Thursday, 12th December 2024

ನೂತನ ಧ್ರುವೀಕರಣದ ಹೊಸ್ತಿಲಲ್ಲಿ ರಾಜ್ಯ ರಾಜಕಾರಣ

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hosakere@gmail.com

ರಾಜಕಾರಣ ನಿಂತ ನೀರಲ್ಲ. ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಬದಲಾಗುವ ನಿತ್ಯ ನಿರಂತರ ನದಿ. ಕೆಲವೊಮ್ಮೆ ಈ ಬದಲಾವಣೆ ಬಹಿರಂಗವಾಗಿಯೇ ನಡೆದರೆ, ಇನ್ನು ಕೆಲವೊಮ್ಮೆ ಗುಪ್ತಗಾಮಿನಿಯ ರೀತಿಯಲ್ಲಿ ಯಾರಿಗೂ ತಿಳಿಯದೇ, ಬದಲಾವಣೆಯಾಗುತ್ತಿರುತ್ತದೆ. ಆದರೀಗ ಕರ್ನಾಟಕದಲ್ಲಿ ಹಲವು ಹಿರಿಯ ನಾಯಕರು ತೆರೆ ಹಿಂದೆ ಸರಿಯಲು ವೇದಿಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಈ ಹಂತದಲ್ಲಿ, ನೂತನ ರಾಜಕೀಯದ ಧ್ರುವೀಕರಣದ ಸಮೀಕರಣಕ್ಕೆ ರಾಜ್ಯ
ರಾಜಕೀಯ ಸಜ್ಜಾಗುತ್ತಿದೆ.

ಹಾಗೆಂದ ಮಾತ್ರಕ್ಕೆ ಈ ಧ್ರುವೀಕರಣ ಇಂದೇ ಆಗಬೇಕು ಎಂದಲ್ಲ. ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗೆ, ಈ ಸಮೀಕರಣ ಇನ್ನಷ್ಟು ಗಟ್ಟಿಯಾಗುತ್ತಾ ಹೋಗುತ್ತದೆ ಎನ್ನುವುದು ಎಲ್ಲರ ಲೆಕ್ಕಾಚಾರ. ಯಾವ ಪಕ್ಷಗಳಿಗೆ ಈ ಸಮೀಕರಣ ಅನ್ವಯಿಸುತ್ತದೆ ಎಂದರೆ, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮಾತ್ರ ವಲ್ಲದೇ ಇತ್ತೀಚೆಗೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ನೂತನ ಪಕ್ಷದ ಗುಸುಗುಸು ಸಹ ಸೇರಿದೆ. ಹೌದು, ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿ, ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಯಡಿಯೂರಪ್ಪ ಅವರು, ಮುಖ್ಯಮಂತ್ರಿ ಸ್ಥಾನದಿಂದ ಮಾಜಿ ಮುಖ್ಯಮಂತ್ರಿಯಾ ಗುತ್ತಿದ್ದಂತೆ, ಬಳಿಕ ರಾಷ್ಟ್ರ ಬಿಜೆಪಿ ನಾಯಕರು ಸದ್ದಿಲ್ಲದೇ ಯಡಿಯೂರ‍್ಪ ಅವರ ಬೇಡಿಕೆ ಗಳನ್ನು ಈಡೇರಿಸದೇ ಮೂಲೆಗುಂಪು ಮಾಡುತ್ತಿದ್ದಂತೆ ಈ ನೂತನ ಪಕ್ಷದ ಮಾತುಗಳು ಶುರುವಾದವು. ಈ ಪಕ್ಷದ ಮಾತಿಗೆ ಕೇವಲ ಯಡಿಯೂರಪ್ಪ ಹೆಸರು ಮಾತ್ರವಲ್ಲದೇ, ಸಿದ್ದರಾಮಯ್ಯ ಅವರ ಹೆಸರು ಸೇರಿದ್ದು ಇನ್ನಷ್ಟು ಅಚ್ಚರಿಗೆ ಕಾರಣ ವಾಯಿತು.

ಈ ಇಬ್ಬರು ಈಗಾಗಲೇ ರಾಜ್ಯ ರಾಜಕೀಯ ಉತ್ತುಂಗ ಸ್ಥಾನಗಳನ್ನು ನೋಡಿದ್ದರೂ, ಪುನಃ ಪಕ್ಷ ಕಟ್ಟುವ ಗೋಜಲು ಏಕೆ? ಇದರಿಂದ ಅವರಿಗೆ ಆಗುವ ಲಾಭವಾದರೂ ಎನ್ನುವ ಪ್ರಶ್ನೆಗಳು ಮೂಡುವುದು ಸಹಜ. ಆದರೆ ನೂತನ ಪಕ್ಷದ ಮಾತು ಯಡಿಯೂರಪ್ಪ ಅವರಿಗಾಗಲಿ, ಸಿದ್ದರಾಮಯ್ಯ ಅವರಿಗೆ ಆಗಲಿ ಅಲ್ಲ. ಬದಲಿಗೆ ಮುಂದಿನ ಪೀಳಿಗೆಯನ್ನು ರಾಜಕೀಯದಲ್ಲಿ ಅಸವನ್ನಾಗಿಸುವ ಇರಾದೆಯಿಂದಲೇ ಈ ವಯಸ್ಸಿನಲ್ಲಿಯೂ ನೂತನ ಪಕ್ಷದ ಲೆಕ್ಕಾಚಾರದಲ್ಲಿ ಈ ಇಬ್ಬರು ಇದ್ದಾರೆ. ಅದರಲ್ಲಿಯೂ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರನ್ನು ಬಿಜೆಪಿ ಮೂಲೆಗುಂಪು ಮಾಡುವುದು ಖಚಿತ ಎನ್ನುವುದು ತಿಳಿಯುತ್ತಿದ್ದಂತೆ, ವಿಜಯೇಂದ್ರ ಅವರಿಗೆ ಇರುವ ಯುವ ನಾಯಕ ಎನ್ನುವ ಬ್ರ್ಯಾಂಡ್ ಹಾಗೂ ಯಡಿಯೂರಪ್ಪ ಪುತ್ರ ಎನ್ನುವ ವರ್ಚಸ್ಸು ಹಾಗೂ ಲಿಂಗಾಯತ ಸಮುದಾಯದ ಸಪೋರ್ಟ್ ನೊಂದಿಗೆ ರಾಜ್ಯ ರಾಜಕೀಯದಲ್ಲಿ ಪ್ರಸ್ತುತವಾಗಿಸುವ ಪ್ರಯತ್ನ ದಲ್ಲಿದ್ದಾರೆ ಎಂದರೆ ಸುಳ್ಳಲ್ಲ.

ಹಾಗೆ ನೋಡಿದರೆ, ಯಡಿಯೂರಪ್ಪ ಅವರಿಗೆ ಇರುವ ಅಸ್ವಿತ್ಥದ ಪ್ರಶ್ನೆ ಸಿದ್ದರಾಮಯ್ಯ ಅವರಿಗೆ ಕಾಡುತ್ತಿಲ್ಲ. ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಂದ ವಿರೋಧ ವ್ಯಕ್ತವಾಗಬಹುದೇ ಹೊರತು, ಇನ್ಯಾರೂ ಅವರಿಗೆ ವಿರೋಽಸುವ ಹಂತದಲ್ಲಿಲ್ಲ. ಹಾಗಾದರೆ, ನೂತನ ಪ್ರಾದೇಶಿಕ ಪಕ್ಷದ ಮಾತಿನಲ್ಲಿ ಸಿದ್ದರಾಮಯ್ಯ ಅವರ ಹೆಸರು ಏಕೆ ಕೇಳಿಬರುತ್ತಿದೆ ಎಂದರೆ, ಒಂದು ವೇಳೆ ಯಡಿಯೂರಪ್ಪ ಈ ಸಾಹಸಕ್ಕೆ ಕೈಹಾಕಿ ಇಂತಿಷ್ಟು ಕ್ಷೇತ್ರಗಳನ್ನು ಗೆದ್ದರೆ, ಆ ನಂಬರ್‌ಗಳನ್ನು ಕಾಂಗ್ರೆಸ್‌ನೊಂದಿಗೆ ಜೋಡಿಸುವ ಅಥವಾ ಪರ್ಯಾಯ ವ್ಯವಸ್ಥೆಯನ್ನು ಸೃಷ್ಟಿಸುವ ಕೆಲಸಕ್ಕೆ ಕೈ ಜೋಡಿಸುತ್ತಾರೆ
ಎನ್ನುವುದು ಸತ್ಯ.

ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಸೇರಿಕೊಂಡು ರಾಜ್ಯದಲ್ಲಿ ನೂತನ ರಾಜಕೀಯ ಪಕ್ಷ ಕಟ್ಟಲಿದ್ದಾರೆ ಎನ್ನುವ ಸುದ್ದಿ ‘ವಿಶ್ವವಾಣಿ’ಯಲ್ಲಿ ಪ್ರಕಟವಾಗು ತ್ತಿದ್ದಂತೆ, ಈ ಇಬ್ಬರು ನಾಯಕರು ’ಇದಕ್ಕೂ ನಮಗೂ ಸಂಬಂಧವಿಲ್ಲ. ಯಾವುದೇ ಪಕ್ಷವನ್ನು ಕಟ್ಟುವ ಯೋಚನೆಯಿಲ್ಲ. ಈಗಿರುವ ಪಕ್ಷವನ್ನೇ ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ’ ಎನ್ನುವ ಟ್ವೀಟ್ ನೀಡಿ ಪ್ರಕರಣಕ್ಕೆ ಇತಿಶ್ರೀ ಹಾಡಿದರು. ಸಿದ್ದರಾಮಯ್ಯ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಯಡಿಯೂರಪ್ಪ ಅವರನ್ನು
ಭೇಟಿಯಾಗಿದ್ದು ಸಾಬೀತುಪಡಿಸಿದರೆ, ರಾಜಕೀಯ ಸನ್ಯಾಸತ್ವ ಪಡೆಯುವ ಸವಾಲು ಹಾಕಿದರು. ಹೌದು, ಸಿದ್ದರಾಮಯ್ಯ ಅವರು ಖುದ್ದಾಗಿ ಬಿಎಸ್‌ವೈ ನಿವಾಸಕ್ಕೆ
ಹೋಗಿ, ಈ ಬಗ್ಗೆ ಚರ್ಚಿಸಿದ್ದಾರೆ ಎನ್ನಲು ಸಾಧ್ಯವಿಲ್ಲ. ಆದರೆ ಈ ಇಬ್ಬರ ಕಿವಿ-ಬಾಯಿ-ಕಣ್ಣಾಗಿರುವ ನಾಯಕರು ಚರ್ಚಿಸಿರಬಹುದಲ್ಲವೇ? ಇದಕ್ಕೆ ಪೂರಕ ಎನ್ನುವಂತೆ ಸಿದ್ದರಾಮಯ್ಯ ಆಪ್ತ ಸಿ.ಎಂ. ಇಬ್ರಾಹಿಂ ತೀರಾ ಇತ್ತೀಚೆಗೆ ‘ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ, ಯಡಿಯೂರಪ್ಪ ಹಾಗೂ ದೇವೇಗೌಡರನ್ನು ಒಂದೇ ಕಡೆ ಸೇರಿಸುವ ಪ್ರಯತ್ನ ಮಾಡುತ್ತೇನೆ’ ಎನ್ನುವ ಮಾತನ್ನು ಹೇಳಿದ್ದರು.

ದೇವೇಗೌಡರು ಸಿದ್ದರಾಮಯ್ಯ, ಎಚ್‌ಡಿಕೆ ಸಿದ್ದರಾಮಯ್ಯ ಕಾಂಬಿನೇಷನ್ ಕಷ್ಟವಿರಬಹುದು. ಆದರೆ ಬಿಎಸ್‌ವೈ-ಸಿದ್ದರಾಮಯ್ಯ ಕಾಂಬಿನೇಷನ್ ಕಷ್ಟವಲ್ಲ
ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು. ಈ ಪಕ್ಷ ಕಟ್ಟುವ ಮಾತು ಸದ್ಯಕ್ಕೆ ತೀರಾ ಪ್ರಾಥಮಿಕ ಹಂತದಲ್ಲಿದೆ. ಇನ್ನು ಒಂದೂವರೆ ವರ್ಷದಲ್ಲಿ ಆಗಬಹುದಾ
ದ ರಾಜಕೀಯ ಲೆಕ್ಕಾಚಾರಗಳನ್ನು ಗಮನಿಸಿ ಇದು ನಿರ್ಧಾರವಾಗಲಿದೆ. ಆದರೆ ಒಂದು ವೇಳೆ ಇದು ಸಾಧ್ಯವಾದರೆ, ಬಿಜೆಪಿಯ ಗಟ್ಟಿ ಮತಬ್ಯಾಂಕ್ ಆಗಿರುವ
ಲಿಂಗಾಯತ ಸಮುದಾಯವಂತೂ ಬಿಜೆಪಿಯಿಂದ ಕೊಂಚ ಮಟ್ಟಿಗಾದರೂ ಹಿಂದೆ ಸರಿಯಲಿದೆ. ಇದರ ನೇರ ಲಾಭ ಒಂದು ನೂತನ ಪಕ್ಷಕ್ಕೆ ಆಗಬಹುದು ಇಲ್ಲವೇ, ಕಾಂಗ್ರೆಸ್‌ಗೆ ಆಗಬಹುದು. ಆದರೆ ಬಿಜೆಪಿಗಂತೂ ನಷ್ಟ ಎನ್ನುವುದರಲ್ಲಿ ಎರಡನೇ ಮಾತಿಲ್ಲ.

ಹಿಂದುತ್ವದ ಹೆಸರಲ್ಲಿ ಚುನಾವಣೆ ಮಾಡುವ ಲೆಕ್ಕವನ್ನು ಬಿಜೆಪಿ ಹಾಕಿದರೂ, ಅದು ಕರ್ನಾಟಕದ ಮಟ್ಟಿಗೆ ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ ಎನ್ನುವುದು ಅಷ್ಟೇ ಸತ್ಯ. ಬಿಜೆಪಿ ಸಮಸ್ಯೆ ಇದಾದರೆ, ಕಾಂಗ್ರೆಸ್‌ನದ್ದು ಮತ್ತೊಂದು ಸಮಸ್ಯೆ. ಸಿದ್ದರಾಮಯ್ಯ ಅವರು ನೇರವಾಗಿ ಅಥವಾ ಪರೋಕ್ಷವಾಗಿ ನೂತನ ಪಕ್ಷವನ್ನು ಬೆಂಬಲಿಸಿದರೆ, ಅವರ ಜತೆಯಿರುವ ಅಹಿಂದ ಮತಗಳು ಸಹ ಆ ಪಕ್ಷದ ಹಿಂದೆಯೇ ಹೋಗಲಿದೆ. ಅದಕ್ಕೆ ಪ್ರತಿಯಾಗಿ ಲಿಂಗಾಯತ ಮತಗಳು ಬಂದರೂ, ಅಹಿಂದ ಮತ ಕಳೆದುಕೊಂಡ ಶಕ್ತಿ ಸಿಗುವುದಿಲ್ಲ. ಇನ್ನು ಮತ್ತೊಂದು ಪ್ರಮುಖ ಸಮುದಾಯವಾಗಿರುವ ಒಕ್ಕಲಿಗ ಸಮಾಜ ದೇವೇಗೌಡರು ಇರುವ ತನಕ ವಾದರೂ, ಜೆಡಿಎಸ್ ಹೊರತು ಬೇರೆ ಪಕ್ಷಗಳತ್ತ ವಾಲುವುದಿಲ್ಲ.

ಆದ್ದರಿಂದ ಈ ಹಂತದಲ್ಲಿ ಕಾಂಗ್ರೆಸ್ ತನ್ನ ಪ್ರಮುಖ ಮತಬ್ಯಾಂಕ್ ಅನ್ನು ಕಳೆದುಕೊಳ್ಳಲಿದೆ. ಇದೀಗ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಒಂದೊಂದು ಸಮಸ್ಯೆ ಯಾದರೆ, ಈ ಎರಡು ಪಕ್ಷಗಳಿಗಿಂತ ಹೆಚ್ಚು ಸಮಸ್ಯೆ ಅನುಭವಿಸಬಹುದಾದ ಪಕ್ಷವೆಂದರೆ ಅದು ಜೆಡಿಎಸ್. ಏಕೆಂದರೆ, ಮೊದಲಿನಿಂದಲೂ ಕರ್ನಾಟಕಕ್ಕೆ
ಪ್ರಾದೇಶಿಕ ಪಕ್ಷದ ಅವಶ್ಯಕತೆಯಿದೆ ಎನ್ನುವ ಮಾತಿತ್ತು. ಆದರೆ ಕಳೆದ ಎರಡು ದಶಕದಿಂದ ಜನತಾದಳದಿಂದ ಬಹುತೇಕ ನಾಯಕರು ಹೊರಬಂದ ಬಳಿಕ
ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇನ್ನಷ್ಟು ಹೆಚ್ಚಿತ್ತು. ಅದಕ್ಕಾಗಿ ಯಡಿಯೂರಪ್ಪ ನೇತೃತ್ವದ ಕೆಜೆಪಿ, ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಕಾಂಗ್ರೆಸ್ ಸೇರಿದಂತೆ ತೀರಾ ಇತ್ತೀಚೆಗೆ ಉಪೇಂದ್ರರ ಪ್ರಜಾಕೀಯ, ದೆಹಲಿ ಮಾದರಿಯಲ್ಲಿ ಆಮ್ ಆದ್ಮಿ ಪಕ್ಷ ಸೇರಿ ಹತ್ತಾರು ಪಕ್ಷಗಳು ತಲೆ ಎತ್ತಿವೆ. ಆದರೆ ಈ ಯಾವ ಪಕ್ಷಗಳು, ನಿರೀಕ್ಷಿತ ಫಲಿತಾಂಶವನ್ನು ನೀಡಿಲ್ಲ. ಆಪ್ ಈಗಷ್ಟೇ ಹೆಜ್ಜೆ ಇಡುತ್ತಿರುವ ಪಕ್ಷವಾಗಿರುವುದರಿಂದ, ಅದಕ್ಕೆ ಇನ್ನಷ್ಟು ವರ್ಷ ಸಮಯ ನೀಡಬಹುದು. ಆದರೆ ಈ ಹಿಂದೆ ಯಡಿಯೂರಪ್ಪ ಹಾಗೂ ರಾಮುಲು ಇಬ್ಬರೂ ಆರಂಭಿಸಿದ ಎರಡು ಪಕ್ಷಗಳು ಜನರಿಗೆ ಹಿಡಿಸಲಿಲ್ಲ.

ಆದ್ದರಿಂದ ಇಬ್ಬರು ಪುನಃ ತವರು ಪಕ್ಷಕ್ಕೆ ವಾಪಸ್ಸಾದರು. ದಶಕದ ಹಿಂದೆ ಕಟ್ಟಿದ್ದ ಕೆಜೆಪಿ ನಿರೀಕ್ಷಿತ ಮಟ್ಟದ ಫಲಿತಾಂಶ ನೀಡದಿದ್ದರೂ, ಬಿಜೆಪಿಗೆ ಭಾರಿ
ಪ್ರಮಾಣದ ನಷ್ಟವನ್ನು ಮಾಡಿತ್ತು. ಆ ಮಟ್ಟಿಗೆ ಕೆಜೆಪಿ ಅಂದು ಯಶಸ್ವಿಯಾಗಿತ್ತು. ಆದರೆ ಈ ಬಾರಿ ಯಡಿಯೂರಪ್ಪ ಅವರ ಗುರಿ ಇರುವುದು ಕೇವಲ ಚುನಾವಣೆ ಗೆಲ್ಲುವುದಷ್ಟೇ ಆಗಿರದೇ, ಬಿಜೆಪಿಗೆ ಹೊಡೆತ ನೀಡುವ ಜತೆಜತೆಗೆ ತಮ್ಮ ಪುತ್ರನಿಗೆ ಸೂಕ್ತ ಸ್ಥಾನಮಾನ ಹಾಗೂ ಯಾರೇ ಅಧಿಕಾರಕ್ಕೆ ಹಿಡಿಯ ಬೇಕೆಂದರೂ, ಕಿಂಗ್ ಮೇಕರ್’ ಆಗಿರಬೇಕು ಎನ್ನುವುದಾಗಿದೆ. ಜೆಡಿಎಸ್‌ಗೆ ನಿಜವಾದ ಸಮಸ್ಯೆ ಶುರುವಾಗುವುದು ಈ ಹಂತದಲ್ಲಿಯೇ. ಮೊದಲಿನಿಂದಲೂ 30ರಿಂದ 45 ಕ್ಷೇತ್ರಗಳನ್ನು ಗೆಲ್ಲುವ ಮೂಲಕ, ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ತಾನು ಕಿಂಗ್ ಮೇಕರ್ ಆಗಿರಬೇಕು ಎನ್ನುವ ಲೆಕ್ಕಾಚಾರದಲ್ಲಿ ಚುನಾವಣೆ ಎದುರಿಸುತ್ತದೆ.

ಹಳೇ ಮೈಸೂರು ಭಾಗದಲ್ಲಿರುವ ತನ್ನ ಹಿಡಿತವನ್ನು ಗಟ್ಟಿಗೊಳಿಸಿಕೊಂಡು ಈ ಸಂಖ್ಯೆ ರೀಚ್ ಆದರೆ ಸಾಕು ಎನ್ನುವ ಆಲೋಚನೆಯಲ್ಲಿರುತ್ತದೆ. ಆದರೆ ಇದೀಗ
ಜೆಡಿಎಸ್‌ಗೆ ಸೆಡ್ಡು ಹೊಡೆಯುವ ಮತ್ತೊಂದು ಪಕ್ಷ ಉದಯಿಸಿದರೆ, ಆ ಕಿಂಗ್ ಮೇಕರ್ ಸ್ಥಾನ ಅದಲು ಬದಲಾದರೂ ಅಚ್ಚರಿಯಿಲ್ಲ. ಅದರಲ್ಲಿಯೂ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯನವರ combination ನಿಂದ ಇತ್ತ ಲಿಂಗಾಯತ ಹಾಗೂ ಅಹಿಂದ ಮತಗಳು ವಿಭಜನೆಯಾಗಲಿದೆ. ಪ್ರತಿ ಚುನಾವಣೆಯಲ್ಲಿ ಜೆಡಿಎಸ್ ಪಾಲಿಗೆ ಒಕ್ಕಲಿಗ ಮತಗಳ ಜತೆಗೆ ಅಲ್ಪಸಂಖ್ಯಾತ ಮತಗಳು ಸೇರುವುದರಿಂದಲೇ, ಅವರ ಟಾರ್ಗೆಟ್ ರೀಚ್ ಆಗುವುದು. ಆದರೀಗ ಈ ಅಹಿಂದ ಹಾಗೂ ಲಿಂಗಾಯತ ಮತಗಳು ವಿಭಜನೆಯಾದರೆ, ಆ ಸಮಯದಲ್ಲಿ ಜೆಡಿಎಸ್‌ಗೆ ಭಾರಿ ಹೊಡೆತ ಬೀಳುವುದರಲ್ಲಿ ಅನುಮಾನವಿಲ್ಲ. ಅದಕ್ಕೆ ಬಿಜೆಪಿ, ಕಾಂಗ್ರೆಸ್‌ಗಿಂತ ಹೆಚ್ಚು ಹೊಡೆತ ಬೀಳುವುದು ಜೆಡಿಎಸ್‌ಗೆ ಎಂದು ರಾಜಕೀಯ ಧ್ರುವೀಕರಣ ಹೇಳಿದಷ್ಟು ಸುಲಭಕ್ಕೆ ಆಗುವುದಿಲ್ಲ. ಏಕೆಂದರೆ ಈಗಾಗಲೇ ಯಡಿಯೂರಪ್ಪ ಅವರು ಒಮ್ಮೆ ಹೊಸ ಪಕ್ಷ ಕಟ್ಟಿ ಕೈಸುಟ್ಟುಕೊಂಡಿದ್ದಾರೆ.

ಇದೀಗ ಮತ್ತೊಂದು ಪಕ್ಷ ಕಟ್ಟುವುದಕ್ಕೆ ವಯಸ್ಸು ಸಹಕರಿಸುವುದೇ ಎನ್ನುವುದು ಮುಖ್ಯವಾಗಿದೆ. ಇನ್ನು ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಅವರು ಇಬ್ಬರು
ಮಾಸ್ ಲೀಡರ್ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಈ ನೂತನ ಕಾಂಬಿನೇಷನ್ ಮಾಡಿದರೆ, ಜನರು ಅವರನ್ನು ಒಪ್ಪುತ್ತಾರೆಯೇ ಎನ್ನುವುದು ಮತ್ತೊಂದು ಪ್ರಮುಖ ಅಂಶ. ಈ ಹಿಂದೆ ಬಂಗಾರಪ್ಪ, ಅರಸು ಸೇರಿದಂತೆ ಅನೇಕರು ಈ ರೀತಿಯ ನೂತನ ಪಕ್ಷ ಕಟ್ಟಿ ಕೈಸುಟ್ಟುಕೊಂಡಿರುವ ಉದಾಹರಣೆ ನಮ್ಮ ಮುಂದಿದೆ. ಆದರೆ ನಿಜಲಿಂಗಪ್ಪ, ಎಸ್.ಎಂ ಕೃಷ್ಣ, ಸ್ವತಃ ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕಾರಣಿಗಳು ತಾವು ಬೆಳೆದ ಪಕ್ಷವನ್ನು ಬಿಟ್ಟು ಮತ್ತೊಂದು ಪಕ್ಷಕ್ಕೆ ಬಂದ ಉದಾಹರಣೆಗಳು ನಮ್ಮ ಮುಂದಿವೆ.

ಇನ್ನು ಕೆಲವರು ಪಕ್ಷ ಬದಲಾಯಿಸಿ, ಮೂಲೆಗುಂಪಾಗಿರುವ ಉದಾಹರಣೆಗಳು ನಮ್ಮ ಮುಂದಿವೆ. ಈಗಲೂ ಅದೇ ರೀತಿಯ ಮತ್ತೊಂದು ಅಚ್ಚರಿಯ ಬದಲಾವಣೆ ಯಾದರೂ ದೊಡ್ಡ ವಿಷಯವೇನಲ್ಲ. ಇಂದಿನ ಪರಿಸ್ಥಿತಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿರುವ ಕೆಲವರ ಪ್ರಕಾರ ರಾಜಕೀಯದಲ್ಲಿ ಈ ರೀತಿಯ ಬಹುದೊಡ್ಡ ಪರ್ವ ಆಗಲೇಬೇಕಿದೆ. ಇಲ್ಲದಿದ್ದರೆ ಇದೇ ಏಕತಾನತೆಯಲ್ಲಿ ರಾಜ್ಯ ರಾಜಕೀಯ ಇರಲಿದ್ದು, ಇದರಿಂದ ಆಯಕಟ್ಟಿನಲ್ಲಿರುವ ಕೆಲವರ ಸುತ್ತವೇ ಅಧಿಕಾರ
ಸುತ್ತಾಡುತ್ತದೆ ಎನ್ನುವ ಮಾತನ್ನು ಆಡಿದ್ದಾರೆ. ಬಾಕಿಯಿರುವ ಒಂದುವರೆ ವರ್ಷದಲ್ಲಿ ಏನೆಲ್ಲ ಆಗಲಿದೆ? ದಕ್ಷಿಣ ಭಾರತದಲ್ಲಿ ಅಧಿಕಾರದಲ್ಲಿರುವ ಏಕೈಕ ರಾಜ್ಯ ವನ್ನು ಉಳಿಸಿಕೊಳ್ಳಲು ಬಿಜೆಪಿ ಹಾಕುವ ಶ್ರಮವೇನು? ಬಹುತೇಕ ರಾಜ್ಯದಲ್ಲಿ ಅಸ್ವಿತ್ಥ ಕಳೆದುಕೊಂಡರೂ, ಕರ್ನಾಟಕದಲ್ಲಿ ಮಾತ್ರ ಬಲಿಷ್ಠ ರಾಜಕೀಯ ಪಕ್ಷ ಎನಿಸಿಕೊಂಡಿರುವ ಕಾಂಗ್ರೆಸ್‌ನ ತಂತ್ರಗಾರಿಕೆ ಏನು? ಎನ್ನುವುದು ಕಾದು ನೋಡಬೇಕಿದೆ.

ಯಾವುದೇ ತಿರುವಾದರೂ, ಮುಂದಿನ ಒಂದೂವರೆ ವರ್ಷದಲ್ಲಿ ಎದುರಾಗಲಿರುವ ಚುನಾವಣೆ ಬಳಿಕ ಅಥವಾ ಅದಕ್ಕೂ ಮೊದಲು ರಾಜ್ಯ ರಾಜಕೀಯದಲ್ಲಿ
ನೂತನ ರಾಜಕೀಯ ಧ್ರುವೀಕರಣವಾಗುವುದಂತೂ ನಿಶ್ಚಿತ.