ಹಂಪಿ ಎಕ್ಸ್’ಪ್ರೆಸ್
1336hampiexpress1509@gmail.com
ಇಂದು ಕಾವಿಗಳು ಖಾದಿಗಳು ಮತದಾರರೂ ಸೇರಿ ಮುಖ್ಯಮಂತ್ರಿ ಪದವಿ ಒಂದು ಜಾತಿಗೆ ಬೇಕು ಎನ್ನುತ್ತಿದ್ದಾರೆ ಹೊರತು ಸಂವಿಧಾನದ ಆಶಯಕ್ಕೆ ಜಾತ್ಯಾತೀತ ಪ್ರಜಾಪ್ರಭೂತ್ವಕ್ಕೆ ಸಮಾನತೆಯ ಅನುಷ್ಠಾನಕ್ಕೆ ರಾಜ್ಯದ ಅಭ್ಯುದಯ ಅಭಿವೃದ್ಧಿಗೆ ಮುಖ್ಯಮಂತ್ರಿ ಬೇಕು ಎಂದು ಯಾರೂ ಹೇಳುತ್ತಿಲ್ಲ. ಹೀಗಾಗಿ ಜಾತಿಗೊಂದು ಸಿಎಂ ಪದವಿ ನೀಡಬೇಕಾಗಿದೆ !!
ಮತಗಟ್ಟೆಯ ಮುಂದೆ ಶ್ರೀಮಂತ ನಿಂದ ಹಿಡಿದು ಭಿಕ್ಷುಕನವರೆಗೂ, ಮೇಲ್ಜಾತಿ ಯಿಂದ ಮೀಸಲಾತಿ ಹೊಂದಿರುವ ಜಾತಿಗಳ ವರೆಗೂ ಯಾವುದೇ ಭೇದ ವಿಲ್ಲದೇ ಸಾಲಿನಲಿ ನಿಂತು ಅಯೋಗ್ಯ ರಾಜಕಾರಣಿಗಳಿಗೆ ಮತ ಒತ್ತಿ ಬರಬೇಕು. ಆ ಸಾಲಿನಲ್ಲಿ ಎಲ್ಲರೂ ಒಂದೇ, ಎಲ್ಲರೂ ಸಮಾನರು, ಅಲ್ಲಿ ಎಲ್ಲರೂ ಮತದಾರ ಮಹಾಪ್ರಭುಗಳು!
ಹೀಗೆ ಮತ ಪಡೆದ ಪುಢಾರಿಗಳು ತಮ್ಮ ಕನಸಿಗೆ(?!) ಸ್ವಾರ್ಥಕ್ಕೆ, ತೀಟೆಗೆ, ತೆವಲಿಗೆ ಇಡೀ ರಾಜ್ಯವನ್ನು, ಅಧಿಕಾರವನ್ನು ಕೈಗೆತ್ತಿಕೊಳ್ಳುತ್ತಾರೆ. ತಾನೊಬ್ಬ ಜಾತ್ಯತೀತ ನಾಯಕ ಎಂದು ಹೇಳಿಕೊಳ್ಳುವ ಇಂಥ ನಾಯಕರೆಲ್ಲರೂ ತಂತಮ್ಮ ಜಾತಿ ಗಳವರ ಮಂದೆ ಮುಂದೆ ನಿಂತು, ತಂತಮ್ಮ ಜಾತಿಯ ಮಠಾಧೀಶರ ಮುಂದೆ ಕಣ್ಣೀರಿಟ್ಟು ‘ನನ್ನ ಕೈ ಬಿಡಬೇಡಿ’ ಎಂದು ದೈನೇಸಿ ಬೇಡುತ್ತಾರೆ. ಮಠಾಧೀಶರುಗಳು ಸಹ ‘ತಮ್ಮ ಜಾತಿಯ ನಾಯಕನೇ’ ರಾಜ್ಯದ ಮುಖ್ಯಮಂತ್ರಿಯಾಗಿ ಕಂಗೊಳಿ ಸಬೇಕೆಂದು ಬಯಸುತ್ತಾನೆ. ಬಾಯಿಬಡಿದುಕೊಳ್ಳಲು ಮಾತ್ರ ಜಾತ್ಯತೀತ ಸಿದ್ಧಾಂತ, ಎದೆಬಡಿದುಕೊಳ್ಳಲು ಸಮಾನತೆ ಎಂಬ ಸುಡುಗಾಡು ವಾದ.
ಇಂಥವರು ನಿಜಕ್ಕೂ ಜಾತ್ಯತೀತ ನಾಯಕರೇ ಆಗಿದ್ದರೆ ಅದನ್ನು ಪ್ರಜಾಪ್ರಭುತ್ವಕ್ಕೆ ಸಾಬೀತುಪಡಿಸುವ ತಾಕ್ಕತ್ತು
ಯೋಗ್ಯತೆಯೇನಾದರು ಇದ್ದರೆ ರಾಜ್ಯಾದ್ಯಂತ ಬ್ರಾಹ್ಮಣರ ಸಮಾವೇಶ, ಒಕ್ಕಲಿಗರ ಸಮಾವೇಶ, ವೀರಶೈವ ಲಿಂಗಾಯತರ ಸಮಾವೇಶ ಹೀಗೆ ಎಲ್ಲ ಜಾತಿಗಳ ಸಮಾವೇಶ ನಡೆಸಿ ಅಲ್ಲಿ ಆಯಾ ಜಾತಿಯ ಸ್ವಾಮೀಜಿಗಳಿಂದ ‘ಪರಮ ಜಾತ್ಯತೀತ
ರಾಜಕಾರಣಿಯಾದ ಈ ಧೀಮಂತ ವ್ಯಕ್ತಿಗೇ ಇಡೀ ರಾಜ್ಯ ಮತನೀಡಿ ಮುಖ್ಯಮಂತ್ರಿಯನ್ನಾಗಿಸಿ‘ ಎಂದು ಕರೆ ನೀಡುವಂತೆ ಮಾಡಿ ತೋರಿಸಲಿ. ಅದು ಬಿಟ್ಟು ಹೆತ್ತವರಿಗೆ ಹೆಗ್ಗಣ ಮುದ್ದು ಎಂಬುದನ್ನು ತೋರಿಸುವುದು ಜಾತ್ಯತೀತವಲ್ಲ.
ಜಾತ್ಯತೀತ ವ್ಯಕ್ತಿ ಎಂದರೆ ತನ್ನ ಸ್ವಜಾತಿ ಮತದಾರರಿರುವ ಕ್ಷೇತ್ರಗಳನ್ನು ಸರ್ವೆ ಮಾಡುವುದಲ್ಲ. ರಾಜ್ಯದ ಯಾವ ಕ್ಷೇತ್ರ ದದರೂ ನಿಂತು ಮತಯಾಚನೆ ಮಾಡದೇ ಸಕಲ ಜಾತಿಗಳ ಮತಪಡೆದು ದಾಖಲೆ ಅಂತರದಲ್ಲಿ ಗೆದ್ದುಬರುವ ಯೋಗ್ಯತೆ ಇರುವುದು ಜಾತ್ಯತೀತ ಪುರುಷನ ಪೌರುಷ. ಜೈಲುವಾಸಿಯಾದವರು, ಯಾವುದೇ ಕ್ಷಣದಲ್ಲಿ ಜೈಲುಪಾಲಗಾಗ ಬಹುದಾದ ಪುಢಾರಿಗಳೂ ಕೇವಲ ‘ಜಾತಿಬ್ರಾಂಡ್’ ಅರ್ಹತೆ ಮಾತ್ರದಿಂದಲೇ ಮುಖ್ಯಮಂತ್ರಿ ಆಗಬೇಕೆಂದು ರಣಪ್ರತಿಜ್ಞೆ ಮಾಡುತ್ತಾರೆ. ಇಂಥವರು ತಮ್ಮ ಎದುರಾಳಿಗಳನ್ನು ಹಣಿಯಲು ಹನಿಟ್ರಾಪ್‌ನ್ನೂ ಹೂಡುತ್ತಾರೆ, ಭಯೋತ್ಪಾದಕರನ್ನು ಸಹ ಸಮರ್ಥಿಸಿ ಕೊಳ್ಳುತ್ತಾರೆ.
ಇಂಥವರ ಜೀವಂತ ಶವಯಾತ್ರೆಯಂಥ ಪಲ್ಲಕ್ಕಿ ಹೊತ್ತು ರಕ್ಷಿಸಲು ಸಿದ್ಧವಿರುವ ‘ಜಾತಿಜೇಡಗಳು’ ನಮ್ಮ ಸಮಾಜದಲ್ಲಿವೆ. ನೋಡಿ, ಸಮಾಜ ಇಂದು ಯಾವ ದುರ್ಗತಿಯತ್ತ ಸಾಗುತ್ತಿದೆ. ಅವನೆಂಥಾ ದುಷ್ಟನೇ ಇರಲಿ, ಆತನ ಜಾತಿಯ ಮಠಗಳು,
ಕಾವಿಧಾರಿಗಳು ಆತನ ನೈತಿಕ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಅವರಿಗಾಗಿ ಬೀದಿಗೆ ಬಂದು ಪ್ರತಿಭಟಿಸುತ್ತಾರೆ. ಇದು ಸಂವಿಧಾನದ ಆಶಯ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ.
ಹೀಗಾದಲ್ಲಿ ಸಂವಿಧಾನಾತ್ಮಕ ಚುನಾವಣೆ ಏತಕ್ಕೆ ಬೇಕು? ಸಮಾಜದಲ್ಲಿ ಯಾವ ಮಠ ಮತ್ತು ಜಾತಿಗಳು ಬಲಿಷ್ಟವೋ ಅವರು ಸೂಚಿಸುವ ಪುಢಾರಿಗೆ ಮುಖ್ಯಮಂತ್ರಿ ಪದವಿ ಘೋಷಿಸಬಹುದಲ್ಲವೇ? ಇನ್ನು ಪುಟಗೋಸಿ ಪಕ್ಷಗಳ ಕಥೆ ಹೇಗಿದೆ ಎಂದರೆ, ಅನೇಕ ಔಷಧ ಅಂಗಡಿಗಳ ಮುಂದೆ ಶೇ. ೨೦ರಿಂದ ೫೦ರವರೆಗೂ ರಿಯಾಯಿತಿ ನೀಡುತ್ತೇವೆಂದು ದೊಡ್ಡದಾಗಿ ಬರೆದು ಕೊಂಡಿರುತ್ತಾರೆ.
ಆದರೆ ಅಲ್ಲಿ ಗ್ರಾಹಕರಿಗೆ ಬೇಕಿರುವ ಔಷಧಗಳೇ ಇರುವುದಿಲ್ಲ. ಇರದೇ ಇರುವ ಔಷಧಗಳಿಗೆ ರಿಯಾಯಿತಿ ನೀಡುತ್ತೇವೆ ಎನ್ನುತ್ತಾರೆ. ಇದೇ ತಂತ್ರ ಮತ್ತು ಮೋಸದ ಪ್ರಚಾರವನ್ನೇ ಇಂಥ ರಾಜಕೀಯ ಪಕ್ಷಗಳು ಮಾಡುತ್ತಿವೆ. ವಂಶಾಧಾರಿತ,
ವಂಶಮೂಲಭೂತ, ವಂಶಪ್ರತಿಷ್ಠೆಯ ವಂಶಮೂಲವ್ಯಾಧಿಯಲ್ಲಿರುವ ಪಕ್ಷಗಳು ಅಧಿಕಾರಕ್ಕೆ ಬರುವುದೇ ‘ಕೆಟ್ಟ’ ಕನಸಿನಂತಿ ರುವಾಗ ‘ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ’ ಇಂಥ ಒಂದು ವರ್ಗಕ್ಕೆ ಜಾತಿಗೆ ಮುಖ್ಯಮಂತ್ರಿ ಸ್ಥಾನ ! ಎಂದು ಘೋಷಿಸುತ್ತಾರೆ.
ಎಷ್ಟು ಹಾಸ್ಯಾಸ್ಪದವಲ್ಲವೇ? ಇನ್ನು ವಿಷಯಕ್ಕೆ ಬರುವುದಾದರೆ, ದೇಶದ ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಜಾತಿ
ರಾಜಕಾರಣ, ವಂಶ ರಾಜಕಾರಣವೆಂಬ ರೋಗವನ್ನು ಹೋಗಲಾಡಿಸುವ ಉದ್ದೇಶ ಹೊಂದಿರುವ ಬಿಜೆಪಿ ಜಾತಿಗಿಂತ ಯೋಗ್ಯತೆಯನ್ನು ಜಾರಿಗೆ ತರುವಂಥ ಬದಲಾವಣೆಗಾಗಿ ಅನೇಕ ರಾಜ್ಯಗಳಲ್ಲಿ ಪ್ರಯತ್ನಿಸುತ್ತಿದೆ. ಇದಕ್ಕಾಗಿ ದೇಶ, ದೇಶದ
ಭದ್ರತೆ, ರಾಷ್ಟ್ರೀಯತೆ ಪದಗಳನ್ನಾದರೂ ಇಟ್ಟುಕೊಂಡು ರಾಜಕೀಯ ‘ಪಾಕ’ ತೆಗೆಯುತ್ತಿದ್ದಾರೆ.
ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಆಗಲಿ ಜೆಡಿಎಸ್ ಆಗಲಿ ಒಂದು ನಿಽಷ್ಟ ಜಾತಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಅಥವಾ ಮುಖ್ಯಮಂತ್ರಿ ಆಗುತ್ತೇನೆ ಎನ್ನುತ್ತಿವೆಯೇ ಹೊರತು ಈ ರಾಜ್ಯದ ಸಮಸ್ಯೆಗಳನ್ನು ಸರಿಪಡಿಸುವ, ರಾಜ್ಯ ಎಲ್ಲ ಕ್ಷೇತ್ರಗಳನ್ನೂ ಬಲಿಷ್ಠಗೊಳಿಸುವ, ರಾಜ್ಯವನ್ನು ಅಭ್ಯುದಯಗೊಳಿಸುವ, ಅಭಿವೃದ್ಧಿ ಪಡಿಸುವ, ಎಲ್ಲಕ್ಕಿಂತ ಮಿಗಿಲಾಗಿ
ಸಂವಿಧಾನದ ಆಶಯಗಳನ್ನು ಈಡೇರಿಸುತ್ತೇವೆ, ಎಲ್ಲ ಜಾತಿ ಧರ್ಮಗಳನ್ನು ಸಮನಾಗಿ ಕಾಣುವ ಸಮಾನತೆಯ ಸಿದ್ಧಾಂತ ವನ್ನು ಮೊದಲಾಗಿ ಅನುಷ್ಠಾನಕ್ಕೆ ತರುತ್ತೇವೆ, ಅಂಥ ಸಮರ್ಥ ಯೋಗ್ಯ ಧೀರ ದಿಟ್ಟ ಜಗಮಲ್ಲ ನಾಯಕನನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಯಾವ ಪಕ್ಷದವರೂ ಹೇಳುತ್ತಿಲ್ಲ.
ಮುಳುಗುವ ಸಮಯದಲ್ಲಿ ದೇವರನ್ನು ಕರೆಯುವಂತೆ ಅಂತಿಮವಾಗಿ ಸ್ವಜಾತಿ ಕಾರ್ಡ್ ಬಳಸಿಯೇ ಮುಖ್ಯಮಂತ್ರಿ
ಯಾಗುವ ಹಪಾಹಪಿಯಲ್ಲಿ ಇಂದಿನ ರಾಜಕಾರಣ ವಿದೆ. ಬಾಯಿಬಿಟ್ಟರೆ ತಾನು ಜಾತ್ಯತೀತವಾದಿ, ಸೆಕ್ಯುಲರ್ ಪರ ಸಂವಿಧಾನವೇ ಅಂತಿಮ ಎಂದೆ ತುತ್ತೂರಿ ಊದುವ ಇವರುಗಳು ಅಂತಿಮವಾಗಿ ಇವರಿಗೆ ರಾಜಕೀಯದ ಆತ್ಮವೆನ್ನುವುದು ಕೇವಲ ಜಾತಿಯಷ್ಟೆ !
ಅಸಲಿಗೆ ಇಂಥವರಿಗೆ ಸಂವಿಧಾನದ ಆಶಯದ ಅರಿವು ಗೌರವ ಯಾವುದೂ ಇರುವುದಿಲ್ಲ. ಇಂದು ಎಲ್ಲವನ್ನು ಬಿಟ್ಟ ಕಾವಿಧಾರಿ
ಸ್ವಾಮೀಜಿಗಳೇ ರಾಜಕೀಯವನ್ನು ಬಿಗಿದಪ್ಪಿಕೊಂಡು ಸಂವಿಧಾನಕ್ಕಿಂತ ಬಲಿಷ್ಠರಾಗುತ್ತಿದ್ದಾರೆ. ಇವರುಗಳ ಸ್ವಜಾತಿ ಮಮಕಾರದಿಂದಾಗಿ ರಾಜಕಾರಣದಲ್ಲಿ ಅಧರ್ಮಿಯರು, ಅಯೋಗ್ಯರೆ ಸಲ್ಲುವಂತಾಗುತ್ತಿದ್ದಾರೆ. ಉತ್ತರಪ್ರದೇಶದಲ್ಲಿ
ಸಂನ್ಯಾಸಿ ಯೋಗಿ ಆದಿತ್ಯನಾಥರು ರಾಜಕಾರಣದಲ್ಲಿ ಮುತ್ಸದ್ದಿಯಲ್ಲ, ರಾಜಕೀಯ ಅನುಭವವೂ ಇದ್ದವರಲ್ಲ.
ಠಾಕೂರ್ ಸಮುದಾಯದವರಾದರೂ ‘ನಾಥಪಂಥ’ ಸ್ವೀಕರಿಸಿ ಸಂತರಾದವರು. ಹಾಗಂತ ಅವರು ಜಾತಿಯ ಅರ್ಹತೆಯಿಂದ ಮುಖ್ಯಮಂತ್ರಿ ಯಾದವರಲ್ಲ. ಸಂವಿಧಾನ-ಪ್ರಜಾಪ್ರಭುತ್ವ- ಧರ್ಮ ಈ ಮೂರನ್ನೂ ಸಮವಾಗಿ ಪಾಲಸಿಕೊಂಡು ಪೋಷಿಸಿದ್ದ ರಿಂದಲೇ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಅಲ್ಲಿ ಜಾತಿಗಿಂತ ಯೋಗ್ಯತೆಯೇ ಮುಖ್ಯಮಂತ್ರಿ ಪದವಿಗೆ ಮಾನದಂಡವಾಗಿದೆ. ಯೋಧರೊಬ್ಬರ ಚಿತೆಯ ಭೂದಿಯನ್ನು ಹಣೆಗೆ ಸವರಿಕೊಂಡು ಹೊರಡುವಂಥ ಸಂತ ಯೋಗಿ ಅಲ್ಲಿದ್ದರೆ ನಮ್ಮಲ್ಲಿ ಬಹುಪಾಲು ಸ್ವಾಮೀಜಿಗಳಿಗೆ ಸ್ವಜಾತಿಯ ಪುಢಾರಿಗಳ ಚಿಂತೆಯೇ ಜಪವಾಗಿದೆ.
ಸಂವಿಧಾನವೇ ನಮ್ಮ ಧರ್ಮ ಎನ್ನುವ ಮಲ್ಲಿಕಾರ್ಜುನ ಖರ್ಗೆಯವರಂಥ ದಲಿತ ನಾಯಕರು ಐವತ್ತು ವರ್ಷಗಳಿಂದ ರಾಜಕಾರಣ ದಲ್ಲಿದ್ದರೂ ಇನ್ನೂ ಅವರು ತಾನು ಬಡವರಲ್ಲಿ ಬಡವ, ನನ್ನ ಚಹಾ ಯಾರೂ ಕುಡಿಯುವುದಿಲ್ಲ ಎನ್ನುತ್ತಿದ್ದಾರೆ. ನಾಡಿನ ಹಿರಿಯ ಮುತ್ಸದ್ದಿಯಾಗಿದ್ದರೂ ಮುಖ್ಯಮಂತ್ರಿಯಾಗುವುದಕ್ಕೆ ’ದಲಿತ ಮುಖ್ಯಮಂತ್ರಿಭ’ ಎಂಬ ತನ್ನ ಜಾತಿಯ ಕಾರ್ಡ್ ಬಳಸಿಕೊಳ್ಳುವಂತ್ತಾಗಿರುವುದು ಶೋಚನೀಯ.
ಆದರೆ ಅದೇ ದಲಿತ ವರ್ಗದ ಅದೆಷ್ಟೋ ಕಡು ಬಡವ ಯುವಕರು ಕಷ್ಟಪಟ್ಟು ಓದಿಕೊಂಡು ಅದೇ ಸಂವಿಧಾನದ ನೆರಳಿನಲ್ಲಿ ಐಎಎಸ, ಐಪಿಎಸ್, ಕೆಎಎಸ್ ನಂಥ ಉನ್ನತ ಮಟ್ಟದ ಅಧಿಕಾರಿಗಳಾಗಿ ದೇಶದ ಕಾರ್ಯಾಂಗದಲ್ಲಿ ಪ್ರಭಾವಿ ವ್ಯಕ್ತಿಗಳಾಗಿ
ಕಾರ್ಯನಿರ್ವಹಿಸುತ್ತಿಲ್ಲ ಹೇಳಿ. ವಿದ್ಯಾವಂತ ದಲಿತರು ಇಂದು ಸಮಾಜದಲ್ಲಿ ಯಾರಿಗೂ ಹಿಂದಿಲ್ಲ. ಅವರೆಲ್ಲರೂ ತಮ್ಮ ಶ್ರಮಕ್ಕೆ ತಕ್ಕ ಫಲ ಅವಕಾಶ ಆದ್ಯತೆಯನ್ನು ಪಡೆಯುತ್ತಿದ್ದಾರೆ. ಇದೇ ನಮ್ಮ ಸಂವಿಧಾನಕ್ಕಿರುವ ತಾಕತ್ತು. ಖರ್ಗೆಯವರ
ಇಂದಿನ ಸ್ಥಿತಿ, ಸಂವಿಧಾನಕ್ಕೂ ಕಾಂಗ್ರೆಸ್ ಪಕ್ಷವೆಂಬ ರಾಜಕೀಯಕ್ಕೂ ಇರುವ ವ್ಯತ್ಯಾಸವನ್ನು ಎತ್ತಿ ಹಿಡಿದಿದೆ. ಸಂವಿಧಾನ ಯಾರಿಗೂ ಮೋಸ ಮಾಡುವುದಿಲ್ಲ. ಆದರೆ ಅದನ್ನು ಸಾರ್ಥಕಗೊಳಿಸುವ ಬದ್ಧತೆ ರಾಜಕಾರಣಿಗಳಲ್ಲಿ ಹಳ್ಳ ಹಿಡಿದಿರುವುದೇ ದೌರ್ಭಾಗ್ಯ.
ಭಾರತರತ್ನ ಡಾ.ಭೀಮ್‌ರಾವ್ ರಾಮ್‌ಜಿ ಅಂಬೇಡ್ಕರ್ ದಲಿತ ಸಮುದಾಯ ಮೇರುವ್ಯಕ್ತಿ ಎಂಬ ಹೆಮ್ಮೆ ಪ್ರತಿಯೊಬ್ಬ ಭಾರತೀಯರಿಗಿರಬೇಕೇ ಹೊರತು ಖರ್ಗೆಯವರ ನಿರಾಸೆಯಲ್ಲ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲುವಂತೆ
ಮಾಡಿದ್ದಲ್ಲದೇ ಅವರ ಅಂತಿಮ ಸಂಸ್ಕಾರಕ್ಕೂ ಅವಮಾನ ಮಾಡಿದ ರಾಜಕೀಯ ಪಕ್ಷವನ್ನು ದೇಶದ ಜನ ಮರೆಯುವುದಿಲ್ಲ. ದುರಂತವೆಂದರೆ ಬ್ರಾಹ್ಮಣರಾದ ವೀರಸಾವಕರ್ರ ಅವರು ದಲಿತರ ದಪೂಜೆ ಮಾಡಿ, ಅವರೊಂದಿಗೆ ಸಹಭೋಜನ ಆರಂಭಿಸಿ ದಲಿತ ಮಕ್ಕಳಿಗೆ ಶಾಲೆಗಳನ್ನು ದೇವಾಲಯಗಳ ಪ್ರವೇಶವನ್ನು ಮುಕ್ತಗೊಳಿಸಿ ಅಸ್ಪೃಶ್ಯತೆಯನ್ನು ಹೋಗಲಾಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ ಮೊದಲಿಗರು.
ಆದರೆ ಅವರನ್ನು ಇಂದು ದೇಶದ್ರೋಹಿ ಎಂಬಂತೆ ಬಿಂಬಿಸಲು ಹೊರಟಿರುವುದೂ ಜಾತಿಪೀಡಿತರ ಅವಿವೇಕತನ.
ರಾಜಕಾರಣಿಗಳಿಗೆ ತಮ್ಮ ‘ಗ್ರಹಚಾರ’ ಬಿಡಿಸಿಕೊಳ್ಳಲು ವೈದಿಕ ಬ್ರಾಹ್ಮಣರು ಬೇಕು, ತಮ್ಮ ದೊಡ್ಡರೋಗ ಮೂಲವ್ಯಾಧಿ ರೋಗಗಳಿಗೆ ಒಳ್ಳೆಯ ವೈದ್ಯರು ಬೇಕು, ತಮ್ಮ ವಂಶದ ಕುಡಿಗಳಿಗೆ ಒಳ್ಳೆಯ ಶಿಕ್ಷಕರು ಬೇಕು, ತಮ್ಮ ಯೋಗ್ಯತೆಗಳನ್ನು ಕ್ಷೇತ್ರಗಳಲ್ಲಿ ಪತ್ತೆಹಚ್ಚಲು ಬುದ್ದಿವಂತ ಅಧಿಕಾರಿಗಳು, ಆಪ್ತ ಸಹಾಯಕರು, ಗನ್‌ಮ್ಯಾನ್ ಗಳು, ಚಾಲಕರು ಬೇಕು. ತಮ್ಮ ರಾಜಕೀಯ ಚುನಾವಣಾ ತಂತ್ರವನ್ನು ರೂಪಿಸಲು ಚಾಣಾಕ್ಷ ಪಂಡಿತರು ಬೇಕು, ತಮ್ಮ ಉದ್ದಿಮೆಗಳು ವ್ಯವಹಾರಗಳು ಆಸ್ತಿಗಳಿಸಿಕೊಳ್ಳಲು ಒಳ್ಳೆಯ ತಂತ್ರಗಾರರು ಬೇಕು.
ಇದಕ್ಕೆಲ್ಲ ಜಾತಿ ಮುಖ್ಯವಲ್ಲ. ಆದರೆ ಅಧಿಕಾರಕ್ಕೆ, ಮುಖ್ಯಮಂತ್ರಿ ಪದವಿಗೆ ಮಾತ್ರ ಸ್ವಜಾತಿ ಮತ್ತು ಮಠಗಳ ಮಠಾಧೀಶರು
ಬೇಕು. ಹಾಗೆಯೇ ನಮ್ಮ ಜನಗಳಿಗೂ ಸಮಾಜದಲ್ಲಿ ಉದ್ಯೋಗದಿಂದ ಹಿಡಿದು ಫುಟ್ಪಾತಿನ ಪಾನಿಪುರಿ ವಡೆ ಬೋಂಡ ಬಜ್ಜಿವರೆಗೂ ಯಾವುದಕ್ಕೂ ಜಾತಿಯ ಅವಶ್ಯಕತೆ ಇಲ್ಲದಿದ್ದರೂ ಮುಖ್ಯಮಂತ್ರಿ ಮಾತ್ರ ತಮ್ಮ ಜಾತಿಯವನೇ ಆಗಬೇಕು. ಇಂಥ ದರಿದ್ರ ಮನಸ್ಥಿತಿಯಿಂದ ಮತದಾರರು ಹೊರಬರಬೇಕು.
ರಾಜ್ಯಕ್ಕೆ ಸಂವಿಧಾನಕ್ಕೆ ಪ್ರಜಾಪ್ರಭುತಕ್ಕೆ ಯೋಗ್ಯ ಮುಖ್ಯಮಂತ್ರಿ ಬೇಕೇ ಹೊರತು ಒಂದು ಜಾತಿಗೆ ಒಂದು ಮಠಕ್ಕೆ
ಮುಖ್ಯಮಂತ್ರಿಯಲ್ಲ. ಸ್ವಾಮಿ ವಿವೇಕಾನಂದರು ಒಂದೆಡೆ ಹೇಳುತ್ತಾರೆ ‘ಕಾವಿತೊಟ್ಟ ಸಂತನೊಬ್ಬ ತನ್ನ ಜಾತಿಯನ್ನು ಹೇಳಿಕೊಂಡರೆ ಆತ ಹಿಂದೂ ಸಂತನಲ್ಲ’ ಎಂದು. ದುರಂತವೆಂದರೆ ಇಂದು ಒಬ್ಬೊಬ್ಬ ಕಾವಿಧಾರಿಯೂ ಒಂದೊಂದು ಜಾತಿಯ ಲ್ಯಾಂಡ್‌ಮಾರ್ಕು, ಪಿನ್‌ಕೋಡ್‌ಗಳಾಗಿದ್ದಾರೆ.
ಹೀಗಾಗಿ ಇಂದು ಜಾತಿ ಕಾವಿಯಿಂದ ಧರ್ಮ ಹಾಳು-ಖಾದಿಯಿಂದ ದೇಶ ಹಾಳು !