Sunday, 15th December 2024

ಬಿಜೆಪಿ ಗೆಲುವಿಗೆ ಕರ್ನಾಟಕದ ಗಿಫ್ಟು

ಮೂರ್ತಿಪೂಜೆ

ಭಾನುವಾರ ಸಂಜೆ ಬೆಂಗಳೂರಿನ ಏರ್ ಪೋರ್ಟ್‌ಗೆ ಹೋದ ಬಿಜೆಪಿಯ ಒಬ್ಬ ನಾಯಕರಿಗೆ ಕಾಂಗ್ರೆಸ್ಸಿನ ಸಚಿವರೊಬ್ಬರು ಎದುರಾಗಿದ್ದಾರೆ. ಬೆಳಗಾವಿಯ ವಿಧಾನ ಮಂಡಲ ಅಧಿವೇಶನದಲ್ಲಿ ಭಾಗವಹಿಸಲು ಹೊರಟಿದ್ದ ಈ ಇಬ್ಬರಿಗೆ ವಿಮಾನ ಹತ್ತಲು ಅರ್ಧ ಗಂಟೆ ಸಮಯವಿತ್ತಂತೆ. ಸರಿ, ಇಬ್ಬರು ಕುಶಲೋಪರಿಗೆ ಇಳಿದಿದ್ದಾರೆ.

ಅಷ್ಟೊತ್ತಿಗಾಗಲೇ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಘಡ ಮತ್ತು ತೆಲಂಗಾಣ ರಾಜ್ಯಗಳ ಚುನಾವಣೆಯ ಫಲಿತಾಂಶ ಬಂದಿತ್ತಲ್ಲ? ಹೀಗಾಗಿ ಮಾತು ಆ ದಿಕ್ಕಿಗೆ
ತಿರುಗಿದಾಗ ಸಚಿವರು: ಅಂತೂ ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಂಡ್ರೂ ದಿಲ್ಲಿಗೆ ಹತ್ತಿರವಾದಿರಿ ಎಂದರು. ಅವರಾಡಿದ ಮಾತು ಕೇಳಿದ ಬಿಜೆಪಿಯ ನಾಯಕರು: ಅಯ್ಯೋ, ಏನು ಮಾಡೋದು,ಆ ದೊಡ್ಡ ಮನುಷ್ಯರು ಹೇಳಿದ ಮಾತನ್ನು ಮೋದಿ-ಅಮಿತ್ ಶಾ ನಂಬಿದರು. ಪರಿಣಾಮವಾಗಿ ನಾವು ಸೋತಿದ್ದಲ್ಲದೆ, ಜೆಡಿಎಸ್ ಪಕ್ಷವನ್ನೂ ಮುಳುಗಿಸಿ ಅeತವಾಸ ಮಾಡ್ತಿದೀವಿ ಎಂದಿದ್ದಾರೆ.

ಅಷ್ಟೇ ಅಲ್ಲ, ಕಳೆದ ಒಂದೂವರೆ ವರ್ಷಗಳಿಂದ ರಾಜ್ಯ ಬಿಜೆಪಿಯದ ಅವಾಂತರಗಳ ಬಗ್ಗೆ ವಿವರವಾಗಿ ಮಾತನಾಡಲು ಶುರು ಮಾಡಿದವರು; ಅಲ್ರೀ, ಕರ್ನಾಟಕ ದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರು ನೇರ ಕಾರಣ ಅಂತ ನಾವು ಅದೆಷ್ಟು ಬಾರಿ ಕನ್ ವಿನ್ಸ್ ಮಾಡಲು ಪ್ರಯತ್ನ ಮಾಡಿದ್ವಿ. ಆದರೆ ವರಿಷ್ಠರು ಅದನ್ನು ನಂಬಲಿಲ್ಲ. ಬದಲಿಗೆ ಯಡಿಯೂರಪ್ಪ ಅವರ ಬಗ್ಗೆ ಹೋದ ಕಂಪ್ಲೇಟುಗಳನ್ನೇ ಮುಖ್ಯವಾಗಿಟ್ಟುಕೊಂಡು ಅವರನ್ನು ಸಿಎಂ ಹುದ್ದೆಯಿಂದ ಇಳಿಸಿಬಿಟ್ರು. ಅದಾದ ನಂತರವೂ ಅವರನ್ನು ಮೂಲೆಗುಂಪು ಮಾಡುವ ವ್ಯವಸ್ಥಿತ ಪ್ರಯತ್ನ ನಡೆಯಿತು.

ಇದಾದ ನಂತರ ಚುನಾವಣೆ ಹತ್ತಿರ ಬಂದಾಗ ವಯಸ್ಸಿನ ಕಾರಣ ಕೊಟ್ಟು ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಅವರಂಥವರಿಗೆ ಟಿಕೆಟ್ ತಪ್ಪಿಸಿದರು.ಆ ಲಕ್ಷ್ಮಣ ಸವದಿ ಏನು ಮಾಡಿದ್ರೋ ಗೊತ್ತಿಲ್ಲ.ಅವರಿಗೂ ಟಿಕೆಟ್ ತಪ್ಪಿಸಿದ್ರು. ಹೀಗೆ ಇವರಿಗೆಲ್ಲ ಟಿಕೆಟ್ ತಪ್ಪಿಸುವುದು ದುಬಾರಿಯಾಗುತ್ತೆ ಅಂತ ಬಡ್ಕೊಂಡ್ವಿ. ಆದರೆ ಹೈಕಮಾಂಡ್ ವರಿಷ್ಠರು ಕೇಳುವ ಸ್ಥಿತಿಯ ಇರಲಿಲ್ಲ. ಈ ಮಧ್ಯೆ ಹಿಜಾಬು, ಹಲಾಲು, ಅಜಾನು ಅಂತೆಲ್ಲ ಕಟ್ಟರ್ ಹಿಂದೂವಾದಿಗಳ ಡ್ರೆಸ್ಸು ಹಾಕಿಕೊಳ್ಳುವ ಕೆಲಸವಾಯಿತು.

ಎಲ್ಲರಿಗೂ ಗೊತ್ತೇ ಇದೆ. ಯಡಿಯೂರಪ್ಪನವರು ಪಕ್ಷ ಕಟ್ಟುವಾಗ ಈ ಥರದ ಡ್ರೆಸ್ಸುಗಳನ್ನು ಯಾವತ್ತೂ ಹಾಕಿಕೊಂಡವರಲ್ಲ ಅಂತ.ಇಷ್ಟಾದರೂ ಅದೇನೋ ಸಾಧಿಸುತ್ತೇವೆ ಅಂತ ಹೋದ್ರು.ಇದರಿಂದ ಆಗಿದ್ದೇನೆಂದರೆ ನಾವು ಮುಳುಗಿದ್ವಿ. ಆ ಕಡೆ ಕಟ್ಟರ್ ಹಿಂದೂವಾದಿಗಳ ಡ್ರೆಸ್ಸು ಹಾಕಿಕೊಳ್ಳಲು ಹೋಗಿ ಮುಸ್ಲಿಮರೆಲ್ಲ ಕನ್ ಸಾಲಿಡೇಟ್ ಆಗಿ ಕಾಂಗ್ರೆಸ್‌ಗೆ ವೋಟು ಹಾಕುವಂತೆ ನೋಡಿಕೊಂಡ್ವಿ. ಒಂದು ವೇಳೆ ನಾವು ಈ ಕೆಲಸ ಮಾಡದೆ ಹೋಗಿದ್ದರೆ ಜೆಡಿಎಸ್ ೩೦-೩೫ ಸೀಟುಗಳನ್ನಾದ್ರೂ ಗೆಲ್ಲುತ್ತಿತ್ತು. ಒಂದು ಕಡೆ ಯಡಿಯೂರಪ್ಪ,ಜಗದೀಶ್ ಶೆಟ್ಟರ್,ಲಕ್ಷ್ಮಣ ಸವದಿ ಅಂಥವರನ್ನು ಮೂಲೆಗುಂಪು ಮಾಡಲು ಹೋಗಿ ನಾವು ೩೦ ಸೀಟು ಕಳೆದುಕೊಂಡ್ವಿ. ಮತ್ತೊಂದು ಕಡೆ ಕಟ್ಟರ್ ಹಿಂದೂವಾದಿಗಳ ಡ್ರೆಸ್ಸು ಹಾಕಿಕೊಳ್ಳಲು ಹೋಗಿ ಕಾಂಗ್ರೆಸ್ಸಿಗೆ ಅನುಕೂಲ ಮಾಡಿಕೊಟ್ಟು ಜೆಡಿಎಸ್‌ನ ಹದಿನೈದಿಪ್ಪತ್ತು ಸೀಟುಗಳನ್ನು ಹಾಳು ಮಾಡಿದ್ವಿ.

ಒಂದು ವೇಳೆ ಈ ಕೆಲಸ ಮಾಡದೇ ಇದ್ರೆ ಬರೆದಿಟ್ಕೋ ಬ್ರದರ್,ನಾವು ಮಿನಿಮಮ್ ೯೦-೯೫ ಸೀಟು ಗೆಲ್ಲುತ್ತಿದ್ವಿ. ಜೆಡಿಎಸ್ ಜತೆ ಸೇರಿ ಸರಕಾರ ಮಾಡ್ತಿದ್ವಿ. ಇದು ತಡವಾಗಿಯಾದರೂ ಮೋದಿ-ಶಾ ಅವರಿಗೆ ಅರ್ಥವಾಗಿದೆ. ಹೀಗಾಗಿ ಈ ಸಲ ಐದು ರಾಜ್ಯಗಳ ಚುನಾವಣೆಯಲ್ಲಿ ಇಂತಹ ಯಾವ ರಿಸ್ಕುಗಳನ್ನೂ ಮೋದಿ-ಅಮಿತ್ ಶಾ ಅವರು ತೆಗೆದುಕೊಂಡಿಲ್ಲ.ಹೀಗಾಗಿ ಎಂಭತ್ತು ವರ್ಷ ಮೀರಿದ ಡಜನ್‌ಗೂ ಹೆಚ್ಚು ಮಂದಿಗೆ ಅಲ್ಲಿ ಎಲೆಕ್ಷನ್ ಟಿಕೆಟ್ ನೀಡಲಾಯಿತು. ರಮಣ್ ಸಿಂಗ್, ಶಿವರಾಜ್ ಸಿಂಗ್ ಚೌಹಾಣ, ವಸುಂಧರಾ ರಾಜೇ ಸಿಂಧಿಯಾ ಅವರಂಥವರಿಗೆ ಟಿಕೆಟ್ ನೀಡಬಾರದು ಎಂಬ ಯೋಚನೆಯಿದ್ದರೂ ಕೊನೆಗೆ ಕೈ ಸಡಿಲ ಮಾಡಿ ಕೊಟ್ಟರು.ಇವತ್ತು ರಿಸಲ್ಟು ಕಣ್ಣ ಮುಂದೆ ಇದೆ.

ಇವತ್ತು ಮಧ್ಯಪ್ರದೇಶ,ರಾಜಸ್ಥಾನ ಮತ್ತು ಛತ್ತೀಸ್‌ಘಡದಲ್ಲಿ ಬಿಜೆಪಿ ಇಷ್ಟೊಂದು ದೊಡ್ಡ ಮಟ್ಟದ ಗೆಲುವು ಗಳಿಸಲು ಸ್ಥಳೀಯವಾಗಿ ಹಲ ಕಾರಣಗಳು
ಇರಬಹುದು. ಆದರೆ ಬಹುಮುಖ್ಯವಾಗಿ ಕರ್ನಾಟಕದಲ್ಲಿ ಮಾಡಿದ ತಪ್ಪುಗಳನ್ನು ಅಲ್ಲಿ ನಾವು ಮಾಡಲಿಲ್ಲ. ಇದು ತಪ್ಪು ಅಂತ ಈ ಹಿಂದೆಯೇ ಅರ್ಥ ಮಾಡಿ ಕೊಳ್ಳಲು ಅವರಿಗೆ ಆಗಿದ್ದರೆ ಇವತ್ತು ಕರ್ನಾಟಕದಲ್ಲಿ ನೀವು ಅಧಿಕಾರಕ್ಕೆ ಬರುತ್ತಿರಲಿಲ್ಲ. ನಾವು ಕೈಲಿದ್ದ ಅಧಿಕಾರವನ್ನು ಕಳೆದುಕೊಂಡು ಇಂತಹ ಸ್ಥಿತಿಗೆ ಬರುತ್ತಿರಲಿಲ್ಲ ಅಂತ ಈ ನಾಯಕರು ಪೇಚಾಡಿದಾಗ: ಇರ್ಲಿ ತಗೊಳ್ಳಿ ಬ್ರದರ್, ನೀವು ತಪ್ಪು ಮಾಡಿದ್ದಕ್ಕೆ ನಮಗೆ ಅಧಿಕಾರ ಸಿಕ್ಕಿತು.

ಇಲ್ಲದಿದ್ರೆ ನಮ್ಮ ವವವಾಸ ಐದು ವರ್ಷದಿಂದ ಹತ್ತು ವರ್ಷಕ್ಕೆ ಎಕ್ಸ್‌ಟೆಂಡ್ ಆಗುತ್ತಿತ್ತು ಅಂತ ಕೈ ಹಿಸುಕಿ ನಕ್ಕರಂತೆ.

ತೆಲಂಗಾಣದ ರೋಚಕ ಕತೆ

ಇನ್ನು ಉತ್ತರ ಭಾರತದ ರಾಜ್ಯಗಳಲ್ಲಿ ಸೋಲು ಅನುಭವಿಸಿದ ಕಾಂಗ್ರೆಸ್ ತೆಲಂಗಾಣದಲ್ಲಿ ಗೆದ್ದ ಕತೆ ಮಾತ್ರ ರೋಚಕವಾಗಿದೆ. ಅಂದ ಹಾಗೆ ಅಲ್ಲಿ ಮುಖ್ಯಮಂತ್ರಿ ಯಾಗಿದ್ದ ಕೆ.ಚಂದ್ರಶೇಖರರಾವ್ ಒಂದು ಕಾಲದಲ್ಲಿ ತೆಲುಗುದೇಶಂ ಪಾರ್ಟಿಯಲ್ಲಿದ್ದವರು. ಅಲ್ಲಿದ್ದಾಗ ತಮಗೆ ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಸಿಟ್ಟಾದವರು. ಟಿಆರ್‌ಎಸ್ ಕಟ್ಟಿದರು. ಮುಂದೆ ಪಾರ್ಲಿಮೆಂಟಿಗೆ ಹೋಗಿ ಯುಪಿಎ ಸರಕಾರದಲ್ಲಿ ಕಾರ್ಮಿಕ ಸಚಿವರಾದರು. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಮೇಲೆ ಪ್ರಭಾವ ಬೀರಿದ ಕೆ.ಸಿ.ಚಂದ್ರಶೇಖರರಾವ್, ಆಂಧ್ರ ಪ್ರದೇಶವನ್ನು ಇಬ್ಭಾಗ ಮಾಡಿ ಗತೆಲಂಗಾಣವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡುವಂತೆ ಒತ್ತಾಯಿಸತೊಡಗಿದರು.

ಇವತ್ತು ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಶಕ್ತಿ ಕಡಿಮೆಯಾಗುತ್ತಿದೆ. ಹೀಗಾಗಿ ಅದನ್ನು ಇಬ್ಭಾಗಿಸಿ ತೆಲಂಗಾಣವನ್ನು ಪ್ರತ್ಯೇಕ ರಾಜ್ಯವನ್ನಾಗಿ ನೀಡಿದರೆ ಟಿಆರ್‌ಎಸ್ ಪಕ್ಷವನ್ನು ಕಾಂಗೆಸ್‌ನಲ್ಲಿ ವಿಲೀನ ಮಾಡುತ್ತೇನೆ.ಅಷ್ಟು ಮಾಡಿದರೆ ತೆಲಂಗಾಣದಲ್ಲಿ ಕಾಂಗ್ರೆಸ್ ನಿರಂತರವಾಗಿ ಅಧಿಕಾರ ಹಿಡಿಯುತ್ತದೆ ಅಂತ ಅವರು ಹೇಳತೊಡಗಿದಾಗ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ನಂಬಿದ್ದಾರೆ. ಅಷ್ಟೇ ಅಲ್ಲ, ಆಂಧ್ರಪ್ರದೇಶವನ್ನು ವಿಭಜಿಸಿ ತೆಲಂಗಾಣ ರಾಜ್ಯ ಅಸ್ತಿತ್ವಕ್ಕೆ ಬರುವಂತೆ ಮಾಡಿದ್ದಾರೆ. ಆದರೆ ಯಾವಾಗ ತೆಲಂಗಾಣ ಅಸ್ತಿತ್ವಕ್ಕೆ ಬಂತೋ? ಆನಂತರ ಚಂದ್ರ ಶೇಖರರಾವ್ ಅವರ ವರಸೆಯೇ ಬದಲಾಗಿದೆ. ತಮ್ಮ ಪಕ್ಷವನ್ನು ಅವರು ಕಾಂಗ್ರೆಸ್‌ನಲ್ಲಿ ವಿಲೀನ ಮಾಡುವುದಿರಲಿ, ಬದಲಿಗೆ ಕಾಂಗ್ರೆಸ್ ಪಕ್ಷವನ್ನೇ ಅಲ್ಲಿ ನುಂಗಲು ಹೊರಟಿದ್ದಾರೆ.

ಕೆ.ಸಿ.ಚಂದ್ರಶೇಖರರಾವ್ ಅವರ ಕಾಂಗ್ರೆಸ್ ವಿರೋಧಿ ಮನಃಸ್ಥಿತಿ ಯಾವ ಮಟ್ಟಕ್ಕೆ ಹೋಗಿತ್ತೆಂದರೆ ಕೇವಲ ಒಂದು ವರ್ಷದ ಹಿಂದೆ ತೆಲಂಗಾಣ ರಾಜ್ಯದ ರಾಜಕೀಯದ ಬಗ್ಗೆ ಮಾತನಾಡುವವರು, ಕೆ.ಸಿ.ಆರ್ ಈಗಾಗಲೇ ಅಲ್ಲಿ ಕಾಂಗ್ರೆಸ್‌ನ್ನು ಸೈಡ್ ಲೈನು ಮಾಡಿಬಿಟ್ಟಿದ್ದಾರೆ ಎನ್ನುತ್ತಿದ್ದರು. ಆದರೆ ಇಂತಹ ಪರಿಸ್ಥಿತಿ ಯನ್ನು ಕಾಂಗ್ರೆಸ್ ಎಷ್ಟು ವ್ಯವಸ್ಥಿತವಾಗಿ ಎದುರಿಸಿತು ಎಂದರೆ, ಕರ್ನಾಟಕದಲ್ಲಿ ಅನುಸರಿಸಿದ ತಂತ್ರಗಳನ್ನೇ ಅಳವಡಿಸಿಕೊಂಡು ಕೆಸಿಆರ್‌ಗೆ ಖೆಡ್ಡಾ ತೋಡತೊಡಗಿತು.

ಮೊದಲಿಗೆ, ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡಿದವರನ್ನು ಸೆಳೆದುಕೊಂಡು: ಆಂಧ್ರ ಪ್ರದೇಶ ದಿಂದ ಪ್ರತ್ಯೇಕವಾಗಲು ಕಾಂಗ್ರೆಸ್ ನೀಡಿದ ಕೊಡುಗೆ ಏನು?ಅನ್ನುವುದನ್ನು ರಾಜ್ಯದ ಮೂಲೆ ಮೂಲೆಗೂ ತಿಳಿಸುವ ಕೆಲಸ ಮಾಡಿತು. ಇದೇ ರೀತಿ ಕೆಸಿಆರ್ ಎಲ್ಲಿ ಯಾತ್ರೆ ಮಾಡುತ್ತಾರೋ?ಅಲ್ಲಿಗೆ ಸ್ಪೆಷಲ್ ಟೀಮುಗಳನ್ನು ಕಳಿಸಿ, ಕೆಸಿಆರ್ ಯಾತ್ರೆಯಿಂದ ಯಾರ ಮೇಲೆ ಪ್ರಭಾವವಾಗಿದೆ ಎಂಬುದನ್ನು ಗಮನಿಸಿ ಅಂಥ ಮತದಾರರನ್ನು ಸೆಳೆಯುವ ಟೆಕ್ನಿಕ್ಕನ್ನು ಜಾರಿಗೊಳಿಸಿತು. ಅಂದ ಹಾಗೆ ಕರ್ನಾಟಕದಂತೆ ತೆಲಂಗಾಣದಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಗಳು ಅಷ್ಟೊಂದು ಎಫೆಕ್ಟಿವ್ ಆಗಿರಲಿಲ್ಲ ಎಂಬುದೇನೋ ನಿಜ.

ಯಾಕೆಂದರೆ ಕೆಸಿಆರ್ ಕೊಟ್ಟ ಮತ್ತು ಕೊಡುವುದಾಗಿ ಹೇಳಿದ ಕಾರ್ಯಕ್ರಮಗಳು ನಿಸ್ಸಂಶಯವಾಗಿ ಕಾಂಗ್ರೆಸ್ ಗಿಂತ ಪವರ್ -ಗಿದ್ದವು. ಆದರೆ ಕೆ.ಚಂದ್ರಶೇಖರ ರಾವ್ ಅವರ ಬಿಎಸ್‌ಆರ್ ಪಕ್ಷ ಎದುರಿಸುತ್ತಿದ್ದ ಆಡಳಿತ ವಿರೋಽ ಅಲೆಯನ್ನು ಎನ್ ಕ್ಯಾಶ್ ಮಾಡಿಕೊಂಡ ಕಾಂಗ್ರೆಸ್, ಇಂತಹ ಮತಗಳು ಚೆದುರಿ ಹೋಗದಂತೆ ನೋಡಿಕೊಂಡಿತು.ಅರ್ಥಾತ್, ಶರ್ಮಿಳಾ ರೆಡ್ಡಿ ಅವರಿಂದ ಹಿಡಿದು ಹಲವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನ ಹೋರಾಟ ನಡೆಸಿತು. ಪರಿಣಾಮ? ಹತ್ತು ವರ್ಷಗಳ ಕಾಲ ತೆಲಂಗಾಣ ರಾಜ್ಯಕ್ಕೆ ಸಾರ್ವಭೌಮರಾಗಿದ್ದ ಕೆ.ಸಿ.ಚಂದ್ರಶೇಖರರಾವ್ ಕೆಳಗೆ ಬಿದ್ದರು.ಆ ಮೂಲಕ ಕಾಂಗ್ರೆಸ್ ಹಳೆಯ ಸೇಡು ತೀರಿಸಿಕೊಂಡು ನಿಟ್ಟುಸಿರು ಬಿಟ್ಟಿತು.

ಪ್ರತಿಭಟನೆ ಕ್ಯಾನ್ಸಲ್ ಆಗಿದ್ದೇಕೆ?
ಈ ಮಧ್ಯೆ ಕರ್ನಾಟಕದಲ್ಲಿ ಮೌನ ತಳೆದಿದ್ದ ಯಡಿಯೂರಪ್ಪ ವಿರೋಽ ಗ್ಯಾಂಗು ಮೊನ್ನೆ ಪಕ್ಷದ ವರಿಷ್ಠರಿಗೆ ಒಂದು ಕಂಪ್ಲೇಂಟು ರವಾನಿಸಿದೆ. ಅಂದ ಹಾಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿರುದ್ಧದ ಸಿಬಿಐ ತನಿಖೆಗೆ ಹಿಂದಿನ ಸರಕಾರ ನೀಡಿದ್ದ ಅನುಮತಿಯನ್ನು ಹಾಲಿ ಸರಕಾರ ಹಿಂದೆ ಪಡೆದಿದೆಯಲ್ಲ? ಅದರ ಈ ತೀರ್ಮಾನದ ವಿರುದ್ಧ ನ. ೨೫ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ರಾಜ್ಯ ಬಿಜೆಪಿ ನಿರ್ಧರಿಸಿತ್ತು. ಹೀಗಾಗಿಯೇ ಬೆಂಗಳೂರು ನಗರ, ಗ್ರಾಮಾಂತರ
ಸೇರಿದಂತೆ ನಾಲ್ಕು ಜಿಗಳ ವ್ಯಾಪ್ತಿಯಲ್ಲಿರುವ ವಿಧಾನಸಭಾ ಕ್ಷೇತ್ರಗಳಿಂದ ತಲಾ ಐನೂರು ಜನರನ್ನು ಕರೆದುಕೊಂಡು ಬರುವಂತೆ ಪಕ್ಷದ ಹಾಲಿ,ಮಾಜಿ ಶಾಸಕರಿಗೆ ಸೂಚನೆ ನೀಡಲಾಗಿತ್ತು.

ಯಾವಾಗ ಪಕ್ಷದ ಅಧ್ಯಕ್ಷರಾದ ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ಆಸಕ್ತಿ ತೋರಿಸಿದರೋ? ಆಗ ಉಳಿದವರೂ ಉತ್ಸಾಹದಿಂದ ಈ
ಪ್ರತಿಭಟನೆಗೆ ಅಣಿಯಾಗತೊಡಗಿದರು. ಆದರೆ ಪ್ರತಿಭಟನೆಯ ದಿನ ಹತ್ತಿರ ಬಂತಲ್ಲ?ಆಗ ಇದ್ದಕ್ಕಿದ್ದಂತೆ ಅದನ್ನು ಮುಂದೂಡಲಾಗಿದೆ ಎಂಬ ಮೆಸೇಜು ಬಂದಿದೆ. ಕಾರಣ ಕೇಳಿದರೆ ಕ್ಯಾಪ್ಟನ್ ಪ್ರಾಂಜಲ್ ದೇಶಕ್ಕಾಗಿ ತೀರಿಕೊಂಡಿದ್ದಾರೆ. ಹೀಗಾಗಿ ಕಾರ್ಯಕ್ರಮ ಮುಂದೂಡಲಾಗಿದೆ ಎಂಬ ಉತ್ತರ ಸಿಕ್ಕಿದೆ. ಸರಿ,ಕ್ಯಾಪ್ಟನ್ ಪ್ರಾಂಜಲ್ ಅವರ ಅಂತ್ಯಸಂಸ್ಕಾರ ಮುಗಿದ ನಂತರ ಡಿಕೆಶಿ ವಿರುದ್ಧದ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಳ್ಳೋಣವಾ ಎಂದು ಕೇಳಲು ಹೋದರೆ,ಸದ್ಯಕ್ಕೆ ಬೇಡಾರೀ, ಮುಂದೆ ಹೇಳುತ್ತೇವೆ ಎಂಬ ಮಾತು ಕಚ್ಚಿದೆ.

ಇದ್ದಕ್ಕಿದ್ದಂತೆ ಡಿಕೆಶಿ ವಿರುದ್ಧದ ಪ್ರತಿಭಟನೆಯನ್ನು ಯಾವ ಕಾರಣಕ್ಕಾಗಿ ಮುಂದೂಡಲಾಯಿತು?ಅಂತ ನೋಡಲು ಹೋದರೆ, ಕಾಂಗ್ರೆಸ್ ನ ನಾಯಕರೊಬ್ಬರು ಬಿಜೆಪಿ ನಾಯಕರಿಗೆ ಫೋನು ಮಾಡಿ: ನೀವೇನಾದರೂ ಪ್ರತಿಭಟನೆ ಅಂತ ಮಾಡಿದರೆ ನಿಮ್ಮ ಸರಕಾರದ ಅವಧಿಯ ಹಗರಣಗಳನ್ನು ಅಧಿವೇಶನದಲ್ಲಿ ಬಿಚ್ಚಿಡು ತ್ತೇವೆ ಅಂತ ಧಮಕಿ ಹಾಕಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಯಾವಾಗ ಇದು ಗೊತ್ತಾಯಿತೋ? ಇದಾದ ನಂತರ ಯಡಿಯೂರಪ್ಪ ವಿರೋಧಿ ಟೀಮು ದಿಲ್ಲಿಗೆ ಒಂದು ಮೆಸೇಜು ಕಳಿಸಿ: ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಡದೆ ಕರ್ನಾಟಕದಲ್ಲಿ ಪಕ್ಷ ಕಟ್ಟುವುದು ಹೇಗೆ?ಎಂಬ ಪ್ರಶ್ನೆಯನ್ನು ಮುಂದಿಟ್ಟಿದೆಯಂತೆ.