ಶಶಾಂಕಣ
shashidhara.halady@gmail.com
ನಮ್ಮ ನಾಡಿನ ಪ್ರಾಕೃತಿಕ ವೈವಿಧ್ಯವು ಬೆರಗು ಹುಟ್ಟಿಸುವಂತಹದ್ದು. ಮಲೆನಾಡು, ಕರಾವಳಿಯ ಕಾಡುಗಳಲ್ಲಿ ವಿಪರೀತ ಮಳೆಯಾ ದಾಗ, ನೆಲದಿಂದ ಮೇಲೇಳುವ ಒಂದು ಅಣಬೆಯ ಸ್ವರೂಪ ವಿಸ್ಮಯ ಹುಟ್ಟಿಸುತ್ತದೆ! ತೆಳು ಲಂಗ ತೊಟ್ಟಂತಹ ಅದರ ದೇಹವೇ ಅನನ್ಯ.
‘ಕನ್ಯಾಸೀ’ ಈ ಪದವನ್ನು ಮೊದಲಿಗೆ ಉಪಯೋಗಿಸಿದವರು ಹಿರಿಯ ಲೇಖಕರಾದ ಬಿ.ಜಿ.ಎಲ್ ಸ್ವಾಮಿಯವರು. ಅವರ ‘ಹಸುರು ಹೊನ್ನು’ ಪುಸ್ತಕದಲ್ಲಿ ಕನ್ಯಾಸೀಯ ಸುಂದರ ರೇಖಾಚಿತ್ರವನ್ನು ರಚಿಸಿ, ಮುದ್ರಿಸಿ, ಈ ಅಪರೂಪದ ಅಣಬೆಯ ವಿವರವನ್ನು ನೀಡಿದ್ದರು. ಆ ಪುಸ್ತಕವು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಭಾಜವಾಗಿತ್ತು. ಕನ್ಯಾಸೀ ಎಂದರೆ ಒಂದು ಅಪರೂಪದ, ಸುಂದರ ಅಣಬೆ.
ಡಿಕ್ಟಿಯೋ-ರಾ ಹೆಸರಿನ ಈ ಅಣಬೆಯನ್ನು ಇಂಗ್ಲಿಷಿನಲ್ಲಿ ವೀಲ್ಡ್ ಲೇಡಿ ಎಂದೂ ಕರೆಯುವು ದುಂಟು. ಮುಖಕ್ಕೆ ತೆಳ್ಳನೆಯ, ಬಲು ಸೂಕ್ಷ್ಮ ಕುಸುರಿಯ ಬಿಳಿ ಪರದೆಯನ್ನು ಹಾಕಿಕೊಂಡ ಮಹಿಳೆಯನ್ನು ಹೋಲುವುದರಿಂದ, ಅದೊಂದು ಅನ್ವರ್ಥ ನಾಮ. ನಮ್ಮೂರಿನಲ್ಲಿ ಮಳೆ ಸುರಿಯತೊಡಗಿದಾಗ, ಕಾಡಿನ ನಡುವೆಯೋ, ತೋಟದ ಮೂಲೆಯ ಬೆಳೆಯುವ ಈ ಅಣಬೆಯ ಆಯಸ್ಸು ಕೇವಲ ಒಂದು ದಿನ. ಬೆಳಿಗ್ಗೆ ನೆಲದಿಂದ ಮೊಳಕೆಯೊಡೆಯಲು ಆರಂಭಿಸಿ, ಮಧ್ಯಾಹ್ನದ ಸಮಯದಲ್ಲಿ ಜಾಲರಿಯ ಲಂಗ ಧರಿಸಿ ತಲೆ ಎತ್ತಿ ನಿಲ್ಲುತ್ತದೆ.
ಬಹುಸೂಕ್ಷ್ಮವಾದ, ಬಲೆಯಂತಹ ಅದರ ದೇಹವು, ಸಂಜೆಯ ಸಮಯಕ್ಕೆ ಮುದುಡಿ ಹೋಗುತ್ತದೆ. ಆ ಅಣಬೆಯ ತಲೆಯ ಭಾಗದ ಬುಗುಟಿನಂತಹ ಜಾಗದಲ್ಲಿ ಸ್ರವಿಸುವ ದ್ರವದ ವಾಸನೆ ಕೆಲವು ಕೀಟಗಳಿಗೆ ಇಷ್ಟ. ಮುತ್ತಿ, ರಸ ಹೀರುತ್ತವೆ; ಅದೇ ಬೀಜಪ್ರಸಾರಕ್ಕೂ ದಾರಿ. ಸಂಜೆ ಕುಸಿದು, ಕೆಳಗಿನ ಕೊಳೆತ ತರಗಲೆಯಲ್ಲಿ ಮಣ್ಣಾಗಿ ಹೋಗುವ ಕನ್ಯಾಸೀಯನ್ನು ಮತ್ತೆ ನೋಡಬೇಕೆಂದರೆ, ಮುಂದಿನ ವರುಷದ ಮಳೆಗಾಲದ ತನಕ ಕಾಯಬೇಕು!
ಹಸುರು ಹೊನ್ನು ಪುಸ್ತಕವನ್ನು ನಾನು ಮತ್ತೆ ಮತ್ತೆ ಓದಿದ್ದುಂಟು. ಅಲ್ಲಿದ್ದ ಕನ್ಯಾಸೀ ಅಣಬೆಯ ರೇಖಾ ಚಿತ್ರ ಮತ್ತು ಇತರ ಸಸ್ಯಗಳ ವರ್ಣನೆ, ಸ್ವಾಮಿಯವರೇ ರಚಿಸಿದ ನೂರಾರು ಸಸ್ಯಗಳ ಚಿತ್ರಗಳು ನನ್ನನ್ನು ಬೇರೊಂದೇ ಪ್ರಪಂಚಕ್ಕೆ ಕರೆದೊಯ್ದಿದ್ದವು. ಅದೇ ಪರಿಸರ ಲೋಕ. ಆ ಗುಂಗಿನ, ಒಂದು ಮಳೆಗಾಲದಲ್ಲಿ, ನಮ್ಮ ಮನೆಯ ಹಿಂದಿನ ಕೈತೋಟದಲ್ಲಿ ಸುತ್ತಾಡುವಾಗ, ‘ಕನ್ಯಾಸೀ’ ನನ್ನ ಕಣ್ಣಿಗೆ ಬಿದ್ದಳು!
ಆ ಸುಂದರ ಅಣಬೆಯನ್ನು ನಮ್ಮ ಮನೆಯ ಸರಹದ್ದಿನ ಕಂಡು, ಗುರುತಿಸಿದಾಗ, ನನ್ನಲ್ಲಿ ಅದೇನೋ ಒಂದು ರೀತಿಯ ಸಂಭ್ರಮ, ಸಡಗರ. ಬಿಜಿಎಲ್ ಸ್ವಾಮಿಯವರು ದಟ್ಟ ಕಾಡಿನ ನಡುವೆ, ಆಗುಂಬೆಯ ಮತ್ತೆ ಕಂಡು, ರೇಖಾಚಿತ್ರ ಸಹಿತ ವಿವರಿಸಿ ಬರೆದಿದ್ದ
ಡಿಕ್ಟಿಯೋ-ರಾ ಅಣಬೆಯು ನಮ್ಮ ಊರು, ಹಾಲಾಡಿಯಲ್ಲೂ ಇದೆ ಎಂದು ಹೊಸದಾಗಿ ‘ಕಂಡುಹಿಡಿದ’ ಬೆರಗು ನನ್ನಲ್ಲಿ. ಅದು 1979ನೇ
ಇಸವಿಯ ಜುಲೈ ತಿಂಗಳೇ ಇರಬೇಕು. ನಾಲ್ಕಾರು ವಾರ ನಮ್ಮೂರಲ್ಲಿ ಮಳೆ ಸುರಿದು, ಕೈತೋಟದ ನೆಲವೆ ಮಿದುಗಟ್ಟಿತ್ತು; ಎಲೆಗಳು ಕೊಳೆತು, ನೆಲದ ಮಣ್ಣು ಕಪ್ಪಾಗಿತ್ತು. ಆ ಮಿದು ಮಣ್ಣಿನ ತಲೆ ಎತ್ತಿದ್ದ ‘ಕನ್ಯಾಸೀ’, ಮಳೆಗಾಲದ ಆ ಹೊಳವಾದ ದಿನ ನನಗೊಂದು ಸುಂದರ ನೋಟವನ್ನು ಕಟ್ಟಿಕೊಟ್ಟಿತ್ತು.
ಸುಮಾರು ಮೂರು ಇಂಚು ಉದ್ದದ ದೇಹ, ತಲೆಯ ಬಳಿ ನಸುಕಂದು ಬಣ್ಣದ ಬುಗುಟು, ಆ ಬುಗುಟನ್ನು ಆಧರಿಸಿ ಅರ್ಧ ದೇಹದ ತನಕ
ಕೆಳಗಿಳಿದು ಹೋಗಿದ್ದ, ಮಸ್ಲಿನ್ ಬಟ್ಟೆಗಿಂತಲೂ ಸೂಕ್ಷ್ಮ ಎನಿಸುವ ಬಿಳಿ ಪರದೆ. ಆ ಬಿಳಿ ಪರದೆಯ ಚುಕ್ಕಿ ಚುಕ್ಕಿ ವಿನ್ಯಾಸ, ನೋಡಲು ಮೋಹಕ, ಅಚ್ಚರಿ. ನಿಸರ್ಗದಲ್ಲಿ ಎಂತೆಂತಹ ಸೋಜಿಗಗಳು ಆವಿರ್ಭಸಲು ಸಾಧ್ಯ ಎಂಬ ಬೆರಗು ಹುಟ್ಟಿಸುವ ದೇಹ ಅದು. ನಿಸರ್ಗ ದೇವಿಯು ಮನಸ್ಸು ಮಾಡಿದೆ, ಮಸ್ಲಿನ್ ಬಟ್ಟೆಯಂತಹದ್ದನ್ನೇ ಅಣಬೆಯಲ್ಲೂ ರೂಪಿಸಿ, ಪ್ರದರ್ಶಿಸಬಲ್ಲಳು ಎಂಬುದಕ್ಕೆ ಕನ್ಯಾಸೀ ಒಂದು ಉದಾಹರಣೆ.
ಜತೆಗೆ, ಅದರಿಂದ ಸೂಸುವ ವಿಶಿಷ್ಟ ವಾಸನೆಗೆ ಆಕರ್ಷಿತಗೊಂಡು, ಅಲ್ಲೇ ಸುಳಿದಾಡುವ ಹಲವು ನೊಣಗಳು, ಕೀಟಗಳು, ಆ
ಮಳೆಗಾಲದ ದಿನಕ್ಕೆ ವಿಶಿಷ್ಟ ಚೌಕಟ್ಟನ್ನು ಕಟ್ಟಿಕೊಟ್ಟಿದ್ದವು. ಅದೇ ದಿನ ಎರಡು ಮೂರು ಬಾರಿ ತೋಟಕ್ಕೆ ಹೋಗಿ ನೋಡಿದೆ. ಸಂಜೆಯ ಹೊತ್ತಿಗೆ ಕುಸಿದು, ಮಣ್ಣಿನಲ್ಲಿ ಬೆರೆತು ಹೋಗಿತ್ತು ಆ ಬಿಳಿ ಪರದೆ ಹೊದ್ದ ಕನ್ಯಾಸೀ ಅಣಬೆ. ಅದೇ ವರ್ಷ ಇರಬೇಕು, ಕಾಲೇಜಿನಿಂದ
ಕೊಡಚಾದ್ರಿಗೆ ಚಾರಣ ಏರ್ಪಡಿಸಿದ್ದರು. ಆ ದಟ್ಟ ಹರಿದ್ವರ್ಣ ಕಾಡಿನ ಪರ್ವತ ಭಿತ್ತಿಯಲ್ಲಿ ನವೆಂಬರ್ ತನಕವೂ ಮಳೆ ತಾನೆ!
ಕಾಡಿನ ನಡುವೆ, ಮರವೊಂದರ ತಳದಲ್ಲಿ ಕೊಳೆತ ಎಲೆಗಳ ನಡುವೆ ಕನ್ಯಾಸೀ ನಸುನಗುತ್ತಿದ್ದಳು! ಕೊಡಚಾದ್ರಿಗೆ ಚಾರಣ ಮಾಡುವ
ದಾರಿಯ ಪಕ್ಕದಲ್ಲೇ, ಕಾಡಿನ ದಟ್ಟ ನೆರಳಿನಲ್ಲಿ ಎರಡು ಅಣಬೆಗಳು ತಮ್ಮ ಜಾಲರಿ ಲಂಗವನ್ನು ಬಿಟ್ಟುಕೊಂಡು, ನನ್ನಲ್ಲಿ ಅಚ್ಚರಿ ಹುಟ್ಟಿಸಿದ್ದವು. ಅಲ್ಲೂ ಎಲೆಗಳು ಕೊಳೆತ ನೆಲ, ನಮ್ಮ ತೋಟದಲ್ಲಿದ್ದಂತೆಯೇ. ವಿಶೇಷವೆಂದರೆ, ಆ ದಟ್ಟಕಾಡಿನಲ್ಲಿ ಬೆಳೆದಿದ್ದ ಕನ್ಯಾಸೀಯ ಜಾಲರಿ ದೇಹದ ಬಣ್ಣ ನಸು ಹಳದಿ. ಡಿಕ್ಟಿಯೋ-ರಾ ಅಣಬೆಯ ಉಪಪ್ರಬೇಧ ಅದು.
ನಮ್ಮ ಊರಿನಲ್ಲಿ ಕಂಡ ಅಣಬೆಯ ದೇಹ ಬಿಳಿ. ಮರಗಳ ನೆರಳಿನ ನಸುಗತ್ತಲಿನಲ್ಲಿ ಇನ್ನಷ್ಟು ಚಂದ ಕಾಣಿಸುತ್ತಿತ್ತು ಆ ಕನ್ಯಾಸೀ ಜೋಡಿ.
ಆಗಿನ ದಿನಗಳಲ್ಲಿ ನನ್ನ ಬಳಿ ಕ್ಯಾಮೆರಾ ಇರಲಿಲ್ಲ – ಕನ್ಯಾಸೀಯ ನೋಟವನ್ನು ಕಣ್ಣಿನ ಕ್ಯಾಮೆರಾದಲ್ಲಿ ಸೆರೆಹಿಡಿದು, ನೆನಪಿನ ಮೂಸೆ ಯಲ್ಲಿ ಶೇಖರಿಸಿಟ್ಟುಕೊಂಡೆ. ಈ ನಡುವೆ ನಮ್ಮ ಕಾಲೇಜಿನ ಸಸ್ಯಶಾಸ ಉಪನ್ಯಾಸಕರ ಬಳಿ, ಈ ಕನ್ಯಾಸೀಯ ಸುಂದರ ದೇಹವನ್ನು ಕಂಡುಕೊಂಡ ವಿವರವನ್ನು ಹಂಚಿಕೊಂಡೆ. ನಮ್ಮ ಮನೆಯ ಹತ್ತಿರದ ಆ ಅಣಬೆಗಳು ಬೆಳೆಯುತ್ತವೆ ಎಂದು ಹೆಮ್ಮೆಯಿಂದ ಹೇಳಿಕೊಂಡೆ! ‘ಇನ್ನೊಮ್ಮೆ ಕಂಡರೆ, ಬಾಟಲಿಯಲ್ಲಿ ಸಂಗ್ರಹಿಸಿ ತಾ, ಕಾಲೇಜಿನ ಸಸ್ಯಶಾಸ ಸಂಗ್ರಹಾಲಯಕ್ಕೆ ಅಮೂಲ್ಯ ಸೇರ್ಪಡೆಯಾಗುತ್ತದೆ’ ಎಂದರು ಅವರು.
ಸಸ್ಯಗಳ ಸ್ಪೆಸಿಮನ್ ಸಂಗ್ರಹಿಸುವ ಒಂದು ಅಡಿ ಉದ್ದದ, ಅಗಲ ಬಾಯಿಯ ಗಾಜಿನ ಬಾಟಲಿಯಲಿ -ರ್ಮಲಿನ್ ದ್ರವ ತುಂಬಿಸಿ ಕೊಟ್ಟರು. ಅದನ್ನು ೨೨ ಕಿಮೀ ದೂರದ ನಮ್ಮ ಹಾಲಾಡಿಯ ಹಳ್ಳಿಯ ಮನೆಗೆ ತಂದಿಟ್ಟುಕೊಂಡು, ಕನ್ಯಾಸೀ ಪ್ರತ್ಯಕ್ಷಳಾಗುತ್ತಾಳಾ ಎಂದು ಕಾದೆ.
ಉಹುಂ, ಆ ಅಪರೂಪದ ಅಣಬೆ ನಮ್ಮ ಹಳ್ಳಿಯಲ್ಲಿ ಭೂಮಿಯಿಂದ ತಲೆ ಎತ್ತಿ ಮೇಲೆ ಬರುವುದು, ಸಿಕ್ಕಾಪಟ್ಟೆ ಮಳೆ ಸುರಿಯುವ ಮಳೆಗಾಲದ ದಿನಗಳಲ್ಲಿ ಮಾತ್ರ ಇರಬೇಕು. ಅದುಭೂಮಿಯಿಂದ ಮೇಲೇಳಲು ವಿಶಿಷ್ಟ ವಾತಾವರಣ ಬೇಕು.
ಒಂದೆರಡು ತಿಂಗಳು ಕಾದೆ; ಕನ್ಯಾಸೀ ಅಣಬೆ ದೊರಕಲಿಲ್ಲ. ಈ ನಡುವೆ, ಕಾಲೇಜಿನ ಸ್ವತ್ತಾಗಿದ್ದ ಆ ಬಾಟಲಿಯನ್ನು ಬೇಗನೆ ವಾಪಸು ಕೊಡಬೇಕೆಂಬ ತವಕ. ಕಾಡಿನ ಅಂಚಿನಲ್ಲಿದ್ದ ನಮ್ಮ ಮನೆಯ ಸುತ್ತಲಿನ ಹಾಡಿ-ಹಕ್ಕಲುಗಳಲ್ಲಿ, ತೋಟದಲ್ಲಿ ಚಿತ್ರ ವಿಚಿತ್ರ ವಿನ್ಯಾಸದ ಹತ್ತಾರು ಅಣಬೆಗಳು ಮಳೆಗಾಲದಲ್ಲಿ ಅರಳುತ್ತಿದ್ದವು. ಕೆಲವು ಅಣಬೆಗಳ ಆಕಾರವೂ ವಿಚಿತ್ರ, ಬಣ್ಣ ಬಣ್ಣದ ದೇಹವೂ ಕೆಲವು ಅಣಬೆಗಳಿಗೆ
ಇರುತ್ತವೆ. ನಮ್ಮ ಮನೆಯ ಹಿಂಭಾಗದ, ಲಡ್ಡು ಹಿಡಿದ ಮರದ ಕಾಂಡವೊಂದರ ಮೇಲೆ ಕಗ್ಗತ್ತಲಿನ ರಾತ್ರಿಯಲ್ಲೂ ಹೊಳೆಯುವ ಪುಟಾಣಿ ಅಣಬೆಗಳು ಸಹ ನೂರಾರು ಸಂಖ್ಯೆಯಲ್ಲಿ ಬೆಳೆಯುತ್ತಿದ್ದುದನ್ನು ನಾನು ಕಂಡಿದ್ದೆ.
ಆ ಸಮಯದಲ್ಲಿ, ಬೆಳಕಿಲ್ಲದ ರಾತ್ರಿಯಲ್ಲಿ ಆ ಮರವನ್ನು ಕಂಡರೆ, ಇಡೀ ಮರವು ಹದವಾದ ಪ್ರಭೆಯಿಂದ ಬೆಳಗುತ್ತಿರುವ ಅಪರೂಪದ
ದೃಶ್ಯವನ್ನು ಕಾಣಬಹುದು. ಆದರೆ ನಾನು ಬಾಟಲಿಯಲ್ಲಿ ಸೆರೆಹಿಡಿಯ ಬೇಕಿದ್ದುದು ಕನ್ಯಾಸೀ! ಆ ವರ್ಷ ಇನ್ನು ಸಿಕ್ಕುವ ಸಾಧ್ಯತೆ ಇರಲಿಲ್ಲ, ಮಳೆಗಾಲ ಮುಗಿಯತೊಡಗಿತ್ತು. ಕೊನೆಗೊಮ್ಮೆ ನಮ್ಮ ಹಕ್ಕಲಿನಲ್ಲಿ ದೊಡ್ಡ ಗಾತ್ರದ, ಬಣ್ಣ ಬಣ್ಣದ ಕೊಡೆಯಿದ್ದ, ಯಕ್ಷಗಾನದ ಬಣ್ಣದ
ವೇಷವನ್ನು ನೆನಪಿಸುವ ಎರಡು ಅಣಬೆಗಳನ್ನು ಕಂಡೆ. ಬಣ್ಣ ತುಂಬಿದ ಆ ಅಣಬೆಯ ಕೊಡೆಯು ಅಂಗೈ ಅಗಲವಿತ್ತು! ಅವೆರಡೂ ಅಣಬೆಗಳನ್ನು ನಾಜೂಕಾಗಿ ಕಿತ್ತು ತಂದು, ಫಾರ್ಮಲಿನ್ ದ್ರವ ತುಂಬಿದ ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ, ಕಾಲೇಜಿನ ಬಾಟನಿ ವಿಭಾಗಕ್ಕೆ ತಲುಪಿಸಿದೆ. ‘ಇದು ಡಿಕ್ಟಿಯೋ-ರಾ ಅಲ್ಲ’ ಎಂದು ನಸುನಕ್ಕರು, ಕಾಲೇಜಿನ ಉಪನ್ಯಾಸಕರು.
‘ಹೌದು ಸರ್, ಅದು ಸಿಗಲಿಲ್ಲ ಸರ್, ಅದಕ್ಕೆ ಇನ್ನು ಮುಂದಿನ ವರ್ಷದ ಜುಲೈ ತನಕ ಕಾಯಬೇಕು ಅಂತ ಕಾಣುತ್ತದೆ. ನಿಮ್ಮ ಅನುಮತಿ ಬಹಳ ದಿನ ಆಯ್ತಲ್ಲ ಈ ಬಾಟಲಿ ಕೊಂಡೊಯ್ದು, ನಾನು ಇನ್ನಷ್ಟು ದಿನ ಇಟ್ಟುಕೊಂಡರೆ ತಪ್ಪಾದೀತು. ಆದ್ದರಿಂದ ಈ ಅಣಬೆಯನ್ನು
ಸಂಗ್ರಹಿಸಿ, ಬಾಟಲಿಯನ್ನು ವಾಪಸು ಕೊಡಲು ತಂದೆ’ ಎಂದು ಉತ್ತರಿಸಿದೆ. ಅವರು ಅದನ್ನು ಸಸ್ಯಶಾಸ ವಿಭಾಗದಲ್ಲಿ ಒಂದು ಕಡೆ ಪ್ರದರ್ಶಿಸುವಂತೆ ಇಟ್ಟರು. ಈಗಲೂ ಅದು ಅಲ್ಲೇ ಇರಬಹುದು! ಕಾಲೇಜು ವಿದ್ಯಾಭ್ಯಾಸ ಮುಗಿಯಿತು.
ಉದ್ಯೋಗ ಅರಸಿ, ಅರಸಿಕೆರೆ ಹತ್ತಿರದ ಹಳ್ಳಿಯೊಂದನ್ನು ಸೇರಿಕೊಂಡೆ. ಆ ಪ್ರದೇಶದಲ್ಲಿ ವರ್ಷ ದಲ್ಲಿ ಮೂರು ನಾಲ್ಕು ದಿನ ಮಾತ್ರ ಮಳೆ ಬರುವುದು! ನಮ್ಮೂರಲ್ಲಿ ಮೂರು ನಾಲ್ಕು ತಿಂಗಳು ಮಳೆ ಬರುವುದರಿಂದ, ವಿಶಿಷ್ಟ ಅಣಬೆಗಳ ಲೋಕವನ್ನೇ ಕಾಣಬಹುದು. ತೆಳು ಲಂಗ ಹೊದ್ದ ಕನ್ಯಾಸೀ ಅಣಬೆಯ ಜತೆಗಿನ ನನ್ನ ಸಂಬಂಧ ಅಲ್ಲಿಗೇ ಮುಕ್ತಾಯವಾಯಿತು ಎಂದುಕೊಂಡೆ. ಮೂರು ದಶಕಗಳ ನಂತರ, ಮಳೆ ಸುರಿಯುವ ಜುಲೈ ತಿಂಗಳಿನಲ್ಲಿ ಊರಿಗೆ ಹೋಗಿದ್ದೆವು. ಜಡಿ ಮಳೆ ಸುರಿದು,
ನಾಲ್ಕಾರು ದಿನ ಹೊಳವಾಗಿತ್ತು. ಹೆಬ್ರಿ ಸನಿಹದ ಬೆಳ್ವೆಯ ನಮ್ಮ ಸೋದರತ್ತೆಯ ಮನೆಯಲ್ಲಿ ವಾಸ್ತವ್ಯ. ಬೆಳಿಗ್ಗೆ ಎದ್ದು ನೋಡಿದರೆ, ಮನೆಯ ಹತ್ತಿರವೇ, ಬಾಳೆಗಿಡವೊಂದರ ಬುಡದ ಕೊಳೆತ ಮಿದು ಮಣ್ಣಿನಿಂದ ಎರಡು ಅಣಬೆಗಳು ಮೊಳಕೆ ಯೊಡೆಯಲು ಪ್ರಾರಂಭಿಸಿ ದ್ದವು. ಆ ಅಣಬೆಗಳ ದೇಹದಲ್ಲಿ ಮೂಡತೊಡಗಿದ್ದ, ಲಂಗದ ರೀತಿಯ ನಾಜೂಕು ಬಿಳಿ ಜಾಲರಿಯನ್ನು ಕಂಡ ಕೂಡಲೆ, ನನಗೆ ಗೊತ್ತಾಯಿತು, ಇದು ಕನ್ಯಾಸೀ! ಆ ವರ್ಷ ಖರೀದಿಸಿದ್ದ ಪುಟಾಣಿ ಸೋನಿ ಕ್ಯಾಮೆರಾದ ಜೂಮ್ ಶಕ್ತಿಶಾಲಿಯಾಗಿತ್ತು. ಆ ಡಿಜಿಟಲ್ ಕ್ಯಾಮೆರಾದಿಂದ ಗಂಟೆಗೊಂದರಂತೆ ಕನ್ಯಾಸೀಯ -ಟೋ ತೆಗೆಯಲಾರಂಭಿಸಿದೆ.
ಆರಂಭದ ಹಂತ, ಜಾಲರಿ ಲಂಗ ಬಿಡಿಸುವ ಪರಿ, ಪೂರ್ತಿ ಲಂಗ ಅರಳಿದಾಗ ಕನ್ಯಾಸೀಯ ಸೊಗಸಾದ ನೋಟ, ಎಲ್ಲವೂ ಡಿಜಿಟಲ್ ರೂಪದಲ್ಲಿ ಸಂಗ್ರಹಗೊಂಡವು. ಮಧ್ಯಾಹ್ನದ ಸಮಯಕ್ಕೆ ಎರಡು ಕನ್ಯಾಸೀ ಅಣಬೆಗಳು ಪೂರ್ತಿ ಎದ್ದು ನಿಂತಿದ್ದವು. ದೇಹದ ಜಾಲರಿಯಂತೂ ಸುಟವಾಗಿ, ಸುಂದರವಾಗಿ ಮೂಡಿದ್ದವು. ಬಿಜಿಎಲ್ ಸ್ವಾಮಿಯವರು ವರ್ಣಿಸಿದ್ದಂತೆ, ಆ ಅಣಬೆಗಳ ತಲೆಯ ಭಾಗದ
ಬುಗುಟಿನಲ್ಲಿ ಒಸರುವ ದ್ರವವೆಂದರೆ, ಕೆಲವು ಕೀಟಗಳಿಗೆ ಮತ್ತು ನೊಣಗಳಿಗೆ ತುಂಬಾ ಇಷ್ಟ. ಕೀಟಗಳು ರಸಹೀರಲು ಕನ್ಯಾಸೀಯನ್ನು ಹತ್ತಿ ಕುಳಿತ ಪರಿಯು ನಾನು ತೆಗೆದ ಛಾಯಾಚಿತ್ರಗಳಲ್ಲಿ ಸ್ಪಷ್ಟವಾಗಿ ಸೆರೆಯಾಯಿತು.
ಕನ್ಯಾಸೀ ಜತೆಗಿನ ನನ್ನ ಒಡನಾಟ ಅಲ್ಲಿಗೇ ಮುಗಿ ಯಲಿಲ್ಲ. ಇದು ಡಿಜಿಟಲ್ ಯುಗ ತಾನೆ! ಕನ್ಯಾಸೀ -ಟೋಗಳನ್ನು ವಿಕಿಪೀಡಿಯಾ ದಲ್ಲಿನ ‘ಡಿಕ್ಟಿಯೋ-ರಾ’ (-ಲಸ್ ಇಂಡುಸಿ ಯಾಟಸ್) ಪುಟದಲ್ಲಿ ಅಳವಡಿಸಿದೆ. ಆ ವಿಶಿಷ್ಟ ಅಣಬೆಯು ಹಲವು ಛಾಯಾಚಿತ್ರಗಳು ಅಲ್ಲಿದ್ದವು. ಜಗತ್ತಿನ ನಾನಾ ಭಾಗಗಳಲ್ಲಿ ಈ ಅಣಬೆಯ ವಿವಿಧ ಉಪಪ್ರಭೇದಗಳು ಬೆಳೆಯುತ್ತವೆ ಮತ್ತು ಅವುಗಳ ದೇಹ, ತೆಳು ಲಂಗಗಳಲ್ಲಿ ಮೇಲ್ನೋಟಕ್ಕೆ ಸಣ್ಣಪುಟ್ಟ ವ್ಯತ್ಯಾಸಗಳೂ ಇದ್ದವು.
ಅಲ್ಲಿ ಹಲವು ಚಿತ್ರಗಳಿದ್ದರೂ, ನಾನು ತೆಗೆದ ಕನ್ಯಾಸೀ ಚಿತ್ರವು ಪ್ರಾತಿನಿಧಿಕವಾಗಿ ಖಾಯಂ ಸ್ಥಾನ ಪಡೆಯಿತು. ಸರಳ, ಚಂದದ ಆ -ಟೋ
ವಿಕಿಪೀಡಿಯಾದಲ್ಲಿ ಇಂದಿಗೂ ವಿರಾಜಿಸಿದೆ. ಅಷ್ಟೇ ಅಲ್ಲ, ನಾನು ಚಿತ್ರಿಸಿದ ಆ ಕನ್ಯಾಸೀ ಚಿತ್ರವನ್ನು ನೂರಾರು ಇತರ ವೆಬ್ಸೈಟ್
ಗಳು, ಪತ್ರಿಕೆಗಳು, ವೆಬ್ಮ್ಯಾಗಸಿನ್ಗಳು, ಬ್ಲಾಗ್ ಗಳು ಮರುಬಳಕೆ ಮಾಡಿವೆ! ಗೂಗಲ್ ಸರ್ಚ್ ನಲ್ಲಿ ಹುಡುಕಿದರೆ, ನಾನು ಚಿತ್ರಿಸಿದ ಆ ಚಿತ್ರ ನೂರಾರು ಸ್ಥಳಗಳಲ್ಲಿ ಉಪಯೋಗಗೊಂಡದ್ದು ಕಾಣುತ್ತದೆ!
ಅದೇನೇ ಇರಲಿ, ಕನ್ಯಾಸೀಯನ್ನು ಛಾಯಾಚಿತ್ರ ರೂಪದಲ್ಲಿ ಉತ್ತಮ ಗುಣಮಟ್ಟದಲ್ಲಿ ಸೆರೆಹಿಡಿದ ತೃಪ್ತಿ ನನಗಿದೆ. ಆದರೂ, ಬಿಜಿಎಲ್ ಸ್ವಾಮಿಯವರು ‘ಹಸುರು ಹೊನ್ನು’ ಪುಸ್ತಕದಲ್ಲಿ, ತಾವೇ ರಚಿಸಿದ ರೇಖಾಚಿತ್ರದಲ್ಲಿ ಒಡಮೂಡಿಸಿದ ಕನ್ಯಾಸೀಯ ವಯ್ಯಾರವು, ನನ್ನ ಛಾಯಾಚಿತ್ರಕ್ಕಿಂತ ಹೆಚ್ಚು ರಚನಾತ್ಮಕವಾಗಿದೆ ಎಂಬುದು ಮಾತ್ರ ಸತ್ಯಸ್ಯ ಸತ್ಯ!