Sunday, 24th November 2024

Prasad G M Column: ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ…

ಕನ್ನಡದ ತೇರು

ಪ್ರಸಾದ್‌ ಜಿ.ಎಂ.

ರಾಷ್ಟ್ರಕವಿ ಕುವೆಂಪು ಅವರು ‘ಜಯ ಭಾರತ ಜನನಿಯ ತನುಜಾತೆ, ಜಯಹೇಕರ್ನಾಟಕ ಮಾತೆ’ ಮತ್ತು ‘ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀಕನ್ನಡವಾಗಿರು’ ಎಂಬ ಗೀತೆಗಳಲ್ಲಿ ಕನ್ನಡದ ಅನನ್ಯತೆಯನ್ನು ಅಮೋಘವಾಗಿ ವರ್ಣಿಸಿದ್ದಾರೆ. ಮಾತೃಭಾಷೆಯನ್ನೇ ನಿರ್ಲಕ್ಷಿಸುವ ಕೆಲ ಕನ್ನಡಿಗರು ಇವನ್ನು ಗಮನವಿಟ್ಟು ಓದಿದರೆ ನಮ್ಮ ನಾಡಿನ ಮಹತ್ವ ಅರಿವಾದೀತು.

ಇತ್ತೀಚೆಗೆ ಸಹೋದ್ಯೋಗಿಯೊಬ್ಬರ ಮನೆಯ ‘ಗೃಹಪ್ರವೇಶ’ ಸಮಾರಂಭಕ್ಕೆ ಹೋಗಿದ್ದೆ. ನಂತರ ಊಟಕ್ಕೆ ಕುಳಿತುಕೊಂಡಾಗ ತಾಯಿಯೊಬ್ಬರು ತಮ್ಮ ಮಗುವಿಗೆ ಊಟ ಮಾಡಿಸುತ್ತಿದ್ದುದು ಗಮನಕ್ಕೆ ಬಂತು. ಅವರು ಮಗುವನ್ನುದ್ದೇಶಿಸಿ ಮಾತಾಡುವಾಗ, “ನೀನು ಊಟ ಮಾಡದಿದ್ರೆ ಡ್ಯಾಡಿ ಬಂದು ನಿನಗೆ ಹೊಡೀತಾರೆ. ತಗೋ
ವಾಟರ್ ಕುಡಿದು ಬೇಗ ತಿನ್ನು, ಆಮೇಲೆ ಮೌತ್ ವಾಷ್ ಮಾಡಿಸ್ತೀನಿ…” ಎಂದು ಕನ್ನಡ ಮಾತಿನ ನಡುನಡುವೆ
ಇಂಗ್ಲಿಷ್ ಪದಗಳನ್ನು ಬೆರೆಸುತ್ತಿದ್ದರು.

ಅವರ ಸಂಭಾಷಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ನನಗೆ, ಕನ್ನಡಕ್ಕೆ ಯಾವ ರೀತಿಯ ಸಂಚಕಾರ ಬಂದೊ ದಗಿದೆ ಎಂಬುದರ ಅರಿವಾಯಿತು. ಕೆಲ ಇಂಗ್ಲಿಷ್ ಪದಗಳಿಗೆ ಸಮಾನವಾದ ಕನ್ನಡ ಪದಗಳಿಲ್ಲ ಎಂದರೆ ಆ ಮಾತು ಬೇರೆ; ಆದರೆ, ‘ಡ್ಯಾಡಿ’, ‘ವಾಟರ್’, ‘ಮೌತ್ ವಾಷ್’ ಮುಂತಾದವಕ್ಕೂ ಕನ್ನಡದಲ್ಲಿ ಪದಗಳಿಗೆ ಬರವೇ?!

ಇನ್ನೊಂದು ಉದಾಹರಣೆ- ದಸರಾ ಮಹೋತ್ಸವಕ್ಕೂ ಮುನ್ನ ಅರ್ಧವಾರ್ಷಿಕ ಪರೀಕ್ಷೆ ಬರೆದಿದ್ದ ಪುಟ್ಟ ಪೋರಿ ತನ್ನ ಅಮ್ಮನೊಂದಿಗೆ ನಮ್ಮ ಮನೆಗೆ ಬಂದಿದ್ದಳು. ಅದೂ ಇದೂ ಮಾತಾಡಿದ ನಂತರ, “ಪರೀಕ್ಷೆ ಹೇಗಿತ್ತು? ಹೇಗೆ ಬರೆದೆ?‘’ ಎಂದು ಪ್ರಶ್ನಿಸಿದೆ. ಅದಕ್ಕೆ ಉತ್ತರಿಸಿದ ಆಕೆ ತನ್ನ ಪಾಟಿಚೀಲದಿಂದ ತನಗಿಷ್ಟವಾದ ಕನ್ನಡ ಪ್ರಶ್ನೆಪತ್ರಿಕೆ ಯನ್ನು ಹೊರತೆಗೆದು ನನಗೆ ಒಂದೊಂದೇ ಪ್ರಶ್ನೆಯನ್ನು ಕೇಳತೊಡಗಿದಳು, ನನಗೆ ಗೊತ್ತಿರುವಷ್ಟು ಉತ್ತರಿಸುತ್ತಿದ್ದೆ.

ತರುವಾಯ ಆ ಪ್ರಶ್ನೆಪತ್ರಿಕೆಯನ್ನು ಪಡೆದು ಕೂಲಂಕಷವಾಗಿ ಅವಲೋಕಿಸಿದಾಗ ಅದರಲ್ಲಿ ಸಾಕಷ್ಟು ತಪ್ಪು ಗಳಿದ್ದುದು ಕಂಡುಬಂತು. ಆದರೆ ಅದ್ಯಾವುದನ್ನೂ ಆ ಪುಟಾಣಿಯೊಂದಿಗೆ ಚರ್ಚಿಸದೆ, ಆಕೆ ಹೋದ ನಂತರ
ಅಮ್ಮನೊಂದಿಗೆ ಪ್ರಸ್ತಾಪಿಸಿ ಕನ್ನಡಕ್ಕೆ ಒದಗಿರುವ ಆಪತ್ತುಗಳ ಬಗ್ಗೆ ಚರ್ಚಿಸಿದೆ. ಮತ್ತೊಮ್ಮೆ ಕನ್ನಡ ರಾಜ್ಯೋತ್ಸವ ಬಂದಿದೆ.

ಅಂದರೆ- ಪೆಂಡಾಲು ಕಟ್ಟುವುದು, ಧ್ವಜಾರೋಹಣ, ಸಿಹಿ ಹಂಚುವುದು, ‘ಕನ್ನಡವನ್ನು ಉಳಿಸಿ-ಬೆಳೆಸಿ’ ಎಂದು ಮಾರುದ್ದದ ಭಾಷಣ ಬಿಗಿಯುವುದು ಇತ್ಯಾದಿ ಚಟುವಟಿಕೆಗಳ ಕಾಲಘಟ್ಟ. ನವೆಂಬರ್ ತಿಂಗಳು ಕಳೆದುಬಿಟ್ಟರೆ, ಕನ್ನಡಕ್ಕೆ ಒದಗಿರುವ ಆಪತ್ತೇನು? ಅದಕ್ಕೆ ಪರಿಹಾರವೇನು? ಎಂಬುದರ ತಲಸ್ಪರ್ಶಿ ಅವಲೋಕನವಾಗುವುದಿಲ್ಲ. ಇದು ದುರದೃಷ್ಟಕರ ಸಂಗತಿ.

ವೈವಿಧ್ಯಗಳ ಆಗರವಾಗಿರುವ ಭಾರತ ದೇಶವು ಹಲವಾರು ಭಾಷೆಗಳನ್ನು ಮಾತಾಡುವವರ ನೆಲೆಯೂ ಹೌದು. ಈ ಪೈಕಿ ಕನ್ನಡ ಭಾಷೆಗೆ ಅದರದ್ದೇ ಆದ ಸ್ಥಾನವಿದೆ. ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿ ಬರುವ 22 ಭಾಷೆ ಗಳಲ್ಲಿ ಕನ್ನಡವೂ ಒಂದು. ಕನ್ನಡ ಸಾಮಾನ್ಯ ಭಾಷೆಯಲ್ಲ, ತಮಿಳಿನ ನಂತರ ಎರಡು ಸಾವಿರ ವರ್ಷಗಳಿಗೂ ಮಿಗಿಲಾದ ಇತಿಹಾಸವನ್ನು ಹೊಂದಿದೆ. ಹಿಂದಿಯನ್ನು ಹೊರತುಪಡಿಸಿದರೆ ಹೆಚ್ಚು ಜ್ಞಾನ ಪೀಠ ಪ್ರಶಸ್ತಿ ಬಂದಿರು ವುದು ಕನ್ನಡಕ್ಕೆ. ೨೦೦೮ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವೂ ದಕ್ಕಿದೆ.

ಇಷ್ಟೆಲ್ಲಾ ವೈಶಿಷ್ಟ್ಯಗಳಿದ್ದರೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ಕನ್ನಡ ಭಾಷೆಯು ಪರದಾಡು ವಂತಾಗಿದೆ. ಲೇಖನದ ಶುರುವಿನಲ್ಲಿ ಪ್ರಸ್ತಾಪಿಸಿರುವ ‘ತಾಯಿ- ಮಗುವಿನ’ ನಿದರ್ಶನದಲ್ಲಿರುವಂತೆ, ಭಾಷೆಯ ಬಳಕೆಯಲ್ಲಿನ ನಿರ್ಲಕ್ಷ್ಯವು ಕನ್ನಡಕ್ಕೆ ಒದಗಿರುವ ಆಪತ್ತುಗಳಲ್ಲೊಂದು. ಮನೆಯ ಒಳಗೂ ಹೊರಗೂ ಮಾತಾಡು ವಾಗ ಇಂದು ನಮಗರಿವಿಲ್ಲದಂತೆ ಕನ್ನಡ ಮಾತುಗಳ ನಡುವೆ ಅನಗತ್ಯವಾಗಿ ಇಂಗ್ಲಿಷ್, ಹಿಂದಿ ಮತ್ತಿತರ ಭಾಷೆಯ ಪದಗಳನ್ನು ತುರುಕುತ್ತಿದ್ದೇವೆ.

‘ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು’ ಎಂಬ ಮಾತಿನಂತೆ ಮನೆಯಲ್ಲಿಯೇ ಕನ್ನಡದ ಬಳಕೆಯನ್ನು ಉತ್ತೇಜಿಸಬೇಕು. ತಾಯಿ ಮಾತ್ರವಲ್ಲದೆ ಮನೆಯ ಮಿಕ್ಕ ಹಿರಿಯರು ಕೂಡ ಚಿಕ್ಕ ಮಕ್ಕಳೊಂದಿಗೆ
ಕನ್ನಡದಲ್ಲೇ ಮಾತಾಡುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ‘ಯಾವುದೇ ವಿಷಯವಿರಲಿ, ಹಿರಿಯರನ್ನು ನೋಡಿ ಮಕ್ಕಳು ಕಲಿಯುತ್ತಾರೆ’ ಎಂಬ ಮಾತಿದೆ. ಕನ್ನಡದ ಬಳಕೆಯ ವಿಷಯದಲ್ಲೂ ಈ ಸೂಕ್ಷ್ಮತೆ ನಮಗೆ ಅರಿವಾಗಬೇಕು. ಅದನ್ನು ಬಿಟ್ಟು, ಇತರರೊಂದಿಗೆ ಸಂವಹನ ನಡೆಸುವಾಗ ಪೊಳ್ಳು ಪ್ರತಿಷ್ಠೆಯ ಕಾರಣಕ್ಕಾಗಿ ಕನ್ನಡ ಗೊತ್ತಿದ್ದರೂ ಇಂಗ್ಲಿಷ್ ಮುಂತಾದ ಅನ್ಯಭಾಷೆಗಳಲ್ಲಿ ಸಂಭಾಷಿಸುವುದು ಆತಂಕಕಾರಿ ಬೆಳವಣಿಗೆ.

ದೇಶದ ಯಾವುದೇ ಮೂಲೆಯಿಂದ ಬಂದಿದ್ದವರಿಗೂ ನಮ್ಮ ರಾಜಧಾನಿ ಬೆಂಗಳೂರು ತಾಯಿಯ ಮಡಿಲಿನಂಥ ಆಸರೆ ನೀಡುತ್ತದೆ. ಇಂದು ಬೆಂಗಳೂರಿನಲ್ಲಿ ವಾಸಿಸುತ್ತಿರುವ ಒಂದು ಕೋಟಿಗೂ ಹೆಚ್ಚಿನ ಜನರಲ್ಲಿ, ಅನ್ಯ ರಾಜ್ಯಗಳಿಂದ ಬಂದು ನೆಲೆಸಿರುವವರ ಸಂಖ್ಯೆಯೂ ಗಮನಾರ್ಹ ಪ್ರಮಾಣದಲ್ಲಿದೆ. ದೀರ್ಘಕಾಲದಿಂದ ಇಲ್ಲೇ ನೆಲೆಸಿರುವ ಅನ್ಯಭಾಷಿಕರು ತಕ್ಕಮಟ್ಟಿಗಾದರೂ ಕನ್ನಡ ಕಲಿತು, ಇಲ್ಲಿನವರೊಂದಿಗೆ ಕನ್ನಡದಲ್ಲೇ ವ್ಯವಹರಿಸಿದರೆ ಕನ್ನಡದ ಉಳಿವಿಗೆ ತಮ್ಮ ಕೊಡುಗೆ ನೀಡಿದಂತಾಗುತ್ತದೆ. ಆದರೆ ಅವರು ಹಾಗೆ ಮಾಡುವುದಕ್ಕೆ ನಮ್ಮ ‘ಉದಾರಿ ಕನ್ನಡಿಗರು’ ಬಿಟ್ಟರೆ ತಾನೇ? ಪರಭಾಷಿಕರ ಭಾಷೆಯನ್ನೇ ಕಲಿತು ಅವರೊಂದಿಗೆ ಅದೇ ಭಾಷೆಯಲ್ಲಿ
ಮಾತಾಡು ತ್ತಾರೆ ನಮ್ಮವರು!

ಬೆಂಗಳೂರಿನಲ್ಲಿ ಸಾಕಷ್ಟು ಕಡೆ ಅಂಗಡಿ-ಮುಂಗಟ್ಟು, ವ್ಯಾಪಾರೋದ್ದಿಮೆ-ಸಂಸ್ಥೆಗಳ ಮುಂಭಾಗದಲ್ಲಿ ಕನ್ನಡ ನಾಮಫಲಕ ಅಳವಡಿಸದಿರುವ ವಿಷಯ ಒಂದು ವರ್ಷದಿಂದೀಚೆಗೆ ಸುದ್ದಿಯಾಗಿದ್ದನ್ನು ನಾವೆಲ್ಲರೂ ಗಮನಿಸಿ ದ್ದೇವೆ. ಕರ್ನಾಟಕದ ರಾಜಧಾನಿಯಲ್ಲೇ ಕನ್ನಡದ ಉಳಿವಿಗಾಗಿ ಹೀಗೆ ಹೋರಾಡಬೇಕಾದ ಪರಿಸ್ಥಿತಿ ಬಂದಿರುವುದು ಖೇದಕರ. ಈ ವಿಷಯದಲ್ಲಿ ಸರಕಾರವು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಬೇಕು, ಅವು ಅನುಷ್ಠಾನಗೊಂಡಿ ರುವ ಬಗ್ಗೆ ಕಾಲಾನುಕಾಲಕ್ಕೆ ಪರಿಶೀಲಿಸಬೇಕು. ಆಗ ಮಾತ್ರವೇ ಕನ್ನಡವು ಸಾರ್ವಜನಿಕ ಸ್ಥಳಗಳಲ್ಲಿ ತಕ್ಕಮಟ್ಟಿಗೆ ಉಳಿದುಕೊಂಡೀತು.

ಆದರೆ, ಕನ್ನಡಿಗರಾದ ನಮ್ಮ ನಡುವೆಯೇ ಒಗ್ಗಟ್ಟು ಇಲ್ಲದಿರುವಾಗ ಏನು ಮಾಡಲಾದೀತು ಹೇಳಿ? ಯುಪಿಎಸ್‌ಸಿ ಯು ಪ್ರತಿವರ್ಷವೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯೋಜಿಸುವ ಮೂಲಕ ನೇಮಕಾತಿ ಮಾಡಿಕೊಳ್ಳುತ್ತದೆ. ಈ ವಿಷಯದಲ್ಲೂ ಕನ್ನಡಕ್ಕೆ ಘೋರ ಅನ್ಯಾಯವಾಗುತ್ತಲೇ ಬಂದಿದೆ ಎನ್ನಬಹುದು. ಕಾರಣ, ನಾಗರಿಕ ಸೇವಾ ಪರೀಕ್ಷೆ ಸೇರಿದಂತೆ ಇದು ಆಯೋಜಿಸುವ ಹಲವು ಪ್ರಮುಖ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ಪ್ರಶ್ನೆಪತ್ರಿಕೆಗಳು ಸಿಗುವುದಿಲ್ಲ.

ಹೀಗಾಗಿ ಕನ್ನಡ ಮಾಧ್ಯಮದ ಆಕಾಂಕ್ಷಿಗಳು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಲೇ ಇದ್ದಾರೆ. ಬ್ಯಾಂಕಿಂಗ್
ಮತ್ತು ರೇಲ್ವೆ ಇಲಾಖೆಯ ಪರೀಕ್ಷೆಗಳಲ್ಲಿ ಕನ್ನಡದಲ್ಲೇ ಉತ್ತರಿಸುವ ವ್ಯವಸ್ಥೆ ಇತ್ತೀಚೆಗೆ ಆಗಿದೆ. ಅದೇ ರೀತಿ ನಾಗರಿಕ
ಸೇವಾ ಪರೀಕ್ಷೆಯ ಪೂರ್ವಭಾವಿ ಪರೀಕ್ಷೆಯಲ್ಲಿಯೂ ಕನ್ನಡ ಮಾಧ್ಯಮದ ಪ್ರಶ್ನೆಪತ್ರಿಕೆ ಸಿಗುವಂತಾಗಬೇಕು. ಈ ಸೌಲಭ್ಯ ಸಿಕ್ಕರೆ ಕರ್ನಾಟಕದವರು ಉತ್ತರ ಭಾರತದ ಆಕಾಂಕ್ಷಿಗಳೊಂದಿಗೆ ಸರಿಸಮಾನವಾಗಿ ಸ್ಪರ್ಧೆ ಮಾಡಬ ಹುದು. ಇಲ್ಲಿ ಮತ್ತೊಂದು ವಿಷಯವನ್ನು ಪ್ರಸ್ತಾಪಿಸಲೇಬೇಕು- ಉತ್ತರ ಭಾರತದ ಸಾಕಷ್ಟು ಮಂದಿ ಬ್ಯಾಂಕಿಂಗ್ ಪರೀಕ್ಷೆಗಳನ್ನು ಪಾಸುಮಾಡಿ ಕರ್ನಾಟಕದಲ್ಲಿ ಸೇವೆಗೆ ಸೇರಿಕೊಳ್ಳುತ್ತಾರೆ. ಆದರೆ ಇಂಥವರು ವರ್ಷಗಳು ಕಳೆದರೂ ಸರಿಯಾಗಿ ಕನ್ನಡ ಕಲಿಯದೆ ನಮ್ಮೊಂದಿಗೆ ಇಂಗ್ಲಿಷ್, ಹಿಂದಿಯಲ್ಲೇ ಮಾತಾಡುವ ಧೀಮಾಕು ತೋರಿಸುವುದನ್ನು ನೋಡಿದ್ದೇವೆ. ಇಂಗ್ಲಿಷ್-ಹಿಂದಿ ಗೊತ್ತಿರುವ ಗ್ರಾಹಕ ರಿಗೆ ಅಷ್ಟೇನೂ ತೊಂದರೆ ಆಗದಿರಬಹುದು; ಆದರೆ ಕನ್ನಡ ವೊಂದೇ ಗೊತ್ತಿರುವವರ/ಅವಿದ್ಯಾವಂತರ ಗತಿಯೇನು? ಈ ನಿಟ್ಟಿನಲ್ಲಿಯೂ ಸಾಕಷ್ಟು ಬದಲಾವಣೆ ಆಗಬೇಕಾ ದುದು ಅಗತ್ಯ.

ಕನ್ನಡದ ಉಳಿವು ಇಂದಿನ ಆದ್ಯತೆಯಾಗಬೇಕು. ಕನ್ನಡ ದಿನಪತ್ರಿಕೆಗಳು, ಪುಸ್ತಕಗಳಿಂದಾಗಿ ಮತ್ತು ಗ್ರಂಥಾಲಯಗಳ
ಅಭಿವೃದ್ಧಿಯಿಂದಾಗಿ ಕನ್ನಡದ ಬೆಳವಣಿಗೆಗೆ ಸಾಕಷ್ಟು ಇಂಬು ದೊರಕುತ್ತಿದೆ; ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಬಳಕೆಯಾಗುತ್ತಿರುವ ಕನ್ನಡ ಕಳಪೆ ಮಟ್ಟದ್ದಾಗಿದೆ. ಇದರಿಂದಾಗಿ ಇತರರೊಂದಿಗಿನ ಉತ್ತಮ ಸಂವಹನ ಮತ್ತು ಓದು ಕಡಿಮೆಯಾಗುತ್ತಿದೆ. ಹೀಗಾದರೆ ಕನ್ನಡ ಉಳಿಯುವುದಾದರೂ ಹೇಗೆ? ದೈನಂದಿನ ಬದುಕಿನಲ್ಲಿ ಬಳಕೆಯಾ ಗುತ್ತಿರುವ ಕನ್ನಡದಲ್ಲೂ ಸೂಕ್ತ ಶಬ್ದಗಳ ಬಳಕೆಯಲ್ಲಿ ಸೋಲುತ್ತಿದ್ದೇವೆ, ಉಚ್ಚಾರಣೆಯಲ್ಲಿ ತಪ್ಪು ಮಾಡು ತ್ತಿದ್ದೇವೆ.

ಮನೆ, ಶಾಲೆ, ಮಾರುಕಟ್ಟೆ, ವ್ಯವಹಾರದ ನೆಲೆಗಳಲ್ಲಿಂದು ಕನ್ನಡದ ಸ್ಥಿತಿ ಶೋಚನೀಯವಾಗಿದ್ದು, ಇದರಿಂದಾಗಿ ಕನ್ನಡದ ಮೂಲಸ್ವರೂಪವೇ ಹಾಳಾಗುತ್ತಿದೆ. ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವಂಥ ಪ್ರಯತ್ನಗಳು ಎಲ್ಲ ಸ್ತರಗಳಲ್ಲಿಯೂ ನಿರಂತರವಾಗಿ ಆಗಬೇಕು. ರಾಜ್ಯ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ
ಅಭಿವೃದ್ಧಿ ಪ್ರಾಽಕಾರ ಸೇರಿದಂತೆ ಎಲ್ಲ ವ್ಯವಸ್ಥೆಗಳೂ ಕನ್ನಡದ ಉಳಿವಿಗೆ ಕಟಿಬದ್ಧವಾಗಬೇಕು.

ರಾಷ್ಟ್ರಕವಿ ಕುವೆಂಪು ಅವರು ‘ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಮತ್ತು ‘ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ಗೀತೆಗಳಲ್ಲಿ ಕನ್ನಡದ ಅನನ್ಯತೆಯನ್ನು ಅಮೋಘವಾಗಿ ವರ್ಣಿಸಿದ್ದಾರೆ. ಮಾತೃಭಾಷೆಯನ್ನೇ ನಿರ್ಲಕ್ಷಿಸುವ ಕೆಲ ಕನ್ನಡಿಗರು ಈ ಗೀತೆಗಳನ್ನು ಗಮನವಿಟ್ಟು ಓದಿದರೆ ನಮ್ಮ ನಾಡಿನ ಮಹತ್ವ ಅವರಿಗೆ ಅರಿವಾದೀತು.

ಕನ್ನಡವೆಂಬುದು ಬರಿಯ ಭಾಷೆಯಲ್ಲ, ಕನ್ನಡದ ಸಾಂಸ್ಕೃತಿಕ ವಿಸ್ತಾರವನ್ನು ಅರ್ಥಮಾಡಿಕೊಂಡವರಿಗೆ ಮಾತ್ರ ಕನ್ನಡದ ಅಸ್ಮಿತೆ ಗೊತ್ತಾಗುತ್ತದೆ. ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಕವಿವಾಣಿಯನ್ನು ಕೇಳದ ವರಿಲ್ಲ. ನಮ್ಮ ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣವಾಗಿ ಭರ್ತಿ ಐವತ್ತೊಂದು ವರ್ಷಗಳಾದವು. ಆದರೆ, ನಮ್ಮ ಬಾಳಿನಲ್ಲಿ ಕನ್ನಡವು ಉಸಿರಾಗಿದೆಯೇ ಎಂದು ನಾವೆಲ್ಲರೂ ಪ್ರಶ್ನಿಸಿಕೊಳ್ಳಬೇಕು.

ಉಸಿರಿರುವ ತನಕ ನಾವು ಬದುಕಿರುತ್ತೇವೆ, ಹಾಗೆಯೇ ನಾವು ಉಸಿರಾಡುವ ಕನ್ನಡವು ಕೊನೆಯವರೆಗೂ ನಮ್ಮ ಕೈಹಿಡಿದು ನಡೆಸಬೇಕು. ಅದು ನೆರವೇರುವಂತೆ ಮಾಡಲು ಈಗಲಾದರೂ ಸಾಧ್ಯವೇ ಎಂದು ನಾವೆಲ್ಲರೂ ಚಿಂತನೆ ನಡೆಸುವುದಕ್ಕೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪರ್ವಕಾಲವಾಗಲಿ.

(ಲೇಖಕರು ಹವ್ಯಾಸಿ ಬರಹಗಾರರು)

ಇದನ್ನೂ ಓದಿ: Shishir Hegde Column: ಕೂತಲ್ಲಿ ಕೂರಂಗಿಲ್ಲ, ನಿಂತಲ್ಲಿ ನಿಲ್ಲಂಗಿಲ್ಲ ಇದೆಂಥ ಮಾಯೆ !