Tuesday, 22nd October 2024

ಪಕ್ಷದಲ್ಲಿ ತಾಳಮೇಳ ತರುವವರ‍್ಯಾರು ?

ಅಶ್ವತ್ಥಕಟ್ಟೆ

ranjith.hoskere@gmail.com

ಯಾವುದೇ ಒಂದು ಪಕ್ಷ ಬಲಿಷ್ಠವಾಗಿ ಬೆಳೆಯುವುದಕ್ಕೆ ‘ಹೊಂದಾಣಿಕೆ’ ಬಹುಮುಖ್ಯ. ಪಕ್ಷದಲ್ಲಿ ಆಂತರಿಕವಾಗಿ ಹೊಂದಾಣಿಕೆಯಿಲ್ಲದೇ, ಎಷ್ಟೇ ಕಾರ್ಯಕರ್ತರ ಬಲವಿದ್ದರೂ, ಅದು ನದಿಯಲ್ಲಿ ಹುಣಸೆ ತೊಳೆದಂತೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ವಿಧಾನಸಭಾ ಚುನಾವಣೆ ಬಳಿಕದ ರಾಜ್ಯ ಬಿಜೆಪಿಯಲ್ಲಿ ಎದುರಾಗಿರುವ ಬಹುದೊಡ್ಡ ಸಮಸ್ಯೆಯೇ ಈ ಹೊಂದಾಣಿಕೆಯಾಗಿದೆ.

ಒಂದು ಕಾಲದಲ್ಲಿ ಬಿಜೆಪಿ ಪಾಲಿಗೆ ದಕ್ಷಿಣ ಭಾರತದ ಹೆಬ್ಬಾಗಿಲಾಗಿದ್ದ ಕರ್ನಾಟಕದಲ್ಲಿ ನಾಯಕತ್ವದ ಬದಲಾವಣೆ ಯಾದ ಬಳಿಕ, ಒಬ್ಬರಿಗೊಬ್ಬರ ಮೇಲೆ ಹಿಡಿತ ವಿಲ್ಲವೇನೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಿಸ್ತಿನ ಪಕ್ಷವೆನಿಸಿದ್ದ ಬಿಜೆಪಿಯಲ್ಲಿ ಒಂದು ಹುಲ್ಲು ಕಡ್ಡಿ ಅಲ್ಲಾಡಬೇಕೆಂದರೂ, ಅದಕ್ಕೆ ವರಿಷ್ಠರ ಅಥವಾ ರಾಜ್ಯಾಧ್ಯಕ್ಷರ ಅನುಮತಿ ಕಡ್ಡಾಯ ಎನ್ನುವ ಸ್ಥಿತಿಯಿತ್ತು. ಅದರಲ್ಲಿಯೂ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ, ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ
ನಾಯಕ ರಾಗಿರುವ ತನಕ, ರಾಜ್ಯದ ಯಾವುದೇ ತೀರ್ಮಾನ ಕೈಗೊಳ್ಳಬೇಕೆಂದರೂ ಅದಕ್ಕೆ ಯಡಿಯೂರಪ್ಪ ಅವರ ಅಂತಿಮ ಮುದ್ರೆ ಅನಿವಾರ್ಯ ಎನ್ನುವ ಸ್ಥಿತಿಯಿತ್ತು.

ಅಮಿತ್ ಶಾ, ಮೋದಿ ಪಕ್ಷದ ಚುಕ್ಕಾಣಿ ಹಿಡಿದ ಬಳಿಕ, ಸಂತೋಷ್ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಬಳಿಕ ಕೆಲವೊಂದಷ್ಟು ವಿಷಯದಲ್ಲಿ ಈ ಪರಿಸ್ಥಿತಿ ಪರಿಸ್ಥಿತಿ ಬದಲಾಗಿದ್ದರೂ, ಯಾವುದೇ ತೀರ್ಮಾನಕ್ಕೂ ಮೊದಲು ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತಗೆದುಕೊಳ್ಳುವ ಕೆಲಸವನ್ನು ವರಿಷ್ಠರು ಮಾಡುತ್ತಿದ್ದರು. ಇನ್ನು ರಾಜ್ಯ ನಾಯಕರ ಮಟ್ಟಿಗೆ ಹೇಳುವುದಾದರೆ, ಯಾವುದೇ ಹೇಳಿಕೆ, ತೀರ್ಮಾನ ಕೈಗೊಳ್ಳಬೇಕೆಂದರೂ ಅದು ಯಡಿಯೂರಪ್ಪನವರ ‘ಗಮನ’ಕ್ಕೆ ಬಂದೇ ಹೋಗುತ್ತಿತ್ತು ಎನ್ನುವುದು ಸ್ಪಷ್ಟ.

ಆದರೆ ಯಡಿಯೂರಪ್ಪನವರ ಸಕ್ರಿಯ ರಾಜಕೀಯ ನಿವೃತ್ತಿ ಬಳಿಕ, ರಾಜ್ಯ ಬಿಜೆಪಿಯಲ್ಲಿ ಮನೆಯೊಂದು ನೂರಾರು ಬಾಗಿಲು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಪಕ್ಷ ನಾಯಕ ಆರ್. ಅಶೋಕ್, ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ನೇರಾನೇರ ಟೀಕೆ ಮಾಡಿದರೂ, ಅವರನ್ನು ಪ್ರಶ್ನಿಸುವುದು ಹೋಗಲಿ ಟೀಕಿಸು ತ್ತಿರುವುದಕ್ಕೆ ಕಾರಣವೇನೆಂದು ಕೇಳುವ ಸ್ಥಿತಿಯಲ್ಲಿಯೂ ರಾಜ್ಯ ಬಿಜೆಪಿ ಇಲ್ಲವಾಗಿದೆ. ಬಿಜೆಪಿಯಲ್ಲಿ ಸೃಷ್ಠಿಯಾಗಿರುವ ಈ ಅರಾಜಕತೆ ಬಗ್ಗೆ ಬಿಜೆಪಿಯ ಪ್ರತಿಯೊಬ್ಬರ ನಾಯಕರೂ ಮಾತನಾಡುತ್ತಾರೆ. ಆದರೆ ಇದನ್ನು ಸರಿಪಡಿಸುವುದು ಹೇಗೆ ಎನ್ನುವ ಪ್ರಶ್ನೆಗೆ ಮಾತ್ರ ಬಹುತೇಕರದ್ದು ‘ಮೌನ’ವೇ ಉತ್ತರ ವಾಗಿರುತ್ತದೆ.

ಈ ಹಿಂದೆಲ್ಲ ಬಿಜೆಪಿಯಲ್ಲಿ ಯಾವುದೇ ಸಣ್ಣ ಕಿರಿಕ್ ಮಾಡಿಕೊಂಡರೂ ಶಿಸ್ತು ಕ್ರಮವನ್ನು ಕೈಗೊಳ್ಳುವ ವ್ಯವಸ್ಥೆ ಪಕ್ಷದಲ್ಲಿತ್ತು. ಆ ಕಾರಣಕ್ಕೆ ಬಹುತೇಕರು ಯಾವುದೇ ಹೇಳಿಕೆ ನೀಡುವಾದ ಅಳೆದು ತೂಗಿ ಮಾತನಾಡುವ ಸ್ಥಿತಿಯಿತ್ತು. ಅದರಲ್ಲಿಯೂ ಪಕ್ಷದ ನಾಯಕತ್ವದ ವಿರುದ್ಧ ಮಾತನಾಡಿದ ಉದಾಹರಣೆ ತೀರಾ ಕಡಿಮೆ. ಆದರೆ ಇತ್ತೀಚಿಗೆ ಬಿಜೆಪಿ ನಾಯಕರು ವಿರೋಧ ಪಕ್ಷದ ವಿರುದ್ಧ ಮಾತನಾಡುವುದಕ್ಕಿಂತ ಹೆಚ್ಚಾಗಿ ಸ್ವಪಕ್ಷೀಯರ ವಿರುದ್ಧವೇ ಮಾತನಾಡುವುದು ಸಾಮಾನ್ಯ ಎನ್ನುವಂತಾಗಿದೆ. ಒಬ್ಬರ ಮೇಲೆ ಇನ್ನೊಬ್ಬರಿಗೆ ವಿಶ್ವಾಸವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದಕ್ಕೆ ತಾಜಾ ಉದಾಹರಣೆಯ ರೀತಿಯಲ್ಲಿ ಕಳೆದ ವಾರವಷ್ಟೇ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ರಾಜ್ಯ ಬಿಜೆಪಿಯ ನಡೆಯಿತ್ತು. ಬಿಜೆಪಿಯೊಳಗಿರುವ ಹುಳಕು ಕಲಾಪದಲ್ಲಿ ಮತ್ತೊಮ್ಮೆ ಬಹಿರಂಗವಾಯಿತು ಎಂದರೆ ತಪ್ಪಾಗುವುದಿಲ್ಲ. ಪ್ರತಿಪಕ್ಷವಾಗಿ ಆಡಳಿತ ಪಕ್ಷದ ವಿರುದ್ಧ ಬೀಳಬೇಕಿದ್ದ ಬಿಜೆಪಿ ಶಾಸಕರು, ಆಡಳಿತ ಪಕ್ಷಕ್ಕಿಂತ ಹೆಚ್ಚಾಗಿ ತಮ್ಮ ತಮ್ಮಲ್ಲಿಯೇ ಆರೋಪ ಮಾಡಿಕೊಳ್ಳುವಲ್ಲಿ ಸಮಯ ಕಳೆದರು. ಹಾಗೇ ನೋಡಿದರೆ, ಮಳೆಗಾಲದ ಅಧಿವೇಶನದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ಮುಗಿಬೀಳಲು ಬಿಜೆಪಿಗರಿಗೆ ಸಾಲು ಸಾಲು ಅವಕಾಶಗಳಿದ್ದವು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಗರಣ, ಎಸ್‌ಸಿ-ಎಸ್‌ಟಿ
ಮೀಸಲು ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬ ಹೆಸರು ಕೇಳಿಬಂದಿದ್ದು ಸೇರಿದಂತೆ ಹಲವಾರು ಅವಕಾಶಗಳಿದ್ದವು. ಈ ಎಲ್ಲವನ್ನು ಪ್ರಸ್ತಾಪಿಸಲು ಬಿಜೆಪಿ ನಾಯಕರು ಮುಂದಾದರು ಎನ್ನುವುದು ಎಷ್ಟು ಸತ್ಯವೋ, ಈ ವಿಷಯದ ಬಗ್ಗೆ ಮಾತನಾಡುವ ಯಾವೊಬ್ಬ ನಾಯಕನೂ ‘ಗಟ್ಟಿ ಧ್ವನಿ’ಯಲ್ಲಿ ಪ್ರತಿಭಟಿಸಲಿಲ್ಲ ಎನ್ನುವುದೂ
ಅಷ್ಟೇ ಸತ್ಯ.

ವಿಧಾನಸಭೆಯ ಇಡೀ ಕಲಾಪದಲ್ಲಿ ಬಿಜೆಪಿ ಪ್ರತಿ ಹಂತದಲ್ಲಿಯೂ ‘ತಾನೇ ಹಗ್ಗ ಕೊಟ್ಟು ಕಟ್ಟಿಸಿಕೊಂಡು ಹೊಡೆಸಿಕೊಂಡ’ ರೀತಿಯಲ್ಲಿತ್ತು. ಆಡಳಿತ ಪಕ್ಷದ ವಿರುದ್ಧ
ಮಾತನಾಡಲು ಮುಂದಾಗುತ್ತಿದ್ದಂತೆ, ಕಾಂಗ್ರೆಸ್ ನಾಯಕರು ಬಿಜೆಪಿ ಸರಕಾರದ ಹಗರಣಗಳನ್ನು ಮುಂದಿಟ್ಟುಕೊಂಡು ಟೀಕಿಸಲು ಪ್ರಾರಂಭಿಸುತ್ತಿದ್ದರು. ಈ ಟೀಕೆಗೆ ಪ್ರತ್ಯುತ್ತರವಾಗಿ ಬಿಜೆಪಿಗರು ಉತ್ತರ ನೀಡುವ ಬದಲು, ಸ್ವಪಕ್ಷದ ವಿರುದ್ಧವೇ ಬಿಜೆಪಿ ಶಾಸಕರು ನೇರ ಅಥವಾ ಪರೋಕ್ಷವಾಗಿ ಟೀಕಿಸುತ್ತಿದದ್ದು, ಪಕ್ಷವಾಗಿ ಬಿಜೆಪಿ ಪಾಲಿಗೆ ದುರಂತ. ಎರಡು ವಾರದ ಕಲಾಪದಲ್ಲಿ ಬಿಜೆಪಿಯಲ್ಲಿನ ಹೊಂದಾಣಿಕೆ ಕೊರತೆಯೇ ಹೈಲೈಟ್ ಆಗಿತ್ತು ಎಂದರೆ ತಪ್ಪಾಗುವುದಿಲ್ಲ.

ಇನ್ನು ಮುಡಾ ಹಗರಣವನ್ನು ಮುಂದಿಟ್ಟುಕೊಂಡು ಬಿಜೆಪಿಗರು ಅಹೋರಾತ್ರಿ ಧರಣಿ ಆರಂಭಿಸಿದರೆ, ಕಾಂಗ್ರೆಸಿಗರಿಗಿಂತ ಮೊದಲೇ ಬಿಜೆಪಿಯ ಕೆಲ ಶಾಸಕರು ‘ಅಪಸ್ವರ’ ಎತ್ತಿದ್ದರು. ಅಹೋರಾತ್ರಿ ಬಳಿಕ ಮರುದಿನ ಬೆಳಗ್ಗೆಯೇ ‘ಅಹೋರಾತ್ರಿ ಅನ್ನೋದೇ ಒಂದು ನಾಟಕ’ವೆಂದು ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಪಕ್ಷದಲ್ಲಿ ಯಾವುದೂ ಸರಿಯಿಲ್ಲ ಎನ್ನುವುದು ಬಹಿರಂಗಪಡಿಸಿದರು.

ಯತ್ನಾಳ್ ಮಾತ್ರವಲ್ಲದೇ ರಾಜ್ಯದಲ್ಲಿ ಬಿಜೆಪಿ ಸಂಘಟನೆಯನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ, ಎಬಿವಿಪಿ, ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದಿರುವ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರೂ ಪಕ್ಷದ ನಾಯಕರ ನಡೆಯನ್ನು ನೇರವಾಗಿಯೇ ಟೀಕಿಸಿದರು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದ ಅವರು, ಪ್ರತಿಪಕ್ಷವಾಗಿ ಬಿಜೆಪಿ ಈ ಬಾರಿಯ ಅಽವೇಶನ ದಲ್ಲಿ ಯಾವ ರೀತಿಯಲ್ಲಿ ವಿಫಲವಾಗಿದೆ ಎನ್ನುವುದನ್ನು ಹೇಳಿದ್ದರು. ಅವರ ಪೋಸ್ಟ್‌ನ ಕೊನೆಯಲ್ಲಿ, ‘ಶಾಸಕರೂ ಆಗಿರುವ ನಮ್ಮ ಪಕ್ಷದ ಅಧ್ಯಕ್ಷರು (ಬಿ.ವೈ. ವಿಜಯೇಂದ್ರ) ಮತ್ತು ಪ್ರತಿಪಕ್ಷ ನಾಯಕರ ಮಧ್ಯೆ ಸಾಮರಸ್ಯ, ಹೊಂದಾಣಿಕೆ ಮತ್ತು ತಾಳ-ಮೇಳ ಇಲ್ಲದೇ ಹೋದದ್ದು ವಿಷಾದನೀಯ. ಇದರ ಸಂಪೂರ್ಣ ಲಾಭವನ್ನು ಆಡಳಿತ ಪಕ್ಷ ಪಡೆಯಲು ಸಹಾಯಕವಾಯಿತು. ಸಿಕ್ಕ ಅವಕಾಶ ಮತ್ತು ಸಮಯವನ್ನು ಸದನದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳದೇ, ಇಡೀ ಅಽವೇಶನದಲ್ಲಿ ವೃಥಾ ಕಾಲಹರಣ ಮಾಡಿ, ಇನ್ನೂ ಒಂದು ದಿನ ಬಾಕಿ ಇರುವಾಗಲೇ ಸದನದ ಕಲಾಪಗಳನ್ನು ಮೊಟಕುಗೊಳಿಸುವಲ್ಲಿ ಆಡಳಿತ ಪಕ್ಷದವರೊಂದಿಗೆ ಕೈಜೋಡಿಸಿದ ನಮ್ಮ ಪಕ್ಷದ ನಾಯಕರ ನಡೆ ಪ್ರಶ್ನಾರ್ಹ.

ಒಟ್ಟಾರೆ ಈ ಬಾರಿಯ ಅಽವೇಶನದಲ್ಲಿ ಪ್ರತಿಪಕ್ಷವಾಗಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಅಧಿವೇಶನದಲ್ಲಿ ನಾಯಕರ ನಡೆ ಗಮನಿಸಿದರೆ, ಮುಂದಿನ ದಿನಗಳಲ್ಲಿ ಬಿಜೆಪಿ ಜನಪರ ಹೋರಾಟಗಳಲ್ಲಿ ಹೇಗೆ ತನ್ನನ್ನು ತೊಡಗಿಸಿಕೊಳ್ಳಬಹುದು ಎಂಬುದು ನಿಷ್ಠಾವಂತ, ದೇವದುರ್ಲಭ ಕಾರ್ಯಕರ್ತರಿಗೆ ಆತಂಕದ ವಿಷಯ ವಾಗಿದೆ. ಬೆರಳೆಣಿಕೆಯಷ್ಟು ಶಾಸಕರನ್ನು ಹೊಂದಿದ್ದ ದಿನಗಳಲ್ಲೂ ಕಲಾಪಗಳಲ್ಲಿ ಆರ್ಭಟಿಸುತ್ತಿದ್ದ, ಜನರ ಆಶೋತ್ತರಗಳಿಗೆ ದನಿಯಾಗುತ್ತಿದ್ದ ಬಿಜೆಪಿಯನ್ನು
ನೋಡಿದ್ದ ನನಗೆ, ಇಂದಿನ ನಮ್ಮ ಪಕ್ಷದ ಈ ಪರಿಸ್ಥಿತಿ ನೋಡಿ ತೀವ್ರ ಬೇಸರ ಮತ್ತು ಆತಂಕವಾಗುತ್ತಿದೆ’ ಎನ್ನುವ ಮಾತುಗಳನ್ನು ಆಡಿದ್ದಾರೆ. ಪಕ್ಷದ ಶಿಸ್ತಿನ ಸಿಪಾಯಿಗಳಂತಿದ್ದ ಈ ರೀತಿಯ ಹಿರಿಯ ನಾಯಕರು ಬಹಿರಂಗವಾಗಿಯೇ ಟೀಕಿಸಿದರೂ, ಅದರ ಬಗ್ಗೆ ಪ್ರಶ್ನಿಸುವ ಅಥವಾ ಸಮಸ್ಯೆಯನ್ನು ಆಲಿಸುವ ಕೆಲಸವನ್ನು ರಾಜ್ಯ ಬಿಜೆಪಿಯ ಯಾವೊಬ್ಬರೂ ಮಾಡದಿರುವುದೇ ದಿನದಿಂದ ದಿನಕ್ಕೆ ನಾಯಕರು ಹಾಗೂ ಸಂಘಟನೆಯ ನಡುವೆ ಅಂತರ ಹೆಚ್ಚಾಗುತ್ತಿರುವುದನ್ನು ತೋರಿಸುತ್ತದೆ ಎಂದರೆ ತಪ್ಪಾಗುವುದಿಲ್ಲ.

ಈ ಎಲ್ಲ ಭಿನ್ನಮತ, ಭಿನ್ನಾಭಿಪ್ರಾಯದ ನಡುವೆ ಬಿಜೆಪಿಗರು ಇದೀಗ ಬೆಂಗಳೂರು-ಮೈಸೂರು ಪಾದಯಾತ್ರೆ ಮಾಡುವುದಾಗಿ ಘೋಷಿಸಿದ್ದಾರೆ. ಈ ಪಾದಯಾತ್ರೆ ಯನ್ನು ವಿಜಯೇಂದ್ರ ಆಂಡ್ ಟೀಂ ಘೋಷಿಸುವ ಸಮಯಕ್ಕೆ ಸರಿಯಾಗಿ ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ‘ನಾನು ಮತ್ತು ಯತ್ನಾಳ್ ಅವರು ಬಸವಕಲ್ಯಾಣದಿಂದ ಬಳ್ಳಾರಿಗೆ ಪಾದಯಾತ್ರೆ’ ಮಾಡುವುದಾಗಿ ಘೋಷಿಸಿದ್ದಾರೆ. ಅಷ್ಟಕ್ಕೆ ನಿಲ್ಲಿಸದೇ ‘ನಾವಿನ್ನು ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ನೆಂದು ಒಪ್ಪಿಲ್ಲ. ನಾವೇನಿದ್ದರೂ ಪಕ್ಷದ ವರಿಷ್ಠರ ಸೂಚನೆಯನ್ನು ಪಾಲಿಸುವುದಷ್ಟೇ’ ಎನ್ನುವ ಮೂಲಕ ಭಿನ್ನರಾಗವಿರುವುದನ್ನು ಮತ್ತೊಮ್ಮೆ ಪ್ರಕಟಿಸಿದ್ದಾರೆ.

ಈ ಎಲ್ಲ ಬೆಳವಣಿಗೆ ನಡೆದರೂ, ವಿಜಯೇಂದ್ರ ಅವರಾಗಲಿ, ಅಶೋಕ್ ಅವರಾಗಲಿ ಕೂತು ಮಾತನಾಡುವ ಪ್ರಯತ್ನವನ್ನು ಮಾಡಿಲ್ಲ. (ಅಥವಾ ಈಗಾಗಲೇ ಕೂತು ಮಾತನಾಡುವ ಹಂತ ಮೀರಿ ಹೋಗಿದೆಯೋ ಎನ್ನುವುದನ್ನು ಬಿಜೆಪಿಗರೇ ಹೇಳಬೇಕು). ಯಾವುದೇ ಪಕ್ಷ ಅಧಿಕಾರದಲ್ಲಿದ್ದಾಗ ಮಾತ್ರ ಪ್ರಬಲವಾಗಿರು ತ್ತದೆ ಎಂದು ಹೇಳಲಾಗುವುದಿಲ್ಲ. ಆಡಳಿತ-ಪ್ರತಿಪಕ್ಷದಲ್ಲಿ ಕುಳಿತುಕೊಳ್ಳುವುದು ರಾಜಕೀಯವಾಗಿ ಸರ್ವೇ ಸಾಮಾನ್ಯ. ಆದರೆ ಪ್ರತಿಪಕ್ಷದಲ್ಲಿದ್ದಾಗ ಯಾವ ರೀತಿಯಲ್ಲಿ ಇರುತ್ತೇವೆ ಎನ್ನುವುದು ರಾಜಕೀಯ ಪಕ್ಷಕ್ಕೆ ಮುಖ್ಯ. ಕೆಲ ದಶಕದ ಹಿಂದೆ ಇದೇ ಬಿಜೆಪಿಯ ಸಂಖ್ಯಾಬಲ ಒಂದಕ್ಕಿ ದಾಟುತ್ತಿರಲಿಲ್ಲ.

ಆದರೆ ಸದನದಲ್ಲಿ ಮಾತ್ರ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಎಂದೂ ಹಿಂದೆ ಬಿದ್ದಿರಲಿಲ್ಲ. ಆಗಿನ ಸಂಖ್ಯೆಗೆ ಹೋಲಿಸಿದರೆ, ಸದ್ಯ ಬಿಜೆಪಿ ಉತ್ತಮ ಸಂಖ್ಯಾಬಲವೇ ಹೊಂದಿದೆ. ಬಿಜೆಪಿ-ಜೆಡಿಎಸ್ ಇಂದಿಗೂ ವಿಧಾನಪರಿಷತ್ ನಲ್ಲಿ ‘ಬಹುಮತ’ವನ್ನು ಹೊಂದಿವೆ. ಆದರೂ ಹೋರಾಟದಲ್ಲಿ ವಿಫಲವಾಗುತ್ತಿರುವು ದಕ್ಕೆ ನಾಯಕರ ಹೊಂದಾಣಿಕೆ ಕೊರತೆ ಹೊರತು ಇನ್ಯಾವುದೇ ಸಮಸ್ಯೆಯಿಲ್ಲ.

ಮೊದಲ ಸಾಲಿನಲ್ಲಿ ಕೂರುವ ನಾಯಕರು ಪಕ್ಷದೊಳಗೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಬಿಟ್ಟು, ಆಡಳಿತ ಪಕ್ಷ ದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿರು ವುದು ರಾಜ್ಯ ಬಿಜೆಪಿಯ ದುರಂತ. ಹೊಂದಾಣಿಕೆ ರಾಜಕೀಯವನ್ನು ಬಿಟ್ಟು, ಇನ್ನಾದರೂ ಪಕ್ಷ ಸಂಘಟನೆ, ಪಕ್ಷದೊಳಗಿರುವ ಗೊಂದಲಗಳನ್ನು ಸರಿಪಡಿಸಿಕೊಳ್ಳು ವಲ್ಲಿ ಗಮನಹರಿಸಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ನಾಯಕರನ್ನು ‘ತಿವಿಯುವ’ ಕೆಲಸವನ್ನು ಪಕ್ಷದ ವರಿಷ್ಠರಿಂದ ಮಾತ್ರ ಸಾಧ್ಯ. ಈ ಹಂತದಲ್ಲಿಯೂ ಬಿಜೆಪಿ ವರಿಷ್ಠರು ‘ಕಾದು ನೋಡೋಣ’ ಎನ್ನುವ ಮನಸ್ಥಿತಿಯಲ್ಲಿಯೇ ಮುಂದುವರೆದರೆ, ಪಕ್ಷದಲ್ಲಿ ಈಗಿರುವ ಅಳಿದುಳಿದ ಸಂಘಟನೆಯೂ ಕಾಣೆಯಾಗುವುದರಲ್ಲಿ ಅನುಮಾನವಿಲ್ಲ.