Sunday, 15th December 2024

ಸರಕಾರಕ್ಕೆ ಗ್ಯಾರಂಟಿ, ಗುತ್ತಿಗೆದಾರರೇ ಸಮಸ್ಯೆ

ವರ್ತಮಾನ

maapala@gmail.com

ರಾಜ್ಯದಲ್ಲಿ ಗುತ್ತಿಗೆದಾರರು ಮತ್ತು ಸರಕಾರದ ನಡುವಿನ ಸಂಘರ್ಷ ಬಗೆಹರಿಯುವ ಲಕ್ಷಣ ಕಾಣಿಸುತ್ತಿಲ್ಲ. ಅದರಲ್ಲೂ ಮುಖ್ಯವಾಗಿ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಬಿಬಿಎಂಪಿ ವ್ಯಾಪ್ತಿಯ ಗುತ್ತಿಗೆದಾರರು ಮುಗಿಬಿದ್ದಿರುವ ಪರಿ ಗಮನಿಸಿದಾಗ, ಈ ಹಿಂದೆ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಬಳಸಿದ್ದ ಗುತ್ತಿಗೆದಾರರ ಅಸ್ತ್ರವೇ ಇದೀಗ ಆ ಪಕ್ಷದ ಸರಕಾರಕ್ಕೆ ತಿರುಗುಬಾಣವಾಗುತ್ತಿದೆ ಎನಿಸುವುದರಲ್ಲಿ ಸಂಶಯವಿಲ್ಲ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಕಾರಣವಾಗಿರುವುದು ಚುನಾವಣೆ ವೇಳೆ ಅದು ಘೋಷಿಸಿದ ಪಂಚ ಗ್ಯಾರಂಟಿಗಳು ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ, ಅದಕ್ಕೆ ಮುನ್ನ ಬಿಜೆಪಿ ಸರಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪಕ್ಕೆ ಪ್ರಬಲ ಅಸ್ತ್ರ ಒದಗಿಸಿದ್ದು ಗುತ್ತಿಗೆದಾರರು. ಸರಕಾರದ ವಿರುದ್ಧ ಅವರು ೪೦ ಪಸೆಂಟ್ ಕಮಿಷನ್ ಆರೋಪ ಮಾಡದೇ ಇದ್ದಿದ್ದರೆ, ಅದನ್ನು ಆಧಾರ ವಾಗಿಟ್ಟುಕೊಂಡು ಕಾಂಗ್ರೆಸ್ ತೀವ್ರ ಹೋರಾಟಕ್ಕಿಳಿದು ಪೇ ಸಿಎಂ ಮತ್ತಿತರೆ ಅಭಿಯಾನಗಳನ್ನು ನಡೆಸದೇ ಇದ್ದಿದ್ದರೆ, ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ಗೆ ೧೩೫ ಸ್ಥಾನಗಳನ್ನು ತಂದುಕೊಡಲು ಸಾಧ್ಯವೇ ಇರುತ್ತಿರ ಲಿಲ್ಲ.

ಆದರೆ, ಈಗ ಅದೇ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಸರಕಾರ ಮತ್ತು ಗುತ್ತಿಗೆದಾರರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿವೆ. ಹಾಗೆಂದು ಇದರಿಂದ ಸರಕಾರ ಅಪಾಯಕ್ಕೆ ಸಿಲುಕುತ್ತದೆ,ಕಾಂಗ್ರೆಸ್ ಅಧಿಕಾರ ಕಳೆದು ಕೊಳ್ಳುತ್ತದೆ ಎಂಬ ಆತಂಕವೇನೂ ಇಲ್ಲ. ಏಕೆಂದರೆ, ಪ್ರಜಾಪ್ರಭುತ್ವದಲ್ಲಿ ಒಮ್ಮೆ ಜನರಿಂದ ಆಯ್ಕೆಯಾದ ಸರಕಾರವನ್ನು ಐದು ವರ್ಷ ಕೆಳಗಿಳಿಸಲು ಅವಕಾಶವಿಲ್ಲ. ಮತ್ತೊಂದೆಡೆ ಈ ಸರಕಾರ ಉರುಳಬೇಕಾದರೆ ಕನಿಷ್ಠ ೩೫ ಜನ ಶಾಸಕರು ರಾಜೀನಾಮೆ ನೀಡಬೇಕು. ಆದರೆ, ಅಂಥ ಅದ್ಭುತ ನಡೆಯುವ ಪರಿಸ್ಥಿತಿ ಕಾಣಿಸುತಿಲ್ಲ ಮತ್ತು ಅದು ಸಾಧ್ಯವೂ ಅಲ್ಲ. ಏಕೆಂದರೆ ಶಾಸಕರು ರಾಜೀನಾಮೆ ನೀಡಿದ ಬಳಿಕ ಚುನಾವಣೆ ನಡೆದು ಮತ್ತೆ ಅಲ್ಲಿ ಕಾಂಗ್ರೆಸ್ಸನ್ನು ಸೋಲಿಸುವ ಧೈರ್ಯ ಯಾರಿಗೂ ಇಲ್ಲ. ಕಾಂಗ್ರೆಸ್ ಬೆನ್ನಿಗೆ ಗ್ಯಾರಂಟಿ ಯೋಜನೆಗಳ ಬಲ ಇರುವುದು ಇದಕ್ಕೆ ಕಾರಣ.  ಆದರೂ ಕೆಲ ದಿನಗಳ ಮಟ್ಟಿಗೆ ಸರಕಾರ ಮುಜುಗರ ಅನುಭವಿಸುವುದು ಅನಿವಾರ್ಯವಾಗಿದೆ.

ಸರಕಾರ ಅಧಿಕಾರಕ್ಕೆ ಬಂದು ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸುವ ಘೋಷಣೆ ಮಾಡಿದಾಗಲೇ ಮುಂದಿನ ದಿನಗಳಲ್ಲಿ ಸರಕಾರದ ಆರ್ಥಿಕ ಪರಿಸ್ಥಿತಿ ಸಮಸ್ಯೆಗೆ ತುತ್ತಾಗುತ್ತದೆ ಎಂಬುದು ಗೊತ್ತಾಗಿತ್ತು. ಏಕೆಂದರೆ, ಸುಮಾರು ೩ ಲಕ್ಷ ರು. ಮೊತ್ತದ ಬಜೆಟ್‌ನಲ್ಲಿ ಕೇವಲ ಐದು ಕಾರ್ಯ ಕ್ರಮಗಳಿಗೆ ೬೦ ಸಾವಿರ ಕೋಟಿಗೂ ಹೆಚ್ಚು ಅನುದಾನ ಒದಗಿಸುವುದು ಸುಲಭದ ಮಾತೇನೂ ಅಲ್ಲ. ಆದರೆ, ಇಷ್ಟು ಬೇಗ ಅದರ ಪರಿಣಾಮ ಗೋಚರವಾಗುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯ ಗುತ್ತಿಗೆದಾರರು ಮಾತ್ರ ಬಾಕಿ ಬಿಲ್ ಪಾವತಿಗಾಗಿ ಹೋರಾಟ ಕ್ಕಿಳಿದಿರಬಹುದು. ಹಾಗೆಂದು ಬೇರೆ ಕಡೆಗಳಲ್ಲಿ ಮತ್ತು ಇಲಾಖೆಗಳಲ್ಲಿ ಬಿಲ್ ಪಾವತಿ ಸಮಸ್ಯೆಗಳೇನೂ ಇಲ್ಲ ಎಂದು ಅರ್ಥವಲ್ಲ. ಗುತ್ತಿಗೆದಾರರಿಗೆ ಸುಮಾರು ೨೫ ಸಾವಿರ ಕೋಟಿ ರುಪಾಯಿಗೂ ಹೆಚ್ಚು ಬಾಕಿ ಪಾವತಿ ಮಾಡಬೇಕಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಈ ಬಿಲ್‌ಗಳನ್ನು ಪಾವತಿಸುವುದು ಅಸಾಧ್ಯದ ಮಾತು. ಗುತ್ತಿಗೆದಾರರ ಬಿಲ್ ಪಾವತಿಸಲು ಸಾಧ್ಯ ವಾಗದ ಆರ್ಥಿಕ ಸಂಕಷ್ಟವೇನೂ ಬಂದಿಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿರುವ ಗುತ್ತಿಗೆ ಕಾಮಗಾರಿಗಳಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ಕಾಮಗಾರಿಗಳನ್ನೇ ನಡೆಸದೆ ಗುತ್ತಿಗೆ
ಹಣ ಪಾವತಿಸಲಾಗಿದೆ. ಅರ್ಧ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಪೂರ್ಣ ಪ್ರಮಾಣದ ಬಿಲ್ ಪಾವತಿ ಯಾಗಿದೆ. ಅಗತ್ಯಕ್ಕಿಂತ ಹೆಚ್ಚು ಮೊತ್ತವನ್ನು ಕಾಮ ಗಾರಿಗೆ ವೆಚ್ಚ ಮಾಡಲಾಗಿದೆ. ಈ ಕಾರಣಕ್ಕಾಗಿ ಎಲ್ಲಾ ಕಾಮಗಾರಿಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಾಗುತ್ತಿದೆ. ತನಿಖೆಯ ಬಳಿಕ ಸಮರ್ಪಕ ಕಾಮಗಾರಿ ನಡೆಸಿದ ಎಲ್ಲರಿಗೂ ಬಿಲ್ ಪಾವತಿಸಲಾಗುವುದು.

ತಪ್ಪು ಮಾಡದವರಿಗೆ ಅನ್ಯಾಯ ಮಾಡುವುದಿಲ್ಲ, ತಪ್ಪು ಮಾಡಿದ ವರಿಗೆ ಶಿಕ್ಷೆ ನೀಡದೇ ಬಿಡುವುದಿಲ್ಲ ಎಂದು ಸರಕಾರ ಎಷ್ಟೇ ಸಮರ್ಥನೆ ಮಾಡಿಕೊಳ್ಳಬಹುದು.
ಇದು ಕೇವಲ ಸಮಯ ತಳ್ಳುವ ಮಾತೇ ಹೊರತು ಸಮಸ್ಯೆಯಂತೂ ಬಗೆಹರಿಯುವುದಿಲ್ಲ. ಏಕೆಂದರೆ, ಗುತ್ತಿಗೆದಾರರ ಬಿಲ್ ಪಾವತಿ ಸಮಸ್ಯೆ ಹಿಂದಿನ
ಬಿಜೆಪಿ ಸರಕಾರದ ಅವಽಯಲ್ಲಿ ಅಥವಾ ಈಗಿನ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಆರಂಭವಾಗಿದ್ದಲ್ಲ. ಪ್ರತಿ ವರ್ಷ ಇರುವ ಸಮಸ್ಯೆಯಿದು. ಅದರಲ್ಲೂ ಆಡಳಿತ ಪಕ್ಷ ಬದಲಾದಾಗ ಈ ಸಮಸ್ಯೆ ಹೆಚ್ಚಾಗುವುದು ಸಹಜ. ಏಕೆಂದರೆ, ಗುತ್ತಿಗೆದಾರರು ಟೆಂಡರ್ ಪಡೆದು ಕೆಲಸ ಆರಂಭಿಸಬೇಕಾದರೆ ಸಾಕಷ್ಟು ಖರ್ಚು ಮಾಡಿರುತ್ತಾರೆ. ಆ ಸರಕಾರ ಅಧಿಕಾರದಲ್ಲಿರುವಾಗ ಅದರ ಬಿಲ್ ವಸೂಲಿಯಾಗದಿದ್ದರೆ ಹೊಸ ಸರಕಾರ ಬಂದ ಮೇಲೆ ಬಿಲ್ ಪಡೆಯಬೇಕಾದರೆ ಆಗಲೂ
ಸಾಕಷ್ಟು ಹಣ ವೆಚ್ಚ ಮಾಡಬೇಕಾಗುತ್ತದೆ.

ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ ಎನ್ನುವಂತಾಗಿದೆ. ಆದರೆ, ಈ ಸರಕಾರಕ್ಕೇಕೆ ಅದು ಬೃಹದಾಕಾರದ ಸಮಸ್ಯೆಯಾಗಿ ಕಾಣುತ್ತಿದೆ ಎಂದರೆ ಅನುದಾನದ ಕೊರತೆ ಮತ್ತು ಇನ್ನು ಕೆಲವೇ ತಿಂಗಳಲ್ಲಿ ಬರಲಿರುವ ಲೋಕಸಭೆ ಚುನಾವಣೆಗೆ ನಿಽಸಂಗ್ರಹ ಮಾಡಲೇ ಬೇಕಾದ ಅನಿವಾರ್ಯತೆ.
ಗುತ್ತಿಗೆದಾರರು ಹಿಂದಿನ ಬಿಜೆಪಿ ಸರಕಾರದ ವಿರುದ್ಧ ೪೦ ಪರ್ಸೆಂಟ್ ಕಮಿಷನ್ ಆರೋಪ ಮಾಡಿದಾಗ ಅದಕ್ಕೆ ದನಿ ಗೂಡಿಸಿದ್ದಲ್ಲದೆ, ಅದರ ಲಾಭವನ್ನೂ ಕಾಂಗ್ರೆಸ್ ಪಡೆದು ಕೊಂಡಿತ್ತು.

ನಾವು ಅಧಿಕಾರಕ್ಕೆ ಬಂದರೆ ಯಾವುದೇ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡದೆ ಬಾಕಿ ಬಿಲ್‌ಗಳನ್ನು ಪಾವತಿಸುವುದಾಗಿ ಹೇಳಿತ್ತು. ಹೀಗಾಗಿ ಗುತ್ತಿಗೆದಾರರು ಸಹಜ
ವಾಗಿಯೇ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ‘ನೆರವಿಗೆ’ ಧಾವಿಸಿದರು. ಇದೀಗ ಗಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದರಿಂದ ತನ್ನಿಂದ ಪಡೆದ ನೆರವಿನ ‘ಋಣ’ ತೀರಿಸುತ್ತದೆ ಎಂಬುದು ಗುತ್ತಿಗೆದಾರರ ನಂಬಿಕೆಯಾಗಿತ್ತು. ಆದರೆ, ಅಧಿಕಾರಕ್ಕೆ ಬಂದ ಮೇಲೆ ಅದು ಹುಸಿಯಾಯಿತು. ಅನುದಾನದ ಕೊರತೆ ಮತ್ತು ಲೋಕಸಭೆ ಚುನಾವಣೆಗೆ ‘ಸಿದ್ಧತೆ’ ಮಾಡಿಕೊಳ್ಳುವುದರ ಜತೆಗೆ ದೇಶದ ಇತರೆ ರಾಜ್ಯ ಗಳಲ್ಲೂ ಆ ಸಿದ್ಧತೆ ಮಾಡಬೇಕಾದ ಜವಾಬ್ದಾರಿ ಕರ್ನಾಟಕ ಕಾಂಗ್ರೆಸ್ ಮೇಲಿರುವುದರಿಂದ ಹೊಸ ಸರಕಾರ ಗುತ್ತಿಗೆದಾರರಿಗೆ ಯಾವುದೇ ‘ವಿನಾಯಿತಿ’ ತೋರುತ್ತಿಲ್ಲ.

ಮೇಲಾಗಿ ಹಿಂದೆ ತಮ್ಮ ನೆರವಿಗೆ ಧಾವಿಸಿದರು ಎಂಬ ಕಾರಣಕ್ಕಾಗಿ ಹೊಸ ಯೋಜನೆಗಳನ್ನು ಆರಂಭಿಸಿ, ಹಿಂದೆ ತಮ್ಮ ನೆರವಿಗೆ ಬಂದಿದ್ದ ಗುತ್ತಿಗೆದಾರರಿಗೆ ‘ಅನುಕೂಲ’ವನ್ನೂ ಮಾಡಿಕೊಡುತ್ತಿಲ್ಲ. ಏಕೆಂದರೆ ಹೊಸ ಯೋಜನೆಗಳನ್ನು ಆರಂಭಿಸಲು ಅನುದಾನದ ಸಮಸ್ಯೆ ಇದೆ. ಅಷ್ಟೇ ಅಲ್ಲ, ಇದು ಮುಂದಿನ
ದಿನಗಳಲ್ಲಿ ಹೆಚ್ಚಾಗಲಿದೆ. ಪ್ರಸ್ತುತ ಸರಕಾರ ಜಾರಿಗೊಳಿಸಿರುವ ಮೂರು ಗ್ಯಾರಂಟಿಗಳಲ್ಲಿ ಸರಕಾರಕ್ಕೆ ಈಗಾಗಲೇ ಆರ್ಥಿಕ ಬಿಸಿ ಮುಟ್ಟಿಸಿರುವುದು ಗೃಹಜ್ಯೋತಿ ಮತ್ತು ಶಕ್ತಿ ಯೋಜನೆಗಳು ಮಾತ್ರ. ಈ ಎರಡು ಯೋಜನೆಗಳಿಗೆ ಮಾಸಿಕ ೧,೧೦೦ ಕೋಟಿ ರು. ಒಳಗೆ ಅನುದಾನ ಸಾಕು. ಆದರೆ, ಆಗಸ್ಟ್‌ನಿಂದ ಜಾರಿಗೆ
ಬಂದಿರುವ ಗೃಹಜ್ಯೋತಿ ಯೋಜನೆಗೆ ತಿಂಗಳಿಗೆ ೧,೦೦೦- ೧,೧೦೦ ಕೋಟಿ ರು. ಬೇಕಾಗುತ್ತದೆ.

ಗೃಹಲಕ್ಷ್ಮಿ ಯೋಜನೆಗೆ ೨,೫೦೦-೩,೦೦೦ ಕೋಟಿ ರು. ಅನುದಾನ ಅಗತ್ಯವಿದೆ. ಈ ಎರಡೂ ಯೋಜನೆಗಳು ಆಗಸ್ಟ್ ತಿಂಗಳಿನಿಂದ ಜಾರಿಯಾಗುತ್ತಿದ್ದು, ಈ ತಿಂಗಳ ಅಂತ್ಯಕ್ಕೆ ಸರಕಾರದ ಮೇಲೆ ಸುಮಾರು ೩೦೦೦ ಕೋಟಿ ರುಪಾಯಿಗೂ ಹೆಚ್ಚು ಹೊರೆ ಬೀಳುತ್ತದೆ. ಈಗಿರುವ ಒಂದು ಸಾವಿರ ಕೋಟಿ ರುಪಾಯಿ
ಹೆಚ್ಚುವರಿ ವೆಚ್ಚಕ್ಕೇ ಇಷ್ಟೊಂದು ಪರದಾಡುತ್ತಿದ್ದರೆ ಇನ್ನು ಆ ಹೆಚ್ಚುವರಿ ಹೊರೆ ಮೂರ್ನಾಲ್ಕು ಸಾವಿರ ಕೋಟಿ ರು. ಹೆಚ್ಚಾದರೆ ಪ್ರತಿ ತಿಂಗಳ ನಿಗದಿತ ವೆಚ್ಚಕ್ಕೆ ಅನುದಾನ ಹೊಂದಿಸುವುದಾದರೂ ಹೇಗೆ? ಗುತ್ತಿಗೆದಾರರಿಗೆ ಬಿಲ್ ಪಾವತಿಸಿ ಸಮಾಧಾನಪಡಿಸುವುದಾದರೂ ಹೇಗೆ? ಅನುದಾನದ ವಿಚಾರದಲ್ಲಿ ಸರಕಾರದ ವಿರುದ್ಧವೇ ಅಸಮಾಧಾನಗೊಂಡಿದ್ದ ಆಡಳಿತ ಪಕ್ಷದ ಶಾಸಕರನ್ನು ಕರೆಸಿ ಮುಂದಿನ ವರ್ಷ ನೋಡೋಣ ಎಂದು ಸಮಾಧಾನ ಪಡಿಸಬಹುದು.

೧೩೫ ಸ್ಥಾನಗಳೊಂದಿಗೆ ಸರಕಾರ ಭದ್ರವಾಗಿರುವುದರಿಂದ ಉರುಳಿಸಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಹೀಗಿರುವಾಗ ಈಗ ಹೆಚ್ಚು ಅಸಮಾಧಾನ ವ್ಯಕ್ತಪಡಿಸಿ ಕೊಬ್ಬು ತೋರಿಸಿದರೆ ಮುಂದೆ ಅದೇ ನಮಗೆ ಮುಳುವಾಗಬಹುದು ಎಂಬ ಭಯ ಇರುವುದರಿಂದ ಶಾಸಕರು ತಣ್ಣಗಾಗುವುದು ಸಹಜ. ಆದರೆ, ಗುತ್ತಿಗೆದಾರರಿಗೆ ಅಂಥ ಯಾವುದೇ ಅನಿವಾರ್ಯತೆಗಳು ಇಲ್ಲ. ಹೀಗಾಗಿ ಗುತ್ತಿಗೆದಾರರ ಬಾಕಿ ಬಿಲ್ ಸಮಸ್ಯೆ ಶೀಘ್ರ ಬಗೆಹರಿಯದೇ ಇದ್ದಲ್ಲಿ ಕೇವಲ ಚುನಾವಣೆ ಯಲ್ಲಿ ಮಾತ್ರವಲ್ಲ, ಆಡಳಿತ ದಲ್ಲೂ ಸರಕಾರ ಸಮಸ್ಯೆ ಎದುರಿಸಬೇಕಾಗುತ್ತದೆ.

ಲಾಸ್ಟ್ ಸಿಪ್: ಲಾಭ ಮಾಡಿಕೊಟ್ಟವರು ತಾವೂ ಅದರಲ್ಲಿ ಪಾಲು ಕೇಳುವುದು ಇಲ್ಲವೇ ಬೇರೆ ರೀತಿ ಲಾಭ ಪಡೆಯುವುದು ರಾಜಕೀಯದಲ್ಲಿ ಸಾಮಾನ್ಯ.