Sunday, 15th December 2024

ಪಕ್ಷಗಳ ಸ್ವಪ್ರತಿಷ್ಠೆಗೆ ಬಲಿಯಾದ ಅಧಿವೇಶನ

ವರ್ತಮಾನ

maapala@gmail.com

೧೬ನೇ ವಿಧಾನಸಭೆಯ ಮೊದಲ ಅಧಿವೇಶನ ಮುಕ್ತಾಯೊಂಡಿದೆ. ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರ ಭಾಷಣ, ಈ ಭಾಷಣದ ವಂದನಾ ನಿರ್ಣಯ ಅಂಗೀಕಾರ, ಬಜೆಟ್ ಮಂಡನೆ, ಅದರ ಮೇಲೆ ಚರ್ಚೆ ನಡೆದು ಅನುಮೋದನೆ ನೀಡುವುದು ಮುಂತಾದ ಮಹತ್ವದ ಕಲಾಪಗಳಿಗೆ ಅಧಿವೇಶನ ಸಾಕ್ಷಿಯಾಯಿತು. ಅಷ್ಟೇ ಅಲ್ಲ, ಮೊದಲ ಅಧಿವೇಶನದಲ್ಲಿ ನಿರೀಕ್ಷೆ ಮೀರಿದ ಗದ್ದಲ, ಸರಕಾರದ ವಿರುದ್ಧ ಪ್ರತಿಪಕ್ಷಗಳ ಸಂಘಟಿತ ಹೋರಾಟದ ಮೂಲಕ ಮುಂದಿನ ದಿನಗಳಲ್ಲಿ ಕಲಾಪಗಳು ಇನ್ನಷ್ಟು ಬಿಸಿಯೇರಲಿದೆ ಎಂಬ ಸಂದೇಶವನ್ನೂ ನೀಡಿತು.

ಅದರ ಒಟ್ಟೊಟ್ಟಿಗೆ ಸ್ಪೀಕರ ಪೀಠಕ್ಕೆ ಅಗೌರವ, ಉಪಸಭಾಪತಿಗಳ ಮೇಲೆ ಕಾಗದಗಳನ್ನು ಹರಿದು ಎಸೆದಿದ್ದು, ಅದಕ್ಕಾಗಿ ಬಿಜೆಪಿಯ ಹತ್ತು ಶಾಸಕರ ಅಮಾನತು ಮುಂತಾದ ಬೇಡವಾದ ದಾಖಲೆಗಳಿಗೂ ಮೊದಲ ಅಧಿವೇಶನ ಸಾಕ್ಷಿಯಾಯಿತು. ಅಷ್ಟೇ ಅಲ್ಲ, ಪ್ರತಿಪಕ್ಷಗಳ ಬಹಿಷ್ಕಾರದ ನಡುವೆ ಕಲಾಪ ಮುಂದುವರಿದು ಬಜೆಟ್‌ಗೆ ಅಂಗೀಕಾರ ಪಡೆಯುವ ಮೂಲಕ ಪರಂಪರೆಯೊಂದನ್ನೂ ಸೃಷ್ಟಿಮಾಡಿತು. ಇದನ್ನೆಲ್ಲ ಗಮನಿಸಿದಾಗ ಆಡಳಿತಾರೂಢ ಕಾಂಗ್ರೆಸ್ ಭಾರೀ ಬಹುಮತ ದೊಂದಿಗೆ ಅಧಿಕಾರಕ್ಕೆ ಬಂದಿದ್ದೇವೆ ಎಂಬ ಅಹಂನಿಂದ ಹೊರಬಂದಂತೆ ಕಾಣಿಸುತ್ತಿಲ್ಲ. ಹಾಗೆಂದು ಪ್ರತಿಪಕ್ಷಗಳ ನಡೆಯೂ ಸಮರ್ಥನೀಯ ವಾಗಿರಲಿಲ್ಲ ಮತ್ತು ಅಷ್ಟೊಂದು ಉದ್ರೇಕದ ಅಗತ್ಯವೂ ಇರಲಿಲ್ಲ. ಆದರೆ, ಸದನದ ಕಲಾಪವನ್ನು ನಡೆಸುವ ಜವಾಬ್ದಾರಿ ಪ್ರತಿಪಕ್ಷ ಗಳಿಗಿಂತ ಆಡಳಿತ ಪಕ್ಷಕ್ಕೇ ಹೆಚ್ಚಾಗಿರುತ್ತದೆ. ಅದರಲ್ಲೂ ಸ್ಪೀಕರ್ ಅಥವಾ ಸಭಾಪತಿ ಸ್ಥಾನದಲ್ಲಿದ್ದವರು ನಿಸ್ಪಕ್ಷಪಾತವಾಗಿ ವರ್ತಿಸಿ, ಪ್ರತಿಪಕ್ಷದವರಿಗೆ ಹೆಚ್ಚು ಅವಕಾಶ ನೀಡುವ ಸಂಪ್ರದಾಯ ಮೊದಲಿನಿಂದಲೂ ರಾಜ್ಯ ವಿಧಾನ ಮಂಡಲದಲ್ಲಿ ನಡೆದುಕೊಂಡು ಬಂದಿದೆ.

ಯಾವುದೇ ಪಕ್ಷದ ಸರಕಾರ ಅಧಿಕಾರದಲ್ಲಿದ್ದರೂ ಈ ಸಂಪ್ರದಾಯಕ್ಕೆ ಯಾವತ್ತೂ ಚ್ಯುತಿ ಬಂದಿರಲಿಲ್ಲ. ಕೆಲವೊಮ್ಮೆ ಪ್ರತಿಪಕ್ಷಗಳ ನಡೆಗೆ ಬೇಸತ್ತ ಸ್ಪೀಕರ್
ಅಥವಾ ಸಭಾಪತಿ ಅವರನ್ನು ತರಾಟೆಗೆ ತೆಗೆದುಕೊಂಡು ಸುಮ್ಮನೆ ಕುಳ್ಳಿರಿಸಿದಾಗ ಸಭಾನಾಯಕರು (ಮುಖ್ಯಮಂತ್ರಿ) ಮಧ್ಯೆಪ್ರವೇಶಿಸಿ, ಪ್ರತಿಪಕ್ಷ ನಾಯಕರು ಅಥವಾ ಸದಸ್ಯರಿಗೆ ಮಾತನಾಡಲು ಬಿಡಿ ಎಂದು ಸ್ಪೀಕರ್ ಅಥವಾ ಸಭಾಪತಿಗೆ ಸಲಹೆ ಮಾಡಿದ ಉದಾಹರಣೆಯೂ ರಾಜ್ಯ ವಿಧಾನಮಂಡಲದಲ್ಲಿ ನಡೆದಿದೆ. ಪರಿಸ್ಥಿತಿ ತೀರಾ ವಿಕೋಪಕ್ಕೆ ಹೋಗುತ್ತದೆ ಎನ್ನುವ ಸಂದರ್ಭದಲ್ಲಿ ಪ್ರತಿಪಕ್ಷದವರ ಒತ್ತಡಕ್ಕೆ ಆಡಳಿತ ಪಕ್ಷ ಮಣಿದು ಕಲಾಪ ಮುಂದುವರಿಸಲು ಅವಕಾಶ ಮಾಡಿಕೊಟ್ಟ ಇಲ್ಲವೇ ಪ್ರತಿಪಕ್ಷಗಳು ಸಭಾತ್ಯಾಗದ ಮೂಲಕ ಕಲಾಪ ಮುಂದುವರಿಸಲು ಸಂದರ್ಭಗಳೂ ಇವೆ.

ಆಹೋರಾತ್ರಿ ಧರಣಿ ಮೂಲಕ ಪ್ರತಿಪಕ್ಷ, ಸರಕಾರವನ್ನು ಮುಜುಗರಕ್ಕೀಡು ಮಾಡಿದ ಸನ್ನಿವೇಶಗಳೂ ನಡೆದಿವೆ. ಆದರೆ, ಪ್ರತಿಪಕ್ಷಗಳು ಉಭಯ ಸದನಗಳನ್ನು ಬಹಿಷ್ಕರಿಸಿ ಹೊರಗುಳಿದ ಪ್ರಸಂಗ ಇಲ್ಲ. ಇದಕ್ಕೆ ೧೬ನೇ ವಿಧಾನಸಭೆಯ ಮೊದಲ ಅಧಿವೇಶನವೇ ಸಾಕ್ಷಿಯಾಗಿದ್ದು ಮಾತ್ರ ದುರಂತ. ಇದೆಲ್ಲದಕ್ಕೂ ಕಾರಣ ಆಡಳಿತ ಮತ್ತು ಪ್ರತಿಪಕ್ಷಗಳು ಸ್ವಪ್ರತಿಷ್ಠೆಗೆ ಒಳಗಾಗಿ ಇಬ್ಬರೂ ಮಣಿಯಲು ಒಪ್ಪದೇ ಇದ್ದುದು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಎನ್ನುವುದು ಸ್ಪಷ್ಟ. ಕಲಾಪ ಆರಂಭದ ದಿನದಿಂದಲೂ ಆಡಳಿತ ಮತ್ತು ಪ್ರತಿಪಕ್ಷಗಳು ತಮ್ಮದೇ ಸರಿ ಎಂಬಂತೆ ವರ್ತಿಸಿದವು. ಇದೇ ಮೊದಲ ಬಾರಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಸರಕಾರದ ವಿರುದ್ಧ ಮುಗಿಬಿದ್ದವು. ಇದು ಆಡಳಿತ ಪಕ್ಷದ ಅಹಂಗೆ ಪೆಟ್ಟು ನೀಡಿತು.

ಹೀಗಾಗಿ ಜನರಿಂದ ಬಹುಮತದೊಂದಿಗೆ ಆಯ್ಕೆಯಾಗಿ ಬಂದಿರುವ ‘ನಮ್ಮನ್ನು ಪ್ರಶ್ನಿಸಲು ಸೋತು ಸುಣ್ಣಾದವರಾರು’ ಎಂಬ ಭಾವನೆ ಆಡಳಿತ ಪಕ್ಷದವರಲ್ಲಿ ಮನೆ ಮಾಡಿತು. ಆರಂಭದಿಂದಲೂ ಇದು ಎದ್ದು ಕಾಣುತ್ತಿತ್ತು. ಪ್ರತಿಪಕ್ಷದವರು ಸರಕಾರವನ್ನು ಟೀಕೆ ಮಾಡಲೇಬಾರದು, ಅವರಿಗೆ ಆ ಹಕ್ಕಿಲ್ಲ ಎಂಬ ರೀತಿಯಲ್ಲಿ
ಆಡಳಿತ ಪಕ್ಷದವರು ನಡೆದುಕೊಂಡರು. ನಾವು ಹಿಂದಿನ ಬಿಜೆಪಿ ಸರಕಾರ, ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರಕಾರವನ್ನು ಹೇಗೆ ಬೇಕಾದರೂ ಟೀಕೆ ಮಾಡಬಹುದು. ಆದರೆ, ಪ್ರತಿಪಕ್ಷದವರಿಗೆ ನಮ್ಮನ್ನು ಪ್ರಶ್ನಿಸಲು ನೈತಿಕತೆ ಇಲ್ಲ ಎಂಬಂತೆ ಸದನದಲ್ಲಿ ನಡೆದುಕೊಂಡರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲೂ ಇದೇ ರೀತಿಯ ಅಂಶಗಳಿದ್ದವು. ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹೊಂದಿಸುವ ಕಾರಣಕ್ಕೆ ಇತರೆ ಯೋಜನೆಗಳಿಗೆ ಅನುದಾನ ಮೀಸಲಿಡದೇ ಇದ್ದರೆ ಪ್ರತಿಪಕ್ಷಗಳು ಟೀಕೆ ಮಾಡಿ ಅಲ್ಲಿಗೆ ವಿಷಯ ಮುಗಿಯುತ್ತಿತ್ತು. ಆದರೆ, ಅದನ್ನು ಮರೆ ಮಾಚಿ ಹಿಂದಿನ ಸರಕಾರದ ಕೆಟ್ಟ ಆರ್ಥಿಕ ನಿರ್ವಹಣೆ, ಕೇಂದ್ರ ಸರಕಾರದ ಅಸಹಾಕಾರವೇ ಅನುದಾನ ಕೊರತೆಗೆ ಕಾರಣ ಎನ್ನುವ ಮೂಲಕ ತನ್ನ ಅಸಹಾಯಕತೆಯನ್ನು ಪ್ರತಿಪಕ್ಷಗಳ ಮೇಲೆ, ಅದರಲ್ಲೂ ಮುಖ್ಯವಾಗಿ ಬಿಜೆಪಿ ಮೇಲೆ ಹಾಕಲಾಯಿತು. ಇದುವೇ ಈ ಬಾರಿಯ ಅಧಿವೇಶನದಲ್ಲಿ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಯಿತು ಎನ್ನದೇ ವಿಧಿಯಿಲ್ಲ.

ಏಕೆಂದರೆ, ಬಿಜೆಪಿಯವರಲ್ಲಿ ವಿಧಾನಸಭೆ ಚುನಾವಣೆಯ ಹೀನಾಯ ಸೋಲಿನ ಹತಾಶೆಯಿತ್ತು. ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗದೇ ಮುಜುಗರಕ್ಕೆ ಒಳಗಾದ ಆಕ್ರೋಶವೂ ಇತ್ತು. ಮತ್ತೊಂದೆಡೆ ಕಿಂಗ್ ಮೇಕರ್ ಆಗುವ ಹುಮ್ಮಸ್ಸಿನಲ್ಲಿದ್ದ ಜೆಡಿಎಸ್‌ನ ಎಚ್.ಡಿ.ಕುಮಾರ ಸ್ವಾಮಿಯವರ ಕನಸು ಈಡೇರಿರಲಿಲ್ಲ. ಜತೆಗೆ ೨೦೧೯ರಲ್ಲಿ ತಮ್ಮ ನೇತೃತ್ವದ ಮೈತ್ರಿ ಸರಕಾರ ಉರುಳಿಸಿದ ಕಾಂಗ್ರೆಸ್ ಮೇಲೆ ಸಿಟ್ಟೂ ಇತ್ತು. ಹೀಗಾಗಿ ಎರಡೂ ಪಕ್ಷಗಳಿಗೂ
ಕಾಂಗ್ರೆಸ್ ಸರಕಾರ ಮೊದಲ ವೈರಿಯಾಗಿತ್ತು. ಇದರ ಜತೆಜತೆಗೆ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ತನ್ನ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದ ರಿಂದ ಸರಕಾರದ ವಿರುದ್ಧ ಇದ್ದ ಪ್ರಮುಖ ಅಸ್ತ್ರವನ್ನು ಪ್ರತಿಪಕ್ಷಗಳು ಕಳೆದುಕೊಂಡಂತಾಗಿತ್ತು. ಈ ಎಲ್ಲವೂ ಒಟ್ಟಾಗಿ ಪ್ರತಿಪಕ್ಷಗಳ ಆಕ್ರೋಶವನ್ನು ಹೆಚ್ಚಿಸಿ ಸರಕಾರದ ವಿರುದ್ಧ ಮುಗಿಬೀಳುವಂತೆ ಮಾಡಿತ್ತು.

ಗೆಲುವಿನ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್ ಇದೆಲ್ಲವನ್ನೂ ಸ್ಪರ್ಧಾvಕ್ಷ್ಮಿಕವಾಗಿ ತೆಗೆದುಕೊಂಡು ಪ್ರತಿಪಕ್ಷಗಳನ್ನು ಕಟ್ಟಿಹಾಕುವ ಬದಲು ಅವುಗಳಿಗಿಂತಲೂ ತೀವ್ರವಾಗಿ ಮುಗಿಬಿದ್ದು ಪ್ರತಿಪಕ್ಷ ಸದಸ್ಯರನ್ನು ಬಾಯಿ ಮುಚ್ಚಿಸಲು ಪ್ರಯತ್ನಿಸಿತ್ತು. ಯುಪಿಎ ಮಿತ್ರಪಕ್ಷಗಳ ಸಭೆಗೆ ಆಗಮಿಸಿದ್ದ ಅನ್ಯ ರಾಜ್ಯಗಳ ನಾಯಕರಿಗೆ ಐಎಎಸ್ ಅಧಿಕಾರಿಗಳನ್ನು ಪರಿಚಾರಕರಂತೆ ಕಳುಹಿಸಿದ ಸರಕಾರದ ಕ್ರಮದ ವಿರುದ್ಧ ಮುಗಿಬಿದ್ದ ಪ್ರತಿಪಕ್ಷಗಳ ಸಿಟ್ಟು, ಆಕ್ರೋಶ ಹೊರಹೊಮ್ಮಲು ಇದು ಸಾಕಾಗಿತ್ತು. ಏಕೆಂದರೆ, ಯಾವುದೇ ವಿಚಾರವನ್ನು ಚರ್ಚೆಗೆ ತೆಗೆದುಕೊಂಡು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಿದರೆ ಆಡಳಿತ ಪಕ್ಷದವರು ಒಟ್ಟಾಗಿ ಮುಗಿಬಿದ್ದು
ಬಾಯಿಮುಚ್ಚಿಸುತ್ತಿದ್ದರು. ಹೀಗಾಗಿ ಧರಣಿ, ಗದ್ದಲವೇ ಅವರಿಗಿದ್ದ ಮಾರ್ಗವಾಗಿತ್ತು.

ಹಾಗೆಂದು ಧರಣಿ ನಿರತ ಪ್ರತಿಪಕ್ಷಗಳು ಸ್ಪೀಕರ್ ಪೀಠದ ವಿಷಯದಲ್ಲಿ ನಡೆದುಕೊಂಡ ರೀತಿ ಖಂಡಿತಾ ಸಮರ್ಥನೀಯವಲ್ಲ. ಕಲಾಪದ ಆರಂಭದ ದಿನ ಗಳಿಂದಲೂ ಬಿಜೆಪಿ ಸದಸ್ಯರಲ್ಲಿ ಮಡುಗಟ್ಟಿದ್ದ ಆಕ್ರೋಶ, ಆ ವೇಳೆ ಹೊರಬಂದು ಮಾಡಬಾರದ ಕೆಲಸಕ್ಕೆ ಕೈಹಾಕುವಂತೆ ಮಾಡಿತ್ತು. ಅದಕ್ಕೆ ತಕ್ಕಂತೆ
ಸರಕಾರ ಮತ್ತು ಸ್ಪೀಕರ್ ಕೂಡ ತಾಳ್ಮೆ ಕಳೆದುಕೊಂಡು ಶಾಸಕರನ್ನು ಅಮಾನತುಗೊಳಿಸಿದರು. ಇಲ್ಲಿ ಪ್ರತಿಪಕ್ಷಗಳ ವರ್ತನೆಗೆ ಸರಕಾರ ಮತ್ತು ಸ್ಪೀಕರ್ ತೆಗೆದುಕೊಂಡ ಕ್ರಮ ಸರಿಯಾಗಿಯೇ ಇದೆ. ಆ ಮೂಲಕ ಸ್ಪೀಕರ್ ಪೀಠದ ಗೌರವ ಕಾಪಾಡಿದಂತಾಗಿದೆ. ಆದರೆ, ಇಂತಹ ಘಟನೆ ಇದೇನೂ ಹೊಸದಲ್ಲ. ಈ ಹಿಂದೆ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯರು ಉಪಸಭಾಪತಿಯವರನ್ನು ಎಳೆದಾಡಿ ಅವರ ಸ್ಥಾನದಲ್ಲಿ ಕುಳಿತಿದ್ದರು.

ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ವಿಧೇಯಕದ ಪ್ರತಿ ಹರಿದೆಸೆದಿದ್ದು, ಸ್ಪೀಕರ್ ಮೈಕ್ ಕಿತ್ತುಕೊಂಡಿದ್ದ ಘಟನೆಗಳು ನಡೆದಿದ್ದವು. ಆಗೆಲ್ಲ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್ ನವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಆದರೆ, ಆಡಳಿತ ಪಕ್ಷಕ್ಕೆ ಬರುತ್ತಿದ್ದಂತೆ ಅಂತಹ ಕೃತ್ಯಗಳು ತಪ್ಪು ಎಂದು ಕ್ರಮ ಕೈಗೊಂಡಿದ್ದಾರೆ ಎಂದರೆ ಇಲ್ಲಿ ರಾಜಕೀಯ ತೀರ್ಮಾನವೇ ಪ್ರಮುಖವಾಗಿತ್ತು ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಈ ತೀರ್ಮಾನದಿಂದಾಗಿ ಮೊದಲ ಅಽವೇಶನವನ್ನೇ
ಪ್ರತಿಪಕ್ಷಗಳ ಬಹಿಷ್ಕಾರದೊಂದಿಗೆ ಮುಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರತಿಪಕ್ಷ ಬಿಜೆಪಿಯನ್ನು ಹಣಿಯಲು ಸರಕಾರ ಸದನದಲ್ಲಿ ಇಂತಹ ಕಠಿಣ ನಿರ್ಧಾರ ಕೈಗೊಳ್ಳುವ ಅಗತ್ಯವೇ ಇರಲಿಲ್ಲ. ಈಗಾಗಲೇ ಗ್ಯಾರಂಟಿ ಜಾರಿಗಳ ಮೂಲಕ ಪ್ರತಿಪಕ್ಷಗಳನ್ನು ಅರ್ಧ ಬಾಯಿ ಮುಚ್ಚಿಸಲಾಗಿದೆ. ಗ್ಯಾರಂಟಿಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವುದರೊಂದಿಗೆ ಅವರನ್ನು ಮತ್ತಷ್ಟು ದುರ್ಬಲಗೊಳಿಸಲು ಅವಕಾಶವಿದೆ. ಅಷ್ಟೇ ಅಲ್ಲ, ಅಧಿಕಾರ ಕೈಯ್ಯಲ್ಲಿರುವುದರಿಂದ ಇನ್ನೂ ಸಾಕಷ್ಟು ದಾರಿಗಳು ಇವೆ. ಆದರೆ, ಅದೆಲ್ಲವನ್ನೂ ಬಿಟ್ಟು ಪ್ರತಿಪಕ್ಷ
ಸದಸ್ಯರು ಕಲಾಪ ಬಹಿಷ್ಕರಿಸುವುದು, ಅದೇ ಕಾರಣ ಮುಂದಿಟ್ಟುಕೊಂಡು ಸರಕಾರದ ವಿರುದ್ಧ ಸದನದ ಹೊರಗೆ ಹೋರಾಟ ನಡೆಸುವಂತೆ ಮಾಡುವ ಮೂಲಕ ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಳ್ಳುವಂತೆ ಮಾಡಿದ ಉದ್ದೇಶವಾದರೂ ಏನು ಎಂಬುದೇ ಸದ್ಯಕ್ಕಿರುವ ಪ್ರಶ್ನೆ.

ಲಾಸ್ಟ್ ಸಿಪ್: ನಾನು ಮಾಡಿದ್ದೇ ಸರಿ. ಬೇರೆಯವರು ಮಾಡಿದ್ದೆಲ್ಲಾ ತಪ್ಪು ಎನ್ನುವ ತೀರ್ಮಾನಗಳು ರಾಜಕೀಯ ಕ್ಷೇತ್ರದಲ್ಲಿ ಹೆಚ್ಚು ದಿನ ಬಾಳಿಕೆ ಬರುವುದಿಲ್ಲ.