ಸಂಸ್ಮರಣೆ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ತಮ್ಮೆಲ್ಲಾ ಸಾಧನೆಗಳ ನಡುವೆಯೂ ವಿಪುಲವಾಗಿ ಗ್ರಂಥ, ಲೇಖನಗಳನ್ನು ಬರೆದು ಪ್ರಕಟಿಸುತ್ತಿದ್ದ ಕಾರಂತರಿಗೆ ಸ್ವಾತಂತ್ಯೋತ್ತರ ಭಾರತದ ರಾಜಕೀಯವು ಅತೃಪ್ತಿಯನ್ನುಂಟುಮಾಡಿತ್ತು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿದ್ದ ಪಕ್ಷದ ಕುರಿತೇ ಭ್ರಮನಿರಸನಗೊಂಡರು.
ಶಿವರಾಮ ಕಾರಂತರನ್ನು ಕನ್ನಡ ಸಾಹಿತ್ಯ ಲೋಕದ ವಿಸ್ಮಯ ಎಂದೇ ಬಣ್ಣಿಸಬೇಕಾಗುತ್ತದೆ. ಕನ್ನಡ ಸಾಹಿತ್ಯ ಲೋಕದಲ್ಲಿನ ತಮ್ಮ ವಿಶಿಷ್ಟ ಸಾಧನೆಗಳಿಂದ ಜನಮನವನ್ನು ಸೂರೆಗೊಂಡ, ಕನ್ನಡದ ಮೂರನೆಯ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಕಾರಂತರು ೨೦ನೇ ಶತಮಾನದ ಶ್ರೇಷ್ಠ ಸಾಹಿತಿ ಮತ್ತು ಹತ್ತು ಹಲವು ಕ್ಷೇತ್ರಗಳಲ್ಲಿ ವಿಹರಿಸಿರುವ ದೈತ್ಯ ಪ್ರತಿಭೆ. ಆಡು ಮುಟ್ಟದ ಸೊಪ್ಪಿಲ್ಲ; ಕಾರಂತರು ಮುಟ್ಟದ ವಿಷಯವಿಲ್ಲ. ಈ
ಜಗತ್ತಿನಲ್ಲಿ ಅವರನ್ನು ಸರಿಗಟ್ಟಬಲ್ಲ ಸಾಹಿತಿಗಳು ಬಹಳ ವಿರಳ.
ಅವರದ್ದು ಅಭೂತಪೂರ್ವ ವಿಕ್ರಮ ಮತ್ತು ಏಕಮೇವಾದ್ವೀತಿಯ ಸಾಹಸ. ಸಮಾಜವನ್ನು ಅವರಂತೆ ಹಚ್ಚಿ ಕೊಂಡವರು ತುಂಬಾ ವಿರಳ. ಈ ಕಳಕಳಿಯೇ ಅವರನ್ನು ಹಲವು ಕ್ಷೇತ್ರಗಳತ್ತ ಕೊಂಡೊಯ್ದಿತು. ಅವರ ಹಲವು ಕಾದಂಬರಿಗಳು ಯಾವುದೇ ಭಾಷೆಗೆ ಭೂಷಣಪ್ರಾಯವಾಗುವಂಥವು. ಯಕ್ಷಗಾನಕ್ಕೆ ಕಾಯಕಲ್ಪ ನೀಡಿದ ಶ್ರೇಯಸ್ಸು ಕಾರಂತರಿಗೆ ಸಲ್ಲುತ್ತದೆ. ಕನ್ನಡದ ಸೊಗಡನ್ನು ಜಗತ್ತಿನೆಲ್ಲೆಡೆ ಹರಡಿದ ಕೀರ್ತಿಯೂ ಅವರಿಗೆ ಸಲ್ಲಬೇಕು. ದೇಶ ವಿದೇಶಗಳ ಸಂಘ-ಸಂಸ್ಥೆಗಳು, ವಿಶ್ವವಿದ್ಯಾಲಯ ಗಳಿಂದ ಅವರ ಹಾಗೆ ಸನ್ಮಾನಿತರಾಗಿರುವ ಸಾಹಿತಿ ಗಳು ತೀರಾ ಅಪರೂಪ.
೧೯೦೨ರ ಅಕ್ಟೋಬರ್ ೧೦ರಂದು ಉಡುಪಿ ಜಿಲ್ಲೆಯ ಕೋಟದಲ್ಲಿ ಜನನ. ೧೯೨೧ರಲ್ಲಿ ಕಾಲೇಜು ಶಿಕ್ಷಣಕ್ಕೆ ವಿದಾಯ ಹೇಳಿ ಅಸಹಕಾರ ಚಳವಳಿಯಲ್ಲಿ
ಭಾಗಿಯಾದರು. ೧೯೨೩ರಲ್ಲಿ ‘ವಸಂತ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಮೂಕಿ ಚಲನಚಿತ್ರಗಳ ನಿರ್ಮಾಣ, ಬಾಲಭವನ ಶಾಲೆಯ ಸ್ಥಾಪನೆ, ಲೀಲಾ ಅವರೊಡನೆ ಅಂತರ್ಜಾತಿ ವಿವಾಹ, ೧೯೫೧ರಲ್ಲಿ ‘ವಿಚಾರವಾಣಿ’ ಪತ್ರಿಕೆಯ ಪ್ರಾರಂಭ, ೧೯೫೭ರಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಸೋಲು, ಯಕ್ಷಗಾನ ಶಾಲೆಗಳ ಸ್ಥಾಪನೆ, ೧೯೭೭-೭೮ರಲ್ಲಿ ‘ಕುಡಿಯರ ಕೂಸು’ ಕೃತಿ ಆಧರಿತ ‘ಮಲೆಯ ಮಕ್ಕಳು’ ಚಿತ್ರದ ನಿರ್ಮಾಣ, ೧೯೮೯ರಲ್ಲಿ ಸಂಸತ್ ಸದಸ್ಯತ್ವಕ್ಕೆ ಸ್ಪರ್ಧಿಸಿ ಸೋಲು ಇವು ಅವರ ಜೀವನದ ಕೆಲವು ಮಹತ್ವದ ಕಾಲಘಟ್ಟಗಳು.
ಕಾದಂಬರಿ ಅವರ ಮುಖ್ಯ ಸಾಹಿತ್ಯ ಪ್ರಕಾರವಾಗಿದ್ದರೂ ಕಾವ್ಯ, ನಾಟಕ, ಸಣ್ಣ ಕಥೆ, ಹರಟೆ, ವಿಡಂಬನೆ, ಬಾಲ ಸಾಹಿತ್ಯ, ವಿಚಾರ ಸಾಹಿತ್ಯ, ಯಕ್ಷಗಾನ, ಚಿತ್ರಕಲೆ, ಶಿಲ್ಪ ಮತ್ತು ವಾಸ್ತು, ವಯಸ್ಕರ ಶಿಕ್ಷಣ, ಪ್ರವಾಸ ಕಥನ, ಜೀವನ ಚರಿತ್ರೆ, ಆತ್ಮಕಥೆ, ನಿಘಂಟು ಪತ್ರಿಕೋದ್ಯಮ, ಸಂವಾದ, ಅನುವಾದ, ವಿಜ್ಞಾನ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ವಿಹರಿಸಿರುವ ದೈತ್ಯ ಪ್ರತಿಭೆ ಅವರು. ಶಿವರಾಮ ಕಾರಂತರ ಒಟ್ಟು ಕೃತಿಗಳು ೪೧೭, ಅದರಲ್ಲಿ ೪೫ ಕಾದಂಬರಿಗಳು ಮತ್ತು ೨೩೧ ಬಾಲ ಸಾಹಿತ್ಯ. ಚೋಮನ ದುಡಿ, ಅಳಿದ ಮೇಲೆ, ಸರಸಮ್ಮನ ಸಮಾಧಿ, ಮರಳಿ ಮಣ್ಣಿಗೆ, ಔದಾರ್ಯದ ಉರುಳಲ್ಲಿ, ಸಮೀಕ್ಷೆ, ಕುಡಿಯರ ಕೂಸು, ಬೆಟ್ಟದ ಜೀವ, ಮೂಕಜ್ಜಿಯ ಕನಸುಗಳು, ಮೈಮನಗಳ ಸುಳಿಯಲ್ಲಿ, ಸನ್ಯಾಸಿಯ ಬದುಕು ಈ ಪೈಕಿ ಪ್ರಮುಖವಾದವುಗಳು.
‘ಮೂಕಜ್ಜಿಯ ಕನಸುಗಳು’ ಕಾದಂಬರಿಯು ಕಾರಂತರಿಗೆ ೧೯೭೮ರ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿತು. ಕನ್ನಡದ ಮಹತ್ವದ ಕಾದಂಬರಿಗಳಲ್ಲಿ ಇದು ಒಂದಾಗಿದೆ. ಇದು ಕಾರಂತರ ಖ್ಯಾತಿಯನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿತು. ಕನ್ನಡ ಭಾಷಾ ಸಾಹಿತ್ಯದ ಪರಿಧಿಯನ್ನು
ವಿಸ್ತರಿಸಿ, ಉನ್ನತ ಶಿಖರವನ್ನು ಏರಿದ ವ್ಯಕ್ತಿತ್ವ ಕಾರಂತರದ್ದಾಗಿದೆ. ಮೂಕಜ್ಜಿಯ ಕನಸುಗಳು ಒಂದು ವಿಶಿಷ್ಟ ಕಾದಂಬರಿ. ವೈಚಾರಿಕತೆ ಮತ್ತು
ಮಾನವೀಯತೆಯ ಸಮನ್ವಯದ ಕಥಾನಾಯಕಿ ಹಿಂದೂ ಧರ್ಮದ ಬೆಳವಣಿಗೆಯ ಇತಿಹಾಸವನ್ನು ಬಿಚ್ಚಿ ತೋರಿಸುತ್ತಾಳೆ.
ಆಚರಣೆಯಲ್ಲಿರುವ ಕುರುಡು ನಂಬಿಕೆ, ಧಾರ್ಮಿಕ ಡಂಭಾಚಾರಗಳನ್ನು ನಿರ್ದಾಕ್ಷಿಣ್ಯವಾಗಿ ಬಯಲಿಗೆಳೆಯುವ ಈ ಕಥಾನಾಯಕಿ ಮಾನವೀಯತೆಯ ಸಾಕಾರ ಮೂರ್ತಿಯಾಗಿದ್ದಾಳೆ. ಇನ್ನೊಬ್ಬರಿಗೆ ಅನ್ಯಾಯವಾಗದ ರೀತಿ ಯಲ್ಲಿ ಬದುಕುವುದು, ಪರರಿಗೆ ಸುಖಕೊಡಲು ಬಾರದೆ ಹೋದರೆ ದುಃಖ ಕೊಡದೆ ಇರುವುದು ಎನ್ನುವ ತತ್ತ್ವವನ್ನು ಮೂಕಜ್ಜಿ ಪ್ರತಿಪಾದಿಸುತ್ತಾಳೆ. ಮೂಢನಂಬಿಕೆಯನ್ನು ನಿವಾರಿಸಿ, ಸಮಾಜವನ್ನು ಉದ್ಧರಿಸುವ ಕನಸನ್ನು ಕಾರಂತರು ಹೆಣೆಯ ತೊಡಗಿದರು. ಅಸ್ಪೃಶ್ಯತೆಯ ನಿವಾರಣೆಗಾಗಿ, ಹಳ್ಳಿಗರಲ್ಲಿ ಗಾಢವಾಗಿ ಆಚರಣೆಯಲ್ಲಿರುವ ಮೂಢನಂಬಿಕೆಗಳ ವಿರುದ್ಧ ಜನಜಾಗೃತಿ ಮೂಡಿ
ಸಲು, ಮದ್ಯಪಾನ ಮತ್ತಿತರ ದುಶ್ಚಟಗಳ ವಿರುದ್ಧ ಜನರಿಗೆ ಶಿಕ್ಷಣ ನೀಡುವ ಸಲುವಾಗಿ ಸ್ವತಃ ನಾಟಕಗಳನ್ನು ಬರೆದು ನಿರ್ದೇಶಿಸಿ ನಟಿಸಿ ಪ್ರದರ್ಶಿಸ
ಲಾರಂಭಿಸಿದರು.
ಕುಡಿಯುವ ನೀರಿನ ಮಹತ್ವ, ಗ್ರಾಮೀಣ ನೈರ್ಮಲ್ಯ, ಪರಿಸರ ಶುಚಿತ್ವ ಮತ್ತು ಆರೋಗ್ಯ ರಕ್ಷಣಾ ಸೂತ್ರಗಳ ಕುರಿತು ಹಳ್ಳಿಗರಿಗೆ ಉಪನ್ಯಾಸ, ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಸಿ ಜನಶಿಕ್ಷಣ ಕಾರ್ಯಕ್ರಮಗಳನ್ನು ಕೈಗೊಂಡರು. ಮಡಿ ಮಡಿಯೆಂದು ಜಪಿಸುತ್ತಿದ್ದ ಸಮುದಾಯದಲ್ಲಿ ಹುಟ್ಟಿದರೂ ೧೯೩೬ರಲ್ಲಿ ಸಂಪ್ರದಾಯಬದ್ಧ ಸಮಾಜಕ್ಕೆ ಚಾಟಿಯೇಟನ್ನು ನೀಡುವ ತೆರದಲ್ಲಿ ಅಂತರ್ಜಾತಿ ವಿವಾಹಕ್ಕೆ ಒಳಗಾಗಿ ಲೀಲಾ ಎಂಬಾಕೆಯನ್ನು ಬಾಳ ಸಂಗಾತಿಯನ್ನಾಗಿ ಮಾಡಿಕೊಂಡು ಸುದೀರ್ಘ ೫೦ ವರ್ಷಗಳ ದಾಂಪತ್ಯ ಜೀವನವನ್ನು ಸಾಗಿಸಿದರು.
ಈ ಎಲ್ಲಾ ಸಾಧನೆಗಳ ನಡುವೆಯೂ ವಿಪುಲವಾಗಿ ಗ್ರಂಥಗಳನ್ನು, ಲೇಖನಗಳನ್ನು ಬರೆದು ಪ್ರಕಟಿಸುತ್ತಿದ್ದ ಕಾರಂತರಿಗೆ ಸ್ವಾತಂತ್ರ್ಯೋತ್ತರ ಭಾರತದ
ರಾಜಕೀಯವು ಅತೃಪ್ತಿಯನ್ನುಂಟುಮಾಡಿತ್ತು. ದೇಶದ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ಮತ್ತು ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ
ಪಕ್ಷದ ಮೇಲೆಯೇ ಕಾರಂತರು ಭ್ರಮನಿರಸನರಾದರು. ತಮ್ಮ ರಾಜಕೀಯ ಪ್ರಣಾಳಿಕೆಯ ಪ್ರಚಾರಕ್ಕಾಗಿ ೧೯೫೧ರಲ್ಲಿ ‘ವಿಚಾರವಾಣಿ’ ಎಂಬ ಕನ್ನಡ
ಪತ್ರಿಕೆಯನ್ನು ಹೊರಡಿಸಿದರು. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗವಹಿಸಿದರು.
ಯಕ್ಷಗಾನ ಕಲೆ ಅವರನ್ನು ಆಕರ್ಷಿಸಿತ್ತು. ಅದರ ಹುಟ್ಟು, ಬೆಳವಣಿಗೆ, ಕಾಲ, ಆಳ, ಅಗಲದಂಥ ವಿಚಾರಗಳ ಕುರಿತು ವ್ಯಾಕಕ ಸಂಶೋಧನೆ ಮಾಡಿ
೧೯೫೭ರಲ್ಲಿ ‘ಯಕ್ಷಗಾನ ಬಯಲಾಟ’ವೆಂಬ ಗ್ರಂಥ ವನ್ನು ರಚಿಸಿದರು. ಈ ಗ್ರಂಥಕ್ಕೆ ಸ್ಟಾಕ್‌ಹೋಮ್‌ನ ಇಂಟರ್ ನ್ಯಾಷನಲ್ ಆರ್ಕೈವ್ಸ್‌ನ ಬಹುಮಾನ
ಕಾರಂತರಿಗೆ ಲಭ್ಯವಾಯಿತು. ಹೆಚ್ಚು ಕಡಿಮೆ ೨೦ನೆಯ ಶತಮಾನದುದ್ದಕ್ಕೂ ಮೈವೆತ್ತು ನಿಂತ, ದಿಗಂತದೆತ್ತರಕ್ಕೂ ತನ್ನ ಕನಸುಗಳನ್ನು ಹೆಣೆದು
ಕಾರ್ಯರೂಪಕ್ಕಿಳಿಸಿದ ಮಹಾನ್ ವ್ಯಕ್ತಿ ಮತ್ತು ಶಕ್ತಿಯೇ ಶಿವರಾಮ ಕಾರಂತರು.
ಗಾಂಧೀಜಿಯವರ ನಡವಳಿಕೆ, ಮನೋಧರ್ಮ, ಆದರ್ಶ, ಬರಹ, ಉಪದೇಶಗಳ ತರ್ಕಸರಣಿಯನ್ನು ಕಣ್ಮುಚ್ಚಿ ಒಪ್ಪಿಕೊಂಡು, ರಾಷ್ಟ್ರೀಯ ಸ್ವಾತಂತ್ರ್ಯ
ಚಳವಳಿಯಲ್ಲಿ ಪಾಲ್ಗೊಂಡು, ಸಮಾಜ ಸುಧಾರಣೆಯ ಕನಸುಗಳನ್ನು ಹೊತ್ತುಕೊಂಡು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅಂದಿನಿಂದ ಕಾರಂತರಿಗೆ ಬದುಕೇ ಶಿಕ್ಷಣ ಶಾಲೆಯಾಯಿತು. ದೇಶಸೇವೆ, ಸಂಚಾರಗಳೇ ಉದ್ಯೋಗವಾದವು. ಸ್ವಾತಂತ್ರ್ಯ ಹೋರಾಟದ ರಾಷ್ಟ್ರೀಯ ಧ್ಯೇಯ ಧೋರಣೆಗಳನ್ನು ಜನರಿಗೆ ತಿಳಿಸಲು ಊರಿಂದೂರಿಗೆ ಅಲೆದಾಡುತ್ತಾ ಉಪನ್ಯಾಸ ಮಾಡತೊಡಗಿದರು.
ದೇಶಿ ಕಾಗದ, ಪೆನ್ಸಿಲ್, ದೇಶಿ ಸಾಬೂನು, ವಿದ್ಯಾರ್ಥಿಗಳ ನೋಟ್ ಪುಸ್ತಕಗಳನ್ನು ಮಾರುತ್ತಾ ಸ್ವದೇಶಿ ಚಳವಳಿಯಲ್ಲಿ ಕ್ರಿಯಾತ್ಮಕವಾಗಿ ಪಾಲ್ಗೊಂಡರು. ಹೀಗೆ ಸಂಗ್ರಹವಾದ ಹಣವನ್ನು ಗಾಂಧಿ ಫಂಡ್‌ಗೆ ನೀಡತೊಡಗಿದರು. ತಮ್ಮ ಉತ್ಸಾಹ, ವಿಶಿಷ್ಟ ಪ್ರತಿಭೆ, ದಣಿವರಿಯದ ಹಂಬಲ, ಆದರ್ಶ, ಆಕಾಂಕ್ಷೆಗಳಿಂದಾಗಿ ಆರ್ಥಿಕ ನೆಲೆಗಟ್ಟಿನ ಮತ್ತು ಇನ್ನಿತರ ಸೋಲುಗಳನ್ನು ಕಾರಂತರು ಆಹ್ವಾನಿಸಿಕೊಂಡರೂ ಅವು ಅವರನ್ನು ಧೃತಿಗೆಡಿ
ಸಲಿಲ್ಲ. ಬರಹ ಭಾಷಣಗಳಿಗಷ್ಟೇ ತೃಪ್ತಿಗೊಳ್ಳದೆ ವಿವಿಧ ರಂಗ ಪ್ರಯೋಗಗಳ ಮೂಲಕ ರಂಗ ಭೂಮಿಯ ಇತಿಹಾಸಕ್ಕೂ ವಿಶೇಷ ಕೊಡುಗೆಗಳನ್ನು
ನೀಡಿದರು. ನಾಡಿನ ಸಮಸ್ತರು, ಆಸ್ತಿಕರು, ನಾಸ್ತಿಕರು, ವಿಜ್ಞಾನಿಗಳು, ಕಲಾವಿದರು, ತತ್ವ ಶಾಸಜ್ಞರು, ಕವಿಗಳು, ಸಾಹಿತಿಗಳು, ಕೃಷಿ ಪರಿಣತರು, ಪರಿಸರವಾದಿಗಳು ಹೀಗೆ ಜನಸಾಮಾನ್ಯರಿಂದ ಹಿಡಿದು ಮಹಾ ಬುದ್ಧಿವಂತರ ತನಕ ಎಲ್ಲರೂ ಕಾರಂತರನ್ನು ಮೆಚ್ಚಿಕೊಂಡಿದ್ದಾರೆ, ಹಚ್ಚಿಕೊಂಡಿ
ದ್ದಾರೆ.
ಸೃಜನಶೀಲತೆ ಎನ್ನುವುದಕ್ಕೆ ಮತ್ತೊಂದು ಹೆಸರೇ ಕಾರಂತರು. ಅವರೇ ತಮ್ಮನ್ನು ಆತ್ಮಕಥೆಯಲ್ಲಿ ಹುಚ್ಚು ಮನಸ್ಸಿನ ಹತ್ತು ಮುಖದವನೆಂದು
ಕರೆದುಕೊಂಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ, ಪದ್ಮಭೂಷಣ ಪ್ರಶಸ್ತಿ, ನಾಟಕ ಅಕಾಡೆಮಿ ಗೌರವ, ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ, ಡಿ.ಲಿಟ್, ಪಂಪ ಪ್ರಶಸ್ತಿ,ನಾಡೋಜ ಗೌರವ, ಡಾಕ್ಟರೇಟ್ ಹೀಗೆ ನೂರಕ್ಕೂ ಹೆಚ್ಚಿನ ಮಹತ್ವದ ಪ್ರಶಸ್ತಿಗಳು ಅವರಿಗೆ ದೊರಕಿದೆ. ಕಾರಂತರು ಎಂದೂ ಪ್ರಶಸ್ತಿಯ ಹಿಂದೆ ಹೋದವರಲ್ಲ. ಭೂತ ಕನ್ನಡಿಯಲ್ಲಿ ನೋಡಿದರೂ, ಎಲ್ಲಾ ರೀತಿಯಲ್ಲಿಯೂ, ಕೋಟ ಶಿವರಾಮ ಕಾರಂತರದ್ದು ತುಂಬು ಸಾಫಲ್ಯದ ಜೀವನ. ಶ್ರೇಷ್ಠ ಮಟ್ಟದ ಲೇಖಕರಾಗಿ, ಚಿಂತಕರಾಗಿ, ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿ, ಅವಿರತವಾದ ರಚನಾತ್ಮಕ ಕೆಲಸಗಳಿಂದಲೂ ತಾವು ಹುಟ್ಟಿ ಬೆಳೆದ ನಾಡಿನಿಂದ ಪಡೆದುದಕ್ಕಿಂತ ಹೆಚ್ಚಿನ ಋಣವನ್ನು ಸಲ್ಲಿಸಿಕೃತಾರ್ಥರಾದರು.
ಚಂದದೊಂದು ಬದುಕಿನ ರೀತಿಗೆ ಶ್ರೇಷ್ಠ ಉದಾಹರಣೆಯಾದರು. ಒಂದು ಶತಮಾನಕ್ಕೆ ಹತ್ತಿರ ಹತ್ತಿರ ಮುಟ್ಟಿದ್ದ ಕಾರಂತರ ಬದುಕು ಎಲ್ಲಾ ರೀತಿ ಯಿಂದಲೂ ಸಾರ್ಥಕತೆಯ ಪರಮಾವಧಿಯನ್ನು ತಲುಪಿತ್ತು. ತಾವು ನಡೆದಂತೆ ನುಡಿದರು, ನುಡಿದಂತೆ ಬಾಳಿ ದರು. ತಮ್ಮ ದೀರ್ಘಕಾಲೀನ ಆಯುಷ್ಯದ ಕೊನೆಗಾಲದಲ್ಲಷ್ಟೆ ಕೈತುಂಬ ಗಳಿಸಲು ಶಕ್ಯವಾಗಿದ್ದ ಲಕ್ಷಗಟ್ಟಲೆ ರೂಪಾಯಿಗಳನ್ನು ಸುದ್ದಿ ಪ್ರಚಾರ ಗಳಿಲ್ಲದೆಯೇ ಸಾರ್ವಜನಿಕ ಹಿತಾಸಕ್ತಿಯ ಚಟುವಟಿಕೆಗಳಿಗಾಗಿ ಸಾರ್ಥಕ ರೀತಿಯಲ್ಲಿ ವ್ಯಯಿಸಿದರು. ಸಾರ್ವಜನಿಕ ಹಿತಕ್ಕಾಗಿಯೇ ತಮ್ಮ ಬದುಕನ್ನು ವ್ಯಯಿಸಿ ಅಮರರಾದರು.
(ಲೇಖಕರು ವಿಜಯ ಬ್ಯಾಂಕ್‌ನ
ನಿವೃತ್ತ ಮುಖ್ಯ ಪ್ರಬಂಧಕರು