Sunday, 15th December 2024

ಸಿಎಂ ಅವರೇ, ಬೊಕ್ಕಸಕ್ಕೆ ಹಣ ಬರುವುದಾದರೆ ವೇಶ್ಯಾವಾಟಿಕೆಗೂ ಅನುಮತಿ ಕೊಡಬಹುದಲ್ಲ ?

ಲಾಕ್ ಡೌನ್ ಆರಂಭವಾಗಿ ಹದಿನೈದು ದಿನಗಳಾದಾಗ, ಕನ್ನಡ ಪುಸ್ತಕಗಳನ್ನು ಪ್ರಕಟಿಸುವ ಕೆಲವು ಪ್ರಕಾಶಕರು ಸೇರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ‘ಈ ಸಂದರ್ಭದಲ್ಲಿ ಕನ್ನಡ ಪುಸ್ತಕಗಳನ್ನು ಮನೆ ಮನೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಅವಕಾಶ ನೀಡಿ. ನಾವು ಸ್ಯಾನಿಟೈಸ್ ಮಾಡಿ, ಸರಕಾರ ವಿಧಿಸುವ ಎಲ್ಲಾ ನಿಯಮ-ಕಟ್ಟಳೆಗಳನ್ನು ಅನುಸರಿಸಿ, ನಾವೇ ಆಸಕ್ತ ಓದುಗರಿಗೆ ಪುಸ್ತಕ ಹಂಚುತ್ತೇವೆ. ಮನೆಯಲ್ಲಿ ಕುಳಿತು ಟಿವಿ ನೋಡಿ ಬೇಸರದಿಂದ ಸಮಯ ಕಳೆಯುತ್ತಿರುವವರಿಗೆ ಇದರಿಂದ ಅನುಕೂಲವಾಗಬಹುದು. ಅಲ್ಲದೇ ಕರೋನಾವೈರಸ್ ಕಾಲದಲ್ಲಿ ಪುಸ್ತಕ ಸಂಸ್ಕೃತಿಗೆ ಪ್ರೋತ್ಸಾಹ ನೀಡಿದಂತಾಗಬಹುದು. ದಯವಿಟ್ಟು ನಮಗೆ ಅನುಮತಿ ಕೊಡಬೇಕು’ ಎಂದು ಮನವಿ ಮಾಡಿಕೊಂಡರು. ಮುಖ್ಯಮಂತ್ರಿಗಳು ಸುಮ್ಮನೆ ಕೇಳಿಸಿಕೊಂಡರು.
ಅದಾದ ನಂತರ ಪ್ರಕಾಶಕರೊಬ್ಬರು, ‘ಮುಖ್ಯಮಂತ್ರಿಗಳೇ, ಕೇರಳ ಸರಕಾರ ಆ ರಾಜ್ಯದಲ್ಲಿ ಪುಸ್ತಕ ಮಾರಾಟಕ್ಕೆ ಅವಕಾಶ ನೀಡಿದೆ. ಪುಸ್ತಕ ಮಾರಾಟಕ್ಕೆ ಎಂಥ ವಿಧಿ-ವಿಧಾನ ಅನುಸರಿಸಬೇಕು ಎಂಬುದನ್ನು ಸೂಚಿಸಿದೆ. ಆ ಪ್ರಕಾರ ಪುಸ್ತಕ ಪ್ರಕಾಶಕರು ಮನೆಮನೆಗೆ ಪುಸ್ತಕ ಪೂರೈಸುತ್ತಿದ್ದಾರೆ. ಇಂಥ ಪ್ರಯೋಗವನ್ನು ಇಲ್ಲಿಯೂ ಮಾಡಲು ನೀವು ನಮಗೆ ಅವಕಾಶ ನೀಡಬೇಕು. ಪುಸ್ತಕವನ್ನು ಅಗತ್ಯ ಸೇವೆ ಎಂದು ಪರಿಗಣಿಸಬೇಕು’ ಎಂದು ಬಿನ್ನಹ ಮಾಡಿಕೊಂಡರು.
ಮುಖ್ಯಮಂತ್ರಿಗಳು ಈ ಕಿವಿಯಿಂದ ಕೇಳಿ, ಆ ಕಿವಿಯಿಂದ ಬಿಟ್ಟರು. ಪ್ರಕಾಶಕರು ಮುಂದೆ ಹೇಳುವುದನ್ನು ಕೇಳಲು ಅವರು ಯಾವುದೇ ಆಸಕ್ತಿ ತೋರಿಸಲಿಲ್ಲ. ಪ್ರಕಾಶಕರು ಹೋದ ದಾರಿಗೆ ಸುಂಕವಿಲ್ಲ ಎಂದು ಎದ್ದು ಬಂದರು. ಆದರೆ ಅವರು ಅಷ್ಟಕ್ಕೇ ಸುಮ್ಮನಾಗಲಿಲ್ಲ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ದೊಡ್ಡರಂಗೇಗೌಡರಿಂದ ಮುಖ್ಯಮಂತ್ರಿಗಳಿಗೆ ಫೋನ್ ಮಾಡಿಸಿದರು. ಆ ಸಾಹಿತಿಗಳು ಪ್ರಕಾಶಕರ ಮನವಿಯನ್ನು ಪುರಸ್ಕರಿಸಬೇಕೆಂದು ಕೋರಿದರು. ‘ಇಲ್ಲಿ ಮಾರಾಟ, ಲಾಭ- ವ್ಯವಹಾರಕ್ಕಿಂತ ಈ ಸಂದರ್ಭದಲ್ಲಿ ಒಂದು ಒಳ್ಳೆಯ ಸಂಸ್ಕೃತಿಯನ್ನು ಉತ್ತೇಜಿಸಿದಂತಾದೀತು. ಈ ಸಂದರ್ಭದಲ್ಲಿ ಪುಸ್ತಕ ಓದುವುದನ್ನು ಅನೇಕರು ಬಯಸಬಹುದು. ಅದಕ್ಕೆ ಅವಕಾಶ ಮಾಡಿಕೊಡಿ’ ಎಂದು ಹೇಳಿದರು.
ಪ್ರಕಾಶಕರು ಪತ್ರಿಕಾ ಪ್ರಕಟಣೆ ಮೂಲಕ ಸರಕಾರದ ಗಮನ ಸೆಳೆಯುವ ಪ್ರಯತ್ನವನ್ನೂ ಮಾಡಿದರು. ಕೆಲವು ಸಾಹಿತಿಗಳಿಂದ ಹೇಳಿಕೆ ಕೊಡಿಸಿದರು. ಅದರಿಂದ ಏನೂ ಪ್ರಯೋಜನ ಆಗಲಿಲ್ಲ. ಸರಕಾರ ಅದಕ್ಕೆ ಸ್ಪಂದಿಸಲೇ ಇಲ್ಲ. ಪ್ರಕಾಶಕರು ಕೈಚೆಲ್ಲಿ ಸುಮ್ಮನಾದರು. ಸರಕಾರದಲ್ಲಿ ಇದ್ದವರಿಗೆ ಅದು ಒಂದು ಆದ್ಯತೆ ಎಂದು ಅನಿಸಲೇ ಇಲ್ಲ. ಒಂದು ಒಳ್ಳೆಯ ಸಂಸ್ಕೃತಿಗೆ ಎರವಾಗಬೇಕು ಎಂದೂ ಅನಿಸಲಿಲ್ಲ. ಪುಸ್ತಕ ಅಗತ್ಯ ಸೇವೆ ಎಂದು ಪರಿಗಣಿಸಲು ಸರಕಾರ ಸ್ವಲ್ಪವೂ ಆಸಕ್ತಿಯನ್ನೇ ತೋರಿಸಲಿಲ್ಲ.
ಆದರೆ ಮದ್ಯ ಮಾರಾಟಕ್ಕೆ ಮಾತ್ರ ಅದೆಂಥ ಆಸಕ್ತಿ, ಉತ್ಸಾಹ, ಪೈಪೋಟಿ, ಮುಂಗಾಲುಪುಟಿಕಿ ..ಅಬ್ಬಬ್ಬಾ … ಹೇಸಿಗೆಯೆನಿಸುತ್ತಿದೆ. ಅಸಹ್ಯ ಹುಟ್ಟಿಸುತ್ತದೆ. ನಮ್ಮನ್ನು ಆಳುವವರ ಆದ್ಯತೆಗಳೇನು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ನಮ್ಮನ್ನು ಎಂಥೆಂಥವರು ಆಳುತ್ತಿದ್ದಾರಲ್ಲ ಎಂದು ಜುಗುಪ್ಸೆ ಹುಟ್ಟುತ್ತದೆ. ಜೀವನದಲ್ಲಿ ಒಂದೇ ಒಂದು ಪುಸ್ತಕ ಓದದವರು, ಕಿರು ಬೆರಳಿನಲ್ಲೂ ಪುಸ್ತಕ ಮುಟ್ಟದವರು, ಅಕ್ಷರಪ್ರೀತಿ ಇಲ್ಲದವರು, ಸರಸ್ವತಿಯ ಶಾಪಪುತ್ರರು ಮಂತ್ರಿಗಳು, ಮುಖ್ಯಮಂತ್ರಿಗಳಾದರೆ, ಇಂಥವರಿಂದ ತುಂಬಿದ ಸರಕಾರ ನಮ್ಮನ್ನು ಆಳುವಂತಾದರೆ ಇಂತಹ ಎಡವಟ್ಟುಗಳಾಗುತ್ತವೆ, ಅಪಸವ್ಯಗಳಾಗುತ್ತವೆ.
‘ಲಾಕ್ ಡೌನ್ ಕಾಲದಲ್ಲಿ ಮನೆಯಲ್ಲಿ ಕುಳಿತು ಸಮಯ ಹಾಳು ಮಾಡಬೇಡಿ, ಪುಸ್ತಕಗಳನ್ನು ಓದುವ ಮೂಲಕ ಸಮಯವನ್ನು ಸಾರ್ಥಕವಾಗಿ ಕಳೆಯಿರಿ. ಅಗತ್ಯ ಸೇವೆಯಲ್ಲಿ ಪುಸ್ತಕಗಳನ್ನೂ ಸೇರಿಸಿದ್ದೇವೆ.’ ಎಂದು ಮುಖ್ಯಮಂತ್ರಿಯವರು ಹೇಳಬಹುದಿತ್ತಲ್ಲ, ಟ್ವೀಟ್ ಮಾಡಬಹುದಿತ್ತಲ್ಲ ? ಒಬ್ಬ ಅಕ್ಷರವಂತ, ಸಮಷ್ಠಿಪ್ರಜ್ಞೆ, ಸುಸಂಸ್ಕೃತ ನಾಯಕ ಮಾತ್ರ ಹೀಗೆ ಹೇಳಲು ಸಾಧ್ಯ. ಪುಸ್ತಕಗಳಿಲ್ಲದೇ ಸಮಾಜ ಕಟ್ಟಲು ಸಾಧ್ಯವಿಲ್ಲ, ಅಕ್ಷರಪ್ರೇಮಿಗಳಿಲ್ಲದೇ ಸಂಭಾವಿತ, ವಿದ್ಯಾವಂತ ಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂಬ ಬದ್ಧತೆಯಲ್ಲಿ ನಂಬಿಕೆ ಇರುವ ನಾಯಕನಿಂದ ಮಾತ್ರ ಅಂಥ ಮಾತುಗಳು ಬಂದೀತು. ಯಡಿಯೂರಪ್ಪನವರೊಂದೇ ಅಲ್ಲ, ಒಂದು ವೇಳೆ ಕರ್ನಾಟಕದಲ್ಲಿ ಯಾವ ಪಕ್ಷದ ಸರಕಾರ ಅಧಿಕಾರದಲ್ಲಿದ್ದರೂ, ಅವರೂ ಕೂಡ ಇಂಥದೇ ನಿರ್ಧಾರ ತೆಗೆದುಕೊಳ್ಳುತ್ತಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ.
ಅಂದರೆ ನಮ್ಮನ್ನು ಆಳುವವರಿಗೆ ಸುಸಂಸ್ಕೃತ ಸಮಾಜವನ್ನು ಕಟ್ಟುವುದರಲ್ಲಿ ಆಸಕ್ತಿ ಇಲ್ಲವಾಯಿತಾ ? ನೋಡಿ, ಕಳೆದ ಎರಡು ದಿನಗಳಿಂದ ಜನ ಮದ್ಯಕ್ಕಾಗಿ ಮೈಲಿಗಟ್ಟಲೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಬರಗಾಲ ದೇಶದಿಂದ ಬಂದವರಂತೆ ಕೈಗೆ ಸಿಕ್ಕಿದ ಮದ್ಯದ ಬಾಟಲಿಗಳನ್ನು ದೋಚುತ್ತಿದ್ದಾರೆ. ಕುಡಿದು ಕುಡಿದು ತೂರಾಡುತ್ತಾ ರಸ್ತೆಯಲ್ಲಿ ಬೀಳುತ್ತಿದ್ದಾರೆ, ಗಟಾರದಲ್ಲಿ ಹೊರಳಾಡುತ್ತಿದ್ದಾರೆ. ಕರುನಾಡು ಕುಡುಕರ ನಾಡಿನಂತೆ ಕಂಗೊಳಿಸುತ್ತಿದೆ.
ಮನೆಯಲ್ಲಿ ಗಂಡ -ಹೆಂಡತಿ ನಡುವೆ ಏಕಾಏಕಿ ಕಲಹ ಜಾಸ್ತಿಯಾಗಿದೆ. ಮದ್ಯ ಮಾರಾಟವಾದ ಮೊದಲ ದಿನವೇ ಕುಡಿದ ಮತ್ತಿನಲ್ಲಿ ರೌಡಿಯೊಬ್ಬನ ಕೊಲೆಯಾಗಿದೆ. ಮಾಗಡಿಯಲ್ಲಿ ಮದ್ಯ ಸೇವಿಸಿದ ಯುವಕರ ಗುಂಪು ಶಾಸಕರ ಮೇಲೆ ಹಲ್ಲೆ ಮಾಡಲು ಹೋಗಿ ಅವರ ಅಂಗಿ ಹರಿದು ಹಾಕಿದೆ. ಮದ್ಯ ಖರೀದಿಗೆ ಮನೆಯಲ್ಲಿ ಹಣ ಕೊಡದಿದ್ದಕ್ಕೆ ಬೇಸತ್ತ ಯುವಕನೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಧಾರವಾಡದಲ್ಲಿ ಕುಡಿದ ಮತ್ತಿನಲ್ಲಿದ್ದ ಯುವಕರು ಬೈಕಿನಿಂದ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಐದು ಸಾವಿರಕ್ಕೂ ಹೆಚ್ಚು ಮಂದಿ ರಾಜ್ಯದ ಬೇರೆ ಬೇರೆ ಊರುಗಳಲ್ಲಿ ಕುಡಿದು ರಸ್ತೆ ಮತ್ತು ಗಟಾರಕ್ಕೆ ಬಿದ್ದಿದ್ದಾರೆ. ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಮೊದಲ ದಿನ, ಇಡೀ ದೇಶದಲ್ಲಿ ಚುನಾವಣಾ ಮತದಾನ ಇಟ್ಟಿದ್ದರೆ, ಅಷ್ಟೊಂದು ಪ್ರಮಾಣದಲ್ಲಿ ಜನ ಸರತಿ ಸಾಲಿನಲ್ಲಿ ನಿಂತು ಮತ ಹಾಕಲು ಐದಾರು ಗಂಟೆ ನಿಲ್ಲುತ್ತಿರಲಿಲ್ಲ. ಆದರೆ ಎಣ್ಣೆ ಅಂಗಡಿ ಮುಂದೆ ಮಾನ – ಮರ್ಯಾದೆ ಬಿಟ್ಟು ನಿಂತಿದ್ದರು. ಕೆಲವು ಕಡೆಗಳಲ್ಲಿ ಬೆಳಗ್ಗೆ ಆರು ಗಂಟೆಯಿಂದಲೇ ಪಾಳಿ ಹಚ್ಚಿ ನಿಂತಿದ್ದರು. ಇನ್ನು ಕೆಲವೆಡೆ ಎಂಟು ತಾಸಿಗಿಂತ ಹೆಚ್ಚು ಸಾಲಿನಲ್ಲಿ ನಿಂತಿದ್ದರು.
ಇವೆಲ್ಲಾ ಏನನ್ನು ಸೂಚಿಸುತ್ತವೆ ? ಸಮಾಜ ಅನೈತಿಕತೆಯತ್ತ ಹೋಗುತ್ತಿರುವುದರ ಸ್ಪಷ್ಟ ಸೂಚನೆಯಿದು. ಒಂದು ವೇಳೆ, ಲಾಕ್ ಡೌನ್ ಅವಧಿಯಲ್ಲಿ ಪುಸ್ತಕ ಮಾರಾಟಕ್ಕೆ ಅವಕಾಶ ಕೊಟ್ಟಿದ್ದರೆ, ಜನ ಈ ರೀತಿ ಪಾಳಿ ಹಚ್ಚಿ ನಿಲ್ಲುತ್ತಿದ್ದರಾ ? ಬಿಲ್ ಖುಲ್ ಇಲ್ಲ. ಅದಕ್ಕಾಗಿಯೇ ಪುಸ್ತಕ ಮಾರಾಟಗಾರರು ಮನೆಮನೆಗೆ ತೆರಳಿ ಕೊಟ್ಟು ಬರುತ್ತೇವೆ ಅಂದರು. ಅದಕ್ಕೂ ಸರಕಾರ ಅವಕಾಶ ಕೊಡಲಿಲ್ಲ. ಈ ಜನರಿಗೂ ಮದ್ಯಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ ಎಂದು ಅನಿಸಿತಲ್ಲ, ನಾವು ಎಂಥ ದರಿದ್ರ, ನೀತಿಗೆಟ್ಟ ಪರಿಸರದಲ್ಲಿ ಬದುಕುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಯಾರೂ ಕುಡಿಯಲೇ ಬಾರದು, ಪಾನ ನಿಷೇಧ ಜಾರಿಗೆ ತರಬೇಕು ಎಂದು ನಾನು ವಾದಿಸುತ್ತಿಲ್ಲ ಅಥವಾ ಕುಡುಕರೆಲ್ಲ ಮನುಷ್ಯರಲ್ಲ ಎಂದು ನಾನು ಹೇಳುತ್ತಿಲ್ಲ. ನಾನು ನಮ್ಮ ಆದ್ಯತೆ ಬಗ್ಗೆ ಮಾತ್ರ ಕಾಳಜಿ ವ್ಯಕ್ತಪಡಿಸುತ್ತಿದ್ದೇನೆ ಎಂಬುದನ್ನು ಗಮನಿಸಬೇಕು.
ಮೊದಲ ದಿನ ಆರೇಳು ತಾಸು ಸಾಲಿನಲ್ಲಿ ನಿಲ್ಲುವ ನಾನು ಮತದಾನ ಮಾಡಲು ಅಷ್ಟು ಹೊತ್ತು ನಿಲ್ಲುತ್ತೇನಾ ? ಅಷ್ಟು ಸಮಯವನ್ನು ಸಮಾಜ ಕಾರ್ಯಕ್ಕೆ ಕೊಡುತ್ತೇನಾ ? ಈ ಪ್ರಶ್ನೆಯನ್ನು ಕೇಳಿಕೊಳ್ಳಬೇಕು. ಮದ್ಯ ಮಾರಾಟಕ್ಕೆ ಅನುಮತಿ ಕೊಟ್ಟ ದಿನವೇ ಹೋಗಿ ಖರೀದಿಸಬೇಕಾದ ಜರೂರತ್ತೇನಿದೆ ? ಒಂದು ವೇಳೆ ಸರಕಾರ ಎಣ್ಣೆ ಮಾರಾಟಕ್ಕೆ ಅನುಮತಿ ನೀಡಿರದಿದ್ದರೆ ಬದುಕಿರುತ್ತಿರಲಿಲ್ಲವೇ ? ಸರಕಾರ ಮದ್ಯ ಮಾರಾಟ ನಿಷೇಧ ಮಾಡಿ ಒಂದೂವರೆ ತಿಂಗಳು ಕಳೆದಿದ್ದರೂ ಬದುಕಿರಲಿಲ್ಲವೇ ? ಅಂದರೆ ಕುಡಿಯದಿದ್ದರೂ ಜೀವನ ಮಾಡಬಹುದು ಎಂಬುದು ಸಾಬೀತಾಗಿರುವಾಗ, ಮದ್ಯ ಮಾರಾಟಕ್ಕೆ ಸೈ ಎಂದ ತಕ್ಷಣವೇ ಹಪಾಹಪಿಪಟ್ಟು ಓಡೋಡಿ ಹೋಗಿ ಮದ್ಯದ ಅಂಗಡಿ ಮುಂದೆ ನಿಂತ ದೃಶ್ಯ, ಪ್ರಜ್ಞಾವಂತರು ತಲೆತಗ್ಗಿಸುವಂಥದ್ದು. ಅದಕ್ಕೆ ಅವಕಾಶ ಮಾಡಿಕೊಟ್ಟ ಸರಕಾರ ಅದೆಷ್ಟು ಬರಗೆಟ್ಟಿರಬಹುದು? ಅದೆಷ್ಟು ನೈತಿಕವಾಗಿ ದಿವಾಳಿಯೆದ್ದಿರಬಹುದು ? ನಾನು ಆಕ್ರೋಶಭರಿತನಾಗಿ ಹೇಳುತ್ತಿದ್ದೇನೆ, No doubt, this is a moment of shame ! ಅಂತ. ಇದು ಯಾವ ಸರಕಾರಕ್ಕೂ, ಸಮಾಜಕ್ಕೂ ಶೋಭೆ ತರುವ ಸಂಗತಿಯಲ್ಲ.
ನಾವು ಕುಡಿತವಿಲ್ಲದೇ ನಲವತ್ತೈದು ದಿನಗಳಾದರೂ ಇರುತ್ತೇವೆ ಎಂಬುದನ್ನು ಜನ ತೋರಿಸಿಕೊಟ್ಟರು. ಆರಂಭದಲ್ಲಿ ಮದ್ಯ ಸಿಗದಿರುವುದಕ್ಕೆ ಅಲ್ಲಲ್ಲಿ ತಕರಾರು, ಅಪಸ್ವರಗಳು ಕೇಳಿ ಬಂದವು. ಮೂರೂ ಹೊತ್ತು ಕುಡಿದಿರುವವರು, ವ್ಯಸನಿಗಳಾದವರು ಮದ್ಯ ಸಿಗದೇ ಪರದಾಡಿದರು. ಕ್ರಮೇಣ ಇವರೆಲ್ಲ ಮದ್ಯ ಇಲ್ಲದ ಬದುಕಿಗೆ ಹೊಂದಿಕೊಳ್ಳಲಾರಂಭಿಸಿದರು. ಮನೆಯ ಹೆಂಗಸರು ಸಮಾಧಾನದ ನಿಟ್ಟುಸಿರು ಬಿಟ್ಟರು. ಕಟ್ಟಿಕೊಂಡಾಗಿನಿಂದ ಮದ್ಯ ಬಿಡಿಸಲು ಶತಪ್ರಯತ್ನ ಮಾಡಿದರೂ ಸೋತು ಸುಣ್ಣವಾದ ಹೆಂಗಸರು, ಕರೋನಾ ವೈರಸ್ಸಿಗೆ ಮನಸ್ಸಿನಲ್ಲಿ ಶತಕೋಟಿ ಅರ್ಚನೆ ಮಾಡಿರಬೇಕು. ಅವರ ಬಾಳಲ್ಲಿ ಕರೋನಾ ಅಗಾಧ ಬದಲಾವಣೆ ತಂದಿತು. ಇನ್ನೂ ಒಂದು ತಿಂಗಳು ಎಣ್ಣೆ ಇಲ್ಲದಿದ್ದರೂ ಹುಟ್ಟಾ ಕುಡುಕರು ತಡೆದುಕೊಳ್ಳುತ್ತಿದ್ದರೇನೋ.
ಆದರೆ ಸರಕಾರ ತಡೆದುಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಇದೆಂಥ ದರಿದ್ರ ವ್ಯವಸ್ಥೆಯಿರಬಹುದು ?! ಜನರಿಗೆ ಕುಡಿಯಲು ಅನುಮತಿ ನೀಡಿದರೆ ಮಾತ್ರ ಸರಕಾರ ನಡೆಯಲು ಸಾಧ್ಯ, ದೈನಂದಿನ ಖರ್ಚಿಗೂ ದುಡ್ಡಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾದಾಗ ಸರಕಾರಕ್ಕೆ ಕಂಡಿದ್ದು ಮದ್ಯ ! ಅಂದರೆ ಈ ಸರಕಾರ ಕುಡುಕರ ಹಣದಲ್ಲಿ ನಡೆಯುತ್ತಿದೆ ಅಂದಂತಾಯಿತು. ಹಾಗಿರುವಾಗ ಈ ಸರಕಾರ ಅದೆಷ್ಟು ಭ್ರಷ್ಟವಾಗಿರಬಹುದು, ನೀತಿಗೆಟ್ಟಿರಬಹುದು, ಮಾನ-ಮರ್ಯಾದೆ ಬಿಟ್ಟಿರಬಹುದು… ಯೋಚಿಸಬೇಕು. ಒಂದು ವೇಳೆ ವೇಶ್ಯಾವಾಟಿಕೆಯಿಂದ ರಾಜ್ಯ ಬೊಕ್ಕಸಕ್ಕೆ ಇಷ್ಟೇ ಹಣ ಬರುತ್ತದೆ ಎಂದರೆ, ಈ ಸಂದರ್ಭದಲ್ಲಿ ವೇಶ್ಯಾವಾಟಿಕೆಗೂ ಸರಕಾರ ಅನುಮತಿ ಕೊಟ್ಟರೂ ಆಶ್ಚರ್ಯವಿಲ್ಲ. ಮದ್ಯ ಮಾರಾಟಕ್ಕೆ ಅನುಮತಿ ಕೊಟ್ಟ ನಂತರ ವೇಶ್ಯಾವಾಟಿಕೆ ಅನುಮತಿ ಕೊಟ್ಟರೆ ತಪ್ಪೇನು ? ಹೇಗಿದ್ದರೂ ಸರಕಾರಕ್ಕೆ ಈಗ ಬೇಕಿರುವುದು ಹಣ ತಾನೇ ? ಸಂಪನ್ಮೂಲ ಕ್ರೋಡೀಕರಣವೇ ಮುಖ್ಯವಾದಾಗ, ಅದು ಯಾವ ಮೂಲದಿಂದ ಬರುತ್ತದೆ ಎಂಬುದು ಮುಖ್ಯವಾಗದಿದ್ದಾಗ, ವೇಶ್ಯಾವಾಟಿಕೆಯಿಂದ ಬರುವ ಹಣವನ್ನು ಬೇಡ ಅಂತ ಯಾಕೆ ಹೇಳುತ್ತೀರಿ ?
ಹಾಗಾದರೆ , ಸರಕಾರಕ್ಕೆ ಕುಡುಕರ ಹಣ ಬೇಕು, ವೇಶ್ಯೆಯರ ಹಣ ಬೇಡವಾ ? ಕಡುಕರು ಮತ್ತು ವೇಶ್ಯೆಯರ ಮಧ್ಯೆ ಯಾಕೆ ಸರಕಾರ ತಾರತಮ್ಯ ಮಾಡಬೇಕು ?
ಇದೇ ಶುಭ ಸಂದರ್ಭದಲ್ಲಿ ವೇಶ್ಯಾವಾಟಿಕೆಯನ್ನೂ ಅಧಿಕೃತಗೊಳಿಸಿ, ಅವರಿಂದಲೂ ಬೊಕ್ಕಸಕ್ಕೆ ಹಣ ಕ್ರೋಡೀಕರಿಸಬಹುದಲ್ಲ ? ಕುಡುಕರಿಂದ ಹಣ ಸಂಗ್ರಹಿಸಿದ ಮೇಲೆ, ವೇಶ್ಯೆಯರಿಂದ ಸಂಗ್ರಹಿಸುವುದಕ್ಕೆ ಸರಕಾರ ಮಾನ – ಮರ್ಯಾದೆಗೆ ಅಂಜಬೇಕಿಲ್ಲ. ಕುಡಿಯುವುದಕ್ಕೆ ಮಾತ್ರ ಅನುಮತಿ ಕೊಟ್ಟು , ವೇಶ್ಯಾವಾಟಿಕೆಗೆ ಅನುಮತಿ ಕೊಡದಿದ್ದರೆ, ಸರಕಾರ ವೇಶ್ಯೆಯರಿಗೆ ತಾರತಮ್ಯ ಮಾಡಿದಂತಾಗುವುದಿಲ್ಲವೇ ? ಪಕ್ಷಪಾತ ಧೋರಣೆ ಅನುಸರಿಸಿದಂತಾಗುವುದಿಲ್ಲವೇ ? ಈ ಸರಕಾರಕ್ಕೆ ಸಮಾಜ ಸ್ವಾಸ್ಥ್ಯಕ್ಕಿಂತ ಬೊಕ್ಕಸಕ್ಕೆ ಹಣ ಸಂಗ್ರಹಿಸುವುದೇ ಮುಖ್ಯವಾಯಿತಾ ? ನೈತಿಕ ನೆಲೆಗಟ್ಟಿನ ಮೇಲೆ ಸಮಾಜ ನಿರ್ಮಾಣ ಮಾಡುವುದು ಮುಖ್ಯವಲ್ಲವಾ ? ಹಾಗಾದರೆ ಸಂಘ ಪರಿವಾರ ಬೋಧಿಸುವ ನೈತಿಕ, ಸುಸಂಸ್ಕೃತ ಸಮಾಜ ಬರೀ ಬೊಗಳೆಯಾ ? ತಾವು ಸಂಘ ಪರಿವಾರದ ಕಟ್ಟಾ ಅನುಯಾಯಿಗಳು ಎಂದು ಹೇಳಿಕೊಳ್ಳುವ ಬಿಜೆಪಿ ನಾಯಕರ ದ್ವಿಮುಖ ನೀತಿಯನ್ನು ನೋಡಿ ಸಂಘ ಪರಿವಾರದ ನಾಯಕರು ಸುಮ್ಮನಿರುವುದೇಕೆ ? ಅಂದರೆ ಈ ರೀತಿಯ ಅನೈತಿಕ ಸಮಾಜ ನಿರ್ಮಾಣಕ್ಕೆ ಸಂಘ ಪರಿವಾರದ ಪರೋಕ್ಷ ಬೆಂಬಲ ಇದೆಯಾ ?
ಮದ್ಯಪಾನವನ್ನು ನಿಷೇಧಿಸಲು ಅಲ್ಲದಿದ್ದರೂ, ಅದನ್ನು ನಿಯಂತ್ರಿಸಲು, ಕಡಿವಾಣ ಹಾಕಲು ಸರಕಾರದ ಮುಂದೆ ಒಂದು ಅದ್ಭುತ ಅವಕಾಶವಿತ್ತು. ಅದನ್ನು ಈ ಸರಕಾರ ಕಳೆದುಕೊಂಡು ಬಿಟ್ಟಿತು. ಕುಡುಕರಿಗಿದ್ದ ತಾಳ್ಮೆ, ಸಹನೆ, ಕಾಯುವಿಕೆ ಸರ್ಕಾರಕ್ಕಿಲ್ಲವಾಯಿತು. ಇದು ದುರ್ದೈವ! ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದರಿಂದ ಸರಕಾರಕ್ಕೆ ತಕ್ಷಣಕ್ಕೆ ನೂರಾರು ಕೋಟಿ ರುಪಾಯಿ ಸಂಗ್ರಹವಾಗಬಹುದು. ಆದರೆ ಜನರ ಆರೋಗ್ಯ ? ಜನರ ಆರೋಗ್ಯ ಪಾಲನೆಗೂ ಹಣ ವ್ಯಯಿಸಬೇಕು ಎಂಬುದರ ಪ್ರಾಥಮಿಕ ಕಲ್ಪನೆ ಸರ್ಕಾರಕ್ಕಿಲ್ಲವೇ ? ಜನರ ಆರೋಗ್ಯ, ಸಮಾಜದ ಆರೋಗ್ಯದ ಮುಂದೆ ಮದ್ಯ ಮಾರಾಟದಿಂದ ಬರುವ ಆದಾಯ ಜುಜುಬಿ ಎಂಬ ಭಾವನೆ ಸರಕಾರಕ್ಕಿರಬೇಕು. ಆದರೆ ಇದನ್ನೆಲ್ಲಾ ಯೋಚಿಸುವಷ್ಟು ವಿವೇಕ ಈ ಸರಕಾರವನ್ನು ನಡೆಸುವವರಿಗೆ ಇದೆ ಎಂದು ಅಂದುಕೊಳ್ಳುವವರು ಮೂಢರು, ಮೂರ್ಖರು !
ಈ ಮಧ್ಯೆ ಸರಕಾರ ಆದಾಯ ಹೆಚ್ಚಿಸಲು ರಾಜ್ಯದೆಲ್ಲೆಡೆ ಒಂಬೈನೂರು ಹೊಸ ಮದ್ಯದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲು ನಿರ್ಧರಿಸಿದೆ ಎಂಬ ಸುದ್ದಿ ಕೇಳಿಬಂದಿದೆ. ಇದು ಅತ್ಯಂತ ಆಘಾತಕಾರಿ. ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ನಾಲ್ಕು ಮದ್ಯದಂಗಡಿ ತೆರೆಯುವುದು ಸರಕಾರದ ಉದ್ದೇಶ. ಇದು ನಾಲ್ಕು ವರ್ಷಗಳ ಹಿಂದೆ ಕಾಂಗ್ರೆಸ್ ಸರಕಾರ ತೆಗೆದುಕೊಂಡ ನಿರ್ಧಾರದ ಜಾರಿ ಎಂದು ಈಗಿನ ಬಿಜೆಪಿ ಸರಕಾರ ಹೇಳುತ್ತಿದೆ. ಆದರೆ ಆಗ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ನಿರ್ಧಾರ ಜಾರಿ ಆಗಿರಲಿಲ್ಲ. ಆದರೆ ಈಗ ಲಾಕ್ ಡೌನ್ ನಿಂದ ಆರ್ಥಿಕತೆಗೆ ನಷ್ಟ ಆಗಿರುವುದರಿಂದ ತಕ್ಷಣ ಆದಾಯ ಹೆಚ್ಚಿಸಲು ಅಬಕಾರಿ ಮೂಲದ ಮೇಲೆ ಕಣ್ಣಿಟ್ಟಿದೆಯಂತೆ. ಇದು ಮತ್ತೊಂದು ಅನೈತಿಕ ನಡೆ. ಅಂದರೆ ಸರಕಾರಕ್ಕೆ ಹಣ ಬೇಕಾದಾಗಲೆಲ್ಲ ಕುಡುಕರನ್ನು ಅವಲಂಬಿಸುವುದು ಸರಕಾರ ಬೌದ್ಧಿಕವಾಗಿ ದಿವಾಳಿಯಾಗಿರುವುದರ ಸ್ಪಷ್ಟ ಸಂಕೇತ. ಅದಕ್ಕಾಗಿಯೇ ಹೇಳಿದ್ದು , ಎಲ್ಲಾ ಭಾರವನ್ನು ಕುಡುಕರ ಮೇಲೊಂದೇ ಅಲ್ಲ , ವೇಶ್ಯೆಯರ ಮೇಲೂ ಹಾಕಬಹುದಲ್ಲ ಎಂದು.
ಯಾವ ಸರಕಾರ ನಾವು ಹೊಸ ಪೊಲೀಸ್ ಠಾಣೆಗಳನ್ನು ತೆರೆಯುತ್ತೇವೆ ಎಂದು ಹೇಳಿದರೆ ಅದು ಒಳ್ಳೆಯ ಸೂಚನೆ ಅಲ್ಲ. ಹೊಸ ಠಾಣೆ ತೆರೆಯುವಂಥ ಪರಿಸ್ಥಿತಿ ಉದ್ಭವ ಆಗಿದೆ ಎಂದಂತಾಯಿತು. ಸಮಾಜದಲ್ಲಿ ಕಳ್ಳ-ಕಾಕರು, ರೌಡಿಗಳು, ಕಾನೂನುಬಾಹಿರ ಕೃತ್ಯ ಎಸಗುವವರ ಸಂಖ್ಯೆ ಜಾಸ್ತಿ ಆಗಿದೆ ಎಂದಂತಾಯಿತು. ಹಾಗೆಯೇ ನಾವು ಹೊಸ ಮದ್ಯದಂಗಡಿ ತೆರೆಯಲು ನಿರ್ಧರಿಸಿದ್ದೇವೆ ಎಂದು ಯಾವುದೇ ಸರಕಾರ ಹೇಳಿದರೂ ಅದು ಸಹ ಒಳ್ಳೆಯ ಸಮಾಚಾರ ಅಲ್ಲ. ಅದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಸಮಾಜ ಹಳಿತಪ್ಪುತ್ತಿರುವುದರ ಸ್ಪಷ್ಟ ಸಂದೇಶವದು. ಮಾನವಂತರಾರೂ ಇಂಥ ನಡೆಯನ್ನು ಸಹಿಸಿಕೊಳ್ಳಲು, ಬೆಂಬಲಿಸಲು ಸಾಧ್ಯವೇ ಇಲ್ಲ. ಮದ್ಯಸೇವನೆಗೆ ಕಡಿವಾಣ ಹಾಕುವ ಬದಲು, ಮತ್ತಷ್ಟು ಮದ್ಯದಂಗಡಿಗಳಿಗೆ ಅನುಮತಿ ಕೊಡುತ್ತೇವೆ ಎನ್ನುವುದು ಕನಿಷ್ಠ ಕಚ್ಚೆಯನ್ನಾದರೂ ತೊಡು ಎಂದು ಹೇಳಿದವನ ಮುಂದೆ ಎಲ್ಲಾ ಕಳಚಿ ಬೆತ್ತಲಾಗಿ ನಿಂತಂತೆ !
ಈ ಸರಕಾರಕ್ಕೆ , ಅದರ ನೇತೃತ್ವವಹಿಸಿರುವವರಿಗೆ ಕನಿಷ್ಠ ಪ್ರಜ್ಞೆ, ವಿವೇಕ, ಬುದ್ಧಿ, ಮಾನ – ಮರ್ಯಾದೆ, ಸಾರ್ವಜನಿಕ ಹಿತದ ಬಗ್ಗೆ ಬದ್ಧತೆ ಮತ್ತು ಮುಂದಿನ ಜನಾಂಗದ ಬಗ್ಗೆ ಕಾಳಜಿ ಇದ್ದರೆ ಹೊಸ ಮದ್ಯ ಅಂಗಡಿಗಳನ್ನು ತೆರೆಯುವ ನಿರ್ಧಾರವನ್ನು ಕೈಬಿಡಲಿ. ಸಂಘ ಪರಿವಾರದ ನಾಯಕರ ಮೌನ ಇನ್ನೂ ಅಸಹ್ಯಕರ. ಅವರು ಸರಕಾರಕ್ಕೆ ಕಿವಿಹಿಂಡುವ ಧೈರ್ಯವನ್ನಾದರೂ ಮೆರೆಯಲಿ. ರಾಜ್ಯದ ಜನ ಕಣ್ಣು ಮುಚ್ಚಿ ಕುಳಿತಿಲ್ಲ. ಇಲ್ಲವೇ ನಾವು ಎಲ್ಲವನ್ನೂ ಬಿಟ್ಟವರು ಎಂಬುದನ್ನಾದರೂ ಸರಕಾರ ನಡೆಸುವವರು ಬಹಿರಂಗಪಡಿಸಲಿ.
ಒಳ್ಳೆಯ ಅವಿವೇಕಿಗಳ ಸಹವಾಸವಾಯ್ತು !