Monday, 14th October 2024

ನಮ್ಮೂರಿನಲ್ಲಿ ’ನಾ ಸೆರೆಹಿಡಿದ ಕನ್ಯಾಸ್ತ್ರೀ’

ಶಶಾಂಕಣ

shashidhara.halady@gmail.com

ಬಿಳಿ ಮಸ್ಲಿನ್ ಬಟ್ಟೆಯ ಕುಸುರಿ ಕೆಲಸ ಮಾಡಿದಂತಹ ಲಂಗ ತೊಟ್ಟ ಈ ಅಣಬೆಯು, ಇಡೀ ಅಣಬೆಲೋಕದಲ್ಲೇ ಅತಿ ಸುಂದರ ಅಣಬೆಗಳಲ್ಲಿ ಒಂದು. ಅದರಲ್ಲಿ ಎರಡು ಮಾತಿಲ್ಲ. ಸುಮಾರು ಆರು ಇಂಚು ಎತ್ತರ, ತುದಿಯಲ್ಲಿ ಒಂದು ಕಂದು ಬಣ್ಣದ ಬುಗುಟು. ಅದರ ಮೇಲೆಲ್ಲಾ ಕೀಟಗಳ ಹಾವಳಿ. ನಮ್ಮ ನಾಡಿನ ಅಡಕೆ ತೋಟಗಳಲ್ಲಿ, ಕಾಡಿನಂಚಿನಲ್ಲಿ, ಬೆಟ್ಟ ಗುಡ್ಡಗಳ ಮರಗಿಡಗಳ ಅಡಿ ಕಾಣ ಸಿಗುವ ಈ ಸುಂದರ ಅಣಬೆಗೆ ‘ಕನ್ಯಾಸ್ತ್ರೀ’ ಈ ಪದವನ್ನು ಮೊದಲಿಗೆ ಉಪಯೋಗಿಸಿದವರು ಹಿರಿಯ ಲೇಖಕರಾದ ಬಿ.ಜಿ.ಎಲ್. ಸ್ವಾಮಿಯವರು.

ಅವರ ‘ಹಸುರು ಹೊನ್ನು’ ಪುಸ್ತಕದಲ್ಲಿ ಕನ್ಯಾಸ್ತ್ರೀಯ ಸುಂದರ ರೇಖಾಚಿತ್ರ ವನ್ನು ರಚಿಸಿ, ಮುದ್ರಿಸಿ, ಈ ಅಪರೂಪದ ಅಣಬೆಯ ವಿವರವನ್ನು ನೀಡಿದ್ದರು. ಇದೊಂದು ಅಪರೂಪದ, ಸುಂದರ ಅಣಬೆ. ಡಿಕ್ಟಿಯೋ-ರಾ ಹೆಸರಿನ ಈ ಅಣಬೆಯನ್ನು ಇಂಗ್ಲಿಷಿನಲ್ಲಿ ವೀಲ್ಡ್ ಲೇಡಿ ಎಂದೂ ಕರೆಯುವುದುಂಟು. ಮುಖಕ್ಕೆ ತೆಳ್ಳನೆಯ, ಬಲು ಸೂಕ್ಷ್ಮ ಕುಸುರಿಯ ಬಿಳಿ ಪರದೆಯನ್ನು ಹಾಕಿಕೊಂಡ ಮಹಿಳೆಯನ್ನು ಹೋಲುವುದರಿಂದ, ಅದೊಂದು ಅನ್ವರ್ಥ ನಾಮ.

ನಮ್ಮೂರಿನಲ್ಲಿ ಮಳೆ ಸುರಿಯತೊಡಗಿದಾಗ, ಕಾಡಿನ ನಡುವೆಯೋ, ತೋಟದ ಮೂಲೆಯ ಬೆಳೆಯುವ ಈ ಅಣಬೆಯ ಆಯಸ್ಸು ಕೇವಲ ಒಂದು ದಿನ. ಬೆಳಿಗ್ಗೆ ನೆಲದಿಂದ ಮೊಳಕೆಯೊಡೆಯಲು ಆರಂಭಿಸಿ, ಮಧ್ಯಾಹ್ನದ ಸಮಯದಲ್ಲಿ ಜಾಲರಿಯ ಲಂಗ ಧರಿಸಿ ತಲೆ ಎತ್ತಿ ನಿಲ್ಲುತ್ತದೆ. ಬಹು ಸೂಕ್ಷ್ಮವಾದ, ಬಲೆಯಂತಹ ಅದರ ದೇಹವು, ಸಂಜೆಯ ಸಮಯಕ್ಕೆ ಮುದುಡಿ ಹೋಗುತ್ತದೆ. ಆ ಅಣಬೆಯ ತಲೆಯ ಭಾಗದ ಬುಗುಟಿನಂತಹ ಜಾಗದಲ್ಲಿ ಸ್ರವಿಸುವ ದ್ರವದ ವಾಸನೆ ಕೆಲವು ಕೀಟಗಳಿಗೆ ಇಷ್ಟ. ಮುತ್ತಿ, ರಸ ಹೀರುತ್ತವೆ; ಅದೇ ಬೀಜ ಪ್ರಸಾರಕ್ಕೂ ದಾರಿ. ಸಂಜೆ ಕುಸಿದು, ಕೆಳಗಿನ ಕೊಳೆತ ತರಗಲೆಯಲ್ಲಿ ಮಣ್ಣಾಗಿ ಹೋಗುವ ಕನ್ಯಾಸ್ತ್ರೀಯನ್ನು ಮತ್ತೆ ನೋಡ ಬೇಕೆಂದರೆ, ಮುಂದಿನ ವರುಷದ ಮಳೆಗಾಲದ ತನಕ ಕಾಯಬೇಕು!

ಮಳೆಗಾಲದ ಒಂದು ದಿನ. ನಾಲ್ಕಾರು ವಾರ ಮಳೆ ಸುರಿದಿತ್ತು, ನಮ್ಮ ಮನೆಯ ಎದುರಿದ್ದ ಪುಟ್ಟ ಅಡಕೆ ತೋಟದ ನೆಲವು ಕೊಳೆತು ಮಿದುವಾಗಿತ್ತು. ನಡುವೆ ಒಂದು ದಿನ ಹೊಳ, ಮಳೆ ಕಡಿಮೆ. ಆ ಮಧ್ಯಾಹ್ನ ತೋಟದಲ್ಲಿ ಸುತ್ತಾಡುವಾಗ, ‘ಕನ್ಯಾಸ್ತ್ರೀ’
ನನ್ನ ಕಣ್ಣಿಗೆ ಬಿದ್ದಳು! ಆ ಸುಂದರ ಅಣಬೆಯನ್ನು ನಮ್ಮ ಮನೆಯ ಸರಹದ್ದಿನ ಕಂಡು, ಗುರುತಿಸಿದಾಗ, ನನ್ನಲ್ಲಿ ಅದೇನೋ ಒಂದು ರೀತಿಯ ಸಂಭ್ರಮ, ಸಡಗರ. ಬಿಜಿಎಲ್ ಸ್ವಾಮಿಯವರು ದಟ್ಟ ಕಾಡಿನ ನಡುವೆ, ಆಗುಂಬೆಯ ಮತ್ತೆ ಕಂಡು, ರೇಖಾ ಚಿತ್ರ ಸಹಿತ ವಿವರಿಸಿ ಬರೆದಿದ್ದ ಡಿಕ್ಟಿಯೋ-ರಾ ಅಣಬೆಯು ನಮ್ಮ ಊರು, ಹಾಲಾಡಿಯಲ್ಲೂ ಇದೆ ಎಂದು ಹೊಸದಾಗಿ ‘ಕಂಡು ಹಿಡಿದ’ ಬೆರಗು ನನ್ನಲ್ಲಿ. ಅದು 1979ನೇ ಇಸವಿಯ ಜುಲೈ ತಿಂಗಳೇ ಇರಬೇಕು.

ನಾಲ್ಕಾರು ವಾರ ನಮ್ಮೂರಲ್ಲಿ ಮಳೆ ಸುರಿದು, ಕೈತೋಟದ ನೆಲವೆ ಮಿದುಗಟ್ಟಿತ್ತು; ಎಲೆಗಳು ಕೊಳೆತು, ನೆಲದ ಮಣ್ಣು ಕಪ್ಪಾಗಿತ್ತು. ಆ ಮಿದು ಮಣ್ಣಿನ ತಲೆ ಎತ್ತಿದ್ದ ‘ಕನ್ಯಾಸ್ತ್ರೀ’, ಮಳೆಗಾಲದ ಆ ಹೊಳವಾದ ದಿನ ನನಗೊಂದು ಸುಂದರ ನೋಟ ವನ್ನು ಕಟ್ಟಿಕೊಟ್ಟಿತ್ತು. ಸುಮಾರು ಮೂರು ಇಂಚು ಉದ್ದದ ದೇಹ, ತಲೆಯ ಬಳಿ ನಸುಕಂದು ಬಣ್ಣದ ಬುಗುಟು, ಆ ಬುಗುಟನ್ನು ಆಧರಿಸಿ ಅರ್ಧ ದೇಹದ ತನಕ ಕೆಳಗಿಳಿದು ಹೋಗಿದ್ದ, ಮಸ್ಲಿನ್ ಬಟ್ಟೆಗಿಂತಲೂ ಸೂಕ್ಷ್ಮ ಎನಿಸುವ ಬಿಳಿ ಪರದೆ. ಆ ಬಿಳಿ ಪರದೆಯ ಚುಕ್ಕಿ ಚುಕ್ಕಿ ವಿನ್ಯಾಸ, ನೋಡಲು ಮೋಹಕ, ಅಚ್ಚರಿ. ನಿಸರ್ಗದಲ್ಲಿ ಎಂತೆಂತಹ ಸೋಜಿಗಗಳು ಆವಿರ್ಭಸಲು ಸಾಧ್ಯ ಎಂಬ ಬೆರಗು ಹುಟ್ಟಿಸುವ ದೇಹ ಅದು.

ನಿಸರ್ಗದೇವಿಯು ಮನಸ್ಸು ಮಾಡಿದೆ, ಮಸ್ಲಿನ್ ಬಟ್ಟೆಯಂತಹದ್ದನ್ನೇ ಅಣಬೆಯಲ್ಲೂ ರೂಪಿಸಿ, ಪ್ರದರ್ಶಿಸಬಲ್ಲಳು ಎಂಬುದಕ್ಕೆ ಕನ್ಯಾಸ್ತ್ರೀ ಒಂದು ಉದಾಹರಣೆ. ಜತೆಗೆ, ಅದರಿಂದ ಸೂಸುವ ತುಸು ಕೆಟ್ಟ ವಾಸನೆಗೆ ಆಕರ್ಷಿತಗೊಂಡು, ಅಲ್ಲೇ ಸುಳಿದಾಡುವ ಹಲವು ನೊಣಗಳು, ಕೀಟಗಳು, ಆ ಮಳೆಗಾಲದ ದಿನಕ್ಕೆ ವಿಶಿಷ್ಟ ಚೌಕಟ್ಟನ್ನು ಕಟ್ಟಿಕೊಟ್ಟಿದ್ದವು. ನಮಗೆ ಕೆಟ್ಟದೆನಿಸುವ ವಾಸನೆಯು, ಆ ದುಂಬಿ, ಜೇಡ ಮತ್ತು ಇತರ ಹಾತೆಗಳಿಗೆ ಸುವಾಸನೆ ಇರಬೇಕು! ಆ ಕೀಟಗಳು ಅಲ್ಲಿ ಬಂದು ಕೂರುವ್ಯದ ರಿಂದ, ಅಣಬೆಯ ಸೂಕ್ಷ್ಮ ಬೀಜಾಣುಗಳು ಪ್ರಸರಣ ವಾಗಲು ಸದವಕಾಶ! ಆದರೆ, ಬಿಳೀ ಲಂಗ ಹೊದ್ದ ಕನ್ಯಾಸ್ತ್ರೀ ಎಂಬ ಅಣನಬೆಯ ಆಯಸ್ಸ ಜಾಸ್ತಿ ಇಲ್ಲ.

ನಾನು ಅಣಬೆಯನ್ನು ಕಂಡ ದಿನ ಎರಡು ಮೂರು ಬಾರಿ ತೋಟಕ್ಕೆ ಹೋಗಿ ನೋಡಿದೆ. ಸಂಜೆಯ ಹೊತ್ತಿಗೆ ಕುಸಿದು, ಮಣ್ಣಿನಲ್ಲಿ ಬೆರೆತು ಹೋಗಿತ್ತು ಆ ಬಿಳಿ ಪರದೆ ಹೊದ್ದ ಕನ್ಯಾಸ್ತ್ರೀ ಅಣಬೆ. ಅದೇ ವರ್ಷ ಇರಬೇಕು, ಕಾಲೇಜಿನಿಂದ ಕೊಡಚಾದ್ರಿ ಯ ಬೆಟ್ಟ ಪ್ರದೇಶಕ್ಕೆ ಚಾರಣ ಏರ್ಪಡಿಸಿದ್ದರು. ಆ ದಟ್ಟ ಹರಿದ್ವರ್ಣ ಕಾಡಿನ ಪರ್ವತ ಭಿತ್ತಿಯಲ್ಲಿ ನವೆಂಬರ್ ತನಕವೂ ಮಳೆ ತಾನೆ! ಕಾಡಿನ ನಡುವೆ, ಮರವೊಂದರ ತಳದಲ್ಲಿ ಕೊಳೆತ ಎಲೆಗಳ ನಡುವೆ ಕನ್ಯಾಸೀ ನಸುನಗುತ್ತಿದ್ದಳು!

ಕೊಡಚಾದ್ರಿಗೆ ಚಾರಣ ಮಾಡುವ ದಾರಿಯ ಪಕ್ಕದಲ್ಲೇ, ಕಾಡಿನ ದಟ್ಟ ನೆರಳಿನಲ್ಲಿ ಎರಡು ಅಣಬೆಗಳು ತಮ್ಮ ಜಾಲರಿ
ಲಂಗವನ್ನು ಬಿಟ್ಟುಕೊಂಡು, ನನ್ನಲ್ಲಿ ಅಚ್ಚರಿ ಹುಟ್ಟಿಸಿದ್ದವು. ಅಲ್ಲೂ ಎಲೆಗಳು ಕೊಳೆತ ನೆಲ, ನಮ್ಮ ತೋಟದಲ್ಲಿದ್ದಂತೆಯೇ. ವಿಶೇಷವೆಂದರೆ, ಆ ದಟ್ಟಕಾಡಿನಲ್ಲಿ ಬೆಳೆದಿದ್ದ ಕನ್ಯಾಸ್ತ್ರೀಯ ಜಾಲರಿ ದೇಹದ ಬಣ್ಣ ನಸು ಹಳದಿ. ಡಿಕ್ಟಿಯೋ-ರಾ ಅಣಬೆಯ ಉಪಪ್ರಬೇಧ ಅದು.

ನಮ್ಮ ಊರಿನಲ್ಲಿ ಕಂಡ ಅಣಬೆಯ ದೇಹ ಬಿಳಿ. ಮರಗಳ ನೆರಳಿನ ನಸುಗತ್ತಲಿನಲ್ಲಿ ಇನ್ನಷ್ಟು ಚಂದ ಕಾಣಿಸುತ್ತಿತ್ತು ಆ
ಕನ್ಯಾಸ್ತ್ರೀ ಜೋಡಿ. ಆಗಿನ ದಿನಗಳಲ್ಲಿ ನನ್ನ ಬಳಿ ಕ್ಯಾಮೆರಾ ಇರಲಿಲ್ಲ – ಕನ್ಯಾಸ್ತ್ರೀಯ ನೋಟವನ್ನು ಕಣ್ಣಿನ ಕ್ಯಾಮೆರಾದಲ್ಲಿ ಸೆರೆಹಿಡಿದು, ನೆನಪಿನ ಮೂಸೆಯಲ್ಲಿ ಶೇಖರಿಸಿಟ್ಟುಕೊಂಡೆ. ಈ ನಡುವೆ ನಮ್ಮ ಕಾಲೇಜಿನ ಸಸ್ಯಶಾಸ್ತ್ರ ಉಪನ್ಯಾಸಕರ ಬಳಿ, ಈ ಕನ್ಯಾಸೀಯ ಸುಂದರ ದೇಹವನ್ನು ಕಂಡುಕೊಂಡ ವಿವರವನ್ನು ಹಂಚಿಕೊಂಡೆ.

ನಮ್ಮ ಮನೆಯ ಹತ್ತಿರದ ಆ ಅಣಬೆಗಳು ಬೆಳೆಯುತ್ತವೆ ಎಂದು ಹೆಮ್ಮೆಯಿಂದ ಹೇಳಿಕೊಂಡೆ! ‘ಇನ್ನೊಮ್ಮೆ ಕಂಡರೆ, ಬಾಟಲಿ ಯಲ್ಲಿ ಸಂಗ್ರಹಿಸಿ ತಾ, ಕಾಲೇಜಿನ ಸಸ್ಯಶಾಸ್ತ್ರ ಸಂಗ್ರಹಾಲಯಕ್ಕೆ ಅಮೂಲ್ಯ ಸೇರ್ಪಡೆಯಾಗುತ್ತದೆ’ ಎಂದರು ಅವರು. ಸಸ್ಯಗಳ ಸ್ಪೆಸಿಮನ್ ಸಂಗ್ರಹಿಸುವ ಒಂದು ಅಡಿ ಉದ್ದದ, ಅಗಲ ಬಾಯಿಯ ಗಾಜಿನ ಬಾಟಲಿಯಲಿ ಫಾರ್ಮಲಿನ್ ದ್ರವ ತುಂಬಿಸಿ ಕೊಟ್ಟರು. ಅದನ್ನು ೨೨ ಕಿ.ಮೀ. ದೂರದ ನಮ್ಮ ಹಾಲಾಡಿಯ ಹಳ್ಳಿಯ ಮನೆಗೆ ತಂದಿಟ್ಟುಕೊಂಡು, ಕನ್ಯಾಸ್ತ್ರೀ
ಪ್ರತ್ಯಕ್ಷಳಾಗುತ್ತಾಳಾ ಎಂದು ಕಾದೆ. ಉಹುಂ, ಆ ಅಪರೂಪದ ಅಣಬೆ ನಮ್ಮ ಹಳ್ಳಿಯಲ್ಲಿ ಭೂಮಿಯಿಂದ ತಲೆಎತ್ತಿ ಮೇಲೆ ಬರುವುದು, ಸಿಕ್ಕಾಪಟ್ಟೆ ಮಳೆ ಸುರಿಯುವ ಮಳೆಗಾಲದ ದಿನಗಳಲ್ಲಿ ಮಾತ್ರ ಇರಬೇಕು. ಅದುಭೂಮಿಯಿಂದ ಮೇಲೇಳಲು
ವಿಶಿಷ್ಟ ವಾತಾವರಣಬೇಕು. ಒಂದೆರಡು ತಿಂಗಳು ಕಾದೆ; ಕನ್ಯಾಸೀ ಅಣಬೆ ದೊರಕಲಿಲ್ಲ.

ಈ ನಡುವೆ, ಕಾಲೇಜಿನ ಸ್ವತ್ತಾಗಿದ್ದ ಆ ಬಾಟಲಿಯನ್ನು ಬೇಗನೆ ವಾಪಸು ಕೊಡಬೇಕೆಂಬ ತವಕ. ಕಾಡಿನ ಅಂಚಿನಲ್ಲಿದ್ದ ನಮ್ಮ ಮನೆಯ ಸುತ್ತಲಿನ ಹಾಡಿ-ಹಕ್ಕಲುಗಳಲ್ಲಿ, ತೋಟದಲ್ಲಿ ಚಿತ್ರ ವಿಚಿತ್ರ ವಿನ್ಯಾಸದ ಹತ್ತಾರು ಅಣಬೆಗಳು ಮಳೆಗಾಲದಲ್ಲಿ ಅರಳು ತ್ತಿದ್ದವು. ಕೆಲವು ಅಣಬೆಗಳ ಆಕಾರವೂ ವಿಚಿತ್ರ, ಬಣ್ಣ ಬಣ್ಣದ ದೇಹವೂ ಕೆಲವು ಅಣಬೆಗಳಿಗೆ ಇರುತ್ತವೆ. ನಮ್ಮ ಮನೆಯ ಹಿಂಭಾಗ ದ, ಲಡ್ಡು ಹಿಡಿದ ಮರದ ಕಾಂಡವೊಂದರ ಮೇಲೆ ಕಗ್ಗತ್ತಲಿನ ರಾತ್ರಿಯಲ್ಲೂ ಹೊಳೆಯುವ ಪುಟಾಣಿ ಅಣಬೆಗಳು ಸಹ ನೂರಾರು ಸಂಖ್ಯೆಯಲ್ಲಿ ಬೆಳೆಯುತ್ತಿದ್ದುದನ್ನು ನಾನು ಕಂಡಿದ್ದೆ. ಆ ಸಮಯ ದಲ್ಲಿ, ಬೆಳಕಿಲ್ಲದ ರಾತ್ರಿಯಲ್ಲಿ ಆ ಮರವನ್ನು ಕಂಡರೆ, ಇಡೀ ಮರವು ಹದವಾದ ಪ್ರಭೆಯಿಂದ ಬೆಳಗುತ್ತಿರುವ ಅಪರೂಪದ ದೃಶ್ಯವನ್ನು ಕಾಣಬಹುದು.

ಆದರೆ ನಾನು ಬಾಟಲಿಯಲ್ಲಿ ಸೆರೆಹಿಡಿಯಬೇಕಿದ್ದುದು ಕನ್ಯಾಸ್ತ್ರೀ! ಆ ವರ್ಷ ಇನ್ನು ಸಿಕ್ಕುವ ಸಾಧ್ಯತೆ ಇರಲಿಲ್ಲ, ಮಳೆಗಾಲ ಮುಗಿಯತೊಡಗಿತ್ತು. ಕೊನೆಗೊಮ್ಮೆ ನಮ್ಮ ಹಕ್ಕಲಿನಲ್ಲಿ ದೊಡ್ಡ ಗಾತ್ರದ, ಬಣ್ಣ ಬಣ್ಣದ ಕೊಡೆಯಿದ್ದ, ಯಕ್ಷಗಾನದ ಬಣ್ಣದ
ವೇಷವನ್ನು ನೆನಪಿಸುವ ಎರಡು ಅಣಬೆಗಳನ್ನು ಕಂಡೆ. ಬಣ್ಣ ತುಂಬಿದ ಆ ಅಣಬೆಯ ಕೊಡೆಯು ಅಂಗೈ ಅಗಲವಿತ್ತು! ಅವೆರಡೂ ಅಣಬೆಗಳನ್ನು ನಾಜೂಕಾಗಿ ಕಿತ್ತು ತಂದು, ಫಾರ್ಮಲಿನ್ ದ್ರವ ತುಂಬಿದ ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ,
ಕಾಲೇಜಿನ ಬಾಟನಿ ವಿಭಾಗಕ್ಕೆ ತಲುಪಿಸಿದೆ. ‘ಇದು ಡಿಕ್ಟಿಯೋ-ರಾ ಅಲ್ಲ’ ಎಂದು ನಸುನಕ್ಕರು, ಕಾಲೇಜಿನ ಉಪನ್ಯಾಸಕರು. ‘ಹೌದು ಸರ್, ಅದು ಸಿಗಲಿಲ್ಲ ಸರ್, ಅದಕ್ಕೆ ಇನ್ನು ಮುಂದಿನ ವರ್ಷದ ಜುಲೈ ತನಕ ಕಾಯಬೇಕು ಅಂತ ಕಾಣುತ್ತದೆ.

ನಿಮ್ಮ ಅನುಮತಿ ಬಹಳ ದಿನ ಆಯ್ತಲ್ಲ ಈ ಬಾಟಲಿ ಕೊಂಡೊಯ್ದು, ನಾನು ಇನ್ನಷ್ಟು ದಿನ ಇಟ್ಟುಕೊಂಡರೆ ತಪ್ಪಾದೀತು. ಆದ್ದರಿಂದ ಈ ಅಣಬೆಯನ್ನು ಸಂಗ್ರಹಿಸಿ, ಬಾಟಲಿಯನ್ನು ವಾಪಸು ಕೊಡಲು ತಂದೆ’ ಎಂದು ಉತ್ತರಿಸಿದೆ. ಅವರು ಅದನ್ನು ಸಸ್ಯಶಾಸ್ತ್ರ ವಿಭಾಗದಲ್ಲಿ ಒಂದು ಕಡೆ ಪ್ರದರ್ಶಿಸುವಂತೆ ಇಟ್ಟರು. ಈಗಲೂ ಅದು ಅಲ್ಲೇ ಇರಬಹುದು! ಕಾಲೇಜು ವಿದ್ಯಾಭ್ಯಾಸ ಮುಗಿಯಿತು. ಉದ್ಯೋಗ ಅರಸಿ, ಅರಸಿಕೆರೆ ಹತ್ತಿರದ ಹಳ್ಳಿಯೊಂದನ್ನು ಸೇರಿಕೊಂಡೆ. ಆ ಪ್ರದೇಶದಲ್ಲಿ ವರ್ಷದಲ್ಲಿ ಮೂರು ನಾಲ್ಕು ದಿನ ಮಾತ್ರ ಮಳೆ ಬರುವುದು!

ನಮ್ಮೂರಲ್ಲಿ ಮೂರು ನಾಲ್ಕು ತಿಂಗಳು ಮಳೆ ಬರುವುದರಿಂದ, ವಿಶಿಷ್ಟ ಅಣಬೆಗಳ ಲೋಕವನ್ನೇ ಕಾಣಬಹುದು. ತೆಳು ಲಂಗ ಹೊದ್ದ ಕನ್ಯಾಸೀ ಅಣಬೆಯ ಜತೆಗಿನ ನನ್ನ ಸಂಬಂಧ ಅಲ್ಲಿಗೇ ಮುಕ್ತಾಯವಾಯಿತು ಎಂದುಕೊಂಡೆ. ಮೂರು ದಶಕಗಳ ನಂತರ, ಮಳೆ ಸುರಿಯುವ ಜುಲೈ ತಿಂಗಳಿನಲ್ಲಿ ಊರಿಗೆ ಹೋಗಿದ್ದೆವು. ಜಡಿ ಮಳೆ ಸುರಿದು, ನಾಲ್ಕಾರು ದಿನ ಹೊಳವಾಗಿತ್ತು.
ಹೆಬ್ರಿ ಸನಿಹದ ಬೆಳ್ವೆಯ ನಮ್ಮ ಸೋದರತ್ತೆಯ ಮನೆಯಲ್ಲಿ ವಾಸ್ತವ್ಯ. ಬೆಳಿಗ್ಗೆ ಎದ್ದು ನೋಡಿದರೆ, ಮನೆಯ ಹತ್ತಿರವೇ, ಬಾಳೆಗಿಡವೊಂದರ ಬುಡದ ಕೊಳೆತ ಮಿದುಮಣ್ಣಿನಿಂದ ಎರಡು ಅಣಬೆಗಳು ಮೊಳಕೆಯೊಡೆಯಲು ಪ್ರಾರಂಭಿಸಿದ್ದವು.

ಆ ಅಣಬೆಗಳ ದೇಹದಲ್ಲಿ ಮೂಡತೊಡಗಿದ್ದ, ಲಂಗದ ರೀತಿಯ ನಾಜೂಕು ಬಿಳಿ ಜಾಲರಿಯನ್ನು ಕಂಡ ಕೂಡಲೆ, ನನಗೆ ಗೊತ್ತಾಯಿತು, ಇದು ಕನ್ಯಾಸೀ! ಆ ವರ್ಷ ಖರೀದಿಸಿದ್ದ ಪುಟಾಣಿ ಸೋನಿ ಕ್ಯಾಮೆರಾದ ಜೂಮ್ ಶಕ್ತಿಶಾಲಿಯಾಗಿತ್ತು. ಆ
ಡಿಜಿಟಲ್ ಕ್ಯಾಮೆರಾದಿಂದ ಗಂಟೆಗೊಂದರಂತೆ ಕನ್ಯಾಸ್ತ್ರೀಯ ಫೊಟೋ ತೆಗೆಯಲಾರಂಭಿಸಿದೆ. ಆರಂಭದ ಹಂತ, ಜಾಲರಿ ಲಂಗ ಬಿಡಿಸುವ ಪರಿ, ಪೂರ್ತಿ ಲಂಗ ಅರಳಿದಾಗ ಕನ್ಯಾಸೀಯ ಸೊಗಸಾದ ನೋಟ, ಎಲ್ಲವೂ ಡಿಜಿಟಲ್ ರೂಪದಲ್ಲಿ ಸಂಗ್ರಹಗೊಂಡವು.

ಮಧ್ಯಾಹ್ನದ ಸಮಯಕ್ಕೆ ಎರಡು ಕನ್ಯಾಸೀ ಅಣಬೆಗಳು ಪೂರ್ತಿ ಎದ್ದು ನಿಂತಿದ್ದವು. ದೇಹದ ಜಾಲರಿಯಂತೂ ಸುಟವಾಗಿ,
ಸುಂದರವಾಗಿ ಮೂಡಿದ್ದವು. ಬಿಜಿಎಲ್ ಸ್ವಾಮಿಯವರು ವರ್ಣಿಸಿದ್ದಂತೆ, ಆ ಅಣಬೆಗಳ ತಲೆಯ ಭಾಗದ ಬುಗುಟಿನಲ್ಲಿ ಒಸರುವ ದ್ರವವೆಂದರೆ, ಕೆಲವು ಕೀಟಗಳಿಗೆ ಮತ್ತು ನೊಣಗಳಿಗೆ ತುಂಬಾ ಇಷ್ಟ. ಕೀಟಗಳು ರಸಹೀರಲು ಕನ್ಯಾಸ್ತ್ರೀಯನ್ನು ಹತ್ತಿ ಕುಳಿತ ಪರಿಯು ನಾನು ತೆಗೆದ ಛಾಯಾಚಿತ್ರಗಳಲ್ಲಿ ಸ್ಪಷ್ಟವಾಗಿ ಸೆರೆಯಾಯಿತು.

ನಮ್ಮ ಹಳ್ಳಿಯ ತೋಟದಲ್ಲಿ ಬೆಳೆಯುವ ಈ ಸುಂದರ ಅಣಬೆ ಎಂದರೆ ನನಗೇನೋ ಅದೊಂದು ರೀತಿಯ ಮೋಹ. ಒಂದೇ ದಿನ ಅರಳುವ ಅದನ್ನು ನೋಡುವುದೆಂದರೆ, ಅದಾವುದೋ ಭಾವಲೋಕ ದಲ್ಲಿ ಸಂಚರಿಸಿದ ಅನುಭವ. ಆದ್ದರಿಂದಲೇ
ಇರಬೇಕು, ಈ ಅಣಬೆಯ ಕುರಿತು ನಾನು ಹಲವು ಬಾರಿ, ಬೇರೆ ಬೇರೆ ಕಡೆ ಬರೆದಿದ್ದೇನೆ, ಪ್ರಕೃತಿಯ ಆ ಅಪರೂಪದ ವ್ಯಾಪಾರ ವನ್ನು ಕಂಡ ಅನುಭವವನ್ನು ಓದುಗರೊಂದಿಗೆ ಹಂಚಿಕೊಂಡಿದ್ದೇನೆ. ಕನ್ಯಾಸ್ತ್ರೀ ಅಣಬೆಯ ಕುರಿತು ಬರೆದ ಇಂತಹ ಅನುಭವಗಳು ಮತ್ತು ಇತರ ಪರಿಸರ ಸಂಬಂಧಿ ಚಟುವಟಿಕೆಗಳ ಅನುಭವಗಳು ಈಗ, ಅಂದರೆ ಇದೇ ಡಿಸೆಂಬರ್
೩೧ರಂದು ಪುಸ್ತಕರೂಪದಲ್ಲಿ ಹೊರಬರುತ್ತಿವೆ. ಆ ಬರಹಗಳ ಸಂಕಲನದ ಹೆಸರು ಸಹ “ನಾ ಸೆರೆಹಿಡಿದ ಕನ್ಯಾಸ್ತ್ರೀ!” ಅದನ್ನು ಓದುವವರಿಗೆ ಪರಿಸರ, ಪ್ರಕೃತಿಯ ಹಸಿರಿನಲ್ಲಿ ಮಿಂದು ಎದ್ದ ಅನುಭವವಾಗುವುದೆಂಬ ಭರವಸೆ ನನಗಿದೆ!

ಅದೇನೇ ಇರಲಿ, ನಮ್ಮ ಹಳ್ಳಿಯ ಸುತ್ತಮುತ್ತ ಅರಳುವ ಕನ್ಯಾಸ್ತ್ರೀಯನ್ನು ನೋಡಿ, ಛಾಯಾಚಿತ್ರ ರೂಪದಲ್ಲಿ ಸೆರೆಹಿಡಿದ ತೃಪ್ತಿ ನನಗಿದೆ. ಆದರೂ, ಬಿಜಿಎಲ್ ಸ್ವಾಮಿಯವರು ‘ಹಸುರು ಹೊನ್ನು’  ಪುಸ್ತಕದಲ್ಲಿ, ತಾವೇ ರಚಿಸಿದ ರೇಖಾಚಿತ್ರದಲ್ಲಿ
ಒಡಮೂಡಿಸಿದ ಕನ್ಯಾಸೀಯ ವಯ್ಯಾರವು, ನನ್ನ ಛಾಯಾಚಿತ್ರಕ್ಕಿಂತ ಹೆಚ್ಚು ರಚನಾತ್ಮಕವಾಗಿದೆ ಎಂಬುದು ಮಾತ್ರ ಸತ್ಯಸ್ಯ ಸತ್ಯ!

 
Read E-Paper click here