Thursday, 12th December 2024

ಕ್ರಿಕೆಟ್‌ ಹುಚ್ಚು ಹತ್ತಿದರೆ ಊಟ ತಿಂಡಿಯೂ ಬೇಡ !

ಶಶಾಂಕಣ

shashidhara.halady@gmail.com

ದಿನಾ ಸಂಜೆ ಆಟ, ಆಗಾಗ ಅಕ್ಕಪಕ್ಕದ ಹಳ್ಳಿಯವರ ಜೊತೆ ‘-ಂಡ್ಲಿ ಮ್ಯಾಚ್’. ಪಂಚನಹಳ್ಳಿ, ಜಾವಗಲ್, ಬಾಣಾವರ, ದೇವನೂರು, ಶ್ರೀರಾಂಪುರ, ಮೇಟಿಕುರ್ಕೆ, ಕೆ.ಬಿದರೆ ಈ ರೀತಿ ಹಲವು ಹಳ್ಳಿಗಳೊಂದಿಗೆ ಕ್ರಿಕೆಟ್ ಆಡಿದ ನೆನಪು ಮಧುರ. ಅಲ್ಲಿನ ಹುಡುಗರು ಊಟ, ತಿಂಡಿ ಮರೆತು ಕ್ರಿಕೆಟ್ ಆಡುತ್ತಿದ್ದರು!

Cricket is the only game hate you can actually wait when playing.- Tommy Docherty

ಕ್ರಿಕೆಟ್ ಆಡುವುದು ಎಂದರೆ ಆರಾಮಾಗಿ ಕಾಲ ಕಳೆಯುವುದು, ಈ ಆಟದಿಂದ ನಮಗೆ ದೈಹಿಕ ವ್ಯಾಯಾಮ ಸಿಗುವುದಿಲ್ಲ ಎಂದು ವ್ಯಂಗ್ಯವಾಡುವ ಕಾಲ ವೊಂದಿತ್ತು.

ಅಂತಹ ದಿನಗಳಲ್ಲಿ ರೂಪುಗೊಂಡ ಮೇಲಿನ ಹೇಳಿಕೆಗಳಂತಹ ಪರೋಕ್ಷ ಟೀಕೆಗಳಿಗೆ ಒಂದು ಅರ್ಥವೂ ಇತ್ತು. ಐದು ದಿನಗಳ ಟೆಸ್ಟ್ ಮ್ಯಾಚ್ ಅಥವಾ ಎರಡೆರಡು ಇನ್ನೀಂಗ್ಸ್ ಮತ್ತು ಸಮಯ ಮಿತಿ ಮತ್ತು ಇಲ್ಲದೆ ಆಡುತ್ತಿದ್ದಾಗ, ಅದು ಸೋಮಾರಿಗಳ ಮತ್ತು ಶ್ರೀಮಂತರ ಆಟ ಎಂಬ ಭಾವನೆ. ಇಡೀ ದಿನ 11 ಆಟಗಾರರು ಬೆವರು ಸುರಿಸುತ್ತಾ, ಮೈದಾನದಲ್ಲಿ ಅತ್ತಿತ್ತ ಓಡಾಡು ತ್ತಿರುವಾಗ, ಇಬ್ಬರು ಬ್ಯಾಟ್ಸ್ಮನ್‌ಗಳು ನೂರಾರು ರನ್ ಬಾರಿಸಿದ ಅದೆಷ್ಟು ಉದಾಹರಣೆ ಗಳು ಕ್ರಿಕೆಟ್‌ನಲ್ಲಿ ಇವೆಯಲ್ಲವೇ!

ನಮ್ಮ ದೇಶಕ್ಕೆ ಕ್ರಿಕೆಟ್ ಬಂದದ್ದು ವಸಾಹತುಶಾಹಿ ಆಡಳಿತದ ಮೂಲಕ ಎಂಬ ಮತ್ತೊಂದು ಟೀಕೆಯು ೨೦ನೇ ಶತಮಾನ ದಲ್ಲಿ ಅಲ್ಲಲ್ಲಿ ಕೇಳಿ ಬರುತ್ತಿತ್ತು. ಬ್ರಿಟಿಷ್ ಜನರು ನಮ್ಮ ದೇಶದಲ್ಲಿ ಆಡಲು ಆರಂಭಿಸಿ, ಅವರ ಮೂಲಕ ನಮ್ಮ ಜನರು ಈ ಆಟವನ್ನು ಕಲಿತು, ಈಗ ಅವರದೇ ಆಟದಲ್ಲಿ ಅವರನ್ನು ಸೋಲಿಸುತ್ತಿರುವುದು ಒಂದು ದೊಡ್ಡ ಸಾಧನೆಯೇ ಸರಿ – ಆದರೆ ಏಕದಿನ ಪಂದ್ಯ ಮತ್ತು 20 ಓವರುಗಳ ಆಟ ಜನಪ್ರಿಯವಾಗುವ ಮುಂಚೆ, ಐದು ದಿನಗಳ ಮತ್ತು ಎರಡೆರಡು ಇನ್ನಿಂಗ್ಸ್‌ ಗಳ ಆಟವನ್ನು ಕಂಡು, ‘ಇದು ಸೋಮಾರಿಗಳ ಆಟ, ಫುಟ್ಬಾಲ್ ರೀತಿಯ ರೋಚಕತೆ ಇದರಲ್ಲಿ ಇಲ್ಲ’ ಇಂದು ಟೀಕಿಸುವ ಇನ್ನೊಂದೇ ಪಡೆಯೂ ಇತ್ತು!

ಕೆಲವು ದಶಕಗಳ ಹಿಂದೆ ನಮ್ಮ ದೇಶದ ಕೆಲವು ಲೇಖಕರು ಮತ್ತು ಚಿಂತಕರಿಗೆ ಟೆಸ್ಟ್ ಮ್ಯಾಚ್ ಕಂಡರೆ ವಿಪರೀತ ಕೋಪ! ಐದು ದಿನಗಳ ಟೆಸ್ಟ್ ಮ್ಯಾಚ್ ಅನ್ನು ನೋಡುತ್ತಾ, ನಮ್ಮ ದೇಶದ ಜನರು ತಮ್ಮ ಕೆಲಸ ಕಾರ್ಯಗಳನ್ನು ಮರೆತಿದ್ದಾರೆ ಮತ್ತು ಅದರಿಂದಾಗಿಯೇ ದೇಶದ ಜಿಡಿಪಿ ಬೆಳವಣಿಗೆ ಆಗುತ್ತಿಲ್ಲ ಎಂದು 20ನೆಯ ಶತಮಾನದಲ್ಲಿ ಕೆಲವರು ಟೀಕಿಸುತ್ತಿದ್ದರು!

ಬ್ರಿಟಿಷರು ನಮ್ಮ ಜನರಿಗೆ ಕಲಿಸಿ ಹೋದ ಈ ಬ್ಯಾಟ್, ಬಾಲು ಆಟವನ್ನು ಕಂಡರೆ ಕೆಲವರಿಗೆ ವಿಪರೀತ ಜುಗುಪ್ಸೆ. ಆದರೇನು ಮಾಡುವುದು, ನಮ್ಮ ದೇಶದ ಜನರಿಗೆ ಕ್ರಿಕೆಟ್ ಎಂದರೆ ಅಷ್ಟೊಂದು ಹುಚ್ಚು! ಎಲ್ಲರೂ ಕ್ರಿಕೆಟ್ ಕಲಿಯುವ ಬದಲು ಫುಟ್ಬಾಲ್ ಮೊದಲಾದ ಆಟಗಳನ್ನು ಕಲಿಯಬೇಕು ಎಂದು ಉಚಿತ ಸಲಹೆ ಕೊಡುವವರು ಅದೆಷ್ಟೋ ಜನರಿದ್ದರು! ಆದರೆ ಒಂದು ದಿನದ ಮತ್ತು ಸೀಮಿತ ಓವರು ಕ್ರಿಕೆಟ್ ಬಂದ ನಂತರ ಇಂತಹದೊಂದು ಹಳಹಳಿಕೆ ಕಡಿಮೆಯಾಯಿತು.

೨೦ ಓವರ್‌ಗಳ ಆಟ ಜನಪ್ರಿಯತೆಯ ತುತ್ತ ತುದಿಗೆ ಏರಿದ ಮೇಲೆ, ಕ್ರಿಕೆಟ್ ಆಟದ ಸ್ವರೂಪವೇ ಬದಲಾಯಿತು, ಬಿಡಿ, ಅದು ಬೇರೆ ವಿಚಾರ. ಐದು ದಿನದ ಮ್ಯಾಚ್ ಇರಲಿ, ಒಂದು ದಿನದ ಮ್ಯಾಚ್ ಇರಲಿ, ಅಥವಾ ೨೦ ಓವರ್ ಮ್ಯಾಚ್ ಇರಲಿ, ನಮ್ಮ ದೇಶದಲ್ಲಿ ಕ್ರಿಕೆಟ್‌ನ ಜನಪ್ರಿಯತೆಯ ಖದರ್ ಬೇರೆಯದೇ ಮಜಲಿನದು. ಬೀದಿಗಳಲ್ಲಿ ಗಲ್ಲಿಗಳಲ್ಲಿ, ಮನೆಯ ಒಳಗೆ, ಅಂಗಳ ದಲ್ಲಿ, ಗದ್ದೆಯಲ್ಲಿ ತೋಟದಲ್ಲಿ ಹೀಗೆ ಎಂದರಲ್ಲಿ ಕ್ರಿಕೆಟ್ ಆಡುವ ದೇಶ ನಮ್ಮದು.

ಬ್ಯಾಟ್ ಸಿಗದಿದ್ದರೆ ತೆಂಗಿನ ಹೆಡೆಮಟ್ಟೆಯೇ ಬ್ಯಾಟ. ವಿಕೆಟ್ ಗಳು ಇಲ್ಲದಿದ್ದರೆ ಒಲೆಗೆ ಹಾಕುವ ಸೌದೆಯೇ ವಿಕೆಟ್. ಬಾಲ್ ಇಲ್ಲದಿದ್ದರೆ ಬಟ್ಟೆಯ ಉಂಡೆಯೇ ಬಾಲ್! ಬೆಳಗ್ಗೆ ಕ್ರಿಕೆಟ್ ಆಡಿ, ಹಗಲಿಡೀ ಪಾಠ ಕೇಳಿ, ಸಂಜೆ ಪುನಃ ಕ್ರಿಕೆಟ್ ಆಡುತ್ತಿದ್ದ ಮಕ್ಕಳು ಅದೆಷ್ಟೋ! ನಮ್ಮ ಬಾಲ್ಯ ಕಾಲದ ಕ್ರಿಕೆಟ್ ಹುಚ್ಚನ್ನು ನೆನಪಿಸಿಕೊಂಡರೆ, ಈಗಿನ ಆಧುನಿಕ ಮಕ್ಕಳು ಕ್ರಿಕೆಟ್ ಬಗ್ಗೆ ಅಷ್ಟೊಂದು ಆಸಕ್ತಿಯನ್ನು ತೋರುತ್ತಿಲ್ಲವೇನೋ ಎಂದು ನನ್ನ ಅನಿಸಿಕೆ.

ನಮ್ಮ ಓರಗೆಯ ಹುಡುಗರಿಗೆ ಹೋಲಿಸಿದರೆ, ನಾನು ಕ್ರಿಕೆಟ್ ನೋಡಲು ಆರಂಭಿಸಿದ್ದು ತುಸು ತಡವಾಗಿ. ಹಾಲಾಡಿ ಸರಕಾರಿ ಶಾಲೆಯಲ್ಲಿ ಏಳ ನೆಯ ತರಗತಿಯಲ್ಲಿದ್ದಾಗ ಒಂದು ದಿನ ನಮ್ಮ ಸಹ ಪಾಠಿಗಳು ಕ್ರಿಕೆಟ್ ಆಡೋಣ ಎಂದು ಹೇಳಿದಾಗ
ನಾನೂ ಸೇರಿಕೊಂಡೆ. ಟೆನ್ನಿಸ್ ಬಾಲ್, ಮರದ ಬ್ಯಾಟ, ಅಂಡರ್ ಹ್ಯಾಂಡ್ ಬೌಲಿಂಗ್! ವರ್ಷ ದಲ್ಲಿ ನಾಲ್ಕು ತಿಂಗಳು ಮಳೆ ಸುರಿಯುವಂತಹ ಹಾಲಾಡಿ ಅಂತಹ ಮಲೆನಾಡಿನ ಸೆರಗಿನಲಲಿರುವ ಊರುಗಳಲ್ಲಿ, ಕ್ರಿಕೆಟ್ ಅಥವಾ ಫುಟ್ಬಾಲ್ ಆಟ ಕಲಿ
ಯುವುದೇ ಸ್ವಲ್ಪ ಕಷ್ಟ.

ಅಲ್ಲಿನ ಅಂಡರ್ ಹ್ಯಾಂಡ್ ಬೌಲಿಂಗ್ ನಲ್ಲಿ ನಾನು ಯಾವ ರೀತಿ ಕ್ರಿಕೆಟ್ ಕಲಿತೆ ಎಂದು ಈಗ ಸರಿಯಾಗಿ ನೆನಪಿಲ್ಲ. ಆದರೆ ಎಂಟನೇ ಕ್ಲಾಸ್ ಓದಲು ಶಂಕರನಾರಾಯಣ ಹೈಸ್ಕೂಲಿಗೆ ಹೋದಾಗ ನನ್ನ ಕ್ರಿಕೆಟ್ ‘ಪ್ರತಿಭೆ’ ಅರಳಿತು! ಅಲ್ಲಿ ವಿದ್ಯಾರ್ಥಿಗಳೇ ಮಣ್ಣು ಹೊತ್ತು ನಿರ್ಮಿಸಿದ ವಿಶಾಲವಾದ ಉತ್ತಮ ಕ್ರಿಕೆಟ್ ಮೈದಾನವಿದೆ. ಎಂಟನೆಯ ತರಗತಿಗೆ ಸೇರಿದಾಗ ನಾನೂ ಸಹ
ಕ್ರಿಕೆಟ್ ಆಡುತ್ತೇನೆಂದು ಸಹಪಾಠಿಗಳ ಜತೆ ಸೇರಿಕೊಂಡು, ಮೊದಲ ಓವರ್ ಬೌಲ್ ಮಾಡಲು ಹೊರಟಾಗ, ಎಲ್ಲರೂ ಗೊಳ್ ಎಂದು ನಕ್ಕರು. ‘ಏ, ನಿನ್ನ ಅಂಡರ್ ಹ್ಯಾಂಡ್ ಬೌಲಿಂಗ್ ಇಲ್ಲಿ ನಡೆಯುವುದಿಲ್ಲ’ ಎಂದು ಕಪ್ತಾನನು ನನ್ನ ಕೈಯಿಂದ ಬಾಲ್
ಕಿತ್ತುಕೊಂಡ. ಹಾಲಾಡಿ ಶಾಲೆಯಲ್ಲಿ ನಾನು ಕಲಿತದ್ದು ಅಂಡರ್ ಹ್ಯಾಂಡ್ ಬೌಲಿಂಗ್. ಅದನ್ನು ಹೊರತುಪಡಿಸಿ, ಓವರ್ ಹ್ಯಾಂಡ್ ಬೌಲಿಂಗ್ (ಅಂದರೆ ಈಗ ನಾವೆಲ್ಲ ಟಿವಿಯಲ್ಲಿ ನೋಡುವ ಬೌಲಿಂಗ್) ಇತ್ತು ಎಂದೇ ನನಗೆ ಗೊತ್ತಿರಲಿಲ್ಲ! ಆಗ
ಟಿವಿ ಇನ್ನು ನಮ್ಮ ದೇಶಕ್ಕೆ ಬಂದಿರಲಿಲ್ಲವಲ್ಲ!

ಬೌಲಿಂಗ್ ಗೊತ್ತಿಲ್ಲದಿದ್ದರೇನು, ಬ್ಯಾಟಿಂಗ್‌ನಲ್ಲಿ ನನ್ನ ಕೌಶಲ ತೋರಿಸಿದಾಗ, ಹೈಸ್ಕೂಲಿನ ಹುಡುಗರೆಲ್ಲ ಬೆರಗಾದರು. ೧೦ನೆಯ ತರಗತಿಯ ಹುಡುಗರಿಗೆ ಸರಿಸಮನಾಗಿ, ಎಂಟನೆಯ ತರಗತಿಯಲ್ಲಿದ್ದ ನಾನು ಬ್ಯಾಟ್ ಬೀಸುತ್ತಿದ್ದೆ. ಅದೇ ಮೈದಾನದಲ್ಲಿ ಪಿಯುಸಿಯಲ್ಲಿರುವಾಗ ಕ್ರಿಕೆಟ್ ಆಡಿದರೂ, ಅದೇಕೋ ಅಲ್ಲಿ ಕ್ರಿಕೆಟ್ ತಂಡವೇ ಕ್ರಮೇಣ ನಿಷ್ಕ್ರಿಯವಾಗಿದ್ದರಿಂದ, ಬೇರೆ ಆಟಗಳು ಅಲ್ಲಿ ಮುನ್ನೆಲೆಗೆ ಬಂದವು.

ಇಷ್ಟು ದಿನ ನಾವೆಲ್ಲ ಆಡುತ್ತಿದ್ದುದು ಟೆನಿಸ್ ಬಾಲ್ ಕ್ರಿಕೆಟ್. ಮುಂದೆ ಕಾಲೇಜಿಗೆ ಬಂದಾಗ, ಲೆದರ್ ಬಾಲ್ ಕ್ರಿಕೆಟ್ ನೋಡುವ ಅವಕಾಶವಾಯಿತು. ಕಾಲೇಜಿನ ತಂಡಕ್ಕೆ ಸೇರಲು ನಾನು ಆಸೆಪಟ್ಟರೂ, ಪ್ಯಾಡ್ ಕಟ್ಟಿ, ಸೆಂಟರ್ ಪ್ಯಾಡ್ ಸಿಕ್ಕಿಸಿಕೊಂಡು, ಗ್ಲೌಸ್ ಧರಿಸಿ ಆಡಲು ಅದೇಕೋ ಹಿಂಜರಿಕೆ. ಪಕ್ಕಾ ಹಳ್ಳಿಯಿಂದ ಬಂದ ನಾನು, ಅಲ್ಲಿನ ಪೇಟೆ ಹುಡುಗರ ಜೊತೆ ಬೆರೆತು ಆಡಲು ಹಿಂದೆ ಬಿದ್ದಾನೇನೀ! ನನ್ನ ದೇಹದ ಗಾತ್ರಕ್ಕೆ ಹೋಲಿಸಿದಾಗ ಕ್ರಿಕೆಟ್ ಪ್ಯಾಡುಗಳ ತೂಕವೇ ಅಧಿಕ, ಬ್ಯಾಟ್ ಇನ್ನಷ್ಟು ತೂಕ. ಒಂದೆರಡು ದಿನ ಅವರ ಜತೆ ಆಡಿ ಸುಮ್ಮನಾದೆ.

ಡಿಗ್ರಿ ಮುಗಿಸಿ ಒಂದು ವರ್ಷ ನಿರುದ್ಯೋಗಿಯಾಗಿ ಮನೆಯಲ್ಲಿದ್ದಾಗ, ಹಳ್ಳಿ ಕ್ರಿಕೆಟ್ ಆಡುವ ಅವಕಾಶ. ಹಾಡಿ, ಹಕ್ಕಲು, ಗುಡ್ಡ, ಗದ್ದೆಗಳ ನಡುವೆ ಇದ್ದ ನಮ್ಮ ಮನೆಯಿಂದ, ಗುಡ್ಡದ ದಾರಿಯಲ್ಲಿ ಎರಡು ಕಿ.ಮೀ. ನಡೆದರೆ ಬಸ್ ರಸ್ತೆ ಸಿಗುತ್ತದೆ. ಅದು ಹೈಕಾಡಿ ಎಂಬ ಸಣ್ಣ ಪೇಟೆ. ನಮ್ಮ ಮನೆಯ ಸುತ್ತಲಿನ ಗೆಳೆಯರು ಮತ್ತು ಹೈಕಾಡಿ ಹುಡುಗರ ನಡುವೆ ಕ್ರಿಕೆಟ್ ಮ್ಯಾಚ್! ಈ ನಡುವೆ ಓವರ್ ಹ್ಯಾಂಡ್ ಬೌಲಿಂಗ್ ಕಲಿತಿದ್ದ ನಾನು, ಹೈಕಾಡಿ ತಂಡದ ವಿರುದ್ಧ ಆಡಿದ ಒಂದೇ ಮ್ಯಾಚಿನಲ್ಲಿ ೧೬ ಓವರ್ ಬೌಲಿಂಗ್ ಮಾಡಿದ್ದೆ!

ಆಗ ಎರಡು ಇನಿಂಗ್ಸ್ ಆಟ. ಒಬ್ಬ ಬೌಲರ್‌ಗೆ ಇಂತಿಷ್ಟೇ ಓವರ್ ಎಂಬ ಮಿತಿ ಇರಲಿಲ್ಲ. ನನ್ನ ಬೌಲಿಂಗ್‌ನಲ್ಲಿ ಒಂದರ ಹಿಂದೆ ಒಂದರಂತೆ ಹೈಕಾಡಿ ತಂಡದ ವಿಕೆಟ್ ಬೀಳುತ್ತಲೇ ಇದ್ದುದನ್ನು ಕಂಡು, ನಮ್ಮ ಕಪ್ತಾನ ಹಾಲಂಬಿಯವರು ನನ್ನಿಂದ ೧೬ ಓವರ್ ಬೌಲಿಂಗ್ ಮಾಡಿಸಿದ್ದರು! ಮರುದಿನ ಮೈ, ಕೈ, ಕಾಲು, ಭುಜದ ಎಲ್ಲಾ ಕಡೆ ನೋವೇ ನೋವು! ‘ಕ್ರಿಕೆಟ್ ಆಡಲು ಮಳೆ ಕಾಟ ಮಾರಾಯರೇ. ವರ್ಷದಲ್ಲಿ ನಾಲ್ಕು ತಿಂಗಳು ಮಳೆ’ ಎನ್ನುತ್ತಾ ನಮ್ಮೂರಿನಲ್ಲಿ ಹೊರಾಂಗಣ ಆಟ ಆಡಲು ಇದ್ದ ತೊಡಕು ಗಳನ್ನು ಪಟ್ಟಿ ಮಾಡುತ್ತಾ, ಇನ್ನಷ್ಟು ಕ್ರಿಕೆಟ್ ಆಡಲು ನಮ್ಮೂರಿನ ಹವಾಮಾನ ಅವಕಾಶ ನೀಡುವುದಿಲ್ಲ ಎಂದು, ಆಗ ನಾವು ಗೆಳೆಯರು ಮಾತನಾಡಿಕೊಳ್ಳುತ್ತಿದ್ದುಂಟು.

ಅದನ್ನು ಕೇಳಿಸಿಕೊಂಡನೋ ಏನೋ, ಆ ದೇವರು, ನನ್ನನ್ನು ದೂರದ ಕಣಕಟ್ಟೆ ಎಂಬ ಹಳ್ಳಿಗೆ ಸಾಗಿಸಿದ. ವರ್ಷದಲ್ಲಿ ಕೇವಲ
ನಾಲ್ಕಾರು ದಿನ ಮಾತ್ರ ಮಳೆ ಬೀಳುವ, ಬಯಲು ಸೀಮೆಯ ಹೃದಯ ಭಾಗದಲ್ಲಿದ್ದ ಕಣಕಟ್ಟೆಯಲ್ಲಿ, ವರ್ಷವಿಡೀ ಯಾವುದೇ ಹೊರಾಂಗಣ ಆಟ ಆಡಬಹುದಿತ್ತು! ಆ ಹಳ್ಳಿಯಲ್ಲಿ ಕೆಲವು ವರ್ಷ ಇದ್ದ ನಾನು, ಸ್ಥಳೀಯ ಹುಡುಗರ ಜೊತೆ ಸೇರಿ ಅದೆಷ್ಟು
ಕ್ರಿಕೆಟ್ ಆಡಿದೆನೋ ಲೆಕ್ಕವಿಲ್ಲ. ಪ್ರತಿ ಸಂಜೆ ಒಂದರಿಂದ ಎರಡು ಗಂಟೆ ಅಲ್ಲಿ ಕ್ರಿಕೆಟ್ ಆಡುತ್ತಿದ್ದುದುಂಟು. ಅಲ್ಲಿದ್ದ ವಿಶಾಲ ಮೈದಾನವು ಅದಕ್ಕೆ ಇಂಬುಕೊಟ್ಟಿತ್ತು.

ಟೆನ್ನಿಸ್ ಬಾಲ್ ಕ್ರಿಕೆಟ್, ಲೆದರ್ ಬಾಲ್ ಕ್ರಿಕೆಟ್ ಜತೆಗೆ, ನನಗೆ ‘ಕಾರ್ಕ್‌ಬಾಲ್’ ಕ್ರಿಕೆಟ್ ಪರಿಚಯವಾಗಿದ್ದು ಇ! ಅಂತಾ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಗಳಲ್ಲಿ ಇಂದು ಬಳಕೆಯಲ್ಲಿರುವ ಲೆದರ್ ಬಾಲನ್ನು ಸುಮಾರಾಗಿ ಹೋಲುವ ಕಾರ್ಕ್
ಬಾಲ್ ಉಪಯೋಗಿಸಿ, ಕ್ರಿಕೆಟ್ ಆಡುವ ಅಭ್ಯಾಸ ಆ ಪ್ರದೇಶದಲ್ಲಿತ್ತು. ಮೊದಲ ಬಾರಿ ಕಾರ್ಕ್‌ಬಾಲ್ ಎದುರಿಸಿ ಬ್ಯಾಟ್ ಬೀಸಿದಾಗ, ‘ಟಕ್’ ಎಂಬ ಶಬ್ದದೊಂದಿಗೆ ಬಾಲು ಬೌಂಡರಿ ಗೆರೆ ದಾಟಿದ್ದೇ ಗೊತ್ತಾಗಲಿಲ್ಲ! ಅಷ್ಟು ದೂರದಿಂದ ಓಡೋಡಿ
ಬಂದು ಬಾಲ್ ಎಸೆದಾಗ, ಅದು ಚಲಿಸುವ ವೇಗ ಕಂಡೇ ಅಚ್ಚರಿ.

ಟೆನ್ನಿಸ್ ಬಾಲ್ ಕ್ರಿಕೆಟ್‌ನ ಹೊಡೆಯುವ ಬೌಂಡರಿಗೆ ಹೋಲಿಸಿದರೆ, ಕಾಕ್ ಬಾಲ್‌ನಿಂದ ಬೌಂಡರಿ ಬಾರಿಸುವುದು ಸುಲಭ!
ಆದರೆ ಕೈಗೋ ಕಾಲಿಗೋ ಕಾರ್ಕ್‌ಬಾಲ್ ತಗುಲಿದರೆ, ‘ಅಯ್ಯಯ್ಯಪ್ಪೋ’ ಎನ್ನುವಷ್ಟು ನೋವು! ಶರವೇಗದಿಂದ ಬರುವ ಕಾರ್ಕ್‌ಬಾಲ್ ಬೌಲಿಂಗ್ ಗೆ, ಲೆದರ್ ಬಾಲಿಗೆ ನೀಡುವಷ್ಟೇ ಗೌರವ ಕೊಡ ಬೇಕು.

ಇಲ್ಲವಾದರೆ ಹಲ್ಲು ಮುರಿದುಕೊಳ್ಳುವುದು ಖಚಿತ. ನನ್ನ ಮೂತಿಗೆ ಒಮ್ಮೆ ಆ ಬಾಲು ತಾಗಿ ಮುಖದ ಶೇಪ್ ಬದಲಾಗಿತ್ತು! ಮತ್ತೊಮ್ಮೆ ಗಲ್ಲಕ್ಕೆ ತಾಗಿ ಗಾಯ ರಕ್ತದಾನ. ಕಾಲು, ಕೈಗಳಿಗೆ ತಾಗಿದ್ದೆಷ್ಟು ಲೆಕ್ಕವೇ ಇಲ್ಲ. ಸೆಂಟರ್ ಪ್ಯಾಡ್ ಧರಿಸದೆ ಇದ್ದಾಗ
ಕಲ್ಲಿನ ರೀತಿಯ ಆ ಕಾರ್ಕ್ ಬಾಲ್ ಸ್ವಲ್ಪ ತಗುಲಿದರೂ, ಪ್ರಾಣ ಹೋಗುವಂತಹ ನೋವು. ತಲೆಗೆ ಬಾಲ್ ತಗುಲಿ ನಮ್ಮ ಜತೆಗಾರರು ಬಿದ್ದುಬಿಟ್ಟದ್ದುಂಟು. ಅಲ್ಲೇ ಒಬ್ಬರ ಮುಂಗೈಗೆ ಬಾಲ್ ತಗುಲಿ ಫ್ಯಾಕ್ಚರ್ ಆಗಿತ್ತು!

ಆದರೂ ನಮ್ಮ ಕ್ರಿಕೆಟ್ ಹುಚ್ಚು ಎಷ್ಟು ಎಂದರೆ, ದಿನಾ ಸಂಜೆ ಆಟ, ಆಗಾಗ ಅಕ್ಕಪಕ್ಕದ ಹಳ್ಳಿಯವರ ಜೊತೆ ‘ಫ್ರೆಂಡ್ಲಿ ಮ್ಯಾಚ್’. ಪಂಚನಹಳ್ಳಿ, ಜಾವಗಲ್, ಬಾಣಾವರ, ದೇವನೂರು, ಶ್ರೀರಾಂಪುರ, ಮೇಟಿಕುರ್ಕೆ, ಕೆ.ಬಿದರೆ ಈ ರೀತಿ ಹಲವು ಹಳ್ಳಿಗ ಳೊಂದಿಗೆ ಕ್ರಿಕೆಟ್ ಆಡಿದ ನೆನಪು ಮಧುರ. ಅಲ್ಲಿನ ಹುಡುಗರು ಊಟ, ತಿಂಡಿ ಮರೆತು ಕ್ರಿಕೆಟ್ ಆಡುತ್ತಿದ್ದರು!

ಕ್ರಮೇಣ ಕಾರ್ಕ್‌ಬಾಲ್ ಹೋಗಿ, ಅಲ್ಲೂ ಟೆನಿಸ್ ಬಾಲ್ ಕ್ರಿಕೆಟ್ ಆರಂಭವಾಯಿತು. ಎರಡು ಇನ್ನಿಂಗ್ಸ್‌ನ ದಿನವಿಡೀ ನಡೆಯುವ ಆಟ ಮರೆಯಾಗಿ, ಹತ್ತು ಓವರ್ ಮ್ಯಾಚ್ ಆರಂಭವಾಯಿತು. ಇಷ್ಟು ಹೊತ್ತಿಗೆ ಊರಿಗೆ ಕಲರ್ ಟಿವಿ ಬಂದಿತ್ತು, ಕ್ರಿಕೆಟ್‌ನ ಗಂಧ ಗಾಳಿಗೊತ್ತಿಲ್ಲದೇ ಇದ್ದವರು ಮನೆಯಲ್ಲಿ ಕುಳಿತು ಮ್ಯಾಚ್ ನೋಡಿ, ಆ ವಿದೇಶಿ ಆಟದ ನಿಯಮಗಳನ್ನು ಪಟ್ಟುಗಳನ್ನು ಕಲಿತರು. ಎಷ್ಟರಮಟ್ಟಿಗೆ ಎಂದರೆ, ಜೀವಮಾನ ದದ್ದಕ್ಕೂ ಒಂದೇ ಒಂದು ಕ್ರಿಕೆಟ್ ಮ್ಯಾಚ್ ಆಡದೇ ಇದ್ದವರು ಸಹ, ಕಪಿಲನ ಸಿಕ್ಸರಿಗೆ ವ್ಯಾಖ್ಯಾನ ನೀಡುವಂತಾದರು.

ಕನ್ನಡದ ಕವಿ ಬಿ ಆರ್ ಎಲ್ ‘ಕಪಿಲದ ಸಿಕ್ಸರಿನಂತೆ..’ ಎಂಬ ಪದಗಳನ್ನು ತಮ್ಮ ಪದ್ಯದಲ್ಲಿ ಸೇರಿಸಿ ಆ ಹಾಡು ಜನಪ್ರಿಯವೂ
ಆಯಿತು. ೧೯೮೩ರಲ್ಲಿ ಕಪಿಲ್ ದೇವ್ ನೇತೃತ್ವದ ನಮ್ಮ ದೇಶದ ತಂಡ, ವಿಶ್ವ ಕಪ್ ಕ್ರಿಕೆಟ್ ಗೆದ್ದ ಯಶಸ್ಸಿನಿಂದಾಗಿ, ಹಳ್ಳಿ ಹಳ್ಳಿಗಳಲ್ಲೂ ಕ್ರಿಕೆಟ್ ಗಾಳಿ ಬಲವಾಗಿ ಬೀಸತೊಡಗಿತು. ಇದನ್ನೆಲ್ಲಾ ನೆನಪಿಸಿಕೊಂಡರೆ, ಕ್ರಿಕೆಟ್ ಹುಚ್ಚು ನಮ್ಮ ದೇಶದಲ್ಲಿ ಈಗ ಕಡಿಮೆಯಾಗಿದೆಯೇನೋ ಎನಿಸುತ್ತಿದೆ.

ಇಂಗ್ಲೀಷರು ನಮಗೆ ಕಲಿಸಿದ ಆಟವಾದರೂ, ಇಂಗ್ಲಿಷ್ ಕಲಿಯುತ್ತಿರುವ ಇಂದಿನ ಹುಡುಗರು ಕ್ರಿಕೆಟ್‌ನ ಹುಚ್ಚನ್ನು ಅಷ್ಟಾಗಿ ಹತ್ತಿಸಿಕೊಳ್ಳುತ್ತಿಲ್ಲ. ಫುಟ್ಬಾಲ್ ಮೊದಲಾದ ಆಟಗಳು, ಹಿಂದಿಗಿಂತ ಹೆಚ್ಚು ಜನರ ಗಮನ ಸೆಳೆಯುತ್ತಿವೆ. ಜತೆಗೆ ಆನ್‌ಲೈನ್ ಆಟಗಳು ಮಕ್ಕಳ ಮನಸೆಳೆದು ಅವರನ್ನು ಕ್ರಿಕೆಟ್ ಮೈದಾನದತ್ತ ಹೋಗದಂತೆ ಮಾಡುತ್ತಿವೆ. ಕ್ರಿಕೆಟ್ ಆಡುವ ಹುಚ್ಚು ಕಡಿಮೆ
ಯಾಗಿ, ಟಿ೨೦, ಐಪಿಎಲ್ ನಂತಹ ಆಟಗಳನ್ನು ನೋಡುವ ಹುಚ್ಚು ಹೆಚ್ಚಾಗುತ್ತಿದೆ! ಅಲ್ಲವೆ?