ಅಶ್ವತ್ಥಕಟ್ಟೆ
ರಂಜಿತ್ ಎಚ್ ಅಶ್ವತ್ಥ
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರವಹಿಸಿದ್ದ, ಸ್ವತಂತ್ರ ಬಂದ ಬಳಿಕ ಐದಾರು ದಶಕಗಳ ಕಾಲ ದೇಶವನ್ನು ಆಳಿದ್ದ ಕಾಂಗ್ರೆಸ್‌ನ ಸದ್ಯದ ಪರಿಸ್ಥಿತಿ ಮಾತ್ರ ಆಶಾದಾಯಕವಾಗಿಲ್ಲ. ಆಂತರಿಕ ಸಂಘರ್ಷದಿಂದ ಕೆಲವು ರಾಜ್ಯದ ಪ್ರಮುಖ ನಾಯಕರೇ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ.
ಇಲ್ಲವೇ, ಪಕ್ಷವನ್ನು ತೊರೆದು ಇನ್ನೊಂದು ಪಕ್ಷಕ್ಕೆ ಹಾರುತ್ತಿದ್ದಾರೆ. ಈ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ, ಕಾಂಗ್ರೆಸ್ ನಾಯಕರಿಗೆ ಕರ್ನಾಟಕ ಆಶಾದಾಯಕ ರಾಜ್ಯವಾ ಗಿಯೇ ಉಳಿದಿದೆ ಎಂದರೆ ತಪ್ಪಾಗುವುದಿಲ್ಲ. ಕರ್ನಾಟಕ ಹೊರತು ಪಂಬಾಜ್‌ನಲ್ಲಿ ಕ್ಯಾ.ಅಮರಿಂದರ್ ಸಿಂಗ್ ಅವರ ನೇತೃತ್ವದ ಸರಕಾರ ಕಾಂಗ್ರೆಸ್ ಆಶಾ ದಾಯಕವಾಗಿತ್ತು. ಆದರೀಗ ಪಕ್ಷದ ವರಿಷ್ಠರ ನಡೆ ಖಂಡಿಸಿ, ಅಮರಿಂದರ್ ಸಿಂಗ್ ಸಹ ರಾಜೀನಾಮೆ ನೀಡಿ ದ್ದಾರೆ. ಇದೀಗ ಅವರು ಬೇರೆ ಪಕ್ಷಕ್ಕೆ ಹೋಗುವ ಸಾಧ್ಯತೆಗಳೂ ಇವೆ ಎನ್ನುವ ಮಾತುಗಳು ರಾಜಕೀಯ ಮೊಗಸಾಲೆಯಲ್ಲಿ ಕೇಳಿಬಂದಿದೆ. ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಿರುವುದು, ಭವ್ಯ ಇತಿಹಾಸವನ್ನು ಹೊಂದಿ ರುವ ಕಾಂಗ್ರೆಸ್ ಈ ಸ್ಥಿತಿಗೆ ಏಕಾಏಕಿ ಬರಲಿಲ್ಲ. ಆರಂಭದಲ್ಲಿಯೇ ಕಾಣಿಸಿಕೊಂಡ ಹುಳುಕುಗಳನ್ನು ಸರಿಪಡಿಸಿ ಕೊಳ್ಳದೇ ಬಿಟ್ಟಿರುವುದೇ ಇಂದು ಭಾರಿ ಸಮಸ್ಯೆಗೆ ಕಾರಣವಾಗಿದೆ.
ಈ ಹಂತದಲ್ಲಿ ದೇಶದಲ್ಲಿರುವ ಕಾಂಗ್ರೆಸ್ ಪರಿಸ್ಥಿತಿ ಅವಲೋಕಿಸುವುದಾದರೆ, 31 ರಾಜ್ಯಗಳ ಪೈಕಿ ಕಾಂಗ್ರೆಸ್ ಮುಖ್ಯಮಂತ್ರಿಗಳು ಪಂಜಾಬ್, ರಾಜಸ್ಥಾನ, ಛತ್ತೀಸ್ ಗಡದಲ್ಲಿ ಮಾತ್ರ ಇರುವುದು. ಇನ್ನುಳಿದಂತೆ ತಮಿಳು ನಾಡು, ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ನಲ್ಲಿ ರಚಿಸಿರುವ ಸಮ್ಮಿಶ್ರದಲ್ಲಿ ಕಾಂಗ್ರೆಸ್ ಪಾಲಿದೆ ಯಷ್ಟೇ. ಅಂದರೆ 31 ರಾಜ್ಯಗಳ ಪೈಕಿ ಕೇವಲ ಆರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಈ ಆರರಲ್ಲಿ ಮೂರು ರಾಜ್ಯದಲ್ಲಿ ಸಿಎಂ ಕುರ್ಚಿಯಿದೆ. ಇನ್ನುಳಿ ದಂತೆ 10 ರಿಂದ 12 ರಾಜ್ಯದಲ್ಲಿ ಅಧಿಕೃತ ಪ್ರತಿಪಕ್ಷ ಸ್ಥಾನದಲ್ಲಿ ಇನ್ನಿತರ ಪಕ್ಷ ಗಳನ್ನು ಸೇರಿಸಿಕೊಂಡು ಪ್ರತಿಪಕ್ಷ ಸ್ಥಾನವನ್ನು ಪಡೆದಿದೆ. ಹಾಗಾದರೆ ಸುಮಾರು 16 ರಿಂದ 16 ರಾಜ್ಯ ಗಳಲ್ಲಿ ಕಾಂಗ್ರೆಸ್‌ನ ಪಾಲು ಏನು ಇಲ್ಲ ಎನ್ನುವುದು ಗಮನಾರ್ಹ ಸಂಗತಿ.
ಒಂದು ಕಾಲದಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದರೇ ‘ಗೆಲುವು’ ಎನ್ನುವ ಸ್ಥಿತಿಯಿತ್ತು. ಆದರೀಗ ಕಾಂಗ್ರೆಸ್ ಸ್ವತಂತ್ರವಾಗಿ ಪ್ರತಿಪಕ್ಷ ಸ್ಥಾನದಲ್ಲಿಯೂ ಕೂರುವ ಸ್ಥಾನದಲ್ಲಿಲ್ಲ. ಹೀಗಿರುವಾಗಲೂ ಪಂಜಾಬ್‌ನಲ್ಲಿ ಅಮರಿಂದರ್ ಸಿಂಗ್ ಕಾಂಗ್ರೆಸ್ ಅನ್ನು ಅಽಕಾರಕ್ಕೆ ಬಂದು, ಕೆಲಸ ಮಾಡುತ್ತಿದ್ದರು. ಡ್ರಗ್ಸ್ ನಿಯಂತ್ರಣದಲ್ಲಿ ವಿಫಲ ರಾಗಿದ್ದರು ಎನ್ನುವ ಆರೋಪ ಹೊರತಾಗಿಯೂ, ಸಾರ್ವಜನಿಕರಲ್ಲಿ ವಿಶ್ವಾಸಗಳಿಸುವ ನಿಟ್ಟಿನಲ್ಲಿ ಕಾರ್ಯವನ್ನು ಮಾಡುತ್ತಿದ್ದರು. ಆದರೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ಆಪ್ತರಾಗಿದ್ದ ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ಪದೇಪದೆ ಕಿರಿಕಿರಿ ಮಾಡುವ ಮೂಲಕ ಅಮರಿಂದರ್ ಸಿಂಗ್ ರಾಜೀನಾಮೆ ನೀಡುವಂತೆ ಮಾಡಿ, ಹೊಸ ಮುಖ್ಯಮಂತ್ರಿಯನ್ನು ಕೂಡಿಸಿದ್ದಾರೆ.
ಕ್ಯಾಪ್ಟನ್ ಸ್ಥಾನಕ್ಕೆ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ನೀಡುವ ಮೊದಲು, ‘ಕಾಂಗ್ರೆಸ್ ಪಕ್ಷ ನೋವು ನೀಡಿದೆ. ನನ್ನನ್ನು ಪದೇಪದೆ ಅವಮಾನಿ ಸುತ್ತಿದೆ. ಆದ್ದರಿಂದ ರಾಜೀನಾಮೆ ನೀಡಿದ್ದೇನೆ. ಪಾಕಿಸ್ತಾನದ ಪ್ರಧಾನಿ ಯೊಂದಿಗೆ, ಸೇನಾ ಮುಖ್ಯಸ್ಥರೊಂದಿಗೆ ಒಡನಾಟವಿರುವ ಸಿಧುವನ್ನು ಮಾತ್ರ ಈ ಸ್ಥಾನಕ್ಕೆ ಕೂರಿಸಬೇಡಿ’ ಎಂದಿದ್ದಾರೆ. ಬಾಕಿಯಿರುವ ಐದು ತಿಂಗಳಲ್ಲಿ ಚುನಾವಣೆ ಹೋಗಬೇಕಾದ ಸಮಯದಲ್ಲಿ ಆಡಳಿತ ಪಕ್ಷದಲ್ಲಿ ಈ ರೀತಿ ಭಿನ್ನಾಭಿಪ್ರಾಯ, ಗೊಂದಲ ಗೋಜಲುಗಳನ್ನು ಸೃಷ್ಟಿಸಿಕೊಂಡರೆ , ಮುಂದಿನ ಚುನಾವಣೆಯಲ್ಲಿ ಪಕ್ಷ ಸಂಘಟನೆ ಯಾವ ರೀತಿ ಇರುತ್ತದೆ ಎನ್ನುವುದನ್ನು ಊಹಿಸಬಹುದು. ಒಂದು ವೇಳೆ ಇದೇ ಮುಂದುವರಿದರೆ, ಮುಂಬರುವ ದಿನದಲ್ಲಿ ಕಾಂಗ್ರೆಸ್ ಮತ್ತೊಂದು ಪ್ರಮುಖ ರಾಜ್ಯವನ್ನು ಕಳೆದುಕೊಂಡರೂ ಅಚ್ಚರಿಯಿಲ್ಲ.
ಈ ಎಲ್ಲವನ್ನು ನೋಡಿದರೆ ಸದ್ಯದ ಪರಿಸ್ಥಿತಿಗೆ ಕಾಂಗ್ರೆಸ್ ಪಕ್ಷಕ್ಕೆ ಆಶಾದಾಯಕವಾಗಿ ಕಾಣುತ್ತಿರುವ ಏಕೈಕ ರಾಜ್ಯವೆಂದರೆ ಅದು ‘ಕರ್ನಾಟಕ’ ಎಂದರೆ
ತಪ್ಪಾಗುವುದಿಲ್ಲ. ಕಾಂಗ್ರೆಸ್ ರಾಷ್ಟ್ರೀಯ ಸಂಘಟನೆ ಹಾಗೂ ಇತರ ರಾಜ್ಯಗಳ ಸಂಘಟನೆಯನ್ನು ಗಮನಿಸಿ, ಕರ್ನಾಟಕದಲ್ಲಿರುವ ಪಕ್ಷ ಸಂಘಟನೆಯನ್ನು ನೋಡಿದರೆ, ಈಗಲೂ ರಾಜ್ಯದಲ್ಲಿ ಉತ್ತಮ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ ಎನ್ನುವುದನ್ನು ಒಪ್ಪಬೇಕು. ಇದರೊಂದಿಗೆ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಇರುವ ಮತ್ತೊಂದು ‘ಪ್ಲಸ್ ಪಾಯಿಂಟ್’ ಎಂದರೆ, ಬಿಜೆಪಿ ಹಾಗೂ ಕಾಂಗ್ರೆಸ್‌ನ ಸಂಘಟನೆ ಸಮಬಲದಿಂದ ಕೂಡಿದೆ. ಹಾಗೂ ಬಿಜೆಪಿಯಲ್ಲಿರುವ ಕೆಲ ಗೊಂದಲಗಳ ಲಾಭ ಪಡೆದುಕೊಂಡು ಮುಂದಿನ ಒಂದೂವರೆ ವರ್ಷದಲ್ಲಿ ಎದುರಾಗುವ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಅವಕಾಶ ಕಾಂಗ್ರೆಸ್‌ಗೆ ಇದೆ.
ಜಾತಿ, ಪ್ರದೇಶ ಲೆಕ್ಕಾಚಾರದಲ್ಲಿಯೂ ಕರ್ನಾಟಕದಲ್ಲಿ ಕಾಂಗ್ರೆಸ್ ಉತ್ತಮ ಸ್ಥಿತಿಯಲ್ಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾ ಮಯ್ಯ, ಲಿಂಗಾಯತ ಸಮುದಾಯ ಪ್ರತಿನಿಧಿಸುವ ಎಂ.ಬಿ.ಪಾಟೀಲ್, ದಲಿತ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ , ಡಾ.ಪರಮೇಶ್ವರ ಹೀಗೆ ಉತ್ತಮ ಕಾಂಬಿ ನೇಷನ್‌ನಲ್ಲಿ ಕರ್ನಾಟಕ ಕಾಂಗ್ರೆಸ್ ಘಟಕ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಕಾಂಗ್ರೆಸ್ ಪುಟಿದು ಏಳುವ ಸಾಧ್ಯತೆ ಇರುವ ರಾಜ್ಯದ ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.
ಹಾಗೆ ನೋಡಿದರೆ ಕಾಂಗ್ರೆಸ್ ವರಿಷ್ಠರಿಗೆ ಕರ್ನಾಟಕ ಒಂದು ರೀತಿಯ ಸೇಫ್ ಪ್ಲೇಸ್. ಈ ಹಿಂದೆ ಇಂದಿರಾ ಗಾಂಧಿ ಅವರು 1978ರಲ್ಲಿ ಗೆಲುವಿನ ಹುಡುಕಾಟ ದಲ್ಲಿ ಅರಸಿ ಬಂದದ್ದು ಕರ್ನಾಟಕದ ಚಿಕ್ಕಮಗಳೂರಿಗೆ. ಇಂದಿರಾ ಹಾಗೂ ರಾಜೀವ್ ಗಾಂಧಿ ಬಳಿಕ ರಾಜಕೀಯ ಪ್ರವೇಶ ಮಾಡಲು ಒಲ್ಲದ ಮನಸಿನಿಂದಲೇ ಒಪ್ಪಿದ ಸೋನಿಯಾ ಗಾಂಧಿ ಅವರಿಗೆ ರಾಜಕೀಯ ಹುಟ್ಟು ನೀಡಿದ್ದು ಕರ್ನಾಟಕ ಬಳ್ಳಾರಿ ಜಿಲ್ಲೆ. ಬಳ್ಳಾರಿಯಿಂದ ಸ್ಪರ್ಧಿಸಿದ್ದ ಸೋನಿಯಾಗೆ ಎದುರಾಳಿಯಾಗಿದ್ದು ಬಿಜೆಪಿಯ ಸುಷ್ಮಾ ಸ್ವರಾಜ್. ಆದರೂ ಬಳ್ಳಾರಿಯ ಜನ ಸೋನಿಯಾ ಗಾಂಽ ಅವರಿಗೆ ಮಣೆ ಹಾಕಿದರು. ಆದ್ದರಿಂದ ಕಾಂಗ್ರೆಸ್ ತನ್ನ ಭವ್ಯ ಇತಿಹಾಸವನ್ನು ಆರಂಭಿಸ ಲೇಬೇಕು ಎಂದುಕೊಂಡರೆ, ಕರ್ನಾಟಕಕ್ಕಿಂತ ಉತ್ತಮ ಅವಕಾಶ ಸದ್ಯದ ಪರಿಸ್ಥಿತಿಯಲ್ಲಿ ಮತ್ತೊಂದಿಲ್ಲ.
ಆದರೆ ಕರ್ನಾಟಕ ಕಾಂಗ್ರೆಸ್‌ನಲ್ಲಿ, ಇತರ ರಾಜ್ಯದಲ್ಲಿರುವಂತೆ ಹಲವು ಗೊಂದಲಗಳಿವೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಆಯ್ಕೆಯಾಗುವ ತನಕ,
ಕರ್ನಾಟಕದಲ್ಲಿ ಕೇವಲ ಒಂದು ಶಕ್ತಿ ಕೇಂದ್ರವಿತ್ತು. ಅದು ‘ಸಿದ್ದರಾಮಯ್ಯ’. ಆದರೆ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಅಧಿಕಾರ ಸ್ವೀಕರಿಸುತ್ತಿದ್ದಂತೆ, ಎರಡೆರಡು
ಶಕ್ತಿಕೇಂದ್ರಗಳಾಗಿ, ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರ ನಿವಾಸವಾಗಿದೆ. ಈ ರೀತಿ ಎರಡು ಶಕ್ತಿಕೇಂದ್ರಗಳಿಂದ, ಆಗಾಗ್ಗೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಭಿನ್ನಾಭಿ ಪ್ರಾಯಗಳು ಮೂಡುತ್ತಿವೆ. ಉದಾಹರಣೆ ನೀಡುವುದಾದರೆ, ಕೆಲ ತಿಂಗಳ ಹಿಂದೆ ‘ಮುಂದಿನ ಮುಖ್ಯಮಂತ್ರಿ’ ಚರ್ಚೆ ಆರಂಭವಾಗಿತ್ತು.
ಮೊದಲಿಗೆ ಡಿಕೆ ಅಥವಾ ಸಿದ್ದರಾಮಯ್ಯ ಎನ್ನುವ ಪ್ರಶ್ನೆಯಿತ್ತು. ಆದರೆ ಇದಾದ ಬಳಿಕ ಕನಿಷ್ಠ 20 ಮಂದಿ ತಾನು ಆಕಾಂಕ್ಷಿ ಎನ್ನುವ ಸಂದೇಶವನ್ನು ರವಾನಿಸಿ ದರು. ಇದು ರಾಹುಲ್ ಗಾಂಧಿ ಅವರ ಅಂಗಳಕ್ಕೆ ತಲುಪಿ, ಕೊನೆಗೆ ಈ ಬಗ್ಗೆ ಮಾತನಾಡಬೇಡಿ ಎಂದಾಗಲೇ ಹೊತ್ತಿದ್ದ ಬೆಂಕಿ ಆರಿದ್ದು. ಮತ್ತೊಂದು ಉದಾಹರಣೆ ನೀಡುವುದಾದರೆ, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಯಲಿ ಎಂದು ವರಿಷ್ಠರು ನಡೆಸಿದ ಈ ಚುನಾವಣೆಯಲ್ಲಿ, ರಕ್ಷಾ ರಾಮಯ್ಯ ಗೆಲುವು ಸಾಧಿಸಿದ್ದರು. ಆದರೆ ಇದೇ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ನಳಪಾಡ್ ತನಗೆ ಬಿಟ್ಟುಕೊಡುವಂತೆ ಪಟ್ಟು ಹಿಡಿದರು.
ಚುನಾವಣೆಯಲ್ಲಿ ನಡೆದ ಅಕ್ರಮದ ಆರೋಪ ನಳಪಾಡ್ ಮೇಲೆ ಬಂದಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿತ್ತು. ಆದರೂ ಪಟ್ಟು ಬಿಡದ ನಳಪಾಡ್ ಅಧ್ಯಕ್ಷ ಸ್ಥಾನಕ್ಕೆ ಆಗ್ರಹಿಸಿದರು. ಕೊನೆಗೆ ಈ ವಿವಾದ ರಕ್ಷಾ ರಾಮಯ್ಯ- ನಳಪಾಡ್ ಬದಲಿಗೆ, ಸಿದ್ದರಾಮಯ್ಯ- ಡಿ.ಕೆ ಶಿವಕುಮಾರ್ ಬಣಗಳ ನಡುವಿನ ಯುದ್ಧವಾಗಿ ಆರಂಭವಾಗಿ, ಆರೋಪ ಪ್ರತ್ಯಾರೋಪಗಳನ್ನು ಮಾಡಿ ದೊಡ್ಡ ವಿವಾದಕ್ಕೆ ಕಾರಣವಾಯಿತು. ತಮ್ಮ ಬಣದ ರಕ್ಷಾ ರಾಮಯ್ಯ ಅವರನ್ನೇ ಮುಂದುವರಿಸ ಬೇಕೆಂದು ಸಿದ್ದರಾಮಯ್ಯ ಪಟ್ಟು ಹಿಡಿದರೆ, ರಕ್ಷಾ ರಾಮಯ್ಯರನ್ನು ಕೆಳಗಿಳಿಸಿ, ತಮ್ಮ ಅಭ್ಯರ್ಥಿ ನಳಪಾಡ್ ರನ್ನು ಕೂರಿಸಬೇಕು ಎನ್ನುವುದು ಡಿಕೆ ಹಠ.
ಕೊನೆಯಲ್ಲಿ ಇಬ್ಬರಿಗೂ ಅಧಿಕಾರ ಹಂಚಿಕೆಯಾದ ಬಳಿಕವೇ, ಈ ವಿಷಯ ತಣ್ಣಗಾಗಿದ್ದು. (ಆದರೆ ನಳಪಾಡ್‌ಗೆ ಅಧಿಕಾರ ನೀಡಲು ಕಾಂಗ್ರೆಸ್ ವರಿಷ್ಠರು ತೀರ್ಮಾನಿಸಿರುವುದಕ್ಕೆ ಈಗಲೂ ಅನೇಕ ಕಾಂಗ್ರೆಸಿಗರ ವಿರೋಧವಿದೆ ಎನ್ನುವುದು ಬೇರೆ ಮಾತು).
ಇತರ ರಾಜ್ಯಗಳಲ್ಲಿ ಪವರ್ ಸೆಂಟರ್ ಕಾಣೆಯಾಗುತ್ತಿರುವ ಆತಂಕದಲ್ಲಿ ಕಾಂಗ್ರೆಸ್‌ಗೆ ಕರ್ನಾಟಕ ಆಶಾದಾಯಕ ರಾಜ್ಯವಾಗಿದೆ. ಆದರೆ ಕಾಂಗ್ರೆಸ್‌ನಲ್ಲಿ ದಿನ ದಿಂದ ದಿನಕ್ಕೆ ಹೆಚ್ಚುತ್ತಿರುವ ಆಂತರಿಕ ಕಲಹಕ್ಕೆ ಕಾರಣವನ್ನು ಹುಡುಕಲೇಬೇಕಿದೆ. ಇಲ್ಲದಿದ್ದರೆ, ಈ ಆಂತರಿಕ ಸಮಸ್ಯೆಯ ಅತಿಹೆಚ್ಚು ಲಾಭ ಪಡೆದಿರುವುದು
ಬಿಜೆಪಿ. ಈ ಲಾಭ ಕೇವಲ ಅಲ್ಲಿಂದ ಹೊರಬಂದವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಪಕ್ಷ ಬಲವರ್ಧನೆಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ, ಕಾಂಗ್ರೆಸ್ ಸಂಘಟನೆ ವಿಫಲವಾದ ಕಡೆಯಲ್ಲ, ಪರ್ಯಾಯ ಪಕ್ಷವಾಗಿ ಕಾಣಿಸಿಕೊಂಡು ಅಽಕಾರಕ್ಕೆ ಬಂದಿದ್ದಾರೆ, ಇಲ್ಲವೇ ಅಽಕಾರದ ಅಂಚಿಗೆ ಅಥವಾ ಸರಕಾರವನ್ನು ರಚಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿವೆ.
ಸೋನಿಯಾ ಗಾಂಧಿ ಅವರಿಂದ ರಾಹುಲ್ ಗಾಂಧಿ ಅವರಿಗೆ ಅಧಿಕಾರ ಹಸ್ತಾಂತರವಾದಾಗಿನಿಂದ ಕಾಂಗ್ರೆಸ್ ಒಂದು ರೀತಿಯ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಕಳೆದ ಏಳೆಂಟು ವರ್ಷದಲ್ಲಿ 30ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ಬಿಜೆಪಿಯತ್ತ ವಾಲಿದ್ದಾರೆ. ಇದಿಷ್ಟೇ ಅಲ್ಲದೇ ಹಲವು ನಾಯಕರು ಬಿಜೆಪಿ ಹೊರತು ತೃಣಮೂಲ ಕಾಂಗ್ರೆಸ್ ಅಥವಾ ಇನ್ನಿತ್ತರ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ತೀರಾ ಇತ್ತೀಚಿಗೆ ರಾಹುಲ್ ಗಾಂಧಿ ಅವರ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸುಶ್ಮಿತಾ ದೇವ್, ಜೋತ್ಯಿರಾದಿತ್ಯ ಸಿಂಧ್ಯಾ ಸೇರಿದಂತೆ ಹಲವು ಪಕ್ಷದಿಂದ ಹೊರಗೆ ಹೆಜ್ಜೆ ಇಟ್ಟಿದ್ದಾರೆ. ಈ ರೀತಿ ಪಕ್ಷದಿಂದ ಹೊರಬಂದ ವರಿಗೆಲ್ಲ ಬಿಜೆಪಿ ರಾಜ್ಯ ಸಭಾ ಅಥವಾ ಇನ್ನಿತ್ತರ ಆಯಕಟ್ಟಿನ ಸ್ಥಳದಲ್ಲಿ ಕೂರಿಸುವ ಮೂಲಕ, ಸಂಘಟನೆ ಹೆಚ್ಚಿಸಿಕೊಳ್ಳುತ್ತಿದೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣಾ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಡಿ ತಿವಾರಿ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ, ಉತ್ತರಾಖಂಡ್ ಮಾಜಿ ಮುಖ್ಯಮಂತ್ರಿ ವಿಜಯ್ ಬಹುಗುಣ, ಮಣಿಪುರದ ಮಾಜಿ ಮುಖ್ಯಮಂತ್ರಿ ಬೀರೇನ್ ಸಿಂಗ್ ಬಿಜೆಪಿಗೆ ಬಂದು, ಇಲ್ಲಿಯೂ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಈಗ ಕೊಟ್ಟಿರುವ ಪಟ್ಟಿ ಕೇವಲ ಕಾಂಗ್ರೆಸ್ ಮುಖ್ಯಮಂತ್ರಿಗಳಾಗಿ, ಕೇಂದ್ರದ ಸಚಿವರಾಗಿದ್ದವರದ್ದು. ಇದೇ ರೀತಿ ನೂರಾರು ಕಾಂಗ್ರೆಸ್‌ನ ನಾಯಕರು ಪಕ್ಷ ತೊರೆದಿದ್ದಾರೆ. ಈ ರೀತಿ ಪಕ್ಷ ತೊರೆಯಲು ಬಹುತೇಕರು ನೀಡಿರುವ ಕಾರಣ, ಒಂದು ರಾಹುಲ್ ಗಾಂಧಿ ಅವರ ನೀತಿ ಇಲ್ಲವೇ, ಕಾಂಗ್ರೆಸ್‌ನಲ್ಲಿ ಇತ್ತೀಚಿಗೆ ವರಿಷ್ಠರಿಂದ ಕೇವಲ ಒಂದು ಕಡೆಯ ವಾದ ಆಲಿಸಿ, ಮತ್ತೊಬ್ಬರನ್ನು ನಿರ್ಲಕ್ಷ್ಯ ಮಾಡುವ ನೀತಿ.
ಇದು ಪಕ್ಷ ಬಿಟ್ಟವರ ಕಥೆಯಾದರೆ, ಸಚಿನ್ ಪೈಲಟ್, ಅಮರಿಂದರ್ ಸಿಂಗ್, ಕಪಿಲ್ ಸಿಬಲ್ ಸೇರಿದಂತೆ ಅನೇಕ ನಾಯಕರು ಪಕ್ಷದಲ್ಲಿದ್ದುಕೊಂಡೇ, ಪಕ್ಷದ ನೀತಿಯನ್ನು ವಿರೋಧಿಸುತ್ತಿದ್ದಾರೆ. ಒಂದು ಹಂತದಲ್ಲಿ ಸಚಿನ್ ಪೈಲಟ್ ರಾಜೀನಾಮೆ ನೀಡುವುದು ಬಹುತೇಕ ನಿಶ್ಚಿತವಾಗಿತ್ತು. ಆದರೆ ರಾಹುಲ್ ಗಾಂಧಿ ಅವರ ಪ್ರಯತ್ನದಿಂದ ಒಲ್ಲದ ಮನದಿಂದಲೇ ಪಕ್ಷದಲ್ಲಿಯೇ ಉಳಿದುಕೊಂಡಿದ್ದಾರೆ. ಪಕ್ಷದಲ್ಲಿರುವ ಈ ಗೊಂದಲಗಳಿಗೆ ರಾಹುಲ್ ಗಾಂಧಿ ಅವರ ನಾಯಕತ್ವವೇ ಕಾರಣ ಎನ್ನುವ ಮಾತಿದೆ. ಆದರೆ ಗಾಂಧಿ ಹೊರತಾದ ಕಾಂಗ್ರೆಸ್‌ಗೆ ಯಾರೊಬ್ಬರು ತಯಾರಿಲ್ಲದೇ ಇರುವುದರಿಂದ ಈ ಸಮಸ್ಯೆ ಜಟಿಲವಾಗಿ, ಹಾಗೇ ಮುಂದುವರಿದಿದೆ.
ಈ ರೀತಿ ರಾಷ್ಟ್ರೀಯ ಪಕ್ಷವಾಗಿ, ಸುಮಾರು ಐದಾರು ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ನ ಪರಿಸ್ಥಿತಿಯನ್ನು ಪರಾಮರ್ಶೆ ಮಾಡಿಕೊಳ್ಳಬೇಕಾಗಿದೆ. ಈ
ಹಂತದಲ್ಲಿಯೂ ‘ಗಾಂಧಿ’ ಕುಟುಂಬದ ಹೆಸರಲ್ಲಿ ಪಕ್ಷವನ್ನು ಓಡಿಸುತ್ತೇವೆ ಎನ್ನುವ ಮನಸ್ಥಿತಿಯಿಂದ ಹೊರಬಂದು, ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವಾಗಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಇನ್ನಷ್ಟು ಕಠಿಣ ಆಗುವುದರಲ್ಲಿ ಸಂಶಯವೇ ಇಲ್ಲ