Monday, 16th September 2024

ಕರ್ನಾಟಕ ಶ್ರೀಮಂತ, ಬೇಕಿದ್ದರೆ ಶಾಸಕರ ನೋಡಿ!

೩೨ ಜನ ಶತಕೋಟಿ ಸಂಪತ್ತಿನ ಒಡೆಯ ಶಾಸಕರಲ್ಲಿ ೧೯ ಜನ ಕಾಂಗ್ರೆಸ್; ಒಂಬತ್ತು ಶಾಸಕರು ಬಿಜೆಪಿ; ಇಬ್ಬರು ಜೆಡಿಎಸ್‌ಗೆ ಸೇರಿದವರಾಗಿದ್ದರೆ, ಒಬ್ಬರು ಪಕ್ಷೇತರ ಶಾಸಕ. ಇನ್ನೊಬ್ಬರು ಬಳ್ಳಾರಿ ಗಣಿಕುಳ ಜನಾರ್ದನ ರೆಡ್ಡಿ.

-ಎಂ.ಕೆ. ಭಾಸ್ಕರ ರಾವ್

ಪಿತ್ರಾರ್ಜಿತವೋ ಎಂಬಂತೆ ಕರ್ನಾಟಕದ ಮತದಾರರು ಗಳಿಸಿರುವ ಪುಣ್ಯ ಅಷ್ಟಿಷ್ಟಲ್ಲ. ಅಜ್ಜ ಮರಿಯಜ್ಜ, ಮುತ್ತಾತಂದಿರ ಪುಣ್ಯಾರ್ಜನೆಯ ಫಲ ರೂಪವಾಗಿ ಹೊರಹೊರೆ ಭಾಗ್ಯ ನಮಗೆ ಒಲಿದಿದೆ. ಕಾಲುಗಳಿಗೆ ಗೆಜ್ಜೆ ಕಟ್ಟಿಕೊಂಡು ತಾಳ ತಂಬೂರಿ ಹಿಡಿದು ಹಾಡುತ್ತ ಹೊಗಳುತ್ತ ಮೆರವಣಿಗೆ ತೆಗೆಯಲು, ಪಟಾಕಿ ಸಿಡಿಸಿ, ವಾಲಗ ಊದುತ್ತ, ಡೋಲು ಬಡಿಯುತ್ತ ಸಂಭ್ರಮಿಸಲು ಇದು ಸಕಾಲ. ಸುಳ್ಳಲ್ಲ, ಇದು ಪುಣ್ಯವಂತರಿಗಷ್ಟೇ ಒಲಿಯುವ ಕಾಲ!  ಕರ್ನಾಟಕದ ಈಗಿನ ಸರಕಾರ ಮಂಡಿಸುತ್ತಿರುವ ಲೆಕ್ಕಾಚಾರದ ಪ್ರಕಾರ ಅರ್ಧದಷ್ಟು ಜನಸಂಖ್ಯೆ ಬಡತನ ರೇಖೆಗಿಂತ ಕೆಳಗಿದೆ. ಹಾಲಿ ಸರಕಾರದ ಐದು ಭರವಸೆಯೇ ಈ ಲೆಕ್ಕಾಚಾರಕ್ಕೆ ಆಧಾರ. ಇದರ ಅರ್ಥ ಬರೋಬ್ಬರಿ ಕರ್ನಾಟಕದ ಅರ್ಧದಷ್ಟು ಜನತೆ ಬಡತನದಲ್ಲಿದೆ. ಸರಕಾರ ಕೊಟ್ಟರೆ ಇವರಿಗೆ ಊಟಕ್ಕೆ ಉಂಟು. ಅದಿಲ್ಲವಾದರೆ ಹೊಟ್ಟೆಗೆ ಒಣ ಹುಲ್ಲಿನ ದಂಟು. ವಾಸ್ತವ ಹೀಗಿರುವಾಗ ತಾಳ ತಂಬೂರಿ ಹಿಡಿದು ಪಟಾಕಿ ಸಿಡಿಸಿ ಸಂಭ್ರಮಿಸಲು ಕಾರಣ ಏನಿದೆ ಎಲ್ಲಿದೆ ಎಂದು ಯಾರೂ ಕೇಳಬಹುದು.  ಹೊಸದಾಗಿ ನಾವು ಆಯ್ಕೆ ಮಾಡಿರುವ ಕರ್ನಾಟಕ ವಿಧಾನ ಸಭೆಯಲ್ಲಿ ಬರೋಬ್ಬರಿ ೩೨ ಮಂದಿ, ಶತಕೋಟಿ ಸಂಪತ್ತಿನ ಒಡೆಯ ಶಾಸಕರು ಇದ್ದಾರೆ. ಅವರನ್ನು ಆರಿಸಿ ಕಳುಹಿಸಿದ ನಾವು ಬಡತನದ ರೇಖೆ ಕೆಳಗಾದರೂ ಇದ್ದೇವಲ್ಲ ಎನ್ನುವುದು ಸಂಭ್ರಮಕ್ಕೆ ಸಮಾಧಾನಕ್ಕೆ ಸಕಾರಣವಾಗಬಾರದೆ..?

ದೇಶದ ವಿವಿಧ ವಿಧಾನ ಸಭೆಗಳಿಗೆ ಚುನಾಯಿತರಾಗಿರುವ ೪೦೦೧ ಶಾಸಕರಲ್ಲಿ ನಂಬರ್ ಒನ್ ಶ್ರೀಮಂತ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ಎನ್ಇಡಬ್ಲ್ಯು) ಸಂಸ್ಥೆಗಳು ವರದಿ ಮಾಡಿವೆ. ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದಾಖಲೆ ಆಧರಿಸಿ ಈ ವರದಿಯನ್ನು ಈ ಸಂಸ್ಥೆಗಳು ಮಾಡಿ ಬಹಿರಂಗಪಡಿಸಿವೆ. ಚುನಾವಣಾ ಆಯೋಗಕ್ಕೆ ಡಿಕೆಶಿ ಸಲ್ಲಿಸಿರುವ ವರದಿ ಪ್ರಕಾರ ಚರ, ಸ್ಥಿರಾಸ್ತಿ ಒಳಗೊಂಡ ಅವರ ಸಂಪತ್ತು ೧೪೧೩ ಕೋಟಿ ರುಪಾಯಿ. ಹಲವು ಬಾರಿ ಶಾಸಕ -ಸಚಿವರಾಗಿರುವ ಡಿಕೆಶಿಯವರ ಸಂಪತ್ತು ಚುನಾವಣೆಯಿಂದ ಚುನಾವಣೆಗೆ ಏರುಗತಿಯಲ್ಲೇ ಇರುವುದಕ್ಕೆ ಕಾರಣ ಅವರೇ ಘೋಷಿಸಿ ಕೊಂಡಿರುವಂತೆ ಅವರ ಕುಟುಂಬದ ಬ್ಯುಸಿನೆಸ್ಸು.  ಕರ್ನಾಟಕ ವಿಧಾನ ಸಭೆಯ ಇನ್ನೊಂದು ವಿಶೇಷವೆಂದರೆ ದೇಶದ ಅತ್ಯಂತ ಶ್ರೀಮಂತ ಇಪ್ಪತ್ತು ಶಾಸಕರಲ್ಲಿ ಹನ್ನೆರಡು ಶಾಸಕರು ನಾವೇ ಆರಿಸಿರುವ ನಮ್ಮ ಪ್ರತಿನಿಧಿಗಳು! ಈ ವಿಚಾರವಾಗಿ ಮುಂದಕ್ಕೆ ಹೋಗುವ ಮುನ್ನ ಈ ಶಾಸಕರ ಹೆಸರುಗಳನ್ನು ಗಮನಿಸೋಣ.

ಡಿಕೆಶಿ ಹೆಸರು ಈಗಾಗಲೇ ಬಂದಿದೆ. ಅವರ ನಂತರದಲ್ಲಿ ಕ್ರಮವಾಗಿ ಬರುವ ಹೆಸರುಗಳನ್ನು ಅವರು ಘೋಷಿಸಿಕೊಂಡಿರುವ ಸಂಪತ್ತಿನ ಸಹಿತ ಅವಲೋಕಿಸೋಣ.  ಕೆ.ಎಚ್. ಪುಟ್ಟಸ್ವಾಮಿ ಗೌಡ ೧೨೬೭ ಕೋಟಿ; ಪ್ರಿಯಾಕೃಷ್ಣ (೧೧೫೬ಕೋಟಿ); ಭೈರತಿ ಸುರೇಶ್ (೬೪೮ ಕೋಟಿ); ಎನ್.ಎ. ಹ್ಯಾರಿಸ್ (೪೩೯ ಕೋಟಿ); ಎಚ್.ಕೆ.ಸುರೇಶ್ (೪೩೫ ಕೋಟಿ); ಆರ್.ವಿ.ದೇಶಪಾಂಡೆ (೩೬೩ ಕೋಟಿ); ಎಂ. ಆರ್.ಮಂಜುನಾಥ್ (೩೧೬ ಕೋಟಿ); ಎಸ್.ಎನ್. ಸುಬ್ಬಾರೆಡ್ಡಿ (೩೧೩ ಕೋಟಿ); ಶ್ಯಾಮನೂರು ಶಿವಶಂಕರಪ್ಪ (೩೧೨ ಕೋಟಿ); ಎಂ. ಕೃಷ್ಣಪ್ಪ (೨೯೬ ಕೋಟಿ); ಮುನಿರತ್ನ (೨೯೩ ಕೋಟಿ). ದೇಶದಲ್ಲೇ ಹೆಚ್ಚು ಅಂಕ ಗಳಿಸಿ ಪಾಸ್ ಆದವರು ನಮ್ಮ ರಾಜ್ಯದವರು ಎಂದಾದರೆ ಹಾಗೂ ಸಂಭ್ರಮಿಸಲು ಅದಷ್ಟೇ ಸಾಕಾಗುವುದಾದರೆ ದೇಶದಲ್ಲೇ ಅತ್ಯಧಿಕ ಸಂಪತ್ತುಳ್ಳ ಶಾಸಕರು ನಮ್ಮ ವಿಧಾನ ಸಭೆಯಲ್ಲಿದ್ದಾರೆ ಎನ್ನುವುದು ಸಹ ಸಂಭ್ರಮಕ್ಕೆ ಸಹಜ ಕಾರಣ ಆಗಬಾರದೆ..?

ಈ ಪಟ್ಟಿಯಲ್ಲಿ ಇದೇ ಮೊದಲಬಾರಿಗೆ ಶಾಸಕರಾಗಿರುವರೂ ಇದ್ದಾರೆ. ಹಾಗಾಗಿ ಇವರೆಲ್ಲರೂ ರಾಜಕೀಯದಲ್ಲೇ ಇಷ್ಟೆಲ್ಲ ಮಾಡಿದರು, ಗಳಿಸಿದರು ಎಂದು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಸೌಜನ್ಯದ ಭಾವನೆಯಾಗದು. ೩೨ ಜನ ಶತಕೋಟಿ ಸಂಪತ್ತಿನ ಒಡೆಯ ಶಾಸಕರಲ್ಲಿ ೧೯ ಜನ ಕಾಂಗ್ರೆಸ್; ಒಂಬತ್ತು ಶಾಸಕರು ಬಿಜೆಪಿ; ಇಬ್ಬರು ಜೆಡಿಎಸ್‌ಗೆ ಸೇರಿದವರಾಗಿದ್ದರೆ, ಒಬ್ಬರು ಪಕ್ಷೇತರ ಶಾಸಕ. ಇನ್ನೊಬ್ಬರು ಬಳ್ಳಾರಿ ಗಣಿಕುಳ ಜನಾರ್ದನ ರೆಡ್ಡಿ. ಅಂದಹಾಗೆ ಅತ್ಯಂತ ಶ್ರೀಮಂತ ಶಾಸಕರು ಇರಬಹುದಾದರೆ ಕಡು ಬಡವ ಶಾಸಕರೂ ಇರಬಹುದಲ್ಲವೆ..? ಇದ್ದಾರೆ ಇದ್ದಾರೆ.  ಪಶ್ಚಿಮ ಬಂಗಾಳ ವಿಧಾನ ಸಭೆಯಲ್ಲಿ ಇಂಡಸ್ ಮೀಸಲು ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಶಾಸಕ ನಿರ್ಮಲ್ ಕುಮಾರ್ ಧಾರಾ ದೇಶದಲ್ಲೇ ಕಡು ಬಡವ ಜನಪ್ರತಿನಿಧಿ. ಅವರು ಘೋಷಿಸಿಕೊಂಡಿರುವಂತೆ ಅವರು ಹೊಂದಿರುವ ಸಂಪತ್ತು ೧೭೦೦ ರುಪಾಯಿ ಮಾತ್ರ. ಕರ್ನಾಟಕ ವಿಧಾನ ಸಭೆಯ ಕಡು ಬಡವ ಶಾಸಕರೆಂದರೆ ಸುಳ್ಯದ ಬಿಜೆಪಿ ಶಾಸಕಿ ಭಾಗೀರಥಿ ಮರುಲ್ಯ. ಅವರ ಘೋಷಿತ ಸಂಪತ್ತು ೨೮ ಲಕ್ಷ ರುಪಾಯಿ. ಪಶ್ಚಿಮ ಬಂಗಾಳ ಶಾಸಕ ನಿರ್ಮಲ್ ಕುಮಾರ್ ಹೊಂದಿರುವ ಸಂಪತ್ತನ್ನು ಗಮನಿಸಿದರೆ ಇಷ್ಟು ಕಡಿಮೆ ಹಣದೊಂದಿಗೆ ಅವರು ಚುನಾವಣೆ ಎದುರಿಸುವ ಮಾತು ಒತ್ತಟ್ಟಿಗೆ ಇರಲಿ, ನಾಮಪತ್ರದೊಂದಿಗೆ ಕಡ್ಡಾಯವಾಗಿ ಸಲ್ಲಿಸಬೇಕಿರುವ ಠೇವಣಿ ಕಟ್ಟುವುದೂ ಕಷ್ಟ. ಇದು ಅಕ್ಷರಶಃ ನಿಜ. ಆದರೆ ಅವರೊಂದಿಗೆ ಅವರ ಕ್ಷೇತ್ರದ ಪ್ರಜ್ಞಾವಂತ ಮತದಾರರು ಬೆಂಬಲವಾಗಿ ನಿಂತರು. ಐದು-ಹತ್ತು ರುಪಾಯಿ ಕೊಡಲು ಸಾಧ್ಯವಿರುವವರು ಕೊಟ್ಟರು; ನೂರು ಇನ್ನೂರು ಸಾವಿರ ದೇಣಿಗೆ ನೀಡುವವರೂ ಕೈಜೋಡಿಸಿದರು.

ಮತದಾರರ ಸಂಘಟಿತ ದೇಣಿಗೆ ಹಣದಲ್ಲಿ ಅಭ್ಯರ್ಥಿ ನಿರ್ಮಲ್ ಕುಮಾರ್ ಠೇವಣಿ ಕಟ್ಟಿ ಕಣಕ್ಕೆ ಧುಮುಕಿದ್ದರು. ಇತರ ಪಕ್ಷದ ಅಭ್ಯರ್ಥಿಗಳು ಮತ ಖರೀದಿಗೆ ಮುಂದಾದಾಗ ಅದನ್ನು ತಿರಸ್ಕರಿಸಿದರೋ ಅಥವಾ ಬರುವುದು ಬರಲಿ ಎಂದು ಕೊಟ್ಟಿದ್ದನ್ನು ಇಸಗಂಡು ಮತವನ್ನು ನಿರ್ಮಲ್ ಕುಮಾರ್‌ಗೆ ಹಾಕಿದರೋ ಗೊತ್ತಿಲ್ಲ, ಮತದಾರರು ಮಾತ್ರವೇ ಬಲ್ಲ ಚಿದಂಬರ ರಹಸ್ಯ ಅದು! ವಿಧಾನ ಸಭೆಗೆ ಆಯ್ಕೆಯಾಗುವವರು ಬಡತನದ ಬಗ್ಗೆ ಒಂದಿಷ್ಟು ಕಾಳಜಿ ಅನುಕಂಪ ಇರುವವರೇ ಆಗಿರಬೇಕೆನ್ನುವುದು ಜನರ ನಂಬಿಕೆ. ಶೇ. ೮೦ರಷ್ಟು ಕೃಷಿ ಪ್ರಧಾನವಾಗಿರುವ ಭಾರತ ಬಡತನದ ದೃಷ್ಟಿಯಿಂದಲೂ ಏಳಿಗೆಯತ್ತ ಏಗುತ್ತಿರುವ ದೇಶ. ಬಡತನದ ನೋವಿನ ಅರಿವು ಇರುವವರು ಶಾಸಕರಾದರೆ ಬಡವರ ಬಗ್ಗೆ ಒಂದಿಷ್ಟು ಅನುಕಂಪದ ಮಾತಾದರೂ ವಿಧಾನ ಸಭೆಯಲ್ಲಿ ಕೇಳಿ ಬರಬಹುದು ಎನ್ನುವುದು ಜನರ ನಂಬಿಕೆಗೆ ಆಧಾರ. ವಿಧಾನ ಸೌಧದ ಮುಂದೆ ನಿಂತು ನೋಡುವವರಿಗೆ ಶಾಸಕರು ಬಂದಳಿಯುವ ಕಾರುಗಳೇ ದಂಗುಬಡಿಸುವ ಉತ್ತರ ಕೊಡುತ್ತವೆ. ಶಾಸಕರು ಶ್ರೀಮಂತರಾಗಿರುವುದು ತಪ್ಪಲ್ಲ, ಅಪರಾಧವಂತೂ ಅಲ್ಲವೇ ಅಲ್ಲ. ಆದರೆ ಶ್ರೀಮಂತಿಕೆಯ ಸೊಕ್ಕಿನಲ್ಲಿ ಶಾಸಕರಾದವರು ಮತ ಹಾಕಿ ಕಳುಹಿಸುವ ಮತದಾರರ ಹಿತಕ್ಕೆ ಬೆನ್ನು ಹಾಕಬಾರದು ಎನ್ನುವುದು ಜನತಂತ್ರದ ಆಶಯ.

ದೇಶದ ಸಂವಿಧಾನ ತಾರತಮ್ಯ ಮಾಡಿಲ್ಲ. ರಾಷ್ಟ್ರಪತಿಗೂ ಪ್ರಧಾನಿಗೂ ಇರುವ ಒಂದು ವೋಟಿನ ಹಕ್ಕು ಜನ ಸಾಮಾನ್ಯರಿಗೂ ಇದೆ. ಅಂಬಾನಿ, ಆದಾನಿ, ಟಾಟಾ, ಬಿರ್ಲಾಗಳಿಗೆ ಹೇಗೋ ಜನ ಸಾಮಾನ್ಯರಿಗೂ ಸಮಾನ ಹಕ್ಕುಗಳನ್ನು ಸಂವಿಧಾನ ನೀಡಿದೆ. ನಮ್ಮ ಸಂವಿಧಾನದ ಮೂಲ ಆಶಯಗಳಲ್ಲಿ ಮುಖ್ಯವಾದುದು- ಕಟ್ಟ ಕಡೆಯ ಮನುಷ್ಯನಿಗೆ ಮೊತ್ತ ಮೊದಲ ಮನ್ನಣೆ. ಶ್ರೀಮಂತಿಕೆಯೊಂದಿಗೆ ಶಾಸಕರೂ ಆಗಿರುವವರು ಬಡವರನ್ನು ಅವರ ಬವಣೆಯನ್ನು ನಜರಿನಲ್ಲಿಟ್ಟುಕೊಂಡೇ ಶಾಸನ ರಚನೆಯತ್ತ ಸಾಗಬೇಕೆನ್ನುವುದು ಬಯಕೆ. ಸಾಮಾಜಿಕ ಅಸಮತೋಲನಕ್ಕೆ ಶ್ರೀಮಂತ ಶಾಸಕರು ಕಾರಣವಾದರೆ ಬೇಲಿಯೇ ಹೊಲ ಮೇಯ್ದಂತೆ. ಹಾಗೆ ಆಗಬಾರದು ಎಂಬ ಸದಾಶಯ ಜನತೆಯದು.

Leave a Reply

Your email address will not be published. Required fields are marked *