Wednesday, 9th October 2024

ರಾಜ್ಯ ಕ್ರಿಕೆಟ್‌ಗೆ ಬೇಕಿದೆ ಭಟ್ಟರ ಭರ್ಜರಿ ಸರ್ಜರಿ

ಕ್ರೀಡಾವಲೋಕನ

ಮರಿಲಿಂಗಗೌಡ ಮಾಲಿಪಾಟೀಲ್

ಮಾಜಿ ಟೆಸ್ಟ್ ಆಟಗಾರ, ಎಡಗೈ ಸ್ಪಿನ್ನರ್ ಎ.ರಘುರಾಮ್ ಭಟ್ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ನೂತನ ಅಧ್ಯಕ್ಷ ರಾಗಿ ಇತ್ತೀಚೆಗೆ ತಾನೇ ಅಧಿಕಾರ ಸ್ವೀಕರಿಸಿದ್ದಾರೆ. ಅಧ್ಯಕ್ಷರಾಗಿ ಏನು ಮಾಡಬೇಕೆಂಬುದನ್ನು ಯೋಚಿಸುವ ಮುನ್ನವೇ ನಡೆದ ಘಟನೆ ಅವರ ಕರ್ತವ್ಯವೇನು ಎನ್ನುವುದನ್ನು ನಿರ್ವಚಿಸಿದೆ. ಅವರು ಅಧಿಕಾರದ ಹೊಸ್ತಿಲಲ್ಲಿ ಮೊದಲ ಹೆಜ್ಜೆ ಇಟ್ಟಿರುವಾಗಲೇ ವಿಜಯ್ ಹಜಾರೆ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಹೀನಾಯವಾಗಿ ಸೋತಿದೆ.

ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಸೌರಾಷ್ಟ್ರ ತಂಡ ಬಗ್ಗುಬಡಿದಿದೆ. ನಿಗದಿತ ೫೦ ಓವರ್‌ಗಳನ್ನು ಪೂರ್ತಿ ಯಾಗಿ ಆಡಲೂ ಸಾಧ್ಯವಾಗದ ಕರ್ನಾಟಕ ೧೭೧ಕ್ಕೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಸೌರಾಷ್ಟ್ರ ಕೇವಲ ೩೬ ಓವರ್‌ ಗಳಲ್ಲಿ ೫ ವಿಕೆಟ್‌ಗೆ ೧೭೨ ರನ್ ಹೊಡೆದು ಫೈನಲ್ಗೆ ನುಗ್ಗಿದರು. ಕರ್ನಾಟಕ ತಂಡದ ಆರ್. ಸಮರ್ಥ್ ಒಬ್ಬರೇ ೮೮ರನ್ ಹೊಡೆದರೆ, ಇತರ ರನ್‌ಗಳೂ ಸೇರಿದಂತೆ ಉಳಿದ ೧೦ ಆಟಗಾರರ ಕೊಡುಗೆ ಕೇವಲ ೮೩ ರನ್‌ಗಳು.

ಒಂದು ತಂಡವಾಗಿ ಕರ್ನಾಟಕದ್ದು ಘೋರ ವೈಫಲ್ಯ. ಇದೇ ರೀತಿ ಇತ್ತೀಚೆಗೆ ನಡೆದ ಅಂಡರ್ ೧೯ ವಿನೂಮಂಕಡ್ ಟ್ರೋಫಿಗೆ ಕನ್ನಡಿಗನಲ್ಲದ, ಕನ್ನಡ ಓದಲು, ಬರೆಯಲು, ಮಾತನಾಡಲು ಬರದ ಕೇರಳದ ಮಲಯಾಳಂ ಭಾಷೆ ಮಾತಾಡುವ ವಿಶಾಲ್ ಹೊನಟ್ ಅವರನ್ನು ನಾಯಕನಾಗಿ ಮಾಡಿ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದಕ್ಕೆ ಹೊಣೆ ಹೊರುವವರು ಯಾರು? ಇದರ ವೈ-ಲ್ಯಕ್ಕೆ ಆಯ್ಕೆ ಸಮಿತಿಯ ಜವಾಬ್ದಾರಿ ಇರುವುದಿಲ್ಲವಾ? ಅಥವಾ ಕರ್ನಾಟಕದ ಕ್ರಿಕೆಟ್ ತಂಡಕ್ಕೆ ನಾಯಕನಾಗುವ ಅರ್ಹತೆ ಕನ್ನಡಿಗ ಕ್ರಿಕೆಟ್ ಆಟಗಾರರಿನಿಗೆ ಇಲ್ಲವಾ? ಅಂತಹ ಆಟಗಾರನನ್ನ ತಯಾರು ಮಾಡುವಲ್ಲಿ ಕರ್ನಾಟಕ ಕ್ರಿಕೆಟ್ ಅಸೋಸಿ ಯೇಷನ್ ದೃಢನಿರ್ಧಾರ ತೆಗೆದುಕೊಂಡಿಲ್ಲವಾ? ಎಂಬ ಕ್ರಿಕೆಟ್ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಕೊಡುವವರು ಯಾರು? ಕರ್ನಾಟಕ ಕ್ರಿಕೆಟ್‌ಗೆ ರಘುರಾಮ್ ಭಟ್ ಸರ್ಜರಿ ಮಾಡಲೇಬೇಕಿದೆ.

ಒಂದು ಸೋಲಿಗೆ ಇಷ್ಟು ವಿವರಣೆ ಬೇಕಾ ಎನ್ನಿಸಬಹುದು. ಜತೆಗೆ ಸೋಲು-ಗೆಲುವನ್ನು ಸಮಾನವಾಗಿ ಕಾಣುವುದನ್ನೇ
ಕ್ರೀಡಾ ಮನೋಭಾವ ಎಂದೂ ಹೇಳಬಹುದು. ಸೋಲು- ಗೆಲುವು ಸಮಾನವಾಗಿ ಬಂದರೆ ಅದನ್ನು ಸಮಾನವಾಗಿ ಕ್ರೀಡಾಭಿ ಮಾನಿಗಳೂ ಸ್ವೀಕರಿಸಬಹುದು. ಆದರೆ ಗೆಲುವು ಅಪರೂಪವಾಗಿ, ಸೋಲೇ ಹೆಚ್ಚಾದರೆ ಅದನ್ನು ಸಮಾನವಾಗಿ
ಸ್ವೀಕರಿಸುವುದಾದರೂ ಹೇಗೆ? ಪರಿಶೀಲಿಸಿದರೆ ಕಳೆದ ಬಾರಿ ಕರ್ನಾಟಕ ತಂಡ ರಣಜಿ ಟ್ರೋಫಿ ಗೆದ್ದದ್ದು ೨೦೧೩-೧೪ರಲ್ಲಿ. ಅದಕ್ಕೂ ಮೊದಲು ಗೆದ್ದದ್ದು ೯೮-೯೯ರಲ್ಲಿ.

ಅಂದರೆ ಕಳೆದ ೨ ದಶಕಗಳಲ್ಲಿ ಕರ್ನಾಟಕ ಒಂದು ಬಾರಿ ಮಾತ್ರ ರಣಜಿ ಚಾಂಪಿಯನ್ ಆಗಿದೆ. ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಸೆಮಿ ಫೈನಲ್  ತನಕ ನುಗ್ಗಿದ ಕರ್ನಾಟಕ ಚಾಂಪಿಯನ್ ಆಗುತ್ತದೇನೋ ಎಂದು ನಿರೀಕ್ಷಿಸಿದವರಿಗೆ ಕಾದಿದ್ದು ಸೆಮಿ-ನಲ್ ಸೋಲು. ರಘುರಾಮ್ ಭಟ್ಟರ ಮುಂದಿರುವ ಸವಾಲು ಏನು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲ!

ಇನ್ನು ಆಯ್ಕೆಗಳೇ ಇಲ್ಲದ ಆಯ್ಕೆ ಸಮಿತಿ ರಾಜ್ಯದಲ್ಲಿದೆ. ೨೦-೨೦ ವಿಶ್ವಕಪ್‌ನಲ್ಲಿ ಭಾರತ ತಂಡ ಸೋಲುತ್ತಿದ್ದಂತೆ ಚೇತನ್ ಶರ್ಮಾ ಅಧ್ಯಕ್ಷತೆಯ ಆಯ್ಕೆ ಸಮಿತಿ ಬರ್ಕಾಸ್ತಾಗಿದೆ. ಆದರೆ ಕರ್ನಾಟಕ ತಂಡದ ಆಯ್ಕೆ ಸಮಿತಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಸೋಲಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ಯೋಚನೆ ಆಯ್ಕೆ ಸಮಿತಿಯ ಯಾರಿಗೂ ಬಂದಿಲ್ಲ. ಇಷ್ಟಕ್ಕೂ ಆಯ್ಕೆ ಸಮಿತಿಯ ಕೆಲಸ ಸಮರ್ಥ ತಂಡವನ್ನು ಆಯ್ಕೆ ಮಾಡುವುದೇ ಅಲ್ಲವೇ? ಕಳಪೆ ಆಟವಾಡಿದ ಆಟಗಾರರಿಗೆ ಗೇಟ್ ಪಾಸ್ ಕೊಟ್ಟು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ತಂಡಕ್ಕೆ ನವಚೈತನ್ಯ ತುಂಬಬೇಕು. ಆದರೆ ಆಯ್ಕೆ ಸಮಿತಿಯ ಮುಂದೆ ಪರ್ಯಾಯ ಆಯ್ಕೆಗಳೇ ಇಲ್ಲವೇನೋ ಎನ್ನುವಂತೆ ಅದೇ ಪಾಂಡೆ, ಮಯಾಂಕ್ ಅಗರವಾಲ… ಸೋಲಲಿ ಗೆಲ್ಲಲಿ ಅದೇ ತಂಡ.

ಕಳೆದ ಹತ್ತು ವರ್ಷದಿಂದ ಒಬ್ಬರನ್ನೇ ಆಯ್ಕೆ ಸಮಿತಿಯಲ್ಲಿ ಕೂರಿಸುವುದನ್ನು ಪಾರದರ್ಶಕತೆ ಎಂದು ಕರೆಯಬೇಕಾ? ಅಂಡರ್ ೧೪, ಅಂಡರ್ ೧೬, ಅಂಡರ್ ೧೯… ಇತ್ಯಾದಿ ನಾನಾ ಹಂತಗಳಲ್ಲಿ ಆಟಗಾರರು ಹೊಡೆದ ರನ್‌ಗಳ, ಬೌಲರ್‌ಗಳು ತೆಗೆದ ವಿಕೆಟ್‌ಗಳ ವಿವರವನ್ನು ಸಾರ್ವಜನಿಕರ ಮುಂದೆ ಇಡಲಿ. ಕ್ರಿಕೆಟ್ ಮಂಡಳಿ ಒಂದು ವೆಬ್‌ಸೈಟ್ ತೆರೆದು ಆಟಗಾರರ ಸಾಧನೆಯನ್ನು ಪಬ್ಲಿಕ್ ಡೊಮೆನ್‌ಗೆ ಬಿಡಲಿ. ಆಟಗಾರರ ಸಾಧನೆಯ ವಿವರಗಳನ್ನು ಕ್ರಿಕೆಟ್ ಮಂಡಳಿ ಸಾರ್ವಜನಿಕರಿಗೆ ಬಿಡುಗಡೆ ಮಾಡಿದರೆ ಆಗ ಔಪಚಾರಿಕವಾಗಿ ಒಂದು ಆಯ್ಕೆ ಸಮಿತಿ ಇದ್ದರೆ ಸಾಕು.

ಅರ್ಹರಲ್ಲದವರಿಗೆ ಅವಕಾಶ ನೀಡಿದರೆ ಕ್ರಿಕೆಟ್ ಪ್ರೇಮಿಗಳೇ ಉಗಿಯುತ್ತಾರೆ. ಆಯ್ಕೆಯಲ್ಲಿ ಪಾರದರ್ಶಕತೆ ಇದ್ದರೆ ಆಟ ಗಾರರಿಗೂ ಭಯ ಇರುತ್ತದೆ. ಚೆನ್ನಾಗಿ ಆಡುವ ಅನಿವಾರ್ಯ ಇರುತ್ತದೆ. ಚೆನ್ನಾಗಿ ಆಡಿದರೆ ಗೆಲ್ಲುವ ಸಾಧ್ಯತೆಗಳೂ ಇರುತ್ತದೆ. ರಘುರಾಮ ಭಟ್ ಹೊಸತನಕ್ಕೆ ನಾಂದಿ ಹಾಡುತ್ತಾರೆಯೇ? ದೇಶದಲ್ಲಿಯೇ ಮಾದರಿ ಆಗುತ್ತಾರೆಯೇ? ಒಂದು ನಿರ್ದಿಷ್ಟ ಕ್ಲಬ್‌ನ ಆಟಗಾರರಿಗೆ ಮಾನ್ಯತೆ ನೀಡಲಾಗುತ್ತಿದೆ ಎನ್ನುವ ಗುಸುಗುಸು ಆಟಗಾರರ ವಲಯದಲ್ಲಿಯೇ ಕೇಳಿಬರುತ್ತಿದೆ. ಕರ್ನಾಟಕ ಕ್ರಿಕೆಟ್ ಮಂಡಳಿ ಕರ್ನಾಟಕದ ಆಟಗಾರರಿಗೆ ಆದ್ಯತೆ ನೀಡಬೇಕು. ಆದರೆ ವಾಸ್ತವ ಅದಕ್ಕೆ ತದ್ವಿರುದ್ಧವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹೊರರಾಜ್ಯದ ಆಟಗಾರರು ಕರ್ನಾಟಕವನ್ನು ಪ್ರತಿನಿಧಿಸಿದರು.

ಅದು ತಪ್ಪೇನೂ ಅಲ್ಲ. ಆದರೆ ಅದು ಅತಿಯಾಗಬಾರದು ಅಷ್ಟೆ. ಈ ಮಾತನ್ನು ಯಾಕೆ ಪ್ರಸ್ತಾಪಿಸಬೇಕಾಯಿತೆಂದರೆ ಕರ್ನಾಟಕದ ಅಂಡರ್ ೧೯ತಂಡದ ಕ್ಯಾಪ್ಟನ್ ಆಗಿ ಆಯ್ಕೆಯಾದ ಕನ್ನಡಿಗನಲ್ಲದ, ಕನ್ನಡಬಾರದ, ವಯೋಮಿತಿಯಲ್ಲಿ ತಿದ್ದುಪಡಿ ಮಾಡಿಕೊಂಡ ಆರೋಪವಿರುವ ಬಿಹಾರದ ಯಶವಂತರಾಮ್ ಎಂಬ ಆಟಗಾರ. ಯಾಕೆ? ಕರ್ನಾಟಕದಲ್ಲಿ ಪ್ರತಿಭೆಗಳಿಲ್ಲವೇ? ಪರಿಸ್ಥಿತಿ ಹೀಗೇ ಮುಂದುವರಿದರೆ ಐಪಿಎಲ್‌ನಲ್ಲಿ ಕನ್ನಡಿಗರೇ ಇಲ್ಲದ ಆರ್‌ಸಿಬಿ ತಂಡವನ್ನು ಬೆಂಗಳೂರಿ ನದ್ದು ಎಂದಂತೆ ಕನ್ನಡಿಗರ ಪ್ರಾತಿನಿಧ್ಯ ಇಲ್ಲದ ತಂಡವನ್ನು ಕಾಣುವ ದಿನ ದೂರವಿಲ್ಲ ಎನಿಸುತ್ತಿದೆ.

ಹೊರ ರಾಜ್ಯದವರಿಗೆ ಅವಕಾಶ ನೀಡಬೇಕು ಎನ್ನುವ ಉತ್ಸಾಹ ನಿಮ್ಮಲ್ಲಿ ಇದ್ದರೆ ‘ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್’
ಎಂಬ ಹೆಸರನ್ನ ತೆಗೆದು ಆಲ್ ಇಂಡಿಯ ಕ್ರಿಕೆಟ್ ಅಸೋಸಿಯೇಷನ್ ಎಂದು ಮರುನಾಮಕರಣ ಮಾಡಿಕೊಂಡು ರಾಜ್ಯದ ಪ್ರತಿಭೆಗಳನ್ನು ದೂರವಿಟ್ಟು ಹೊರ ರಾಜ್ಯದವರಿಗೆ ಆದ್ಯತೆ ನೀಡಿದರೆ ನಿಮ್ಮ ನಿರ್ಧಾರಗಳಿಗೆ ಯಾರ ವಿರೋಧವೂ ಇರುವುದಿಲ್ಲ. ಕರ್ನಾಟಕ ಕ್ರಿಕಟ್ ಮಂಡಳಿ ಇರುವುದು ಅದು ಕನ್ನಡಿಗರಿಗಾಗಿ ಎಂಬುದನ್ನು ರಘುರಾಮ್ ಭಟ್ ಆಯ್ಕೆ
ಸಮಿತಿಗೆ ಹೇಳಲೇಬೇಕಿದೆ. ಅಲ್ಲದೇ ಈಗಾಗಲೇ ನಕಲಿ ಅಡ್ರೆಸ್ ನೀಡಿ ಆಧಾರ್ ಕಾರ್ಡ್ ಮಾಡಿಸಿ ಹೊರರಾಜ್ಯದ
ಆಟಗಾರರಿಗೆ ಕಡಿಮೆ ವಯಸ್ಸು ಎಂದು ತೋರಿಸಿ ಮೋಸದ ಮೂಲಕ ರಾಜ್ಯ ತಂಡವನ್ನು ಪ್ರತಿನಿಧಿಸುವ ಅವಕಾಶ ನೀಡಿದ
ಪ್ರಕರಣವೂ ನಡೆದಿತ್ತು. ಆಯ್ಕೆ ಸಮಿತಿಗೆ ರಘುರಾಮ್ ಭಟ್ ಖಡಕ್ ಸಂದೇಶ ನೀಡುವ ಅನಿವಾರ್ಯ ಇದೆ ಎಂದು
ಅನಿಸುತ್ತಿದೆ.

೯೦ರ ದಶಕದಲ್ಲಿ ಕರ್ನಾಟಕದಲ್ಲಿ ಪ್ರತಿಭೆಯ ಹೊನಲೇ ಹರಿದಿತ್ತು. ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್
ಶ್ರೀನಾಥ್, ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ ಸೇರಿ ದಂತೆ ೬ ಜನ ಕನ್ನಡಿಗರು ಏಕಕಾಲಕ್ಕೆ ಭಾರತವನ್ನು ಪ್ರತಿ
ನಿಽಸಿದ ಹಾದಿ ಕರ್ನಾಟಕ ಕ್ರಿಕೆಟ್‌ನ ಸುವರ್ಣ ಯುಗ. ಆ ಅವಧಿಯಲ್ಲಿ ೯೫-೯೬ರಲ್ಲಿ ಅನಿಲ್ ಕುಂಬ್ಳೆ ನಾಯಕತ್ವದಲ್ಲಿ,
೯೭-೯೮ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ, ೯೮-೯೯ರಲ್ಲಿ ಸುನಿಲ್ ಜೋಶಿ ನಾಯಕತ್ವದಲ್ಲಿ ಕರ್ನಾಟಕ ತಂಡ ರಣಜಿ ಚಾಂಪಿಯನ್‌ಶಿಪ್ ಗೆದ್ದಿತ್ತು.

ಅದರ ನಂತರ ರಾಬಿನ್ ಉತ್ತಪ್ಪ ಮತ್ತು ಕೆ.ಎಲ. ರಾಹುಲ್ ಹೊರತುಪಡಿಸಿದರೆ ರಾಜ್ಯದ ಪ್ರತಿಭೆಗಳು ದೇಶವನ್ನು ಪ್ರತಿನಿಧಿಸಲೇ ಇಲ್ಲ. ಯಾಕೆ? ಪ್ರತಿಭೆಯ ಒರತೆ ಬತ್ತಿದೆಯೇ? ಇಂದು ಕರ್ನಾಟಕ ತಂಡದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವೇಗದ ಬೌಲರ್ ಇಲ್ಲ, ಸ್ಪಿನ್ ಬೌಲರ್ ಇಲ್ಲ. ಹೈಸ್ಕೂಲ್ ಮಟ್ಟದಿಂದಲೇ ಪ್ರತಿಭೆಗಳನ್ನು ಶೋಧಿಸುವ ಕೆಲಸ ಆಗಬೇಕಾಗಿದೆ. ಯೂನಿವರ್ಸಿಟಿ ಮಟ್ಟದ ಪಂದ್ಯಗಳನ್ನು ಆಯ್ಕೆಗಾರರು ನೋಡಬೇಕು. ರಾಜ್ಯದ ನಾನಾ ಕ್ಲಬ್ ಗಳ ಆಟಗಾರರ ಕೌಶಲ್ಯ ಏನೆಂಬುದನ್ನು ಪರಿಶೀಲಿಸಬೇಕು.

ಮೊದಲು ಪ್ರತಿಭೆಗಳನ್ನು ಶೋಧಿಸಿ ಬಳಿಕ ಉತ್ತಮ ಮಟ್ಟದ ತರಬೇತಿ ಕೊಡಿಸುವ ಕೆಲಸ ಆಗಬೇಕಿದೆ. ಅಂತಾರಾಷ್ಟ್ರೀಯ
ಮಟ್ಟದಲ್ಲಿ ಮಿನುಗಿದ ಕರ್ನಾಟಕದ ಆಟಗಾರರ ಅನುಭವವನ್ನು ಬಳಸಿಕೊಳ್ಳಬೇಕು. ರಾಹುಲ್ ದ್ರಾವಿಡ್ ಒಬ್ಬರೇನೋ
ರಾಷ್ಟ್ರೀಯ ತಂಡದ ಕೋಚ್ ಆಗಿzರೆ. ಉಳಿದವರಲ್ಲಿ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿಯಂತಹ ಫೈಟಿಂಗ್ ಸ್ಪಿರಿಟ್ ಇರುವ ಆಟಗಾರರನ್ನು ಬಳಸಿಕೊಂಡು ಅವರ ಅನುಭವವನ್ನು ಧಾರೆ ಎರೆದು ಹೊಸ ಆಟಗಾರರನ್ನು ಸಜ್ಜುಗೊಳಿಸಿ ಬಲಿಷ್ಠ ರಾಜ್ಯ ತಂಡವನ್ನು ಕಟ್ಟಬೇಕು ಮತ್ತು ೨೦೨೪ರ ರಣಜಿ ಟ್ರೋಫಿಯನ್ನಾದರೂ ಗೆಲ್ಲುವ ಪ್ರಯತ್ನ ಮಾಡಬೇಕು.

ಇಷ್ಟಾಗಬೇಕಿದ್ದರೆ ಆಡಳಿತ ಸೂತ್ರ ಹಿಡಿದವರು ಯಾಂತ್ರಿಕವಾಗಿ ಕರ್ತವ್ಯ ನಿರ್ವಹಿಸುವ ಮನೋಭಾವವನ್ನು ಬಿಟ್ಟು ಮೈ
ಕೊಡವಿ ಏಳಬೇಕಿದೆ. ಹೊಸ ಟಾಸ್ಕ್ ಮಾಸ್ಟರ್ ಆಗಿ ರಘುರಾಮ್ ಭಟ್ ಯಶಸ್ಸು ಕಾಣುತ್ತಾರಾ? ಅಂದಹಾಗೆ ಮೇಲೆ ಹೇಳಿzಲ್ಲ ಪುರುಷರ ಕ್ರಿಕೆಟ್‌ಗೆ ಮಾತ್ರವೇ ಅಲ್ಲ. ಮಹಿಳಾ ಕ್ರಿಕೆಟ್‌ಗೂ ಸಮಾನ ಪ್ರಾಧಾನ್ಯ ನೀಡಲಿ.