬೇಸರ ಮೂಡಿಸುತ್ತಿದೆ ಎಂದರೆ ತಪ್ಪಾಗುವುದಿಲ್ಲ.

ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಕಳೆದ ವಾರ ಮಹತ್ವದ ವಿಧೇಯಕವೊಂದನ್ನು ಸದನದಲ್ಲಿ ಮಂಡಿಸಿ ಅನುಮೋದನೆ ಪಡೆಯಲು ಸಿದ್ಧತೆ ನಡೆಸಿಕೊಂಡಿತ್ತು. ಸಚಿವ ಸಂಪುಟದಲ್ಲಿಯೂ ಈ ವಿಧೇಯಕದ ಬಗ್ಗೆ ಚರ್ಚಿಸಲಾಗಿತ್ತು. ಇನ್ನೇನು ವಿಧೇಯಕ ಮಂಡಿಸಬೇಕು ಎನ್ನುವ ಹೊತ್ತಿನಲ್ಲಿ, ಖಾಸಗಿ ಕಂಪನಿಗಳ ಒತ್ತಡಕ್ಕೆ ಮಣಿದು ‘ತಾತ್ಕಲಿಕ’ವಾಗಿ ವಿಧೇಯಕವನ್ನು ತಡೆಹಿಡಿಯುವ ಅನಿವಾರ್ಯತೆ ಸರಕಾರಕ್ಕೆ ಸೃಷ್ಠಿ ಯಾಗಿತ್ತು.

ಖಾಸಗಿ ಕಂಪನಿಗಳ ವಿರೋಧ ಎದುರಾದ ಸಮಯದಲ್ಲಿ ಸಣ್ಣ ಪ್ರಮಾಣದಲ್ಲಿ ಸರಕಾರಕ್ಕೆ ಕನ್ನಡ ಹೋರಾಟಗಾರರು, ಕನ್ನಡಿಗರು ಸರಕಾರದ ಪರವಾಗಿ ನಿಂತಿದ್ದರೆ, ರಾಜ್ಯ ಸರಕಾರ ಈ ತೀರ್ಮಾನಕ್ಕೆ ಬರುತ್ತಿರಲಿಲ್ಲವೇನೋ ಎನ್ನುವ ಸಣ್ಣ ಅನುಮಾನ ಅನೇಕರಲ್ಲಿದೆ. ಕಾರ್ಮಿಕ ಇಲಾಖೆಯಿಂದ ಕಳೆದ ವಾರ ನಡೆದ ಸಚಿವ ಸಂಪುಟದಲ್ಲಿ ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಮೀಸಲು ನೀಡಬೇಕು ಎನ್ನುವ ವಿಧೇಯಕವನ್ನು ಮಂಡಿಸಲು ಸಿದ್ಧತೆ ನಡೆಸಲಾ ಯಿತು.

‘ದಿ ಕರ್ನಾಟಕ ಸ್ಟೇಟ್ ಎಂಪ್ಲಾಯ ಮೆಂಟ್ ಆಫ್ ಲೋಕಲ್ ಕ್ಯಾಡಿಡೇಟ್ಸ ಇನ್ ದಿ ಇಂಡಸ್ಟ್ರೀಸ್, ಫ್ಯಾಕ್ಟರೀಸ್ ಆಂಡ್ ಲೋಕಲ್ ಎಷ್ಟಾಬ್ಲಿಷ್ಮೆಂಟ್
ಬಿಲ್-೨೦೨೪ ವಿಧೇಯಕದಂತೆ ಮ್ಯಾನೇಜ್ಮೆಂಟ್ ಹುದ್ದೆಗಳು ಶೇ.೫೦ ಹಾಗೂ ನಾನ್ ಮ್ಯಾನೇಜ್ಮೆಂಟ್ ಶೇ.೭೫ರಷ್ಟು ಹುದ್ದೆಗಳು ಸ್ಥಳೀಯರಿಗೆ ಮೀಸಲಿ ಡಲು ಉದ್ದೇಶಿಸಲಾಗಿತ್ತು. ಈ ಮೀಸಲು ಪಡೆಯಲು ಕರ್ನಾಟಕದಲ್ಲಿಯೇ ಹುಟ್ಟಿದವರು, ಕರ್ನಾಟಕದಲ್ಲಿ ೧೫ ವರ್ಷದಿಂದ ವಾಸಿಸುತ್ತಿರು ವವರು, ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಬರುವವರು, ನೋಡಲ್ ಏಜೆನ್ಸಿ ನಡೆಸುವ ಕನ್ನಡ ಕುರಿತು ಪರೀಕ್ಷೆಯಲ್ಲಿ  ಪಾಸಾದವರನ್ನು ಸ್ಥಳೀಯರು ಎಂದು ಪರಿಗಣಿಸಲಾಗುವುದು ಎಂದು ವಿಧೇಯಕದಲ್ಲಿ ಸ್ಪಷ್ಟವಾಗಿ ಹೇಳಿ, ಇದರೊಂದಿಗೆ ಒಂದು ವೇಳೆ ಈ ಕಾನೂನು ಉಲ್ಲಂಘಿಸಿ  ದರೆ, ಕನಿಷ್ಠ ೧೦ ಸಾವಿರ ರು.ಗಳಿಂದ ೨೫ ಸಾವಿರ ರು.ವರೆಗೆ ದಂಡ, ಆ ನಂತರವೂ ಉದ್ಯೋಗ ನೀಡದೇ ಹೋದರೆ ದಿನಕ್ಕೆ ೧೦೦ ರು. ದಂಡ ವಿಧಿಸಲು
ಉದ್ದೇಶಿಸಲಾಗಿತ್ತು.

ಈ ವಿಧೇಯಕದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಪ್ರಸ್ತಾಪಿಸುತ್ತಿದ್ದಂತೆ, ವಿಧೇಯಕದ ಸಾಧಕ-ಬಾಧಕದ ಚರ್ಚೆಗೂ ಮೊದಲೇ ಖಾಸಗಿ ಕಂಪನಿಗಳ ಕೆಲವೊಂದಷ್ಟು ‘ಬುದ್ಧಿ’ವಂತರು ವಿರೋಧಿಸಲು ಶುರುಮಾಡಿದರು. ಕೆಲವರು ಈ ಕಾನೂನು
ಜಾರಿಯಾದರೆ, ರಾಜ್ಯದಲ್ಲಿ ಖಾಸಗಿ ಕಂಪನಿಗಳು ಉಳಿಯಲು ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ಕೆಲವು ಉದ್ಯಮಿಗಳು ಟ್ವೀಟರ್ ಗದ್ದಲ ಎಬ್ಬಿಸಿದರು. ಈ ಗದ್ದಲದ ಬೆನ್ನಲ್ಲೇ ನೆರೆರಾಜ್ಯ ಆಂಧ್ರಪ್ರದೇಶ, ತೆಲಂಗಾಣದ ಸಚಿವರು ‘ನಮ್ಮಲ್ಲಿಗೆ ಬನ್ನಿ’ ಎನ್ನುವ ಓಪನ್ ಆಫರ್‌ಗಳನ್ನು ಐಟಿ ಕಂಪನಿಗಳಿಗೆ ನೀಡಿದರು.

ಇದನ್ನು ಮೀರಿ ಕಮ್ಯೂನಿಸ್ಟರ ಹಿಡಿತದಿಂದ ‘ಕೈಗಾರಿಕೆ’ಗಳು ಉಳಿಯಲು ಸಾಧ್ಯವಿಲ್ಲ ಎನ್ನುವ ಹಂತದಲ್ಲಿರುವ ಕೇರಳ ಸರಕಾರವೂ ಐಟಿ ಉದ್ಯಮಿ ಗಳಿಗೆ ರೆಡ್ ಕಾರ್ಪೆಟ್ ಹಾಸಿದವು. ಇದಿಷ್ಟೇ ಅಲ್ಲದೇ, ಇದೊಂದು ರಾಷ್ಟ್ರೀಯ ಮಟ್ಟದ ಸುದ್ದಿಯಾಗಿ, ವಿವಾದಕ್ಕೆ ನಾಂದಿ ಹಾಡಿತ್ತು. ಇದರ ಬೆನ್ನಲ್ಲೇ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ‘ಅನಿವಾರ್ಯ’ವಾಗಿ ವಿಧೇಯಕಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಯೋಚಿಸುವುದು ಸೂಕ್ತ ಎನ್ನುವ ಸಲಹೆಯನ್ನು ನೀಡಿದ್ದರಿಂದ ಮಂಡಿಸಲು ಸಜ್ಜಾಗಿದ್ದ ವಿಧೇಯಕವನ್ನು ಹಿಂಪಡೆಯಲಾಯಿತು.

ವಿಧೇಯಕ ಮಂಡಿಸಲು ಮುಂದಾಗಿದ್ದು, ಬಳಿಕ ಹಿಂಪಡೆದಿರುವುದಕ್ಕೆ ರಾಜಕೀಯವಾಗಿ ಪ್ರತಿಪಕ್ಷ ಬಿಜೆಪಿ- ಜೆಡಿಎಸ್ ನೂರು ಆರೋಪವನ್ನು ಹೋರಿಸ ಬಹುದು. ಸರಕಾರದ ದೃಷ್ಠಿಯಲ್ಲಿ, ಕೆಲವೇ ತಿಂಗಳಲ್ಲಿ ಬಿಟ್ಸ್, ಬಳಿಕ ಗೋಬ್ಲಲ್ ಇನ್ವೆಸ್ಟ್ ಮೀಟ್ ಸೇರಿದಂತೆ ಜಾಗತಿಕ ಮಟ್ಟದ ಹಲವು ಕಾರ್ಯಕ್ರಮ ಗಳಿರುವಾಗ ಈ ರೀತಿಯ ವಿವಾದವನ್ನು ಮೈಮೇಲೆ ಎಳೆದುಕೊಳ್ಳಲು ಇಷ್ಟ ಪಡದೇ ವಿಧೇಯಕವನ್ನು ಮಂಡಿಸಲು ಹಿಂದೇಟು ಹಾಕಿರಬಹುದು. ಆದರೆ ಈ ವಿಷಯದಲ್ಲಿ ಕನ್ನಡ ಪರ ಹೋರಾಟಗಾರರು, ವಿದ್ಯಾರ್ಥಿಗಳು ಸಂಘಟನೆಗಳು ಏಕೆ ಮೌನ ತಾಳಿವೆ ಎನ್ನುವುದಕ್ಕೆ ಉತ್ತರವಿಲ್ಲವಾಗಿದೆ. ಹಾಗೇ ನೋಡಿದರೆ, ಸಣ್ಣ ಸಣ್ಣ ವಿಷಯಗಳನ್ನು ಮುಂದಿಟ್ಟುಕೊಂಡು ಕನ್ನಡಪರ ಹೋರಾಟಗಾರರು ರಾಜ್ಯ ಬಂದ್, ಮುತ್ತಿಗೆ, ಪ್ರತಿಭಟನೆ ಸೇರಿದಂತೆ ಹಲವು ರೀತಿಯಲ್ಲಿ ಪ್ರತಿಭಟನೆಯನ್ನು ಕೈಗೆತ್ತಿಕೊಳ್ಳುತ್ತವೆ.

ವಿವಿಧ ವಿದ್ಯಾರ್ಥಿಗಳು, ಯಾವೆಲ್ಲ ಕಾರಣಗಳಿಗೆ ಪ್ರತಿಭಟನೆ ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಹೀಗಿರುವಾಗ, ಕರ್ನಾಟಕದಲ್ಲಿರುವ ಯುವಕರಿಗೆ ಉದ್ಯೋಗ ಸಿಗಲಿ ಎನ್ನುವ ಕಾರಣಕ್ಕೆ ಹಾಗೂ ರಾಜ್ಯದಲ್ಲಿ ದಶಕಗಳ ಕಾಲವಿದ್ದರೂ ಕನ್ನಡ ಕಲಿಯಲು ಹಿಂದೇಟು ಹಾಕುವ ಸಾವಿರಾರು ಮಂದಿಗೆ ಕನ್ನಡದ ‘ಅನಿವಾರ್ಯತೆ’ ತೋರಿಸುವ ಮಹತ್ವದ ವಿಷಯದ ವೇಳೆ ಮೌನ ತಾಳಿದರು ಎನ್ನುವುದೇ ಯಕ್ಷಪ್ರಶ್ನೆ. ‘ವಿಶ್ವವೇ ಒಂದು’ ಎನ್ನುವ
ಸಮಯದಲ್ಲಿ ಕನ್ನಡಿಗರಿಗೆ ಮಾತ್ರ ಕರ್ನಾಟಕದಲ್ಲಿ ಉದ್ಯೋಗ ಎನ್ನುವ ಕಾನೂನು ಏಕೆ ಎಂದು ಅನೇಕರು ಪ್ರಶ್ನಿಸಿದ್ದಾರೆ. ಆ ರೀತಿ ಪ್ರಶ್ನಿಸುವವರು, ಇದೇ ಪ್ರಶ್ನೆಯನ್ನು ಅಮೆರಿಕ, ಜರ್ಮನಿ, ಜಪಾನ್‌ನಲ್ಲಿ ಕೆಲಸ ಪಡೆಯುವಾಗ ಏಕೆ ಕೇಳುವುದಿಲ್ಲ? ಅಮೆರಿಕದಲ್ಲಿ ಉದ್ಯೋಗ ವಿಸಾ ಸಿಗಬೇಕು ಎಂದರೆ ಇಂಗ್ಲಿಷ್ ಭಾಷೆಯ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು.

ಜರ್ಮನಿ, ಜಪಾನ್‌ನಲ್ಲಿ ಕೆಲಸ ಸಿಗಬೇಕು ಎಂದರೆ ಅಲ್ಲಿನ ಜರ್ಮನ್, ಜಪಾನೀಸ್ ಭಾಷೆಗಳನ್ನು ಓದಲು, ಮಾತನಾಡಲು ಬರುವಷ್ಟರ ಮಟ್ಟಿಗೆ ಕಲಿತಿರುವ ‘ಪ್ರಮಾಣ ಪತ್ರ’ವನ್ನು ಕಡ್ಡಾಯವಾಗಿ ನಮೂದಿಸಬೇಕು. ಹೀಗಿರುವಾಗ ಕರ್ನಾಟಕದಲ್ಲಿ ಕೆಲಸ ಮಾಡುವವರಿಗೆ ‘ಕನ್ನಡ’ ಬರಬೇಕು ಎಂದರೆ ಮಾತ್ರ ವಿರೋಧವೇಕೆ? ಒಂದು ವೇಳೆ ರಾಜ್ಯ ಸರಕಾರ ಮಂಡಿಸಲು ಸಜ್ಜಾಗಿದ್ದ ವಿಧೇಯಕದಲ್ಲಿ ಏನಾದರೂ ಲೋಪಗಳಿದ್ದರೆ, ಖಾಸಗಿ ಕಂಪನಿಗಳು ಕೇಳುವ ಸೋಕಾಲ್ಡ್ ‘ಕೌಶಲ’ಗಳು ನಮ್ಮ ರಾಜ್ಯದ ಯುವಕರಿಗೆ ಇಲ್ಲ ಎನ್ನುವುದೇ ನಿಜವಾದರೆ, ಅದರ ಬಗ್ಗೆ ಸರಕಾರದೊಂದಿಗೆ ಖಾಸಗಿ ಕಂಪನಿಗಳು ಚರ್ಚೆ ನಡೆಸಲಿ ಅಥವಾ ಶೇ.೭೫, ಶೇ.೫೦ರಷ್ಟು ಕನ್ನಡಿಗರಿಗೆ ಮೀಸಲು ನೀಡುವುದರಿಂದ ನಿಜವಾಗಿಯೂ ಐಟಿ ಕಂಪನಿಗಳಿಗೆ ಭಾರಿ ಸಮಸ್ಯೆಯಾಗುತ್ತದೆ ಎನ್ನುವುದಿದ್ದರೆ, ಅದರ ಬಗ್ಗೆ ಚರ್ಚಿಸಿ ಮೀಸಲನ್ನು ಬೇಕಿದ್ದರೆ ಕಡಿಮೆ ಮಾಡಿಸುವ ನಿಟ್ಟಿನಲ್ಲಿ ಚರ್ಚೆಗಳು ನಡೆಯಲಿ.

ಆದರೆ ಅದ್ಯಾವುದನ್ನೂ ಮಾಡದೇ, ಏಕಾಏಕಿ ಮೀಸಲು ನೀಡಲು ಸಾಧ್ಯವೇ ಇಲ್ಲ ಎನ್ನುವುದು ಎಷ್ಟು ಸರಿ? ಹಾಗೇ ನೋಡಿದರೆ, ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಯುವಕರು ಐಟಿ-ಬಿಟಿ ಕಂಪನಿಗಳು ಕೇಳವು ‘ಕೌಶಲ’ಗಳಲ್ಲಿ ಮುಂದಿದ್ದಾರೆ. ಹಾಗೇ ನೋಡಿದರೆ, ಕರ್ನಾಟಕದಲ್ಲಿ ಈ ವಿಧೇ
ಯಕವನ್ನು ಜಾರಿಗೊಳಿಸಿದರೆ ನೆರೆ ರಾಜ್ಯಕ್ಕೆ ಹೋಗುತ್ತೇವೆ ಎನ್ನುವ ‘ಗುಮ್ಮ’ ಬಿಡುತ್ತಿರುವ ಬಹುತೇಕ ಕಂಪನಿಗಳಿಗೆ ಆಂಧ್ರ ಪ್ರದೇಶ ಸರಕಾರವೂ ಇದೇ ರೀತಿಯ ಮೀಸಲು ವಿಧೇಯಕವನ್ನು ಜಾರಿಗೊಳಿಸಲು ಮುಂದಾಗಿತ್ತು ಎನ್ನುವ ಅರಿವಿದೆ. ಆಂಧ್ರಪ್ರದೇಶ, ಜಾರ್ಖಂಡ್‌ನಲ್ಲಿ ಈಗಾಗಲೇ ಖಾಸಗಿ ವಲಯ ದಲ್ಲಿ ಸ್ಥಳೀಯರಿಗೆ ಮೀಸಲು ಎನ್ನುವ ವಿಧೇಯಕವನ್ನು ಮಂಡಿಸಲಾಗಿತ್ತು. ಆದರೆ ಈ ಕಾಯಿದೆ ಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿರುವು ದರಿಂದ, ಆದ್ದರಿಂದ ಆ ರಾಜ್ಯಗಳು ಈ ವಿಷಯದಲ್ಲಿ ಮೃದು ಧೋರಣೆ ತಾಳಿವೆ. ಇಲ್ಲದಿದ್ದರೆ, ಕರ್ನಾಟಕದಲ್ಲಿ ಜಾರಿಯಾಗುವ ಮೊದಲೇ, ‘ಆಹ್ವಾನ’ ನೀಡುತ್ತಿ ರುವ ರಾಜ್ಯದಲ್ಲಿ ಸ್ಥಳೀಯರಿಗೆ ಖಾಸಗಿ ಕಂಪನಿಗಳು ಮೀಸಲು ನೀಡಬೇಕಾಗಿತ್ತು ಎನ್ನುವುದು ವಾಸ್ತವ.

ಇನ್ನು ಕೊನೆಯದಾಗಿ ಹೇಳುವುದಾದರೆ, ಕರ್ನಾಟಕ ಅದರಲ್ಲಿಯೂ ರಾಜಧಾನಿ ಬೆಂಗಳೂರಿನಲ್ಲಿರುವ ಐಟಿ- ಬಿಟಿಯ ಬಹುತೇಕ ಕಂಪನಿಗಳು ಇಲ್ಲಿ ಬಿಟ್ಟು ಹೋಗಲು ಸಾಧ್ಯವೇ ಇಲ್ಲ. ಏಕೆಂದರೆ, ಕರ್ನಾಟಕದಲ್ಲಿ ಖಾಸಗಿ ಕಂಪನಿಗಳಿಗೆ ಇರುವ ‘ಸೌಲಭ್ಯ’ಗಳು ನೆರೆಯ ಯಾವ ರಾಜ್ಯದಲ್ಲಿಯೂ ನೀಡಲು ಸಾಧ್ಯವಿಲ್ಲ. ಇದರೊಂದಿಗೆ, ಬೆಂಗಳೂರಿನ ಹವಾಗುಣ, ಕನೆಕ್ಟಿವಿಟಿ, ಕಾನೂನು ಸುವ್ಯವಸ್ಥೆ ಸೇರಿದಂತೆ ಪ್ರತಿಯೊಂದರಲ್ಲಿಯೂ ದಕ್ಷಿಣ ಭಾರತದ ಬಹು ತೇಕ ರಾಜ್ಯಗಳಿಗಿಂತ ಹತ್ತುಪಟ್ಟು ಮುಂದಿದೆ. ಇದರೊಂದಿಗೆ ಖಾಸಗಿ ಕಂಪನಿಗಳು ಬಯಸುವ ‘ಕೌಶಲ’ ಉದ್ಯೋಗಿಗಳು ಕರ್ನಾಟಕದಲ್ಲಿದ್ದಾರೆ. ಒಂದು ಈ ಕಂಪನಿಗಳು ಕರ್ನಾಟಕದಿಂದ ಹೊರಹೋಗುತ್ತೇವೆ ಎನ್ನುವ ಪಸ್ತಾವನೆಯನ್ನು ಮುಂದಿಟ್ಟರೆ ಆ ಉದ್ಯೋಗಿಗಳು ಕೆಲಸ ಬಿಡುತ್ತಾರೆ ಹೊರತು, ಹೊರ ರಾಜ್ಯಗಳಿಗೆ ಹೋಗುವುದಿಲ್ಲ.

ಇಷ್ಟೆಲ್ಲವಿದ್ದರೂ, ಸರಕಾರ ಖಾಸಗಿ ಕಂಪನಿಗಳ ಗೊಡ್ಡು ಬೆದರಿಕೆಗೆ ಅಂಜಿ ವಿಧೇಯಕವನ್ನು ತಾತ್ಕಲಿಕವಾಗಿ ತಡೆ ಹಿಡಿಯಲು ಕಾರಣವೇನು ಎಂದು ಗಮನಿಸಿದರೆ, ಕರ್ನಾಟಕದಲ್ಲಿ ಭಾಷೆಯ ವಿಷಯದಲ್ಲಿ ಸಂಘ, ಸಂಸ್ಥೆಗಳು, ವಿದ್ಯಾರ್ಥಿಗಳು ಸಂಘಟನೆಗಳು ಬಹುತೇಕ ಸಮಯದಲ್ಲಿ ಒಂದಾಗಿಲ್ಲ. ತಮಿಳುನಾಡಿನ ರೀತಿಯಲ್ಲಿ ಕರ್ನಾಟಕದಲ್ಲಿ ಎಂದಿಗೂ ಭಾಷೆ-ಜಲ-ಗಡಿ ವಿಷಯಗಳು ‘ಮತ’ದ ವಿಷಯವಾಗಿ ಕಾಣಿಸಿಕೊಂಡಿಲ್ಲ. ವಿಧೇಯಕವನ್ನು ಹಿಂಪಡೆಂಯುವುದಾಗಿ ಸರಕಾರ ಹೇಳಿದ ಕೂಡಲೇ, ಸರಕಾರದ ಮೇಲೆ ಒತ್ತಡ ಹೇರುವ ಕೆಲಸವನ್ನು ಯಾವುದೇ ಸಂಸ್ಥೆಗಳು ಮಾಡಿಲ್ಲ.

ಆದ್ದರಿಂದ ಸರಕಾರವೂ ಮುಂದೆ ನೋಡಿದರಾಯಿತು ಎನ್ನುವ ಮನಸ್ಥಿತಿಯಲ್ಲಿ ಮೌನಕ್ಕೆ ಶರಣಾಗಿದೆ. ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಕರ್ನಾಟಕ ದಲ್ಲಿ ಕನ್ನಡ ಕಣ್ಮರೆಯಾಗುತ್ತಿದೆ ಎನ್ನುವ ಆತಂಕದಲ್ಲಿಯೇ ಜೀವಿಸುತ್ತಿರುವ ಹಾಗೂ ಆರೋಪಿಸುತ್ತಿರುವ ಬಹುತೇಕ ನಾಯಕರು, ಖಾಸಗಿ ವಲಯದಲ್ಲಿ ಮೀಸಲಿಗೆ ವಿರೋಧ ವ್ಯಕ್ತವಾದ ಸಮಯದಲ್ಲಿ ಮೌನಕ್ಕೆ ಶರಣಾಗಿದ್ದರು. ಈ ವಿಧೇಯಕದಲ್ಲಿ ತಾಂತ್ರಿಕ ಸಮಸ್ಯೆಗಳಿದ್ದರೆ, ಅವುಗಳನ್ನು ಚರ್ಚಿಸಿ ಸರಿಪಡಿಸಿ ಮಂಡಿಸಲಿ ಅಥವಾ ಶೇ.೭೫ರಷ್ಟು ಮೀಸಲು ನೀಡಿದರೆ ಸಮಸ್ಯೆಯಾಗುತ್ತದೆ ಎನ್ನುವುದಿದ್ದರೆ, ಮೀಸಲಿನ ಪ್ರಮಾಣ ತಗ್ಗಿಸಬಹುದೇ ಎನ್ನುವ ಬಗ್ಗೆ ಚರ್ಚೆಯಾಗಲಿದೆ. ಅದನ್ನು ಬಿಟ್ಟು, ಈ ರೀತಿ ಸಾರಸಗಟಾಗಿ ವಿಧೇಯಕ ಮಂಡನೆಗೆ ಅವಕಾಶ ನೀಡದಿರುವುದು ಸರಿಯಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ವಿಧೇಯಕದ ಬಗ್ಗೆ ಮತ್ತೊಮ್ಮೆ ಚರ್ಚಿಸಿ ಮಂಡಿಸುವ ಭರವಸೆಯನ್ನು ಈಗಾಗಲೇ ನೀಡಿದ್ದಾರೆ. ಕನ್ನಡಿಗರಿಗೆ
ಉದ್ಯೋಗ ಸಿಗುವ ಮಹತ್ವದ ವಿಧೇಯಕದಲ್ಲಿ ‘ನುಡಿದಂತೆ ನಡೆಯಲಿ’ ಎನ್ನುವುದೇ ಎಲ್ಲರ ಆಶಯವಾಗಿದೆ!

Leave a Reply

Your email address will not be published. Required fields are marked *