Thursday, 21st November 2024

ಕೊನೆಗೂ ಮೈತ್ರಿಗೆ ಸಮನ್ವಯದ ನೆನಪಾಯಿತು

ವರ್ತಮಾನ

maapala@gmail.com

ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ೬ ತಿಂಗಳ ಬಳಿಕ ಈ ಪಕ್ಷಗಳ ರಾಜ್ಯ ನಾಯಕರು ಒಂದೆಡೆ ಕಲೆತು ಸಮನ್ವಯದ ಮಾತಾಡಿದ್ದಾರೆ. ಮೈತ್ರಿ ಏನೇ ಇದ್ದರೂ ಸ್ಥಳೀಯವಾಗಿ ಪರಸ್ಪರ ಸಮನ್ವಯ ಇದ್ದರಷ್ಟೇ ಅದಕ್ಕೆ ಶಕ್ತಿ ಬರುತ್ತದೆ. ರಾಜ್ಯದಲ್ಲಿ ಕೊನೆಗೂ ಆ ನಿಟ್ಟಿನಲ್ಲಿ ಪ್ರಯತ್ನ ಶುರುವಾಗಿರುವುದು ಸ್ವಾಗತಾರ್ಹ ಬೆಳವಣಿಗೆ.

೨೦೨೩ ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೀನಾಯವಾಗಿ ಸೋತಾಗಲೇ ರಾಜ್ಯ ಕಾಂಗ್ರೆಸ್‌ನ ತಂತ್ರ ಗಾರಿಕೆ ಅರ್ಥವಾಗಿದ್ದು. ನಿರೀಕ್ಷೆಗೂ ಮೀರಿ ಬಲವನ್ನು ಕ್ರೋಡೀಕರಿಸಿಕೊಂಡಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲಿ ತನ್ನದೇ ಆದ ಕಾರ್ಯತಂತ್ರಗಳನ್ನು ಹೆಣೆದು ಎರಡೂ ಪಕ್ಷಗಳ ಹೆಡೆಮುರಿ ಕಟ್ಟಿತ್ತು. ಬಿಜೆಪಿಯ ಸೋಲಿಗೆ ಆಡಳಿತ ವಿರೋಧಿ ಅಲೆ ಕಾರಣ ವಾಗಿತ್ತು. ಆದರೆ, ಜೆಡಿಎಸ್‌ನ ಹೀನಾಯ ಪ್ರದರ್ಶನಕ್ಕೆ ನಿರ್ದಿಷ್ಟ ಕಾರಣಗಳೇ ಇರಲಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಒಂದೇ ಕಾರಣಕ್ಕೆ ಜೆಡಿಎಸ್‌ನ ಮತಗಳನ್ನು ವಿಭಜನೆ ಮಾಡಿ ಅದು ಕಾಂಗ್ರೆಸ್‌ಗೆ ಬರುವಂತೆ ಪಕ್ಷದ ನಾಯಕರು ನೋಡಿಕೊಂಡಿದ್ದರು. ಹೀಗಾಗಿ ಜೆಡಿಎಸ್ ತಾನು ಪ್ರಬಲವಾಗಿ ತಳವೂರಿದ್ದ ಹಳೇ ಮೈಸೂರು ಭಾಗದಲ್ಲಿ ಮತ್ತೆ ಚೇತರಿಸಿಕೊಳ್ಳು ವುದು ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಫಲಿತಾಂಶ ಹೊರಬಿದ್ದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೃದು ಧೋರಣೆ ತಳೆದಾಗಲೇ ಮುಂದೇನೋ ಇದೆ ಎಂಬ ಮುನ್ಸೂಚನೆ, ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಸುಳಿವು ಸಿಕ್ಕಿತ್ತು. ಆದರೆ, ಈ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕರ ನಡವಳಿಕೆ ನೋಡಿದಾಗ ಅದು ಕಷ್ಟಸಾಧ್ಯ ಎನ್ನುವಂತೆ ಕಾಣಿಸುತ್ತಿತ್ತು.

ಇಷ್ಟಾಗಿಯೂ, ದೇವೇಗೌಡರ ಬಗ್ಗೆ ಪ್ರಧಾನಿ ಮೋದಿ ಅವರಿಗಿದ್ದ ಗೌರವದ ಲಾಭ ಪಡೆದುಕೊಂಡ ಜೆಡಿಎಸ್, ದೆಹಲಿ ಮಟ್ಟದಲ್ಲಿ ಮೈತ್ರಿ ಮಾತುಕತೆ ನಡೆಸಿ, ಅದರಲ್ಲಿ ಯಶಸ್ವಿಯೂ ಆಯಿತು. ೨೦೨೩ರ ಸೆಪ್ಟೆಂಬರ್‌ನಲ್ಲಿ ದೇವೇಗೌಡರ ಸೂಚನೆಯಂತೆ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಸೇರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿ ಮೈತ್ರಿ ಕುದುರಿಸಿಬಿಟ್ಟರು. ಇದಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ರ ಪೌರೋ ಹಿತ್ಯವಿತ್ತು. ಇಷ್ಟಾದರೂ ಬಿಜೆಪಿಯ ವರಿಷ್ಠರು ರಾಜ್ಯ ನಾಯಕರಿಗೆ ಸಣ್ಣ ಮಾಹಿತಿಯನ್ನೂ ನೀಡಿರಲಿಲ್ಲ. ಮೈತ್ರಿ ಬಳಿಕವೂ ಎರಡೂ ಪಕ್ಷಗಳ ನಾಯಕರನ್ನು ಒಟ್ಟಾಗಿ ಕುಳ್ಳಿರಿಸಿ ಮಾತುಕತೆ ನಡೆಸಿರಲಿಲ್ಲ.

ಇದಕ್ಕೆ ಕಾರಣವೂ ಇತ್ತು. ೨೦೧೯ರಲ್ಲಿ ಕಾಂಗ್ರೆಸ್ -ಜೆಡಿಎಸ್‌ನ ಸಮ್ಮಿಶ್ರ ಸರಕಾರವನ್ನು ಉರುಳಿಸಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರಕಾರ ರಚನೆಯಾದ ಬಳಿಕ ನಡೆದ ವಿದ್ಯಮಾನಗಳು, ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು, ನಂತರದ ಬೆಳವಣಿಗೆಗಳು, ೨೦೨೩ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆದ ಹೀನಾಯ ಸೋಲು… ಹೀಗೆ ಸರಣಿ ವಿದ್ಯಮಾನಗಳಿಂದ ವರಿಷ್ಠರು ರಾಜ್ಯ ನಾಯಕರ ವಿರುದ್ಧ ಸಿಟ್ಟಾಗಿದ್ದರು.

ಮೇ ತಿಂಗಳಲ್ಲಿ ಫಲಿತಾಂಶ ಪ್ರಕಟವಾದರೂ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ, ಪ್ರತಿಪಕ್ಷ ನಾಯಕನ ಆಯ್ಕೆಗೆ ಆರು ತಿಂಗಳು ತೆಗೆದುಕೊಂಡರು ಎಂದರೆ ಈ ಆಕ್ರೋಶ ಎಷ್ಟರ ಮಟ್ಟಿಗೆ ಇತ್ತು ಎಂಬುದು ಅರ್ಥವಾಗುತ್ತದೆ. ರಾಜ್ಯ ಬಿಜೆಪಿಯಲ್ಲಿರುವ ಗುಂಪುಗಾರಿಕೆ, ಬಣಗಳ ನಡುವೆ ಹೆಚ್ಚುತ್ತಿದ್ದ ಅಸಮಾಧಾನಗಳು ಇದಕ್ಕೆ ಕಾರಣವಾಗಿದ್ದವು. ವಿಧಾನಸಭೆ ಚುನಾವಣೆಯಲ್ಲಿ
ಪಕ್ಷದ ಸೋಲಿಗೂ ಇದೇ ಕಾರಣ ಎಂದು ಭಾವಿಸಿದ್ದ ವರಿಷ್ಠರು ಯಾವುದಕ್ಕೂ ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳುವ ಪ್ರಯತ್ನ ಮಾಡಲೇ ಇಲ್ಲ.

ಇದಕ್ಕೆಲ್ಲಾ ಕಾರಣ ಯಡಿಯೂರಪ್ಪರ ವಿರುದ್ಧ ಪಕ್ಷದ ಒಂದು ವರ್ಗಕ್ಕಿರುವ ಆಕ್ರೋಶ ಎಂಬ ಗ್ರಹಿಕೆಯ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ದೂರವಿಟ್ಟು ಪಕ್ಷವನ್ನು ಬಲಪಡಿಸಲು ಸಾಧ್ಯವೇ ಎಂಬ ಬಗ್ಗೆ ವರಿಷ್ಠರು ಚಿಂತನೆ ನಡೆಸಿದ್ದರು. ಆದರೆ, ಅದು ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾದ ಬಳಿಕವಷ್ಟೇ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರಗೆ ರಾಜ್ಯಾ ಧ್ಯಕ್ಷರ ಪಟ್ಟ ಕಟ್ಟಿದರು. ಇದಾದ ಬಳಿಕ ಬಿಜೆಪಿ ರಾಜ್ಯದಲ್ಲಿ ಮತ್ತೆ ಚೇತರಿಸಿಕೊಳ್ಳುವ ಲಕ್ಷಣ ಕಾಣಿಸಿಕೊಂಡಿತಾದರೂ
ಅನಿವಾರ್ಯ ಕಾರಣಗಳಿಂದ ವಿಜಯೇಂದ್ರ ಅವರಿಗೆ ಪಟ್ಟ ಕಟ್ಟಿದ ವರಿಷ್ಠರು, ಅಷ್ಟು ಸುಲಭವಾಗಿ ಅವರನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ.

ಆದ್ದರಿಂದ ಜೆಡಿಎಸ್ ಜತೆ ಮೈತ್ರಿ ಕುರಿತು ಆಗಿರುವ ನಿರ್ಧಾರದ ಬಗ್ಗೆ ಅವರೊಂದಿಗೆ ಸಮಾಲೋಚನೆ ನಡೆಸಲೇ ಇಲ್ಲ. ಹೀಗಾಗಿ ರಾಷ್ಟ್ರ ಮಟ್ಟದಲ್ಲಿ ಮೈತ್ರಿಯಾದರೂ ಬಿಜೆಪಿ-ಜೆಡಿಎಸ್ ಮಧ್ಯೆ ರಾಜ್ಯ ಮಟ್ಟದಲ್ಲಿ ಸಮನ್ವಯ ಉಂಟಾಗಲಿಲ್ಲ. ಮೈತ್ರಿ ವಿಚಾರ ದಲ್ಲಿ ತಮ್ಮನ್ನು ವರಿಷ್ಠರು ದೂರವಿಟ್ಟಿದ್ದರಿಂದ ರಾಜ್ಯ ಬಿಜೆಪಿ ನೇತೃತ್ವ ವಹಿಸಿದ್ದ ನಾಯಕರೂ ಜೆಡಿಎಸ್ ವಿಚಾರದಲ್ಲಿ
ಇತ್ತೀಚಿನವರೆಗೂ ತಲೆಕೆಡಿಸಿಕೊಳ್ಳಲಿಲ್ಲ. ಇತ್ತೀಚೆಗೆ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಿದಾಗಲೂ ಜೆಡಿಎಸ್ ನಾಯಕರಿಗೆ ಮಾಹಿತಿ ನೀಡಲಿಲ್ಲ.

ಲೋಕಸಭೆ ಚುನಾವಣೆಯನ್ನು ಎರಡೂ ಪಕ್ಷಗಳು ಒಟ್ಟಾಗಿ ಎದುರಿಸುತ್ತಿದ್ದರೂ ಬಿಜೆಪಿಯ ಎಲ್ಲಾ ಚಟುವಟಿಕೆಗಳಿಂದ ಜೆಡಿಎಸ್ ಅನ್ನು ದೂರವಿಡಲಾಯಿತು. ಎರಡೂ ಪಕ್ಷಗಳ ಮಧ್ಯೆ ಸೀಟು ಹೊಂದಾಣಿಕೆ ನಡೆಯುವುದು ಖಚಿತವಾಗಿದ್ದರೂ ಬಿಜೆಪಿ ತನ್ನ ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸುವಾಗ ಜೆಡಿಎಸ್‌ನ ನಾಯಕರೊಂದಿಗೆ ಸಮಾಲೋಚನೆ ನಡೆಸಲಿಲ್ಲ. ಇಷ್ಟೆಲ್ಲಕ್ಕೂ ಕಾರಣ,
ಮೈತ್ರಿ ಮಾಡಿಕೊಳ್ಳುವ ಸಮಯದಿಂದ ಹಿಡಿದು ಈವರೆಗೂ ಬಿಜೆಪಿ ವರಿಷ್ಠರು ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದೇ ಆಗಿತ್ತು.

ಮೈತ್ರಿಗೂ ತನಗೂ ಸಂಬಂಧ ಇಲ್ಲ ಎಂಬಂತೆ ರಾಜ್ಯ ಬಿಜೆಪಿ ನಡೆದುಕೊಳ್ಳುತ್ತಿತ್ತು. ಸಹಜವಾಗಿಯೇ ಇದು ಜೆಡಿಎಸ್ ಮುಖಂಡ ರನ್ನು ಕೆರಳುವಂತೆ ಮಾಡಿತ್ತು. ತಮ್ಮನ್ನು ಬಿಜೆಪಿ ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಭಾವನೆ ಅವರಲ್ಲಿ  ಕಾಣಿಸಿಕೊಳ್ಳ ತೊಡಗಿತು. ಜೆಡಿಎಸ್ ಸಭೆಯಲ್ಲಿ ಅದು ಸೋಟವಾಗಿ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೇಳಿಕೊಂಡರು. ಹೀಗೆಯೇ ಮುಂದುವರಿದರೆ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡುವುದು ಕಷ್ಟ ಎಂದು ಹೇಳಿದರು. ಇದರಿಂದಾಗಿ ಆರಂಭದಲ್ಲೇ ಮೈತ್ರಿಗೆ ಹಿನ್ನಡೆಯಾಗುವ ಆತಂಕ ಕಾಣಿಸಿಕೊಂಡಿತು. ರಾಜ್ಯ ಬಿಜೆಪಿ ನಾಯಕರ ನಡೆಯನ್ನು ಮಾಜಿ ಪ್ರಧಾನಿ ದೇವೇಗೌಡರು ಆ ಪಕ್ಷದ ವರಿಷ್ಠರ ಗಮನಕ್ಕೂ ತಂದರು.

ಮಿತ್ರಪಕ್ಷ ಜೆಡಿಎಸ್‌ನಿಂದ ಈ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಬಿಜೆಪಿ ವರಿಷ್ಠರು ಎಚ್ಚೆತ್ತುಕೊಂಡರು. ಪಕ್ಷದ ರಾಜ್ಯ ನಾಯಕರನ್ನು ನಿರ್ಲಕ್ಷಿಸಿ ಪಕ್ಷವನ್ನು ಬೆಳೆಸಲು ಸಾಧ್ಯವಿಲ್ಲ ಎಂಬುದು ಅವರಿಗೆ ಮನದಟ್ಟಾಯಿತು. ರಾಜ್ಯ ನಾಯಕರನ್ನು ನಿರ್ಲಕ್ಷಿಸಿದರೆ ಏನಾಗುತ್ತದೆ ಎಂಬುದಕ್ಕೆ ವಿಧಾನಸಭೆ ಚುನಾವಣೆ ಫಲಿತಾಂಶದ ಸಾಕ್ಷಿಯೂ ಇತ್ತು. ರಾಜ್ಯ ಘಟಕದ ಶಿಫಾರ ಸನ್ನು ಕಡೆಗಣಿಸಿ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನೀಡದೇ ಇದ್ದುದು, ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿ ಗಳನ್ನು ಬದಲಾಯಿಸಿದ್ದೇ ಪಕ್ಷದ ಹೀನಾಯ ಸೋಲಿಗೆ ಕಾರಣ ಎಂಬುದು ಸ್ಪಷ್ಟವಾಗಿತ್ತು.

ಹೀಗಾಗಿ ಮತ್ತೆ ಇದೇ ರೀತಿ ಮುಂದುವರಿದರೆ ಲೋಕಸಭೆ ಚುನಾವಣೆಯಲ್ಲೂ ಸಮಸ್ಯೆಯಾಗಬಹುದು ಎಂಬ ಆತಂಕ ಕಾಣಿಸಿಕೊಂಡಿತು. ಕೂಡಲೇ ರಾಜ್ಯ ನಾಯಕರನ್ನು ಸಂಪರ್ಕಿಸಿ ಜೆಡಿಎಸ್ ಜತೆಗಿನ ಮೈತ್ರಿಯಲ್ಲಿ ಆಗಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚನೆ ನೀಡಿದರು. ದಕ್ಷಿಣ ಭಾರತದಲ್ಲಿ ಬಿಜೆಪಿ ಗಟ್ಟಿಯಾಗಬೇಕಾದರೆ ಮೊದಲು ಕರ್ನಾಟಕದಲ್ಲಿ ಮೇಲೆ ಬರಬೇಕು ಎಂಬುದು ಅವರಿಗೆ ಮನವರಿಕೆ ಯಾಗಿರಬಹುದು. ಕರ್ನಾಟಕದಲ್ಲಿ ಮೇಲೆ ಬರಬೇಕಾದರೆ ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲೇಬೇಕಾದ ಪರಿಸ್ಥಿತಿ ಇದ್ದುದರಿಂದ ಮೈತ್ರಿ ವಿಚಾರದಲ್ಲಿ ರಾಜ್ಯ ನಾಯಕರನ್ನೂ ಸೇರಿಸಿಕೊಳ್ಳುವ ಮನಸ್ಸು ಮಾಡಿದರು. ಹಾಗಾಗಿ ಎರಡೂ ಪಕ್ಷದವರು ಒಟ್ಟು ಕುಳಿತು ಸಮನ್ವಯದಿಂದ ಕೆಲಸ ಮಾಡುವಂತೆ ಜೆಡಿಎಸ್ ಮತ್ತು ಬಿಜೆಪಿ ನಾಯಕರಿಗೆ ತಿಳಿಸಿದರು.

ಇದೆಲ್ಲದರ ಪರಿಣಾಮವೇ ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ. ಈ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಮತ್ತಿತರರು ಕಲೆತು ಮುಂದಿನ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

೨೦೦೮ರಲ್ಲಿ ಬಿಜೆಪಿ-ಜೆಡಿಎಸ್ ಸೇರಿ ಸರಕಾರ ರಚಿಸಿದರೂ ಪರಸ್ಪರ ಸಮನ್ವಯ ಇಲ್ಲದ ಕಾರಣ ೨೦ ತಿಂಗಳಿಗೇ ಸರಕಾರ ಉರುಳಿತ್ತು. ಅದೇ ರೀತಿ ೨೦೧೮ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸರಕಾರ ರಚಿಸಿದರೂ ಒಂದೂಕಾಲು ವರ್ಷದೊಳಗೆ ಸರಕಾರ
ಬೀಳಲು ಇದೇ ಸಮನ್ವಯದ ಕೊರತೆ ಕಾರಣ. ಇದು ಸರಕಾರದ ವಿಚಾರದಲ್ಲಿ, ನಾಯಕರ ಮಧ್ಯೆ ಬಂದರೆ, ಚುನಾವಣೆ ಪೂರ್ವ ನಡೆಯುವ ಮೈತ್ರಿಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಮುಖಂಡರು ಮತ್ತು ಕಾರ್ಯಕರ್ತರ ಮಧ್ಯೆ ಸಮನ್ವಯ ಇರಲೇಬೇಕಾಗುತ್ತದೆ. ಏಕೆಂದರೆ, ನಾಯಕರು ಏನೇ ಮಾಡಿದರೂ ಅದನ್ನು ಮತಗಳಾಗಿ ಪರಿವರ್ತಿಸುವವರು ಇವರು. ನಾಯಕರು ಅಧಿಕಾರಕ್ಕಾಗಿ ಒಟ್ಟಾದರೂ ಈ ಹಿಂದೆ ಅವರಿಗಾಗಿ ಹೊಡೆದಾಟ, ತಿಕ್ಕಾಟಗಳಿಗೆ ಮುಂದಾಗಿ ಕಡುವೈರಿಗಳಂತೆ ನಡೆದುಕೊಳ್ಳುತ್ತಿದ್ದವರಿಗೆ ಏಕಾಏಕಿ ಜತೆಗೆ ಹೋಗಿ ಅಂದರೆ ಅದು ಸಾಧ್ಯವಾಗುವುದಿಲ್ಲ.

ಏಕೆಂದರೆ, ಅವರಿಗೆ ಅಧಿಕಾರದ ವ್ಯಾಮೋಹವೇನೂ ಇರುವುದಿಲ್ಲ. ಸದ್ಯ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಆಗಿರುವುದು ಕೂಡ ಇದೇ. ರಾಷ್ಟ್ರೀಯ ನಾಯಕರು ಮೈತ್ರಿ ಮಾಡಿಕೊಂಡು ರಾಜ್ಯ ನಾಯಕರಿಗೆ ಒಟ್ಟಾಗಿ ಹೋಗಿ ಎಂದು ಹೇಳಿದರೂ, ಸ್ಥಳೀಯ
ಮುಖಂಡರು ಮತ್ತು ಕಾರ್ಯಕರ್ತರ ಮಧ್ಯೆ ಸಮನ್ವಯ ಕಾಣಿಸಿಕೊಳ್ಳಲೇ ಇಲ್ಲ. ಸ್ಥಾನ ಹೊಂದಾಣಿಕೆ ವಿಚಾರದಲ್ಲಿ ಹಳೇ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಆಗಿದ್ದೂ ಇದೇ. ಕಳೆದ ವಿಧಾನಸಭೆ ಚುನಾವಣೆವರೆಗೆ ಈ ಭಾಗದಲ್ಲಿ ಜೆಡಿಎಸ್ ಶಕ್ತಿಯುತ ವಾಗಿತ್ತು. ಆ ಶಕ್ತಿಯನ್ನು ಮತ್ತೆ ಗಳಿಸಲು ಅದು ಪ್ರಯತ್ನಿಸುತ್ತಿದೆ.

ಮತ್ತೊಂದೆಡೆ ಬಿಜೆಪಿ ಕೂಡ ಈ ಭಾಗದಲ್ಲಿ ತನ್ನ ನೆಲೆ ವಿಸ್ತರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಆದರೆ, ಮೈತ್ರಿ ವಿಚಾರದಲ್ಲಿ ರಾಜ್ಯ ನಾಯಕರನ್ನು ಬಿಜೆಪಿ ವರಿಷ್ಠರು ಕಡೆಗಣಿಸಿದ್ದರಿಂದಾಗಿ ಸ್ಥಳೀಯವಾಗಿ ಹೊಂದಾಣಿಕೆ ಬಗ್ಗೆ ಚರ್ಚೆಯೇ ಆಗಲಿಲ್ಲ. ಇದರ ಪರಿಣಾಮ ಎರಡೂ ಪಕ್ಷಗಳವರು ಒಟ್ಟಾಗಲಿಲ್ಲ. ಹೀಗಾಗಿ ಟಿಕೆಟ್ ಹಂಚಿಕೆ ಮತ್ತು ಸ್ಥಾನ ಹೊಂದಾಣಿಕೆ ವೇಳೆ ಪರಸ್ಪರ ಅಸಮಾಧಾನ ಸೃಷ್ಟಿಯಾಯಿತು. ಕೋಲಾರ, ಮಂಡ್ಯ, ಹಾಸನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದು  ಬಿಜೆಪಿಯವರ ಸಿಟ್ಟಿಗೆ ಕಾರಣವಾದರೆ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮೈಸೂರು-ಕೊಡಗು, ತುಮಕೂರು ಕ್ಷೇತ್ರಗಳನ್ನು ಬಿಜೆಪಿಗೆ ನೀಡಿರುವುದು ಜೆಡಿಎಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ಯಾವಾಗ ಇದು ಚುನಾವಣೆ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡಬಹುದು ಎನಿಸಿತೋ, ಆಗ ಬಿಜೆಪಿ ವರಿಷ್ಠರಿಗೆ ಈ ಸಮಸ್ಯೆಯನ್ನು ಸರಿಪಡಿಸಲೇಬೇಕಾದ ಅನಿವಾ ರ್ಯತೆ ಸೃಷ್ಟಿಯಾಯಿತು.

ಕೂಡಲೇ ರಾಜ್ಯ ನಾಯಕರನ್ನು ಸಂಪರ್ಕಿಸಿ ಎರಡೂ ಪಕ್ಷಗಳ ಮಧ್ಯೆ ಸಮನ್ವಯತೆ ಸಾಧಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿ ದರು. ಅದರ ಪರಿಣಾಮವೇ ಶುಕ್ರವಾರದ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ. ಒಂದೊಮ್ಮೆ ಜೆಡಿಎಸ್‌ನಲ್ಲಿ ಬಿಜೆಪಿ ವಿರುದ್ಧ ಅಸಮಾಧಾನ ಕಾಣಿಸಿಕೊಳ್ಳದೇ ಹೋಗಿದ್ದರೆ ಚುನಾವಣೆ ಸಂದರ್ಭದಲ್ಲೂ ಮೈತ್ರಿ ವಿಚಾರದಲ್ಲಿ ಬಿಜೆಪಿ ವರಿಷ್ಠರು ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿರಲಿಲ್ಲ. ಚುನಾವಣಾಪೂರ್ವ ಮೈತ್ರಿ ಯಶಸ್ವಿಯಾಗ ಬೇಕಾದರೆ ಸಮನ್ವಯತೆ ಅಗತ್ಯ ಎಂಬುದು ಈಗ ಅವರಿಗೆ ಅರ್ಥವಾಗಿದೆ.

ಲಾಸ್ಟ್ ಸಿಪ್: ಜ್ಞಾನೋದಯ ಆಗದೇ ಇರುವುದಕ್ಕಿಂತ ತಡವಾಗಿಯಾದರೂ ಆದರೆ ಅದರಿಂದ ಸ್ವಲ್ಪ ಮಟ್ಟಿನ ಲಾಭವಾದರೂ ಆಗುತ್ತದೆ.